ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಟಾಯ್ಲೆಟ್’ಗೆ ಹೋಗಿ ಬಂದು..

ಡಾ.ಅನಿಲ್.ಎಮ್.ಚಟ್ನಳ್ಳಿ /  ಗುಲಬರ್ಗಾ.

ಮುಂದಕ್ಕೆ ಓದುವ ಮುಂಚೆ ಒಂದು ಮಾತು.

ಈ ಬರಹ ‘ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಚಿತ್ರದ ವಿಮರ್ಶೆ ಅಲ್ಲ, ಇದು ಚಿತ್ರದ ಕುರಿತು ನನ್ನ ಅನಿಸಿಕೆ ಮಾತ್ರ. ಅದೂ ಒಂದು ರೀತಿ ವಿಶ್ಲೇಷಣೆಯೇ ಆದರೂ ಉದ್ದೇಶ ಅದಲ್ಲ.

ಒಂದು ಚೆಂದದ, ಹಾಸ್ಯದ ಪ್ರೇಮ ಕಥೆಯಿಂದ ಶುರುವಾಗುವ ಚಿತ್ರ, ಒಂದು ಕಗ್ಗಂಟಿನಂಥ ಸಮಸ್ಯೆಯತ್ತ ಸರಿದು ಗಾಂಭೀರ್ಯ ಪಡೆದುಕೊಳ್ಳುತ್ತದೆ.

ಒಬ್ಬ ಸ್ತ್ರೀಯ ಮೂಲಭೂತ ಅವಶ್ಯಕತೆಗಾಗಿ ದನಿ ಎತ್ತಿ ಗಂಡನ ಮನೆ ಬಿಟ್ಟು ತವರಿಗೆ ಹೊರಡುತ್ತಾಳೆ ನಾಯಕಿ. ಆ ಊರಿನ ಹೆಣ್ಣುಮಕ್ಕಳು ಕೂಡ ಅವಳಿಗೆ ಬೆಂಬಲವಾಗಿ ನಿಲ್ಲುವುದಿಲ್ಲ. ಹಾಗೆ ನೋಡಿದರೆ ನಾವೊಂದು ರೀತಿಯ ಶೋಷಣೆಗೆ ಒಳಗಾಗಿದ್ದೇವೆ ಎಂಬ ಅರಿವು ಕೂಡ ಅವರಿಗಿರುವುದಿಲ್ಲ. ಶೌಚಾಲಯ ಇಲ್ಲ ಎಂದು ಗಂಡನಿಗೆ ಡೈವೋರ್ಸ್ ಕೊಡುವುದೆ? ಅಹಂಕಾರದ ಹೆಣ್ಣು! ಎಂದು ಮಾತನಾಡಿಕೊಳ್ಳುತ್ತಾರೆ. ಎಲ್ಲ ಕಷ್ಟಗಳನ್ನು ಸಹಿಸಿಕೊಂಡು ದಿನವೂ ಬಹಿರ್ದೆಸೆಗೆ ಹೋಗುವ ಮಹಿಳೆಯರಿಗೆ , ‘ಬೆಳಗೆದ್ದು ಕೈಯಲ್ಲಿ  ಹಿಡಿದುಕೊಂಡು ಹೋಗುವ ಚೊಂಬಿನಲ್ಲೇ ನೀವು ಬಂಧಿಯಾಗಿದ್ದೀರಿ’ ಎಂದು ಎಚ್ಚರಿಸುತ್ತಾಳೆ ಚಿತ್ರದ ನಾಯಕಿ.

ನಮ್ಮೂರಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಿಸುವಂತೆ ಸರ್ಕಾರಕ್ಕೆ ಒತ್ತಾಯಿಸೋಣ ಎಂದ ನಾಯಕ ಊರಿನ ಜನರಿಂದಲೇ ಅಪಹಾಸ್ಯಕ್ಕೆ, ಅಪಮಾನಕ್ಕೆ ಒಳಗಾಗುತ್ತಾನೆ. ತನ್ನ ಪ್ರೀತಿಯ ಪತ್ನಿಯ ಸಮಸ್ಯೆ ಬಗೆಹರಿಸಲು ಹೊರಡುವ ನಾಯಕನ ಪ್ರಯತ್ನ ಅವನಿಗೆ ಗೊತ್ತಿಲ್ಲದಂತೆ ಸಾಮಾಜಿಕ ಸಮಸ್ಯೆಯೊಂದರ ವಿರುಧ್ಧದ ಹೋರಾಟವಾಗಿ ಪರಿವರ್ತಿತವಾಗುತ್ತದೆ.

ಚಿತ್ರದಲ್ಲಿ ವಿಭಿನ್ನ ರೀತಿಯ ಪಾತ್ರಗಳಿವೆ. ಬಯಲಲ್ಲಿ ಸಾಲಾಗಿ ಕುಂತ ಮಹಿಳೆಯರ ಮುಖಕ್ಕೆ ಲೈಟು ಬಿಡುವ ಟ್ರ್ಯಾಕ್ಟರ್ ನ ಡ್ರೈವರ್, ನಾಯಕನು ಕಟ್ಟಿಸಿದ ಶೌಚಾಲಯವನ್ನು ಒಡೆಸುವ ತಂದೆ, ಸ್ತ್ರೀಯ ಸಂಕಷ್ಟಗಳನ್ನು ಅರ್ಥಮಾಡಿಕೊಳ್ಳದ ಸಂವೇದನಾ ಶೂನ್ಯ ಪುರುಷರ ಪ್ರತಿನಿಧಿಗಳಂತೆ ಕಂಡರೆ, ನಾಯಕಿಯ ಅಪ್ಪ, ಅಜ್ಜನ ಪಾತ್ರಗಳು ಸಮಾಜದಲ್ಲಿ ಜರುಗುವ ಧನಾತ್ಮಕ ಬದಲಾವಣೆಗಳನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುವ ಹಿರಿಯ ತಲೆಗಳ ಪ್ರತಿನಿಧಿಗಳಂತೆ ಕಾಣುತ್ತಾರೆ.  ಕೇವಲ ಒಂದು ಶೌಚಾಲಯದ ಕಾರಣ ನೀಡಿ ತವರು ಮನೆಗೆ ಹೋಗಿ ನಮ್ಮ ಮಾನ ಕಳೆದಿದ್ದಾಳೆ ಎಂದು ಸೊಸೆಗೆ ಬೈಯುವ ಅಜ್ಜಿ, ಹೆಣ್ಣೇ ಹೆಣ್ಣನ್ನು ಅರ್ಥಮಾಡಿಕೊಳ್ಳದ ದುರಂತದ ಮೂರ್ತರೂಪವಾಗಿ ಕಾಣುತ್ತಾಳೆ.

ಒಂದು ಗಂಭೀರ ವಿಷಯದ ಮೇಲೆ‌ ಚಿತ್ರ ಮೂಡಿಬಂದರೂ ಇಲ್ಲಿ ಮನರಂಜನೆಗೇನು ಕಮ್ಮಿ ಇಲ್ಲ. ಯಾವುದೋ ಒಂದು ಸಾಮಾಜಿಕ ಸಂದೇಶವನ್ನು ನೀಡಲು ಚಿತ್ರ ಹೆಣಗಾಡುತ್ತಿದೆ ಎಂದು ನಿಮಗನಿಸುವುದಿಲ್ಲ. ಅಸಲಿಗೆ ಚಿತ್ರ ಬೆಳೆಯುವುದು, ಆಗ ತಾನೆ ಮದುವೆಯಾದ ದಂಪತಿಗಳ ಉತ್ಕಟ ಪ್ರೇಮದ ಸುತ್ತ.  ತನ್ನ ಬೈಕು ಮಾರಿ ಕಷ್ಟಪಟ್ಟು ಪಾಯಿಖಾನೆ ಕಟ್ಟಿಸುವ ನಾಯಕ ಇದು ನನ್ನ ನಿನ್ನ ಪ್ರೆಮದ ಸಂಕೇತ, ನಾನು ನಿನಗಾಗಿ ಕಟ್ಟಿದ ತಾಜ್ ಮಹಲ್ ಎಂದು ಖುಷಿಯಿಂದ ತನ್ನ ಮಡದಿಯಲ್ಲಿ ಹೇಳಿಕೊಳ್ಳುತ್ತಾನೆ. ಅವಳಿಗಾಗಿ ಅದಕ್ಕೊಂದು ಕೆಂಪು ರಿಬ್ಬನ್ ಕಟ್ಟಿ ಕಾಯುತ್ತಾನೆ.

ಚಿತ್ರದಲ್ಲಿ ವಿಲನ್ ಗಳಿಲ್ಲ ಆದರೆ ನಾಯಕ ಹೇಳುವಂತೆ ಸಮಸ್ಯೆ ಇರುವುದು ಶೌಚದಲ್ಲಲ್ಲ ಬದಲಿಗೆ ‘ಸೋಚ್’ ನಲ್ಲಿ. ಈ ‘ಸೋಚ್’ ಚಿತ್ರದ ವಿಲನ್. ಈ ವಿಲನ್ ಗೆ ನಾಯಕನಿಗಿಂತ ನಾಯಕಿಯೇ ನಿಜವಾದ ಎದುರಾಳಿ. ಈ ಪಾತ್ರಧಾರಿ, ಸ್ತ್ರೀ ಸಂಕಟಗಳನ್ನು ಸಮರ್ಥವಾಗಿ ಕಟ್ಟಿಕೊಡುತ್ತಾರೆ. ನಾಯಕಿ ಹೋಳಿ‌ ಹಬ್ಬದಂದು ಗಂಡನಿಗೆ ಒನಕೆಯಿಂದ ಹೊಡೆಯುತ್ತ ತನ್ನ ಸಿಟ್ಟನ್ನು ಹೊರಹಾಕುವ ದೃಶ್ಯ ಮನಸ್ಸು ತಟ್ಟುತ್ತದೆ.

ಚಿತ್ರದಲ್ಲಿ ಪ್ರೀತಿಯ ವ್ಯಾಕುಲತೆಯು ಇದೆ, ಸಾಮಾಜಿಕ ಸಮಸ್ಯೆಯೊಂದರ ಆಳ ಅಗಲದ ಅನಾವರಣವೂ ಇದೆ. ಒಟ್ಟಿನಲ್ಲಿ ಒಂದು ಸಾಮಾಜಿಕ ಕಳಕಳಿಯ, ಸಧಬಿರುಚಿಯ ಚಿತ್ರ. ಸಮಯ ಮಾಡಿಕೊಂಡು ನೋಡಿ.

ಇನ್ನು‌ ಇಂತಹ ಒಳ್ಳೆಯ ಚಿತ್ರಗಳನ್ನು ಕನ್ನಡಿಗರಿಂದ ದೂರ ಇಡುವ ಶ್ರೇಯಸ್ಸು ಡಬ್ಬಿಂಗ್ ವಿರುದ್ಧ ಬಾಯಿಬಡಿದುಕೊಳ್ಳುವ ‘ಕನ್ನಡ ಹೋರಾಟಗಾರ’ರಿಗೆ, ‘ಕನ್ನಡ ಚಿತ್ರರಂಗದ ಘಟಾನುಘಟಿ’ಗಳಿಗೆ ಸಲ್ಲಬೇಕು. ಡಬ್ಬಿಂಗ್ ಬೇಕೊ ಬೇಡವೊ ಎಂಬುದನ್ನು ಕನ್ನಡ ಪ್ರೇಕ್ಷಕ ನಿರ್ಧರಿಸಬೇಕು ಇವರಲ್ಲ.

‍ಲೇಖಕರು avadhi

24 August, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading