ಜ್ಞಾನಪೀಠ ವಿವಾದ – ಕುಂವೀ ಮಾತಾಡಿದ್ದಾರೆ

ನಾನ್ಸೆನ್ಸೋ ಸಮ್ಸೆನ್ಸೋ!

ಕುಂ ವೀರಭದ್ರಪ್ಪ

ಇನ್ನು ಸುಮ್ಮನಿದ್ದರೆ ಯಾರ್ಯಾರು ಯಾವ್ಯಾವ ವಿಶೇಷಣಗಳಿಂದ ತಿವಿಯುವರೋ! ಅಂಗಾಲಲ್ಲಿ ನಾಯಿಗೆರೆಗಳಿರುವ ಕಾರಣಕ್ಕೆ ವಾರವಿಡೀ ತಿರುಗಾಟದಲ್ಲಿದ್ದೆ. ಕೊಪ್ಪಳದಲ್ಲಿ ಕಲ್ಯಾಣ ಕನರ್ಾಟಕ ಸಾಹಿತ್ಯ ಸಮ್ಮೇಳನ ಮುಗಿಸಿಕೊಂಡ ಬಳಿಕ ಧಾರವಾಡದಲ್ಲಿ ಸಂಭವಿಸಿದ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಭಾಗವಹಿಸಿದೆ, ಕೂರ್ಮಾವತಾರ ಕಥೆಗೆ ಪ್ರಶಸ್ತಿ ಬಂದಿತ್ತು ಎನ್ನುವುದಕ್ಕಿಂತ ಮುಖ್ಯವಾಗಿ ಅಂಥ ಸಮಾರಂಭದ ಬಗ್ಗೆ ಕುತೂಹಲವಿತ್ತು. ಅದಾದ ಬಳಿಕ ನೇರವಾಗಿ ಬೆಂಗಳೂರಿಗೆ ಹೋಗುವುದಕ್ಕೂ ಕಾರಣವಿತ್ತು, ಅದೆಂದರೆ ನಾಗರಾಜಕೋಟೆ ನಿರ್ದೇಶಿಸಲಿರುವ ಮಕ್ಕಳ ಚಿತ್ರ ಬಾನಾಡಿಗೆ ಬರೆದಿದ್ದ ಸಂಭಾಷಣೆಯನ್ನು ನಿರ್ಮಾಪಕ ದ್ರಿತಿ ನಾಗರಾಜ್ಗೆ ತಲುಪಿಸಬೇಕಿತ್ತು, ಕೂಗಳತೆಯಲ್ಲಿರುವೆನೆಂದು ತಿಳಿದು ಟಿವಿ9 ವಿನಾಯಕ ಸಾರ್ ಚಕ್ರವ್ಯೂಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಕೇಳಿಕೊಂಡರು.
ಅದೇ ದಿವಸ ಹೋಟಲ್ ಮುಖ್ಯದ್ವಾರದಲ್ಲಿ ಅಂದರೆ ದೇವಸ್ಥಾನದ ಅಂಗಳದಲ್ಲಿದ್ದ ಡ್ರೈನೇಜ್ ಕೆರಳಿತ್ತು, ವ್ಯವಸ್ಥೆಯ ಅಂತರಂಗ ಸ್ಪೋಟಗೊಂಡಿತ್ತು, ಕಾರಣ ಬೆಂಗಳೂರಿನ ಒಳಚರಂಡಿಗಳಿಗೆ ಸಮೀಪದಲ್ಲಿ ವಿದಾನಸೌಧವಿದೆ ಎನ್ನುವ ಕಾಮನ್ಸೆನ್ಸ್ ಇರುವುದಿಲ್ಲ, ಅವುಗಳಿಗೆ ಸರ್ಕಾರದ ನೀತಿಸಂಹಿತೆ ಅನ್ವಯಿಸುವುದಿಲ್ಲ. ತಮ್ಮ ತಮ್ಮ ತಲೆ ಮೇಲೆ ಕನಸುಗಳ ಮೂಟೆ ಹೊತ್ತು ದೂರದೂರುಗಳಿಂದ ನಗರಕ್ಕೆ ಆಗಮಿಸಿದ್ದ ನೂರಾರು ಮಂದಿ ಕರವಸ್ತ್ರಗಳಿಂದ ಮೂಗು ಮುಚ್ಚಿಕೊಂಡಿದ್ದರು, ಆದರೆ ದೇವಸ್ಥಾನದಲ್ಲಿ ಬೆಣ್ಣೆ ಅಲಂಕಾರ ಮಾಡಿಕೊಂಡಿದ್ದ ನಿರುಪದ್ರವಿ ಗಣೇಶ ಉಪದ್ರವಿ ಅರ್ಚಕ ತಮ್ಮ ಮೂಗುಗಳನ್ನು ಮುಚ್ಚಿಕೊಂಡಿರಲಿಲ್ಲ. ಟಿವಿ ಕಛೇರಿ ತಲುಪಿದ ನನ್ನನ್ನು ವಿನಾಯಕ್ ಪ್ರೀತಿಯಿಂದ ಬರಮಾಡಿಕೊಂಡರಲ್ಲದೆ ಹಾಟ್ಸೀಟಿಗೆ ಕರೆದೊಯ್ದರು. ಕೇಳಲಿರುವ ಬಹುತೇಕ ಪ್ರಶ್ನೆಗಳು ನೆಗೆಟಿವ್ವಾಗಿರುತ್ತವೆ ಎಂದು ಹೇಳಿದಾದ ಬಳಿಕ ಶುರು ಹಚ್ಚಿಕೊಂಡರು. ಅವರಿಬ್ಬರು ಬ್ರಾಹ್ಮಣರೆಂಬ ಕಾರಣಕ್ಕೆ, ಟೀಕೆ ಮಾಡ್ಲಿಕ್ಕೆ ನಿಮಗ್ಯಾವ ಅರ್ಹತೆಯಿದೆ, ನೀವೇನು ಕಡಿದು ಗುಡ್ಡೆ ಹಾಕಿದ್ದೀರಿ! ಇಂಥ ಹಲವು ಅಸ್ತ್ರಗಳನ್ನು ಒಂದೊಂದಾಗಿ ಪ್ರಯೋಗಿಸಿದರು. ಆಡಿದ ಮಾತು, ಸೃಷ್ಠಿಸಿದ ವಿವಾದದ ಕುರಿತಂತೆ ಖಚಿತ ನಿಲುವು ನನ್ನದು. ಆದ್ದರಿಂದ ಕೇಳಿದ ಪ್ರತಿಯೊಂದು ತಕರಾರಿಗೂ ಮುಗುಳ್ನಗುತ್ತಲೇ ಜವಾಬು ವಿತರಿಸಿದೆ.
ಮೊಬೈಲಲ್ಲಿ ಸ್ಪೇಸ್ಬುಕ್ ತಾಣಗಳಲ್ಲಿ ಮಾಧ್ಯಮಗಳಲ್ಲಿ ಸಭೆ ಸಮಾರಂಭಗಳಲ್ಲಿ ಖಾಸಗಿ ಮಾತುಕತೆಯಲ್ಲಿ ಹೀಗೆ ಎಲ್ಲೆಲ್ಲೂ ಎಲ್ಲದರಲ್ಲೂ ಪ್ರತಿಕ್ರಿಯೆಗಳು ನನ್ನ ಜೋಳಿಗೆಗೆ ಬೀಳುತ್ತಲೇ ಇವೆ. ಅವುಗಳಲ್ಲಿ ವಿರೋಧಕ್ಕಿಂತ ಪರ ಅಭಿಪ್ರಾಯಗಳೇ ಅಧಿಕ. ಜಿಕೆ ಅತಿರೇಕ ಎಂದೂ, ದೇವನೂರು ಮರುಳಸಿದ್ದಪ್ಪ ಹಾಗೆ ಹೇಳಬಾರದಿತ್ತು ಎಂದೂ, ದೂರದ ದೆಹಲಿಯಲ್ಲಿರುವ ಮಿತ್ರ ಬಿಳಿಮಲೆ ಸೇರಿದಂತೆ ಹಲವರು ಅವರವರ ಭಾವಕ್ಕೆ ಅವರವರ ಭಕುತಿಗನುಗುಣವಾಗಿ ಪ್ರತಿಕ್ರಿಯಿಸಿದ್ದಾರೆ. ಮಿತ್ರ ಡಾ ಮಾವಿನಕುಳಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಿರಿಯ ಮಿತ್ರರಾದ ಸಿಎನ್ನಾರ್ ಜಾಲತಾಣದಲ್ಲಿ ಹಾಗೆ ಹೇಳಬಾರದಿತ್ತೆಂದಿದ್ದಾರಲ್ಲದೆ ವಿಷಾದ ವ್ಯಕ್ತಪಡಿಸುವಂತೆ ಸಲಹೆ ನೀಡಿದ್ದಾರೆ. ಇನ್ನು ನಿಯತಕಾಲಿಕಗಳ ವಾಚಕರವಾಣಿ ತಾಣಗಳಲ್ಲೂ ಪ್ರತಿಕ್ರಿಯೆಗಳು ಕಾಣಿಸಿಕೊಂಡಿವೆ. ಅವುಗಳಲ್ಲಿ ಕೆಲವು ಗುಡುಗುಗಳಾಗಿದ್ದರೆ ಇನ್ನೂ ಕೆಲವು ಘರ್ಜನೆಗಳಂತಿವೆ. ಕೆಲವನ್ನು ಶ್ರವಣೇಂದ್ರಿಯದ ಮೂಲಕವೂ, ಇನ್ನೂ ಹಲವನ್ನು ನಯನೇಂದ್ರಿಯದ ಮೂಲಕವೂ ಗಮನಿಸಿರುವೆ ಮುಗುಳ್ನಗುತ್ತ. ಪ್ರತಿಭಾವಂತ ಲೇಖಕ ಬಷೀರ್ ದೃಷ್ಟಿಯಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿ ಮೇಲೆ ನಾನು ಕಣ್ಣಿಟ್ಟಿದ್ದರೆ, ಚಕ್ಕೆರೆ ಶಿವಶಂಕರ್ ನನ್ನದು ಮಾನಸಿಕ ದಾರಿದ್ರ್ಯವೆಂದು ಅಭಿಪ್ರಾಯ ಪಟ್ಟಿದ್ದಾರೆ. ಸರಸ್ವತಿ ಸಮ್ಮಾನ್ ಬಗ್ಗೆ ಬಷೀರಿಂದ ಮಾಹಿತಿ ಪಡೆಯುವೆ.
ಚೆಕ್ಕೆರೆ ನನ್ನ ಭಗವತಿಕಾಡು ಕಥಾ ಸಂಕಲನದ ಪ್ರಕಾಶಕರಲ್ಲಿ ಮೂರನೆಯವರು. ಅದು ಪ್ರಕಟಗೊಂಡ ದಶಕದ ಬಳಿಕ ಭಗವತಿಕಾಡು ಬಳಿಕ ಮತ್ತೇನು ಬರಿಲಿಲ್ಲವಲ್ಲ ಯಾಕೆ ಎಂದು ಕೇಳಿದರು, ಅದೂ ಅವರದ್ದೇ ಆದ ಜಾನಪದಲೋಕದಲ್ಲಿ. ಆ ದಶಕದ ಬಯೋಡಾಟಾ ನೀಡಿದಾದ ಬಳಿಕ ನಾನ್ಸೆನ್ಸ್ ಎಂದೆ, ಕೂಡಲೆ ಅವರ ಮುಖ ಮತ್ತಷ್ಟು ಕಪ್ಪಾಯಿತು. ಕಳೆದ ಹಲವಾರು ವರ್ಷಗಳಿಂದ ಓದಿಲ್ಲ ಗಮನಿಸಿಲ್ಲವೆಂದು ಹೇಳಿದರು. ಅವರ ಪ್ರಾಂಜಲ ಅಭಿಪ್ರಾಯ ಹಿಡಿಸಿತು. ಅವರಿಗೆ ಅವರಂಥವರಿಗೆ ಶಂಖ ಮುಖ್ಯವೇ ಹೊರತು ತೀರ್ಥ ಮುಖ್ಯವಲ್ಲ. ಈ ಕ್ಷಣಕ್ಕಾಗಿ ಹಸಿದಿದ್ದ ಆ ಗೆಳೆಯ ತನ್ನಲ್ಲಿನ ಮಾನಸಿಕ ದಾರಿದ್ರ್ಯವನ್ನು ನನ್ನ ಮೇಲೆ ಆರೋಪಿಸಿ ಡೇಗಿದ.
ಅನಂತಮೂರ್ತಿಯಂಥ ಲೇಖಕರೂ, ಕಾರ್ನಾಡರಂಥ ಅಭಿನಯವಿಶಾರದರೂ ನಿಮಗೇನಾದರೂ ಮಾಡಿದರೆ! ಇದು ಪತ್ನಿಯ ಮುಗ್ದ ಪ್ರತಿಕ್ರಿಯೆ. ಸಿಂಹಾಸನದ ಸುತ್ತ ಸುತ್ತುವವರಿಗಿರುವ ಭಯ ತಿಪ್ಪೆಯ ಮೇಲಿರುವ ನನ್ನಂಥವರಿಗೆ ಇರುವುದಿಲ್ಲ.
ಇನ್ನು ನಾನ್ಸೆನ್ಸಿನ ಬ್ಯಾಕ್ಫ್ಲಾಷ್: ಕೊಪ್ಪಳ ಕಲ್ಯಾಣ ಕರ್ನಾಟಕದ ಪ್ರಮುಖ ನಗರ. ಅದು ಐತಿಹಾಸಿಕ ಪುರಾತನ ಸಹ. ರತ್ನತ್ರಯರು ತಮ್ಮ ಕಾವ್ಯಗಳಲ್ಲಿ ಪ್ರಶಂಸಿರುವ ಈ ನಗರಕ್ಕಂಟಿಕೊಂಡಿರುವ ಬೆಟ್ಟದ ತುದಿ ಮೇಲೆ ಅಶೋಕನ ಶಾಸನವೂ ಇದೆ. ಈ ಪ್ರದೇಶದ ದೇಹದ ಮೇಲೆ ಸ್ವಾತಂತ್ರ್ಯಪೂರ್ವದ ಗಾಯಗಳು ವಾಸಿಯಾಗಿವೆ, ಆದರೆ ಸ್ವಾಂತಂತ್ರ್ಯೋತ್ತರವಾಗಿ ಕೆಲ ಚುನಾಯಿತ ಜನಪ್ರತಿನಿಧಿಗಳ ಮಾರಾಣಾಂತಿಕ ಹಲ್ಲೆಗಳು ಅಸಂಖ್ಯಾತ, ಗಾಯಗಳು ಅಗಣಿತ. ಗಾಯಾಳುಗಳಿರುವಲ್ಲಿ ಸಮಾಜಮುಖಿ ಹೋರಾಟಗಳು ಜನಮುಖಿ ಸಾಂಸ್ಕೃತಿಕ ಸಂಘಟನೆಗಳಿರುವುದು ಸಹಜ. ಸುವಿಖ್ಯಾತ ಬೆಟ್ಟದೂರು ಕುಟುಂಬ ಸಂಜಾತ ಅಲ್ಲಮ ಹೆಚ್ ಎಸ್ ಪಾಟೀಲ ವಿಠ್ಠಪ್ಪ ಗೋರಂಟ್ಲಿ ಮದಿರೆ ಮಹಾಂತೇಶ ಮಲ್ಲನಗೌಡ ಇಂಥ ಹಿರಿಯ ಚಿಂತಕರಿರುವರಲ್ಲದೆ ಹನುಮಂತಪ್ಪ ಹಂಡಗಿ ಮಂಜುನಾಥ ಗೊಂಡಬಾಳರಂಥ ಉದಯೋನ್ಮುಖ ಹೋರಾಟಗಾರರೂ ಇದ್ದಾರೆ.

ನಗರದ ಹೃದಯಭಾಗದಲ್ಲಿರುವ ಕನ್ನಡ ಭವನದಲ್ಲಿ ಮಾಹೆಯಾನ ಒಂದಲ್ಲಾ ಒಂದು ಸಾಂಸ್ಕೃತಿಕ ಕಾರ್ಯಕ್ರಮಗಳು. ನಾಡಿನ ಬಹುಪಾಲು ಹಿರಿಕಿರಿಯ ಲೇಖಕರೆಲ್ಲ ಕೊಪಣ ನಗರಿಯ ಆತಿಥ್ಯ ಸವಿದಿದ್ದಾರೆ, ತಮ್ಮ ಚಿಂತನೆಗಳನ್ನು ಸಾಹಿತ್ಯಾಭಿಮಾನಿಗಳಿಗೆ ಧಾರೆ ಎರೆದಿದ್ದಾರೆ. ಕೊಟ್ಟೂರು ಕೊಪ್ಪಳದ ನಡುವೆ ಕೇವಲ ಮೂರು ತಾಸಿನ ಹಾದಿಯ ಬೆವರ ಪರಿಮಳ. ವರ್ಷಕ್ಕೆರಡು ಮೂರು ಸಲ ಕೊಪ್ಪಳ ತಾಯಿಯಂತೆ ಕೈಬೀಸಿ ಕರೆಯುತ್ತದೆ, ಅಂಬೆಗಾಲಿಡುವ ಮಗುವಿನಂತೆ ಅಲ್ಲಿಗೆ ತಲುಪುತ್ತೇನೆ, ಬೆಟ್ಟದ ತಪ್ಪಲಲ್ಲಿರುವ ಮಳೆಮಲ್ಲೇಶ್ವರ ದೇವಸ್ಥಾನ ಅಶೋಕನ ಪಾಲ್ಕಿಗುಂಡು ಶಾಸನ ಕುಶಲಕಸುಬುದಾರರಿರುವ ಭಾಗ್ಯನಗರ ರಸ್ತೆ ಅಂಚಿನಲ್ಲಿ ಪುಟ್ಟ ಹೋಟಲ್ ನಡೆಸುತ್ತಲೇ ತನ್ನ ಮಗಳನ್ನು ಕಾಲೇಜಿನಲ್ಲಿ ಓದಿಸುತ್ತಿರುವ ಖೂಬ ಇಂಥ ಹತ್ತು ಹಲವು ಆಕರ್ಷಣೆಗಳು ಮಾನವೀಯ ನೆಲೆಗಳು ಆ ನನ್ನ ಪ್ರೀತಿಯ ಕೊಪ್ಪಳ ನಗರದಲ್ಲಿ.
ಹನುಮಂತಪ್ಪ ಹಂಡಗಿ ಎಂಬ ಯುವಕನೂ, ಚಂದ್ರಶೇಖರ ಕಂಬಾರ ಎಂಬ ಜ್ಞಾನಪೀಠ ಪುರಸ್ಕೃತ ಲೇಖಕರೂ! ನಮ್ಮನ್ನೆಲ್ಲ ಬರಮಾಡಿಕೊಂಡಿದ್ದೂ ಅಲ್ಲದೆ ಅಭಿನಂದನಾ ಗ್ರಂಥವನ್ನು ಕಂಬಾರರಿಗೆ ಸಮರ್ಪಿಸಿದ. ನಾಡಿನ ನೂರಾರು ಲೇಖಕರ ಲೇಖನಗಳು ಪತ್ರಿಕಾ ಹೇಳಿಕೆಗಳು ಕಿಕ್ಕಿರಿದಿರುವ ಏಳುನೂರು ಪುಟದ ಬೃಹತ್ ಕೃತಿ ಅದು. ಅಭಿನಂದನಾ ಭಾಷಣ ನನ್ನ ಸರದಿ. ಆರನೇ ಜ್ಞಾನಪೀಠ ಪ್ರಶಸ್ತಿ ಕಂಬಾರರಿಗೆ ಲಭಿಸಬೇಕಿತ್ತೆಂದು ಸೂಚ್ಯವಾಗಿ ಪ್ರಸ್ತಾಪಿಸಿದೆ. ಬಳಿಕ ಮೈಸೂರಿನ ಭಗವಾನ್ ಕುಂವೀಗೆ ಮುಂದಿನ ಜ್ಞಾನಪೀಠ ಪ್ರಶಸ್ತಿ ಎಂದು ತಮ್ಮ ಭಾಷಣದಲ್ಲಿ ಹಾರೈಸಿದರು.
ವಾರದ ಬಳಿಕ ಅದೇ ನಗರದಲ್ಲಿ ಅದೇ ಕನ್ನಡ ಭವನದಲ್ಲಿ ಇನ್ನೊಂದು ಸಮಾರಂಭ. ಅದು ಕಲ್ಯಾಣ ಕರ್ನಾಟಕ ಸಾಹಿತ್ಯ ಸಮ್ಮೇಳನ. ಅದರ ರೂವಾರಿ ಮಂಜುನಾಥ ಗೊಂಡಬಾಳನೆಂಬ ಅಸೀಮ ಯುವಸಾಹಸಿ. ರಾಯಲಸೀಮೆಯ ಹಳ್ಳಿಗಳಲ್ಲಿ ಮೂರೂವರೆ ದಶಕಗಳ ಕಾಲ ಮಾಸ್ತರನಾಗಿದ್ದ ನಾನದರ ಸರ್ವಾಧ್ಯಕ್ಷ. ಎಂದಿನಂತೆ ಭಾಗವಹಿಸಿದೆ. ಅಭಿನಂದನಾ ಭಾಷಣ ಪ್ರಾಂಶುಪಾಲ ರೆಡ್ಡೇರ ಸರದಿ, ಅವರು ಭಾವಪರವಶರಾಗಿ ಒಂಭತ್ತನೇ ಜ್ಞಾನಪೀಠ ಕುಂವೀಗೆ ಲಭಿಸಬೇಕೆಂದು ಕರತಾಡನದ ಮಧ್ಯೆ ಹೇಳಿದರು. ಸಂಕೋಚ ಮಜುಗರಕ್ಕೀಡಾದೆ. ಪ್ರತಿಯೊಂದು ಸಭೆಸಮಾರಂಭಗಳಲ್ಲಿ ಜ್ಞಾನಪೀಠಕ್ಕೆ ಸಂಬಂಧಿಸಿದಂತೆ ಅದೇ ಹಾಡು ಅದೇ ರಾಗ! ನಾನು ನನ್ನ ಅಧ್ಯಕ್ಷೀಯ ಭಾಷಣದಲ್ಲಿ ಜ್ಞಾನಪೀಠ ನಾನ್ಸೆನ್ಸ್ ಎಂದೆ ತುಟಿಜಾರಿ. ಕಣ್ಣಳತೆಯಲ್ಲಿದ್ದ ಯುವಪತ್ರಕರ್ತರು ಜ್ಞಾನಪೀಠ ನಾನ್ಸೆನ್ಸ್ ಎಂದು ಬರೆದುಕೊಳ್ಳಲಾರಂಭಿಸಿದ್ದನ್ನು ಎಷ್ಟು ಪ್ರಯತ್ನಿಸಿದರೂ ತಡೆಯುವುದು ನನ್ನಿಂದಾಗಲೇ ಇಲ್ಲ. ಒಂದೂವರೆ ಗಂಟೆ ಭಾಷಣ ಮಾಡಿದಾದ ಬಳಿಕ ಬೆಂಗಳೂರು ಮಾಧ್ಯಮ ಕೇಂದ್ರಗಳಿಂದ ಕರೆಗಳ ಜಿನಿಮಳೆ ಆರಂಭಗೊಂಡಿತು.
ಡಯಾಬಿಟಿಕ್ಕೂ ಅದು ಸೃಷ್ಠಿಸಿದ್ದ ಹಸಿವೂ! ಕ್ಷುದ್ಬಾಧೆ ತಣಿಸಲು ಪುರಸೊತ್ತು ಸಿಕ್ಕಲಿಲ್ಲ. ಜ್ಞಾನಪೀಠಿಗಳಲ್ಲಿನ ಅರ್ಹರು ಅನರ್ಹರು, ಲಾಬಿ, ಆ ಎಂಟು ಜನರು ಮಾತ್ರ ಕನ್ನಡ ಸಾಹಿತ್ಯದ ದಿಕ್ಕುದೆಸೆಗಳು ಎಂಬಂತೆ ಬಿಂಬಿಸುತ್ತಿರುವುದರ ಬಗ್ಗೆ ಪ್ರಶ್ನೋತ್ತರ ಕಲಾಪ ನಿರ್ವಿರಾಮವಾಗಿ ನಡೆಯಿತು, ರಸ್ತೆಗಳಲ್ಲಿ, ಹೋಟಲ್ಲು ಪ್ರಹರಿಗೋಡೆಯ ಪಕ್ಕದಲ್ಲಿ, ಹೀಗೆ ಹಲವು ಕಡೆ. ಗಾಯದ ಮೇಲೆ ಬರೆ ಎಳೆದಂತೆ ಹಂಡಗಿ ಕಾರ್ನಾಡರ ಇನ್ನೊಂದು ಮುಖವನ್ನು ಜವಾರಿ ಭಾಷೆಯಲ್ಲಿ ಪ್ರಸ್ತಾಪಿಸಿದ. ಕಂಬಾರ್ ಕುರಿತ ಪುಸ್ತಕವನ್ನು ಕಳಿಸುವುದಾಗಿ ಕೇಳಿಕೊಂಡಿದ್ದಕ್ಕೆ ಸನ್ಮಾನ್ಯ ಕಾರ್ನಾಡ್ ಅಂಥ ಪುಸ್ತಕಗಳನ್ನು ಕಳಿಸುವುದು ಬೇಡ ಎಂದರಂತೆ. ಮಾಧ್ಯಮಗಳಲ್ಲಿ ಅಹರ್ನಿಶಿ ದುಡಿಯುತ್ತಿರುವವರ ಮುಕ್ಕಾಲು ಭಾಗ ಯುವಕರು. ಆಧುನಿಕ ಕನ್ನಡ ಸಾಹಿತ್ಯವನ್ನು ಓದಿರುವಂಥವರು, ಸರಿತಪ್ಪುಗಳನ್ನು ವಿವೇಚಿಸುವಂಥವರು. ಇದೆಲ್ಲ ಅರ್ಥವಾದದ್ದು ಅವರೊಂದಿಗೆ ವಾಗ್ವಾದ ನಡೆಸಿದಾಗ. ನಿಜ ಹೇಳುವುದಾದರೆ ಜ್ಞಾನಪೀಠ ಹೆಸರಿನ ಸಂಸ್ಥೆ ಬಗ್ಗೆ, ಆ ಪ್ರಶಸ್ತಿಯನ್ನು ಪಡೆದವರ ಬಗ್ಗೆ, ಅದಕ್ಕೆ ದುಂಬಾಲು ಬಿದ್ದಿರುವವರ ಬಗ್ಗೆ ನನಗೆ ಯಾವುದೇ ಪೂರ್ವಾಗ್ರಹವಿರಲಿಲ್ಲ, ನನ್ನ ತಕರಾರಿದ್ದದ್ದು ಆ ಎಂಟು ಜನ ಲೇಖಕಕರ ಭಾವಚಿತ್ರಗಳನ್ನು ಸಾರ್ವಜನಿಕ ಸ್ಥಳಗಳೂ ಸೇರಿದಂತೆ ಎಲ್ಲಂದರಲ್ಲಿ ಹಾಕಿರುವುದರ ಬಗ್ಗೆ. ಈ ಚರ್ಚೆಯನ್ನು ರೂವಾರಿ ವಿಜಯಕಾಂತ ಪಾಟೀಲ. ಅವರು ಹಾನಗಲ್ ನಗರದ ಸುಪ್ರಸಿದ್ದ ನ್ಯಾಯವಾದಿ ಕವಿ ಮತ್ತು ಚಿಂತಕ. ಶಿವಮೊಗ್ಗ ಮತ್ತಿತರ ಕಡೆ ನಡೆದ ಸಭೆ ಸಮಾರಂಭಗಳಲ್ಲಿ ಅವರ ನಿಲುವನ್ನು ಸಮರ್ಥಿಸಿದ್ದುಂಟು. ಆಗ ಅದು ಸುದ್ದಿಯಾಗಲಿಲ್ಲ, ಆದರೆ ಅದು ರಾಜ್ಯದಾದ್ಯಂತ ಸುದ್ದಿ ಮಾಡಿದ್ದು ಕೊಪ್ಪಳದಲ್ಲಿ ಮಾತಾಡಿದಾಗ.
ನಾನ್ಸೆನ್ಸ್ ಎಂಬ ಆಂಗ್ಲ ಪದ ಬಳಸಿದ್ದೇ ಪರಪಾಟಾಯಿತು. ಅದನ್ನು ಆಳವಾಗಿ ಕೆದಕಿದವರು ಅಲ್ಲಿನ ಸ್ಥಳೀಯ ಪತ್ರಕರ್ತರೊಂದೇ ಅಲ್ಲದೆ ವಿವಿಧ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವ ಕ್ರಿಯಾಶಾಲಿ ಯುವಕರು. ಎಂಟು ಜನರ ಪೈಕಿ ಯಾರು ಅರ್ಹರು ಯಾರು ಅನರ್ಹರು ಎಂಬ ಪ್ರಶ್ನೆಗಳು ಉದ್ಬವಿಸಿದಾಗ ಅನಂತಮೂರ್ತಿ, ಕಾರ್ನಾಡರ ಹೆಸರನ್ನು ಪ್ರಸ್ತಾಪಿಸುವುದು ಅನಿವಾರ್ಯವಾಯಿತು. ಇವರಿಬ್ಬರ ಆಕ್ಷೇಪಾರ್ಹ ನಡವಳಿಕೆ ಕುರಿತಂಥ ಚರ್ಚೆ ಕಳೆದ ಒಂದೂವರೆ ದಶಕದಿಂದ ಸಾಹಿತ್ಯಿಕವಾಗಿ ಸಾಮಾಜಿಕವಾಗಿ ಜೀವಂತವಿದೆ. ಜಿಎಸ್ಎಸ್ ಕಣವಿ ಲಂಕೇಶ್ ತೇಜಸ್ವಿ ಭೈರಪ್ಪ ಸೇರಿದಂತೆ ನೂರಕ್ಕೂ ಹೆಚ್ಚು ಅರ್ಹ ಲೇಖಕರು ಕನ್ನಡದಲ್ಲಿದ್ದಾರೆ. ಆದರೆ ಅವರು ಯಾರೂ ಇವರಷ್ಟು ಪ್ರಭಾವಶಾಲಿಗಳಲ್ಲ ಮತ್ತು ಅನುವಾದ ಸೌಕರ್ಯವಿಲ್ಲ. ಅವರನ್ನೆಲ್ಲ ಓವರ್ಟೇಕ್ ಮಾಡಿ ಗಿಟ್ಟಿಸಿಕೊಂಡಿರುವುದು ಅನುಮಾನಗಳನ್ನು ಹುಟ್ಟು ಹಾಕುತ್ತದೆ.
ಗುಜರಾತಿ ಕಥೆಗಾರ ಅಬಿದ್ ಸುರತಿ ರಾಷ್ಟ್ರಪತಿ ನೀಡಲಿದ್ದ ಪುರಸ್ಕಾರವನ್ನು ತಿರಸ್ಕರಿಸಿದ. ಆದರೆ ಕೇಂದ್ರ ಸಾಹಿತ್ಯ ಅಕಾಡೆಮಿ ನೀಡಿದ ಪ್ರಶಸ್ತಿಯನ್ನು ಸ್ವೀಕರಿಸಿದ. ಆ ಹಣದಿಂದ ಕೆಲವು ಯಂತ್ರೋಪಕರಣಗಳನ್ನು ಖರೀದಿಸಿ ಮುಸ್ಲಿಂ ಯುವಕನ ನೆರವಿನಿಂದ ಮುಂಬೈ ನಗರದ ಒಂದು ಏರಿಯಾದಲ್ಲಿ ಕೆಟ್ಟಿದ್ದ ನೂರಾರು ಸಾರ್ವಜನಿಕ ನಲ್ಲಿಗಳನ್ನು ರಿಪೇರಿ ಮಾಡಿಸಿದ. ತಮಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೊಡನೆ ಡಾ. ರಾಜಕುಮಾರ್ ಇದನ್ನು ಶ್ರೀಕುವೆಂಪು ಅವರಿಗೆ ನೀಡಬೇಕೆಂದು ಸರ್ಕಾರಕ್ಕೆ ಸಲಹೆ ನೀಡಿದರು. ಆದರೆ ಈ ಸೌಜನ್ಯ ನಮ್ಮೀ ಹಿರಿಯ ಲೇಖಕರಿಗೆ ಯಾಕಿಲ್ಲ?
ನನಗೆ ವಯಸ್ಸಾಗಿದೆ ಬೇಟೆಯಾಡುವ ಶಕ್ತಿ ಇಲ್ಲ, ಆದ್ದರಿಂದ ಪ್ರಾಣಿಗಳೇ ದಯವಿಟ್ಟು ಸನಿಹಕ್ಕೆ ಬಂದು ಆಹಾರವಾಗಿ ನನ್ನ ಹಸಿವೆಯನ್ನು ನೀಗಿಸಿ ಎಂದು ವೃದ್ದಾಪ್ಯದಲ್ಲಿರುವ ಸಿಂಹ ಪ್ರಾರ್ಥಿಸಿದ ಮಾತ್ರಕ್ಕೆ ಯಾವ ಪ್ರಾಣಿಯೂ ಬಂದು ಅದಕ್ಕೆ ಆಹಾರವಾಗುವುದಿಲ್ಲ. ಆದರೆ ನಮ್ಮ ಅನಂತಮೂರ್ತಿಯವರು ಎಂಭತ್ತೈದರ ಹರೆಯದಲ್ಲೂ ಸಿಂಹಕ್ಕಿಂತ ಶಕ್ತರು ಮತ್ತು ಪ್ರಭಾವಶಾಲಿಗಳು. ಅವರ ಸೃಜಶೀಲ ಪ್ರತಿಭೆ ಪ್ರಶ್ನಾತೀತ. ತಮ್ಮ ವಾಗ್ವೈಖರಿಯಿಂದ ನಯನಾಜೂಕು ಚಿಂತನೆಯಿಂದ ಕತ್ತೆಯನ್ನು ಕುದುರೆಯನ್ನಾಗಿಯೂ ಕುದುರೆಯನ್ನು ಕತ್ತೆಯನ್ನಾಗಿಯೂ ಬದಲಿಸುವಂಥ ಪವಾಡ ಸದೃಶ ಲೇಖಕರು.
ಹಲವು ವರ್ಷಗಳ ಹಿಂದಿನ ಮಾತು. ಧಾರವಾಡದಲ್ಲಿ ಮನೋಹರ ಗ್ರಂಥಮಾಲೆ ಪುಸ್ತಕ ಬಿಡುಗಡೆ ಸಮಾರಂಭ. ವೇದಿಕೆ ಮೇಲೆ ನಮ್ಮೆಲ್ಲರ ಸಂಗಡ ಶ್ರೀಯತರೂ ಇದ್ದರು. ಅನಂತಮೂರ್ತಿಯವರ ಮಾತಿನ ಮೋಡಿ ಕುರಿತಂತೆ ನಾನು ಆಡಿದ್ದು, ಅನಂತಮೂರ್ತಿಯವರೇನಾದರೂ ಆತ್ಮಹತ್ಯೆಯನ್ನು ಸಮರ್ಥಿಸಿ ಉಪನ್ಯಾಸ ನೀಡಿದರೆಂದರೆ ಸಭಿಕರಲ್ಲಿ ಶೇಕಡಾ ಇಪ್ಪತ್ತೈದರಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳುವಿರಿ.
ಜ್ಞಾನಪೀಠ ಪ್ರಶಸ್ತಿಗಿಂತ ಮುಖ್ಯವಾಗಿ ತಮಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಬೇಕಿತ್ತೆಂದು ಸನ್ಮಾನ್ಯರೇ ಸಾರ್ವಜನಿಕವಾಗಿ ಅಳಲು ಅತೃಪ್ತಿ ಪ್ರಕಟಿಸಿದ್ದಾರೆ. ಅದು ನಿಜ ಕೂಡ. ಆದ್ದರಿಂದ ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಮಾನ ಉಳಿದೆಲ್ಲ ಪ್ರಶಸ್ತಿಗಳಿಗಿಂತ ಹೆಚ್ಚು ಮೌಲಿಕ. ಇದು ಬಹುಸಂಖ್ಯಾತ ಕನ್ನಡಿಗರ ಅಭಿಮತ. ಆದ್ದರಿಂದ ಇನ್ನಾದರೂ..

‍ಲೇಖಕರು G

February 16, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

  1. nagraj.harapanahalli

    ಕುಂವೀ ಸರ್..ಈಗ ಎಲ್ಲವೂ ಸ್ಪಷ್ಟವಾಯಿತು.
    ಲೇಖನದಲ್ಲಿ ನನಗೆ ಇಷ್ಟವಾದ ಸಾಲುಗಳು…
    * ಸ್ವಾತಂತ್ರ್ಯಪೂರ್ವದ ಗಾಯಗಳು ವಾಸಿಯಾಗಿವೆ, ಆದರೆ ಸ್ವಾಂತಂತ್ರ್ಯೋತ್ತರವಾಗಿ ಕೆಲ ಚುನಾಯಿತ ಜನಪ್ರತಿನಿಧಿಗಳ ಮಾರಾಣಾಂತಿಕ ಹಲ್ಲೆಗಳು ಅಸಂಖ್ಯಾತ, ಗಾಯಗಳು ಅಗಣಿತ. ಗಾಯಾಳುಗಳಿರುವಲ್ಲಿ ಸಮಾಜಮುಖಿ ಹೋರಾಟಗಳು ಜನಮುಖಿ ಸಾಂಸ್ಕೃತಿಕ ಸಂಘಟನೆಗಳಿರುವುದು ಸಹಜ.
    * ಅನಂತಮೂರ್ತಿ ತಮ್ಮ ವಾಗ್ವೈಖರಿಯಿಂದ ನಯನಾಜೂಕು ಚಿಂತನೆಯಿಂದ ಕತ್ತೆಯನ್ನು ಕುದುರೆಯನ್ನಾಗಿಯೂ ಕುದುರೆಯನ್ನು ಕತ್ತೆಯನ್ನಾಗಿಯೂ ಬದಲಿಸುವಂಥ ಪವಾಡ ಸದೃಶ ಲೇಖಕರು.

    ಪ್ರತಿಕ್ರಿಯೆ
  2. ushakattemane

    ‘ಕಣ್ಣಳತೆಯಲ್ಲಿದ್ದ ಯುವಪತ್ರಕರ್ತರು ಜ್ಞಾನಪೀಠ ನಾನ್ಸೆನ್ಸ್ ಎಂದು ಬರೆದುಕೊಳ್ಳಲಾರಂಭಿಸಿದ್ದನ್ನು ಎಷ್ಟು ಪ್ರಯತ್ನಿಸಿದರೂ ತಡೆಯುವುದು ನನ್ನಿಂದಾಗಲೇ ಇಲ್ಲ. ‘
    ಗ್ರಹಿಕೆಯಲ್ಲಿ ತಪ್ಪಾಗುತ್ತಿದೆ ಸರ್. ಈಗೀಗ ಯಾರೂ ಬಿಟ್ವಿನ್ ದಿ ಲೈನ್ಸ್ ಓದುವುದಿಲ್ಲ.ಎಡ ಅಥ್ವಾ ಬಲಕ್ಕೆ ವಾಲಿ ಬಿಡುತ್ತಾರೆ. ನಡುವೆ ಒಂದು ಸಮನ್ವಯದ ಹಾದಿಯೂ ಇರಬಹುದು ಎಂಬುದನ್ನು ಯೋಚಿಸುವ ತಾಳ್ಮೆ ಯಾರಲ್ಲಿಯೂ ಕಾಣುವುದಿಲ್ಲ. ಎಲ್ಲರೂ ಓಡುತ್ತಿದಾರೆ, ಯಾಕಾಗಿ ಎಂದು ಗೊತ್ತಿಲ್ಲ. ನಾವೂ ಓಡುತ್ತಿದ್ದೇವೆ ಅಷ್ಟೇ.

    ಪ್ರತಿಕ್ರಿಯೆ
  3. mankavi143@gmail.com

    ಮಾನ್ಯರೆ,
    ನೀವು ಹಿರಿಯರು ಹೀಗೆ ತುಟಿತಪ್ಪಿತು ಎಂದರೆ ಹೇಗೆ ಜೊತೆಗೆ ಒಮ್ಮೆ ಸರಿಯಂದ ವಿಷಯ ಇನ್ನೊಮ್ಮೆ ತಪ್ಪು ಎನ್ನುವ ಎಲ್ಲ ಹಿರಿಯ ಸಾಹಿತಿಗಳು ಯುವಕರಿಗೆ ನೀಡುವ ಸೂಚನೆ ಏನು? ಹಿರಿಯರಲ್ಲೆ ಹಲವು ಗೊಂದಲಗಳಿವೆ ಎಂಬ ಮಾತು ಸ್ಪಷ್ಟವಾಗುತ್ತದೆ. ಹಾಗಾದರೆ ಇಂದಿನ ಮಕ್ಕಳು ಯಾರನ್ನು ಅನುಸಿರಿಸಬೇಕು? ಪರಂಪರೆ ಬೇಕು ಎನ್ನುವ ಹಿರಿಯರು ಈ ರೀತಿ ನಿಮಿಷಕ್ಕೊಂದು ಮಾತನಾಡಿದರೆ ಹೇಗೆ?

    ಪ್ರತಿಕ್ರಿಯೆ
  4. shridhar

    ಅಂತೂ ವಿವಾದಕ್ಕೆ ಮುಕ್ತಿ.ಇನ್ನು ಮೇಲೆ ಮಾತನಾಡುವಾಗ ಯುವಪತ್ರಕರ್ತರತ್ತ ಗಮನವಿರಲಿ

    ಪ್ರತಿಕ್ರಿಯೆ
  5. kaligananath gudadur

    Sir,
    You have all the right to criticize the process and possessiveness of the JnaPeethis. You have expressed your own opinion concluding the opinions of hundreds of writers of Karnataka. Let the criticizers be at the mud. You need not to feel any regret to your opinion. I quoted in one of my articles, when you were selected for the Kendra Sahitya Akademy Award, that, you deserve to get the Ninth Jnanapeetha Award!
    Kaligananath Gudadur

    ಪ್ರತಿಕ್ರಿಯೆ
  6. Ajit

    ಕುಂವೀ may want to read these lines again….. 🙂
    1. ನಿಜ ಹೇಳುವುದಾದರೆ ಜ್ಞಾನಪೀಠ ಹೆಸರಿನ ಸಂಸ್ಥೆ ಬಗ್ಗೆ, ಆ ಪ್ರಶಸ್ತಿಯನ್ನು ಪಡೆದವರ ಬಗ್ಗೆ,
    ಅದಕ್ಕೆ ದುಂಬಾಲು ಬಿದ್ದಿರುವವರ ಬಗ್ಗೆ ನನಗೆ ಯಾವುದೇ ಪೂರ್ವಾಗ್ರಹವಿರಲಿಲ್ಲ…….
    2. ಅರ್ಹ ಲೇಖಕರು ಕನ್ನಡದಲ್ಲಿದ್ದಾರೆ. ಆದರೆ ಅವರು ಯಾರೂ ಇವರಷ್ಟು ಪ್ರಭಾವಶಾಲಿಗಳಲ್ಲ ಮತ್ತು
    ಅನುವಾದ ಸೌಕರ್ಯವಿಲ್ಲ. ಅವರನ್ನೆಲ್ಲ ಓವರ್ಟೇಕ್ ಮಾಡಿ ಗಿಟ್ಟಿಸಿಕೊಂಡಿರುವುದು ಅನುಮಾನಗಳನ್ನು
    ಹುಟ್ಟು ಹಾಕುತ್ತದೆ
    3. ನನಗೆ ವಯಸ್ಸಾಗಿದೆ ಬೇಟೆಯಾಡುವ ಶಕ್ತಿ ಇಲ್ಲ, ಆದ್ದರಿಂದ ಪ್ರಾಣಿಗಳೇ ದಯವಿಟ್ಟು ಸನಿಹಕ್ಕೆ ಬಂದು ಆಹಾರವಾಗಿ ನನ್ನ ಹಸಿವೆಯನ್ನು ನೀಗಿಸಿ ಎಂದು ವೃದ್ದಾಪ್ಯದಲ್ಲಿರುವ ಸಿಂಹ ಪ್ರಾರ್ಥಿಸಿದ ಮಾತ್ರಕ್ಕೆ ಯಾವ ಪ್ರಾಣಿಯೂ ಬಂದು ಅದಕ್ಕೆ ಆಹಾರವಾಗುವುದಿಲ್ಲ. ಆದರೆ ನಮ್ಮ ಅನಂತಮೂರ್ತಿಯವರು ಎಂಭತ್ತೈದರ ಹರೆಯದಲ್ಲೂ ಸಿಂಹಕ್ಕಿಂತ ಶಕ್ತರು ಮತ್ತು ಪ್ರಭಾವಶಾಲಿಗಳು. ಅವರ ಸೃಜಶೀಲ ಪ್ರತಿಭೆ ಪ್ರಶ್ನಾತೀತ. ತಮ್ಮ ವಾಗ್ವೈಖರಿಯಿಂದ ನಯನಾಜೂಕು ಚಿಂತನೆಯಿಂದ ಕತ್ತೆಯನ್ನು ಕುದುರೆಯನ್ನಾಗಿಯೂ ಕುದುರೆಯನ್ನು ಕತ್ತೆಯನ್ನಾಗಿಯೂ ಬದಲಿಸುವಂಥ ಪವಾಡ ಸದೃಶ ಲೇಖಕರು.
    4. ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಮಾನ ಉಳಿದೆಲ್ಲ ಪ್ರಶಸ್ತಿಗಳಿಗಿಂತ ಹೆಚ್ಚು ಮೌಲಿಕ.

    ಪ್ರತಿಕ್ರಿಯೆ
  7. mahantesh navalkal

    IVARELLA EDA EMBA KARANAKKE KSHAMEYILLA ANANTMOORTHY KARNAAD EMBA IBBARIGE UTTARAKANNADA SAHITYA SRUSTIEMBUVADU ELASU, ADAKKAGI EDURIGE SIKKAGA CHANNAGI BARADIDDIYA ENDAROOO DAKHALISUVAAGA MOUNA MEREYUTTARE, KUMVI ETTIRUVAA PRASHNEGALU SOOKTAVAAGIVE,
    SHANTARASARANTHA APRATHIMARANNU ITHIHAASA PUTAGALLI SERISIDAVARU IVARU
    MAHANTESH NAVALKAL

    ಪ್ರತಿಕ್ರಿಯೆ
  8. ಬಿ ಎ ಹುಣಸೀಕಟ್ಟಿ

    ನಾನು ಬಹಳೇ ವರ್ಷಗಳಿಂದ ನನ್ನ ಮಿತ್ರರೊಡನೆ ಜೋಕ್ ಒಂದನ್ನು ಹೇಳ್ತಿರ್ತೇನೆ.
    ಕನ್ನಡಕ್ಕೆ ಸಿಕ್ಕ ಜ್ಞಾನಪೀಠ ಪ್ರಶಸ್ತಿ 5 ಅಂತ. ಆಗ ಅವರು ಕೇಳುತ್ತಾರೆ- ಅದೆಂಗೆ ಅನಂತಮೂರ್ತಿ/ಕಾರ್ನಾಡ/ಕಂಬಾರರಿಗೆ ಸಿಕ್ಕಿದ್ದು ಮತ್ತೇನು ? ಅಂತ..
    ಅದಕ್ಕೆ ನಾನು ಜ್ಞಾನಪೀಠ ಪ್ರಶಸ್ತಿ ಸಿಕ್ಕಿದ್ದು ಮೊದಲ ಐವರಿಗೆ ಮಾತ್ರ ,ಆದರೆ ಒಂದೇ ಭಾಷೆಗೆ 5 ಪ್ರಶಸ್ತಿ ದೊರಕಿದರೆ, 3 ಪ್ರಶಸ್ತಿ ಬೋನಸ್ ಅಂತ ಕೊಡುತ್ತಾರೆ ಹೀಗಾಗಿ ಉಳಿದವರಿಗೆ ಅವು ದೊರಕಿದ್ದು ಅಂತ..(ಅನಂತ ಮೂರ್ತಿ/ಕಾರ್ನಾಡರ ವರ್ತನೆಗಳನ್ನು ಪ್ರಾಮಾಣಿಕವಾಗಿ ನೋಡುವ ಕೆಲವರಾದರೂ ನನ್ನ ವಾದ ಒಪ್ಪಿಯಾರು)

    ಪ್ರತಿಕ್ರಿಯೆ

Trackbacks/Pingbacks

  1. ಕುಂವೀ ಅವರ ಲೇಖನಕ್ಕೆ ಬಶೀರ್ ಅವರ ಪ್ರತಿಕ್ರಿಯೆ « ಅವಧಿ / Avadhi - [...] by G ಜ್ಞಾನಪೀಠ ವಿವಾದದ ಬಗ್ಗೆ ಕುಂವೀ ಅವರ ಲೇಖನ ’ಅವಧಿ’ಯಲ್ಲಿ ಪ್ರಕಟವಾಗಿತ್ತು. ಅದನ್ನು [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: