ಸಂತೋಷಪಡುವುದಕ್ಕೆ ಎರಡು ಕಾರಣ. ಈ ಸಲದ ಎರಡೂ ಜ್ಞಾನಪೀಠ ಪ್ರಶಸ್ತಿಗಳೂ ಕವಿಗಳ ಪಾಲಾಗಿದೆ. ದುಃಖಪಡುವುದಕ್ಕೆ ಒಂದು ಕಾರಣ, ಆ ಪಟ್ಟಿಯಲ್ಲಿ ಕನ್ನಡ ಲೇಖಕರ ಹೆಸರಿಲ್ಲ. ಪ್ರತಿಸಲ ಜ್ಞಾನಪೀಠ ಪ್ರಶಸ್ತಿ ಘೋಷಣೆ ಹತ್ತಿರಾಗುತ್ತಿದ್ದಂತೆ ಕನ್ನಡ ಸಾಹಿತ್ಯ ಪ್ರೇಮಿಗಳು ಈ ಸಲವಾದರೂ ಎಸ್ ಎಲ್ ಭೈರಪ್ಪನವರಿಗೆ ಬಂದೀತು ಎಂದು ಪ್ರೀತಿಯಿಂದ ನಿರೀಕ್ಷಿಸುತ್ತಾರೆ. ಹಾಗೇ ಕಂಬಾರರ ಅಭಿಮಾನಿಗಳದ್ದೂ ಅದೇ ನಿರೀಕ್ಷೆ. ಈ ಮಧ್ಯೆ ಜಿ ಎಸ್ ಶಿವರುದ್ರಪ್ಪನವರ ಹೆಸರನ್ನೂ, ಚನ್ನವೀರ ಕಣವಿಯವರ ಹೆಸರನ್ನೂ ಅನೇಕರು ಪ್ರಸ್ತಾಪಿಸುವುದುಂಟು.
ಮಲಯಾಳಿ ಕವಿ ಕುರುಪ್ ಕುರಿತು ಹೆಚ್ಚಿನ ಮಾಹಿತಿ ಇರುವವರು ದಕ್ಷಿಣ ಕನ್ನಡಿಗರು. ಅವರು ಅನೇಕ ಸಿನಿಮಾಗಳಿಗೆ ಸೊಗಸಾದ ಗೀತರಚನೆ ಮಾಡಿದವರು. ಹತ್ತೋ ಹನ್ನೆರಡೋ ಸಿನಿಮಾ ಪ್ರಶಸ್ತಿಗಳನ್ನು ಆ ಗೀತೆಗಳಿಗೆ ಗೆದ್ದುಕೊಂಡವರು. ಕೇರಳದಲ್ಲಿ ಸಿನಿಮಾ ಮತ್ತು ಸಾಹಿತ್ಯದ ನಡುವೆ ನಮ್ಮಲ್ಲಿರುವಷ್ಟು ಅಗಾಧ ಕಂದರ ಇಲ್ಲ. ಅಲ್ಲಿನ ಅತ್ಯುತ್ತಮ ಲೇಖಕರಲ್ಲಿ ಅನೇಕರು ಸಿನಿಮಾಕ್ಕಾಗಿ ಕೆಲಸ ಮಾಡಿದ್ದಾರೆ. ಕತೆ, ಚಿತ್ರಕತೆ, ಸಂಭಾಷಣೆ, ಹಾಡು ಬರೆದಿದ್ದಾರೆ. ಅದರಿಂದ ತಮ್ಮ ಘನತೆಗೆ ಕುಂದು ಬಂದೀತೆಂದು ಅವರೆಂದೂ ಭಾವಿಸಿಲ್ಲ.
ಅಲ್ಲಿನ ಚಿತ್ರರಂಗವೂ ಹಾಗೇ ಇದೆ. ಅನೇಕ ಸಿನಿಮಾಗಳು ಕಾವ್ಯದಂತಿರುತ್ತವೆ. ಕವಿಯಷ್ಟೇ ಸೂಕ್ಷ್ಮ ನಿರ್ದೇಶಕರಿದ್ದಾರೆ. ಸಣ್ಣ ಸಣ್ಣ ತಲ್ಲಣಗಳನ್ನು, ಕವಿತೆಯಷ್ಟೇ ಹಿಡಿದಿಡಬಹುದಾದ ಭಂಗುರ ಕ್ಷಣಗಳನ್ನು ಅವರು ಸಿನಿಮಾದಲ್ಲಿ ಹಿಡಿದಿಡಲು ಶ್ರಮಿಸುತ್ತಾರೆ. ಅಂಥ ಸಿನಿಮಾಗಳಿಗೆ ಹಾಡು ಬರೆಯುವುದು ಕವಿಗೂ ಪ್ರೀತಿಯ ಕೆಲಸವೇ. ಇನ್ನೂ ಮಲಯಾಳಂ ಚಿತ್ರಗೀತೆಗಳು ತಮ್ಮ ಮೂಲಲಯ ಕಳೆದುಕೊಂಡಿಲ್ಲ ಎನ್ನುವುದನ್ನು ಗಮನಿಸಿ. ಸೋನುನಿಗಮ್ ಹಾಡಿದರೆ ಅವರಿಗೆ ರುಚಿಸುವುದೇ ಇಲ್ಲ. ಜೇಸುದಾಸ್ ಇವತ್ತಿಗೂ ಅಲ್ಲಿ ಅಮರ ಗಾಯಕ.
ಉರ್ದು ಕೂಡ ಅಷ್ಟೇ. ಅತ್ಯುತ್ತಮ ಗಜಲ್‌ಗಳನ್ನು ಕೊಟ್ಟ ಉರ್ದು ಯಾವತ್ತೂ ಲಯ ಮತ್ತು ರೂಪಕತೆಯನ್ನು ಬಿಟ್ಟು ಕೊಡಲಿಲ್ಲ. ಮೊನ್ನೆ ಮೊನ್ನೆ ಜಾವೆದ್ ಅಖ್ತರ್ ಉರ್ದು ಭಾಷೆಯನ್ನು ಕೊಂಡಾಡುತ್ತಾ, ಹಿಂದಿ ಚಿತ್ರರಂಗ ಹೇಗೆ ಆ ಭಾಷೆಯ ಶ್ರೀಮಂತಿಕೆಯನ್ನು ಕಳಕೊಂಡು ಕೇವಲ ದುಂದುವೆಚ್ಚ ಮಾಡುವುದರಲ್ಲಿ ನಿರತವಾಗಿದೆ ಎನ್ನುವುದನ್ನು ಬೇಸರದಿಂದ ಹೇಳಿಕೊಂಡಿದ್ದರು.
ಕಾವ್ಯ ಮತ್ತು ನಾಟಕ ನಮ್ಮದೇ ಆದ ಅಭಿವ್ಯಕ್ತಿ ವಿಧಾನ. ಕತೆ, ಕಾದಂಬರಿಯಂಥ ಪ್ರಕಾರಗಳು ಆನಂತರ ಬಂದವು. ಮಹಾಕಾವ್ಯ ಮತ್ತು ಮಹಾನಾಟಕಗಳ ಮೂಲಕವೇ ಭಾರತೀಯ ಭಾಷೆಗಳು ಎಲ್ಲವನ್ನೂ ಹೇಳಿದ್ದು. ನಮ್ಮಲ್ಲಿ ವಿಜ್ಞಾನ ಕೂಡ ಕಾವ್ಯರೂಪದಲ್ಲಿ ಹೇಳಲ್ಪಟ್ಟಿತು ಅನ್ನುವುದನ್ನು ಮರೆಯುವಂತಿಲ್ಲ. ಶಾಸ್ತ್ರಗಳೂ ಕಾವ್ಯದ ಲಯದಲ್ಲೇ ಇದ್ದುಕೊಂಡು ಶ್ರುತಿ ಮತ್ತು ಶ್ರೌತಕ್ಕೆ ಇಂಬುಕೊಟ್ಟವು. ಕೇಳುವುದು ಮತ್ತು ನೆನಪಿಟ್ಟುಕೊಳ್ಳುವುದರ ಮೂಲಕವೇ ಕಾವ್ಯವನ್ನು ಪ್ರಚರಿಸುತ್ತಾ ಬಂದವರು ನಾವು.
ಇವತ್ತು ಕಾವ್ಯ ನೆಲೆ ಕಳೆದುಕೊಳ್ಳುತ್ತಿದೆ ಎಂದು ವಿಷಾದಿಸುವ ಹೊತ್ತಲ್ಲೇ ಇಬ್ಬರು ಕವಿಗಳನ್ನು ಜ್ಞಾನಪೀಠ ಪ್ರಶಸ್ತಿ ಅರಸಿಕೊಂಡು ಬಂದಿದೆ. ಅತ್ತ ಬೂಕರ್ ಮುಂತಾದ ಪ್ರಶಸ್ತಿಗಳು ಬೇರೆ ಸಾಹಿತ್ಯಪ್ರಕಾರಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾ ಬರುತ್ತಿವೆ. ಆ ಪ್ರಶಸ್ತಿಗಳನ್ನು ನೀಡುವವರ ಪಾಲಿಗೆ ಅದೊಂದು ಹಣ ದೋಚುವ ತಂತ್ರ ಮಾತ್ರ. ಪ್ರಶಸ್ತಿ ವಿಜೇತ ಕೃತಿ ಎಂಬ ಕಾರಣಕ್ಕೆ ಅದು ವಿಶ್ವದ ಅನೇಕ ದೇಶಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗುತ್ತದೆ. ಆ ಕಾದಂಬರಿಗಳನ್ನೂ ಹೇಗೆ ಬರೆಯಬೇಕು ಎಂದು ಹೇಳುವವರು, ತಿದ್ದುವವರು, ಪ್ರಶಸ್ತಿಗೆ ತಕ್ಕಂತೆ ರೂಪಿಸುವವರು ಇರುತ್ತಾರೆ.
ಅಂಥ ಸಂದರ್ಭದಲ್ಲಿ ಲೇಖಕನ ಪ್ರಾಮಾಣಿಕ ಅನಿಸಿಕೆ ಯಾವುದು, ತಿದ್ದುಪಡಿಯಾದ ಭಾವ ಯಾವುದು ಎಂಬುದೂ ಸ್ಪಷ್ಟವಾಗುವುದಿಲ್ಲ. ಅದಕ್ಕೆ ಉದಾಹರಣೆ ಎಂದರೆ ಅರವಿಂದ ಅಡಿಗ ಬರೆದ ವೈಟ್ ಟೈಗರ್’ ಮತ್ತು ಅದರ ಜೊತೆಜೊತೆಗೆ ಸ್ಪರ್ಧಿಸಿದ ದಿ ರಿಲಕ್ಟಂಟ್ ಫಂಡಮೆಂಟಲಿಸ್ಟ್, ದಿ ರೂಮ್ ಮುಂತಾದ ಕಾದಂಬರಿಗಳು. ಇಂಥ ಲಕ್ಷಾಂತರ ರುಪಾಯಿ ತಂದುಕೊಡುವ ಪ್ರಶಸ್ತಿಗಳ ಭರಾಟೆಯಲ್ಲಿ ಸಣ್ಣಕತೆ ಮತ್ತು ಕವಿತೆ ಕಣ್ಮರೆಯಾಗುತ್ತಿದೆ.
ಆದರೆ ಭಾರತ ಮತ್ತು ಆಫ್ರಿಕನ್ ದೇಶಗಳು, ಯುರೋಪಿನ ಪುಟ್ಟ ಪುಟ್ಟ ದೇಶಗಳು ಇವತ್ತಿಗೂ ಕವಿತೆಯನ್ನು ಆದರಿಸುತ್ತಾ, ಪೋಷಿಸಿಕೊಂಡು ಬಂದಿವೆ. ಒಂದು ದೇಶ ಆರ್ಥಿಕವಾಗಿ ಮುಂದುವರಿದಿದೆ ಎಂದರೆ ಕವಿತೆ ಅಲ್ಲಿ ಕೊಲೆಯಾಗಿದ ಎಂದೇ ಅರ್ಥ. ಒಂದು ಕಾಲದಲ್ಲಿ ಜಗತ್ತಿಗೇ ಅತ್ಯುತ್ತಮ ಕವಿತೆಯನ್ನು ಕೊಟ್ಟ ಇಂಗ್ಲೆಂಡಿನಲ್ಲಿ ಇವತ್ತು ಕವಿಗಳೇ ಇಲ್ಲ. ನಮ್ಮಲ್ಲಿ ಇಂಗ್ಲಿಷ್ ಎಂಎ ಮಾಡುವ ವಿದ್ಯಾರ್ಥಿಗಳೂ ಈಗಲೂ ಹದಿನೆಂಟು, ಹತ್ತೊಂಬತ್ತನೇ ಶತಮಾನದ ಕವಿಗಳು ಬರೆದ ಪದ್ಯ ಓದುತ್ತಿದ್ದಾರೆ. ವರ್ಡ್ಸ್‌ವರ್ತ್ ಕಂಡ ನಂತರ ಮತ್ಯಾರೂ ವೆಸ್ಟ್‌ಮಿನಿಸ್ಟರ್ ಸೇತುವೆಯನ್ನು ಕಂಡೇ ಇಲ್ಲವೇನೋ ಪಾಪ!
ಓ ಎನ್ ವಿ ಕುರುಪ್, ಕವಿ ಮತ್ತು ಗೀತರಚನಕಾರ ಎಂದೇ ಕರೆಸಿಕೊಂಡವರು. ಕೇರಳದಲ್ಲಿ ಸರಳವಾದ ಪ್ರೇಮಗೀತೆಗಳನ್ನು ಯಾರೂ ಬರೆಯುವುದೋ ಇಲ್ಲವೇನೋ ಎಂಬಷ್ಟರ ಮಟ್ಟಿಗೆ ಅಲ್ಲಿಯ ಕವಿಗಳು ರಾಜಕಾರಣ ಪ್ರೇರಿತರು. ನಿರಂತರವಾಗಿ ಅವರು ತಮ್ಮ ಕವಿತೆಗಳಲ್ಲಿ ಕೇರಳದ ತಹತಹವನ್ನು, ರಾಜಕೀಯ ಏರಳಿತಗಳನ್ನು, ಮನೋವಿಪ್ಲವನನ್ನು ಹೇಳುತ್ತಲೇ ಬಂದಿದ್ದಾರೆ. ಒಂದು ಚಿತ್ರಗೀತೆಯನ್ನು ಓದುತ್ತಾ ಹೋದರೂ ಅದರಲ್ಲೂ ಗಾಢವಾದದ್ದು ಇನ್ನೇನೋ ಇರುತ್ತದೆ. ಅಂದರೆ ಕವಿ ಒಂದು ಸಿನಿಮಾ ಗೀತೆ ಬರೆಯುವ ಹೊತ್ತಿಗೂ ತನ್ನ ಸ್ವಂತಿಕೆಯನ್ನು ಕಳೆದುಕೊಳ್ಳುವುದಿಲ್ಲ. ಒಂದು ಉದಾಹರಣೆ ಕೊಡುವುದಾದರೆ ನಮ್ಮಲ್ಲಿ ಲಂಕೇಶ್ ಎಲ್ಲಿಂದಲೋ ಬಂದವರು’ ಚಿತ್ರಕ್ಕೆ ಬರೆದ ಕೆಂಪಾದವೋ ಎಲ್ಲಾ ಕೆಂಪಾದವೋ’ ಗೀತೆ. ಜೊತೆಜೊತೆಗೆ ನಡೆದಾಗ ನೀಲ್ಯಾಗಿ ನಲಿದಂಥ, ಕಾಯುತ್ತಾ ಕುಂತಾಗ ಕಪ್ಪಾಗಿ ಕವಿದಂಥ, ನುಡಿನುಡಿದು ಹೋದಾಗ ಪಚ್ಚೇಯ ತೆನಿಯಂಥ ಭೂಮಿಯೂ ಎಲ್ಲಾನೂ ಕೆಂಪಾದವೋ’ ಎಂಬ ಸಾಲನ್ನು ಸಿನಿಮಾದಿಂದ ಆಚೆಗೆ ಎತ್ತಿಕೊಂಡು ಬಂದಾಗಲೂ ಅದು ತಬ್ಬಲಿಯಾಗುವುದಿಲ್ಲ.
ಕುರುಪ್ ಕೂಡ ಅಂಥದ್ದೇ ಗೀತೆಗಳನ್ನು ಬರೆದವರು. ಅವರ ಗಂಭೀರ ಕವಿತೆಗಳ ಹಾಗೆ, ಸಿನಿಮಾಕ್ಕೆ ಬರೆದ ಗೀತೆಗಳಿಗೂ ಅದೇ ಸೊಗಸಿರುತ್ತಿತ್ತು. ಅವರ ಒಂದು ರೂಪಕ ಹೀಗಿದೆ: ಅವಳ ರವಕೆಯ ಗುಂಡಿಗಳು ಬಿಚ್ಚಿಕೊಂಡಾಗ ನನಗೆ ಸೂರ್ಯನ ಕುದುರೆ ಕಾಲು ಬಿಡಿಸಿದ ಸದ್ದು ನೆನಪಾಯಿತು. ಮತ್ತೊಂದಷ್ಟು ಪುಲಕಗೊಳಿಸುವ ಸಾಲುಗಳು: ಶಕ್ತಿಮಾತೆಯ ತ್ರಿಶೂಲದಂಥ ಅವಳ ಕಣ್ಣೋಟಕ್ಕೆ ರಕ್ತಬೀಜಾಸುರ ನಾನು. ಶಾರದೆಯಂಥ ಅವಳ ನಾಲಗೆಯಲ್ಲಿ ಅಕ್ಷರವಾಗಿ ನೆಲೆಸುವ ಆಸೆ. ಬೆತ್ತಲೆ ರಾಜನ ಮೈಗೆ ಅಜ್ಞಾನದ ಪೋಷಾಕು. ನನ್ನ ನಗ್ನ ಮನಸ್ಸಿಗೆ ಅವಳ ಪ್ರೀತಿಯ ಹೊದಿಕೆ.
ಕುರುಪ್ ಪೂರ್ತಿ ಹೆಸರು ನೀಲಕಂಠನ್ ವೇಲು ಕುರುಪ್. ಲೋಕಸಭಾ ಚುನಾವಣೆಗೂ ಸ್ಪರ್ಧಿಸಿದ್ದ ಕುರುಪ್, ಎಡಪಂಥೀಯ ಒಲವುಳ್ಳ ಕೇರಳದ ಎಡಪಂಥೀಯ ಪ್ರಜೆ. ಕಮ್ಯುನಿಸಮ್ಮು ಮತ್ತು ಕಾವ್ಯ ಒಟ್ಟೊಟ್ಟಿಗೇ ಸಾಗುವುದು ಸಾಧ್ಯವೇ ಇಲ್ಲ ಎಂದು ನಂಬಬೇಕಾಗಿದ್ದ ದಿನಗಳಲ್ಲೂ ಕುರುಪ್, ಅವರೆಡರ ಜೊತೆಗೆ ಹೆಜ್ಜೆ ಹಾಕಿದವರು.
ಮಲಯಾಳಿಗಳ ಕಾವ್ಯಪ್ರೀತಿಗೊಂದು ಉದಾಹರಣೆ ನೋಡಿ. ಕೇರಳ ಪ್ರವಾಸೋದ್ಯಮ ಇಲಾಖೆಯ ವೆಬ್‌ಸೈಟಿನಲ್ಲಿ ನಿಮಗೆ ಕುರುಪ್ ಕುರಿತು ಸಾಕಷ್ಟು ವಿವರಗಳು ಸಿಗುತ್ತವೆ. ಅವರು ಭಾರತದ ಅತ್ಯುತ್ತಮ ಕವಿ ಎಂದು ಕೇರಳಿಗರು ಕರೆದು ಸಂಭ್ರಮಿಸುತ್ತಾರೆ. ಕವಿಗೆ ರಾಜಕೀಯ ಒಲವು ಇರಕೂಡದು ಎಂಬ ನಿಲುವಿನಿಂದ ಮುಕ್ತರಾದ ಓದುಗರನ್ನು ಹೊಂದಿದ ಭಾಷೆ ಅದು.
ಕುರುಪ್ ಬರೆದ ಕವಿತೆಯೊಂದು ಆಕಸ್ಮಿಕವಾಗಿ ಸಿಕ್ಕಿತು. ಅದರ ಹೆಸರು ಸ್ಟೋನ್ಸ್. ಇಂಗ್ಲಿಷಿಗೆ ಅನುವಾದಗೊಂಡ ಆ ಕವಿತೆಯ ಕೆಲವು ಸಾಲು:
ಕಣ್ಮುಂದೆ, ನೆಲದುದ್ದಕ್ಕೂ ಹರಡಿದ
ಕಲ್ಲುಗಳು.
ಹೆಜ್ಜೆ ಹೊರಳಿಸುವ, ಮೊಳೆಯಂತೆ ಚುಚ್ಚುವ
ನನ್ನೊಳಗೆ ವಿಷ ತುಂಬುವ,
ಜಗತ್ತನ್ನು ಅಳೆಯುವ ಮಾನಕ ಕಲ್ಲುಗಳು,
ಬಾಂದುಕಲ್ಲುಗಳು, ಅಪಶಕುನದ ಕಲ್ಲುಗಳು.
ಬರೀ ಕಲ್ಲುಗಳೇ, ಕೆಲವು ನಯ, ಕೆಲವು ಒರಟು.
ಕೆಲವೊಮ್ಮೆ ಚೆಲುವಿಗೆ ಸೂಚಕ. ಮತ್ತೊಮ್ಮೆ ಕುರೂಪ ಮತ್ತು
ಮಾರಕ.
ಕಲ್ಲುಗಳು, ಪಾಪದ ಮೇರಿಯತ್ತ
ಪಾಪಿಗಳು ತೂರಿದ ಕಲ್ಲುಗಳು…
ಎಲ್ಲರ ತುಟಿಯಲ್ಲೂ ರಕ್ತಸಿಕ್ತ ಶಾಪವಾದ
ಕಲ್ಲುಗಳು.. ಅವುಗಳ ಎದೆಯಲ್ಲಿ ಕರುಣೆಯ ಜಲವಿತ್ತೇ?
ಹಣೆಬರಹ ಬರೆಸಿಕೊಂಡ ಕಲ್ಲುಗಳು
ತಿಂದು ಕುಡಿದು ವೈಭೋಗದಿಂದಿದ್ದು
ಕಣ್ಮರೆಯಾದವರನ್ನು ಮುಚ್ಚುವ ಗೋರಿಯ ಕಲ್ಲುಗಳು..
ಹೀಗೆ ಸಾಗುವ ಕವಿತೆಯ ಕೊನೆಯಲ್ಲಿ ಒಂದು ಬೇಡಿಕೆಯಿದೆ:
ಶಿವ, ಶಕ್ತಿಯರೇ ಬನ್ನಿ
ಉಳಿಸುತ್ತಿಗೆ ತನ್ನಿ. ಈ ಕಲ್ಲುಗಳ ಮೇಲೆ ತಾಂಡವವಾಡಿ.
ಅವು ಹೆರಿಗೆ ನೋವಿನಿಂದ ನರಳಲಿ.
ನಿರ್ಮಿಸುವ ನಿರ್ನಾಮ ಮಾಡುವ ಮಕ್ಕಳನ್ನು ಹೆರಲಿ.
ಕುರುಪ್ ಕವಿತೆಯ ಸೊಗಸು ಈ ಸೊರಗಿದ ಅನುವಾದದಲ್ಲಿ ದೊರಕುವುದಿಲ್ಲ. ಅವರ ಕವಿತೆಯ ಭಾವವನ್ನಂತೂ ನಾವು ಅರ್ಥಮಾಡಿಕೊಳ್ಳಬಹುದು. ಕವಿತ್ವಕ್ಕಿರುವ ಶಕ್ತಿಯನ್ನು ಇವತ್ತಿನ ಜಗತ್ತಿಗೆ ಅರ್ಥ ಮಾಡಿಸುವುದಕ್ಕೆ, ಕವಿಗಳಿಗೆ ಆತ್ಮವಿಶ್ವಾಸ ತುಂಬುವುದಕ್ಕೆ ಮತ್ತು ಕವಿತೆ ಬರೆಯುವುದು ನಿರರ್ಥಕ ಎಂದು ನಂಬಲು ಹೆಣಗಾಡುತ್ತಿರುವ ಮಂದಿಗೆ ಕವಿತೆಯ ಕುರಿತು ಕಿಂಚಿತ್ತಾದರೂ ಪ್ರೀತಿ ಹುಟ್ಟುವಂತೆ ಮಾಡುವುದಕ್ಕೆ ಕುರುಪ್‌ನಂಥ ಕವಿಗಳು ಬೇಕು. ಇಂಥ ಪ್ರಶಸ್ತಿಗಳೂ ಬೇಕು.
ಕುರುಪ್‌ನನ್ನು ಓದುವುದಕ್ಕೆ ಈ ಜ್ಞಾನಪೀಠ ಸ್ಪೂರ್ತಿಯಾಗಲಿ. ಕುರುಪ್ ಕವಿತೆಯನ್ನು ಚೆಂದದ ಅನುವಾದ ನಮಗೆ ಸಿಗುವಂತಾಗಲಿ
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





ಒಳ್ಳೆಯ ಬರಹ. ಈ ಸನ್ನಿವೇಶದಲ್ಲಿ ಜ್ಞಾನಪೀಠ ಬಂದ ಕವಿಗಳನ್ನು ತಿಳಿದುಕೊಂಡವರಿದ್ದಾರೆ ಎಂಬುದೇ ಸಂತೋಷದ ವಿಷಯ. ಧನ್ಯವಾದಗಳು.
“ಒಂದು ಕಾಲದಲ್ಲಿ ಜಗತ್ತಿಗೇ ಅತ್ಯುತ್ತಮ ಕವಿತೆಯನ್ನು ಕೊಟ್ಟ ಇಂಗ್ಲೆಂಡಿನಲ್ಲಿ ಇವತ್ತು ಕವಿಗಳೇ ಇಲ್ಲ”
ಈ ವಾಕ್ಯದ ಬಗ್ಗೆ….
ಈ ವಾಕ್ಯದಲ್ಲಿ “ಜಗತ್ತಿಗೇ ಅತ್ಯುತ್ತಮ ಇಂಗ್ಲೀಷಿನಲ್ಲಿ ಕವಿತೆ ಕೊಟ್ಟ” ಎನ್ನಬಹುದು. ಜಗತ್ತಿನ ಇನ್ನು ಯಾವ ಯಾವ ಭಾಷೆಗಳಲ್ಲಿ ’ಅತ್ಯುತ್ತಮ’ ಎನ್ನಿಸುವಂತದ್ದು ಬಂದಿತ್ತೋ ನಮಗೇನು ಗೊತ್ತು? ಏಕೆಂದರೆ ಇಂಗ್ಲೆಂಡು ಎಂದರೆ ಮಾತ್ರ ಜಗತ್ತಲ್ಲವಲ್ಲ.
tumba thanks. kurup avara geetarchaneya satvada bagge tilisiddakke.kannada cinemadallu bari neerasa bhramaka premgeete huttade gatti hadu huttali.
ಓಹ್ ಬ್ಯೂಟಿಫುಲ್ ಕಣ್ರಿ ನಿಮ್ಮ ಬರಹ. ಕರೂಪರು ಕನ್ನಡಕ್ಕೆ ಬರಲಿ. ಕನ್ನಡಿಗರು ಬೆಳೆಯಲಿ, ನಿಮ್ಮ ಬರೆಹ ನನಗೆ ಪ್ರೀತಿ ನೀಡಿತು,
Very informative and educative article about ONV Kurup.I was also watching the interview with Kurup along with his wife in Asianet Malayalam channel recently and the announcement of Jnanapeetha award was not a surprise.What surprised me most was the detailed knowledge of Mr.Kurup and his works by Jogi. Knowing about writers of other languages will enhance and widen the scope for development.Even though he was a communist and contested Lok sabha elections and lost, he commands immense respect from all shades of people in Kerala is testimony of impartiality of the people of Kerala.Another important writer who besides writing screenplay and directing the movie is MT Vasudevan Nair. Kannada needs such film stalwarts too.
Jogi…. please go on writing we love it