ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೆರುಸಲೇಮಿನ ಸಮಾಧಿಗಳಿಂದ…

ಅಜಯ್ ರಾಜ್

ಮಲಗಿದ್ದೇವೆ ನಾವು
ಸೌಲ, ದಾವೀದ, ಸಲೋಮೋನನಾದಿಯಾಗಿ
ಅನ್ನ-ಕಾಯಿಫಾಸರು ನಮ್ಮೊಡನಿದ್ದಾರೆ
ಇತರ ಪ್ರವಾದಿಗಳೂ…
ಪಳಿಯುಳಿಕೆಗಳಿಗೂ ಆಸ್ಪದ ಕೊಡದೆ
ಮಣ್ಣಲ್ಲಿ ಮಣ್ಣಾಗಿದ್ದೇವೆ
ಕಲ್ಲು ಬಂಡೆಗಳ ಸಮಾಧಿಯೊಳಗೆ
ನಮ್ಮದೊಂದು ಕತ್ತಲ ಸಾಮ್ರಾಜ್ಯ!

ಜೆರುಸಲೇಮಿನ ವೈಭವದಲಿ ಮಿಂದೆದ್ದ
ದಂತಕಥೆಗಳು; ಓದಿಕೊಂಡಷ್ಟೂ
ಮುಗಿಯದ ವೃತ್ತಾಂತಗಳು
ಅರಸ, ಜ್ಞಾನಿ, ಪ್ರಧಾನ ಯಾಜಕರಾಗಿ
ಎಲ್ಲೆಲ್ಲಿಯೂ ನಮ್ಮದೇ ರಾಜ್ಯಭಾರ
ಧರ್ಮಶಾಸ್ತ್ರಿಗಳ ಧರ್ಮ ಸಂಕೋಲೆಯಲ್ಲಿ
ಫರಿಸಾಯರ ಒಣಜಂಭ;
ಅರ್ಥಹೀನ ಕಟ್ಟಳೆಗಳಲ್ಲಿ
ಸಿಗುವುದೆಮ್ಮ ಜೀವ ಕುರುಹು…
ಸುಂಕದವರಿಂದ ಸಾಮಾನ್ಯರವರೆಗೂ
ನಾವಾಗಿದ್ದೆವು ಯೆಹೂದ್ಯರು
‘ದೇವರಿಂದಾರಿಸಲ್ಪಟ್ಟವರು’!

ಪಿತಾಮಹ ಅಬ್ರಹಾಮನ ವಂಶಜರು
ನಮಗೋ ಅಗಾಧ ವಿಶ್ವಾಸ
ಅಂತರಂಗ ಶುದ್ಧಿ ಮರೆತು, ಬಹಿರಂಗ
ಶುದ್ಧಿ ಮರೆದವು;
ದಶಾಜ್ಞೆಗಳನರಿತ ನಮಗೆ
ಸಬ್ಬತಿನಲೂ ಒಪ್ಪೊತ್ತು
ಎಳವಗೆ ಹೆಗಲಾಗಲಿಲ್ಲ…
ಅಂಧಗೆ ಬೆಳಕಾಗಲಿಲ್ಲ…
ಹೊತ್ತಲ್ಲದ ಹೊತ್ತೊಳು ಹೊತ್ತ ಮರೆತು
ಗ್ರಂಥಗಳ ಪಠಣದಲಿ ಕಾಲ ಕಳೆದೆವು
ಮಮತೆ-ಕರುಣೆಗಳ ನೋಡ ನುಂಗುತ್ತಾ!

ಉಳಿದಿರುವುದೊಂದೆ ಗೋಳು ಗೋಡೆ
ಗತಕಾಲದ ವೈಭವಕೆ ಸಾಕ್ಷಿಯಂತೆ
ಅದುಮಿಟ್ಟುಕೊಂಡ ಸಾವಿರಾರು ಸುಪ್ತ
ಬಯಕೆ-ಬವಣೆಗಳ ಆಗರದಂತೆ!
ಇತಿಹಾಸದ ಜಿಜ್ಞಾಸೆಯಲಿ ಬುಸುಗುಡುತ್ತಿದ್ದೇವೆ;
ಕೊಳೆತು ನಾರುವ ನಮ್ಮದೇ ಗಬ್ಬೊಳಗೆ
ಪಾಳುಬಿದ್ದ ಜೆರುಸಲೇಮಿನ ಸಮಾಧಿಗಳೊಳಗೆ!

‍ಲೇಖಕರು Avadhi

15 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading