ಕೊನೆಯಾಗಬಾರದು ಬರಿದಾಗದೆ..

ಬೆಂಶ್ರೀ ರವೀಂದ್ರ

ಕೊನೆಯಾಗಬಾರದು ಬರಿದಾಗದೆ
ಬರಿದೆ ತುಂಬಿಸಿದ ಬಟ್ಟಲುಗಳನು
ಬರಿದು ಮಾಡಬೇಕು ಒಂದೂ ಬಿಡದೆ

ಏನೆಲ್ಲ ಸೇರಿಬಿಟ್ಟಿತು
ಗೂಡು ಅಲ್ಮೆರಾ ವಾರ್ಡರೊಬುಗಳು
ಧೂಳು ಕಟ್ಟಿದ ಅಟ್ಟಗಳು

ಇರಲಿ ಬೇಕಾಗುತ್ತದೆ ಎಂದಿಟ್ಟ ಸಾಮಾನುಗಳು ಈಗ ಹಲ್ಲು ಕಿಸಿಯುತ್ತಿವೆ
ಇನ್ನು ಹೆಕ್ಕುವುದೇನು
ಮಾಡಬೇಕಿದೆ ಎಲ್ಲ ಬರಿದು, 
ಕಾಯಬೇಕಿದೆ
ಸಂಚಿಗಳು ಮತ್ತೆ ತುಂಬದಂತೆ

ನಿನ್ನೆ ಅಡಿಗೆಯ ಶೇಷ ಫ್ರಿಡ್ಜಿನೊಳಗಿಹುದು
ಮತ್ತೆ ಬಿಸಿ ಮಾಡುವುದಿನ್ನು ಸಾಕು
ಹಸಿಕಸದಲಿ ಚೀಲದಲಿ ಅದನಿರಿಸಿ
ಪಾತ್ರೆಪಗಡೆಗಳನೊರೆಸಿ
ಪಗಡೆಯಾಟದ ಹಾಸು ಮಡಿಸಬೇಕು

ಬೆರಳುಗಳ ಸಂಧಿಯಲಿ ಕಳೆದ
ಗೆಳೆಯರ ಹುಡುಕಿ ಹಳೆಯ
ನೆನಪಿನ ದೋಣಿಗೆ ಬಣ್ಣವನು ಹಚ್ಚಿ
ತಿಳಿಮುಗುಳ ಹುಟ್ಟನಿಟ್ಟು
ಕೊನೆಯಿರದ ಸಾಗರದಿ ತೇಲಿಬಿಟ್ಟು
ಹಗುರಾಗಬೇಕು

ಮಮತೆಯಿತ್ತವರೆಷ್ಟೊ ನಡೆದು ಹೋದರಲ್ಲ
ಅಕ್ಕರಾಸ್ತೆಯಸಾಲು ಮುಗಿವ ಮುನ್ನ
ಕೈಮುಗಿದು ಹಗುರಾಗಬೇಕು
ನಾಳೆಯೆಂಬ ಪರೆದೆಯ ಸರಿಸದಂಕಕ್ಕೆ
ನಾಟಕದ ಮಾತಗಳವ ಬರೆದಿಲ್ಲ ನೋಡು

ರಾಶಿ ಪುಸ್ತಕಗಳ ರಾಶಿ ಒರಸಿ ಓದಲು ಬೇಕು
ಅಕ್ಷರದ ಋಣ ಅಷ್ಟು ಸುಲಭವೆ ಹೇಳು
ಯಾರೋ ಕೊಟ್ಟರು ಯಾರೋ ಬರೆದರು
ಚೆಲ್ಲಿಬಿಡು ಅಂಗಳದಿ ಆರಿಸಿಕೊಳ್ಳಲಿ
ಯಾರಾದರೂ

ಯಾರ್‌ ಯಾರ ಋಣ ಎಷ್ಟೆಷ್ಟು ಬಿದ್ದಿದೆಯೊ
ಎದೆ ಮೇಲೆ
ಅರಿಯದ ಲೆಕ್ಕವನಿಟ್ಟವರ್ಯಾರು
ಚಿತ್ರಗುಪ್ತನೇ ಈಗಲೇ ಹೇಳಿಬಿಡು
ಯಾರೋ ಕೊಟ್ಟಿದ್ದು ಯಾರಿಗೋ ಸೇರಲಿ
ಪಾತ್ರ ಬರಿದಾಗಬೇಕು;
ಹಗುರಾಗಲಾರೆನು ಬರಿದಾಗದೆ

ಅಂದಹಾಗೆ
ಇವಳ ನೇವರಿಸಿ ಎಷ್ಟು ದಿನವಾಯ್ತೊ
ಹಗುರಾಗುವೆನೇನು ಇವಳ ಮುದ್ದಾಡದೆ

ಒಂದೇ ಸಮ ಓಡುತ್ತಿರುವೆ, ಗಾಳಿಯಲ್ಲಿ ತೇಲಿದಂತೆ, ಸದ್ಯ ಬಿರುಗಾಳಿ ಬೀಸದಿರಲಿ
ಓಡುತ್ತಿದ್ದಾಗ ಎಡವಿದೆನೆಷ್ಟು ಬಾರಿ
‘ಕ್ಷಮಿಸು’ ಎಂದು ಹೇಳಬೇಕೇನು
ತಪ್ಪು ಸರಿಗಳು ನನ್ನ ತುತ್ತಲ್ಲ
ಅವು ಕಾಲದ ತೊತ್ತು
ಆದರೂ ಗತ್ತು ಗೊತ್ತುಗಳ ಚಿತ್ತು ಮಾಡಿ
ಕ್ಷಮಿಸೆನ್ನಬೇಕೇ  ಬರಿದಾಗಲು

ದಾರಿಯಲಿ ಕಂಡ ಮುಖಗಳ ನೆನಪಿಲ್ಲ
ಪಾಪ, ಅವರೆಷ್ಟು ಬಾರಿ ಕಂಡು
ಮುಗುಳು ನಕ್ಕಿಲ್ಲ; ಇನ್ನಾದರೂ
ನಕ್ಕು ಚೆನ್ನಾಗಿರುವಿರಾ ಅನ್ನಬೇಕು
ಬ್ಯಾಂಕ್ ಬ್ಯಾಲೆನ್ಸಿಗುಂಟು
ಉತ್ತರಾಧಿಕಾರದ ಪತ್ರ,
ಆದರಿದಕೆಲ್ಲಿ ಉತ್ತರಾಧಿಕಾರ

ಯಾರೋ ಯಾಕೋ ಹೊದಿಸಿದ
ಶಾಲುಗಳನೇನು ಮಾಡಲಿ
ಮಡಿಸಿ ಬಯಲಲಿಟ್ಟು ಬರಿದಾಗಬೇಕು

ಎಷ್ಟೊಂದು ಬಾಕಿಯಿದೆ ಗೆಳೆಯ
ಹೇಗೆ ಬರಿದಾಗುವುದು ಹೇಳು
ಮಲಗಿದಾಗ ಹಾಯಾಗಿ ನಿದ್ದೆ ಬರಬೇಕಿದೆ,
ನಿನ್ನಿನದನಿಳಿಸಿ ಹೊರಲೇನು ನಾಳಿನದನು

ಬರಿದಾಗದಿರೆ ಕೊನೆ ಬಾರದೇನು
ಅಂದಹಾಗೆ ಬರಿದಾಗುವುದೆಂದರೇನು
ಪ್ರಶ್ನೆಗಳು ಉತ್ತರಸಂತೆಯಲಿ
ಮಾರಾಟವಾಗದೆ ಉಳಿದಿದೆ
ಆದರೆ
ಕೊನೆಯಾಗಬಾರದು ಅಲ್ಲವೆ ಬರಿದಾಗದೆ.

‍ಲೇಖಕರು Admin

June 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: