ಜೋಗಿ ಅಂಕಣ- ಕಿಲ್ ಯುವರ್ ಬೇಬೀಸ್!

ಅವಧಿ’ ಓದುಗರಿಗಂತೂ ಜೋಗಿ ಅಪರಿಚಿತರಲ್ಲವೇ ಅಲ್ಲ. ಅವಧಿಯಲ್ಲಿ ಅಂಕಣ ಬರೆದು, ಆಗೀಗ ಹೊಸ ಲೇಖನಗಳನ್ನೂ ಕೊಡುಗೆಯಾಗಿ ಕೊಟ್ಟಿದ್ದಾರೆ. ಇದಲ್ಲದೆ ‘ಅವಧಿ’ಯ ವಿಡಿಯೋ ಸಾಹಸದಲ್ಲಿ ಭಾಗಿಯಾಗಿದ್ದಾರೆ. ‘ಜೋಗಿ ಸರ್ಕಲ್’ ಜನ ಮನ ಸೆಳೆದಿತ್ತು.

ಜೋಗಿ ಬಗ್ಗೆ ಸವಿವರ ಬೇಕಾದರೆ  ಈ ವಿಡಿಯೋ ನೋಡಿ

ಈಗ ಜೋಗಿ ‘ಅವಧಿ’ಯ ಮೇಲಿನ ಅಭಿಮಾನದಿಂದ ಪ್ರತೀ ಭಾನುವಾರ ಹೊಸ ತಲೆಮಾರಿನವರ ಬರಹವನ್ನೇ ಗಮನದಲ್ಲಿಟ್ಟುಕೊಂಡು ‘ನವ ಪಲ್ಲವ’ ಬರೆಯಲಿದ್ದಾರೆ.

ಎಪ್ಪತ್ತು ಕತೆಗಳನ್ನು ಬರೆದಾದ ನಂತರ ಒಂದು ದಿನ ವೈಯನ್ಕೆಗೆ ಹೇಳಿದ್ದೆ. ಇನ್ನು ನಾನು ಬರೆಯುವುದಿಲ್ಲ, ಅವರು ಹೇಳಿದರು : ಬರೆಯುವುದನ್ನು ನಿಲ್ಲಿಸಬೇಡ, ಪ್ರಕಟಿಸುವುದನ್ನು ನಿಲ್ಲಿಸು.

ಆವತ್ತು ಡೈರಿ ಬರೆಯಲು ಆರಂಭಿಸಿದೆ. ದಿನಕ್ಕೆ ಹತ್ತು ಪುಟದಂತೆ ಬರೆಯುತ್ತಾ ಹೋದೆ. ತಿಂಗಳಲ್ಲಿ 20 ದಿನವಂತೂ ಬರೆದೇ ಬರೆಯುತ್ತಿದ್ದೆ. ಪ್ರತಿತಿಂಗಳೂ 200 ಪುಟದ ಪುಸ್ತಕದ ತುಂಬ ನಾನು ನೋಡಿದ ಸಿನಿಮಾ, ಓದಿದ ಪುಸ್ತಕ, ಆಗಷ್ಟೇ ಹುಟ್ಟಿದ ಕತೆ, ಎಲ್ಲೋ ಓದಿದ ಕತೆಯಿಂದ ಗ್ರಹಿಸಿದ್ದು, ನ್ಯೂಯಾರ್ಕ್ ಟೈಮ್ಸಲ್ಲಿ ಬಂದು ಲೇಖನದ ಅನುವಾದ- ಹೀಗೆ ಏನಾದರೊಂದು ಬರೆಯುತ್ತಿದ್ದೆ. ಬರೆಯದೇ ಊಟ ಮಾಡುವುದಿಲ್ಲ ಎಂಬುದನ್ನು ಶ್ರದ್ಧೆಯಿಂದ ಪಾಲಿಸುತ್ತಿದ್ದೆ. ನಾಲ್ಕು ವರ್ಷ ಹಾಗೆ ಬರೆದಿಟ್ಟದ್ದು ಸುಮಾರು 60 ಪುಸ್ತಕಗಳಲ್ಲಿ ತುಂಬಿಹೋಗಿದೆ.

ಅವನ್ನೆಲ್ಲ ಎತ್ತಿ ಅಟ್ಟಕ್ಕೆ ಹಾಕುವಾಗ ಕಣ್ಣೀರು ಬಂತು. ಪ್ರಕಟಿಸುವ ಆಸೆಯಾಯಿತು. ಎಷ್ಟಾದರೂ ನಾನೇ ಬರೆದದ್ದು. ಯಾರಾದರೂ ಪ್ರಕಾಶಕರು ಕೇಳಿದರೆ ಥಟ್ಟನೆ ಇದನ್ನು ಪ್ರಕಟಿಸಿ ಅಂತ ಕೊಟ್ಟುಬಿಟ್ಟರೆ? ಏನು ಮಾಡಲಿ ಅಂತ ವೈಯನ್ಕೆಗೆ ಕೇಳಿದೆ.

ಕಿಲ್ ಯುವರ್ ಬೇಬೀಸ್ ಅಂದರು. ಮರದ ಹಾಗೆ ದಿನವೂ ಹೂವು ಅರಳಿಸುತ್ತಿರಬೇಕು. ಅವನ್ನು ಕಾಪಿಟ್ಟುಕೊಳ್ಳಲು ಹೋಗಬಾರದು. ಯೋಜನಗಂಧಿಯ ಹಾಗೆ ಹೆತ್ತ ಮಕ್ಕಳನ್ನೆಲ್ಲ ನೀರಿಗೆ ಎಸೆಯಬೇಕು. ಲೇಖಕನಿಗೂ ಆ ನಿಷ್ಠುರವಾದ ನಿಲುವು ಇರಬೇಕು. ಪ್ರಕಟಿಸಬೇಕಾದ ಪುಸ್ತಕಗಳು ಯಾವುದು, ಯಾವುದು ಪ್ರಕಟಣೆಗೆ ಅರ್ಹವಲ್ಲ ಎಂಬುದು ಗೊತ್ತಿರಬೇಕು. ಎಷ್ಟೋ ಸಲ ಪ್ರಕಟಣೆಗೆ ಅರ್ಹವಾಗಿದ್ದರೂ ಪ್ರಿಂಟು ಮಾಡಲಿಕ್ಕೆ ಹೋಗಬಾರದು. ಪ್ರಕಟಿಸುವ ಆಮಿಷವೇ ಲೇಖಕನಿಗೆ ಶತ್ರು. ಅಂಥ ಆಮಿಷ ಇಲ್ಲದವರೆಂದರೆ ಕಿರಂ ನಾಗರಾಜ ಮತ್ತು ಬಿವಿ ಕಾರಂತ ಅಂದಿದ್ದರು ವೈಯನ್ಕೆ.

ಅದಾಗಿ ಎಷ್ಟೋ ದಿನದ ನಂತರ ಕಿರಂ ಸಿಕ್ಕಾಗ ವೈಯನ್ಕೆ ಹೇಳಿದ್ದನ್ನು ಅವರಿಗೆ ಹೇಳಿದೆ. ಅವರು ಎಂದಿನ ಉಡಾಫೆಯಲ್ಲಿ ನಕ್ಕು, ಅಯ್ಯೋ ಯಾವನ್ರೀ ಬರೀತಾನೆ ಅಂದರು. ಬರೆದು ಏನು ಮಾಡೋದಿದೆ ಹೇಳಿ. ಅಡಿಗರು ಹೇಳಿದ್ದು ಗೊತ್ತಲ್ಲ ಅಂತ ಒಂದು ಪ್ರಸಂಗ ನೆನಪಿಸಿಕೊಂಡರು: ಸಂದರ್ಭ ಅಡಿಗರ ಹುಟ್ಟುಹಬ್ಬ. ನಡೆದದ್ದು ಜಯನಗರದ ಪ್ರಿಸಂ, ದಿ ಬುಕ್ ಶಾಪ್ನಲ್ಲಿ. ‘ನಾನೂ, ಅಡಿಗರು ನಡೀತಾ ಹೋಗುತ್ತಿದ್ವಿ. ನೆಟ್ಟಕಲ್ಲಪ್ಪ ಸರ್ಕಲ್ ಹತ್ತಿರ ಒಬ್ಬ ಹಳ್ಳಿಯ ಹುಂಬ ರಸ್ತೆ ದಾಟುತ್ತಿದ್ದ.

ಅಡಿಗರು ನನ್ನನ್ನೊಂದು ಕ್ಷಣ ತಡೆದು ನಿಲ್ಲಿಸಿ, ಅವನನ್ನು ತೋರಿಸಿ ಹೇಳಿದರು. ‘ನೋಡಯ್ಯಾ, ನೀನು ಆ ರಸ್ತೆದಾಟುವ ಹಳ್ಳಿಯವನನ್ನು ಹೇಗೆ ನೋಡ್ತೀಯೋ, ನನ್ನನ್ನು ಕೂಡ ಹಾಗೇ ನೋಡಬೇಕು. ನಾನು ಬೇರೆಯಲ್ಲ. ಅಲ್ಲಿ ರಸ್ತೆ ದಾಟುವ ಹಳ್ಳಿಗ ಬೇರೆಯಲ್ಲ.’ ನಾವೆಲ್ಲ, ಅಡಿಗರ ಥಿಂಕಿಂಗ್ ಬಗ್ಗೆ ಮೆಚ್ಚುಗೆ ಪಡುತ್ತಿರಬೇಕಾದರೆ ಕಿ.ರಂ. ಮುಂದುವರೆಸಿದರು. ‘…ಮತ್ತೆ ನೀನೂ ಕೂಡ ಬೇರೆಯಲ್ಲ!’

ಕಿರಂ ಸಂಯಮದ ಗುಟ್ಟೇನು ಅಂತ ನನಗೆ ಕೊನೆಗೂ ಗೊತ್ತೇ ಆಗಲಿಲ್ಲ. ನೀವೇ ಬರೆಯಿರಿ, ನಾವು ಬರೀತೀವಿ, ನೀವು ಡಿಕ್ಟೇಟ್ ಮಾಡಿ, ನೀವು ಮಾತಾಡಿದ್ದನ್ನೆಲ್ಲ ರೆಕಾರ್ಡ್ ಮಾಡಿಕೊಂಡು ಪುಸ್ತಕ ಮಾಡೋಣ ಅಂತ ನಾನೂ ಉದಯ ಮರಕಿಣಿಯೂ ಅವರಿಗೆ ನೂರಾರು ಸಲ ಹೇಳಿದ್ದೆವು. ಒಂದು ಸಲ ನೆಟ್ಟಕಲ್ಲಪ್ಪ ಸರ್ಕಲಿನ ಬಾರಲ್ಲಿ ಕೂತಾಗ ಗುಟ್ಟಾಗಿ ಕಿರಂ ಮಾತಾಡಿದ್ದನ್ನು ರೆಕಾರ್ಡು ಮಾಡಲು ನನ್ನ ಹಳೆಯ ಟೇಪ್ ರೆಕಾರ್ಡು ಒಯ್ದು ಆನ್ ಮಾಡಿ ಇಟ್ಟಿದ್ದೆ. ಪಾರ್ಟಿ ಮುಗಿಸಿ ಮನೆಗೆ ಬಂದ ರೆಕಾರ್ಡು ಹಾಕಿದರೆ ಮೆತ್ತಗೆ ಮಾತಾಡುವ ಕಿರಂ ದನಿ ದಾಖಲಾಗಿರಲೇ ಇಲ್ಲ. ನಮ್ಮ ಪಕ್ಕದ ಟೇಬಲಲ್ಲಿ ಕೂತಿದ್ದವನು ಕೆಟ್ಟ ಮಾತಲ್ಲಿ ಯಾರಿಗೋ ಬೈಯುತ್ತಿದ್ದದ್ದು, ಸಪ್ಲೈಯರ್ ಏನ್ ಕೊಡ್ಲಿ, ಚಿಕನ್ ಸುಕ್ಕಾ, ಮಟನ್ ಕೈಮ, ಪಿಷ್ ಫಿಂಗರ್ ಇದೆ ಅಂದಿದ್ದೆಲ್ಲ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಅದನ್ನು ಕಿರಂಗೆ ಹೇಳಿದಾಗ ಮನಸಾರೆ ನಕ್ಕು, ಅದೇ ಅತ್ಯುತ್ತಮ ಸಾಹಿತ್ಯ ಅಂದಿದ್ದರು.

ವೈಯನ್ಕೆ 1999ರ ಅಕ್ಟೋಬರ್ 16ರಂದು ಕಾಲವಾದರು. ಅವರು ಅಮೆರಿಕಾಕ್ಕೆ ಹೋಗುವ ತಿಂಗಳ ಮುಂಚೆ ಅವರಿಗೆ ನನ್ನ ಹೊಸ ಪುಸ್ತಕದ ಹಸ್ತಪ್ರತಿ ತೋರಿಸಿದೆ. ಅವರು ಅದನ್ನು ತಮ್ಮ ಎಂದಿನ ಶರವೇಗದಲ್ಲಿ ಕಣ್ಣಾಡಿಸಿ ಓದಿದರು. ಗುಡ್ ಗುಡ್… ಅಂದರು. ರಾತ್ರಿ ಗಾಲ್ಫ್ ಕ್ಲಬ್ಬಲ್ಲಿ ನಾನೂ ಉದಯ್ ಮರಕಿಣಿ ಕೂತಿದ್ದಾಗ ಮತ್ತೆ ಪುಸ್ತಕದ ಬಗ್ಗೆ ಮಾತಾಡಿದರು. ಆ ಪುಸ್ತಕ ಪ್ರಿಂಟ್ ಮಾಡ್ಲೇಬೇಕಾ ನೀನು ಅಂತ ಕೇಳಿದ್ದರು. ಹಾಗೇನಿಲ್ಲ ಸರ್. ಚೆನ್ನಾಗಿದ್ದರೆ ಮಾಡ್ತೀನಿ ಅಂದಿದ್ದೆ. ಚೆನ್ನಾಗಿದೆ. ಅದು ನಿನಗೂ ಗೊತ್ತಿದೆ. ಚೆನ್ನಾಗಿರೋದು ಮುಖ್ಯ ಅಲ್ಲ. ನೀನು ನಿನ್ನ ಭಾಷೆಯಲ್ಲಿ ಬರೀಬೇಕು. ಆರ್ಥರ್ ಕ್ವಿಲ್ಲರ್ ಅಂತ ಒಬ್ಬ ಹುಚ್ಚ ಇದ್ದಾನೆ. ಅವನು ಜಗತ್ತಿನ ಅತ್ಯುತ್ತಮ ಇಂಗ್ಲಿಷ್ ಪದ್ಯಗಳನ್ನೆಲ್ಲ ಸಂಗ್ರಹ ಮಾಡಿದ್ದಾನೆ. ಅದನ್ನೆಲ್ಲ ಮಾಡಿದ ನಂತರ ಅವನೊಂದು ಪುಸ್ತಕ ಬರೆದ. ಚೆನ್ನಾಗಿರೋ ಪದ್ಯಗಳನ್ನು ಬರೆಯುವಾಗ, ಚೆನ್ನಾಗಿರೋ ಬರಹ ಬರೆಯುವಾಗ ಹುಷಾರಾಗಿರಬೇಕು.

ನಿಮಗಿಷ್ಟವಾಗಿರೋದು ಓದುಗರಿಗೂ ಇಷ್ಟವಾಗಬೇಕಾಗಿಲ್ಲ. ಕೇಂಬ್ರಿಜ್ ಯೂನಿವರ್ಸಿಟೀಲಿ ಅವನು ಒಂದು ಸಲ ಭಾಷಣ ಮಾಡ್ತಾ ಹೇಳಿದ ‘Whenever you feel an impulse to perpetrate a piece of exceptionally fine writing, obey it—whole-heartedly—and delete it before sending your manuscript to press. Murder your darlings.’ ಅಂದ್ರೆ ಬರೆಯುವಾಗ ಚೆಂದ ಚೆಂದದ ಪದಗಳು, ಅಭಿವ್ಯಕ್ತಿಗಳು ಬರುತ್ತವೆ. ಪ್ರಕೃತಿಯ ಸೊಬಗನ್ನು ವರ್ಣಿಸೋಣ ಅನ್ನಿಸುತ್ತೆ. ಬರೆಯುವಾಗ ಅದನ್ನು ತಡೆಯೋದಕ್ಕೆ ಹೋಗಬೇಡಿ. ಬರೆದುಬಿಡಿ. ಆದರೆ ಪ್ರಿಂಟಿಗೆ ಹೋಗುವಾಗ ನೀವು ಮೆಚ್ಚಿ ಬರೆದ ಸಾಲುಗಳನ್ನು ನಿರ್ದಾಕ್ಷಿಣ್ಯಾಗಿ ಅಳಿಸಿಹಾಕಿ, ಕಿಲ್ ಯುವರ್ ಡಾರ್ಲಿಂಗ್ಸ್.

ವೈಯನ್ಕೆ ಅಷ್ಟು ಹೇಳಿದ್ದೆ ತಡ, ನಾನು ಬರೆದಿಟ್ಟಿದ್ದ ಅರವತ್ತೂ ಪುಸ್ತಕಗಳನ್ನೂ ನನ್ನ ಅಣ್ಣನ ಮನೆಗೆ ಸಾಗಿಸಿದೆ. ಅಲ್ಲಿದ್ದ ನನ್ನ ಇತರ ಪುಸ್ತಕಗಳ ನಡುವೆ ಇವೂ ಜಾಗ ಪಡೆದವು. I killed my darlings! ನಾವೇ ಮೆಚ್ಚೋದನ್ನು ನಾವು ಬರೆಯಬಾರದು ಅಂತ ತಿಳಿಸಿಕೊಟ್ಟ ವೈಯನ್ಕೆಗೆ ನಮಸ್ಕಾರ.
**

ಅನೇಕ ಕಿರಿಯ ಮಿತ್ರರು ಕ್ಲಬ್ ಹೌಸಿನ ಒಂದು ಕೋಣೆಯಲ್ಲಿ ಸಿಕ್ಕಿ, ಬರೆವಣಿಗೆ ಮತ್ತು ಪ್ರಕಟಣೆಯ ಬಗ್ಗೆ ಕೇಳಿದರು. ಅವರಲ್ಲಿ ಅನೇಕರು ಕವಿಗಳೂ ಕತೆಗಾರರೂ ಆಗಿದ್ದರು. ಅನೇಕ ಕತೆ ಕವಿತೆಗಳನ್ನು ಬರೆದಿಟ್ಟುಕೊಂಡು ಪ್ರಕಾಶಕರಿಗೋಸ್ಕರ ಹುಡುಕಾಡುತ್ತಿದ್ದರು. ಅವರಿಗೆ ಆವತ್ತು ಈ ಕತೆಯನ್ನು ಅಸ್ಪಷ್ಟವಾಗಿ ಹೇಳಿದೆ. ಬರೆಯುವುದು ಅನಿವಾರ್ಯ, ಪ್ರಕಟಣೆ ಅಷ್ಟೇನೂ ಅವಶ್ಯಕ ಅಲ್ಲ. ಬರೆದದ್ದನ್ನು ಓದಿಸಲಿಕ್ಕೆ, ಕೇಳಿಸಲಿಕ್ಕೆ ಒಂದು ಪುಟ್ಟ ನಮ್ಮದೇ ಆದ ಗುಂಪು ಇದ್ದರೆ ಒಳ್ಳೆಯದು. ಆ ಗುಂಪಿನಲ್ಲಿ ಓದುವ ಆಸಕ್ತಿಯಿರುವ, ಜಗತ್ತಿನ ಪುಸ್ತಕಗಳನ್ನೆಲ್ಲ ಓದಿಕೊಂಡ ಒಂದಿಬ್ಬರು ಕಟುಟೀಕೆ ಮಾಡಬಲ್ಲವರೂ ಇದ್ದರೆ ಮತ್ತೂ ಒಳ್ಳೆಯದು.

ನಾವು ಬರೆದುದನ್ನು ಹೊರಗಿನ ಯಾರಿಗೇ ಕೊಟ್ಟರೂ ಅವರಿಂದ ಬರುವ ಅಭಿಪ್ರಾಯ ಅನುಕಂಪ ಮತ್ತು ಅಕ್ಕರೆ ಆಧಾರಿತ ಆಗಿರುತ್ತದೆ ಅಂತ ಎಷ್ಟೋ ಸಲ ಅನ್ನಿಸುತ್ತದೆ. ನೀನು ಬರೆದದ್ದು ಕೆಟ್ಟದಾಗಿದೆ. ಒಲೆಗೆ ಹಾಕಿ ಸುಡು ಅಂತ ನನಗೆ ಇವತ್ತಿಗೂ ಯಾರೂ ಹೇಳಿಲ್ಲ. ಅಂದರೆ ನಾನು ಬರೆದದ್ದು ಚೆನ್ನಾಗಿದೆ ಅಂತ ಅರ್ಥವಲ್ಲ. ಅದನ್ನು ಓದಿದವರು ಸಹಾನುಭೂತಿಯಿಂದ ಮಾತಾಡಿದ್ದಾರೆ ಅಷ್ಟೇ.

ಬರಹಕ್ಕೆ ಸಹಾನುಭೂತಿಯೇ ಶತ್ರು.

‍ಲೇಖಕರು Admin

July 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಎನ್.ವಿ. ವಾಸುದೇವ ಶರ್ಮಾ

    ಸೊಗಸಾಗಿದೆ.
    ಮೈಸೂರಿನ ಶಾರದಾ ವಿಲಾಸ ಕಾಲೇಜಿನಲ್ಲಿ ಪೀಯೂಸಿ ಓದುತ್ತಿದ್ದಾಗ ನಟರಾಜ್ ಅನ್ನುವ ಕನ್ನಡದ ಮೇಷ್ಟ್ರು ಇದ್ದರು. (ನಾನು ಸಂಸ್ಕ್ರತ ವಿದ್ಯಾರ್ಥಿ). ನಾವೊಂದಷ್ಟು ಜನ ಅವರೊಂದಿಗೆ ಕತೆ, ಕವನ ಹರಟಲು ಅವಕಾಶ, ಸಮಯ ಕೊಡುತ್ತಿದ್ದರು. ನಿಮಗೆ ವೈಎನ್ಕೆಯವರು ಹೇಳಿದಂತೆಯೇ ನಟರಾಜ್ ನಮಗೂ ಹೇಳಿದ್ದರು. ಬರೆಯಿರಿ. ಬರೆದುದು ಮಹತ್ತರ ಅಂತ ಬೀಗಬೇಡಿ. ಬೇರೆಯವರಿಗೆ ಓದಲು ಕೊಡಿ. ಅವರ ಅಭಿಪ್ರಾಯ ತೆಗೆದುಕೊಳ್ಳಿ. ಪ್ರಕಟವಾಗಲಿಲ್ಲ ಅಂತ ಅಳಬೇಡಿ. ಮತ್ತೆ ಬರೆಯುವುದ ನಿಲ್ಲಿಸಬೇಡಿ. ಬರೆದುದನ್ನು ಬಿಸಾಡಬೇಡಿ. ಅದು ಎಲ್ಲೋ ಒಂದು ಕಡೆ ಇರಲಿ.
    ಇಂದಿನ ಬರಹ ಇಷ್ಟವಾಯಿತು.

    ಪ್ರತಿಕ್ರಿಯೆ
    • ಜೋಗಿ

      ಮೇಷ್ಟ್ರುಗಳು ಪಿಯೂಸಿಯಲ್ಲಿ ನಮ್ಮನ್ನು ರೂಪಿಸಿದಷ್ಟು ಸೊಗಸಾಗಿ ಮತ್ಯಾರೂ ರೂಪಿಸಲಾರರು ಅಂತ ನನ್ನ ಅಭಿಪ್ರಾಯ. ನನ್ನ ಓದು ಕೂಡ ಬದಲಾದದ್ದು ಪಿಯೂಸಿಯಿಂದಲೇ.

      ಪ್ರತಿಕ್ರಿಯೆ
  2. ಲಲಿತಾ ಸಿದ್ಧಬಸವಯ್ಯ

    Exactly,,,,, we have to kill our babies mercilessly

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: