ಜೈಲು ವಾಸ ನೀಡಿದ ಸಂಭ್ರಮ

ಗೌರಿ ಲಂಕೇಶ್ ತಮ್ಮ ಪತ್ರಿಕೆಗೆ ಬರೆದ ‘ಕಂಡ ಹಾಗೆ’ ಅಂಕಣ ಸಂಕಲನ ಹೊರಬಂದಿದೆ. ಪ್ರಸ್ತುತ ವಿದ್ಯಮಾನಗಳಿಕೆ ಕನ್ನಡಿ ಹಿಡಿಯುವ ಪುಸ್ತಕ ಅದು. ಬಾಬಾಬುಡನ್ ಗಿರಿ ವಿವಾದದ ಹಿನ್ನೆಲೆಯಲ್ಲಿ ನಡೆದ ಸೌಹಾರ್ದ ಅಂದೋಲನದ ಬಗ್ಗೆ ಬರೆದ ಲೇಖನ ಇಲ್ಲಿದೆ-
-ಗೌರಿ ಲಂಕೇಶ್
g-lankeshಕೋಮು ಸೌಹಾರ್ದ ನಮ್ಮ ಕರ್ಣಾಟಕದ ಸಂಸ್ಕೃತಿ ಮಾತ್ರವಲ್ಲ, ಅದು ಈ ರಾಜ್ಯದ ಬಹುಸಂಖ್ಯಾತ ಜನರ ಆಶಯ ಕೂಡ ಎಂಬುದು ಈಗ ಸಾಬೀತಾಗಿದೆ. ಇಲ್ಲವಾದರೆ ಡಿಸೆಂಬರ್ 7ರ ಭಾನುವಾರ ರಾಜ್ಯದ ಹಲವಾರು ಸಂಘಟನೆಗಳು ಸೇರಿ ಚಿಕ್ಕಮಗಳೂರಿನಲ್ಲಿ ನಡೆಸಿದ ‘ಸೌಹಾರ್ದ ಸಮಾವೇಶ’ಕ್ಕಾಗಲೀ, ಮತ್ತು ಆ ಕಾರಣದಿಂದಾಗಿಯೇ ಜೈಲು ಪಾಲಾಗಿದ್ದಕ್ಕಾಗಲೀ ರಾಜ್ಯದೆಲ್ಲೆಡೆಯಿಂದ ಇಂತಹ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿರಲಿಲ್ಲ.
ಆವತ್ತಿನ ಸಮಾವೇಶ ಮತ್ತು ಆನಂತರದ ಎರಡು ದಿನಗಳ ಜೈಲುವಾಸ ನಾನೆಂದೂ ಮರೆಯಲಾಗದಂತಹ ಅನುಭವವಾಗಿದೆ. ನಮ್ಮ ಸಮಾವೇಶವನ್ನು ತಡೆಗಟ್ಟಿದ ಜಿಲ್ಲಾಡಳಿತ, ನೂರಾರು ಜನರನ್ನು ಅರೆಸ್ಟ್ ಮಾಡಿದಾಗ ನಾವೆಲ್ಲರೂ “ಕಟ್ಟತ್ತೇವ, ನಾವು ಕಟ್ಟತ್ತೇವ, ಒಡೆದ ಮನಸುಗಳ ಕಂಡ ಕನಸುಗಳ ಕಟ್ಟೇ ಕಟ್ಟುತ್ತೇವ” ಎಂದು ಒಕ್ಕೊರಲಿನಲ್ಲಿ ಹಾಡುತ್ತಾ ಬಂಧನಕ್ಕೊಳಗಾಗಿದ್ದು ಎಂತಹ ರೋಮಾಂಚನಕಾರಿ ಕ್ಷಣಗಳಾಗಿದ್ದವು ಎಂದರೆ, ಅದನ್ನು ನೆನೆದರೆ ಇವತ್ತಿಗೂ ನನ್ನ ಕಣ್ಣುಗಳು ಮಸುಕಾಗುತ್ತವೆ.
ಆನಂತರ ನಮ್ಮನ್ನೆಲ್ಲಾ ಕಿಕ್ಕಿರಿದ ಬಸ್ಸುಗಳಲ್ಲಿ ಚಿಕ್ಕಮಗಳೂರಿನ ಹೊಸ ಜೈಲಿಗೆ ಕರೆದೊಯ್ಯುತ್ತಿರುವಾಗಲೂ, ನಾವೆಲ್ಲಾ ಧಿಕ್ಕಾರಗಳನ್ನು ಕೂಗುತ್ತಾ ಕರಪತ್ರಗಳನ್ನು ಕಿಟಕಿಗಳಿಂದ ತೂರುತ್ತಾ, ಬಿಳಿ ಬಾವುಟಗಳನ್ನು ಹಾರಿಸುತ್ತಾ ಸಾಗಿದಾಗ ತುಂಟ ಆಲೋಚನೆಯೊಂದು ನನ್ನ ತಲೆಯಲ್ಲಿ ಸುಳಿಯಿತು. ಅದೇನೆಂದರೆ, ಯಾವ ಸರ್ಕಾರ ನಮ್ಮ ಮೆರವಣಿಗೆಯನ್ನು ನಿರ್ಬಂಧಿಸಿತ್ತೋ ಅದೇ ಸರ್ಕಾರ ಬಸ್ ಗಳಲ್ಲಿ ನಮ್ಮನ್ನು ಹೊತ್ತೊಯ್ಯುವುದರ ಮೂಲಕ ನಮ್ಮ ಮೆರವಣಿಗೆಯನ್ನು ಸ್ವತಃ ತಾನೇ ನೆರವೇರಿಸಿಕೊಟ್ಟಿತ್ತು! ಏಕೆಂದರೆ, ನಮ್ಮ ಬಸ್ ಗಳು ಚಿಕ್ಕಮಗಳೂರಿನ ಮುಖ್ಯ ರಸ್ತೆಗಳನ್ನು ದಾಟಿ ಹೋಯಿತಲ್ಲದೇ, ನಾವೇ ಕಾಲು ನಡಿಗೆಯಲ್ಲಿ ಹೋಗಿದ್ದರೆ ಅಷ್ಟು ಜನರ ಗಮನವನ್ನು ಸೆಳೆಯುತ್ತಿರಲಿಲ್ಲವೇನೊ!
ನಮ್ಮನ್ನು ಕೂಡಿಡಲ್ಪಟ್ಟಿದ್ದ ಜೈಲು ಹೊಸದಾಗಿ ನಿರ್ಮಿಸಲಾಗಿತ್ತು ಎಂಬುದನ್ನು ಬಿಟ್ಟರೆ, ಅಲ್ಲಿ ಯಾವ ಸೌಕರ್ಯವೂ ಇರಲಿಲ್ಲ. ಕೇವಲ 250 ಖೈದಿಗಳಿಗೆಂದು ಕಟ್ಟಲಾಗಿರುವ ಆ ಜೈಲಿಗೆ ಸಾವಿರಕ್ಕೂ ಹೆಚ್ಚಿದ್ದ ನಮ್ಮನ್ನು ಕುರಿಮಂದೆಗಳಂತೆ ದೂಡಲಾಗಿತ್ತು. ಅಲ್ಲಿ ಕುಡಿಯುವ ನೀರಿಗಾಗಲೀ, ಮಹಿಳೆಯರ ಪ್ರೈವೆಸಿಗಾಗಲೀ ಯಾವುದೇ ಸವಲತ್ತುಗಳಿರಲಿಲ್ಲ. ಕುಡಿಯೋ ನೀರಿಗೂ ಧರಣಿ, ಊಟಕ್ಕೂ ಧರಣಿ, ಹಾಸಿಗೆ ಹೊದಿಕೆಗೂ ಧರಣಿ… ಹೀಗೆ ಪ್ರತಿಯೊಂದನ್ನು ಗಲಾಟೆ ಮಾಡಿಯೇ ದಕ್ಕಿಸಿಕೊಳ್ಳಬೇಕಾಯಿತು.
ಕೊನೆಗೂ ಕುಡಿಯುವ ನೀರು ಬಂದದ್ದು “ಸ್ವಚ್ಛ ಚಿಕ್ಕಮಗಳೂರು” ಎಂಬ ಲೇಬಲ್ ಕಸ ಸಂಗ್ರಹಿಸುವ ಬ್ಯಾರಲ್ ಗಳಲ್ಲಿ ; ಸಾವಿರಕ್ಕೂ ಹೆಚ್ಚು ಜನ ಇದ್ದರೂ ಊಟ ಬಂದದ್ದು ಕೇವಲ ಮುನ್ನೂರು ಜನಕ್ಕೆ ಮಾತ್ರ. ಹಾಸಿಗೆ ಕೇಳಿದರೆ ಬಂದದ್ದು ಸಾಧಾರಣ ಜಮಖಾನ ಮತ್ತು ತೆಳುವಾದ ಹೊದಿಕೆಗಳು. ಆದರೇನಂತೆ ಈ ಯಾವ ತೊಡಕುಗಳೂ ನಮ್ಮೆಲ್ಲರ ಆತ್ಮವಿಶ್ವಾಸವನ್ನು ಕುಂದಿಸಲಿಲ್ಲ. ನಮ್ಮ ಹೋರಾಟದ ಬಗ್ಗೆ ನಮ್ಮಲ್ಲಿರುವ ದೃಢ ಸಂಕಲ್ಪವನ್ನು ಕರಗಿಸಲಿಲ್ಲ. ಬದಲಾಗಿ, ಆ ಎರಡು ದಿನಗಳ ಜೈಲುವಾಸ ನಮ್ಮೆಲ್ಲರನ್ನು ಮತ್ತಷ್ಟೂ ಒಂದುಗೂಡಿಸಿತು, ನಮ್ಮ ಹೋರಾಟವನ್ನು ಮುಂದುವರೆಸಲೇಬೇಕು ಎಂದು ಪ್ರೇರೆಪಿಸಿತು. ನಮ್ಮೆಲ್ಲರ ಚೈತನ್ಯವೇ ಮತ್ತೆ ಅರಳುವಂತೆ ಮಾಡಿತು.
ಜೈಲುವಾಸದಿಂದಾಗಿ ನಾನು ಕಷ್ಟಗಳನ್ನು ಎದುರಿಸುತ್ತಿದ್ದೀನಿ ಎಂದು ಆತಂಕದಿಂದ ಫೋನ್ ಮಾಡಿದ ಕೆ. ರಾಮದಾಸ್ ರಿಗೂ, ಭಾನು ಮುಷ್ತಾಕ್ ರವರಿಗೂ ನಾನು: “ಇಲ್ಲ, ಇಲ್ಲಿ ಯಾವುದೇ ಕಷ್ಟವಿಲ್ಲ. ಬದಲಾಗಿ ಇದು ಎಂತಹ ಅದ್ಭುತ ಅನುಭವವಾಗಿದೆ ಎಂದರೆ, ನೀವೂ ಇಲ್ಲಿರಬೇಕಿತ್ತು. ಇಲ್ಲಿನ ಬಗ್ಗೆ ವಿವರಗಳನ್ನು ಕೇಳಿದರೆ ನೀವು ಖಂಡಿತವಾಗಿಯೂ ಹೊಟ್ಟೆಕಿಚ್ಚು ಪಡುತ್ತೀರಿ!” ಅಂದೆ.
ನಿಜಕ್ಕೂ ಆ ಜೈಲು ಒಂದು ಮಿನಿ ಕರ್ನಾಟಕ ದಂತಿತ್ತು. ರಾಜ್ಯದ ಹಲವಾರು ಕಡೆಯಿಂದ ಬಂದಿದ್ದ ಯುವಕ-ಯುವತಿಯರು, ಪ್ರಗತಿಪರರು, ಕಮ್ಯುನಿಸ್ಟರು, ಮುಸ್ಲಿಮರು, ಕಲಾವಿದರು, ಬಂಡಾಯಗಾರರು, ಪತ್ರಕರ್ತರು, ಪ್ರಾಧ್ಯಾಪಕರು, ಮಹಿಳಾ ಹೋರಾಟಗಾರರು, ರೈತ ಸಂಘದವರು, ರಾಜಕಾರಣಿಗಳು ಎಲ್ಲರೂ ಇದ್ದರು.
ತಮಾಷೆಯ ಸಂಗತಿಯೆಂದರೆ, ಭಜರಂಗದಳದ ದತ್ತಜಯಂತಿಯಲ್ಲಿ ಪಾಲ್ಗೊಳ್ಳಬೇಕೆಂದು ಬಂದು ಅದು ಹೇಗೋ ನಮ್ಮವರ ಗಾಡಿಯೊಂದನ್ನು ಹತ್ತಿದ್ದಲ್ಲದೆ, ನಮ್ಮೊಂದಿಗೇ ಜೈಲುಪಾಲಾಗಿದ್ದ ಹಲವು ಕೇಸರಿ ಬಳಗದ ಬೆಂಬಲಿಗರೂ ಇದ್ದರು. ಆದರೆ ಅವರು ನಮ್ಮೊಂದಿಗೆ ಎರಡು ದಿನ ಕಳೆದ ನಂತರ ಆ ಯುವಕರು ಸಂಪೂರ್ಣವಾಗಿ ಸೌಹಾರ್ದತೆಯತ್ತ ಪರಿವರ್ತನೆಗೊಂಡಿದ್ದರು. ಹಾಗೆ ನೋಡಿದರೆ ಕುರಿಮಂದೆಗಳಂತೆ ಎರಡು ದಿನ ವಾಸ ಮಾಡಿದ ನಾವೆಲ್ಲರೂ ಒಬ್ಬರಿಗೊಬ್ಬರು ಅಪರಿಚಿತರೆ. ಆದರೂ ನಮ್ಮ ನಡುವೆ ಎಂತಹ ಒಗ್ಗಟ್ಟಿತ್ತೆಂದರೆ ಆ ಎರಡು ದಿನ ಯಾವುದೇ ಅಹಿತಕರ ಘಟನೆ ಸಂಭವಿಸಲೇ ಇಲ್ಲ.
ನಾನು ಬಂಧನವಾದ ದಿನ ಭಾನುವಾರವಾಗಿದ್ದು ಅಂದೇ ರಾತ್ರಿ ‘ಪತ್ರಿಕೆ’ ಮುದ್ರಣಕ್ಕೆ ಹೋಗಬೇಕಿತ್ತು. ಆಗ ಜೈಲಿನಲ್ಲೇ ನನ್ನ ಅಂಕಣವನ್ನು ಬರೆದರೂ ಅದನ್ನು ಬೆಂಗಳೂರಿಗೆ ಫ್ಯಾಕ್ಸ್ ಮಾಡುವುದು ಅಸಾಧ್ಯವಾಗಿತ್ತು. ಅಷ್ಟೇ ಅಲ್ಲದೆ, ನನಗೆ ಸಹಾಯ ಮಾಡಲೆಂದೇ ಬಂದಿದ್ದ ನಮ್ಮ ಹಾಸನದ ವರದಿಗಾರ ಚಂದ್ರಚೂಡ್ ಕೂಡ ನನ್ನೊಂದಿಗೆ ಜೈಲು ಸೇರಿದ್ದರು. ಪರಿಸ್ಥಿತಿ ಹೀಗಿರುವಾಗ ನನ್ನ ಅಂಕಣವನ್ನು ಮೊಬೈಲ್ ಮೂಲಕವೇ ಓದಿ ಹೇಳಬೇಕಾಯಿತು. ಸಂಜೆ ಸುಮಾರು ಆರು ಗಂಟೆಗೆ ನನ್ನ ಅಂಕಣವನ್ನು ಹೀಗೆ ಫೋನ್ ಮೂಲಕ ಬೆಂಗಳೂರಿಗೆ ತಲುಪಿಸುತ್ತಿರುವಾಗ, ಹಿರಿಯ ಪೊಲೀಸ್ ಅಧಿಕಾರಿ ಸುಭಾಷ್ ಭರಣಿಯವರು ಆಗಮಿಸಿದರು. “ಇವತ್ತು ನಿಮ್ಮ ಸಂಚಿಕೆ ದಿನವಲ್ಲವೇ? ಎಲ್ಲರನ್ನೂ ಇದೇ ರಾತ್ರಿ ಬಿಡುಗಡೆ ಮಾಡುತ್ತೇವೆ. ಬೇಕಿದ್ದರೆ ಈಗಲೇ ನೀವು ಬಿಡುಗಡೆಯಾಗಿ ಹೋಗಬಹುದು” ಎಂದರು.
“ಇವತ್ತು ನನ್ನ ಕಚೇರಿಯೊಂದಿಗೆ ನಾನು ಸಂಪರ್ಕದಲ್ಲಿರುವುದು ಅವಶ್ಯಕ. ಆದರೆ ನನ್ನ ಮೊಬೈಲ್ ಬ್ಯಾಟರಿ ಖಾಲಿಯಾಗಿದೆ. ನಾನು ತಂಗಿದ್ದ ಹೋಟೆಲ್ನಿಂದ ನನ್ನ ಮೊಬೈಲ್ ಛಾರ್ಜರ್ ತರುವಂತೆ ಅವಕಾಶ ಮಾಡಿಕೊಟ್ಟರೆ ಸಾಕು” ಎಂದೆ.
ಭರಣಿಯವರು ಒಪ್ಪಿಗೆ ನೀಡಿದ್ದರೂ ಅನಂತರ ನಡೆದ ಘಟನೆಗಳು ಹೇಗಿದ್ದವೆಂದರೆ, ರಾಜ ಆಹ್ವಾನಿಸಿದರೂ ದ್ವಾರಪಾಲಕ ತಡೆಯೊಡ್ಡಿದಂತಿತ್ತು. ಭರಣಿಯವರು ಹೊರಟ ನಂತರ, ಜೈಲಿನ ಕಾವಲಿಗಿದ್ದ ಪೊಲೀಸರು ಯಾವ ಕಾರಣಕ್ಕೂ ನನ್ನ ಮೊಬೈಲ್ ಛಾರ್ಜರ್ ತರಿಸುವುದಕ್ಕೆ ನಿರಾಕರಿಸಿದರು. ಬದಲಾಗಿ “ನೀವು ಬಿಡುಗಡೆಯಾಗಿ ಹೋಗಬಹುದು, ಜೈಲಿಗೆ ಹಿಂದಿರುಗುವಂತಿಲ್ಲ” ಎಂದು ಷರತ್ತು ಹಾಕಿದರು. ಎಐವೈಎಫ್ ಮತ್ತು ಕೋಮು ಸೌಹಾರ್ದ ವೇದಿಕೆಯ ಹುಡುಗರು ನಾನು ಹೋಗಬೇಕೆಂದು ಹೇಳಿದರೂ, ಎಲ್ಲರ ಬಿಡುಗಡೆಯಾಗುವವತೆಗೂ ನಾನು ಹೋಗುವುದಿಲ್ಲ ಎಂದು ಹಠ ಹಿಡಿದೆ.
ನನ್ನ ಪರಿಸ್ಥಿತಿ ಮತ್ತು ಅವಶ್ಯಕತೆಯನ್ನು ಅರ್ಥಮಾಡಿಕೊಂಡ ಭರಣಿಯವರೇ ವೈರ್ ಲೆಸ್ ಮೂಲಕ ಪೊಲೀಸರಿಗೆ ಆದೇಶ ನೀಡಿ ಹೋಟೆಲ್ ನಿಂದ ನನ್ನ ಸೂಟ್ ಕೇಸ್ ತರುವಂತೆ ವ್ಯವಸ್ಥೆ ಮಾಡಿದರು. ಜೈಲಿನಲ್ಲಿ ಸುಮಾರು ನೂರಕ್ಕೂ ಹೆಚ್ಚು ಮೊಬೈಲುಗಳಿದ್ದವು. ಇವುಗಳನ್ನು ಚಾರ್ಜ್ ಮಾಡಿ ಹೊರಗಿನವರೊಂದಿಗೆ ಸಂಪರ್ಕದಲ್ಲಿದ್ದೇವೆಂಬ ಏಕೈಕ ಕಾರಣಕ್ಕೆ ಮರುದಿನ ಜೈಲಿನ ಉಸ್ತುವಾರಿ ಹೊತ್ತಿದ್ದ ಪೊಲೀಸರು ವಿದ್ಯುತ್ ಸಂಪರ್ಕವನ್ನೇ ಕಡಿದರು.
ಪೊಲೀಸಿನವರ ಇಂತಹ ಕಪಟತನದ ವಿರುದ್ಧ ನಮ್ಮೆಲ್ಲರ ಸಹಾಯಕ್ಕೆ ನಿಂತವರು ಚಿಕ್ಕಮಗಳೂರಿನ ಮುಸ್ಲಿಂ ಸಮುದಾಯದವರು. ಸೂಫಿ ಸಂಸ್ಕೃತಿಯ ಬಾಬಾಬುಡನ್ ದರ್ಗಾ ಬಗ್ಗೆ ಚಿಕ್ಕಮಗಳೂರಿನ ಮುಸ್ಲಿಮರಿಗೆ ಹೇಳಿಕೊಳ್ಳುವಷ್ಟು ನಂಟೇನಿಲ್ಲ. ಆದ್ದರಿಂದಲೇ ಅವರೆಲ್ಲಾ ” ಈ ವಿವಾದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ” ಎಂಬ ನಿಲುವನ್ನು ತಾಳಿದ್ದರು.
ಆದರೆ, ಇತ್ತೀಚಿನ ವರ್ಷಗಳಲ್ಲಿ ಕೇಸರಿ ಬಳಗದ ಅಟ್ಟಹಾಸವನ್ನು ಕಂಡು ಚಿಕ್ಕಮಗಳೂರಿನಲ್ಲಿ ಕೋಮು ಗಲಭೆಗಳಾದರೆ ತಾವೇ ಬಲಿಪಶುಗಳಾಗುತ್ತೇವೆ ಎಂಬುದನ್ನು ಅಲ್ಲಿನ ಮುಸ್ಲಿಮರು ಅರಿತಿದ್ದಾರೆ. ಹಾಗಾಗಿಯೇ ಚಿಕ್ಕಮಗಳೂರಿನ ಕೋಮು ಸೌಹಾರ್ದತೆಯನ್ನು ಕಾಪಾಡಲು ಈಗ ಕಾರ್ಯೋನ್ಮುಖರಾಗಿದ್ದಾರೆ.
ನಮ್ಮ ಸಮಾವೇಶ ಜರುಗುವ ಹಿಂದಿನ ದಿನವೇ ಚಿಕ್ಕಮಗಳೂರಿನ ಎಲ್ಲಾ ಮಸಿದೀಗಳಲ್ಲಿ ” ಪ್ರಗತಿಪರರ ಸೌಹಾರ್ದ ಸಮಾವೇಶ ಯಶಸ್ವಿಯಾಗಲಿ” ಎಂಬ ಪ್ರಾರ್ಥನೆ ಸಲ್ಲಿಸಿದ್ದರು. ಹಾಗೆಯೇ ಒಂದು ಸಾವಿರ ಜನ ಬಂಧಿತರಾಗುತ್ತಿದ್ದಂತೆ, ಮುಸ್ಲಿಂ ಸಮುದಾಯದ ಮುಖಂಡರೆಲ್ಲಾ ಸೇರಿ, ನಮ್ಮ ತಿಂಡಿ ಊಟಕ್ಕೆಂದೇ ನಲವತ್ತು ಸಾವಿರ ರೂಪಾಯಿಗಳನ್ನು ಎಲ್ಲರಿಂದ ಸಂಗ್ರಹಿಸಿದರು. ಸರ್ಕಾರ ನಮಗೆ ಕಸದ ಬುಟ್ಟಿಯಲ್ಲಿ ಕುಡಿಯುವ ನೀರು ಕೊಟ್ಟರೆ ಮುಸ್ಲಿಂ ಸಮುದಾಯ ನಮಗೆ ಬಿಸ್ಲೆರಿ ಬಾಟಲ್ ಗಳನ್ನೂ ಕೊಟ್ಟಿತು. ಸರ್ಕಾರ ನೀಡಿದ ಊಟ ಸಾಲದಿದ್ದಾಗ, ಅವರೇ ಎಲ್ಲರಿಗೂ ಸಾಕಾಗಿ ಮಿಕ್ಕುವಷ್ಟು ಆಹಾರ ಸರಬರಾಜು ಮಾಡಿದರು.
ಕೊರೆಯುವ ಚಳಿ ಇದ್ದುದರಿಂದ ನೂರಾರು ಸ್ವೆಟರ್ ಗಳನ್ನೂ ನೀಡಿದರು. ಕಾಫಿ-ಟೀ ಮಾತ್ರವಲ್ಲದೇ ಸಿಗರೇಟು, ಬೀಡಿಗಳನ್ನು ಹಂಚಿದರು. ನಮಗೆ ಯಾವುದಾದರೂ ಅವಶ್ಯಕತೆ ಇದ್ದರೆ ಅದನ್ನು ಪೂರೈಸಲೆಂದೇ ಜೈಲಿನ ಗೇಟಿನ ಹೊರಗೆ ಹತ್ತಾರು ಮುಸ್ಲಿಂ ಯುವಕರು ಕಾದಿರುತ್ತಿದ್ದರು. ಇವರೆಲ್ಲರ ನಾಯಕತ್ವವನ್ನು ವಹಿಸಿದ್ದ ಯೂಸುಫ್ ಹಾಜಿಯವರಿಗೆ ನಾವು ಚಿರಋಣಿಗಳು.
ಹಾಗೆಯೇ ಹಿಂದಿನ ರಾತ್ರಿ ನಾವು ತಂಗಿದ್ದ ಎಂ. ಜಿ. ರೆಸಾರ್ಟ್ ನ ಸೈಯದ್ ಮಹತಾಬ್ ಅಹ್ಮದ್ ಮತ್ತು ಫರೂಕ್ ರವರೂ ತಮ್ಮ ಶಕ್ತಿ ಮೀರಿ ಸಹಕರಿಸಿದರು. ಸೊಗಸಾದ ಟೀ, ಅವಶ್ಯಕವಾದ ಸಿಗರೇಟು, ಚಾರ್ಜ್ ಆಗಿದ್ದ ಮೊಬೈಲ್ ಸೆಟ್, ಎಲ್ಲವನ್ನೂ ನೀಡಿ ನಮ್ಮ ಜೈಲುವಾಸ ಸುಗಮವಾಗಿರುವಂತೆ ನೋಡಿಕೊಂಡಿದ್ದಕ್ಕೆ ಅವರಿಬ್ಬರಿಗೂ ಧನ್ಯವಾದಗಳು. ಕಾರಾಗೃಹದ ಬಂಧನದಲ್ಲಿದ್ದರೂ ಹಾಡು, ನೃತ್ಯ, ಚರ್ಚೆಗಳಲ್ಲಿ ತಲ್ಲೀನರಾಗಿದ್ದ ನಮಗೆ ಆ ಎರಡು ದಿನಗಳು ಹೇಗೆ ಜರುಗಿದವೆಂದೇ ಗೊತ್ತಾಗಲಿಲ್ಲ. ನಾನು ತೆಗೆದುಕೊಂಡು ಹೋಗಿದ್ದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಸ್ ನ ಹೊಸದಾಗಿ ಬಿಡುಗಡೆಯಾಗಿರುವ ಆತ್ಮ ಚರಿತ್ರೆಯ ಒಂದೇ ಒಂದು ಪುಟವನ್ನೂ ಓದಲಾಗಲಿಲ್ಲ.
ಜೈಲಿನ ಸೆಲ್ ಒಂದರಲ್ಲಿ ಕೂತು ನಾನು ಅಂಕಣವನ್ನು ಬರೆಯುತ್ತಿದ್ದದ್ದನ್ನು ಕಂಡು ಕಣ್ಣೀರಿಟ್ಟ ಶಿವಮೊಗ್ಗದ ‘ಪತ್ರಿಕೆ’ಯ ಓದುಗ; “ಬಾಬಾ-ದತ್ತ ಏಕ್ ಹೈ” ಎಂದು ನಾವೆಲ್ಲರೂ ಘೋಷಣೆ ಹಾಕುತ್ತಿದ್ದಾಗ “ಲಾರಾ ದತ್ತ್ ಏಕ್ ಹೈ” ಎಂದು ಕೂಗುತ್ತಿದ್ದ ಪುಂಡ; ಮುಂಜಾನೆ ಎಚ್ಚರವಾಗಿದ್ದರೂ ಮುದುಡಿಕೊಂಡು ಮಲಗಿದ್ದಾಗ ಸ್ವಲ್ಪ ದೊಡ್ಡದಾಗಿದ್ದ ನನ್ನ ಸೆಲ್ ಅನ್ನು ಪ್ರವೇಶಿಸಿ ಯಾವುದೇ ಸದ್ದುಗದ್ದಲಗಳಿಲ್ಲದೆ ಮುಸ್ಲಿಂ ಯುವಕರು ನಮಾಜ್ ಸಲ್ಲಿಸಿದ ದೃಶ್ಯ; “ಜಾತಿ ಬಿಡಿ ಮತ ಬಿಡಿ” ಎಂದು ಯಾರೋ ಘೋಷಣೆ ಹಾಕಿದಾಗ “ಅದೆಲ್ಲಾ ಬಿಟ್ಟೇ ಇಲ್ಲಿ ಬಂದಿರೋದು, ಈಗ ಊಟ ಬೇಕು ಅಂತ ಕೂಗಿ” ಎಂದು ಹೇಳಿ ನಗೆಯ ಅಲೆಯನ್ನೇ ಎಬ್ಬಿಸಿದ ಯುವಕ; ಮರುದಿನ ಪರೀಕ್ಷೆ ಇದೆಯೆಂದು ನರಳಿದ ವಿದ್ಯಾರ್ಥಿಗಳ ಅತಂಕ; ಕೇಬಲ್ ಟಿವಿ-ಬಿಸಿನೀರು ಇರುವ ಹಾಸ್ಟೆಲ್ ಗೆ ಹೋಗಿ ಎಂದಾಗ ಆ ಸೌಕರ್ಯಗಳನ್ನು ನಿರಾಕರಿಸಿ ಎಲ್ಲರೊಂದಿಗೇ ಇರುತ್ತೇವೆಂದು ತಮ್ಮದೇ ಪ್ರತ್ಯೇಕವಾದ ಕೋಣೆಯಲ್ಲಿ ಸಜ್ಜುಗೊಳಿಸಿಕೊಂಡ ಯುವತಿಯರು, ತಮ್ಮ ಹುಡುಗ-ಹುಡುಗಿಯರ ಕಷ್ಟಗಳಿಗೆ ಸ್ಪಂದಿಸಿದ ಎಐವೈಎಫ ನ ಸಾತಿ ಸುಂದರೇಶ್-ಬಿರಾದಾರ್ ಮತ್ತು ಕೋಮುಸೌಹಾರ್ದ ವೇದಿಕೆಯ ಕೆ. ಎಲ್. ಅಶೋಕ್-ಅಹೋಬಲಪತಿ; ಎಲ್ಲರಿಗಿಂತಲೂ ಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕರು; ಶಿಸ್ತಿನ ಸಿಪಾಯಿಯಂತೆ ಎಲ್ಲರ ಮೊಬೈಲ್ ಗಳನ್ನು ಚಾರ್ಜ್ ಮಾಡುತ್ತಾ ನಿಂತಿದ್ದ ಯುವಕರು…. ಇವ್ಯಾವುದನ್ನೂ ಮರೆಯಲು ಅಸಾಧ್ಯ.
ಹಾಗೆಯೇ ಆ ಜೈಲಿನ ಅಂಗಳದ ತುಂಬ ಚೆಲ್ಲಿದ್ದ ತಣ್ಣನೆ ಬೆಳದಿಂಗಳು, ಮತ್ತು ಅಲ್ಲಲ್ಲಿ ಬೆಂಕಿ ಹಾಕಿಕೊಂಡು ಚಳಿ ಕಾಯಿಸುತ್ತಾ ರಾತ್ರಿಯೆಲ್ಲಾ ಕುಳಿತಿದ್ದ ಜನರ ಗುಂಪು ಅವಿಸ್ಮರಣೀಯ ದೃಶ್ಯಗಳು….
ಆ ಎರಡು ದಿನ ನಮ್ಮೊಂದಿಗಿದ್ದ ಯುವಕ ಯುವತಿಯರನ್ನು ನೆನೆದಾಗಲಂತೂ ನನ್ನಲ್ಲಿ ಎಷ್ಟು ಸ್ಫೂರ್ತಿ ಚಿಗುರೊಡೆಯುತ್ತದೆ ಎಂದರೆ, ಒಂದು ರೀತಿಯಲ್ಲಿ ಪುನರ್ಜನ್ಮ ಪಡೆದಷ್ಟು ಹುಮ್ಮಸ್ಸು ನನ್ನನ್ನು ತುಂಬಿದೆ. ಅದು ಹೊಸ ಗೆಳೆತನ-ಆತ್ಮೀಯತೆಗಳನ್ನು ಬೆಸೆಯುವ ತಾಣವಾಗಿತ್ತು. ನಿಜವಾದ ಅರ್ಥದಲ್ಲಿ ಅದೊಂದು ಸೌಹಾರ್ದ ಸಮಾವೇಶವೇ ಆಗಿತ್ತು. ಇದು ಕೇವಲ ನನ್ನೊಬ್ಬಳದೇ ಭಾವನೆಯಲ್ಲ, ಜೈಲಿನಲ್ಲಿದ್ದ ನೂರಾರು ಜನರ ಅನುಭವವೂ ಇದೇ ಆಗಿದೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ.
ನನ್ನನ್ನು ಪೊಲೀಸರು ಜೈಲಿನಲ್ಲಿಟ್ಟಿದ್ದಾರೆ ಎಂದು ನನ್ನ ಮೂರು ವರ್ಷದ ಅಳಿಯ ಸಮರ್ಜಿತ್ ಗೆ ಗೊತ್ತಾದಾಗ ಆ ಪುಟ್ಟ ಮಗು ಎಷ್ಟು ದುಗುಡಗೊಂಡನೆಂದರೆ ಆತನನ್ನು ಸುಧಾರಿಸಲು ಅಮ್ಮನಿಗೆ ಅರ್ಧ ಗಂಟೆಯೇ ಬೇಕಾಯಿತು. ಇನ್ನೂ ಯಾವುದೇ ಬೇಧ ಭಾವಗಳನ್ನು ಅರಿಯದಿರುವ ಸಮರ್ ಗೆ ಹೇಗೆ ಬಾಬಾ ಬುಡನ್ ಗಿರಿಯ ವಿವಾದವನ್ನು ವಿವರಿಸಬೇಕು ಎಂದಾಗ ನನ್ನ ಮೊಬೈಲ್ ಸಂಪರ್ಕ ಸಿಗಲಿಲ್ಲ.
ಮರುದಿನ ಮಧ್ಯಾಹ್ನ ನಾನು ಫೋನ್ ನಲ್ಲಿ ಸಿಕ್ಕಾಗ ಸಮರ್ ಒಂದೇ ಸಮನೆ “ಅತ್ತೀ, ನಿನ್ನನ್ನು ಯಾಕೆ ಪೊಲೀಸ್ ಕರಕೊಂಡು ಹೋಗಿದ್ದರು? ಈಗ ಬಿಟ್ಟಿದ್ದಾರಾ? ಯಾವಾಗ ಬರ್ತೀಯಾ? ” ಎಂದೇ ಆತಂಕದಿಂದ ಕೇಳಿದ. ಬೆಂಗಳೂರಿಗೆ ಹಿಂದಿರುಗಿದಾಗ ನಾನು ಜೈಲಿಗೆ ಹೋಗಿದ್ದ ಕಾರಣವನ್ನು ಸಮರ್ ಗೆ ಅರ್ಥವಾಗುವಂತೆ ಹೇಳಿದೆ: ” ಒಂದು ಊರಲ್ಲಿ ದೊಡ್ಡದಾದ ಪಾರ್ಕು ಇದೆ. ಆ ಪಾರ್ಕಿಗೆ ನೀನು, ನಿನ್ನ ಫ್ರೆಂಡ್ ನಯನ್ ಮತ್ತು ಪ್ರದೀಪ್ ಎಲ್ಲರೂ ಹೋಗಿ ಆಟವಾಡಬಹುದು. ಆದರೆ ಆ ಪಾರ್ಕ್ ಹತ್ತಿರ ಒಂದು ದೊಡ್ಡ ಮನೆ ಇದೆ. ಆ ಮನೆ ತುಂಬಾ ಮಕ್ಕಳಿದ್ದಾರೆ. ಅದಕ್ಕೆ ಆ ಮನೆಯವರು “ಇನ್ನು ಮುಂದೆ ಸಮರ್, ನಯನ್ ಯಾರೂ ಈ ಪಾರ್ಕ್ ನಲ್ಲಿ ಆಟ ಆಡಬಾರದು. ಈ ಪಾರ್ಕ್ ನಲ್ಲಿ ನಮ್ಮ ಮನೆ ಮಕ್ಕಳು ಮಾತ್ರ ಆಡ್ತಾರೆ” ಅಂದ್ರು. ನಾನು “ನೀವು ಹೇಳೋದು ಸರಿಯಲ್ಲ. ಈ ಪಾರ್ಕ್ ನಲ್ಲಿ ಎಲ್ಲಾ ಮಕ್ಕಳು ಬಂದು ಆಡಬೇಕು” ಅಂತ ಜಗಳ ಮಾಡಿದೆ. ಅದಕ್ಕೆ ನನ್ನನ್ನು ಪೊಲೀಸರು ಕರಕೊಂಡು ಹೋಗಿದ್ದರು. ನಾನು ಹೇಳಿದ್ದು ಸರೀನೋ, ತಪ್ಪೋ” ಅಂತ ಸಮರ್ ನನ್ನು ಕೇಳಿದೆ.
ಆ ಮುಗ್ಧ ಪುಟಾಣಿಯ ಬಾಯಿಂದ ಬಂದ ಉತ್ತರ: ” ನೀನು ಸರಿಯಾಗೇ ಮಾಡಿದೆ ಅತ್ತಿ!” ನಾನು ಮಾಡಿದ್ದು ಆತನಲ್ಲಿ ಎಷ್ಟು ಹೆಮ್ಮೆ ಮೂಡಿಸಿದೆ ಎಂದರೆ ಈಗ ಎಲ್ಲರ ಹತ್ತಿರವೂ ನಾನು ಜೈಲಿಗೆ ಹೋಗಿದ್ದರ ಬಗ್ಗೆ ಹೇಳುತ್ತಿದ್ದಾನೆ.
ಸಮರ್ ನಂತ ಪುಟಾಣಿಗಳಿಗೂ ಅರ್ಥವಾದದ್ದು “ದೊಡ್ಡ”ವರಿಗೆ ಇನ್ನೂ ಅರ್ಥವಾಗಿಲ್ಲ ಎಂಬುದೇ ದುರಂತ.

‍ಲೇಖಕರು avadhi

April 13, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: