ಜೋಗಿ ಬರೆದಿದ್ದಾರೆ: ದೇವರೇ, ಮುಂದೇನು ಗತಿ?

img_04911ಕೊನೆಗೂ ಅನಾಹುತ ಸಂಭವಿಸಿದೆ.
ಕನ್ನಡ ಚಿತ್ರೋದ್ಯಮ ಮುಂದಿನ ತಿಂಗಳಿನಿಂದ ಚಿತ್ರನಿರ್ಮಾಣ ಮತ್ತು ಪ್ರದರ್ಶನ ಬಂದ್ ಮಾಡುವುದಾಗಿ ಘೋಷಿಸಿದೆ. ಅಲ್ಲಿಗೆ ಕರ್ನಾಟಕದ ಭವಿಷ್ಯ ಮಸುಕಾಯಿತು ಎನ್ನಬಹುದು. ಇನ್ನು ಮೇಲೆ ಹರೆಯದ ಹುಡುಗರಿಗೆ ಕನಸುಗಳಿರುವುದಿಲ್ಲ. ಮಧ್ಯವಯಸ್ಕರಿಗೆ ಮನರಂಜನೆ ಇರುವುದಿಲ್ಲ, ರೈತಾಪಿ ಮಂದಿಗೆ ನಿರೀಕ್ಷೆಗಳಿರುವುದಿಲ್ಲ, ಕಾಲೇಜು ಹುಡುಗರಿಗೆ ಪಾಸ್‌ಟೈಮ್ ಇರುವುದಿಲ್ಲ. ಕರ್ನಾಟಕ ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ಸಾಹಿತ್ಯಕವಾಗಿ ಕುಸಿದು ಹೋಗಲಿದೆ.
ಇತಿಹಾಸದಿಂದ ನಾವು ಪಾಠ ಕಲಿಯುವುದಿಲ್ಲ ಎನ್ನುವುದಕ್ಕೆ ಇದು ಮತ್ತೊಂದು ಸಾಕ್ಷಿ. ಹಲವಾರು ಬಾರಿ ಕನ್ನಡ ಚಿತ್ರರಂಗ ಬಂದ್ ಘೋಷಿಸಿದೆ. ನಾವು ಸಿನಿಮಾ ಮಾಡುವುದಿಲ್ಲ ಎಂದು ಕನ್ನಡ ಕಲಾರಸಿಕರನ್ನು ಹೆದರಿಸಿದೆ. ಆದರೆ ಇಷ್ಟೂ ದಿನ ಅಂಥ ಕಟುನಿರ್ಧಾರವನ್ನು ಚಿತ್ರೋದ್ಯಮ ತೆಗೆದುಕೊಂಡಿರಲಿಲ್ಲ. ಬಂದ್ ಘೋಷಣೆಯನ್ನು ಕೆಲವೇ ದಿನ, ವಾರ, ತಿಂಗಳುಗಳಿಗೆ ಸೀಮಿತಗೊಳಿಸಿ ತನ್ನ ಔದಾರ್ಯವನ್ನೂ ಅನುಕಂಪವನ್ನೂ ಮೆರೆದಿದೆ. ಅಭಿಮಾನಿ ದೇವರುಗಳ ಮೇಲೆ ಯಾವತ್ತೂ ಮುನಿಸಿಕೊಳ್ಳಬಾರದು ಎಂಬ ಸದುದ್ದೇಶದಿಂದ ಮತ್ತೆ ಮತ್ತೆ ಚಿತ್ರ ತಯಾರಿಕೆಯಲ್ಲಿ ತೊಡಗಿಕೊಂಡಿದೆ. ಆದರೆ ಅವರ ಸದುದ್ದೇಶವನ್ನು ಕನ್ನಡಿಗರು ಅರ್ಥ ಮಾಡಿಕೊಂಡಂತಿಲ್ಲ.
ಒಮ್ಮೆ ಕಣ್ತೆರೆದು ನೋಡು ಕನ್ನಡಿಗಾ! ನಮ್ಮ ಕನ್ನಡ ನಿರ್ಮಾಪಕರು ಎಷ್ಟೊಂದು ಕಷ್ಟಪಡುತ್ತಿದ್ದಾರೆ. ತಮ್ಮ ಮನೆ, ಆಸ್ತಿಪಾಸ್ತಿಗಳನ್ನೂ ಆಯುಷ್ಯವನ್ನೂ ಒತ್ತೆಯಿಟ್ಟು ಕನ್ನಡ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ ಭಾಷೆಯನ್ನು ಉಳಿಸುವುದಕ್ಕೆಂದು ಪ್ರತಿಯೊಂದು ಚಿತ್ರದಲ್ಲೂ ಕನ್ನಡದ ಹಾಡುಗಳನ್ನು ಬರೆಯಿಸಿ, ಹಾಡಿಸುತ್ತಾರೆ. ನಷ್ಟದ ಮೇಲೆ ನಷ್ಟ ಆಗುತ್ತಿದ್ದರೂ ವೀರಪುರುಷರಂತೆ ಹೋರಾಡುತ್ತಾ ಕನ್ನಡ ನುಡಿಯನ್ನು ಉಳಿಸಲು ಅಹೋರಾತ್ರಿ ಶ್ರಮಿಸುತ್ತಿದ್ದಾರೆ. ಅಂಥವರ ಮೇಲೆ ನಿಮಗೇಕೆ ಪ್ರೀತಿಯಿಲ್ಲ.
retro_movie_camera_silhouette_magnet-p147110028455238912qjy4_400
ಇತ್ತೀಚಿನ ದಿನಗಳಲ್ಲಂತೂ ಈ ಪ್ರೀತಿ ತಾರಕ್ಕೇರಿದೆ. ಮಣ್ಣಿನ ಋಣವನ್ನು ತೀರಿಸಲು ಅನೇಕರು ಮುಂದಾಗಿದ್ದಾರೆ. ಅದಕ್ಕೆಂದೇ ಮೂರು ಕಾಸಿಗೆ ಕೊಂಡ ಸೈಟುಗಳನ್ನು ನೂರಾರು ಕಾಸಿಗೆ ಮಾರಿ ಆ ದುಡ್ಡನ್ನು ಚಿತ್ರರಂಗಕ್ಕೆ ಸುರಿಯುತ್ತಾರೆ. ಅದ್ದೂರಿಯ ಸಿನಿಮಾ ಮಾಡುತ್ತಾರೆ. ಕನ್ನಡಿಗರ ಜ್ಞಾನ ಹೆಚ್ಚಲಿ ಎಂದು ಅಗತ್ಯ ಇಲ್ಲದೇ ಇದ್ದರೂ ವಿದೇಶಗಳಿಗೆ ಹೋಗಿ ಚಿತ್ರೀಕರಣ ನಡೆಸುತ್ತಾರೆ. ಕೇವಲ ಪರಭಾಷೆಯಲ್ಲಷ್ಟೇ ಕಾಣಿಸಿಕೊಳ್ಳುತ್ತಿದ್ದ ನಟಿಯರನ್ನು ನಮ್ಮ ಅಂಗಳಕ್ಕೂ ಕರೆತಂದು ಕುಣಿಸುತ್ತಿದ್ದಾರೆ.
ಕನ್ನಡ ಚಿತ್ರರಂಗ ಹಿಂದಿ ಚಿತ್ರರಂಗಕ್ಕೆ ಯಾವ ರೀತಿಯಲ್ಲೂ ಕಡಿಮೆಯಿಲ್ಲ. ತಮಿಳು ತೆಲುಗು ಚಿತ್ರರಂಗವನ್ನು ಸರಿಗಟ್ಟುತ್ತಿದೆ ಎಂದು ತೋರಿಸಿಕೊಡುವುದಕ್ಕೆ ನಮ್ಮ ನಾಯಕ ನಟರೂ ಟೊಂಕ ಕಟ್ಟಿ ನಿಂತಿದ್ದಾರೆ. ಹಿಂದಿ ನಟ ಮೂವತ್ತು ಕೋಟಿ, ತಮಿಳು ನಟ ಹತ್ತು ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದರೆ, ಅವರಿಗಿಂತ ನಾವೇನು ಕಡಿಮೆ ಎಂದು ಹೊಸದಾಗಿ ಬಂದ ಕನ್ನಡ ನಟರೂ ಒಂದು ಕೋಟಿ ಕೇಳುತ್ತಾರೆ. ಒಂದೆರಡು ಸಿನಿಮಾ ಗೆದ್ದರೆ ಸಾಕು ಎರಡು ಕೋಟಿ ಎಂದು ಥೇಟ್ ಬಾಬಾ’ ಶೈಲಿಯಲ್ಲಿ ಬೆರಳೆತ್ತುತ್ತಾರೆ.
ನಿರ್ದೇಶಕರ ಕೊಡುಗೆಯೂ ಇದರಲ್ಲಿ ಅಪಾರ. ತಮಿಳು ಚಿತ್ರವೊಂದನ್ನು ಮುನ್ನೂರು ದಿನ ಚಿತ್ರೀಕರಿಸಿದರು ಎಂದು ಗೊತ್ತಾದ ತಕ್ಷಣ ತಾವೂ ಕನಿಷ್ಟ ನೂರೈವತ್ತು ದಿನವಾದರೂ ಚಿತ್ರೀಕರಣ ನಡೆಸಿ, ಅತ್ಯಂತ ಅದ್ದೂರಿ ಚಿತ್ರವನ್ನು ತಯಾರಿಸಿದ ಹೆಮ್ಮೆಯ ಗರಿಯನ್ನು ಕನ್ನಡದ ಕಿರೀಟಕ್ಕೆ ಮುಡಿಸುತ್ತಾರೆ.
ನಮ್ಮ ನಟಿಯರೂ ಇದರಲ್ಲೇನೂ ಹಿಂದೆ ಬಿದ್ದಿಲ್ಲ. ಅವರೂ ತಮ್ಮ ಕೈಲಾದ ಮಟ್ಟಿಗೆ ಮೈಲಾದ ಮಟ್ಟಿಗೆ ಮೈದೋರಿ ವಿಶ್ವಚಿತ್ರರಂಗವನ್ನು ಸರಿಗಟ್ಟುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ಥೇಟ್ ಹಿಂದಿ ನಾಯಕಿಯರ ಹಾಗೆ ಇಂಗ್ಲಿಷಿನಲ್ಲೋ ಹಿಂದಿಯಲ್ಲೋ ಮಾತಾಡುತ್ತಾರೆ. ಅವರ ಹಾಗೇ ನಾಯಿಮರಿ ಸಾಕುತ್ತಾರೆ. ನಾಯಿಮರಿ ಸತ್ತರೆ ಸೆಟ್ಟಿನಿಂದ ಭಾವುಕ ಮತ್ತು ಸಾತ್ವಿಕ ಸಿಟ್ಟಿನಿಂದ ಓಡಿಬರುತ್ತಾರೆ. ಮರುಗುತ್ತಾರೆ, ಎರಡೋ ಮೂರೋ ಮದುವೆ ಆಗುತ್ತಾರೆ. ಆಕಾಶ ನೋಡುತ್ತಾರೆ, ವೇದಾಂತ ಮಾತಾಡುತ್ತಾರೆ. ದೇವರೇ ದಿಕ್ಕು ಅನ್ನುತ್ತಾರೆ. ದಿಕ್ಕೆಟ್ಟ ನಿರ್ಮಾಪಕರಿಗೆ ಸಾಂತ್ವನ ಹೇಳುತ್ತಾರೆ. ಸೋತರೆ ಪತ್ರಕರ್ತರನ್ನು ಬೈಯುತ್ತಾರೆ. ಗೆದ್ದರೆ ಸ್ವಂತ ಶಕ್ತಿ ಅಂದುಕೊಳ್ಳುತ್ತಾರೆ. ಕನ್ನಡಿಗರ ಸ್ವಾಭಿಮಾನವನ್ನು ಕೊಂಡಾಡುತ್ತಾರೆ.
ಹೀಗೆ ಕನ್ನಡ ನೆಲ, ಜಲ ಮತ್ತು ಸಂಸ್ಕೃತಿಯನ್ನು ಎತ್ತಿಹಿಡಿಯಲು ಪಣತೊಟ್ಟ ಚಿತ್ರೋದ್ಯಮಕ್ಕೆ ನೀವೇನು ಮಾಡಿದ್ದೀರಿ? ಅವರ ಸಿನಿಮಾಗಳನ್ನು ನೀವೇಕೆ ನೋಡುತ್ತಿಲ್ಲ. ನಮ್ಮ ಚಿತ್ರಮಂದಿರಗಳ ಮಾಲಿಕರು ಅವನ್ನೇಕೆ ಕಡಿಮೆ ಬಾಡಿಗೆಯಲ್ಲಿ ಪ್ರದರ್ಶಿಸುತ್ತಿಲ್ಲ. ಚಿತ್ರಮಂದಿರಗಳ ಮಾಲೀಕರೇ ಎಚ್ಚರ! ಕನ್ನಡದ ಬಗ್ಗೆ ಪ್ರೀತಿಯಿಟ್ಟು ಮಾಡಿದ ಸಿನಿಮಾಗಳನ್ನು ಜನ ನೋಡಲಿ ಬಿಡಲಿ, ಪ್ರದರ್ಶಿಸುವುದು ನಿಮ್ಮ ಕರ್ತವ್ಯ. ಜನ ನೋಡಲಿ ಬಿಡಲಿ, ನಮ್ಮ ದೂರದರ್ಶನ ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಪ್ರದರ್ಶಿಸುತ್ತಿಲ್ಲವೇ? ಅದನ್ನು ನೋಡಿಯಾದರೂ ನೀವು ಪಾಠ ಕಲಿಯಬಾರದೇ?
ಚಿತ್ರೋದ್ಯಮ ನಿಂತು ಹೋದರೆ ಆಗುವ ಅನಾಹುತಗಳನ್ನು ಒಮ್ಮೆ ಲೆಕ್ಕಹಾಕಿ. ಈಗಾಗಲೇ ನಮ್ಮ ಕನ್ನಡದ ನಿರ್ಮಾಪಕರೆಲ್ಲ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರದ ಹಕ್ಕುಗಳನ್ನು ಲಕ್ಷಾಂತರ ರುಪಾಯಿ ಕೊಟ್ಟು ಕೊಂಡು ತಂದಿಟ್ಟುಕೊಂಡಿದ್ದಾರೆ. ಅವನ್ನೆಲ್ಲ ಕನ್ನಡ ಬಲ್ಲ ಹುಡುಗರಿಗೆ ಕೊಟ್ಟು ಕನ್ನಡಕ್ಕೆ ಅನುವಾದಿಸಿ ಸಿನಿಮಾ ಮಾಡಿ ನಿಮ್ಮ ಮುಂದಿಡುವ ಹಿರಿಯದೊಂದು ಆಸೆ ಇಟ್ಟುಕೊಂಡಿದ್ದಾರೆ. ಒಳ್ಳೆಯದು ಎಲ್ಲಿಂದ ಬಂದರೂ ಸ್ವೀಕರಿಸು ಎಂದು ಋಗ್ವೇದದಲ್ಲೇ ಹೇಳಿದೆ. ಅಂಥ ವೇದವಾಕ್ಯವನ್ನು ಹುಸಿಗೊಳಿಸುತ್ತಿದ್ದೀರಾ? ಅದು ನಿಮಗೆ ಶುಭ ತರುವುದೇ?
ನಮ್ಮ ಮಣ್ಣಿನ ಮಕ್ಕಳ ಪುತ್ರರೆಲ್ಲ ಚಿತ್ರರಂಗಕ್ಕೆ ಕಾಲಿಡಲು ಸನ್ನದ್ಧರಾಗಿ ಬೆಂಗಳೂರಿನ ವಿವಿಧ ಜಿಮ್ಮುಗಳಲ್ಲಿ ಸಾಮು ಮಾಡುತ್ತಿದ್ದಾರೆ. ಇನ್ನೇನು ಅವರು ಚಿತ್ರರಂಗವನ್ನು ಶ್ರೀಮಂತಗೊಳಿಸಬೇಕು ಎಂದು ಹೊರಟಿರುವ ಹೊತ್ತಿಗೇ ಇಂಥ ಕಟು ನಿರ್ಧಾರ ಹೊರಬಿದ್ದರೆ, ಅವರ ಸಿಕ್ಸ್ ಮತ್ತು ನೈನ್ ಪ್ಯಾಕುಗಳ ಗತಿಯೇನು. ಅವರ ಹೊಟ್ಟೆಯ ಮೇಲೆ ಹೊಡೆಯಬೇಡಿ ಕನ್ನಡ ಬಂಧುಗಳೇ.
ಕನ್ನಡ ಚಿತ್ರಗಳ ನಿರ್ಮಾಣ ಒಂದು ವೇಳೆ ನಿಂತುಹೋದರೆ, ಹಾಗಾದಿರಲಿ ಎಂದು ಚಾಮುಂಡೀಶ್ವರಿಯಲ್ಲಿ ಪ್ರಾರ್ಥಿಸೋಣ, ಆಗಬಹುದಾದ ಅನಾಹುತಗಳನ್ನು ಲೆಕ್ಕ ಹಾಕಿ. ಇಡೀ ನಾಡು ಮನರಂಜನೆಯನ್ನೇ ಕಳೆದುಕೊಂಡು ಮಬ್ಬಾಗಿಹೋಗುತ್ತದೆ. ಯಾರ ಮುಖದಲ್ಲೂ ನಗುವಿರುವುದಿಲ್ಲ. ದಿನರಾತ್ರಿ ನಗೆಯ ದೃಶ್ಯಗಳನ್ನು ಹಾಕಿ ಹಾಕಿ ಪ್ರಜ್ಞೆ ತಪ್ಪಿಸುವ ಚಾನಲ್ಲುಗಳ ಗತಿಯೇನು? ವಾರಕ್ಕೆ ಹನ್ನೆರಡು ಸೂಪರ್ ಹಿಟ್ ಚಿತ್ರಗಳನ್ನು ಪ್ರದರ್ಶಿಸುವ ವಾಹಿನಿಗಳಿಗೆ ಹೊಟ್ಟೆಗೆ ಹಿಟ್ಟೆಲ್ಲಿಂದ ಬರಬೇಕು? ಖ್ಯಾತ ಸಿನಿಮಾ ತಾರೆಯರೇ ಇಲ್ಲದ ಮೇಲೆ ಸಿನಿಮಾ ತಾರೆಯರು ಬಳಸುವ ಸೌಂದರ್ಯ ಸಾಬೂನು ಎಲ್ಲಿಗೆ ಹೋಗಬೇಕು?
ಎಚ್ಚರಿಕೆಯ ಗಂಟೆಯನ್ನು ಹಿರಿಯ ನಿರ್ಮಾಪಕರು ಕೊನೆಗೂ ಬಾರಿಸಿದ್ದಾರೆ. ಕಳೆದ ಹನ್ನೊಂದು ತಿಂಗಳಲ್ಲಿ ಬಿಡುಗಡೆಯಾದ ನೂರೆಂಟು ಚಿತ್ರಗಳಲ್ಲಿ ದುಡ್ಡಿನ ಮುಖ ನೋಡಿದ್ದು ಎರಡೋ ಮೂರೋ ಸಿನಿಮಾ. ಒಂದು ಸಿನಿಮಾಕ್ಕೆ ತಗಲುವ ಖರ್ಟು ಎರಡು ಕೋಟಿ ಎಂದುಕೊಂಡರೂ ಇನ್ನೂರು ಕೋಟಿ ರುಪಾಯಿ ನಷ್ಟವಾಗಿದೆ. ಸರ್ಕಾರ ಇದಕ್ಕೇನಾದರೂ ಮಾಡಬೇಕು. ಎಲ್ಲಾ ಚಿತ್ರಗಳಿಗೆ ಸಬ್ಸಿಡಿ ಕೊಡಬೇಕು. ತೆರಿಗೆ ವಿನಾಯತಿ ಸಿಗಬೇಕು. ಚಿತ್ರಮಂದಿರವನ್ನು
ಉಚಿತವಾಗಿ ನೀಡಬೇಕು. ಕನ್ನಡ ಸಿನಿಮಾಗಳನ್ನು ನೋಡಿದವರಿಗೆ ಮಾತ್ರ ಡ್ರೈವಿಂಗ್ ಲೈಸೆನ್ಸು ಎಂಬ ಕಾನೂನು ಜಾರಿಗೆ ಬರಬೇಕು. ಕನ್ನಡ ಸಿನಿಮಾ ನೋಡುವವರಿಗೆ ಮಾತ್ರ ಕರ್ನಾಟಕದಲ್ಲಿ ಉದ್ಯೋಗ ಸಿಗುವಂತಾಗಬೇಕು. ಸಂಬಳದ ಜೊತೆಗೆ ಪ್ರತಿತಿಂಗಳು ಎಂಟೋ ಹತ್ತೋ ಸಿನಿಮಾ ಟಿಕೆಟ್ಟುಗಳನ್ನು ನೀಡುವ ವ್ಯವಸ್ಥೆಯಾಗಬೇಕು. ಆಗಷ್ಟೇ ಕನ್ನಡ ಚಿತ್ರರಂಗ ಉಳಿಯುತ್ತದೆ. ಇಲ್ಲದೇ ಹೋದರೆ ಅನಾಹುತ ಕಾದಿದೆ.
ಇದೀಗ ಚಿತ್ರರಂಗ ಸಣ್ಣದೊಂದು ಎಚ್ಚರಿಕೆ ನೀಡಿದೆ. ಸಿನಿಮಾ ಒಳ್ಳೆಯದೋ ಕೆಟ್ಟದ್ದೋ, ಕನ್ನಡದ್ದೋ ಕದ್ದದ್ದೋ, ಹಿರಿಯ ನಟರಿದ್ದಾರೋ, ಕಿರಿಯ ನಟರಿದ್ದಾರೋ, ಕತೆಯಿದೆಯೋ ಇಲ್ಲವೋ ಅನ್ನುವುದೆಲ್ಲ ಮುಖ್ಯವಲ್ಲ. ಅಷ್ಟೊಂದು ದುಡ್ಡು ಸುರಿದು ನಿಮಗಾಗಿ ಮಾಡಿದ ಸಿನಿಮಾವನ್ನು ನೀವೇ ನೋಡದಿದ್ದರೆ ಹೇಗೆ? ಯಾರಿಗೋಸ್ಕರ ಚಿತ್ರರಂಗ ತ್ಯಾಗ ಮಾಡಬೇಕು. ಚಿತ್ರೋದ್ಯಮಗ ಗಣ್ಯರೆಲ್ಲ ವಾರವಾರ ಸೇರಿ ಯಾರಿಗೋಸ್ಕರ ಮೀಟಿಂಗು ಮಾಡಬೇಕು? ಯಾರಿಗೋಸ್ಕರ ರಾತ್ರಿ ಹಗಲು ದೂರದೂರುಗಳಲ್ಲಿ ದೂರದೇಶಗಳಲ್ಲಿ ಚಿತ್ರೀಕರಣ ಮಾಡಬೇಕು?
ಕೇವಲ ನಿಮಗೋಸ್ಕರ. ಹೀಗಾಗಿ ನೀವು ಕನ್ನಡ ಸಿನಿಮಾಗಳನ್ನು ನೋಡಬೇಕು. ಅದು ನಿಮಗೆ ಜ್ಞಾನೋದಯವಾಗುವಂತೆ ಮಾಡುತ್ತದೆ. ಒಬ್ಬ ರೋಗಿಷ್ಟ, ಒಬ್ಬ ಅಪರವಯಸ್ಕ ಮತ್ತು ಒಂದು ಶವವನ್ನು ನೋಡಿದ ಸಿದ್ಧಾರ್ಥನಿಗೇ ಜ್ಞಾನೋದಯ ಆಗಿದೆ ಅಂದ ಮೇಲೆ ಕನ್ನಡ ಸಿನಿಮಾಗಳನ್ನು ನೋಡುತ್ತಿದ್ದರೆ ನಿಮಗೆ ಜ್ಞಾನೋದಯ ಆಗದೇ ಇರುತ್ತದೆಯೇ?
ನೀವೆಲ್ಲ ರಾಜ್‌ಕುಮಾರ್ ಸಿನಿಮಾಗಳನ್ನು ಮೆಚ್ಟಿದವರು ಎಂದು ಚಿತ್ರರಂಗಕ್ಕೂ ಗೊತ್ತು. ಪುಟ್ಟಣ್ಣ ಕಣಗಾಲ್ ಸಿನಿಮಾಗಳನ್ನು ನೋಡಿ ಸಂತೋಷಪಟ್ಟವರು ಎಂಬುದನ್ನೂ ಅವರು ಬಲ್ಲರು. ಆದರೆ ಅಂಥದ್ದೇ ಸಿನಿಮಾಗಳನ್ನು ಮಾಡಿದರೆ ಇವರ ಪ್ರತಿಭೆ ಹೇಗೆ ಸಾಬೀತಾಗಬೇಕು ಹೇಳಿ. ಅದಕ್ಕಾಗಿಯೇ ಈಗಿನ ನಿರ್ಮಾಪಕರು, ನಿರ್ದೇಶಕರು ಪರಭಾಷೆಯಿಂದ ಕತೆಗಳನ್ನು ಕಡ ತರುತ್ತಾರೆ, ಚಿತ್ರಕತೆಯನ್ನು ಎರವಲು ತರುತ್ತಾರೆ, ಮೂರು ನಾಲ್ಕು ಚಿತ್ರಗಳ ಸಾರವನ್ನೆಲ್ಲ ಹೀರಿ ಒಂದು ಸಿನಿಮಾ ಮಾಡುತ್ತಾರೆ.
ಮಲಯಾಳಂ ಚಿತ್ರರಂಗದ ಸ್ಥಿತಿಯನ್ನೇ ನೋಡಿ. ಅದು ಅಲ್ಲಿನ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳನ್ನು, ಖ್ಯಾತ ಕಾದಂಬರಿಕಾರರನ್ನು ನೆಚ್ಚಿಕೊಂಡಿದೆ. ಆದರೆ ನಾವು ಅಂಥ ಕೆಲಸ ಮಾಡುತ್ತಿಲ್ಲ. ಸಾಹಿತಿಗಳನ್ನು ಅವರ ಪಾಡಿಗೆ ಬರೆಯಲು ಬಿಟ್ಟು, ಬೇರೆ ಭಾಷೆಯ ಕತೆಗಳನ್ನು ಸಿನಿಮಾ ಮಾಡುತ್ತಿದ್ದೇವೆ. ಕನ್ನಡ ಕತೆಗಳನ್ನು ಮುಂದಿನ ಪೀಳಿಗೆಗೆ ಉಳಿಸುತ್ತಿದ್ದೇವೆ. ಕನ್ನಡದ ಸಾಹಿತಿಗಳ ಪಾವಿತ್ರ್ಯ ಕಾಪಾಡಿದ್ದೇವೆ. ಚಿತ್ರರಂಗದ ಮುಂದೆ ಗಿಜಿಗುಡುತ್ತಿದ್ದ ಜನಸಂದಣಿಯನ್ನು ದೂರ ಇರಿಸಿ ಅವರು ಕರ್ತವ್ಯ ನಿರತರಾಗಿರುವಂತೆ ಮಾಡುವುದಕ್ಕೆಂದೇ ಸಿನಿಮಾ ಮಾಡುತ್ತೇವೆ.
ಚಿತ್ರರಂಗದ ಸದುದ್ದೇಶ ಅರ್ಥ ಮಾಡಿಕೊಳ್ಳಿ. ನಾವು ಬಾಗಿಲು ಹಾಕಿಕೊಂಡು ಹೋದರೆ, ಯಾರನ್ನು ಬೈಯುತ್ತೀರಿ, ಯಾರನ್ನು ನೋಡಿ ಕೊರಗುತ್ತೀರಿ, ಪರಭಾಷೆಯ ಚಿತ್ರಗಳನ್ನು ಕನ್ನಡದಲ್ಲಿ ಹೇಗಾದರೂ ನೋಡುತ್ತೀರಿ? ಬನ್ನಿ ಕನ್ನಡಿಗರೇ, ಕಟ್ಟುವೆವು ನಾವು ಹೊಸ ನಾಡೊಂದನು, ರೀಮೇಕ್ ಬೀಡೊಂದನು. ನಮ್ಮನ್ನು ಒಪ್ಪಿಸಿಕೊಳ್ಳಿ ಎನ್ನುತ್ತಿದೆ ಚಿತ್ರೋದ್ಯಮ.
ಒಪ್ಪಿಸಿಕೊಳ್ಳಬಾರದೇ?

‍ಲೇಖಕರು avadhi

November 15, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

16 ಪ್ರತಿಕ್ರಿಯೆಗಳು

  1. bharath

    ‘ಶಾಲಿನಲ್ಲಿ ಸುತ್ತಿ ಹೊಡೆಯುವುದು’ ಅಂದರೆ ಇದೇ ಇರಬೇಕು. ಓದುತ್ತಿದ್ದರೆ ನಗಬೇಕ,ಮರುಕಪಡಬೇಕೋ ಗೊತ್ತಾಗಲಿಲ್ಲ.

    ಪ್ರತಿಕ್ರಿಯೆ
  2. umesh desai

    ಜೋಗಿ ಟೈಟಲೋದಿ ನಿಮ್ಮನ್ನು ಬೈಯ್ಯಬೇಕು ಅಂದ್ಕೊಂಡಿದ್ದೆ ಪೂರ್ತಿ ಓದಿದೆ ನಿಜ ನಾವು ಚಿತ್ರ್ ನೋಡಬೇಕು ಅದು ಹೆಂಗಿದ್ದರೂ ಸರಿ ಪಾಪ ನಿರ್ಮಾಪಕ ಐಡಿಬಿಐ ಸಾಲ ಮಾಡಿ ಅದು ತೀರಿಸಲಾರದೇ ಒದ್ದಾಡಿ ಮತ್ತಾರದೋ ಕಡೆ ಸಾಲಮಾಡಿ ಅಂತೂ ಚಿತ್ರ
    ರಿಲೀಸು ಮಾಡ್ತಾನೆ ನಾವು ವಿಕದಲ್ಲಿ ಅದಾರೋ ಬರೆದ ರಿವ್ಯೂ ನೋಡಿ ನೋಡುವುದಿಲ್ಲ ಅಂತಾ ಠರಾವು ಮಾಡ್ತೇವಿ ನಾವು ೭೦=೦೦ ಕೊಟ್ರ ಆ ನಿರ್ಮಾಪಕನ ಬಡ್ಡಿಯ ಒಂದು ಪೈಸೆಗೆ ಸಮಾನ ನೋಡಬೇಕು ಕನ್ನಡ ಸಿನೇಮಾ ತಲಿ ನೋವು ಬರ್ತದ ಖರೆ ಆದ್ರ ನಿಮಗ ತಲೀನೂ ಅದ ಇದು ಗೊತ್ತಾಗ್ತದ…,ನಿಮ್ಮ ಭಾಷಾಸಂಪತ್ತು ನೀವು ಸಿನೇಮಾ ಮಾಡಿದವಗ ಬೈಯ್ಯಲಿಕ್ಕೆ ಬಳಸೂ ಪದಗಳಿಂದ ಇನ್ನೂ ಬೆಳೀತದ ಹೌದ್ರಿ ನಾವ್ಹ್ ನೋಡಬೇಕು ನಮ್ಮ ಕನ್ನಡ ಸಿನೇಮಾ ಅದು ಹೆಂಗಿದ್ರೂ ಸರಿ…..!

    ಪ್ರತಿಕ್ರಿಯೆ
  3. ಡಾ.ಬಿ.ಆರ್.ಸತ್ಯನಾರಾಯಣ

    ಮಿತ್ರರೊಬ್ಬರು ಶಾಲಿನಿಂದ ಸುತ್ತಿ ಹೊಡೆಯುವುದರ ಬಗ್ಗೆ ಮಾತನಾಡಿದ್ದಾರೆ. ಅದಕ್ಕೂ ಮೊದಲು ಯೋಚಿಸಬೇಕಾಗಿರುವುದು ಜೋಗಿಯೂ ಒಂದು ಸಿನಿಮಾ ಪ್ರಶಸ್ತಿ ಗಿಟ್ಟಿಸಿದ್ದಾರೆ ಎಂಬುದು. ಕನ್ನಡ ಚಿತ್ರರಂಗದ ನಿಜವಾದ ಸಮಸ್ಯೆಗಳಾಗಲೀ, ವಾಸ್ತವ ಸ್ಥಿತಿಯಾಗಲೀ ಈ ಲೇಖನದಲ್ಲಿ ಚರ್ಚೆಯಾಗುವ ಬದಲು ಪ್ರಶಸ್ತಿ ಗಿಟ್ಟಿಸಿದ ಮೇಲೂ ಅವರನ್ನು ಕನ್ನಡ ಚಿತ್ರರಂಗ ಗುರುತಿಸುತ್ತಿಲ್ಲವಲ್ಲ ಎನ್ನುವ ನೋವೇ ಹೆಚ್ಚಾಗಿರುವಂತಿದೆ. ಭಾಷಾಬಳಕೆಯಲ್ಲಿ ಪರಿಣಿತರಾಗಿರುವ ಜೋಗಿಗೆ ಈ ರೀತಿಯ ಬರಹ ಹೊಸದೇನಲ್ಲ.

    ಪ್ರತಿಕ್ರಿಯೆ
  4. ಚಂದಿನ

    ಈಗನ ಚಿತ್ರೋದ್ಯಮಕ್ಕೆ ನವಿರಾಗಿ ತಮ್ಮ ಮೊನಚಾದ ಲೇಖನಿಯಿಂದ ಆಳಕ್ಕೆ ತಾಗುವಂತೆ ಚುಚ್ಚಿದ್ದೀರಿ…ಈಗಲಾದರೂ ಎಚ್ಚೆತ್ತುಕೊಂಡರೆ ಅದೃಷ್ಟ!
    ಅಭಿನಂದನೆಗಳು.

    ಪ್ರತಿಕ್ರಿಯೆ
  5. mrutyunjaya

    ಜೋಗಿಯವರೋ, ಬುದ್ಧಿಜೀವಿ ಚಿತ್ರನಿರ್ಮಾಪಕರು. ಅವರು ಜನರು ನೋಡದನ್ತಹ (ಪ್ರಶಸ್ತಿಗಾಗಿ) ಚಿತ್ರ ನಿರ್ಮಿಸುವವರು. ಅವರು ರೀಮೇಕಿಗರ ಮೇಲೆ ಹಾರಿಹಾಯ್ದಿರುವುದು ಸರಿಯೇ ಇದೆ.

    ಪ್ರತಿಕ್ರಿಯೆ
  6. vasanth

    Kannada mainstream film directors have never ever part of the Kannada Culture. They are out there to make money. All are running after remakes. Let them stop making films.
    It is a good news……

    ಪ್ರತಿಕ್ರಿಯೆ
  7. sharanu hullur

    jogi avare, tumbane arthapurnavaagi chaati
    bisiddiri. naavu cinima yaatakke nodabeku?
    adaralli kadidu kattuvantaddu yenide? heli.
    kelavu cinima bittare bahuteka cinimagalu
    kasakkinta kade.

    ಪ್ರತಿಕ್ರಿಯೆ
  8. ಕೇಶವ

    ಏನ್ ಸಾಮಿ,
    ನಮ್ಮನ್ನ ಈ ಪಾಟಿ ಒಗಳಿ ಬರ್ಯೋದಾ? ನಾವಿಸ್ಟೊಂದು ಕನ್ನಡದ ಕೆಲ್ಸಾ ಮಾಡ್ತಿದಿವಿ ಅಂತ ನಮ್ಗೆ ಗೊತ್ತೇ ಇರ್ಲಿಲ್ಲ! ಬಾಳ ತ್ಯಾಂಕ್ಸ್ ಕಣ್ರೀ ನಿಮ್ಗೆ! ಒಂದೇ ಸವ್ನೇ ಉಚ್ಚೆ ಹೊಯ್ದಂಗೆ ಉಪೇಂದ್ರ ಡೈಲಾಗ್ ಹೊಡಿತಾನಲ್ಲ, ನಮ್ ಬಗ್ಗೆ ಅಸ್ಟ್ ಬೊಂಬಾಟಾಗಿ ಬರ್ದಿದೀರಾ ಬುಡಿ. ಇನ್ಮೇಲೆ ಎಲ್ಲಾ ಕನ್ನಡ ಸಿನೆಮಾನ್ನ ನೀವು ಪಸ್ಟ್ ಡೇ ಪಸ್ಟ್ ಶೋ, ದ್ಯಾಟ್ ಟೂ ಫ್ರ‍ಿ ಆಫ್ ಕಾಸ್ಟು! ಬಂದಿಲ್ಲಾಂದ್ರೆ ಉಸಾರ್!! ಸಿಕ್ಕಾಪಟ್ಟೆ ಕುಸಿಯಾಯ್ತು ಸಾರ್! ನಮ್ ಅಗ್ಗೆ ಇಂಗೇ ಬರೀತಾ ಇರಿ.
    – ಕನ್ನಡ ನಿರ್ಮಾಪಕ-ನಿರ್ದೇಸಕ-ಹೀರೋ-ಹಿರೋಯಿನಿಗಳ ಸಂಘ

    ಪ್ರತಿಕ್ರಿಯೆ
  9. jogi

    ಚಿತ್ರರಂಗ ಗುರುತಿಸಲಿಲ್ಲ ಎಂದು ನಾನೇನೂ ಬೇಸರಗೊಂಡಿಲ್ಲ. ಹಾಗೆ ನೋಡಿದರೆ ಚಿತ್ರರಂಗ ನೀಡಿದ ಅವಕಾಶಗಳನ್ನು ಬಳಸಿಕೊಳ್ಳುವಷ್ಟು ವೇಳೆ ನನ್ನಲ್ಲಿಲ್ಲ. ಅಲ್ಲದೇ, ಸಿನಿಮಾಗಳಿಗೆ ಬರೆಯುವುದು ನನ್ನ ಜಾಯಮಾನವೂ ಅಲ್ಲ. ಹೀಗಾಗಿ ಈ ಲೇಖನದ ಹಿಂದೆ ಅಸೂಯೆಯೋ ಹೊಟ್ಟೆಯುರಿಯೋ ಇದೆ ಎಂದು ಭಾವಿಸಬೇಡಿ. ಆಮೇಲೆ ರೀಮೇಕಿಗರ ಮೇಲೆ ಹರಿ ಹಾಯುವುದಕ್ಕೆ ಬುದ್ಧಿಜೀವಿಯೇ ಆಗಬೇಕು ಅಂತೇನಿಲ್ಲ. ಹ್ಯಾರಿಪಾಟರನ್ನೋ ಖುಷ್ವಂತ್ ಸಿಂಗರನ್ನೋ ಇನ್ಯಾವುದೋ ಶ್ರೇಷ್ಠ ಲೇಖಕನನ್ನೋ ಕನ್ನಡಕ್ಕೆ ಅನುವಾದಿಸಿದರೆ ಕನ್ನಡದಲ್ಲಿ ಅತ್ಯುತ್ತಮ ಸಾಹಿತ್ಯ ಸೃಷ್ಟಿಯಾಯಿತು ಅಂತೇನೂ ಹೇಳೋಲ್ಲ. ಹಾಗೇ ಎಷ್ಟೇ ಕಷ್ಟಪಟ್ಟು ರಿಮೇಕ್ ಮಾಡಿದರೂ ಅದು ರೀಮೇಕೇ. ನನ್ನ ಆಂಧ್ರದ ಗೆಳೆಯನಿಗೆ ನೋಡಪ್ಪಾ ಇಂಥದ್ದೊಂದು ಸಿನಿಮಾ ಬಂದಿದೆ ಅಂತ ಹೇಳೋ ಹಾಗಿಲ್ಲ. ಅಯ್ಯೋ, ನಮ್ಮಲ್ಲಿ ಬಂದು ಮೂರು ವರ್ಷ ಆಯ್ತು ಗುರು ಅಂತಾನೆ. ದಿಲ್ ವಾಲೆ ದುಲ್ಹನಿಯ ಲೇ ಜಾಯೆಂಗೆ ಸಿನಿಮಾನ ಈಗ ಕನ್ನಡದಲ್ಲಿ ಮಾಡ್ತಿದ್ದಾರಲ್ಲ, ಬೇಜಾರಾಗೋಲ್ವಾ,, ಅಥವಾ ಸಿನಿಮಾ ಅನ್ನೋದು ಕೇವಲ ಮನರಂಜನೆ ನೀಡುವ ವ್ಯಾಪಾರ ಅಂತ ಒಪ್ಕೊಳ್ಳೋಣವೇ. ಆಗ ಅವರಿಗೆ ಸರ್ಕಾರ ಕೊಡುವ ಸಬ್ಸಿಡಿ, ಪ್ರಶಸ್ತಿ ನಿಲ್ಲಿಸಿ, ಸಬ್ಸಿಡಿಗೆ ಪ್ರಶಸ್ತಿಗೆ ಕಲಾಮಾಧ್ಯಮ, ದುಡ್ಡು ಮಾಡೋದಕ್ಕೆ ವ್ಯಾಪಾರೋದ್ಯಮ ಅನ್ನೋದನ್ನು ಒಪ್ಪಕ್ಕಾಗಲ್ಲ ಅಲ್ವಾ. ಕೊನೆಗೂ ಇವತ್ತು ಕನ್ನಡ ಚಿತ್ರರಂಗ ಇದೆ ಅಂತ ಹೊರದೇಶಗಳಿಗೂ ಅಂತಾರಾಷ್ಟ್ರೀಯ ಚಿತ್ರರಂಗಕ್ಕೂ ಗೊತ್ತಾಗಿರೋದು ಗಿರೀಶ್ ಕಾಸರವಳ್ಳಿ, ಕಾರ್ನಾಡ್, ನಾಗಾಭರಣ ಮುಂತಾದವರಿಂದಲೇ ಹೊರತು ಯಜಮಾನ, ಕನಸುಗಾರ, ಗಜ ಮುಂತಾದ ಚಿತ್ರಗಳಿಂದ ಅಲ್ಲವಲ್ಲ. ಇಲ್ಲಿ ರಾಷ್ಚ್ರಪ್ರಶಸ್ತಿ ಗಳಿಸಿದವರು ಕಾಸರವಳ್ಳಿ ಸ್ಕೂಲಿನವರೇ ಹೊರತು, ನಮ್ಮ ಸೂಪರ್ ಹಿಟ್ ಚಿತ್ರಗಳ ನಾಯಕಿಯರಲ್ಲ. ನಮ್ಮ ಅತ್ಯಂತ ಜನಪ್ರಿಯ ನಾಯಕರಿಗೆ ಒಮ್ಮೆಯೂ ಅಭಿನಯಕ್ಕೆ ಪ್ರಶಸ್ತಿ ಸಿಕ್ಕಿಲ್ಲ. ಅದು ದೊಡ್ಡದಲ್ಲ ಅಂದ್ಕೋಬೇಡಿ. ಮಲಯಾಳಂ ಸೂಪರ್ ಸ್ಟಾರ್ ಗಳೂ ರಾಷ್ಟ್ರಪ್ರಶಸ್ತಿ ಪಡೀತಾರೆ.
    ಇಷ್ಟು ….

    ಪ್ರತಿಕ್ರಿಯೆ
  10. jogi

    ಮರೆತಿದ್ದೆ, ಪ್ರಕಾಶ್ ಹೆಗಡೆ. ಶಿವು ಪುಸ್ತಕಗಳು ಬೇಕು, ಎಲ್ಲಿ ಸಿಗುತ್ತವೆ ಹೇಳಿ ಸರ್,

    ಪ್ರತಿಕ್ರಿಯೆ
  11. ಅನಿಕೇತನ ಸುನಿಲ್

    ಜೋಗಿಯವರ ಈ ಬರಹದಲ್ಲಿ ನನಗಂತೂ ಒಳ್ಳೆಯ ಚಿತ್ರಗಳು ಬರಲಿ ಎನ್ನುವ ಪ್ರಾಮಾಣಿಕವಾದ ಕಾಳಜಿ ಕಾಣಿಸ್ತಿದೆ.
    ಚಿತ್ರರಂಗ ಪರಿಣಾಮಕಾರಿಯಾದ ಮಾಧ್ಯಮ.ಅಂಥದೊಂದು ಶಕ್ತಿಯನ್ನ ಕನ್ನಡನಾಡು ಕಳೆದುಕೊಂಡರೆ ಕನ್ನಡದ ಉಳಿಯುವಿಕೆಗೆ ಖಂಡಿತ ಹೊಡೆತ ಬೀಳುತ್ತೆ ಅನ್ನೋದು ನನ್ನ ಅಭಿಪ್ರಾಯ. ಆದರೂ ದುಡ್ಡಿಗೆ ಬೆಲೆ ಇದೆ,ಸಮಯಕ್ಕೆ ಬೆಲೆ ಇದೆ….ಎರಡನ್ನೂ ಕೊಟ್ಟು ಚಿತ್ರ ನೋಡೋಕೆ ಬರುವ ಜನರಿಗೆ ನಿರಾಶೆ ಆಗಬಾರದು ಅನ್ನೋ ಪ್ರಾಮಾಣಿಕತೆ ತುಂಬಾ ಜನ ನಿರ್ಮಾಪಕ-ನಿರ್ದೇಶಕರಲ್ಲಿ ಇಲ್ಲ ಅಂತಾನೆ ನನ್ನ ಭಾವನೆ.ಹಾಗೇನೆ ಸ್ವಂತದ್ದು ಏನಾದ್ರು ಮಾಡೋಣ ಅನ್ನೋ ಸ್ವಾಭಿಮಾನ,ಮಾಡೋಕೆ ಬೇಕಾದ ಆತ್ಮವಿಶ್ವಾಸ ಎರಡರಕ್ಕೂ ಕೊರತೆ ಇದೆ ಅನಿಸುತ್ತೆ.
    ಯೋಗರಾಜ್ ಭಟ್ಟರಂತೆ ಸ್ವಲ್ಪ ಸಮಯ ತಗೊಂಡು,ಕಷ್ಟ ಪಟ್ಟು,ಹೊಸ ಪ್ರಯೋಗ ಮಾಡಿ,ಒಳ್ಳೆ ಸಂಗೀತ ಹಾಕಿಸಿ,ಸಾಹಿತ್ಯ ಬರೆಸಿ, “ಮನಸಾರೆ” ನೋಡುವಂಥ ಸಿನಿಮ ಮಾಡೋಕೆ ಯಾಕೆ ಆಗೋಲ್ಲ ಎಲ್ಲರಿಗೂ?
    ಆಗುತ್ತೆ ಮಾಡೋಕೆ ತಾಳ್ಮೆಇಲ್ಲ ಅನ್ಸುತ್ತೆ.
    ಪ್ರಶಸ್ತಿ ವಿಜೇತ ಸಿನಿಮಾಗಳೇ ಬೇಕು ಅಂತನೂ ಇಲ್ಲ…ಸರಳವಾದ, ಕಷ್ಟಪಟ್ಟು ಮಾಡೋ ಚಿತ್ರಗಳು…ಬೋರ್ ಹೊಡೆಸದೇ ನಿರೂಪಿಸುವಂಥ ಚಿತ್ರಗಳು ಬೇಕಷ್ಟೇ.
    ಇಷ್ಟು ಗೊತ್ತಾದ್ರೆ
    ಈ ವಿಷಯದ ಬಗ್ಗೆ ಚರ್ಚೆ ಮುಂದುವರಿಸೋ ಅಗತ್ಯ ಇರೋಲ್ಲ ಅನ್ಕೋತೀನಿ.
    ಅನಿಕೇತನ ಸುನಿಲ್

    ಪ್ರತಿಕ್ರಿಯೆ
  12. ಲೂಸ್ ಮಾದ.

    ಏನ್ ಸಾರ್ ನಮ್ಮ ಸಂಭಾವನೆ ಮೇಲೆ ಕಣ್ಣು ಹಾಕ್ತೀರಾ??? ತಮಿಳಿನ ಕಥೆ, ಅದೇ ಟ್ಯೂನು, ಅದೇ ಸ್ಟೆಪ್ಪು, ಅದೇ ಆಕ್ಟಿಂಗು ಮಾಡಬೇಕಾಗಿರೋ ನಮಗೆ ಆ ನಟನ ಹತ್ತಿರ ಹತ್ತಿರದ ಸಂಬಾವನೆ ಬೇಡ್ವಾ?? ಏನೋ ಇಷ್ಟು ಹಾಳು ಮೂಳು ಬರಕೊಂಡು , ತಲೆ ಮಾಸಿದ ನಾಲ್ಕು ಜನರ ಹತ್ರ ಚಪ್ಪಾಳೆ ಹೊಡೆಸಿ ಕೊಳ್ಳುವ ನಿಮಗೆ ನಮ್ ಮೇಲೆ ವೊಟ್ಟೆ ಕಿಚ್ಚು ಅಷ್ಟೇ!!!!!!

    ಪ್ರತಿಕ್ರಿಯೆ
  13. ಅನಿಕೇತನ ಸುನಿಲ್

    ಇನ್ನೊಂದು ವಿಷ್ಯ ಹೇಳಬೇಕಿತ್ತು, ನಾವು ನಂಬಿ ಖುಷಿ ಪಟ್ಟು ಓದಿಕೊಂಡ ವಿಮರ್ಶೆಗಳು ನಂತರ ಸಿನಿಮ ನೋಡಿದಾಗ ಅರ್ಥ ಹೀನ ಅನ್ನಿಸಿವೆ,ಅಪ್ರಮಾಣಿಕ ಬರಹಗಳು ಅನ್ನಿಸಿವೆ.ಅದಕ್ಕೇ ನನ್ನ ಕೆಲವು ಅಭಿಮಾನಿ ಕನ್ನಡಿಗ ಗೆಳೆಯರು ಸೇರಿ ಕನ್ನಡ ಚಿತ್ರಗಳ ಸಲುವಾಗಿಯೇ ಒಂದು ಬ್ಲಾಗ್ ಶೀಗ್ರದಲ್ಲೇ ಶುರು ಮಾಡಲಿದ್ದಾರೆ . ದುಡ್ಡು ಇಸ್ಕೊಂಡು ಬರೆಯೋ ಲೇಖಕರಿಗಿಂತ ಚಿತ್ರಗಳ ಅಬ್ಗ್ಗೆ ಆಳವಾದ ಜ್ಞಾನ ಇಲ್ಲದಿದ್ರೂ ಪ್ರಾಮಾಣಿಕವಾಗಿ ಅನಿಸಿದ್ದು ಹೇಳುವ ಸಂಕಲ್ಪ ಮಾಡಿರೋ ಗೆಳೆಯರದ್ದು ನಂಬುವಂಥ ಮಾತುಗಳಿರುತ್ತೆ ಅಂತ ಭಾವಿಸ್ತೀನಿ. ಕಳಪೆ ಅನ್ನಿಸುವ,ಒಮ್ಮೆ ಸಂಪೂರ್ಣವಾಗಿ ನೋಡಿ ಖುಷಿಪಡಲು ಯೋಗ್ಯವಲ್ಲದ ಚಿತ್ರಗಳ ಬಗ್ಗೆ ಒಂದು ಮಾತೂ ಆಡದೆ….ನೋಡಬಹುದು ಅನಿಸುವ ಚಿತ್ರಗಳ ಬಗ್ಗೆ ಮಾತ್ರ ಬರೆವ ಯೋಜನೆ ಇದೆಯಂತೆ. ಕಾಡು ನೋಡ್ತೀನಿ.
    ಅನಿಕೇತನ
    ಸುನಿಲ್.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: