
‘ಅವಧಿ’ ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ ‘ಅವಧಿ’ಯ ವಿಡಿಯೋ ಸಾಹಸದಲ್ಲಿ ಭಾಗಿಯಾಗಿದ್ದಾರೆ. ‘ಜೋಗಿ ಸರ್ಕಲ್’ ಜನ ಮನ ಸೆಳೆದಿತ್ತು.
ಜೋಗಿ ಬಗ್ಗೆ ಸವಿವರ ಬೇಕಾದರೆ ಈ ವಿಡಿಯೋ ನೋಡಿ
ಈಗ ಜೋಗಿ ‘ಅವಧಿ’ಯ ಮೇಲಿನ ಅಭಿಮಾನದಿಂದ ಪ್ರತೀ ಭಾನುವಾರ ಹೊಸ ತಲೆಮಾರಿನವರ ಬರಹವನ್ನೇ ಗಮನದಲ್ಲಿಟ್ಟುಕೊಂಡು ‘ನವ ಪಲ್ಲವ’ ಬರೆಯಲಿದ್ದಾರೆ.
ಮೊನ್ನೆ ಚಿತ್ರಲೋಕದ ವೀರೇಶ್ ಸೆನ್ಸಾರ್ ಸಮಸ್ಯೆಯ ಬಗ್ಗೆ ಕ್ಲಬ್ ಹೌಸಿನಲ್ಲಿ ಮಾತುಕತೆ ನಡೆಸುವ ಸಂಗತಿಯನ್ನು ನಾನು ನನ್ನ ವಾಟ್ಸ್ಯಾಪು ಗ್ರೂಪುಗಳಿಗೆ ಕಳಿಸಿದ್ದೆ. ಕೆಲವೇ ಕ್ಷಣಗಳಲ್ಲಿ ಚಿತ್ರರಂಗದ ಹಿರಿಯರೊಬ್ಬರು ’ಕ್ಲಬ್ ಹೌಸ್ ಎಲ್ಲಿದೆ ಅಂತ ಗೊತ್ತಿಲ್ಲ. ಲೊಕೇಶನ್ ಶೇರ್ ಮಾಡಿ’ ಅಂತ ಸಂದೇಶ ಕಳಿಸಿದರು. ಜತೆಗೇ, ‘ಯಾವ ಕ್ಲಬ್ಬುಗಳೂ ಓಪನ್ ಆಗಿಲ್ಲ, ವಿಚಾರಿಸಿಕೊಳ್ಳಿ’ ಅಂತ ಎಚ್ಚರಿಕೆ ಹೇಳಿದರು. ಅವರಿಗೆ ‘ನಾವು ಕಾರ್ಯಕ್ರಮ ನಡೆಸುವುದು ಕ್ಲಬ್ ಹೌಸ್ ಎಂಬ ಹೊಸ ಆ್ಯಪ್ನಲ್ಲಿ’ ಎಂದು ಹೇಳಿದೆ. ‘ಅದೆಲ್ಲ ನಮಗೆ ಗೊತ್ತಾಗಲ್ಲ ಗುರುಗಳೇ’ ಅಂತ ಅವರು ಅಂಥ ಆಸಕ್ತಿ ತೋರಲಿಲ್ಲ.
ಅದಾಗಿ ಎರಡೇ ದಿನಕ್ಕೆ ಕ್ಲಬ್ ಹೌಸಿಗೆ ಕಾಲಿಟ್ಟರೆ, ಅಲ್ಲಿ ಅದೇ ಗೆಳೆಯರು ಹತ್ತಿಪ್ಪತ್ತು ಸದಸ್ಯರನ್ನು ಕಟ್ಟಿಕೊಂಡು ಒಡ್ಡೋಲಗ ನಡೆಸುತ್ತಿದ್ದರು. ನಾನೂ ಅಲ್ಲಿಗೆ ಹೋಗಿ ಸೇರಿಕೊಂಡೆ. ಅವರು ನನ್ನನ್ನೂ ಮಾತಿಗೆ ಕರೆದರು. ‘ಏನೂ ಗೊತ್ತಿಲ್ಲ ಅಂದವರು ಇಲ್ಲಿಗೆ ಬಂದೇ ಬಿಟ್ಟಿರಲ್ಲ’ ಅಂತ ಕೇಳಿದೆ. ‘ಇದು ಭಯಂಕರ ಸಿಂಪಲ್ ಗುರುಗಳೇ. ಸಕತ್ತಾಗಿದೆ. ನಮ್ಮಂಥವರಿಗೆ ಹೇಳಿ ಮಾಡಿಸಿದ್ದು ಇದು. ಮುಂಚೆ ಕ್ಲಬ್ಬಲ್ಲಿ ಕೂತು ಹರಟೆ ಹೊಡೀತಿದ್ವಿ. ಈಗ ಇಲ್ಲಿ ಮಾತಾಡ್ತಿದ್ದೀವಿ, ಖರ್ಚಿಲ್ಲ, ಕಾರ್ಯ ಇಲ್ಲ’ ಅಂತ ಗಹಗಹಿಸಿ ನಕ್ಕರು.
ಈ ಖರ್ಚಿಲ್ಲದ, ಕಾರ್ಯವೂ ಇಲ್ಲದ ಕ್ಲಬ್ ಹೌಸ್ ಯಾಕೆ ಜನಪ್ರಿಯವಾಯಿತು ಅಂತ ಯೋಚಿಸುತ್ತಿದ್ದೆ. ಸದ್ಯಕ್ಕೆ ಬೆಳ್ತಂಗಡಿಯಲ್ಲಿ ಮೊಕ್ಕಾಂ ಹೂಡಿರುವ ನಾನು, ನನ್ನ ಅಧ್ಯಾಪಕ ಮಿತ್ರರೊಬ್ಬರ ಮನೆಗೆ ಹೋಗಿದ್ದೆ. ಅವರು ಮನೆಯ ಮುಂದಿರುವ ಹಲಸಿನ ಮರದ ಬುಡದಲ್ಲಿ ಕುರ್ಚಿ ಹಾಕಿಕೊಂಡು ಕುಳಿತುಕೊಂಡಿದ್ದರು. ಯಾರ ಜೊತೆಗೋ ದೊಡ್ಡ ದನಿಯಲ್ಲಿ ಮಾತಾಡುತ್ತಿದ್ದರು. ಹತ್ತಿರ ಹೋಗಿ ನೋಡಿದರೆ, ಅವರು ಕ್ಲಬ್ ಹೌಸಿನಲ್ಲಿ ಸ್ಟಾಫ್ ಮೀಟಿಂಗು ನಡೆಸುತ್ತಿದ್ದರು. ನನ್ನನ್ನು ನೋಡಿದ್ದೇ, ಮೈಕ್ ಆಫ್ ಮಾಡಿ, ಯೋಗಕ್ಷೇಮ ವಿಚಾರಿಸಿದರು. ‘ನಮ್ಮನೆಯಲ್ಲಿ ಸಿಗ್ನಲ್ ವೀಕು. ಝೂಮ್ ಮೀಟಿಂಗ್ ಸಾಧ್ಯವೇ ಇಲ್ಲ. ಈ ಕ್ಲಬ್ ಹೌಸ್ ಬಹಳ ಚೆನ್ನಾಗಿದೆ. ಇದರಲ್ಲೇ ಮೀಟಿಂಗು ಶುರು ಮಾಡಿದ್ದೇವೆ’ ಅಂದರು.

ಯಾವುದೇ ಹೊಸ ತಂತ್ರಜ್ಞಾನ ಬಂದರೂ ಅದನ್ನು ಪೂರ್ತಿಯಾಗಿ ಹೀರಿ ಹಿಂಡಿಹಿಪ್ಪೆ ಮಾಡುವ ತನಕ ಬಿಡದ ನಾವೊಂದಷ್ಟು ಮಂದಿ ಸೇರಿ, ಕ್ಲಬ್ ಹೌಸಿಗೆ ನುಗ್ಗಿದೆವು. ಒಂದೇ ವಾರದಲ್ಲಿ ಅದಕ್ಕೆ ಅಡಿಕ್ಟ್ ಕೂಡ ಆದೆವು. ನಾವೆಂದೂ ನೋಡದ ಮಾತನಾಡದ ಪ್ರತಿಭಾವಂತರೆಲ್ಲ ಅಲ್ಲಿ ನಮಗೆ ಗೊತ್ತಿರುವ ಗೊತ್ತಿಲ್ಲದ ಸಂಗತಿಗಳ ಕುರಿತು ಮಾತಾಡುತ್ತಿದ್ದರು. ಕ್ರಿಪ್ಟೋ ಕರೆನ್ಸಿಯಿಂದ ಹಿಡಿದು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತನಕ, ಸಿನಿಮಾ ಮಾಡುವುದರಿಂದ ಹಿಡಿದು ಕತೆ ಬರೆಯುವ ತನಕ, ಮೀನು ಸಾರು ಮಾಡುವುದರಿಂದ ಒಂಟಿಯಾಗಿ ಪ್ರವಾಸ ಮಾಡುವ ತನಕ ಎಲ್ಲದರ ಕುರಿತೂ ಮಾತು. ವಿತ್ ಕಾಂಡೋಮ್ ಆರ್ ವಿಥೌಟ್, ಸೆಕ್ಸ್ ವಿಥ್ ಎಕ್ಸ್ -ಮುಂತಾದ ಮಾತಿನ ಕೊಠಡಿಗಳೂ ತೆರೆದುಕೊಂಡು ಅಲ್ಲಿಗೆ ಗೊತ್ತಿಲ್ಲದೇ ನುಗ್ಗಿದ ಮಂದಿ ತಬ್ಬಿಬ್ಬಾದದ್ದೂ ಉಂಟು.
ಯಾವತ್ತೂ ಕೈಗೇ ಸಿಗದ ನಿರ್ದೇಶಕರು ಸಿನಿಮಾ ಕಲೆ ಕಲಿಸಿಕೊಟ್ಟರು, ಪತ್ರಿಕೆ ಹೇಗೆ ಹೊರಬರುತ್ತದೆ ಅನ್ನುವ ಗುಟ್ಟನ್ನು ಹಿರಿಯ ಪತ್ರಕರ್ತರು ಬಿಚ್ಚಿಟ್ಟರು, ಅವರೇಕೆ ಹೀಗೆ, ಇವರೇಕೆ ಹಾಗೆ ಮುಂತಾದ ಸಿದ್ಧಾಂತ-ಪಂಥಗಳ ಕುರಿತು ಚರ್ಚೆ ಶುರುವಾಯಿತು. ಎರಡೂವರೆ ಶತಮಾನಗಳ ಕಾಲ ಮೌನವ್ರತ ಆಚರಿಸುತ್ತಿದ್ದವರಂತೆ ಎಲ್ಲರೂ ಮಾತಿಗೆ ಇಳಿದೇಬಿಟ್ಟೆವು.
ನನ್ನ ಹೆಂಡತಿಯಂತೂ ನನ್ನನ್ನು ಇನ್ನಿಲ್ಲದಂತೆ ಟೀಕಿಸಿದಳು. ನಾನು ನಡುರಾತ್ರಿ ಮೂರೂವರೆಗೆ ಯಾವುದೋ ಗುಂಪಲ್ಲಿ ಕತೆ ಬರೆಯುವ ಕುರಿತು ಮಾತಾಡುತ್ತಿದ್ದುದನ್ನು ಕೇಳಿ ಕೆಂಡಾಮಂಡಲ ಸಿಟ್ಟಾದಳು. ಕ್ರಮೇಣ ಅಕ್ಕತಂಗಿಯರೆಲ್ಲ ಕ್ಲಬ್ ಹೌಸಲ್ಲೇ ಮಾತುಕತೆ ಆರಂಭಿಸಿ ಅವರ ಗ್ರೂಪು ಜನಪ್ರಿಯವೂ ಆಯಿತು. ಮೊದಲು ಪ್ರೆಸ್ ಕ್ಲಬ್ಬಲ್ಲಿ ಕೂತು ಹರಟುತ್ತಿದ್ದೆವು. ಈಗ ಕ್ಲಬ್ಬು ಮನೆಗೇ ಬಂದಿದೆ. ಒಂದೇ ವ್ಯತ್ಯಾಸವೆಂದರೆ ಕೈಯಲ್ಲಿ ಗ್ಲಾಸಿಲ್ಲ ಅಂತ ಅನೇಕರು ಮಾತಾಡಿಕೊಂಡೆವು. ಇದ್ದಕ್ಕಿದ್ದಂತೆ ಗೆಳೆಯನೊಬ್ಬ ಒಂದು ಕೊಠಡಿ ತೆರೆದು, ನಮ್ಮ ಕಾಲೇಜು ರಾಣಿಯರೆಲ್ಲ ಏನಾದರು ಅಂತ ಮಾತು ಶುರುಮಾಡಿಕೊಂಡ. ಅಲ್ಲಿಗೆ ಬಂದ ನಮ್ಮ ಸಹಪಾಠಿಯೊಬ್ಬಳು ನೀವೆಲ್ಲ ಮುದುಕರಾಗಿದ್ದೀರಿ ಅಂತ ಹೇಳಿ ನಮ್ಮನ್ನೆಲ್ಲ ಕಂಗೆಡಿಸಿ ಹೋದಳು.
ಕ್ಲಬ್ ಹೌಸಲ್ಲಿ ಯಾರೆಲ್ಲ ಇದ್ದಾರೆ ಅಂತ ನೋಡಿದರೆ ಆಶ್ಚರ್ಯವಾಗುತ್ತದೆ. ಅದೀಗ ಹಳ್ಳಿಹಳ್ಳಿಯನ್ನೆಲ್ಲ ತಲುಪಿದೆ. ಬೆಳ್ತಂಗಡಿಯ ಮೇಲಂತಬೆಟ್ಟು ಎಂಬ ಪುಟ್ಟ ಗ್ರಾಮದ ಮಣ್ಣಿನ ರಸ್ತೆಯಲ್ಲಿ ನಡೆಯುತ್ತಾ ಹೋಗುತ್ತಿದ್ದರೆ ಒಬ್ಬ ಜುಟ್ಟು ಕಟ್ಟಿಕೊಂಡ ಹುಡುಗ ಒಂದು ಕಟ್ಟೆಯ ಮೇಲೆ ಕುಳಿತು ಮಾತಾಡುತ್ತಿದ್ದ. ಹತ್ತಿರ ಹೋಗಿ ನೋಡಿದಾಗ ಅವನು ಕ್ಲಬ್ ಹೌಸಲ್ಲಿದ್ದಾನೆ ಅಂತ ಗೊತ್ತಾಯಿತು. ಕೊನೆಗೂ ಅವನು ಯಾವ ಕೊಠಡಿಯಲ್ಲಿದ್ದ ಅಂತ ಗೊತ್ತಾಗಲಿಲ್ಲ.
ಕ್ಲಬ್ ಹೌಸ್ ಯಾಕೆ ಅಷ್ಟೊಂದು ಜನಪ್ರಿಯವಾಗಿದೆ ಅಂತ ಯೋಚಿಸಿದೆ. ಮೊದಲನೆಯದಾಗಿ ಅದು ಅತ್ಯಂತ ಸರಳವಾಗಿದೆ. ಯಾವ ತಂತ್ರಜ್ಞಾನ ಯೂಸರ್ ಫ್ರೆಂಡ್ಲಿ ಆಗಿರುತ್ತದೆಯೋ ಅದು ಬಹುಬೇಗ ಎಲ್ಲರಿಗೂ ಹತ್ತಿರವಾಗುತ್ತದೆ. ಎರಡನೆಯದಾಗಿ ಇಲ್ಲಿ ಬರೆಯುವ-ಓದುವ ಕಷ್ಟವಿಲ್ಲ. ಅನ್ನಿಸಿದ್ದನ್ನು ಮಾತಾಡಿದರೆ ಮುಗಿಯಿತು. ನಾವೆಲ್ಲರೂ ಕ್ರಿಕೆಟ್, ರಾಜಕಾರಣ, ಪ್ರೇಮ, ನಾಸ್ಟಾಲ್ಜಿಯಾ, ತಿಂಡಿ, ಹವಾಮಾನ, ಪತ್ರಿಕೋದ್ಯಮ, ಭ್ರಷ್ಟಾಚಾರ, ಸಿನಿಮಾ ಮತ್ತು ಆರೋಗ್ಯದ ಬಗ್ಗೆ ಅಧಿಕಾರಯುತವಾಗಿ ಮಾತಾಡುವಷ್ಟು ಜ್ಞಾನವನ್ನು ಹುಟ್ಟುತ್ತಲೇ ಸಂಪಾದಿಸುವುದರಿಂದಾಗಿ ಮಾತಿಗೆ ಕೊರತೆಯಿಲ್ಲ. ಮತ್ತೊಂದು ಅನುಕೂಲ ಎಂದರೆ ಈ ತಂತ್ರಜ್ಞಾನದಲ್ಲಿ ನಮ್ಮ ಮುಖ ಕಾಣಿಸುವುದಿಲ್ಲ. ಮಾತಷ್ಟೇ ಕೇಳಿಸುತ್ತದೆ. ಹೀಗಾಗಿ ಸಭಾಕಂಪನದ ಭಯ ಅರ್ಧಕ್ಕರ್ಧ ಕಡಿಮೆಯಾಗಿದೆ.

ನಾನು ಮತ್ತು ನನ್ನ ಅನೇಕ ಮಿತ್ರರು ಇದನ್ನು ರೇಡಿಯೋ ಥರ ಬಳಸಲಿಕ್ಕೂ ಆರಂಭಿಸಿದ್ದೇವೆ. ನಮಗಿಷ್ಟವಾದ ಚರ್ಚೆ ನಡೆಯುವ ಕೋಣೆಯೊಳಗೆ ಪ್ರವೇಶಿಸಿ, ಫೋನ್ ಪಕ್ಕಕ್ಕಿಟ್ಟು ಬೇಕಾದ ಕೆಲಸ ಮಾಡುತ್ತಾ ಕೂತಿರುತ್ತೇವೆ. ‘ನಾನು ಅಡುಗೆ ಮಾಡುತ್ತಾ ಕ್ಲಬ್ ಹೌಸ್ ಮಾತು ಕೇಳುತ್ತಿರುತ್ತೇನೆ. ಬಹಳ ಸೊಗಸಾಗಿದೆ. ಬೆಂಗಳೂರಲ್ಲಿ ನೀವೇನು ಕಾರ್ಯಕ್ರಮ ಮಾಡುತ್ತಿದ್ದಿರೋ ಅದೆಲ್ಲ ನನಗೂ ಕೇಳಲು ಸಿಗುತ್ತಿದೆ ಅನ್ನೋದೇ ಸಂತೋಷ ‘ ಅಂತ ಕವಯಿತ್ರಿಯೊಬ್ಬರು ಸಂತೋಷಪಟ್ಟದ್ದು ಕೇಳಿದ ಮೇಲೆ ಇದು ತೀರಾ ಕೆಟ್ಟದ್ದೇನೂ ಅಲ್ಲ ಅಂತ ಅನ್ನಿಸತೊಡಗಿದೆ.
ಮಾತಿನಷ್ಟು ಅಡಿಕ್ಟಿವ್ ಅಂತ ಸಂಗತಿ ಮತ್ತೊಂದಿಲ್ಲ. ಹರಟುತ್ತಾ ಕೂತರೆ ಹೊತ್ತು ಹೋದದ್ದೇ ಗೊತ್ತಾಗುವುದಿಲ್ಲ. ಕ್ಲಬ್ ಹೌಸ್ ಹೇಳಿಕೇಳಿ ಮಾತಿನ ಕಟ್ಟೆ. ನಮ್ಮ ಹಾಫ್ ಸರ್ಕಲ್ಲಿನಲ್ಲಿ ರಿಷಭ್ ಶೆಟ್ಟಿ ಮಾತು ಮೂರು ಗಂಟೆಗೂ ಹೆಚ್ಚು ಸಾಗಿದಾಗ, ಹಿರಿಯರೊಬ್ಬರು ‘ಅಷ್ಟು ದೀರ್ಘ ಮಾಡಬೇಡಿ’ ಅಂತ ಎಚ್ಚರಿಸಿದರು. ‘ನೀವೆಷ್ಟು ಬೇಕೋ ಅಷ್ಟು ಕೇಳಿ ಹೊರಡಬಹುದಲ್ಲ’ ಅಂದೆ. ‘ನಾನು ಹೋದ ಮೇಲೆ ಅಲ್ಲಿ ಏನು ಮಾತಾಡುತ್ತಾರೋ ಅಂತ ಹೊಟ್ಟೆಕಿಚ್ಚಾಗುತ್ತದೆ. ಹೀಗಾಗಿ ಪೂರ್ತಿ ಕೇಳದೇ ಹೋಗಲಿಕ್ಕಾಗದು’ ಅಂದರು.
ಆಮೇಲೆ ನೋಡಿದರೆ ಕೇರಳದ ಒಂದು ಗುಂಪು ಸತತವಾಗಿ ಆರೂವರೆ ದಿನ ಮಾತಾಡುತ್ತಿದ್ದರು ಅಂತ ಗೊತ್ತಾಯಿತು. ಕನ್ನಡ ಕಲಿಯುವ ಮೊದಲ ಪಾಠಗಳು ಎಂಬ ಕ್ಲಬ್ ಸತತವಾಗಿ ಮೂವತ್ತಾರು ಗಂಟೆ ಕಾರ್ಯಕ್ರಮ ಮಾಡಿದ್ದನ್ನು ನಾನೇ ನೋಡಿದ್ದೇನೆ. ಒಬ್ಬರು ನಾಲ್ಕೈದು ಗಂಟೆ ಮಾಡರೇಟ್ ಮಾಡಿ ಮತ್ತೊಬ್ಬರಿಗೆ ವಹಿಸಿ ಹೊರಟು ಹೋಗುತ್ತಾರೆ. ಕೇಳುಗರು ಬಂದು ಹೋಗುತ್ತಾ ಇರುತ್ತಾರೆ. ಕ್ಲಬ್ಬು ನಿದ್ದೆ ಮಾಡುವುದಿಲ್ಲ.
ನಾಟಿ ಕ್ಲಬ್ಬು, ಜಾಲಿಬಾರು ಪೋಲಿ ಗೆಳೆಯರು, ಹಾಡುಹಬ್ಬ ಮುಂತಾದ ಗುಂಪುಗಳು ರಾತ್ರಿಯಿಡೀ ಎಚ್ಚರವಿರುತ್ತವೆ. ರಾತ್ರಿ ಒಂದೂವರೆ ಗಂಟೆಯ ಹೊತ್ತಿಗೆ ಫಟ್ಟನೆ ನೋಟಿಫಿಕೇಷನ್ ಬಂದು ಅದರ ಮೇಲೆ ಬೆರಳಿಟ್ಟದ್ದೇ ತಡ ಯಾವುದೋ ಗ್ರೂಪಿಗೆ ಹೋಗಿ ಬಿದ್ದೆ. ಅಲ್ಲಿ ನೋಡಿದರೆ ನಿರ್ದೇಶಕ ಗುರುಪ್ರಸಾದ್, ನಟ-ನಿರ್ದೇಶಕ ಟಿ ಎನ್ ಸೀತಾರಾಮ್ ಜತೆಗೆ ಲೋಕಾಭಿರಾಮ ಮಾತಾಡುತ್ತಿದ್ದರು. ಟೀಯನ್ನೆಸ್ ತಮ್ಮ ಆರಂಭದ ದಿನಗಳ ಕತೆ ಹಂಚಿಕೊಳ್ಳುತ್ತಿದ್ದರು. ನಡುನಡುವೆ ಹಾಡುತ್ತಿದ್ದರು. ಸುಮಾರು ಮುನ್ನೂರೈವತ್ತು ತರುಣ-ತರುಣಿಯರು ಕೇಳಿಸಿಕೊಳ್ಳುತ್ತಾ ಕೂತಿದ್ದರು.
ಯಾರೋ ನನಗೆ ಫೋನ್ ಮಾಡಿ ‘ಸದಾ ಕ್ಲಬ್ ಹೌಸಿನಲ್ಲೇ ಇರುತ್ತೀರಲ್ಲ’ ಅಂತ ಕಾಲೆಳೆಯಲು ನೋಡಿದರು. ‘ಆ ಬಗ್ಗೆ ನನಗೆ ಯಾವ ಮುಜುಗರವೂ ಇಲ್ಲ. ನಾನು ಮೂರೇ ಗಂಟೆ ನಿದ್ದೆ ಮಾಡುವುದು. ಇಪ್ಪತ್ತೊಂದು ಗಂಟೆ ಖಾಲಿ ಬಿದ್ದಿರುತ್ತದೆ. ಎಂಟು ಗಂಟೆ ಆಫೀಸು ಕೆಲಸ ಮಾಡಿದರೂ 13 ಗಂಟೆ ಕ್ಲಬ್ ಹೌಸಲ್ಲಿರಬಹುದು’ ಅಂದೆ. ಅಶೀಶ್ ವಿದ್ಯಾರ್ಥಿ, ಸುಹಾಸಿನಿ- ಮುಂತಾದ ಎಂದೋ ಭೇಟಿಯಾದ ನಟನಟಿಯರಿಂದ ಹಿಡಿದು ಇತ್ತೀಚಿನ ಉತ್ಸಾಹಿ ನಿರ್ದೇಶಕ, ನಟ-ನಟಿ, ಕವಿ, ಕತೆಗಾರರೆಲ್ಲ ನನಗೆ ಕ್ಲಬ್ ಹೌಸಲ್ಲಿ ಸಿಕ್ಕಿದ್ದಾರೆ. ಇದರಿಂದಾಗಿ ಎಷ್ಟೋ ಭಿನ್ನಾಭಿಪ್ರಾಯಗಳು ಮುರಿದುಬಿದ್ದಿವೆ. ಅತ್ಯಂತ ದಡ್ಡ ಎಂದು ಭಾವಿಸಿದ್ದ ಹುಡುಗ, ಭಯಂಕರ ಪ್ರತಿಭಾವಂತ ಎಂಬುದನ್ನೂ ಕ್ಲಬ್ ಹೌಸ್ ತೋರಿಸಿಕೊಟ್ಟಿದೆ.
ಮಾತಾಡುವುದು ಬದುಕನ್ನು ಚೆಂದಗೊಳಿಸುತ್ತದೆ ಅಂತ ನಾನಾದರೂ ನಂಬಿದ್ದೇನೆ, ಮಕ್ಕಳ ಮೇಲೆ, ತಮಗಾಗದ ಗೆಳೆಯರ ಮೇಲೆ ಸಿಕ್ಕಾಪಟ್ಟೆ ರೇಗುತ್ತಿದ್ದ ಮಿತ್ರರೊಬ್ಬರು ಕ್ಲಬ್ ಹೌಸಿಗೆ ಬಂದ ನಂತರ ಬೈಯುವುದನ್ನೇ ಬಿಟ್ಟಿದ್ದಾರಂತೆ. ಅವರ ಒಳಗೇ ಅದುಮಿಟ್ಟುಕೊಂಡಿದ್ದ ಮಾತುಗಳಿಗೆ ಹೊರದಾರಿ ಸಿಕ್ಕಿದ್ದರಿಂದ ಹಾಗಾಗಿದೆ ಅಂತ ನಾನು ಊಹಿಸಿದೆ. ಯಾರ ಮಾತನ್ನು ಯಾರೂ ಕೇಳಲು ಸಿದ್ಧವಿಲ್ಲದ ಈ ಹೊತ್ತಲ್ಲಿ, ಕ್ಲಬ್ ಹೌಸ್ ನಿವೃತ್ತರ, ಆಸಕ್ತರ ಮತ್ತು ಹಂಚಿಕೊಳ್ಳುವ ಹುರುಪು ಉಳ್ಳವರ ಪಾಲಿನ ಆಪ್ತಮಿತ್ರನಂತೆ ಆಗಮಿಸಿದೆ.
ಅವಧಿಯ ಸಂಪಾದಕ ಜಿ.ಎನ್. ಮೋಹನ್, ವಿಶ್ವೇಶ್ವರ ಭಟ್, ಗೌರೀಶ್ ಅಕ್ಕಿ, ಗೆಳೆಯ ಕುಂಟಿನಿ ಗೋಪಾಲಕೃಷ್ಣ, ವೀರೇಶ್, ಸುನಯನಾ ಸುರೇಶ್, ಡಿಸಿ ರಾಜಪ್ಪ, ಹನುಮಂತ ಹಾಲಿಗೇರಿ, ಮಾನ್ವಿತಾ ಹರೀಶ್, ರಮೇಶ್ ಅರವಿಂದ್, ಜಯಮಾಲಾ, ಚೈತನ್ಯ, ಪವನ್ ಕುಮಾರ್, ಉಪೇಂದ್ರ – ಹೀಗೆ ನೂರಾರು ಮಂದಿ ನೂರೆಂಟು ಸಂಗತಿಗಳ ಕುರಿತು ಚರ್ಚಿಸುತ್ತಿರುತ್ತಾರೆ. ಟೀಮ್ ಅಭಿಮತ ಕ್ಲಬ್ ಹೌಸಲ್ಲೇ ಯಕ್ಷಗಾನ ತಾಳಮದ್ದಲೆ ನಡೆಸಿದೆ. ನಾವೀಗ ಆಫೀಸು ಮೀಟಿಂಗುಗಳನ್ನೂ ಕ್ಲಬ್ ಹೌಸಿನ ಕ್ಲೋಸ್ಡ್ ರೂಮಲ್ಲಿ ಮಾಡುತ್ತೇವೆ.

ನಿಮ್ಮನ್ನು ಎಲ್ಲಿ ಭೇಟಿ ಆಗಬಹುದು ಅಂತ ಯಾರಾದರೂ ಕೇಳಿದರೆ ನಾನು ಕ್ಲಬ್ ಹೌಸಿಗೆ ಬನ್ನಿ ಅನ್ನುತ್ತೇನೆ. ಅಲ್ಲಿ ಕಿಕ್ ಇದೆ, ಲಿಕ್ಕರ್ ಇಲ್ಲ. ಭೇಟಿಯಿದೆ, ಮಾಸ್ಕ್ ಬೇಕಾಗಿಲ್ಲ. ಬೇಕಾದ್ದು ಮಾತಾಡಬಹುದು, ದಾಖಲೆ ಉಳಿಯುವುದಿಲ್ಲ.
ಕ್ಲಬ್ ಹೌಸಲ್ಲಿ ಇನ್ನೂ ಯಾವ ಫೀಚರ್ ಇರಬೇಕಿತ್ತು ಅಂತ ಯಾರೋ ಕೇಳಿದರು. ಹಳೇ ಕಾಲದ ಮಹಾರಾಜನಂತೆ ಮಾರುವೇಷದಲ್ಲಿ ಹೋಗಿ ಮಾತು ಕೇಳುವ ಅವಕಾಶ ಇರಬೇಕಾಗಿತ್ತು. ಈಗ ಯಾವ ಕೊಠಡಿಗೆ ಹೋದರೂ ಎಲ್ಲರಿಗೂ ಗೊತ್ತಾಗುತ್ತದೆ. ಮಾತಿಗೆ ಕರೆಯುತ್ತಾರೆ. ಮಾತು ಕೇಳುವುದೂ ಒಂದು ಸುಖ ಅಂತ ಹೇಳಿದೆ.
ಮಾತಾಡುವುದು ಮತ್ತು ಮಾತು ಕೇಳುವುದು ಎರಡೂ ಶ್ರುತಿ ಮತ್ತು ಸ್ಮೃತಿ ಎಂಬ ಅತ್ಯಂತ ಪುರಾತನ ಕಲಿಕಾ ವಿಧಾನಗಳು. ಅದನ್ನು ಹೊಸ ತಂತ್ರಜ್ಞಾನ ಹೀಗೆ ಸಾಧ್ಯವಾಗಿಸಿದೆ. ನಿಮಗೆ ಬೋರಾಗಿದ್ದರೆ, ಅದೇ ಹಳೆಯ ಮಾತು ಕೇಳಿ ಸಾಕಾಗಿದ್ದರೆ, ಹೊಸ ಚಿಂತನೆಗಳು ಬೇಕಿದ್ದರೆ ಕ್ಲಬ್ ಹೌಸಿಗೆ ಬನ್ನಿ. ನಾನಂತೂ ಇಲ್ಲಿ ಹೊಸ ಕತೆಗಾರ ಮಿತ್ರರು, ಕವಿವರ್ಯರು ಮತ್ತು ಹೊಸ ಗೆಳೆಯರ ಜೊತೆ ಆರಾಮಾಗಿದ್ದೇನೆ. ‘ಎಷ್ಟೊತ್ತಿಗೆ ಫ್ರೀಯಾಗಿ ಸಿಕ್ತೀರಿ’ ಅಂತ ಯಾರಾದರೂ ಕೇಳಿದರೆ ಬೆಳಗಿನ ಜಾವ ಮೂರು ಗಂಟೆಗೆ, ಕ್ಲಬ್ ಹೌಸಲ್ಲಿ ಅಂತ ಹೇಳುತ್ತೇನೆ.
And, we meet there!






0 Comments