ಜೈಲಿನಲ್ಲಿ ಮಕ್ಕಳು…!

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

|ಕಳೆದ ಸಂಚಿಕೆಯಿಂದ|

ʼಇನ್ನೂ ತುಂಬಾ ನನ್ ತರಹದ ಮಕ್ಕಳಿದ್ದಾರೆ ಸರ್‌ʼ ಬೆಂಗಳೂರಿನ ಪರಪ್ಪನ ಅಗ್ರಹಾರದ ಬಂಧೀಖಾನೆಯಿಂದ ಬಿಡುಗಡೆಯಾಗಿ ಬಂದಿದ್ದ ಆ ಹುಡುಗ ನಮ್ಮೊಡನೆ ಹೇಳಿಕೊಳ್ಳುತ್ತಿದ್ದ.

ಇದಕ್ಕೆ ಕೆಲ ದಿನಗಳ ಹಿಂದಷ್ಟೆ (ಮಾರ್ಚ್‌ ೨೦೦೮) ಬೆಂಗಳೂರು ನಗರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ (District Child Welfare Committee) ನನ್ನ ಸಹವರ್ತಿಗಳಾಗಿದ್ದ ಶ್ರೀಮತಿ ಮೀರಾ ಮಾಧವ, ಶ್ರೀ ಬಸವರಾಜ್‌ ಮತ್ತು ಶ್ರೀಮತಿ ಉಮಾದೇವಿ ಮತ್ತು ಸಮಾಜಕಾರ್ಯದ ಕೆಲವು ವಿದ್ಯಾರ್ಥಿಗಳು ಪರಪ್ಪನ ಅಗ್ರಹಾರದ ಬಂಧೀಖಾನೆಗೆ ಭೇಟಿ ಕೊಟ್ಟು ಬಂದಿದ್ದರು.

ತಮ್ಮ ಮಕ್ಕಳು ಎಲ್ಲಿ ಹೋದರೋ ತಿಳಿಯದು ಎಲ್ಲಿ ಕಳೆದು ಹೋದರೋ ಎಂದು ಮಕ್ಕಳನ್ನು ಹುಡುಕಿಕೊಂಡು ಅಲ್ಲಿ ಇಲ್ಲಿ ಅಲೆಯುವ ಪೋಷಕರು ಸರ್ಕಾರದ ಬಾಲಕರ ಪಾಲನಾ ನಿಲಯಗಳಿಗೂ (Children’s Home) ಭೇಟಿ ಕೊಡುತ್ತಿದ್ದರು. ಅಂತಹವರಲ್ಲಿ ಕೆಲವರು ತಮ್ಮ ಮಕ್ಕಳನ್ನು ಪೊಲೀಸರು ಒಯ್ದರೆಂದು ಕೇಳಿದ್ದೇವೆ ಎಂದೂ ಹೇಳುವುದಿತ್ತು. ಹಾಗಾದರೆ ಬಾಲಕರ ನಿರೀಕ್ಷಣಾ ಗೃಹಕ್ಕೆ (Observation Home) ಹೋಗಿ ಎಂದೂ ಕಳಿಸಿದ್ದುಂಟು. ಇದನ್ನು ಈಗಲೂ ಕೆಲವರು remand home ಎಂದು ತಪ್ಪಾಗಿ ಹೇಳುವುದು ಇದ್ದೇ ಇದೆ. ಅಲ್ಲಿಯೂ ಇಲ್ಲ. ಜೈಲಿನಲ್ಲಿರಬಹುದು ಎಂದು ಯಾರೋ ಪೊಲೀಸರು ಹೇಳಿದರು ಎಂಬ ಮಾಹಿತಿಯನ್ನು ನಮಗೂ ಕೊಟ್ಟಿದ್ದರು.

ನೋಡೇ ಬಿಡೋಣ ಎಂದು ನಾವು ಆಗ್ಗೆ ಕಾರಾಗೃಹಗಳ ಐಜಿಯಾಗಿದ್ದ ಶ್ರೀ ರಮೇಶ್‌ ಅವರಿಗೊಂದು ಪತ್ರ ಬರೆದು ಪರಪ್ಪನ ಅಗ್ರಹಾರದ ಬಂಧೀಖಾನೆಯಲ್ಲಿ ಕ್ವಾರಂಟೈನ್‌ (ಪ್ರತ್ಯೇಕವಾಗಿ) ವಿಭಾಗದಲ್ಲಿರುವವರನ್ನು ಭೇಟಿ ಮಾಡಲು ಅನುಮತಿಗಾಗಿ ಕೋರಿದೆವು. ಅವರಿತ್ತ ಅನುಮತಿಯನ್ನು ಆಧರಿಸಿ ಮಕ್ಕಳ ಕಲ್ಯಾಣ ಸಮಿತಿಯ ನನ್ನ ಸಹವರ್ತಿಗಳು ಬಂಧೀಖಾನೆಗೆ ಹೋಗಿ ಬಂದರು. ಅದೇ ದಿನ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯಿದೆ ಕುರಿತು ಕರ್ನಾಟಕ ನಿಯಮಗಳ ರಚನೆ ಕುರಿತು ಸಭೆ ಇದ್ದ ಕಾರಣ ನನಗೆ ಬಂಧೀಖಾನೆಗೆ ಹೋಗಲಾಗಿರಲಿಲ್ಲ. ಹೀಗೆ ಬಂಧೀಖಾನೆಗೆ ಹೋದ ತಂಡದವರು ವರದಿ ಮಾಡಿದಂತೆ ಅವರು ಆಯ್ಕೆ ಮಾಡಿ ಭೇಟಿಯಾಗಿ ಪಟ್ಟಿ ಮಾಡಿದ ೨೦ ಮಂದಿ ಹುಡುಗರು ತಾವು ೧೮ ವರ್ಷದೊಳಗಿನವರು ಎಂದು ಹೇಳಿಕೊಂಡಿದ್ದರು. ಅದು ಇರಬಹುದು ಎಂದು ಜೈಲಿನ ಅಧಿಕಾರಿಗಳು ಹೇಳಿದ್ದರಂತೆ.

ಈ ಹುಡುಗರನ್ನು ಬಂಧಿಖಾನೆಯಿಂದ ಹೊರತರುವುದು ಹೇಗೆ ಎಂದು ನಾವು ಮಾನವ ಹಕ್ಕುಗಳನ್ನು ಕುರಿತು ಕೆಲಸ ಮಾಡುವ ಸಿಕ್ರಂ ಸಂಸ್ಥೆಯ ಶ್ರೀ ಮಾ‍ಥ್ಯೂ ಫಿಲಿಪ್ಸ್‌ ಅವರೊಡನೆ ಚರ್ಚೆ ಮಾಡಿದೆವು. ಅವರ ಮೂಲಕ ವಿಚಾರ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ (ಎಸ್.ಎಚ್.‌ಆರ್.‌ಸಿ.)‌ ತಲುಪಿತು. ಇದಾದ ಕೆಲವೇ ದಿನಗಳಲ್ಲಿ ಎಸ್.ಎಚ್.‌ಆರ್.‌ಸಿ.ಯ ಪ್ರತಿನಿಧಿಗಳು ಬಂಧೀಖಾನೆಗೆ ಭೇಟಿ ನೀಡಿ ವಿವಿಧ ಆರೋಪಗಳ ಮೇಲೆ ಪೊಲೀಸರು ಮಕ್ಕಳನ್ನು ವಶಕ್ಕೆ ತೆಗೆದುಕೊಂಡು ಬಂಧೀಖಾನೆಯಲ್ಲಿ ವಿಚಾರಣಾಧೀನರಾಗಿ ಕ್ವಾರೆಂಟೈನ್‌ ವಿಭಾಗದಲ್ಲಿ ಇರಿಸಿರುವುದನ್ನು ಕಂಡುಕೊಂಡರು. ಈ ಕುರಿತು ವಿವರಣೆಯನ್ನು ಅಪೇಕ್ಷಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಎಸ್.ಎಚ್.ಆರ್.ಸಿ. ನೊಟೀಸ್‌ ನೀಡಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜೈಲು ಅಧಿಕಾರಿಗಳು, ಪೊಲೀಸ್, ಮಕ್ಕಳ ನ್ಯಾಯ ಮಂಡಳಿ ಮತ್ತು ಮಕ್ಕಳ ಕಲ್ಯಾಣ ಸಮಿತಿಗಳೆಲ್ಲವೂ ಸ್ವತಂತ್ರವಾಗಿ ಮತ್ತು ಜಂಟಿಯಾಗಿ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಲು ಕೆಲಸ ಮಾಡಲು ಸೂಚನೆಯನ್ನೂ ನೀಡಲಾಯಿತು ಎಂದು ನಮಗೆ ತಿಳಿದು ಬಂದಿತು.  

ಇದಾಗಿ ಕೆಲವೇ ದಿನಗಳಲ್ಲಿ ಮಹಿಳೆಯೊಬ್ಬರು ಮಕ್ಕಳ ಕಲ್ಯಾಣ ಸಮಿತಿಗೆ ಬಂದು ತಮ್ಮ ಮಗನನ್ನು, ಅವನು ರಸ್ತೆಯಲ್ಲಿ ಯಾರೊಡನೆಯೋ ಯಾವುದೋ ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದಾಗ ಪೊಲೀಸರು ಒಯ್ದರೆಂದೂ ಅವನೀಗ ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಯಲ್ಲಿ ಇದ್ದಾನೆಂದು ಹೇಳಿದರು. ಮಗನ ವಯಸ್ಸು ೧೮ಕ್ಕಿಂತಾ ಕಡಿಮೆಯೆಂದು ತೋರಿಸಲು ಅವರ ಬಳಿ ಹುಡುಗನ ಶಾಲಾ ಪ್ರಮಾಣಪತ್ರವಿತ್ತು. ಆಕೆ ಅದಾಗಲೇ ಪೊಲೀಸ್‌ ಠಾಣೆಗೆ ಹಲವಾರು ಬಾರಿ ಹೋಗಿ ಬಂದಿದ್ದರು ಮತ್ತು ಯಾರೋ ಹೆಸರಾಂತ ವಕೀಲರು ಈ ಪ್ರಕರಣ ಅಸಾಧ್ಯವೆಂದೂ ಹುಡುಗನನ್ನು ಜಾಮೀನಿನ ಮೇಲೆ ಹೊರತರುವುದು ಅಥವಾ ಬೇರೆ ಕಡೆಗೆ ವರ್ಗಾಯಿಸುವುದು ಸಾಧ್ಯವೇ ಇಲ್ಲವೆಂದು ಹೇಳಿದ್ದರಂತೆ.

ಆಕೆ ಬೆಂಗಳೂರಿನ ಪೊಲೀಸ್‌ ಆಯುಕ್ತರ ಕಛೇರಿಗೆ ಹೋದಾಗ, ಅಲ್ಲಿ ಯಾರೋ ಬೆಂಗಳೂರು ನಗರ ಸಿ.ಡಬ್ಲ್ಯು.ಸಿ. ಸಂಪರ್ಕಿಸಲು ಹೇಳಿದ್ದರಂತೆ. ನಮ್ಮ ತಂಡ ಜೈಲಿಗೆ ಭೇಟಿ ನೀಡಿದ್ದಾಗ ಬರೆದುಕೊಂಡಿದ್ದ ಹುಡುಗರ ಪಟ್ಟಿಯಲ್ಲಿ ಈ ಹುಡುಗನ ಹೆಸರು ಇದೆಯೆ ಎಂದು ಪರಿಶೀಲಿಸಿದರು. ಇಲ್ಲ ಸಿಗಲಿಲ್ಲ. ಅವರನ್ನು ಆಗಿನ ಮಕ್ಕಳ ನ್ಯಾಯ ಮಂಡಳಿಯ ಅಧ್ಯಕ್ಷರನ್ನು ಭೇಟಿ ಮಾಡಲು ಕಳುಹಿಸಿದೆ. ಆದರೆ ಅದು ಫಲ ನೀಡಲಿಲ್ಲ. ನಮ್ಮಲ್ಲಿಗೆ ಆಕೆ ಹಿಂದಿರುಗಿದರು. ಕೊನೆಯ ಪ್ರಯತ್ನವೆಂದುಕೊಂಡು ಆಗ್ಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿಗಳಾಗಿದ್ದ ಶ್ರೀ ತಿಗಡಿಯವರೊಂದಿಗೆ ಮಾತನಾಡಿ ಮನವಿ ಪತ್ರ ಕೊಟ್ಟು ಕಳುಹಿಸಿದೆ. ಒಂದೆರೆಡು ದಿನಗಳಲ್ಲೇ ಬಾಲಕ ಜಾಮೀನಿನ ಮೇಲೆ ಹೊರ ಬಂದ. ಅವನ ತಾಯಿ ನಮ್ಮನ್ನು ಭೇಟಿಯಾಗಲು ಅವನೊಂದಿಗೆ ಬಂದಿದ್ದರು.

ʼಇನ್ನೂ ತುಂಬಾ ನನ್ ತರಹದ ಮಕ್ಕಳಿದ್ದಾರೆ ಸರ್‌. ಅಲ್ಲಿ ಒಳಗೆ ಬ್ಯಾರಕ್‌ ಕಟ್ತಿದ್ದಾರೆ. ಅದರ ಕೆಲಸಕ್ಕೆ ತುಂಬಾ ಹುಡುಗರು ಬೇಕು. ಸೈಜ್ಗಲ್ಲು ಎತ್ತಿ ಕೊಡೋದು. ಸಕತ್‌ ಕೆಲಸ. ಬೇರೆಯವರು ಕೆಲವರು ಕೆಲಸ ಮಾಡ್ತಾರೆ. ಆದ್ರೆ ತುಂಬಾ ಕೆಲಸ ನಮ್ಮ ವಯಸ್ಸಿನ ಹುಡುಗರೇ ಮಾಡೋದು. ಆ ಹುಡುಗ ನೀಡಿದ ಮಾಹಿತಿ ಮನಸ್ಸನ್ನು ಕಲಕಿತು. ಕೆಲವು ದಿನಗಳ ಹಿಂದೆ ಜೈಲಿಗೆ ಭೇಟಿ ಇತ್ತು ಬಂದಿದ್ದ ನನ್ನ ಸಹವರ್ತಿಗಳು ಹುಡುಗ ನೀಡಿದ ವಿವರಣೆಗೆ ಸಹಮತ ನೀಡಿದರು. ನಮ್ಮೆದುರು ಪ್ರಶ್ನೆಗಳು ಮತ್ತು ಉತ್ತರ ಎರಡೂ ಮುಖಾಮುಖಿಯಾಗಿದ್ದವು.  

‘ಯಾವುದೇ ಕಾರಣಕ್ಕೂ ಯಾವುದೇ ಮಗುವನ್ನು ಯಾವುದೇ ಜೈಲಿನಲ್ಲಿ ಇಡಬಾರದು’ ಎಂದು ಮಕ್ಕಳ ನ್ಯಾಯ ಕಾಯ್ದೆ ಸ್ಪಷ್ಟವಾಗಿ ಹೇಳುತಿದ್ದರೂ, ಅದೇಕೆ ಮಕ್ಕಳನ್ನು (೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಕೇಂದ್ರ ಕಾರಾಗೃಹಕ್ಕೆ ಒಯ್ದಿದ್ದಾರೆ? ಯಾರು ಇದಕ್ಕೆ ಕಾರಣ? ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ಪರಿಶೀಲಿಸಲು ಪೊಲೀಸರಿಗೆ ಸೂಕ್ತ ಮಾಹಿತಿ ಅಥವಾ ತರಬೇತಿ ಇಲ್ಲವೇ? ಎಸ್‌ಜೆಪಿಯು (ಮಕ್ಕಳ ವಿಶೇಷ ಪೊಲೀಸ್ ಘಟಕ) ಅಧಿಕಾರಿಗಳು ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುತ್ತಿದೆ ಎಂಬ ಅಂಶವನ್ನು ಗಮನಿಸುತ್ತಿಲ್ಲವೆ? 

ಆಪರಾಧಿಕ ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆಂದು ಹೇಳಲಾದವರನ್ನು ಯಾವುದೇ ನ್ಯಾಯಾಧೀಶರ ಮುಂದೆ ಹಾಜರುಪಡಿಸುವಾಗ ಅವರು ಸಂಬಂಧಪಟ್ಟ ವ್ಯಕ್ತಿಯ ವಯಸ್ಸನ್ನು ಕೇಳುವುದಿಲ್ಲವೆ? ಆ ವ್ಯಕ್ತಿ ಮಗು ಎಂದು ಅರಿವಾದರೆ ಅವರನ್ನು ತಕ್ಷಣವೇ ಮಕ್ಕಳ ನ್ಯಾಯ ಮಂಡಳಿಗೆ ಕರೆದೊಯ್ಯಲು ಪೊಲೀಸರಿಗೆ ನಿರ್ದೇಶಿಸುವುದಿಲ್ಲವೆ? ಜೆಜೆ ಕಾಯ್ದೆಯ ನಿಬಂಧನೆಗಳನ್ನು ಬಳಸಿಕೊಂಡು ಅಂತಹ ಮಕ್ಕಳ ಪೋಷಕರು/ಸಂಬಂಧಿಕರು ಅಥವಾ ವಕೀಲರು ೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ಪ್ರಮಾಣೀಕರಿಸಿದಾಗ ಅವರಿಗೆ ಜಾಮೀನು ಏಕೆ ನೀಡಲಾಗುವುದಿಲ್ಲ? 

ಯಾವುದಾದರೂ ಕಾರಣಗಳಿಂದ ಮಕ್ಕಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಾಗ ಆ ಮಕ್ಕಳ ಪೋಷಕರಿಗೆ ಮೊದಲು ಮಾಹಿತಿ ಕೊಡಬೇಕೆಂದಿದ್ದರೂ ಹಾಗೆ ನಡೆದುಕೊಳ್ಳುತ್ತಿಲ್ಲವೆ? ಅಪ್ರಾಪ್ತ ವಯಸ್ಕರ ಮೇಲಿನ ಶಂಕೆ ಪ್ರಕರಣಗಳಲ್ಲಿ ಅವರನ್ನು ನ್ಯಾಯಾಂಗ ಕಸ್ಟಡಿಗೆ ಕಳುಹಿಸಿದಾಗ, ಮಗುವಿನ ವಯಸ್ಸಿಗೆ ಸಂಬಂಧಿಸಿದಂತೆ ಇದ್ದಿರಬಹುದಾದ ಅನುಮಾನಗಳ ಬಗ್ಗೆ ನ್ಯಾಯಾಂಗಕ್ಕೆ ಜೈಲು ಅಧಿಕಾರಿಗಳು ಏಕೆ ಮುಂದಾಗಿ ತಿಳಿಸುವುದಿಲ್ಲ ಮತ್ತು ಆಗಿರಬಹುದಾದ ತಪ್ಪನ್ನು ಸರಿಪಡಿಸಲು ಕ್ರಮಗಳನ್ನು ಏಕೆ ತೆಗೆದುಕೊಳ್ಳಬಾರದು? ಸಂಬಂಧಿಸಿದ ವಕೀಲರು, ಪೊಲೀಸ್, ನ್ಯಾಯಾಧೀಶರು ಮತ್ತು ಜೈಲು ಅಧಿಕಾರಿಗಳಿಗೆ ೧೮ ವರ್ಷದೊಳಗಿನ ವ್ಯಕ್ತಿಗಳನ್ನು ಮಕ್ಕಳು ಎಂದು ಸ್ಪಷ್ಟವಾಗಿ ಉಲ್ಲೇಖಿಸಿರುವ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ಸಂರಕ್ಷಣೆ) ಕಾಯ್ದೆ ಬಗ್ಗೆ ತಿಳಿದಿಲ್ಲವೇ?”

ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದುದು ಭಾರತವೂ ಒಪ್ಪಿಕೊಂಡಿರುವ ವಿಶ್ವಸಂಸ್ಥೆಯ ಮಕ್ಕಳ ನ್ಯಾಯ ಅನುಸರಣೆಗೆ ಕನಿಷ್ಠ ನಿಯಮಗಳು (೨೯.೧೧.೧೯೮೫) ಜಾರಿಯಾಗದಿರುವುದು. ಬೀಜಿಂಗ್‌ ನಿಯಮಗಳು ಎಂದೂ ಗುರುತಿಸಲ್ಪಡುವ ಇದರ ಮುಖ್ಯ ಉದ್ದೇಶ:  

ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳ ಯೋಗಕ್ಷೇಮವನ್ನು ಕಾಪಾಡಬೇಕು. ಇದು ಕಾನೂನು ಜಾರಿ ವ್ಯವಸ್ಥೆಗಳ ಗಮನದಲ್ಲಿ ಮುಖ್ಯವಾಗಿರಬೇಕು. ವಿವಿಧ ಕಾರಣಗಳಿಂದ ಕಾನೂನು ಉಲ್ಲಂಘನೆ ಮಾಡಿದ ಅಪ್ರಾಪ್ತ ವಯಸ್ಸಿನವರನ್ನು ವಯಸ್ಕರ ನ್ಯಾಯಾಲಯಗಳಲ್ಲಿ ವಿಚಾರಣೆ ಮಾಡಬಾರದು. ಅವರ ಯೋಗಕ್ಷೇಮವೆಂದರೆ, ಆ ಮಕ್ಕಳನ್ನು ಆಪರಾಧಿಕ ಪರಿಸರದಿಂದ ಹೊರತರಲು ಮಕ್ಕಳ ಕಲ್ಯಾಣ ವ್ಯವಸ್ಥೆಗಳು, ಶಿಕ್ಷಣ ವ್ಯವಸ್ಥೆಗಳು, ಸ್ಥಳೀಯ ಆಡಳಿತಗಳು ಕ್ರಮ ಕೈಗೊಳ್ಳಬೇಕು. ಅಕಸ್ಮಾತ್‌ ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳ ಮೇಲೆ ದಂಡ ಹಾಕುವುದಾದರೂ ಅದನ್ನು ಶಿಕ್ಷೆ ಎಂದು ಪರಿಭಾವಿಸದೆ, ಅವರ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳು ಎಂದೇ ಭಾವಿಸಬೇಕು. 

ಮಕ್ಕಳನ್ನು (೧೮ ವರ್ಷದೊಳಗಿನವರನ್ನು) ಯಾವುದೇ ಕಾರಣಕ್ಕೂ ಬಂಧೀಖಾನೆಯಲ್ಲಿ, ಅದರಲ್ಲೂ ವಯಸ್ಕರ ಜೊತೆಯಲ್ಲಿ ಇರಿಸುವುದು ಸರ್ವಥಾ ಸಾಧುವಲ್ಲ. ಬದಲಿಗೆ ಅವರನ್ನು ಡೈವರ್ಷನ್‌ (ಸಂಕೀರ್ಣವಾದ ಕಾನೂನಿನ ಕ್ರಮಗಳಿಂದ ಹೊರತು ಪಡಿಸಿ ಆದಷ್ಟೂ ಅನೌಪಚಾರಿಕ ವಿಧಾನಗಳಿಂದ ವಿಚಾರಣೆ ನಡೆಸಿ, ಅವರ ಮೇಲೆ ಕಳಂಕ ಬಾರದಂತೆ ಕೈಗೊಳ್ಳುವ ಕ್ರಮಗಳು) ವಿಧಾನದ ಮೂಲಕ (ತೊಂದರೆಯಿರುವ) ಪರಿಸರ/ಸಮಾಜದಿಂದ ಹೊರತೆಗೆದು ಸುಧಾರಣೆಯ ದೃಷ್ಟಿಯಲ್ಲಿ ಮಕ್ಕಳ ನಿಲಯಗಳಲ್ಲಿ ಅನಿವಾರ್ಯವಾದರೆ ಇರಿಸಬೇಕು. ಹಾಗೆ ಇರಿಸುವುದು ಆದಷ್ಟೂ ಕಡಿಮೆ ಅವಧಿಯದ್ದಾಗಿರಬೇಕು ಹಾಗೂ ಅವರಿಗೆ ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಲು ಸಾಕಷ್ಟು ಅವಕಾಶಗಳನ್ನು ಸೃಷ್ಟಿಸಬೇಕು.

ಇಂತಹದೇ ವಿಚಾರಗಳನ್ನು ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ ೪೦ ಮಕ್ಕಳ ನ್ಯಾಯದ ಜಾರಿ ಎಂದು ವಿವರಿಸುತ್ತಾ ಯಾವುದೇ ಕಾರಣದಿಂದ ಕಾನೂನಿನೊಡನೆ ಸಂಘರ್ಷಕ್ಕೆ ಬಿದ್ದ ಮಕ್ಕಳನ್ನು ಕಾನೂನು ಪಾಲಕರು ವಶಕ್ಕೆ ತೆಗೆದುಕೊಂಡದ್ದೇ ಆದಲ್ಲಿ ಅಂತಹ ಮಕ್ಕಳಿಗೆ ಕಾನೂನು ನೆರವು ನೀಡಬೇಕು ಮತ್ತು ಮಕ್ಕಳು ಆದಷ್ಟೂ ಕಡಿಮೆ ಅವಧಿಯಲ್ಲಿ ಸುಧಾರಣೆ ವ್ಯವಸ್ಥೆಗಳ ಮೂಲಕ ಮತ್ತೆ ಸಮಾಜದಲ್ಲಿ ಸೇರುವಂತಾಗಬೇಕು ಎಂದು ಸಲಹೆ ನೀಡುತ್ತದೆ. 

ಬಂಧೀಖಾನೆಗಳ ಅಧಿಕಾರಿಗಳೊಂದಿಗೆ ಮಕ್ಕಳ ನ್ಯಾಯ ಕುರಿತು ಕಾರ್ಯಾಗಾರ

ಬಂಧೀಖಾನೆಗಳ ಇಲಾಖೆಯು ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳು ಮತ್ತು ಜೈಲು ಅಧಿಕಾರಿಗಳ ಪಾತ್ರಕ್ಕೆ ಸಂಬಂಧಿಸಿದಂತೆ ಮಕ್ಕಳ ನ್ಯಾಯ ಕಾಯಿದೆ ೨೦೦೦ದ ನಿಬಂಧನೆಗಳನ್ನು ಕುರಿತು ೨೦೦೮ ರ ಏಪ್ರಿಲ್ ೧೯ರಂದು ಐಜಿ ಬಂಧೀಖಾನೆಗಳ ಇಲಾಖೆಯ ಕಚೇರಿಯಲ್ಲಿ ರಾಜ್ಯದ ಎಲ್ಲಾ ಜೈಲು ಅಧಿಕಾರಿಗಳಿಗೆ ಕಾರ್ಯಾಗಾರವನ್ನು ಆಯೋಜಿಸಿತ್ತು. ಕಾರ್ಯಾಗಾರದಲ್ಲಿ ಪರಿಚಯ ಭಾಷಣ ಮಾಡಿದ ಶ್ರೀ ರಮೇಶ್ ಅವರು ಕಾನೂನಿನೊಡನೆ ಸಂಘರ್ಷದಲ್ಲಿರುವ ಮಕ್ಕಳ ವಿಚಾರ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ವಿವರಿಸಿ ಅದನ್ನು ಪರಿಹರಿಸಲು ವ್ಯವಸ್ಥೆಗೆ ಸಹಾಯ ಮಾಡಲು ಒಂದು ಸಮಗ್ರ ಪ್ರಯತ್ನದ ಅವಶ್ಯಕತೆ ಇದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ನ್ಯಾಯಮೂರ್ತಿಗಳಾದ ಗೋಪಾಲಗೌಡರು, ಕರ್ನಾಟಕದ ವಿಧಾನ ಪರಿಷತ್‌ನ ಅಧ್ಯಕ್ಷರಾಗಿದ್ದ ಪ್ರೊ.ಬಿ.ಕೆ.ಚಂದ್ರಶೇಖರ್ ಅವರು ಮಾತನಾಡಿ ಯಾವುದೇ ವ್ಯಕ್ತಿಯನ್ನು ನ್ಯಾಯಾಂಗ ಕಸ್ಟಡಿಗೆ ನೀಡುವ ಮೊದಲು ಅವರ ವಯಸ್ಸನ್ನು ಪೊಲೀಸರು ಪರಿಶೀಲಿಸಬೇಕು. ಅವರು ಮಕ್ಕಳಾಗಿದ್ದಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಯಾವುವು ಮತ್ತು ನ್ಯಾಯಾಂಗವೂ ಇದನ್ನು ಎಚ್ಚರಿಕೆಯಿಂದ ಪರೀಕ್ಷಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದರು.

ರಾಜ್ಯದ ವಿವಿಧ ಕಾರಾಗೃಹಗಳಲ್ಲಿದ್ದಿರಬಹುದಾದ (೧೮ ವರ್ಷಕ್ಕಿಂತ ಕಡಿಮೆ ವಯಸ್ಸಿನ) ಮಕ್ಕಳನ್ನು ಅಲ್ಲಿಂದ ತೆಗೆಯಲು ತ್ವರಿತ ಕ್ರಮ ಕೈಗೊಳ್ಳುವ ಅಗತ್ಯವನ್ನು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಹಾಜರಿದ್ದ ಇತರ ಆಹ್ವಾನಿತರಲ್ಲಿ  ಶ್ರೀ ಸುನಿಲ್‌ ಕುಮಾರ್‌, ಐಪಿಎಸ್‌, ಗೃಹ ಕಾರ್ಯದರ್ಶಿಗಳು; ಶ್ರೀ ಎಂ.ಎನ್.ರೆಡ್ಡಿ, ಕರ್ನಾಟಕದ ಎಸ್‌.ಎಚ್‌.ಆರ್‌.ಸಿ.; ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂದಿನ ನಿರ್ದೇಶಕಿ ಶ್ರೀಮತಿ ಏಕ್ರೂಪ್ ಕೌರ್; ನ್ಯಾಯಧೀಶರಾದ ವಸಂತ ಕುಮಾರ್, ಅಧ್ಯಕ್ಷರು ಮಕ್ಕಳ ನ್ಯಾಯ ಮಂಡಳಿ, ಬೆಂಗಳೂರು; ಶ್ರೀಮತಿ ಎಂ.ಎಸ್. ಸಂತೋಷ್ ವಾಜ್, ಅಧ್ಯಕ್ಷರು, ಸಿ.ಡಬ್ಲ್ಯೂ.ಸಿ. (ಹೆಣ್ಣುಮಕ್ಕಳು), ಬೆಂಗಳೂರು ಮತ್ತು ಇತರರು ಇದ್ದರು.

ಉದ್ಘಾಟನೆ ಮಾಡಿದ ಪ್ರೊ.ಬಿ.ಕೆ ಚಂದ್ರಶೇಖರ್‌ ಅವರು ತಮ್ಮ ಸಿದ್ಧ ಭಾಷಣದಲ್ಲಿ ಮಕ್ಕಳ ನ್ಯಾಯ ಕುರಿತು ಕೆಲವು ಹಳೆಯ ಉಲ್ಲೇಖನಗಳನ್ನೇ ನೀಡುತ್ತಿದ್ದಾಗ, ನನಗೆ ತಡೆಯಲಾಗಲಿಲ್ಲ. ದಯವಿಟ್ಟು ಕ್ಷಮಿಸಿ ತಾವು ಹಿಂದಿನ ಕಾಯಿದೆಯನ್ನು ಉಲ್ಲೇಖಿಸುತ್ತಿದ್ದೀರಿ, ಅವುಗಳು ಈಗ ಚಾಲ್ತಿಯಲ್ಲಿಲ್ಲ ಎಂದು ಹೇಳಿಯೇಬಿಟ್ಟೆ. ಆಗಲೇ ಇತರರೂ ಹೌದು ಹೌದು ಎಂದರು. ತಕ್ಷಣವೇ ಬಿ.ಕೆ. ಚಂದ್ರಶೇಖರ್‌ ಅವರು ಸಿದ್ಧ ಭಾಷಣದ ಪ್ರತಿಯನ್ನು ಪಕ್ಕಕ್ಕಿಟ್ಟು ತಮ್ಮದೇ ಮಾತು ಮುಂದುವರೆಸಿದರು.

ಜೈಲುಗಳಿಗೆ ಮಕ್ಕಳನ್ನು ಒಯ್ಯಬಾರದು ಎಂದು ವಿಚಾರ ವಿಸ್ತರಿಸಿದ ಕರ್ನಾಟಕ ಪೊಲೀಸ್ ಇಲಾಖೆಯ ತರಬೇತಿ ಮುಖ್ಯಸ್ಥ ಐ.ಜಿ. ಡಾ.ಡಿ.ವಿ.ಗುರುಪ್ರಸಾದ್ ಅವರು ಪೊಲೀಸ್ ಇಲಾಖೆಯ ಕಡೆಯಿಂದ ದೋಷಗಳಾಗುತ್ತವೆ ಎಂಬ ಅಂಶವನ್ನು ಹೇಳಿ, ವಯಸ್ಸಿನ ಅಂಶವನ್ನು ಪರಿಶೀಲಿಸದೆ ಮಕ್ಕಳ ಮೇಲೂ ಪ್ರಕರಣಗಳನ್ನು ದಾಖಲಿಸಿದ ಪ್ರಸಂಗಗಳಿವೆ ಎಂದರು. ಕೆಲವು ಬಾರಿ ವಯಸ್ಕರು ಮತ್ತು ಮಕ್ಕಳ ಮೇಲೆ ಜಂಟಿಯಾಗಿ ಒಂದೇ ಆರೋಪದ ಮೇಲೆ ಪ್ರಕರಣಗಳನ್ನು ದಾಖಲಿಸಿದಾಗ, ಮಕ್ಕಳನ್ನು ಕಾರಾಗೃಹಗಳಿಗೆ ಒಯ್ಯದಂತೆ ನೋಡಿಕೊಳ್ಳಲು ಪೊಲೀಸರು ಮತ್ತು ನ್ಯಾಯಾಂಗವು ಪ್ರಮುಖ ಪಾತ್ರ ವಹಿಸಬೇಕು ಎಂದು ಹೇಳಿದರು.

ಅದೇ ಸಭೆಯಲ್ಲಿ ಉದ್ಘಾಟನೆಯ ನಂತರ ಮೊದಲ ಅಧಿವೇಶನದಲ್ಲಿ ನಾನು ಮಕ್ಕಳ ನ್ಯಾಯ ಕಾಯಿದೆ ನಿಬಂಧನೆಗಳು, ಬೀಜಿಂಗ್‌ ನಿಯಮಗಳು, ಸಿಡಬ್ಲ್ಯೂಸಿ ಮತ್ತು ಜೆಜೆಬಿಯ ಪಾತ್ರ, ಪೊಲೀಸ್, ನಾಗರಿಕ ಸಮಾಜ, ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗ ಮತ್ತು ಮಕ್ಕಳಿಗೆ ನ್ಯಾಯ ಒದಗಿಸುವ ಪ್ರಾಮುಖ್ಯತೆ ಕುರಿತು ವಿಸ್ತಾರವಾದ ಅಧಿವೇಶನ ನಡೆಸಿದೆ. ಮಾತುಕತೆಯಲ್ಲಿ ಜೈಲಿಗೆ ಮಕ್ಕಳನ್ನು ದೂಡಿದರೆ ಆಗುವ ಬಾಧಕಗಳು, ಮಕ್ಕಳನ್ನು ಜೈಲಿಗೆ ಏಕೆ ಕಳುಹಿಸಬಾರದೆಂಬ ಅಂತಾರಾಷ್ಟ್ರೀಯ ಮಾನದಂಡಗಳು, ಮಕ್ಕಳ ಹಕ್ಕುಗಳ ಒಡಂಬಡಿಕೆಯ ನಿಯಮಗಳು ಮತ್ತು ಮಕ್ಕಳ ನ್ಯಾಯ ಕಾಯ್ದೆಯಲ್ಲಿನ ನಿಬಂಧನೆಗಳನ್ನು ಎತ್ತಿ ತೋರಿಸಿದೆ. ಕಾರಾಗೃಹಗಳಲ್ಲಿನ ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಅರ್ಥಮಾಡಿಸಲು ಜೈಲು ಕಾಯ್ದೆ, ಖೈದಿಗಳ ಕಾಯ್ದೆ ಮತ್ತು ಕರ್ನಾಟಕ ಜೈಲು ಕೈಪಿಡಿಯಿಂದ ವ್ಯಾಪಕವಾಗಿ ಉಲ್ಲೇಖಗಳನ್ನು ನೀಡಿದೆ. ಚರ್ಚೆಯಲ್ಲಿ ಭಾಗವಹಿಸಿದ್ದ ಅನೇಕ ಅಧಿಕಾರಿಗಳು ಆಗಾಗ್ಗೆ ೧೮ ರೊಳಗಿನ ಮಕ್ಕಳು ಪೊಲೀಸ್‌ ಮತ್ತು ನ್ಯಾಯಾಲಯಗಳ ಮೂಲಕವೇ ಜೈಲಿಗೆ ಬಂದಿರುವ ಪ್ರಕರಣಗಳ ಬಗ್ಗೆ ಹಂಚಿಕೊಂಡರು. 

ನಂತರ ಮುಂದುವರೆದ ಚರ್ಚೆಯಲ್ಲಿ ಡಾ.ಮುರಳಿ ಕರ್ಣಂ, ಸಲಹೆಗಾರು ಕಾಮನ್‌ವೆಲ್ತ್‌ ಮಾನವ ಹಕ್ಕುಗಳ ಕಾರ್ಯಕ್ರಮ (ಸಿಎಚ್‌ಆರ್‌ಐ); ಮಕ್ಕಳ ಕಲ್ಯಾಣ ಸಮಿತಿ (ಗಂಡು ಮಕ್ಕಳು) ಅಧ್ಯಕ್ಷನಾಗಿ ನಾನು, ನ್ಯಾಯಮೂರ್ತಿ ವಸಂತ ಕುಮಾರ್, ಅಧ್ಯಕ್ಷರು, ಜೆಜೆಬಿ; ಶ್ರೀಮತಿ ಎಕ್ರೂಪ್ ಕೌರ್, ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ; ಶ್ರೀ ಆಂಟನಿ ಸೆಬಾಸ್ಟಿಯನ್, ಸದಸ್ಯರು, ಜೆಜೆಬಿ; ಸಿಡಬ್ಲ್ಯುಸಿ (ಹೆಣ್ಣುಮಕ್ಕಳು), ಅಧ್ಯಕ್ಷರಾದ ಎಂ.ಎಸ್.ಸಂತೋಷ್ ವಾಜ್ ಮತ್ತು ಇತರರು ರಾಜ್ಯದ ಕಾರಾಗೃಹಗಳಿಗೆ ಮಕ್ಕಳನ್ನು ಕಳಳುಹಿಸದಂತೆ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕುರಿತು ಮಾಹಿತಿ ಹಂಚಿಕೊಂಡೆವು.

ಯುನಿಸೆಫ್ ಪರವಾಗಿ ಪೊಲೀಸರಿಗೆ ಲಿಂಗತ್ವ ಮತ್ತು ಮಕ್ಕಳ ಸಮಸ್ಯೆಗಳನ್ನು ಕುರಿತು ತರಬೇತಿ ನೀಡುತ್ತಿದ್ದ ಶ್ರೀ ಸೋಮಶೇಖರ್ ಅವರು ಚರ್ಚೆಯನ್ನು ನಡೆಸಿಕೊಟ್ಟರು. ಕಾರ್ಯಾಗಾರದ ಅಂತ್ಯದಲ್ಲಿ ಮಕ್ಕಳು ಎಂದು ಶಂಕಿಸಲಾಗಿರುವ ಕೈದಿಗಳನ್ನು ಭೇಟಿ ಮಾಡಲು ನಿಯತಕಾಲಿಕವಾಗಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಲು ಶ್ರೀ ರಮೇಶ್‌ ನನಗೆ ಆಹ್ವಾನ ನೀಡಿದರು.

ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ

ಮಕ್ಕಳ ನ್ಯಾಯ ಮಂಡಳಿಯ ಅಧ್ಯಕ್ಷರಾಗಿದ್ದ ನ್ಯಾಯಮೂರ್ತಿಗಳಾದ ವಸಂತಕುಮಾರ್‌ ಮತ್ತು ಸದಸ್ಯರಾಗಿದ್ದ ಶ್ರೀ ಆಂಟನಿ ಅವರೊಡನೆ ನಾನು ಮತ್ತು ಮಕ್ಕಳ ಕಲ್ಯಾಣ ಸಮಿತಿಯಲ್ಲಿ ನನ್ನ ಸಹಸದಸ್ಯ ಶ್ರೀ ಬಸವರಾಜು ಅವರೊಂದಿಗೆ ೨೦೦೮ ಏಪ್ರಿಲ್ ೨೫ ರಂದು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದೆ. ಜೈಲಿನ ದಿಡ್ಡಿ ಬಾಗಿಲಿನ ಮೂಲಕ ಒಳಹೊಕ್ಕು ಕೈಗೆ ʼಸಂದರ್ಶಕʼ ಎಂದು ಸೀಲ್‌ ಹಾಕಿಸಿಕೊಂಡು ಮೊಬೈಲು ಬಾಗಿಲಲ್ಲೇ ಬಿಟ್ಟು ಒಳ ಹೋದೆವು. ನನಗದು ಮೊದಲ ಭೇಟಿ. ನನ್ನ ಕಣ್ಣು ಮಕ್ಕಳಂತೆ ಕಾಣುವವರನ್ನು ಹುಡುಕುತ್ತಿತ್ತು.

ಒಂದಿಬ್ಬರೊಡನೆ ಮಾತನಾಡುತಿದ್ದಂತೆಯೇ ಜೈಲಿನ ಅಡುಗೆ ಮನೆಯ ಹತ್ತಿರದಲ್ಲೇ ಹತ್ತಿಪ್ಪತ್ತು ಹುಡುಗರು ಗುಂಪುಗೂಡಿದರು. ಸ್ವಲ್ಪ ಹೊತ್ತಿನಲ್ಲೇ ಗುಂಪು ದೊಡ್ಡದಾಯಿತು. ನಾನು ಮತ್ತು ಬಸವರಾಜು ಅವರ ಹೆಸರುಗಳನ್ನು ಬರೆದುಕೊಳ್ಳಲು ಆರಂಭಿಸಿದೆವು (ಹೆಸರು, ಅಪ್ಪ/ಅಮ್ಮನ ಹೆಸರು, ಕ್ರೈಂ ಸಂಖ್ಯೆ, ಪೊಲೀಸ್‌ ಠಾಣೆ, ಎಷ್ಟು ಕಾಲದಿಂದ ಜೈಲಿನಲ್ಲಿದ್ದಾರೆ, ಯಾವ ಊರು, ಯಾರದಾದರೂ ಸಂಪರ್ಕ ಸಂಖ್ಯೆ) ನೋಡು ನೋಡುತ್ತಿದ್ದಂತೆಯೇ ಯಾರೋ ಮುಂದೆ ಬಂದು ಆ ಹುಡುಗರನ್ನು ಸಾಲಿನಲ್ಲಿ ನಿಲ್ಲಿಸಲಾರಂಭಿಸಿದರು. ನಾವು ತೆಗೆದುಕೊಂಡು ಹೋಗಿದ್ದ ಹಾಳೆ ಮುಗಿಯಿತು. ಕತ್ತಲಾಗುತ್ತಿದ್ದಂತೆಯೇ ನಾನು ಅಲ್ಲೇ ಇದ್ದ ಒಂದು ದೀಪದ ಕಂಭದ ಕೆಳಗೆ ಹೋಗಿ ಬರಹ ಮುಂದುವರೆಸಿದೆ. ನಮಗೆ ಯಾರೋ ಒಂದಷ್ಟು ಕಾಗದ ಮತ್ತು ಚೇರ್‌ ತಂದು ಕೊಟ್ಟರು.

ಜೈಲಿಗೆ ಹೊರಗಿನಿಂದ ಬಂದ ಸಂದರ್ಶಕರ ಭೇಟಿಯ ಸಮಯ ಮೀರಿದೆ, ನೀವು ಹೊರಗೆ ಹೋಗಲೇಬೇಕು ಎಂದು ಸೆಂಟ್ರಿ ಬಂದು ಹೇಳುವ ಹೊತ್ತಿಗೆ ನಮ್ಮ ಪಟ್ಟಿಯಲ್ಲಿ ೭೧ ಹೆಸರುಗಳಿದ್ದವು. ಎಲ್ಲವೂ ೧೮ ವರ್ಷದೊಳಗಿನವರು ಎಂದು ಹೇಳಿಕೊಂಡ ಹುಡುಗರದ್ದು. ಒಂದಿಬ್ಬರು ಹುಡುಗರು ತಮ್ಮ ಬಳಿಯಿದ್ದ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಪ್ರತಿ ಹಿಡಿದುಕೊಂಡು ತಮ್ಮ ವಯಸ್ಸನ್ನು ದೃಢೀಕರಿಸುತ್ತಿದ್ದರು.

ಪೊಲೀಸರ ವಶಕ್ಕೆ ಬೀಳಲು ಅಲ್ಲಿದ್ದ ಹುಡುಗರೆಲ್ಲಾ ಹೇಳುತ್ತಿದ್ದುದು ಹೆಚ್ಚೂ ಕಡಿಮೆ ಒಂದೇ ರೀತಿಯ ಕಾರಣಗಳು: ರಾತ್ರಿ ಯಾವುದೋ ಅಂಗಡಿಯೆದುರು ಗುಂಪಾಗಿ ಮಾತನಾಡುತ್ತಿದ್ದರು; ಬೀದಿಯಲ್ಲಿ ಯಾವುದೋ ಕಾರಣಕ್ಕೆ ಹೊಡೆದಾಟದಲ್ಲಿದ್ದವರು; ಪೊಲೀಸ್‌ ವಾಹನ ಹಾದು ಹೋದಾಗ ಎದ್ದು ನಿಲ್ಲಲಿಲ್ಲ; ಯಾವುದೋ ಚಿಕ್ಕಪುಟ್ಟ ಕಳ್ಳತನ; ರಾತ್ರಿ ರಸ್ತೆಯಲ್ಲಿ ಮಲಗಿದ್ದವರು …, ಹೀಗೆ. ಇವುಗಳಿಗೆಲ್ಲಾ ಸುಲಭವಾಗಿ ಜಾಮೀನು ಸಿಗುವ ಸಾಧ್ಯತೆಗಳಿತ್ತು. ಕೆಲವು ಹುಡುಗರು ಒಳಗೆ ಬಂದು ಅಷ್ಟು ಹೊತ್ತಿಗೆ ಐದಾರು ತಿಂಗಳುಗಳು ಕಳೆದಿದ್ದವು. ದಿನಪೂರ್ತಿ ಕಟ್ಟಡ ಕೆಲಸ ಮತ್ತು ಇತರ ಕೆಲಸಗಳ ಕತೆಗಳನ್ನು ಹಂಚಿಕೊಂಡರು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮತ್ತು ಮೂಳೆ ಪರೀಕ್ಷೆ (ಆಸಿಫಿಕೇಷನ್) ಮೂಲಕ ಶಂಕಿತ ಹುಡುಗರ  ವಯಸ್ಸನ್ನು ಕಂಡುಹಿಡಿಯಲು ಜೈಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಪರಪ್ಪನ ಅಗ್ರಹಾರದ ಮುಖ್ಯ ಅಧಿಕಾರಿ ಶ್ರೀ ವಿಶ್ವನಾಥ್ ಹೇಳಿದರು. ಆಸಿಫಿಕೇಷನ್ ಪರೀಕ್ಷೆಗೆ ಹೋಗಿದ್ದ ಮಕ್ಕಳು ತಮ್ಮ ವೈದ್ಯಕೀಯ ವರದಿಗೆ ಕಾಯುತ್ತಿದ್ದೇವೆ ಎಂದೂ ಹೇಳಿದರು.

ಶ್ರೀ ವಿಶ್ವನಾಥ್ ಅವರು ಮುಂದುವರೆದು ಎಲ್ಲ ಹುಡುಗರನ್ನು ನಿಯಮಿತವಾಗಿ ಕರೆದೊಯ್ಯಲು ಆಗುತ್ತಿಲ್ಲ. ಬೆಂಗಾವಲು ಸಿಬ್ಬಂದಿ ಮತ್ತು ವಾಹನಗಳು ಸಿಗುವುದಿಲ್ಲ. ಹೀಗಾಗಿ ವೈದ್ಯಕೀಯ ಪರೀಕ್ಷೆ ತಡವಾಗುತ್ತಿದೆ. ನ್ಯಾಯಾಧೀಶರುಗಳ ಮುಂದೆ ಖೈದಿಗಳನ್ನು ಹಾಜರು ಪಡಿಸಲೂ ಇದೆ ಕಷ್ಟ ಎಂದು ಹೇಳಿ ನಾವು ಮಾಡಿದ ಪಟ್ಟಿ ಮತ್ತು ಕೈಗೊಳ್ಳಲು ಉದ್ದೇಶಿಸಿದ ಕ್ರಮ ಏನಾದರೂ ಒಳ್ಳೆಯ ಫಲಿತಾಂಶ ಸಿಗಬಹುದೇನೋ ಎಂದು ಆಶಾಭಾವನೆ ವ್ಯಕ್ತಪಡಿಸಿದರು. ಮತ್ತೆ ಬರುತ್ತೇನೆ ಎಂದು ಹೇಳಿ ನಾನು ಮತ್ತು ಬಸವರಾಜ್‌ ಹೊರಬಂದೆವು. 

ಹೊಸೂರು ರಸ್ತೆಯ ಕಡೆಯಿಂದ ಬೆಂಗಳೂರಿಗೆ ನನ್ನ ಕಾರು ತಿರುಗಿತ್ತು, ನನ್ನ ಮಗಳು ಫೋನ್‌ ಮಾಡಿ ಮನೆ ಸೇರುವುದು ಇನ್ನೂ ತಡವಾಗುತ್ತದೆಯೆ ಎಂದು ಕೇಳಿದಳು. ನನಗೆ ತಡೆಯಲಾಗಲಿಲ್ಲ. ಯಾರಿಗಾದರೂ ಹೇಳಿಕೊಳ್ಳಲೇಬೇಕಿತ್ತು. ಅವಳಿಗೆ ಹೇಳುತ್ತಾ ಮೊದಲು ಬಿಕ್ಕಳಿಸಿದೆ. ಆಮೇಲೆ ಕಾರು ಚಲಾಯಿಸುತ್ತಲೇ ಜೋರಾಗಿ ಅತ್ತುಬಿಟ್ಟೆ. 

‍ಲೇಖಕರು ವಾಸುದೇವ ಶರ್ಮ

December 31, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: