ಜೀವನದ ಹಾದಿಗೆ ತಿರುವು ಕೊಟ್ಟ ಮಣಿ ಸರ್..

ಮಂಸೋರೆ

ನಾನು ಸಿನೆಮಾರಂಗದ ಸೂಪರ್‌ಸ್ಟಾರ್‌ಗಳನ್ನು ಹತ್ತಿರದಿಂದ ನೋಡುವ ಮೊದಲೇ ಸ್ಟಾರಿಸಂನ ಹತ್ತಿರದಿಂದ ನೋಡಲು ಶುರುವಾಗಿದ್ದು ಚಿತ್ರಕಲೆ ವ್ಯಾಸಂಗದ ಪ್ರಾರಂಭದ ದಿನಗಳಲ್ಲಿ. ಚಿತ್ರಕಲಾವಿದರಲ್ಲಿ ಕೆಲವರು ನನ್ನಂತಹ ನೂರಾರು ಕಲಾ ವಿಧ್ಯಾರ್ಥಿಗಳ ಪಾಲಿಗೆ ‘ಸೂಪರ್‌ಸ್ಟಾರ್’ ಕಲಾವಿದರೇ ಆಗಿದ್ದರು.

ಯಾವುದೇ ಕಲಾಶಿಬಿರವಿರಲಿ, ಸಮಾರಂಭವಿರಲಿ ಅಲ್ಲಿ ಈ ಕೆಲವು ಕಲಾವಿದರು ಬರುತ್ತಿದ್ದಾರೆ ಎಂದರೆ, ಖಂಡಿತ ಅಲ್ಲಿ ಆ ಕಲಾವಿದರ ‘Demonstration’ ಇರುತ್ತದೆ ಎಂಬುದು ನಿಶ್ಚಿತ. ಅಂತಹ ‘Demonstration’ ನೋಡಲಿಕ್ಕೆ ಮುಗಿಬಿದ್ದು ಹೋಗುತ್ತಿದ್ದೆವು, ಅಂತಹ ನಮ್ಮ ಆರಾಧ್ಯ ಕಲಾವಿದರಲ್ಲಿ ಒಬ್ಬರು ‘ಜೆ.ಎಂ.ಎಸ್.ಮಣಿ’ ಸರ್.

ಇವರು ಕೆನ್ ಕಲಾಶಾಲೆಯ ಲೆಕ್ಚರರ್ ಆಗಿದ್ದರು, ನನ್ನದು ಚೇತನ್ ಕಾಲೇಜ್ ಆಫ್ ಫೈನ್ ಆರ್ಟ್ಸ್, ನಮ್ಮದು ಒಂದು ಕಾಲೇಜಿದೆ ಎಂಬ ವಿಷಯ ನಮ್ಮ ಕಾಲೇಜಿನ ರಸ್ತೆಯಲ್ಲಿದ್ದ ಮೂರನೇ ಮನೆಯವರಿಗೂ ಗೊತ್ತಿರಲಿಲ್ಲಾ ಅಂತಹ ಪ್ರಖ್ಯಾತ ಕಾಲೇಜಿನ ವಿಧ್ಯಾರ್ಥಿಯಾದ ನನಗೆ ನಮ್ಮ ಕಾಲೇಜಿಗಿಂತ ಹೆಚ್ಚಾಗಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಮಾರ್ಗದರ್ಶನ ಸಿಗುತ್ತಿದ್ದುದು, ಬೇರೆ ಕಾಲೇಜಿನಲ್ಲಿಯೇ. ಹಾಗೇ ನನಗೆ ಪರೋಕ್ಷವಾಗಿ ಮಾರ್ಗದರ್ಶನ ಹಾಗೂ ಸ್ಫೂರ್ತಿ ತುಂಬಿದವರಲ್ಲಿ ಮಣಿ ಸರ್ ಒಬ್ಬರು.

ಮಣಿ ಸರ್ ಅವರನ್ನು ಸೂಪರ್ ಸ್ಟಾರ್ ಎಂದು ಕರೆಯಲು ಮುಖ್ಯ ಕಾರಣ, ನಾವು ವಿಧ್ಯಾರ್ಥಿಗಳು ಆಯಿಲ್ ಕಲರ್ಸ್ ಅಕ್ರೆಲಿಕ್ ಕಲರ್ಸ್‌ನ 50ml ಟ್ಯೂಬ್‌ಗಳಲ್ಲಿ ಇಷ್ಟಿಷ್ಟೇ ಪ್ಯಾಲೆಟ್ಟಿಗೆ ಹಾಕಿ ಚಿತ್ರರಚಿಸುತ್ತಿದ್ದ ದಿನಗಳಲ್ಲಿ 500ml, 1ltr ಡಬ್ಬಗಳನ್ನು ನೇರ ಕ್ಯಾನ್ವಾಸ್ ಮೇಲೆ ಸುರಿದು ಮಣಿ ಸರ್ ಚಿತ್ರ ರಚಿಸುತ್ತಿದ್ದರು, ಅವರು ತಮ್ಮ ಕೈಯಲ್ಲಿದ್ದ ವೆಸ್ಟ್ ಬಟ್ಟೆಗೆ ಪ್ಯಾಲೆಟ್ ನೈಫ್ ಅಥವಾ ಬ್ರಷ್‌ಗಳಲ್ಲಿದ್ದ ಎಷ್ಟು ಬಣ್ಣವನ್ನು ಒರೆಸುತ್ತಿದ್ದರೋ ಅಷ್ಟು ಬಣ್ಣದಲ್ಲಿ ನಾವು ಎರಡೆರೆಡು ವರ್ಷಗಳು ನಿರಂತರವಾಗಿ ಚಿತ್ರರಚಿಸಬಹುದಿತ್ತು.

ಅವರದು ಒಪೆಕ್ ಮಾದರಿಯಲ್ಲಿ ಚಿತ್ರ ರಚಿಸುವ ಶೈಲಿ, ಅವರ ಕ್ಯಾನ್ವಾಸ್ ಮೇಲೆ ಬಣ್ಣ 1mm – 1/2-1inch ಅಷ್ಟು ದಪ್ಪ ಇರುತ್ತಿತ್ತು. ಹೀಗೆ ಒಮ್ಮೆ ಅವರು ಕಾಲೇಜಿನಲ್ಲಿ ಪೈಂಟಿಂಗ್ ಮಾಡಿ ಹೊರಗಡೆ ಟೀ ಕುಡಿಯಲು ಹೋದಾಗ, ಅವರ ವಿಧ್ಯಾರ್ಥಿಯೊಬ್ಬ ತನ್ನ ಪೈಂಟಿಂಗ್‌ಗೆ ಪೈಂಟ್ ಕಡಿಮೆಯಾಗಿದೆ ಎಂದು ಸೀದಾ ಅವರ ಕಲಾಕೃತಿಯಿಂದಲೇ ತೆಗೆದುಕೊಂಡು, ಅಮೇಲೆ ಗೊತ್ತಾಗಿ ಪಜೀತಿ ಅನುಭವಿಸಿದ್ದ.

ಮಣಿ ಸರ್ ನಮಗೆಲ್ಲಾ ಸ್ಫೂರ್ತಿ ಏಕೆಂದರೆ, ಅವರು ಶ್ರೀರಾಂಪುರದ ಸಣ್ಣ ಪ್ರದೇಶದಿಂದ ಬಂದವರು, ಕಲೆಯಲ್ಲಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದರು, ಅವರು ಆರ್.ಎಂ. ಹಡಪದ್ ಸರ್ ಅವರ ಮಾನಸ ಪುತ್ರರಾಗಿದ್ದರು, ಅವರ ಬಾದಾಮಿ ಸರಣಿ ಚಿತ್ರಗಳು ಅವರಿಗೊಂದು ಐಡೆಂಟಿಟಿ ತಂದು ಕೊಟ್ಟಂತಹ ಚಿತ್ರಗಳು. ಕ್ಯಾನ್ವಸು ಫ್ರೇಂಗಳಿಗೆ ದುಬಾರಿ ವೆಚ್ಚ ಖರ್ಚು ಮಾಡಿಸದೆ ವಿಧ್ಯಾರ್ಥಿಗಳೇ ಅವನ್ನು ತಯಾರು ಮಾಡಿಕೊಳ್ಳುವುದನ್ನು ತೋರಿಸಿಕೊಟ್ಟವರು.

ಮಣಿ ಸರ್ ನನಗೆ, ನನ್ನ ಜೀವನದ ಮುಖ್ಯ ತಿರುವಿಗೆ ಕಾರಣರಾದವರು. ನನ್ನ ಆರು ವರ್ಷದ Art master, Graduation Diploma ನಂತರ ನಾಗೇಂದ್ರ ಶಾನ್ ಸರ್ ಅವರ ನಿರ್ದೇಶನದ ನಿರಂತರ ಧಾರಾವಾಹಿಯಲ್ಲಿ ಕಲಾ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ, ನನಗೆ ನಾನು ಕಲಿತಿರುವುದು ಏನೇನೂ ಸಾಕಾಗುವುದಿಲ್ಲಾ ಮತ್ತಷ್ಟು ಕಲಿಯಬೇಕೆಂದರೆ ಸ್ನಾತಕೋತ್ತರ ಪದವಿ ಮಾಡಬೇಕೆಂಬ ತುಡಿತ ಹೆಚ್ಚಾಗಿ ನಾಗೇಂದ್ರ ಸರ್ ಅವರಿಂದ ಅನುಮತಿ ಪಡೆದು ಧಾರಾವಾಹಿ ಬಿಟ್ಟು ಬಂದೆ.

ನನಗೆ ಸ್ನಾತಕೋತ್ತರ ಪದವಿಯನ್ನು ಕಲ್ಕತ್ತಾದ ಶಾಂತಿನಿಕೇತನ, ಅಥವಾ ಬರೋಡದಲ್ಲಿ ಮಾಡಬೇಕೆಂಬ ಕನಸಿತ್ತು, ಆ ಕನಸನ್ನು ಭಗ್ನ ಮಾಡಿದವರು ನಾನು ಓದುತ್ತಿದ್ದ ಚೇತನ್ ಕಾಲೇಜಿನ ಆಡಳಿತ ಮಂಡಳಿ, ಹಂಪಿ ವಿಶ್ವವಿದ್ಯಾಲಯಕ್ಕೆ ಕಟ್ಟಬೇಕಿದ್ದ ಮೂರು ವರ್ಷದ ವಾರ್ಷಿಕ ಶುಲ್ಕ ಕಟ್ಟದೇ ಅವರು ನಮ್ಮ ಫಲಿತಾಂಶವನ್ನು ತಡೆ ಹಿಡಿದಿದ್ದರು. ಅಷ್ಟರಲ್ಲಿ ಶಾಂತಿನಿಕೇತನ ಹಾಗೂ ಬರೋಡಾದ ಎರಡೂ ಕಾಲೇಜಿಗೆ ಅರ್ಜಿ ಹಾಕಲು ಕೊನೇದಿನಾಂಕ ಮುಗಿದಿತ್ತು. ಉಳಿದದ್ದು ಬೆಂಗಳೂರು ವಿಶ್ವವಿದ್ಯಾಲಯ ಮಾತ್ರ.

ಮುಂದೇನು ಮಾಡುವುದೊ ತೋಚದೇ ಇದ್ದಾಗ ನೆನಪಾದವರು ಮಣಿ ಸರ್, ಅವರ ಬಳಿ ಹೋಗಿ ಸಮಸ್ಯೆ ಹೇಳಿಕೊಂಡೆ, ನನ್ನೊಂದಿಗೆ ಆಗ ಇದ್ದದ್ದು ಆರೇಳು ವಿದ್ಯಾರ್ಥಿಗಳಷ್ಟೇ. ಆಗ ಮಣಿ ಸರ್ ನನಗೆ, ಕೂಡಲೇ higher education secretary ವಿಜಯಭಾಸ್ಕರ್ ಸರ್ ಅವರನ್ನು ಭೇಟಿ ಮಾಡಲು ಸೂಚಿಸಿದರು. ಅವರನ್ನು ಭೇಟಿ ಮಾಡಿದ ಇಪ್ಪತ್ನಾಲ್ಕು ಗಂಟೆಯಲ್ಲಿ ಫಲಿತಾಂಶ ಸಿಕ್ಕಿತು.

ಆನಂತರ ಬೆ.ವಿ ಅರ್ಜಿ ಹಾಕಿದೆ, ಅಲ್ಲಿ ಸೆಲೆಕ್ಷನ್ ಕಮಿಟಿಯಲ್ಲಿದ್ದವರು ಇದೇ ಮಣಿ ಸರ್. ನನ್ನ ಬಗ್ಗೆ ‘ತುಂಬಾ ಚೆನ್ನಾಗಿ’ ಅರಿತಿದ್ದ ಮಣಿ ಸರ್ ನನ್ನನ್ನು ಬೆ.ವಿ ಕೋಟಾದಲ್ಲಿ ಚಿತ್ರಕಲಾ ಪರಿಷತ್ತಿಗೆ ಹೋಗಲು ಸಲಹೆ ನೀಡಿದರು. ಅವತ್ತಿಗೆ ಅಷ್ಟು ದುಬಾರಿ ಕಾಲೇಜಿಗೆ ಕಳಿಸುತ್ತಿರುವುದಕ್ಕೆ ಮಣಿ ಸರ್ ಮೇಲೆ ಸ್ವಲ್ಪ ಕೋಪ ಬಂದಿದ್ದು ನಿಜ. ಕಾರಣ ಎರಡು ವರ್ಷದ ಅವಧಿಗೆ ಆಗ ಬೆ.ವಿ 4-5ಸಾವಿರವಷ್ಟೇ ಶುಲ್ಕವಿದ್ದದ್ದು, ಚಿತ್ರಕಲಾ ಪರಿಷತ್ತಿನಲ್ಲಿ ಎರಡು ವರ್ಷಗಳ ಅವಧಿಗೆ 32 ಸಾವಿರ. ಅಷ್ಟು ದೊಡ್ಡಮಟ್ಟದ ಶುಲ್ಕ ಭರಿಸುವ ಸ್ಥಿತಿಯಲ್ಲಿ ನಾನಿರಲಿಲ್ಲಾ.

ಆಗ ಸೆಲೆಕ್ಷನ್ ಕಮಿಟಿಯಲ್ಲಿದ್ದ ಸಿಕೆಪಿ ಲೆಕ್ಚರರ್ ಟಿ.ಎನ್.ಕೃಷ್ಣಮೂರ್ತಿ ಸರ್ ಎಡ್ಯುಕೇಷನ್ ಲೋನ್ ಕೊಡಿಸುವ ಭರವಸೆ ನೀಡಿದ ಮೇಲೆ ನಾನು ಒಪ್ಪಿಕೊಂಡೆ. ಆನಂತರ ಹೊರ ಬಂದ ಮೇಲೇ ಮಣಿ ಸರ್ ಹೆಗಲ ಮೇಲೆ ಕೈಹಾಕಿ ಒಂದು ಮಾತು ಹೇಳಿದ್ದರು, ಸಿಕೆಪಿಗೆ ಕಳಿಸ್ತಿರೋದಿಕ್ಕೆ ಬೈಕೋಬೇಡ. ನಿನಗೆ ಅಲ್ಲಿ ತುಂಬಾ ಒಳ್ಳೆಯದಾಗುತ್ತೆ ಅಂತ.

ಅವರ ಮಾತು ನಿಜವಾಯಿತು, ನನ್ನ ಜೀವನದಲ್ಲಿ ದೊಡ್ಡ ತಿರುವು ಸಿಕ್ಕಿದ್ದು ಸಿಕೆಪಿ ಯಲ್ಲಿ. ಹಾಗಾಗಿ ಇಂದು ಈ ಹಂತ ತಲುಪಿದ್ದೇನೆ. ನಿನ್ನೆ ನೀವು ದೈಹಿಕವಾಗಿ ನಮ್ಮನ್ನು ಅಗಲಿರಬಹುದು ಮಣಿ ಸರ್, ಆದರೆ ನಿಮ್ಮ ಹಾಗೂ ನಿಮ್ಮ ಕಲಾಕೃತಿಗಳು, ನೀವು ಕೊಟ್ಟ ಸ್ಫೂರ್ತಿ ಸದಾ ನೆನಪಲ್ಲಿ ಇರುತ್ತದೆ.

‍ಲೇಖಕರು Avadhi

June 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: