ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಪಿ ಬಸವರಾಜು ಹೊಸ ಕವಿತೆ -ನದಿದೇವತೆಯ ದಡದಲ್ಲಿ

ಜಿ.ಪಿ.ಬಸವರಾಜು

——

ಜಲದೇವತೆಯೆಂದು ಹೇಗೆ ಕರೆಯಲಿ ತಾಯಿ ನಿನ್ನ?

ಗುಡಿ ಗುಂಡಾರಗಳ ಸುತ್ತಿ, ಊರು ಕೇರಿಗಳ ಹಾದು

ಕೊಳೆ ಕಸ ಗಲೀಜು ಹೊತ್ತು ದಿಕ್ಕೆಟ್ಟು ತಿರುಗುವ ನಿನ್ನ

ಒಡಲಲ್ಲಿ ಕೊಳೆಯುತ್ತಿವೆ ಹೇಳ ಹೆಸರಿಲ್ಲದ  ಜೀವ

ಬೆಳಕಿನ ಕಿರಣಗಳ ನುಂಗಿ ಹೊಳೆವ ನಿನ್ನ ತೆರೆತೆರೆಗಳಲ್ಲಿ

ತೇಲುತ್ತಿವೆ ಭೂತ ಪ್ರೇತ, ಕತ್ತು ಹಿಚುಕಿದ ರಾಶಿರಾಶಿ

ಹೂಗಳ ಹೆಣ, ಮಣಮಣ ಮಂತ್ರ ಮುಳುಗೇಳುತ್ತಿವೆ

ಅರ್ಘ್ಯ ಪಾದ ಆಚಮನ ದಂಡೆಯುದ್ದಕ್ಕೂ ಮೆರೆಯುತ್ತಿವೆ

ಗುಡ್ಡಬೆಟ್ಟಗಳ ಇಳಿದಿಳಿದು ಬರುವಾಗ ಕಾಡ ಕಂಪನು ಹೀರಿ

ಬೇರು ಬೊಡ್ಡೆಯ ಹೊಕ್ಕು, ಹಕ್ಕಿ ಕೊರಳ ಕಲರವದಲ್ಲಿ ಮಿಂದು

ಥಳಥಳಿಸಿ ಹೊಳೆವಾಗ ದೇವತೆಯೆ ಧರೆಗಿಳಿದು ಬಂದ ಸಂಭ್ರಮ

ಎಲ್ಲೆಲ್ಲು ಜೀವ ಪುಟಿದು ಉಮೇದು ಉಕ್ಕಿ ನಕ್ಕ ನಗು ಮುಗಿಲಗಲ

ಇಲ್ಲಿ ಈ ಮಣ್ಣಲ್ಲಿ ಬಣ್ಣ ಬದಲಾಗಿ ರೂಪಕೆಟ್ಟು ಕಣ್ಣಿಗೆ

ಕಟ್ಟುವುದು ಕರಾಳ ಮುಖ, ಅಧೋಲೋಕ ಇರುವುದು

ಕಣ್ಮುಂದೆ ತೆರೆಯುವುದು ನಿನ್ನ ಒಳಹೊಕ್ಕು ನೋಡಿದರೆ

ಯಾರ ತಂದು ನಿಲ್ಲಿಸಲಿ ಅಪರಾಧಿ ಕಟಕಟೆಯಲ್ಲಿ?

ಏಕಾಂತದಲ್ಲಿ ಮೆರೆಯುತ್ತವೆ ಹರಿತ ಹತಾರಗಳು, ಕನ್ನೆಯರ

ಜಲಕ್ರೀಡೆಗೆಳೆದು ಹಿಡಿದು ಹಿಂಡಿ ಅಂಗಾಂಗ ಕತ್ತರಿಸಿ, ತರ್ಪಣ

ಕೊಟ್ಟು ನಗುತ್ತಾರೆ ಸುತ್ತಲಿನ ಕಾಡು ನಾಡು  ಗುಡಿ ಗೋಪುರ

ನಡುಗುವಂತೆ; ಸ್ಥಳವಂದಿಗ ದೇವರು ಕಣ್ಮುಚ್ಚಿ ಕುಳಿತಿದ್ದಾನೆ

ಪೂಜಾರಿಗಳ ಆರ್ಭಟದಲ್ಲಿ, ಚಂಡೆಮದ್ದಳೆಗಳ ಸದ್ದಿನಲ್ಲಿ

ಪದ್ಮಿನಿಯೊ ಪಾರ್ವತಿಯೊ ರುಕ್ಮಿಣಿಯೊ ರಾಧೆಯೊ

ತಿರುಗು ಮಡುವಿಗೆ ಸಿಕ್ಕವರು ಹೆಣವಾಗಿ ತೇಲುತ್ತಾರೆ

ಹೆಸರಿಲ್ಲದೆ ಗುರುತಿಲ್ಲದೆ; ಮೂಸಿ ನೋಡುವ ನಾಯಿಯ

ಜಾಡೂ ತಪ್ಪಿ, ಕುಣಿಯುತ್ತವೆ ಕರಾಳ ರೂಪ ಧಿಮಿಕಿಟ

ಊರಲ್ಲಿ ಜನ ಜಾತ್ರೆ ಪೂಜೆ ಪುನಸ್ಕಾರ ವರ್ಷದ ತೇರು ಸಾಗಿ

ಮುಗಿಲಿಗೆಸೆಯುವ ಹೂವು ದವನ ಕಾಲ ತುಳಿತಕ್ಕೆ ಸಿಕ್ಕು

ಎಲ್ಲೆಲ್ಲು ಸಂಭ್ರಮ, ʼತಪ್ಪದೆ ನೋಡಿ, ರಾತ್ರಿಯ ಆಟ

ಮರೆಯದಿರಿ, ಮರೆತು ಮರುಗದಿರಿʼ ಮೊಳಗುವುದು ಕರೆ

ಕಳಕೊಂಡವರ ಕಣ್ಣೀರು ಬೆರೆಯುವುದು ನೆತ್ತರಲಿ

ನದಿ ನೀರು ಕೆಂಪಾಗಿ, ದಡಕಾಣದ ಜೀವಗಳು ಕೈ

ಬಡಿಯುತ್ತಿವೆ– ಮುಳುಗುತ್ತ ತೇಲುತ್ತ ಜೀವ ಪಣಕೊಡ್ಡಿ

ಅಳಿದುಳಿದ ಅನಾಥರು ಗುಡಿ ಸುತ್ತುವವರ ತಡೆದು

ಕೇಳುತ್ತಾರೆ ತಮ್ಮ ಮನೆಯ ದಾರಿ ಯಾವುದೆಂದು

‍ಲೇಖಕರು avadhi

19 October, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading