‘ಜೀನ್ಸ್ ತೊಟ್ಟ ದೇವರು’ ಕಣ್ಣೆದುರು ಬಂದಾಗ

 

 

 

 

 

 

ಸುಧಾ ಆಡುಕಳ

 

ವಿಶೇಷಾಂಕವೊಂದು ಕೈಗೆ ಬಂದಾಗ ಕಾವ್ಯ ಕಡಮೆಯವರ ಕವನವನ್ನು ಮೊದಲು ಹುಡುಕಿ ಓದುವುದು ಇತ್ತೀಚಿನ ಖಯಾಲಿಯೇ ಆಗಿ ಹೋಗಿತ್ತು.

ಆಚೆಗೆ ಪೂರ್ತಿ ನಮ್ಮ ಕಾಲದ ಹಳಹಳಿಕೆಯೂ ಅಲ್ಲದ, ಈಚೆಗೆ ಪೂರ್ತಿ ಹೊಸ ಕಂಪ್ಯೂಟರ್ ಯುಗದ ಕಾವ್ಯವೂ ಅಲ್ಲದ ಹೊಸಬಗೆಯ ಕಾವ್ಯವನ್ನು ಹೊಸೆಯುವ ಅವರ ನೇಯ್ಗೆಯ ರೀತಿಯೇ ನನ್ನನ್ನು ಅಚ್ಚರಿಗೊಳಿಸುತ್ತಿತ್ತು.

ಮೊನ್ನೆ ಮೊನ್ನೆ ಅವರ ‘ಜೀನ್ಸ್ ತೊಟ್ಟ ದೇವರು’ ಕವನ ಸಂಕಲನಕ್ಕೆ ಕಡಂಗೋಡ್ಲು ಕಾವ್ಯ ಪುರಸ್ಕಾರ ದೊರಕಿದೆ. ಪುರಸ್ಕಾರ ಸಮಾರಂಭಕ್ಕೆ ಅನಿರೀಕ್ಷಿತವಾಗಿ ಹೋಗಿ ಕಡಮೆ ದಂಪತಿಗಳಿಗೆ ಸರ್‍ಪ್ರೈಸ್ ನೀಡಬೇಕೆಂದು ತಿಂಗಳಿನಿಂದ ಮಾಡಿಕೊಂಡ ಯೋಜನೆ ಕೊನೆ ಕ್ಷಣದಲ್ಲಿ ಕೈಕೊಟ್ಟಿತ್ತು. ಆದರೂ ಕಾವ್ಯ ಅವರ ಕವನಗಳನ್ನು ಇಡಿಯಾಗಿ ಪುಸ್ತಕರೂಪದಲ್ಲಿ ಓದಬೇಕೆಂಬ ಆಸೆ ಹಾಗೆಯೇ ಉಳಿದುಕೊಂಡಿತ್ತು. ಇಂದು ಕಾವ್ಯ ನನಗೇ ಸರ್ ಪ್ರೈಸ್ ನೀಡಿದ್ದಾರೆ. ಅವರು ನನಗಾಗಿ ಕಳಿಸಿದ ಪುಸ್ತಕ ಜೀನ್ಸ್ ತೊಟ್ಟ ದೇವರನ್ನು ನನ್ನ ಮುಂದೆ ತಂದು ನಿಲ್ಲಿಸಿದೆ.

ಕಾವ್ಯ ತನ್ನ ಕವನಗಳ ಮೂಲಕ ಅಮೂಲ್ಯವಾದುದೇನನ್ನೋ ಕ್ಷಣಕಾಲ ಮಾತ್ರ ನಮ್ಮೆದುರು ತೆರೆದಿಟ್ಟು ತಕ್ಷಣ ಪರದೆಯೆಳೆದುಬಿಡುತ್ತಾರೆ ಅನಿಸುತ್ತದೆ. ನಾವು ನೋಡಿದ್ದಂತೂ ಸತ್ಯ ಎಂದುಕೊಳ್ಳುತ್ತಿರುವಾಗಲೇ ಏನನ್ನೂ ನೋಡಿದೆವು ಎಂಬುದು ಪೂರ್ತಿಯಾಗಿ ಅರ್ಥವಾಗದೇ ಮತ್ತೆ, ಮತ್ತೆ ಅದರ ಬಗ್ಗೆಯೇ ಧ್ಯಾನಿಸುವಂತೆ ಮಾಡುವುದು ಅವರ ಕವನಗಳ ತಾಕತ್ತು ಕೂಡಾ ಹೌದು. ಹಾಗಾಗಿ ಅವರು ತೆರೆದಿಡುವ ವಿಷಯ ಅವರದು ಮಾತ್ರವಲ್ಲದೇ ಅವರ ಮೂಲಕ ನಮ್ಮೊಳಗನ್ನು ತೆರೆದಿಡುತ್ತದೆ. ಗಟ್ಟಿಯಾದ ಕವನಗಳು ಮಾಡಬೇಕಾದುದು ಇದನ್ನೇ ಅನಿಸುತ್ತದೆ.

ಎಲ್ಲ ಮುಗಿದ ಮೇಲೆ ಹೀಗೆ
ಬೆನ್ನು ಹಾಕಿ ಮಲಗಬೇಡ ಪ್ಲೀಸ್, ನಿನ್ನ
ಬೆತ್ತಲೆ ಬೆನ್ನು ಥೇಟು ನನ್ನ ಪಪ್ಪನದೇ

ಇದು ಅಮ್ಮನಂತೆ ಕಾಣುವಳು ಹುಡುಗಿ ಎಂದು ಬಿಂದಿಯನು ಕಿತ್ತಿಟ್ಟು ಮುದ್ದಿಸುವ ಹುಡುಗನಿಗೆ ಹುಡುಗಿ ಹೇಳುವ ಮಾತು. ಇದು ಇಷ್ಟನ್ನು ಮಾತ್ರ ಹೇಳದೇ ಗಂಡು ಅವನ ಅಮ್ಮನನ್ನು ಹೆಂಡತಿಯಲ್ಲಿ ಹುಡುಕುವ, ಮತ್ತು ಅದೇ ಕ್ಷಣದಲ್ಲಿ ತಾನು ಹೆಂಡತಿಯ ಅಪ್ಪನು ಆಗಬೇಕಾದ ಅನಿವಾರ್ಯತೆಯನ್ನು ಮರೆಯುವ ಯಾವ್ಯಾವುದೋ ಅನುಭವಗಳೆಡೆಗೆ ಸರಾಗವಾಗಿ ನಮ್ಮನ್ನು ಕೊಂಡೊಯ್ದು ಕಾಡುತ್ತದೆ.

ಒಂಟಿಕಾಲಿನ ಅವನೂ ಜಾರುತ್ತಾನೆ ಒಮ್ಮೊಮ್ಮೆ
ಜಾರಬಾರದೆಂದರೆ ಹೇಗೆ?
ದೇವರಾದ್ದೇ ಹಾಗೆ

ಕಾವ್ಯ ಅವರ ಈ ಸಾಲು ಓದುವಾಗ ದೇವರು ಜಾರಿದ ನೂರಾರು ಘಟನೆಗಳು ನಿಮ್ಮೆದುರು ತೆರೆದುಕೊಳ್ಳದಿದ್ದರೆ ಹೇಳಿ! ಜೊತೆಯಲ್ಲಿ ಹೌದಲ್ಲ! ಎನ್ನುವ ಪುಳಕ ಕೂಡ. ಹಾಗಾಗಿ ಅವರ ದೇವರು ನಮ್ಮ ನಿಮ್ಮಂತೆ ಜೀನ್ಸ್ ತೊಟ್ಟಿದ್ದಾನೆ.

ಅವನು ಅಷ್ಟೇನು ದೊಡ್ಡವನಲ್ಲ
ದುರದವನೂ ಅಲ್ಲ ಸುಮ್ಮನೆ ಹೆದರಿದ್ದೆವು ನಾವು
ಅವನ ಕಾಣುವ ಮೊದಲು.

ಅಜ್ಜಿಯ ಕೈಹಿಡಿದು ನಡೆಸು ಮೊಮ್ಮಗಳ ಕಾಡುವ ಪ್ರಶ್ನೆ, ‘ ನಡೆವಾಗ ಯಾರು ಯಾರಿಗೆ ದಾರಿ ತೋರುತಿಹರು?’ ಮೊಮ್ಮಗಳು ಹೇಳುತ್ತಾಳೆ, “ ನೀನಾಗಲೇ ಹಾದು ಬಂದ ನಮ್ಮ ವಯದ ದುಗುಡ ನಿನಗೆ ತಿಳಿಯದು ಎಂದು ವಾದಿಸಿ ಬೀಗುತ್ತೇವೆ ನಾವಿನ್ನೂ” ಜೊತೆಗೆ “ಅಜ್ಜಿ , ನಿನ್ನ ತಡೆಯಲು ಬಂದವರು ಥಟ್ಟಂತ ಕೈ ಹಿಂದೆಗೆಯಲಿ ಬೇಯುವ ಚಪಾತಿಯೊಳಗಿಂದ ಪುಸ್ಸಂತ ಉಬ್ಬಿ ಹೊಗೆ ಬಂದಂತೆ” ಎಂಬ ಹಾರೈಕೆಯೂ ಅಜ್ಜಿಗಿದೆ.

ಪ್ರತಿಭಾ ಅವರ ಆತ್ಮಕತೆ ‘ಅನುದಿನದ ಅಂತರಗಂಗೆ’ಯಲ್ಲಿ ಪತ್ರಕರ್ತ ಮಿತ್ರರೊಬ್ಬರ ಅಡುಗೆ ಮನೆಯ ಅಸ್ತವ್ಯಸ್ತತೆಯ ವಿವರಗಳು ಬರುತ್ತವೆ. ಜೊತೆಯಲ್ಲಿ ಪ್ರತಿಭಾ ಅವರ ಮನೆಯಲ್ಲಿ ಪ್ರತಿದಿನ ಮಲಗುವ ಮೊದಲು ಅಡುಗೆ ಮನೆಯನ್ನು ಎಷ್ಟು ಓರಣವಾಗಿಡುತ್ತಾರೆ ಮತ್ತು ಅದು ಅವರ ಮನೆಯ ಎಲ್ಲ ಹೆಣ್ಣುಮಕ್ಕಳಲ್ಲಿ ಸಂಪ್ರದಾಯವಾಗಿ ಹೇಗೆ ಮುಂದುವರೆದಿದೆ ಎಂಬುದನ್ನೂ ಅವರು ವಿವರಿಸುತ್ತಾರೆ. ಆ ಎಲ್ಲ ವಿವರಣೆಗಳು ಎಷ್ಟು ಮನೋವೇದ್ಯವಾಗಿವೆಯೆಂದರೆ ಓದಿದ ಯಾರೇ ಆಗಲಿ ಮಲಗುವ ಮೊದಲು ಪ್ರತಿಭಾರನ್ನು ಅನುಕರಿಸದಿರಲು ಸಾಧ್ಯವಿಲ್ಲ.

ಕಾವ್ಯ ಕೂಡ ‘ಸಂಜೆ ನಾನು ಬಂದಾಗ’ ಎಂಬ ಕವನದಲ್ಲಿ ಅಷ್ಟೇ ಸೂಕ್ಷ್ಮವಾಗಿ ಹೆಣ್ಣಿನ ಕೆಲಸದ ವಿವರಗಳನ್ನು ಕಡೆದು ನಿಲ್ಲಿಸುತ್ತಾರೆ. ‘ಅವನ ಶರಟಿನ ಕಾಲರಿನಲ್ಲಿ ಹೊಲಿಗೆ ಬಿಟ್ಟಾಗ ನಾ ನಂಬಿದ ಈ ನೆಲದಲ್ಲಿ ಮೊದಲ ಬಿರುಕು ಕಾಣುವೆ’ ಎಂದು ಬರೆಯುವ ಇವರನ್ನು ಪ್ರೀತಿಸದಿರುವುದಾದರೂ ಹೇಗೆ ಹೇಳಿ?

ಸಾರು ಕುದ್ದು ಉಕ್ಕಬಾರದು
ಇಂಗಬೇಕು ದುಃಖದ ಹಾಗೆ
ಉಕ್ಕಿ ಹರಿವ ದುಃಖ ಕೂಡ
ಗಂಧ ಕಳಕೊಂಡ ಸಾರ ಹಾಗೆ
ರುಚಿಯಾದ ಸಾರು ಇಳಿಸುವುದು ಎದೆಯ ಭಾರ –

ಎನ್ನುವುದನ್ನು ಓದುವಾಗ ವೈದೇಹಿಯ ತಿಳಿಸಾರು ನೆನಪಾಗುತ್ತದೆ. ಹೆಣ್ಣಿನೆದೆಯಲ್ಲಿ ಸಾರು ಸದಾ ಕುದಿಯುತ್ತಲೇ ಇರುತ್ತದೆ, ತನ್ನ ಗಂಧವನ್ನು ಹೊರಚೆಲ್ಲದೆ.

ಶೃಂಗಾರಕ್ಕೆ ಬಿಡು ಆಕಾರಕ್ಕೂ ನಾಟದಷ್ಟೂ ದೂರ ನೀನು
ಎವೆ ಮುಚ್ಚಿದಾಗ ಮಾತ್ರ ಉಸಿರು ತಾಗುವಷ್ಟು ಹತ್ತಿರ-

ಇದು ನಾವಿಬ್ಬರೂ ಎಂಬ ಕವನದ ಸುಂದರ ಸಾಲುಗಳು.

ಒಂದು ಕೈಕುಲುಕಲೂ ಆಗದಷ್ಟು ಸನಿಹ ನಿಂತ ವಿದಾಯದಲಿ
ಕ್ಷಮಿಸು, ನಿನ್ನ ನಿಜ ನಾಮಧೇಯವ ಕೇಳಲು
ಸುಳ್ಳೇ ಮರೆತಂತೆ ನಟಿಸಿಬಿಟ್ಟೆ
ಈಗ ಮಿಲನವೂ ವಿದಾಯವೂ ನಮ್ಮ
ಗಡಿಯಾಚಿನದು

–ಎನ್ನುತ್ತಾಳೆ ಹೆಸರು ಕೇಳಲು ಮರೆತ ಹಳೆಯ ಪ್ರೇಮಿ!

ಕೈಗೆ ಬಂದೊಡನೆ ಎರಡೆರಡು ಸಲ ಓದಿ ಮತ್ತೆಯೂ ನಡುನಡುವೆ ಮತ್ತೇನನ್ನೋ ಆಯ್ದು ಖುಶಿಪಡುವಂತಹ ಇಂತಹ ಸುಂದರ ಕವನಗಳ ಕಟ್ಟನ್ನು ಕೇಳದೆಯೇ ನನ್ನ ಕೈಗಿಟ್ಟ ಪುಟ್ಟ ಗೆಳತಿ ಕಾವ್ಯಳಿಗೆ “ಪ್ರೀತಿಯ ನೆನಕೆಗಳು” ಎಂದಷ್ಟೇ ಹೇಳಲು ಸಾಧ್ಯ. ಈ ಕಾವ್ಯವನ್ನು ಸೃಜಿಸಿದ ಕಡಮೆ ದಂಪತಿಗಳಿಗೆ ಧನ್ಯವಾದಗಳು ಎಂದಷ್ಟೇ ಹೇಳಿದರೆ ಕಡಮೆಯಾದೀತೇನೋ?

‍ಲೇಖಕರು avadhi

October 12, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Kavya Kadame

    ಪ್ರೀತಿಯ ಸುಧಾ ಆಡುಕಳ ಮ್ಯಾಮ್ ರಿಗೆ ನಮಸ್ಕಾರಗಳು.

    ನಿಮ್ಮ ಬರಹ ಓದಿ ತುಂಬಾ ಹರ್ಷವಾಯಿತು. ಚಿಕ್ಕವಳ ಪುಸ್ತಕದ ಕುರಿತು ಇಷ್ಟು ವಿಸ್ತಾರವಾಗಿ, ಆಳವಾಗಿ ಬರೆದಿರುವ ನಿಮ್ಮ ಪ್ರೀತಿ ದೊಡ್ಡದು. ತಮ್ಮ ಪ್ರೀತಿ ವಿಶ್ವಾಸಗಳಿಗೆ ಚಿರಋಣಿ.

    ಆತ್ಮೀಯವಾಗಿ,
    ಕಾವ್ಯಾ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: