ಜಾಂಬವನ ಗುಹೆಯೂ.. ಶಮಂತಕ ಮಣಿಯೂ..

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ. ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಪುರಾಣದ ಕಥೆಗಳಲ್ಲಿ ಆಸಕ್ತಿ ಇರುವವರಿಗೆ, ಕರಾವಳಿಯ ಮಂದಿಗೆ, ಮುಖ್ಯವಾಗಿ ಯಕ್ಷಗಾನದ ಹುಚ್ಚಿರುವವರಿಗೆ ಶಮಂತಕ ಮಣಿಯ ಕಥೆ ಹೊಸತಲ್ಲ. ಯಕ್ಷಗಾನದ ಬಹು ಪ್ರಸಿದ್ಧ ಪ್ರಸಂಗವಿದು. ಕರಾವಳಿಯಲ್ಲಿ ವರ್ಷದಲ್ಲಿ ಕನಿಷ್ಟ ಒಂದೆರಡಾದರೂ ಜಾಂಬವತೀ ಕಲ್ಯಾಣ, ಶಮಂತಕ ಮಣಿ ಪ್ರಸಂಗ ನಡೆಯದಿದ್ದರೆ ಕೇಳಿ! ಹಾಗಾಗಿ ಇದು ಆ ಕರಾವಳಿಯದ್ದೇ ಕಥೆಯೇನೋ ಎಂಬ ಹಾಗೆ ಬಾಲ್ಯದ ನೆನಪಿನೊಂದಿಗೆ ಸೇರಿಹೋಗಿದೆ.

ವಿಷ್ಣು ಪುರಾಣ ಹಾಗೂ ಭಾಗವತದಲ್ಲಿ ಬರುವ ಕಥೆಯಿದು. ಮೊದಲು ಸೂರ್ಯನ ಬಳಿಯಿದ್ದ ಅತ್ಯಮೂಲ್ಯ ಮಣಿ ಈ ಶಮಂತಕ ಮಣಿ. ಸೂರ್ಯ ಇದನ್ನು ತನ್ನ ಕತ್ತಿನ ಸುತ್ತ ಕಟ್ಟಿಕೊಳ್ಳುತ್ತಿದ್ದನಂತೆ. ಈ ಮಣಿ ಯಾರ ಬಳಿಯಿರುತ್ತದೋ ಅವರಿಗೆ ಎಂದಿಗೂ ಭೂಕಂಪ, ನೆರೆ, ಬರ ಮುಂತಾದ ಕಷ್ಟದ ಪರಿಸ್ಥಿತಿ ಬರುವುದಿಲ್ಲ ಎಂದೂ, ಯಾವಾಗಲೂ ಆತನಿಗೆ ಸಂಪತ್ತಿಗೂ ಬರ ಬರುವುದಿಲ್ಲ ಎಂಬುದು ನಂಬಿಕೆ. ಇಂಥ ಮಣಿಯಿಂದಾಗಿಯೇ ಸೂರ್ಯನಿಗೆ ಆ ಹೊಳಪು ಎಂಬುದು ಪುರಾಣದಲ್ಲಿ ಉಲ್ಲೇಖ. ಅದೆಲ್ಲ ಹಾಗಿರಲಿ.

ಈಗ ಕಥೆ ಏನೆಂದರೆ, ಸತ್ರಜಿತ ಎಂಬ ಯಾದವ ಸೂರ್ಯಭಕ್ತ ಸಮುದ್ರ ತೀರದಲ್ಲಿ ವಿಹರಿಸುತ್ತಿದ್ದಾಗ ಆತನ ಎದುರು ಸೂರ್ಯನೇ ಅಚಾನಕ್ಕಾಗಿ ಪ್ರತ್ಯಕ್ಷನಾಗಿಬಿಟ್ಟನಂತೆ. ಈ ಹೊಳೆವ ಮಣಿಯನ್ನು ಧರಿಸಿದ್ದ ಸೂರ್ಯನ ಪ್ರಕಾಶಕ್ಕೆ ಕಣ್ಣು ಬಿಟ್ಟು ಆತನನ್ನೊಮ್ಮೆ ನೋಡಲಾಗುತ್ತಿಲ್ಲ ಎಂದು ಸತ್ರಜಿತ ಹೇಳಿಕೊಂಡಾಗ, ಸೂರ್ಯ ತನ್ನ ಕತ್ತಿನ ಮಣಿಯನ್ನು ತೆಗೆದು ದರ್ಶನ ನೀಡಿದ. ಭಕ್ತಿಗೆ ಮೆಚ್ಚಿ ವರ ನೀಡುವೆನೆಂದಾಗ ಸತ್ರಜಿತ ಆ ಮಣಿಯನ್ನೇ ವರವಾಗಿ ಕೇಳಿ, ಮಣಿ ಪಡೆದು ಊರಲ್ಲೆಲ್ಲ ಮೆರೆಯುತ್ತಿರಬೇಕಾದರೆ, ಶ್ರೀಕೃಷ್ಣನೂ ಈ ಮಣಿಯನ್ನು ನೋಡಿ, ಅದನ್ನು ಯಾದವರ ನಾಯಕ ಉಗ್ರಸೇನನಿಗೆ ಒಪ್ಪಿಸಲು ಸಲಹೆ ಕೊಟ್ಟನಂತೆ. ಆದರೂ ಮಣಿ ಮಾತ್ರ ಯಾರಿಗೂ ಕೊಡದೆ, ಅದನ್ನು ತನ್ನ ಬಳಿ ಕಾಪಾಡಿಕೊಂಡು ಬರುತ್ತಾನೆ ಸತ್ರಜಿತ.

ಒಂದು ದಿನ ತನ್ನ ಸಹೋದರ ಪ್ರಸೇನ ಆಸೆಪಟ್ಟನೆಂದು ಆತ ಧರಿಸಿಕೊಳ್ಳಲು ಕೊಟ್ಟುಬಿಡುತ್ತಾನೆ. ಇದನ್ನು ಧರಿಸಿಕೊಂಡು ಬೇಟೆಗೆ ಕಾಡಿಗೆಂದು ಹೋದ ಪ್ರಸೇನನನ್ನು ಸಿಂಹವೊಂದು ಅಟ್ಟಿಸಿಕೊಂಡು ಬಂದು ತಿಂದು ಹಾಕಿ ಬಿಡುತ್ತದೆ. ಪ್ರಸೇನನ ಬಳಿಯಿದ್ದ ಮಣಿಯೂ ಸಿಂಹದ ಹೊಟ್ಟೆ ಸೇರುತ್ತದೆ. ಸಿಂಹವನ್ನು ಆಕ್ರಮಣ ಮಾಡಿದ ಜಾಂಬವಂತನೆಂಬ ಕರಡಿ, ಸಿಂಹವನ್ನು ಕೊಂದು ಮಣಿಯನ್ನು ತನ್ನದಾಗಿಸಿಕೊಂಡಿರುತ್ತದೆ.

ಇತ್ತ, ಬೇಟೆಗೆ ಹೋಗಿದ್ದ ಪ್ರಸೇನ ಕಾಣೆಯಾಗಿದ್ದು ನೋಡಿ ಸತ್ರಜಿತನಿಗೆ ಕೃಷ್ಣನ ಮೇಲೆ ಅನುಮಾನ ಬರುತ್ತದೆ. ಮೊದಲೇ ಮಣಿಯ ಮೇಲೆ ಕಣ್ಣಿಟ್ಟಿದ್ದ ಕೃಷ್ಣನ ಕೈವಾಡ ಇದರಲ್ಲಿ ಇದೆ ಎಂದು ಲೆಕ್ಕಾಚಾರ ಹಾಕಿ ಕೃಷ್ಣನೇ ಪ್ರಸೇನನನ್ನು ಕೊಂದು ಮಣಿಯನ್ನು ಅಪಹರಿಸಿದ್ದಾನೆ ಎಂದು ದೂರುತ್ತಾನೆ. ಇದ್ಯಾವುದೂ ತನಗೆ ಸಂಬಂಧ ಪಟ್ಟಿದ್ದಲ್ಲವಾದ ಕಾರಣ ಹಾಗೂ ತನಗೆ ಬಂದ ಅಪಚಾರವನ್ನು ತೊಡೆದುಹಾಕಲು ಕೃಷ್ಣ ಶಮಂತಕ ಮಣಿಯ ಅನ್ವೇಷಣೆಯಲ್ಲಿ ಬಲರಾಮನ ಜೊತೆಗೆ ಕಾಡಿಗೆ ತೆರಳುತ್ತಾನೆ.

ಒಂದೆಡೆ ಕಾಡಿನಲ್ಲಿ ಪ್ರಸೇನನ ಅಶ್ವ, ಆತನ ಅಳಿದುಳಿದ ಕಳೇಬರ, ನೋಡಿ ಈತನನ್ನು ಸಿಂಹವೇ ಮಣಿಸಿದೆ ಎಂದು ಸಿಂಹದ ಹಾದಿ ಹಿಡಿದು, ಸಿಂಹದ ಕಳೇಬರ ಸಿಕ್ಕಿ, ಇದನ್ನು ಕರಡಿಯೇ ಮಾಡಿದೆಯೆಂದು ಕರಡಿಯ ಜಾಡು ಹಿಡಿದು ಕೃಷ್ಣ ಕೊನೆಗೆ ಜಾಂಬವಂತನ ಗುಹೆಯ ಬಳಿ ಬರುತ್ತಾನೆ. ಇಲ್ಲಿ ಜಾಂಬವಂತನಿಗೂ ಕೃಷ್ಣನಿಗೂ ಘನಘೋರ ಯುದ್ಧ ನಡೆಯುತ್ತದೆ. ೨೮ ದಿನಗಳ ಕಾಲ ರಾತ್ರಿ ಹಗಲು ನಡೆದ ಯುದ್ಧವದು. ಅತ್ಯಂತ ಶಕ್ತಿಶಾಲಿಯಾದ ತನಗೇ ಸುಸ್ತು ಹೊಡೆಸಿದ ಈತ ಯಾರು ಎಂದು ಚಿರಂಜೀವಿಯಾದ ಜಾಂಬವಂತನಿಗೆ ಆಶ್ಚರ್ಯವಾಗಿ ಕೊನೆಗೆ ಈತ ಶ್ರೀಕೃಷ್ಣ, ತ್ರೇತಾಯುಗದಲ್ಲಿ ತನ್ನೊಡೆಯನಾಗಿದ್ದ ಶ್ರೀರಾಮಚಂದ್ರನೇ ಈತ ಎಂದು ಅರಿವಾಗುತ್ತದೆ. ಕೃಷ್ಣನಿಗೆ ಶರಣಾಗಿ ಮಣಿ ಒಪ್ಪಿಸಿ, ಜೊತೆಗೆ ತನ್ನ ಮಗಳು ಜಾಂಬವತಿಯನ್ನು ಕೃಷ್ಣನಿಗೆ ಮದುವೆ ಮಾಡಿಸುತ್ತಾನೆ.  ಕೃಷ್ಣ ಮತ್ತು ಜಾಂಬವತಿಗೆ ಆರತಿ ಬೆಳಗುವ  ಮೂಲಕ ಮಂಗಳಂ… ಎಂದು ಯಕ್ಷಗಾನ ಮುಗಿಯುತ್ತದೆ. ಅಷ್ಟೂ ಹೊತ್ತು ಕಣ್ಣು ಕೀಳದೆ ನೋಡುತ್ತಿದ್ದ ಪ್ರೇಕ್ಷಕರು ಮೈಮುರಿದು ಆಕಳಿಸಿ ಆಸನ ಬಿಟ್ಟೇಳುತ್ತಾರೆ.

ಈಗ ಈ ಕಥೆ ಇಲ್ಲಿ ಹೇಳಲು ಕಾರಣವೂ ಇದೆ. ಇಂತಹ ಶಮಂತಕ ಮಣಿ, ಜಾಂಬವಂತ- ಕೃಷ್ಣರ ಕಾಳಗ ನಡೆದದ್ದು, ಇದೆಲ್ಲವನ್ನು ಹೇಳುವಂಥ ಜಾಗವೊಂದು ಇರಬಹುದೇನೋ ಎಂಬ ಯೋಚನೆಯೂ ಈ ಪ್ರಸಂಗ ನೋಡುವಾಗ ಒಮ್ಮೆಯೂ ಬಂದಿರಲಿಲ್ಲ. ಕೆಲ ಸಮಯದ ಹಿಂದೆ ದ್ವಾರಕೆಗೆ ಹೋಗಿದ್ದಾಗ, ಹೊರಡುವ ಹೊತ್ತಲ್ಲಿ ಸಿಕ್ಕ ದಾರಿ ಹೇಳಿದವರೊಬ್ಬರು, ನೀವು ಪೋರಬಂದರಿನ ದಾರಿಯಾಗಿ ಹೋಗುವವರಿದ್ದರೆ, ಜಾಂಬವಂತನ ಗುಹೆ ನೋಡಲು ಮಾತ್ರ ಮರೀಬೇಡಿ ಎಂದು ಸಲಹೆ ಕೊಟ್ಟಿದ್ದರು.

ಜಾಂಬವನ ಗುಹೆ ಎಂದಾಗ ಕಿವಿ ನೆಟ್ಟಗಾಗಿದ್ದರೂ, ಅಂಥದ್ದೊಂದು ಕಥೆಗೆ ಜಾಗ ಇದ್ದರೆ ಅದು ನಮ್ಮ ಬಕಾಸುರನ ಗುಹೆಯಂತೆ ಇರಬಹುದೇನೋ ಎಂದು ನಾನು ನಕ್ಕುಬಿಟ್ಟಿದ್ದೆ. ಹೀಗೆ ಅಂದುಕೊಳ್ಳಲು ಕಾರಣವೂ ಇದೆ. ವಿಟ್ಲದಲ್ಲೇ ಹುಟ್ಟಿ ಬೆಳೆದ ನಮಗೆಲ್ಲ ವಿಟ್ಲದ ಪಂಚಲಿಂಗೇಶ್ವರನನ್ನು ಪಾಂಡವರೇ ಸ್ಥಾಪಿಸಿದ್ದೆಂದೂ, ಇಲ್ಲಿ ಪಾಂಡವರು ಅಜ್ಞಾತವಾಸದಲ್ಲಿದ್ದಾಗ ಬ್ರಾಹ್ಮಣರೊಬ್ಬರ ಮನೆಯಲ್ಲಿ ತಂಗಿದ್ದರೆಂದೂ, ಮಹಾಭಾರತದಲ್ಲಿ ಬರುವ ಏಕಚಕ್ರನಗರ ನಮ್ಮ ವಿಟ್ಲವೇ ಆಗಿತ್ತೆಂದೂ, ವಿಟ್ಲಕ್ಕೆ ಅಂಟಿಕೊಂಡಂತೆ ಇರುವ ಕಳಂಜಿಮನೆ ಕಾಡಲ್ಲೇ ಬಕಾಸುರನಿದ್ದದ್ದೆಂದೂ, ಆತನನ್ನು ಮುಗಿಸಲು ಭೀಮ ಹೋಗಿದ್ದು ಇದೇ ಕಾಡಿಗೆ ಎಂದೂ, ಈಗಲೂ ಕಾಡೊಳಗೆ ಬಕಾಸುರನಿದ್ದ ಗುಹೆ ಇದೆ ಎಂದೂ ನಂಬಿಕೊಂಡು ಬಂದ ನಂಬಿಕೆ.

ಹೀಗೆ ಸಣ್ಣವರಿದ್ದಾಗಿಂದ ಕೇಳಿಕೊಂಡು ಬಂದ ನಮ್ಮೂರ ಕಥೆಯಿಂದ ಉತ್ತೇಜಿತಳಾಗಿ, ಬಕಾಸುರನ ಗುಹೆ ಮಾತ್ರ ನೋಡಲೇಬೇಕೆಂದು ಕಾಡೊಳಗೆ ಹೋಗಿ, ಒಂದು ಪುಟಾಣಿ ಗುಹೆಯೆಂದು ಹೇಳಬಹುದಾದ ಗುಂಡಿಯನ್ನು ನೋಡಿ ನಿರಾಸೆಯಾಗಿತ್ತಾದರೂ, ಏಕಚಕ್ರನಗರ ಎಂದರೆ ನನ್ನ ವಿಟ್ಲವೇ ಎಂಬುದೊಂದು ಭಾವ ಈಗಲೂ. ಆಮೇಲೆ, ಅಲ್ಲಿಲ್ಲಿ ಓದಿ ಏಕಚಕ್ರನಗರ ಬಹುಶಃ ಉತ್ತರಪ್ರದೇಶದ ಪ್ರತಾಪಘಡ ಇರಬಹುದು, ಅಥವಾ, ಪಶ್ಚಿಮ ಬಂಗಾಳದ ಭೀಮಘಡ, ಕರ್ನಾಟಕದ ಕೈವಾರ ಹೀಗೆ ಹಲವಾರು ಲೆಕ್ಕಾಚಾರಗಳನ್ನು ಆಮೇಲೆ ಕೇಳಿದರೂ, ಬಾಲ್ಯದಲ್ಲಿ ತಲೆಯೊಳಗೆ ಹೊಕ್ಕ ನಮ್ಮೂರೇ ಏಕಚಕ್ರನಗರ ಎಂಬುದೊಂದು  ಕಥೆ ಮಾತ್ರ ತಲೆಯಿಂದ ಹೋಗಿಲ್ಲ.

ಇರಲಿ, ಹೇಗೂ ಪೋರಬಂದರ್‌ ದಾರಿಯಲ್ಲೇ ಹೋಗೋದು, ಇದನ್ನೂ ನೋಡಿಕೊಂಡೇ ಹೋದರಾಯಿತು ಎಂದು ಸುಮ್ಮನೆ ತಲೆಯಾಡಿಸಿ ಹೊರಟವಳಿಗೆ, ಅರೆ, ಇದು ನಿಜವಾಗಿಯೂ ಆಂಧ್ರ ಪ್ರದೇಶದಲ್ಲಿರುವ ಬೆಲುಂ ಗುಹೆಯಂತೆಯೇ ಅನಿಸಿದ್ದು ಸುಳ್ಳಲ್ಲ. ಬೆಲುಂನಷ್ಟು ದೊಡ್ಡದಲ್ಲದಿದ್ದರೂ ಸುಂರಂಗ ಎನ್ನಬಹುದಾದ, ಇಲ್ಲಿ ಯಾರಾದರೂ ಹಿಂದೆ ಇದ್ದಿರಬಹುದಾ, ನಿಜವಾಗಿಯೂ ಇದು ಏನಾಗಿತ್ತು ಎಂಬ ಎಲ್ಲ ಪ್ರಶ್ನೆಗಳನ್ನು ಹುಟ್ಟಿಸಬಲ್ಲಷ್ಟು ಶಕ್ತವಾದ ಗುಹೆಯೆಂಬುದಂತೂ ನಿಜವೇ.

ನಮ್ಮ ಗಾಂಧಿ ಹುಟ್ಟಿದ ಪೋರಬಂದರಿನಿಂದ ೧೭ ಕಿಮೀ ದೂರದಲ್ಲಿರುವ ರಾಣಾವಾವ್‌ ಎಂಬಲ್ಲಿ ಇಂಥದ್ದೊಂದು ಗುಹೆ ಇದೆ. ಒಳಗೆ ಇಳಿಯಲು ಬಹಳ ಇಕ್ಕಟ್ಟಾದ ಕೆಲವು ಮೆಟ್ಟಿಲುಗಳಿವೆಯಾದರೂ, ಒಳಗಿಳಿದ ಮೇಲೆ ಆರಾಮವಾಗಿ ನೂರಾರು ಮಂದಿ ಒಟ್ಟಿಗೆ ನಡೆದು ಹೋಗಬಹುದಾದ ವಿಶಾಲ ಮಾರ್ಗವಿದೆ. ಸ್ವಲ್ಪ ದೂರದಲ್ಲಿ ಗುಹೆ ಅಂತ್ಯವಾದರೂ ಗುಹೆಯ ಎಡ ಹಾಗೂ ಬಲಗಳಿಂದ ಎರಡು ಸುರಂಗ ಮಾರ್ಗಗಳು ಕವಲೊಡೆಯುತ್ತದೆ. ಈ ಎರಡೂ ಮಾರ್ಗಗಳಲ್ಲಿ ತಲೆ ಬಗ್ಗಿಸಿ ಟಾರ್ಚು ಹಿಡಿದು ಸಾಹಸದಿಂದ ಕೊಂಚ ದೂರ ಹೋಗಬಹುದಾದರೂ, ಹೆಚ್ಚು ಹೆಜ್ಜೆ ಮುಂದೆ ಹಾಕಲು ಯಾರಿಗೂ ಧೈರ್ಯ ಬರುವುದಿಲ್ಲ. ಅಲ್ಲೇ ನೇತಾಡಿಕೊಂಡಿರುವ ಬಾವಲಿಗಳೂ ಬಿಡವು. ಆದರೂ, ಇವುಗಳಲ್ಲಿ, ಒಂದು ಮಾರ್ಗವು ೨ ಗಂಟೆಗಳಲ್ಲಿ ಜುನಾಗಢ್‌ ತಲುಪುತ್ತದೆಂದೂ, ಇನ್ನೊಂದು ದ್ವಾರಕೆ ತಲುಪುತ್ತದೆಂದೂ ಹೇಳಲಾಗುತ್ತದೆ.

ಪುರಾತತ್ವ ಇಲಾಖೆಯಿಂದ ಸಂರಕ್ಷಿತವಾದ ಸ್ಥಳ ಇದೆಂದು ಹೇಳಿದರೂ, ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ಹೆಸರಿನಲ್ಲಿ ಕೆಲಸಗಳು ನಡೆದಿವೆಯಾದರೂ, ಅಚ್ಚುಕಟ್ಟುತನ ಇಲ್ಲ. ಪುರಾತತ್ವ ಇಲಾಖೆಯಿಂದ ಸಂರಕ್ಷಿತ ಜಾಗವೆಂದು ಮಾತ್ರ ಹೇಳುವ ಬೋರ್ಡು, ಶಮಂತಕ ಮಣಿಯ ವಿಚಾರ ಬಿಟ್ಟು ಬೇರಾವ ಐತಿಹಾಸಿಕ ಮಾಹಿತಿಯನ್ನೂ ಇಲ್ಲಿ ನೀಡುವುದಿಲ್ಲ. ತೊಟ್ಟಿಕ್ಕುವ ನೀರು, ಕಷ್ಟಪಟ್ಟು ತೆವಳಿಕೊಂಡು ಇಳಿಯಬೇಕಾದ ಮೆಟ್ಟಿಲುಗಳು, ಎಲ್ಲ ಸೇರಿ ಒಂದು ತಂಪು ಸುರಂಗವೊಂದು ನೀಡುವ ಅನುಭವ ಮಾತ್ರ ಚೆಂದವಿದೆ.

ನಾವು ಓದಿ ಕೇಳಿದ ಯಾವುದೇ ಕಥೆಯ ಭೌಗೋಳಿಕ ಹಿನ್ನೆಲೆಯನ್ನು ಕಲ್ಪಿಸಿಕೊಳ್ಳುವುದು ನಮ್ಮ ಅಭ್ಯಾಸ. ಅದು ಇತ್ತೀಚಿನ ಸಾಹಿತ್ಯವೇ ಇರಬಹುದು, ಪುರಾಣವೇ ಇರಬಹುದು. ಇಡೀ ಕಥೆಯನ್ನು ಭೌಗೋಳಿಕ ಕಲ್ಪನೆಯ ಹಿನ್ನೆಲೆಯಲ್ಲಿ ನೋಡಿದಾಗ ಕಥೆ ದಕ್ಕುವ ರೀತಿ ಬೇರೆಯೇ. ಅದೊಂದು ರೋಮಾಂಚನ. ಸತ್ಯವೋ, ಸುಳ್ಳೋ, ಕಪೋಲಕಲ್ಪಿತವೋ… ಎಂಬುದನ್ನೆಲ್ಲ ತಾಳೆ ಮಾಡದೆ, ತಾನೇ ತಾನಾಗಿ ಕಾಣುವ ಕೆಲವೊಂದು ಹೊಂದಾಣಿಕೆಗಳು, ʻಅರೆ, ಹೌದಲ್ಲʼ ಅನಿಸಿ ನೀಡುವ ಆನಂದ ಬೇರೆಯೇ. ಏನೇ ಇರಲಿ, ಹಂಪಿಯ ಶ್ರೀಮಂತ ವಿಜಯನಗರ ಅವಶೇಷಗಳನ್ನು ನೋಡುವುದರ ಜೊತೆಗೆ, ಅಂಜನಾದ್ರಿ ಬೆಟ್ಟವೇ ನಮ್ಮ ಸುಗ್ರೀವನ ಕಿಷ್ಕಿಂದೆ ಎಂದು ಅಲ್ಲಿನ ಪ್ರಸಕ್ತ ವಾನರ ಸಾಮ್ರಾಜ್ಯದ ಹಿನ್ನೆಲೆಯಲ್ಲಿ ನೋಡುವುದು ಕೂಡಾ ಹೇಗೆ ಒಂದು ಬೇರೆಯೇ ಅನುಭವವೋ ಹಾಗೆಯೇ ಇಲ್ಲೂ ಆಗುವುದು ಅದೇ. ಆರ್.‌ ಕೆ. ನಾರಾಯಣರ ಮಾಲ್ಗುಡಿ ಎಂಬ ಕಲ್ಪನೆ ನಮಗೆ ಹಿಡಿಸಿದ ಹುಚ್ಚಿನ ಹಾಗೆ!

‍ಲೇಖಕರು Admin

July 11, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: