ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆದ ಕವಿತೆ

jogi

ಜೋಗಿ 

ಬೀಳ್ಕೊಡುವುದು ಸುಲಭವಲ್ಲ.
ಮನಸ್ಸು
ಮುರಿಯಬೇಕು. ಮತ್ತೆ ಬಂದೇ ಬರುತ್ತೀ
ಅಂತ ನಂಬಬೇಕು. ನನ್ನ
she-butterflyಭವಿಷ್ಯದಲ್ಲಿ ನನಗೇ ನಂಬಿಕೆ ಇರಬೇಕು.
ನಿನ್ನ ಕ್ಷಣಿಕತೆಯನ್ನೂ ನಂಬಿದಂತೆ
ನಟಿಸಬೇಕು. ಕಣ್ಣಬಾವಿ ಬರಿದು ಎಂದು
ಕಣ್ಣಲ್ಲೇ ಹೇಳಬೇಕು. ಕೈ ಬೀಸಿ ಹೊರಟ ನಂತರ
ತಿರುಗಿ ನೋಡಬಾರದು, ನೀನೂ ನೋಡುತ್ತಿ
ಎಂದುಕೊಳ್ಳಬಾರದು.
ಥಟ್ಟನೆ ಮಳೆಯಾಗಿ ನೀನು
ನೆನೆಯುತ್ತಿದ್ದರೆ ಫಕ್ಕನೆ
ಕಿಟಕಿ ಮುಚ್ಚಿಬಿಟ್ಟು, ಅದಕ್ಕೆ
ಬೆನ್ನೊತ್ತಿ ಸುಮ್ಮನೆ ನಿಲ್ಲಬೇಕು.
ರಾತ್ರಿಗಳನ್ನು ನನ್ನವೆಂದುಕೊಳ್ಳದೇ
ಹಗಲು ಪವಾಡ ನಡೆಯುತ್ತದೆ ಎಂದು
ನಂಬದೇ
ದೇವದಾರು ಮರಗಳ ನೆರಳಿನ ಮೇಲೆ ಭರವಸೆ
ಇಡದೇ, ನೋಯುವ ಮೊಣಕಾಲಿನ ಚೀತ್ಕಾರವನ್ನು
ಲೆಕ್ಕಿಸದೇ ನಡೆಯುತ್ತಲೇ ಇರಬೇಕು.
ಆದಷ್ಟು ದೂರ…

ಇದೆಲ್ಲ ಮಾಡಿ ಮರೆತಾದ
ನಂತರ
ಕೂಡುಹಾದಿಗಳಲ್ಲಿ ಕಾಯಬೇಕು.
ನೀನು ಬರುತ್ತಿಯೆಂದು
ಮತ್ತೊಮ್ಮೆ ಬೀಳ್ಕೊಡಬಹುದೆಂದು.
ವಿದಾಯ ಮಾತ್ರ
ವಿರಹವನ್ನು ನಿವಾರಿಸಬಹುದೆಂದು
ನಂಬುತ್ತಾ.

‍ಲೇಖಕರು Admin

19 October, 2016

4 Comments

  1. Sangeeta Kalmane

    ಬೀಳ್ಕೊಡುವುದು ಅಷ್ಟು ಸುಲಭವಲ್ಲ
    ಎದೆಯಾಳಾಂತರದಲ್ಲಿ ಮಡುಗಟ್ಟಿದ
    ಪ್ರೀತಿಯ ಬುಗ್ಗೆ
    ಅಗಲಿಕೆಯ ನೋವಿನಲಿ
    ಬೇಡ ಬೇಡವೆಂದರೂ ಪುಟಿದೇಳುವ
    ಕಕ್ಕುಲತೆಯ ಮಹಾಪೂರ
    ಕಣ್ಣು ಮಂಜಾಗಿಸಿ
    ಮತ್ತೊಮ್ಮೆ ನೀ ಸಿಗೋದೇ ಇಲ್ಲವೇನೊ
    ಅನ್ನುವ ಹಪಹಪಿಯಲ್ಲಿ
    ಆತಂಕದ ಮಡುವಲ್ಲಿ
    ಅದ್ದಿದ ಹೃದಯದ
    ಬಟ್ಟಲ ತುಂಬಾ
    ಹಿಡಿದಿಡಲಾಗದ ನೋವು
    ಹತಾಷೆ ಮೈ ಮನವೆಲ್ಲ
    ಹಿಂಡುವ ಯಾತನೆ
    ಪತಾಕೆಯಂತೆ
    ಗಾಳಿ ಬರಲಿ ಬಾರದೇ ಇರಲಿ
    ತನ್ನಪ್ಟಕ್ಕೇ ತೊನೆದಾಡುವ
    ದಿಗಿಲುಗೊಂಡ ಮನಕೆ
    ಸಾಂಂತ್ವನ ಹೇಳಲು
    ಶಾಂತವಾಗಲು ಇನಿಯಾ
    ಮತ್ತೆ ನೀ ಬರಲೇ ಬೇಕು
    ಬಾಚಿ ತಬ್ಬಲೇ ಬೇಕು
    ನನ್ನದರದ ತುಂಬಾ
    ಮುತ್ತಿನ ಮಳೆ ಗರೆಯಲೇ ಬೇಕು
    ಮೌನ ಮುರಿದು
    ಸಂಗಾತಿಯ ಬಿಸಿಯಪ್ಪುಗೆಯಲ್ಲಿ
    ನಾ ತೋಯಬೇಕು
    ಆಗಲೇ ಅಗಲಿಕೆಯ ನೋವು
    ಶಾಂತವಾಗಿ
    ಮನ ಹೂವಾಗುವುದು ಗೆಳೆಯಾ
    ಅಗಲಿಕೆ ಈ ಶಬ್ದ
    ಅತೀ ಕಠಿಣ
    ಮತ್ತೆ ಮತ್ತೆ ನೀ
    ಉಸುರಲೇ ಬೇಡ
    ಈ ನೋವು
    ನನಗೂ ಬೇಡ
    ನೀನಗೂ ಬೇಡ
    ಇರಿಯುವ ಕಣ್ಣು
    ಕುರುಡಾಗಲಿ ಬಿಡು
    ಆಗ ನಾವಿರುವ
    ಹಾಯಾಗಿ
    ಈ ಲೋಕದಲ್ಲಿ!

    ಸೊಗಸಾದ ಕವನಕ್ಕೆ ನನ್ನ ನಮನ. ಬಡಿದೆಬ್ಬಿಸಿದ ಭಾವನೆ ಆಯಿತೊಂದು ಕವನ. ಧನ್ಯವಾದಗಳು ಸರ್.

  2. ಸುಧಾ ಚಿದಾನಂದಗೌಡ

    ವಿದಾಯ ಅಗತ್ಯ- ವಿರಹವೂ

    ನಿನ್ನೊಳಗಾಗಿದ್ದಾಗ ಮರೆತ ಸತ್ಯವೆಂದರೆ
    ನಾನು ಮೈಮರೆತಿದ್ದೆನೆಂಬುದು
    ನೀನಿಲ್ಲದಿದ್ದಾಗ ಅಂದುಕೊಂಡ ಸುಳ್ಳೆಂದರೆ
    ನೀನಿಲ್ಲದಿದ್ದರೂ ನಾನಿರಬಲ್ಲೆ ಎಂಬುದು

    ವಿರಹದ ಬಿಸಿಯಲ್ಲಿ ಬೇಯಲು ಮಳೆಹನಿಗಳಿವೆ
    ಕನಸಿಗೆ ರಂಗೇರಿಸಲು ಮಳೆಬಿಲ್ಲಿದೆ
    ನೆಚ್ಚಿಕೊಳ್ಳಲು ಸುಕಾಸುಮ್ಮನೆ ಹಚ್ಚಿಕೊಂಡ
    ಬೆಚ್ಚನೆಯ ನಿರೀಕ್ಷೆಯಿದೆ
    ಎಚ್ಚರವಿಲ್ಲದೆ ಕಟ್ಟದೆ ಬಿಟ್ಟ ಸೆರಗಿನಲಿ
    ಸ್ಪರ್ಷದ ನವಿರಿನ್ನೂ ನವಿಲಗರಿಯಾಗಿ
    ಮರಿ ಹಾಕುತಿದೆ

    ಏಕಾಗಿ ದೂರಾದೆ ಹೇಳು
    ಸುಡಲಿ ಸ್ತ್ರೀವಾದ ಹಾಳುಮೂಳು

    ವಿರಹವಿರಲಿ ವಿದಾಯವಿರಲಿ
    ಜೊತೆಗಿನ್ನೊಂದು ಭೇಟಿಯೂ ಪದಹಾಡಲಿ

  3. ಜೋಗಿ

    ಸಂಗೀತಾ ಕಲ್ಮನೆ ಮತ್ತು ಸುಧಾ ಚಿದಾನಂದ ಗೌಡ ಅವರು ಕವಿತೆಗಳ ಮೂಲಕವೇ ಪ್ರತಿಕ್ರಿಯಿಸಿದ್ದು ಖುಷಿ ಕೊಟ್ಟಿತು. ಕವಿತೆಯಿಂದಲೇ ಕವಿತೆ ಹುಟ್ಟಿತು ನೋಡಾ..

  4. ಸಂಗಮೇಶ್ ಡಿಗ್ಗಿ ಸಂಗಾಮಿತ್ರ

    ವಿದಾಯ ಹೇಳಲೇಬೇಕು
    ಕೆಲವು ಸಂಗತಿಗಳಿಗೆ….
    ಹಳೆ ಮೊಳೆಗೆ ಹೊಸ ಕ್ಯಾಲೆಂಡರ್ ಸಿಕ್ಕಿಸುವ ಹಾಗೆ
    ಬರುವ ದಿನಗಳ ಮೇಲೆ ಗುರುತು ಹಾಕಲು…

    ವಿದಾಯ ಹೇಳಲೇಬೇಕು
    ಕೆಲವು ಸಂಗತಿಗಳಿಗೆ….
    ಸವೆದು ಹೋದ ಚಪ್ಪಲಿಯ ಮೂಲೆಗೆಸೆಯುವಂತೆ
    ಹೊಸ ನೋವಿನ ಮುಳ್ಳನ್ನು ಚುಚ್ಚಿಕೊಳ್ಳಲು…

    ವಿದಾಯ ಹೇಳಲೇಬೇಕು
    ಕೆಲವು ಸಂಗತಿಗಳಿಗೆ….
    ಬರುವುದೆಲ್ಲವ ಬರಲಿ ಎಂಬ ಆಶಾಬಾವನೆಯಿಂದ
    ಒತ್ತರಿಸಿ ಬರುವ ದುಃಖವನ್ನು ಎದೆಗಪ್ಪಿಕೊಳ್ಳಲು…

    ವಿದಾಯ ಹೇಳಲೇಬೇಕು
    ಕೆಲವು ಸಂಗತಿಗಳಿಗೆ….
    ಮಳೆಗೆ ಒದ್ದೆಯಾದ ಕೊಡೆಯನು ಮಡಚಿಟ್ಟ ಹಾಗೆ
    ಬೇಸಿಗೆಕಾಲ ಮುಗಿದು ನೆನಪಿನ ಮಳೆ ಸುರಿಯುವವರೆಗು…

    ವಿದಾಯ ಹೇಳಲೇಬೇಕು
    ಕೆಲವು ಸಂಗತಿಗಳಿಗೆ….
    ಬಂದ ದಾರಿಯನ್ನೇ ಮರೆತು ತುತ್ತತುದಿಗೆ ವಿಶ್ರಮಿಸಲು
    ಎಲ್ಲೋ ಹೃದಯ ಕಳೆದುಹೋಗಿದೆ ಎಂದು ದಾರಿಯನ್ನು ನೆನೆಯಲು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading