ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಪಿ ಬಸವರಾಜು ಹೊಸ ಕವಿತೆ- ನೀರಿಲ್ಲದ ಗಂಟಲಲ್ಲಿ..

ಜಿ.ಪಿ.ಬಸವರಾಜು

—–

ಪ್ರಶ್ನೆಗೆ ಉತ್ತರ

ಸಿದ್ಧವಿದ್ಧವಿದ್ದರೂ

ಸಿಕ್ಕುವುದಿಲ್ಲ ನೀರು

ಪ್ರಶ್ನೆ ಕೇಳುವುದೂ ಇಲ್ಲ ಯಕ್ಷ

ಪ್ರಶ್ನೆಗಾಗಿ ಕಾದು ಕುಳಿತಿದ್ದೇವೆ ಎಲ್ಲ

ನೀರ ಕೊಳದ ಬಳಿಯಲ್ಲಲ್ಲ

ಬಿರಿದು ಬಾಯ್ತೆರೆದ ಭೂಮಿ

ಮಡಿಲಲ್ಲಿ ಒರಗಿವೆ ಜೀವರಾಶಿ

ಮಥಿಸಿ ಮಸ್ತಕದಲ್ಲಿ

ಜೋಡಿಸಿದ ಉತ್ತರ

ಕುಣಿಯುತ್ತಿವೆ ನಾಲಿಗೆಯಲ್ಲಿ

ಯಾಕೆ ಮಾಯದ ಮಳೆ

ಇಳಿಯುವುದಿಲ್ಲ ಇಳೆಗೆ.

ನಿಲ್ಲುವುದಿಲ್ಲ ತೇಲುವ

ಮೋಡ, ಮಿಂಚಿನ ಬೆಳಕು

ನಂದಿ,, ಗುಡುಗು ಮಾತಿಲ್ಲದ

ಗುಮ್ಮನಾದದ್ದು ಯಾಕೆ?

ಎಷ್ಟೊಂದು ಪ್ರಶ್ನೆಗಳು

ಎಷ್ಟೊಂದು ಉತ್ತರಗಳು

ಹಾರಿ ಹೋಗುತ್ತವೆ ಹಕ್ಕಿ

ನಿಲ್ಲಲು ನೆಲೆ ಇಲ್ಲದೆ ಎಲ್ಲೂ

ಮಾತು ಮರೆತವನಂತೆ ಯಕ್ಷ

ಸುಮ್ಮನಿದ್ದಾನೆ, ಪ್ರಶ್ನೆಗಳ ನುಂಗಿ

ನೀರು ಭೂಮಿ ಆಕಾಶ

ಬೆಂಕಿ ಗಾಳಿ ಬಯಲು

ನಮ್ಮ ಮೈಯ್ಯ ಚರ್ಮ

ನೇಯ್ದಿವೆ ಸಂಬಂಧಗಳನು

ನೋಡುವುದಿಲ್ಲ ಯಕ್ಷ

ಕೇಳುವುದಿಲ್ಲ ಯಕ್ಷ

ಆಡುವುದಿಲ್ಲ ಯಕ್ಷ

ಚಂದ್ರನಲ್ಲಿ ನೀರಿದೆಯೇ,

ಗುರು ಶುಕ್ರ ಮಂಗಳದಲ್ಲಿ?

ಹೋಗಿಬಂದವರು ನಾವು

ಉತ್ತರವ ಹುಡುಕಿ

ಉತ್ತರ ದಕ್ಷಿಣವ ಬೆದಕಿ

ಸತ್ಯವ ನುಂಗಿ

ಮಾತಿನಲ್ಲಿ ಮರುಳು

ಮಾಡಿದವರು ನಾವು

ಸತ್ಯವೆಂಬುದು ಬೆಳಕಾದರೆ

ಕತ್ತಲಲ್ಲೆ ಬೆತ್ತಲಾದವರು ನಾವು

ಸತ್ಯ-ಸುಳ್ಳಿನ ನಡುವೆ ಗೆರೆ ಬರೆದು

ಅರಿವಿನ ಎಲ್ಲೆ ಹಿಗ್ಗಿಸಿ, ಹಿಗ್ಗಿದವರು

ಎಲ್ಲಿದೆ ಗೆರೆ ಎನ್ನುವುದಿಲ್ಲ ಯಕ್ಷ

ನಮ್ಮ ನೆತ್ತರಲ್ಲಿ ಹರಿವ  ವಂಶ-

ವಾಹಿನಿಯ ತಂತು ಬಲ್ಲವನು

ಪ್ರಶ್ನೆ ಏಕಿಲ್ಲವೆಂದು ಯಕ್ಷನನ್ನೆ

ಹಿಡಿದು ಜಗ್ಗಾಡಿದವರು ನಾವು

ಒಂದು ಗುಟುಕು

ನೀರನ್ನೊ ವಿಷವನ್ನೊ

ಕೊಡು ಎಂದರೆ ನೋಡುತ್ತಾನೆ

ಯಕ್ಷ, ಯಕ್ಷಿಣಿಯ ನಗೆಯಲ್ಲಿ

ಧರ್ಮ-

ರಾಜನ

ಹೆಸರನ್ನಾದರೂ ಕೇಳಿದ್ದೀರಾ?-

ಎನ್ನುತ್ತಾನೆ ಯಕ್ಷ ಮೌನ ಮುರಿದು

ಕಡುಬು ಸಿಕ್ಕಿಕೊಂಡಿದೆ

ನೀರಿಲ್ಲದ ಗಂಟಲಲ್ಲಿ

ಉತ್ತರ ಕುಳಿತಿದೆ ಒಳಗೇ

‍ಲೇಖಕರು avadhi

30 September, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading