ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಬರೆದಿದ್ದಾರೆ: ಪ್ರೀತಿ ಸರಳವಲ್ಲ, ಏನೇನೋ ರಗಳೆ

ದೈವಭಕ್ತಿಯ ಹಾಗೆ ಪ್ರೇಮವೂ ಸಹ, ದೇವರಂತೆ ಪ್ರೇಮಿ
ಪ್ರೇಮ ಮತ್ತು ಪ್ರೇಮರಾಹಿತ್ಯ ಸಂಬಂಧಗಳ ಕುರಿತು ಮತ್ತಷ್ಟು ವಿವರ ಬೇಕು ಎಂದು ಅನೇಕರು ಕೇಳಿದ್ದಾರೆ. ಪ್ರೀತಿ ನಾವಂದುಕೊಂಡಷ್ಟು ಸರಳವಾಗಿಲ್ಲ ಅನ್ನಿಸುತ್ತೆ. ಅದರಲ್ಲಿ ಏನೇನೋ ರಗಳೆಗಳಿವೆ. ಅದೊಂದು ಚಕ್ರವ್ಯೂಹದ ಹಾಗೆ ಎಂದು ಕಲ್ಪನೆಗಳನ್ನು ಮಾಡಿಕೊಂಡುವರಿದ್ದಾರೆ. ನೀವು ಹೇಳಿದ ಹಾಗೆ ಸಂತೋಷವಾಗಿ ಇರಬಹುದಾದರೆ, ಮದುವೆ ಯಾಕೆ ಬೇಕು ಎಲ್ಲರೂ ತಮ್ಮಷ್ಟಕ್ಕೆ ಸಂತೋಷ ಹುಡುಕಿಕೊಳ್ಳಬಹುದಲ್ಲ ಎಂಬ ಪ್ರಶ್ನೆಯೂ ಎದುರಾಗಿದೆ.
ಅನುಮಾನ, ಆತಂಕಗಳಿಲ್ಲದ ಪ್ರೀತಿ, ಪ್ರೀತಿಯೇ ಅಲ್ಲ ಎಂದು ನಂಬಿದ ಕಾಲಘಟ್ಟದಲ್ಲಿ ನಾವಿದ್ದೇವೆ. ಸ್ವಲ್ಪ ಹಿಂದಕ್ಕೆ ಹೋಗಿ ನೋಡಿದರೆ ಪ್ರೀತಿಯಲ್ಲಿದ್ದದ್ದು ವಿರಹ ಮಾತ್ರ. ಸೀತೆಗಾಗಿ ತಪಿಸುವ ಶ್ರೀರಾಮ, ಲಕ್ಷ್ಮಣನ ವಿರಹದಿಂದ ಕಾತರಿಸುವ ಊರ್ಮಿಳೆ, ಹೂವಯ್ಯನಿಗಾಗಿ ಹಂಬಲಿಸುವ ಸೀತೆ- ಮುಂತಾದವರಷ್ಟೆ ನಮ್ಮ ಕಣ್ಮುಂದಿದ್ದರು. ನಮ್ಮ ಸುತ್ತಮುತ್ತ ಇದ್ದದ್ದೂ ಅದೇ. ಒಬ್ಬರ ಕುರಿತು ಇನ್ನೊಬ್ಬರಿಗೆ ಅಂಥ ಅನುಮಾನವಾಗಲೀ, ಅಪನಂಬಿಕೆಯಾಗಲೀ ಇರಲಿಲ್ಲ. ವಿರಹ ಕೂಡ ಒಂದು ಅರ್ಥದಲ್ಲಿ ಸಂತೋಷವನ್ನೇ ಕೊಡುವ ಒಂದು ಭಾವ. ನೀನಿಲ್ಲದೆ ನನಗೇನಿದೆ ಎಂದು ಇಬ್ಬರಿಗೂ ಅನ್ನಿಸಿದಾಗಲೇ ಆ ಪ್ರೀತಿ ಸಾರ್ಥಕವಾಗುವುದು.

ನಿರುಮ್ಮಳದಿಂದ ಕೂತು ಯೋಚಿಸಿ ನೋಡಿ. ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ನಾವು ಪ್ರೀತಿಯ ಬಗ್ಗೆ ಯೋಚಿಸುವುದು ಬಹುಶಃ ಒಂದು ಗಂಟೆ. ನೂರು ವರ್ಷದ ಆಯಸ್ಸಿನಲ್ಲಿ ಪ್ರೇಮಕ್ಕಾಗಿ ಕಾತರಿಸಿವುದು ಬಹುಶಃ ಹತ್ತೋ ಹನ್ನೆರಡೋ ವರುಷ. ಉಳಿದಂತೆ ನಾವು ಪ್ರೇಮಿಸುವುದೇ ಇಲ್ಲ ಅಂತಲ್ಲ. ಪ್ರೇಮ ನಮ್ಮ ಚಿಂತನೆಯ, ಯೋಚನೆಯ ಬಹುಮುಖ್ಯ ಪ್ರೇರಣೆಯೇನೂ ಆಗಿರುವುದಿಲ್ಲ. ಮಧ್ಯವಯಸ್ಕರು ಸೇರಿದಾಗ ರಾಜಕೀಯ, ಸಂಸ್ಕೃತಿ, ಸಾಹಿತ್ಯ ಮತ್ತು ಸಂಸಾರದ ಬಗ್ಗೆ ಮಾತಾಡುತ್ತಾರೆ. ಹೊಸದಾಗಿ ಕಟ್ಟಿದ ಮನೆ, ಎಲ್ಲೋ ಕೊಂಡ ಸೈಟು, ಕಟ್ಟದೆ ಉಳಿದ ಸಾಲ, ಆಫೀಸಿನ ತಕರಾರು, ಬೋರಾಗುವ ಅಭಿನಯ, ಇತ್ತೀಚೆಗೆ ಬಂದ ಒಳ್ಳೆಯ ಸಿನಿಮಾ- ಹೀಗೆ ವೈವಿಧ್ಯಮಯ ಆಸಕ್ತಿಗಳು ಮಾತನ್ನು ಹೊಳಪುಗೊಳಿಸುತ್ತವೆಯೇ ಹೊರತು, ಪ್ರೇಮವೋ, ಹಂಬಲಿಕೆಯೋ ಕಾತರವೋ ಅಲ್ಲ. ನಮ್ಮ ಮಟ್ಟಿಗೆ ಪ್ರೇಮವೆಂಬುದು ತೀರಾ ಖಾಸಗಿಯಾದ, ತಾನೊಬ್ಬನೇ ಕೂತು ಮರುಗಬಹುದಾಗ, ಸಂಭ್ರಮಿಸಬಹುದಾದ ಸಂಗತಿ. ನಾನು ಅವಳನ್ನು ಪ್ರೀತಿಸುತ್ತಿದ್ದೇನೆ ಎಂದು ಹದಿಹರೆಯದ ಹುಡುಗ ಘೋಷಿಸಿದಾಗ ಆ ಕುರಿತ ರೋಚಕತೆ ಮಾಯ. ಅಲ್ಲಿಂದಾಚೆಗೆ ಅದು ಅವರಿಬ್ಬರ ಜಗತ್ತು. ಆ ಜಗತ್ತಿನ ಆಗುಹೋಗುಗಳಿಗೆ ಅವರೇ ಜವಾಬ್ದಾರರು. ಅದಾದ ಮೇಲೆ, ನಾವು ಮದುವೆ ಆಗ್ತೀವಿ ಅಂತಲೋ, ಪಾಪಿ, ಕೈಕೊಟ್ಳು ಕಣೋ ಅಂತಲೋ ಹೇಳುವ ತನಕ ಅವರದೇ ಲೋಕದೊಳಗೆ ಅವರು ಬಂದಿ.
ಪ್ರೇಮ ತನ್ನಿಂತಾನೇ ಸ್ವಯಂಪೂರ್ಣವೂ ಅಲ್ಲ. ಅದು ಜಗತ್ತನ್ನು ಕಾಣಿಸುವ ಬೆಳಕಿರಬಹುದು, ಕಣ್ಣಿರಬಹುದು. ಗೆಳೆಯನ ಜೊತೆ ಸುದೀರ್ಘ ಪ್ರಯಾಣ ಹೊರಟಾಗ ದಾರಿ ಸುಗಮ ಅನ್ನಿಸಬಹುದು, ಹೊಚ್ಚ ಹೊಸದಾಗಿ ಕಾಣಿಸಬಹುದು. ಪ್ರಯಾಣದ ಬೋರು ಕಡಿಮೆಯಾಗಬಹುದು. ಆದರೆ ಕ್ರಮೇಣ ಪ್ರೀತಿ ಆಕಳಿಕೆ ತರಿಸುತ್ತದೆ ಕೂಡ. ನಾ ನಿನ್ನ ಧ್ಯಾನದೊಳಿರಲು ಸದಾ…. ಎಂದು ಯಾವತ್ತೂ ಪ್ರೀತಿಯಲ್ಲಿ ಹಾಡಬೇಡಿ. ಪ್ರೀತಿಯ ಧ್ಯಾನ ಯಾವತ್ತೂ ಒಳ್ಳೆಯದಲ್ಲ.
ಗೆಳೆತನದ ಹಾಗೆ ಪ್ರೇಮಿಸಲು ಯಾಕೆ ಸಾಧ್ಯವಾಗುವುದಿಲ್ಲ ಎಂಬ ಪ್ರಶ್ನೆಯನ್ನು ಯುವ ಪ್ರೇಮಿಗಳು ಯಾವತ್ತೂ ಕೇಳಿಕೊಳ್ಳುವುದಿಲ್ಲ. ಈ ಕಾಲದ ಹುಡುಗರು ತಾವು ಮಹಾ ಉದಾರಿಗಳೆಂಬಂತೆ ವರ್ತಿಸುತ್ತಾ ಪ್ರೇಮವನ್ನೂ ಗೆಳೆತನ ಎಂದು ನಂಬಿಕೊಂಡವರಂತೆ ನಟಿಸುವುದನ್ನು ನೀವೂ ನೋಡಿರಬಹುದು. ಅಂಥ ಸುಳ್ಳು, ನಟನೆಗಳನ್ನೆಲ್ಲ ಪ್ರೇಮ ನಿವಾಳಿಸಿ ಎಸೆಯುತ್ತದೆ.
ಉಳಿದ ಎಲ್ಲಾ ಸಂಬಂಧಗಳನ್ನೂ ವಂಚನೆ ಇದ್ದೇ ಇರುತ್ತದೆ. ಬರುತ್ತೇನೆ ಎಂದು ಮಾತುಕೊಟ್ಟ ಗೆಳೆಯ ಕೈ ಕೊಡುತ್ತಾನೆ. ಅಣ್ಣ ತಮ್ಮಂದಿರ ಮಧ್ಯೆ ಭಿನ್ನಾಭಿಪ್ರಾಯಗಳಿರುತ್ತವೆ. ನಂಬಿದ ಆಫೀಸಿನಲ್ಲಿ ಮೋಸವಾಗುತ್ತದೆ. ಮಗ ಯಾರನ್ನೋ ಮದುವೆಯಾಗಿ ಸಿಟ್ಟು ತರಿಸುತ್ತಾನೆ. ಮಗಳು ಹೇಳದೇ ಕೇಳದೇ ಓಡಿಹೋಗಿ ಅವಮಾನಕ್ಕೆ ಕಾರಣವಾಗುತ್ತಾಳೆ. ಇವೆಲ್ಲವನ್ನು ಜೀವನದ ಸಹಜ ಏರಿಳಿತ ಎಂದು ಭಾವಿಸುವ ನಾವು ಪ್ರೇಮವಂಚನೆಗೆ ಮಾತ್ರ ಇನ್ನಿಲ್ಲದಂತೆ ಕೊರಗುತ್ತೇವೆ. ಅದು ಇನ್ನೊಬ್ಬರ ಅನುಕಂಪಕ್ಕೆ ಕೂಡ ಕಾರಣವಾಗುವುದಿಲ್ಲ. ಹೀಗೆ ವಿರೋಧಭಾಸಗಳಿಂದ ತುಂಬಿ ತುಳುಕುವ ಪ್ರೇಮ ಯಾಕೆ ಎಲ್ಲರನ್ನೂ ಅಷ್ಟೊಂದು ಕಂಗೆಡಿಸುತ್ತದೆ?
ಯಾಕೆಂದರೆ ಪ್ರೇಮಕ್ಕೆ ನಾವು ನಮ್ಮ ಎಲ್ಲವನ್ನೂ ಒಪ್ಪಿಸಿಕೊಂಡಿರುತ್ತೇವೆ. ಅವನಲ್ಲೋ ಅವಳಲ್ಲೋ ನಮ್ಮ ಮುಂದಿನ ಬದುಕು ಇದೆ ಎಂದು ಭಾವಿಸುತ್ತೇವೆ. ಸಂಗಾತಿ ನಮ್ಮ ವ್ಯಕ್ತಿತ್ವದ ಒಂದು ಭಾಗವಾಗಿರುತ್ತಾಳೆ. ನಾನು ಅಷ್ಟೊಂದು ಪ್ರೀತಿಸಿದೆ, ಆದರೆ ಅವನು… ಎಂಬ ಯಾತನೆ ಅವಳನ್ನು ಕಾಡುತ್ತದೆ. ನಂಬಿಸಿ ವಂಚಿಸಿದಳು ಎಂದು ಅವನು ಕೊರಗುತ್ತಾನೆ.
ಇಂಥ ಭಾವನೆಗಳಿಲ್ಲದೇ ಪ್ರೀತಿಸುವುದೂ ಸಾಧ್ಯವಾ? ಅವೆಲ್ಲ ಇರದೇ ಹೋಗಿದ್ದರೆ ಪ್ರೇಮ ಯಾಕೆ ಅಷ್ಟೊಂದು ಸಂಕೀರ್ಣ ಸಂಗತಿಯಾಗುತ್ತಿತ್ತು ಹೇಳಿ? ಅದು ಎಲ್ಲ ಸಂಬಂಧಗಳ ಹಾಗೆ ಮೇಲ್ಮಟ್ಟದಲ್ಲೇ ಉಳಿದುಹೋಗುತ್ತಿತ್ತು. ಹಾಗೆ ನೋಡಿದರೆ, ಯಾವ ಸಂಬಂಧವೂ ಕೇವಲ ಮೇಲ್ಮಟ್ಟದಲ್ಲೇ ಉಳಿದಿರುವುದಿಲ್ಲ. ಮಗಳನ್ನು ಅಪ್ಪ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಾನೆ. ಅವಳಿಗೋಸ್ಕರ ದುಡಿಯುತ್ತಾನೆ. ಅವಳನ್ನು ಸಂತೋಷವಾಗಿಡಲು ಹೆಣಗಾಡುತ್ತಾನೆ. ಆದರೆ ಅದರಲ್ಲೊಂದು ಕರ್ತವ್ಯಪ್ರಜ್ಞೆಯೂ ಇರುತ್ತದೆ.
ಪ್ರೇಮ ಕರ್ತವ್ಯ ಅಲ್ಲ. ಅದೊಂದು ಭಾವನೆ. ಪ್ರೇಮವೆಂದರೆ ಕ್ರಿಯಾಶೀಲತೆ, ಸೃಜನಶೀಲತೆ ಮತ್ತು ನಮ್ಮನ್ನು ನಾವು ವಿಸ್ತರಿಸಿಕೊಳ್ಳುವ ಸಾಧ್ಯತೆ. ಪ್ರತಿಯೊಬ್ಬರಲ್ಲೂ ಗುಪ್ತವಾಗಿರುವ ಗೆಲ್ಲುವ, ಒಳಗೊಳ್ಳುವ ಹಂಬಲಕ್ಕೆ ಮತ್ತೊಂದು ಹೆಸರು. ಅಲ್ಲಿ ನಾವು ಸೋತಾಗ ನಮಗೆ ಸಂಕಟವಾಗುತ್ತದೆ. ನೀನು ಸರಿಯಿಲ್ಲ ಎಂದು ಅವಳು ತಿರಸ್ಕರಿಸಿದರೆ ಘಾಸಿಯಾಗುತ್ತದೆ. ನಿನಗಿಂತ ಅವನು ವಾಸಿ ಎಂದೋ ನಿನಗಿಂತ ಅವಳು ಬೆಟರ್ ಎಂದೋ ಮತ್ತೊಂದು ಆಯ್ಕೆಯತ್ತ ಹೊರಳಿಕೊಂಡಾಗ ಸಿಟ್ಟು ಬರುತ್ತದೆ. ಮನಸ್ಸನ್ನು ಮುದುಡಿ ಕಸದ ಬುಟ್ಟಿಗೆ ಎಸೆದಂತೆ!
ಒಂದು ಪುಟ್ಟ ಕತೆಯೊಂದಿಗೆ ಈ ಪ್ರೇಮಪ್ರಸಂಗವನ್ನು ಮುಗಿಸಬಹುದು;
ಮಾಲಿನಿಗೆ ಬದುಕಿನ ಮೇಲೆ ವಿಚಿತ್ರ ಆಕರ್ಷಣೆ. ಆಕೆ ಮಧ್ಯಮ ವರ್ಗದಿಂದ ಬಂದ ಹುಡುಗಿ. ಅಪ್ಪ ಅಮ್ಮಂದಿರ ಜಗಳ, ಬಡತನ, ಹಣಕ್ಕಾಗಿ ಅವರು ಪಡುವ ಕಷ್ಟ, ಒಂದೊಂದಕ್ಕೆ ಖರ್ಚು ಮಾಡುವಾಗಲೂ ಅವರು ಹಾಕುವ ಲೆಕ್ಕಾಚಾರ ಎಲ್ಲವನ್ನೂ ಬಲ್ಲವಳು. ಎಸ್ಸೆಸ್ಸೆಲ್ಸಿ ಮುಗಿಸುವ ಹೊತ್ತಿಗೆ ಅವಳಿಗೆ ಸೈಕಲ್ಲು ಬಂತು. ಬಂದ ಮೂರೇ ದಿನಕ್ಕೆ ಅದನ್ನು ಯಾರೋ ಕದ್ದೊಯ್ದರು. ಸೈಕಲ್ಲಿನಲ್ಲಿ ಗೆಳತಿಯರ ಜೊತೆ ಪಿಕ್ನಿಕ್ ಹೋಗಬೇಕು ಅನ್ನುವ ಅವಳ ಆಸೆ ಅಲ್ಲಿಗೆ ಮುರುಟಿತು. ಸೈಕಲ್ಲು ಕದ್ದವನಿಗೆ ಶಿಕ್ಷೆಯಾಗಲಿಲ್ಲ, ಕಳಕೊಂಡವಳಿಗೆ ಶಿಕ್ಷೆಯಾಯಿತು. ಅಪ್ಪ ಅದನ್ನು ಹೇಳಿ ಹೇಳಿ ಹಂಗಿಸಿದರು. ನೀನು ಏನನ್ನೂ ಉಳಿಸಿಕೊಳ್ಳುವುದಿಲ್ಲ ಅಂದಳು.
ಅವಳು ಉಳಿಸಿಕೊಳ್ಳುತ್ತೇನೆ ಎಂದು ಪಣತೊಟ್ಟಳು. ಮೊದಲು ತನ್ನ ಗೆಳೆಯರನ್ನು ಉಳಿಸಿಕೊಳ್ಳಲು ನೋಡಿದಳು. ಅವರೂ ಒಬ್ಬೊಬ್ಬರಾಗಿ ದೂರವಾದರು. ಅವಳ ಪ್ರೀತಿಯ ಮಾತುಗಳಿಗಾಗಿ ಕಾತರಿಸಿದಂತೆ ನಟಿಸಿದವರು. ಅವಳ ಜೊತೆ ಗಂಟೆಗಟ್ಟಲೆ ಹರಟಲು ಮುಂದಾದವರು, ಅವಳ ಸಂಗಕ್ಕೆ ಹಾತೊರೆದವರು, ಅವಳ ಮುತ್ತಿಗಾಗಿ ಪೀಡಿಸಿದವರು, ಅವಳನ್ನು ಹುರುಪಿನ ಮೂಟೆ ಎಂದವರೆಲ್ಲ ಸುಳ್ಳು ಹೇಳುತ್ತಿದ್ದಾರೆ ಎಂಬುದು ಅವಳಿಗೆ ಕ್ರಮೇಣ ಅರ್ಥವಾಗತೊಡಗಿತು.
ಆದರೂ ಅವಳ ಉತ್ಸಾಹ ಭಂಗವಾಗಲಿಲ್ಲ. ಇವೆಲ್ಲವನ್ನೂ ಮೀರಿದ್ದೇನೋ ಇದೆ ಅಂತ ಆಕೆಗೆ ಅನ್ನಿಸುತ್ತಿತ್ತು.
ತನಗೊಬ್ಬ ಸರಿಯಾದ ಸಂಗಾತಿ ಸಿಕ್ಕೇ ಸಿಗುತ್ತಾನೆ ಎಂದು ಅವಳು ಹುಡುಕುತ್ತಾ ಹೋದಳು. ದೇಹದ ಪರಿವೆ ತೊರೆಯಲು ನಿರ್ಧರಿಸಿದಳು. ಅವಳ ಬದುಕು ಮತ್ತು ಯೋಚನೆಗಳು ಅವಳಿಗೇ ಅರ್ಥವಾಗದ ತಿರುವನ್ನು ತೆಗೆದುಕೊಂಡವು. ಎಲ್ಲವನ್ನೂ ಅತಿರೇಕಕ್ಕೆ ಒಯ್ದು ಅನುಭವಿಸಬೇಕು ಎಂದು ಆಕೆ ನಿರ್ಧಾರ ಮಾಡಿದಳು.
ಅದು ಮದುವೆಯಲ್ಲಿ ಪರ್ಯಾವಸಾನವಾಯಿತು. ಅವಳನ್ನು ಮದುವೆಯಾದ ಹುಡುಗ ಸತ್ಯ, ದೇವಸ್ಥಾನದಲ್ಲಿ ಅರ್ಚಕನಾಗಿದ್ದ. ಜೊತೆಗೆ ಮದುವೆ, ಮುಂಜಿ, ಶ್ರಾದ್ಧ, ವೈಕುಂಠ ಸಮಾರಾಧನೆ, ಸತ್ಯನಾರಾಯಣ ಪೂಜೆ ಮಾಡಿಸುತ್ತಾ ಓಡಾಡುತ್ತಿದ್ದ. ದೇವರ ಮನೆಯಲ್ಲಿ ಪೂಜೆಗೆಂದು ಕುಳಿತಾಗ ಅವನ ಏಕಾಗ್ರತೆಯನ್ನು ಕದಡುವುದು ಸಾಧ್ಯವೇ ಇರಲಿಲ್ಲ ಎಂಬಷ್ಟು ಗಟ್ಟಿಯಾಗಿದ್ದ. ಎಲ್ಲವನ್ನೂ ದೇವರ ಮೇಲೆ ಹಾಕುತ್ತಿದ್ದ. ತನ್ನ ನಿಷ್ಠೆ ಮತ್ತು ಶಕ್ತಿಯ ಮೇಲೆ ಅವನಿಗೆ ಎಲ್ಲಿಲ್ಲದ ನಂಬಿಕೆಯಿತ್ತು. ತಾನು ಬದುಕಿನಲ್ಲಿ ಯಾರಿಗೂ ಮೋಸ ಮಾಡಿದವನೇ ಅಲ್ಲ, ತನಗೂ ಯಾರೂ ಮೋಸ ಮಾಡುವುದಿಲ್ಲ ಎಂದು ನಂಬಿ ನಡೆಯುತ್ತಿದ್ದ.
ಅವರಿಬ್ಬರೂ ಸುಖವಾಗಿದ್ದರು. ಅವಳು ಯಾವತ್ತೂ ದೇವಸ್ಥಾನಕ್ಕೆ ಕಾಲಿಡಲಿಲ್ಲ. ಅವನ ಜೊತೆ ಪೌರೋಹಿತ್ಯದ ಮನೆಗಳಿಗೆ ಹೋಗಲಿಲ್ಲ. ತನ್ನ ಓದು ಮತ್ತು ಬುದ್ಧಿವಂತಿಕೆಗೆ ತಕ್ಕ ಗಂಡ ಸಿಗಲಿಲ್ಲ ಎಂಬ ಕೊರಗು ಅವಳಲ್ಲಿ ಉಳಿದಿತ್ತಾ ಅನ್ನುವ ಪ್ರಶ್ನೆಯನ್ನು ಅವಳೂ ಕೇಳಿಕೊಂಡಂತಿರಲಿಲ್ಲ.
ಅದೇನಾಯಿತೋ ಗೊತ್ತಿಲ್ಲ. ಒಂದು ದಿನ ಸತ್ಯ ಕಣ್ಮರೆಯಾಗಿದ್ದ. ದೇವಸ್ಥಾನಕ್ಕೆ ಎಂದು ಹೊರಟವನು ಮರಳಿ ಮನೆಗೆ ಬರಲಿಲ್ಲ, ದೇವಸ್ಥಾನಕ್ಕೂ ಹೋಗಲಿಲ್ಲ. ಅವನಿಗೋಸ್ಕರ ಮಾಲಿನಿ ಹುಡುಕಾಡಿದಳು, ಕಾದಳು. ಏಳು ವರುಷಗಳ ನಂತರ ಸತ್ಯ ವಾಪಸ್ಸು ಬಂದ. ಹೋಗಿದ್ದೆಲ್ಲಿಗೆ ಎಂಬ ಪ್ರಶ್ನೆಗೆ ಉತ್ತರ ಇರಲಿಲ್ಲ. ಮರಳಿ ಬಂದಿದ್ದೇಕೆ ಎಂದು ಅವಳು ಕೇಳಲಿಲ್ಲ.
ಅವರಿಬ್ಬರೂ ಜೊತೆಗಿದ್ದಾರೆ. ಏಳು ವರ್ಷ ಒಬ್ಬಳೇ ಇದ್ದಳು. ಈಗ ಅವನು ಮತ್ತೆ ಬಂದಿದ್ದಾನೆ. ನನ್ನ ಕಲ್ಪನೆಯಲ್ಲಿ ಅವಳು ಈಗಲೂ ಏಕಾಂಗಿ, ಅವನು ಈಗಲೂ ಎಲ್ಲೋ ಹೋಗಿದ್ದಾನೆ. ಅವಳು ಕಾಯುತ್ತಿದ್ದಾಳೆ, ಅವನು ಬರುತ್ತಿಲ್ಲ.
ಅವನು ದೇವರಲ್ಲಿ ನಂಬಿಕೆ ಕಳಕೊಂಡಿರಬಹುದು. ಅವಳನ್ನೂ ಪ್ರೀತಿಸುತ್ತಿರಲಿಕ್ಕಿಲ್ಲ. ಅವಳಿಗೂ ಅವನೀಗ ಅನಿವಾರ್ಯ ಅಲ್ಲವೇನೋ ಎಂದು ಊಹಿಸುತ್ತಾ ಆ ದೇವಸ್ಥಾನಕ್ಕೆ ಹೋದರೆ ಅಲ್ಲಿ ಮಂಗಳಾರತಿ ನಡೆಯುತ್ತಿತ್ತು. ಭಕ್ತಾದಿಗಳು ಅತ್ಯುತ್ಸಾಹದಿಂದ ಗಂಟೆ ಬಾರಿಸುತ್ತಿದ್ದರು. ಕೈ ಮುಗಿದು ಏನನ್ನೋ ಧ್ಯಾನಿಸುವವರಂತೆ ನಿಂತಿದ್ದರು.
ಇದೆಲ್ಲ ಮಾಮೂಲು ಎಂಬಂತೆ ವೇಣುಗೋಪಾಲಸ್ವಾಮಿ ಕಲ್ಲಾಗಿ ಕೂತಿದ್ದ.
ಪ್ರೇಮ, ಭಕ್ತಿ, ಯಾಚನೆ, ಧ್ಯಾನ ಮತ್ತು ಆಗ್ರಹವನ್ನು ಧಿಕ್ಕರಿಸಿ ಕಲ್ಲಾಗಿ ಕುಳಿತುಕೊಳ್ಳುವುದು ಎಷ್ಟು ಸುಲಭ ಮತ್ತು ಕಷ್ಟ. ಎಷ್ಟು ಹೀನ ಮತ್ತು ದಯನೀಯ

‍ಲೇಖಕರು avadhi

21 December, 2009

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

3 Comments

  1. RJ

    ಇದೊಂಥರ ಸಾಸುವೆ ಕಾಳುಗಳನ್ನು ಮುಷ್ಟಿಯಲ್ಲಿ ಹಿಡಿದಿಡುವ ಪ್ರಯತ್ನ.
    ಹಿಡಿದರೆ ಮುಷ್ಟಿಯೊಳಗೆ.ಬಿಟ್ಟರೆ ಮನೆತುಂಬ.
    ಅವಳು ವಂಚಿಸಿದಳು ಅಂತ ಕೊರಗುವದು ಎಷ್ಟು ಸುಲಭ.
    ಅವಳು ತೊರೆದರೂ ಅವಳನ್ನೇ ಪ್ರೀತಿಸುವದು ಎಷ್ಟು ಕಷ್ಟ.
    ಇನ್ನು,ಅವಳು ವಂಚಿಸಿ ಮಿಂಚುತ್ತಿದ್ದರೂ ಅವಳು ವಂಚಿಸಲೇ ಇಲ್ಲ ಅಂದುಕೊಳ್ಳುವದು ಎಷ್ಟೊಂದು ರೌರವ ಮತ್ತು ರೌದ್ರ!
    ಹ್ಮ್.. ಚೆನ್ನಾಗಿದೆ.

    • suresh kota

      ಡಿಯರ್ RJ, ಹೀಗೆ ಕೊರಗುವುದು ಬಿಟ್ಟು ಬೇಗ ಒಂದು ಮದುವೆ ಮಾಡಿಕೊಳ್ರೀ..

      • RJ

        TO: KOTA
        ಡ್ರಾಯಿಂಗ್ ಮೇಸ್ಟ್ರೆ,
        ಅದ್ಭುತವಾಗಿದೆ ನಿಮ್ಮ ಸಲಹೆ.
        ಆದರೆ ಬದುಕಿನಲ್ಲಿ ಬರೀ ಖುಷಿ ನೋಡೋಣ ಅಂತ ನನ್ನಾಸೆ!
        😉

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading