ಜೀವನವೆಂಬ 'ಡ್ರಾಮಾ'ದಲ್ಲಿ..

ಸಿಕ್ಕೀತೆ ಮುಂದಿನ ದಾರಿ..
ವಿಶೇಷ್ ಸಂತೋಷ್ 
ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲ್ಲೂಕಿನ ಹಾರೂಗೇರಿ, ಹುಟ್ಟಿದ 5ತಿಂಗಳವರೆಗು ಚನ್ನಾಗಿಯೆ ಇದ್ದೆ, ಮನೆಯವರು ಹೇಳಿರುವ ಹಾಗೆ ಯಾರೋ ನನ್ನನ್ನ ಅಟ್ಟದ ಮೇಲಿಂದ ಬೀಳಿಸಿದ್ದಕ್ಕೆ ನನ್ನ ಬಲಗೈ ಮತ್ತು ಬಲಗಾಲು ಅಂಗವೈಫಲ್ಯಕ್ಕೆ ತುತ್ತಾಯಿತು. ನನ್ನ ಸಾಕು ತಂದೆ ನನ್ನನ್ನು ಎಲ್ಲರ ರೀತಿ ಸರಿ ಮಾಡಲು ತುಂಬಾ ಪ್ರಯತ್ನಪಟ್ಟರು ಆದರೆ ಅವರ ಯಾವ ಪ್ರಯತ್ನಗಳು ಪಲ ಕೊಡಲಿಲ್ಲ. ಬಾಲ್ಯದಲ್ಲಿ ಎಲ್ಲರ ರೀತಿ ಆಟವಾಡಬೇಕು, ಓಡಬೇಕು, ಕುಣಿಯಬೇಕು ಎಂಬ ಆಸೆ ತುಂಬಾ ಇತ್ತು. ಒಂದು ದಿನ ನಮ್ಮ ಊರ ಭಾವಿಯಲ್ಲಿ ಎಲ್ಲರೂ ಈಜುವಾಗ ನನಗೂ ಈಜುವ ಆಸೆ ಆಗಿ ಭಾವಿಗೆ ಜಿಗಿದಿದ್ದೆ, ಈಜು ಬರದ ನನಗೆ ಸಾವಿನ ದರ್ಶನ ಆಗಿತ್ತು. ಪಕ್ಕದಲ್ಲೇ ತಮ್ಮನಿಗೆ ಈಜು ಕಲಿಸುತ್ತಿದ್ದ ನನ್ನ ಸಾಕು ತಂದೆ ಮುಳುಗುತ್ತಿದ್ದ ನನ್ನನ್ನು ಬದುಕಿಸಿದರು.
ನನಗೆ ನನ್ನ ಜೀವನದಲ್ಲಿ ತುಂಬಾ ಖುಷಿ ಕೊಟ್ಟಿದ್ದು ನನ್ನ ಶಾಲಾ ದಿನಗಳು. ಭಾಷಣ, ಆಶುಭಾಷಣ, ರಸಪ್ರಶ್ನೆ ಎಲ್ಲದರಲ್ಲೂ ಮುಂದಿದ್ದೆ. ಊರ ಪಂಚಾಯಿತಿಯ ಮುಂದೆ ಸ್ವಾತಂತ್ರ್ಯ ದಿನಾಚರಣೆಯಂದು ನಾನು ಭಾಷಣ ಮಾಡಿದ್ದೆ. ಆ ಬಾಷಣದಿಂದ ಊರಿನವರಿಗೆ, ನನ್ನ ಸಹಪಾಠಿಗಳಿಗೆ ಹಾಗೂ ನನ್ನ ಶಿಕ್ಷಕರಿಗೆ ನನ್ನ ಮೇಲಿದ್ದ ಪ್ರೀತಿ ಮತ್ತು ಗೌರವ ಹೆಚ್ಚಾಯಿತು. ಹಾಗೆಯೇ ನನ್ನ ಶಾಲಾಕಾಲೇಜಿನ ದಿನಗಳಲ್ಲಿ ಪ್ರತಿಭಾ ಕಾರಂಜಿ, ಯುವ ಮಹೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನನ್ನ ಪ್ರತಿಭೆಯಿಂದ ನಾನು ಪಡೆದ ಪ್ರಶಸ್ತಿಗಳು ನನ್ನ ಮೇಲೆ ನನಗೆ ಹೆಚ್ಚು ಆತ್ಮವಿಶ್ವಾಸ ಮೂಡಿಸುತ್ತ ಸಾಗಿದವು. ಈಗಲೂ ನನ್ನನ್ನು ಇನ್ನಷ್ಟೂ ಗಟ್ಟಿಗೊಳಿಸುತ್ತಿರುವುದು ಬಾಲ್ಯದಲ್ಲಿ ಇದ್ದ ಗೆಲ್ಲಬೇಕು ಎನ್ನುವ ಹಠ ಮತ್ತು ಏನಾದರು ಸಾಧಿಸಬೇಕು ಎನ್ನುವ ಛಲ.
ನನಗೆ ಇಂಜಿನಿಯರ್ ಆಗಬೇಕು ಎಂಬ ಆಸೆ ಇತ್ತು. ಆದ್ದರಿಂದ ಮನೆಯವರಿಗೆ ಹೇಳದೆ ವಿಜ್ಞಾನ ವಿಭಾಗಕ್ಕೆ ಸೇರಿದ್ದೆ ಆದರೆ ನನ್ನ ಅಂಗವೈಫಲ್ಯ ನನ್ನ ಇಂಜಿನಿಯರಿಂಗ್ ಕಲಿಕೆಗೆ ತೊಂದರೆ ಆಗುತ್ತದೆ ಎಂದು ಹೇಳಿ ಮನೆಯವರು ಕಲಾ ವಿಭಾಗಕ್ಕೆ ಸೇರಿಸಿದರು ಆದರೆ ನನಗೆ ಕಲಾ ವಿಭಾಗಕ್ಕೆ ಸೇರಲು ಫ್ರೀ ಸೀಟ್ ಖಾಲಿ ಇರಲಿಲ್ಲ. ಡೊನೇಷನ್ ಕೊಟ್ಟು ಸೇರಲೂ ಆಗಿನ ಸ್ಥಿತಿಯಲ್ಲಿ ಸಾಧ್ಯವಿರಲಿಲ್ಲ. ನಂತರ ಕಾಲೇಜಿನ ಪ್ರಾಂಶುಪಾಲರು ವಾಣಿಜ್ಯ ವಿಭಾಗದಲ್ಲಿ ಫ್ರೀ ಸೀಟ್ ಇದೆ ಸೇರಿಕೊಳ್ಳಿ ಎಂದರು. ಅಲ್ಲಿಗೆ ನಾನು ಇಂಜಿನಿಯರ್ ಆಗುವ ಕನಸು ಕನಸಾಗಿಯೇ ಉಳಿಯಿತು. ಮುಂದೆ ನಾನು ಬಿ.ಬಿ.ಎ ಮಾಡಿ ಎಂ.ಬಿ.ಎ ಮಾಡಬೇಕು ಎಂದುಕೊಂಡೆ. ಆದರೆ ನನ್ನ ಮನೆಯ ಆರ್ಥಿಕ ಪರಿಸ್ಥಿತಿಯಿಂದ ಬಿ.ಕಾಂ ಮಾಡಲು ಮಾತ್ರ ಸಾಧ್ಯವಾಯಿತು. ಪ್ರತೀ ಸಲ ಸೋಲು ಅಥವಾ ನಾನು ಅಂದುಕೊಂಡದ್ದು ಆಗದೇ ಇದ್ದಾಗ ನನಗೆ ನೆನಪಾಗುತ್ತಿದ್ದದ್ದು  ಅಬ್ರಹಾಂ ಲಿಂಕನ್ ಅವರ ಜೀವನ ಚರಿತ್ರೆ.

ಮುಂದೆ ಎಂ.ಬಿ.ಎ ಮಾಡಲು ಸಾಧ್ಯವಾಗದ ಕಾರಣ. ಕೆಲಸ ಹುಡುಕಿಕೊಂಡು ಬೆಂಗಳೂರು ಸೇರಿದೆ. ಹೆಚ್.ಪಿ ಕಂಪನಿಯಲ್ಲಿ ಕೆಲಸ ಸಿಕ್ಕಿತು, ಎರಡು ವರ್ಷದ ನಂತರ ಲೈಫ್ ಟೆಕ್ನಾಲಜಿಗೆ ಸೀನಿಯರ್ ಅಸೋಸಿಯೇಟ್ ಆಗಿ ಸೇರಿಕೊಂಡೆ. ಒಳ್ಳೆಯ ಕೆಲಸ ಮತ್ತು ಸಂಬಳ. ಇಲ್ಲಿಯೂ ನಾನು ತುಂಬಾ ಶ್ರದ್ಧೆ ಮತ್ತು ಪರಿಶ್ರಮದಿಂದ ಕೆಲಸ ಮಾಡಿದೆ. ಅದಕ್ಕನುಗುಣವಾಗಿ ಒಂದು ವರ್ಷದಲ್ಲಿ 7 ಬಾರಿ ‘ಬೆಸ್ಟ್ ಎಂಪ್ಲಾಯಿ’ ಬಹುಮಾನ ಸಿಕ್ಕಿತ್ತು. ಕಾರಣಾಂತರಗಳಿಂದ ಕೆಲಸ ಬಿಡುವ ಪರಿಸ್ಥಿತಿ ಎದುರಾಗಿತ್ತು. ಕೆಲಸ, ಸಂಬಳ, ಹೋರಾಟದ ಬದುಕಿನ ನಡುವೆ ನನ್ನ ಸಾಂಸ್ಕೃತಿಕ ಚಟುವಟಿಕೆಗಳು ನನ್ನಿಂದ ಕಳೆದೇ ಹೋದವು ಅನ್ನುವ ಪರಿಸ್ಥಿತಿ ತಲುಪಿತ್ತು.
ನನಗೆ ನನ್ನ ಬದುಕಿನಲ್ಲಿ ಆತ್ಮವಿಶ್ವಾಸ, ಖುಷಿ ಹಾಗು ಗೌರವ ತಂದು ಕೊಟ್ಟಂತ ನನ್ನ ಕಲೆಯನ್ನು ಕಳೆದುಕೊಳ್ಳಲು ಮನಸ್ಸು ಒಪ್ಪದ ಕಾರಣ, ಈ ರಂಗಭೂಮಿ, ಕಿರುತೆರೆಯಲ್ಲಿ ಏನಾದರೂ ಅವಕಾಶ ಸಿಗಬಹುದ ಅಂತ ಹುಡುಕಾಟ ಶುರು ಮಾಡಿದ್ದೆ. ಒಂದು ದಿನ ನನ್ನ ಬಗ್ಗೆ ಮತ್ತು ನನ್ನ ಕನಸಿನ ಬಗ್ಗೆ ತಿಳಿದಿದ್ದ ಗೆಳೆಯ ಮೂರು ದಿನಗಳ ಉಚಿತ ರಂಗ ಶಿಬಿರ ಇರುವುದರ ಬಗ್ಗೆ ಮಾಹಿತಿ ಕೊಟ್ಟ. ಆ ರಂಗ ಶಿಬಿರಕ್ಕೆ ಹೋದೆ ಅಲ್ಲಿ ನಿರ್ದೇಶಕರಾದ ಉದಯ್ ಸೋಸಲೆ ಅವರು ಕಾರ್ಯಗಾರ ಮಾಡಿ ಮುಂದೆ ನನ್ನನ್ನ “ಫೋಸ್ಟ್ ಬಾಕ್ಸ್ ನಂಬರ್ 9” ನಾಟಕಕ್ಕೆ ಸೇರಿಸಿಕೊಂಡರು ಅಲ್ಲಿಂದ ನನ್ನ ಕಲಾಜಗತ್ತಿನ ಹೊಸ ಪಯಣ ಶುರುವಾಯಿತು. ಈ ನಾಟಕದಲ್ಲಿ ನನ್ನ ಅಭಿನಯವನ್ನು ನೋಡಿ ಗುರುತಿಸಿದ್ದ ಬಿ.ಎಂ. ಗಿರಿರಾಜ್ ಸರ್ ಅವರು ಅವರ ನಿರ್ದೇಶನದ “ಭಾರತ ಭಾಗ್ಯವಿಧಾತ” ನಾಟಕದಲ್ಲಿ ಅಭಿನಯಿಸಲು ಅವಕಾಶ ಕೊಟ್ಟರು. ಈ ನಾಟಕ ಕೇವಲ 33 ದಿನಗಳಲ್ಲಿ ಕರ್ನಾಟಕದ 30 ಜಿಲ್ಲೆಗಳಲ್ಲಿ ಪ್ರದರ್ಶನಗೊಂಡಿತು ಇದರ ಮೂಲಕ ನನಗೆ ಎಲ್ಲಾ ಜಿಲ್ಲೆಗಳನ್ನು ನೋಡುವ ಬಾಗ್ಯ ಸಿಕ್ಕಿತು. ಇದು ಒಂಥರಾ ನನಗೆ ಹೊಸ ಅನುಭವದರ ಜೊತೆಗೆ ನನ್ನ ಆತ್ಮವಿಶ್ವಾಸ ಹೆಚ್ಚಾಯಿತು ಧೈರ್ಯವಾಗಿ. ಕಲೆಯಲ್ಲೆ ನನ್ನ ಮುಂದಿನ ಜೀವನ ಮುಂದುವರೆಸಲು ನಿರ್ಧರಿಸಿದೆ.
ರಂಗಭೂಮಿಯ ನಂತರ ಸಿನಿಮಾಗಳಲ್ಲಿ ಅಭಿನಯಿಸುವ ಆಸೆಯಿಂದಾಗಿ ಎಷ್ಟೊಂದು ಆಡಿಷನ್ ಅಟೆಂಡ್ ಮಾಡಿದೆ, ಸೆಲೆಕ್ಟ್ ಆಗ್ತಿದ್ದೆ ಆದರೆ ಕೆಲವರು ಮತ್ತೆ ಕರೆ ಮಾಡುತ್ತಿರಲಿಲ್ಲ ಕಾರಣ ಕೇಳಿ ಫೋನ್ ಮಾಡಿದರು ರಿಸೀವ್ ಮಾಡುತ್ತಿರಲಿಲ್ಲ. ಕೆಲವರು ಕರೆದು ಅಭಿನಯಿಸಲು ಅವಕಾಶ ಕೊಡುತ್ತಿದ್ದರು. ಆದರೆ ಅವರ ಸಿನಿಮಾಗಳು ಅರ್ಧಕ್ಕೆ ನಿಂತಿದ್ದೆ ಹೆಚ್ಚು. “ರಕ್ಕಂ” ಎಂಬ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ಈ ಸಿನಿಮಾದಲ್ಲೇ ನನಗೆ ಮೊದಲು ನನ್ನ ಅಭಿನಯಕ್ಕೆ ಪೇಮೆಂಟ್ ಸಿಕ್ಕಿದ್ದು, ಈ ಸಿನಿಮಾದಲ್ಲಿ ಅವಕಾಶ ಕೊಟ್ಟಂತ ನಿರ್ದೇಶಕರಾಧ “ಸ್ಯಾಂಡಿಲ್” ಅವರಿಗೆ ಧನ್ಯವಾದಗಳು.
ಮುಂದೆ ಒಂದು ದಿನ ರೂಮಿನಲ್ಲಿ ಸುಮ್ಮನೆ ಕುಳಿತಿದ್ದೆ ಸಂಜಯ್ ನಗರದಲ್ಲಿ ಆಡಿಷನ್ ಇದೆ ಅಂತ ಫಾರ್ವರ್ಡ್ ಮೆಸೇಜ್ ಬಂತು ಎಲ್ಲಾ ಆಡಿಷನ್ಗಳಂತೆ ಇದು ಅಂತ ಹೋಗಿ ಕೊಟ್ಟು ಬಂದೆ. ಸೆಲೆಕ್ಟ್ ಆಗಿದಿರಾ ಅಂತ ಹೇಳಿ ಕಳುಹಿಸಿದರು. ಅಲ್ಲಿಂದ ಬಂದ ಮೇಲೆ ಗೊತ್ತಾಯ್ತು ನಾನು ಹೋಗಿದ್ದು ಕೆ.ಜಿ.ಎಫ್ 2 ಸಿನಿಮಾದ ಆಡಿಷನ್ನಿಗೆ ಅಂತ. ಯಾವುದೋ ಮುಖ್ಯವಾದ ಸೀನ್ ಇದೆ ಅಂತ ನನ್ನನ್ನ ಸೆಲೆಕ್ಟ್ ಮಾಡಿದ್ದರು ಆದರೆ ಮುಂದೆ ಆ ಸೀನ್ ಶೂಟ್ ಮಾಡಲಿಲ್ಲ. ಆ ತಂಡದಿಂದ ಮತ್ತೆ ಕರೆ ಬಂತು. ಆದರೆ ಈ ಸಾರಿ ನನಗೆ ಇದ್ದದ್ದು ಜ್ಯೂನಿಯರ್ ಆರ್ಟಿಸ್ಟ್ ಆಗಿ ಅಭಿನಯಿಸುವ ಅವಕಾಶ. ಅಂತ ದೊಡ್ಡ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರುವುದನ್ನು ಕಳೆದುಕೊಳ್ಳಬಾರದೆಂದು ಒಪ್ಪಿಕೊಂಡು  15ದಿನದ ಶೂಟಿಂಗ್ನಲ್ಲಿ ಭಾಗಿಯಾಗಿ ಬಂದೆ. ಈ ಸಿನಿಮಾದ ಶೂಟಿಂಗ್ ವೇಳೆಯಲ್ಲಿ ಒಂದು ಸೀನಿನಲ್ಲಿ ನಾನು ಎಲ್ಲರಿಗಿಂತ ಮುಂದೆ ಹೋಗಿ ನಿಂತೆ ಸೀನ್ ಚಿತ್ರೀಕರಣಕ್ಕೂ ಮುಂಚೆ ಇನ್ನೊಬ್ಬ ಜೂನಿಯರ್ ಆರ್ಟಿಸ್ಟ್ ನನ್ನ ಕಡೆ ಕೈ ತೋರಿಸಿ ನಿರ್ದೇಶಕರಾದ ಪ್ರಶಾಂತ್ ನೀಲ್ ಅವರಿಗೆ ಆ ಹುಡುಗ ಹ್ಯಾಂಡಿಕ್ಯಾಪ್ ಹಿಂದೆ ನಿಲ್ಲಿಸಿ ಅಂದ. ಅದಕ್ಕೆ ಪ್ರಶಾಂತ್ ಸರ್ ಬೇಡ ಅವನು ಅಲ್ಲೇ ಇರಲಿ ತುಂಬಾ ಚನ್ನಾಗಿ ಅಭಿನಯಿಸುತ್ತಾನೆ ಅಂದರು. ಅದು ನನಗೆ ಆ ಸಿನಿಮಾದಲ್ಲಿ ಸಿಕ್ಕ ದೊಡ್ಡ ಪ್ರಶಸ್ತಿ.
ಗೆಲ್ಲಬೇಕು ಎನ್ನುವ ಆಸೆ ಮತ್ತು ನಂಬಿಕೆ ಎರಡೂ ಇದೆ. ಕಲೆಯನ್ನೇ ನಂಬಿಕೊಂಡು ಬಂದಿದ್ದೇನೆ ನಾಟಕ, ಸಿನಿಮಾ, ಧಾರಾವಾಹಿ ಯಾವುದೇ ಆಗಲಿ ನನಗೆ ಎಲ್ಲಾ ನಿರ್ದೇಶಕರು ಮತ್ತು ನಟರ ಪ್ರೋತ್ಸಾಹದ ಅವಶ್ಯಕತೆ ಇದೆ. ನನ್ನ ಜೀವನಕ್ಕೆ ಸ್ಪೂರ್ತಿ ಅಂದರೆ ತಾನು ಅಂಧನಾಗಿ ಹುಟ್ಟಿ 13 ವಿಶ್ವವಿದ್ಯಾಲಯದಿಂದ ತಿರಸ್ಕೃತಗೊಂಡರು ಛಲ ಬಿಡದೆ ತನ್ನ ಅಂಗವೈಫಲ್ಯವನ್ನು ಮೆಟ್ಟಿನಿಂತು ವೈದ್ಯರಾದ  “ಡೆವಿಡ್ ಹಾರ್ಟ್ಮನ್”. ಹಾಗೆಯೇ ಹುಟ್ಟು ಕಿವುಡಿ ಆಗಿದ್ದರು ತನ್ನ ಅಭಿನಯದ ಮೂಲಕ ಆಸ್ಕರ್ ಪ್ರಶಸ್ತಿ ಪಡೆದ ಹಾಲಿವುಡ್ ನಟಿ “ಮಾರ್ಲಿ ಮಾಟ್ಲಿನ್”.
 

‍ಲೇಖಕರು avadhi

April 6, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ಅಮರದೀಪ್.ಪಿ.ಎಸ್.

    ವಿಶೇಷ್ ಸಂತೋಷ್ ಅವರೇ ನಿಮ್ಮ ಕಷ್ಟದ ಹಾಗೂ ಪರಿಶ್ರಮದ ಬದುಕಿಗೆ ಶರಣು….ನಿಮ್ಮ‌ ಮುಂದಿನ ಜೀವನ ಯಶಸ್ವಿಯಾಗಿ ಸಾಗಲಿ. ಕೀರ್ತಿ ಪಡೆಯುವಂತಾಗಲಿ…

    ಪ್ರತಿಕ್ರಿಯೆ
  2. T S SHRAVANA KUMARI

    ಜೀವನದಲ್ಲಿ ಗೆಲ್ಲಿ. ನನ್ನ ಹೃತ್ಪೂರ್ವಕ ಹಾರೈಕೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: