
–ಜಿ.ಪಿ.ಬಸವರಾಜು
ಉಸ್ತಾದರು ತೀರಿಹೋದ ಹೊತ್ತಲ್ಲಿ
ಹೊರ ಜಗತ್ತು ಹೇಗಿತ್ತು?
ತಿಳಿಯಲಿಲ್ಲ, ಒಳಗಿದ್ದೆ ನಾನು
ಹನಿ ಹನಿ ತೊಟ್ಟಿಕ್ಕುತ್ತಿತ್ತು ಒಳಗೆ
ಎಲ್ಲರ ಕಣ್ಣುಗಲ್ಲಿ, ಉಸ್ತಾದರ
ನೋವು ಮುಗಿದು ದಟ್ಟ ಮೋಡ
ಮುಚ್ಚಿತ್ತು; ಗುಡುಗು ಸಿಡಿಲುಗಳೆಲ್ಲ
ಸ್ತಬ್ಧವಾಗಿ, ಬಿಕ್ಕು ಉಕ್ಕುಕ್ಕಿ ತುಟಿ
ಬಿರಿದು, ತಣ್ಣಗಾಗಿತ್ತು ಎಲ್ಲ
ಪುಟುಪುಟು ಓಡಾಡುವ ನರ್ಸುಗಳು
ಘನ ಗಂಭೀರ ಡಾಕ್ಟರರು, ಸಾಲು ಸಾಲು
ಕಾರಿಡಾರು, ಸೂರ್ಯನ ಕಣ್ಣುಮುಚ್ಚಿಸಿದ
ದೀಪಗಳು, ಹಗಲೊ ರಾತ್ರಿಯೊ ತಿಳಿಯದು
ನಿಯಂತ್ರಣದಲ್ಲಿತ್ತು ಹವೆಯು; ಜೋರಾಗಿ
ಎದೆಬಡಿದುಕೊಂಡು ಅಳುವಂತಿರಲಿಲ್ಲ ಅಲ್ಲಿ
೨
ಜೋತುಬಿದ್ದ ತೋಳು, ತೀರ ಬಳಲಿದ್ದರು
ಉಸ್ತಾದರು, ನರಳುತ್ತಿದ್ದರು ಒಳ ನೋವಿಗೆ,
ತಿಳಿವಂತಿರಲಿಲ್ಲ ನಮಗೆ, ನಡುಗಿಸುತ್ತಿತ್ತು
ಅವರ ನರಳಿಕೆ ಮಂಚಕುರ್ಚಿ ಮೇಜುಗಳ
ನೋವ ನುಂಗಲು ಅವರು ದನಿ ಎತ್ತರಿಸಿ
ಹಾಡುತ್ತಿದ್ದರು, ಮತ್ತೆ ದನಿ ಇಳಿಸಿ, ಹತ್ತಿರ
ಕರೆಯುತ್ತಿದ್ದರು , ಕೈ ಆಡಿಸಿ ರಾಗದ
ಚಲನೆ ತೋರುತ್ತಿದ್ದರು; ಮತ್ತೆ, ಸಣ್ಣಗಿನ
ದನಿಯಲ್ಲಿ ರಾಗದ ಹೊತ್ತು ಗೊತ್ತು ಭಾವ
ಬಿನ್ನಾಣಗಳ ಕತೆಕಟ್ಟಿ ಹೇಳುತ್ತಿದ್ದರು; ಆಗೆಲ್ಲ
ಅವರ ಮುಖ ಹೂವಿನ ಹಾಗೆ
ʼಅರಳಿದ ಹೂವು ಬಾಡಬೇಕು
ತೊಟ್ಟು ಕಳಚಿ ಬೀಳಬೇಕು
ನೆಲದೊಡಲು ಕರೆಯುತ್ತದೆ
ಮತ್ತೆ ಮತ್ತೆ, ಎಷ್ಟು ಹೊತ್ತು
ಕಾಯಿಸುವುದು, ಹೊರಡಬೇಕಯ್ಯʼ
ಉಸ್ತಾದರ ಮಾತು ಕುಗ್ಗುತ್ತ ಕುಗ್ಗುತ್ತ
ಬಾಡುತ್ತಿತ್ತು, ಮುದುಡುತ್ತಿತ್ತು
ನೆಲಕ್ಕೆ ಬೀಳುವ ಹೊತ್ತು ನುಗ್ಗಿ
ಬಂದರೂ ತಳ್ಳುತ್ತಿದ್ದೆವು ದೂರ
ಉಸ್ತಾದರ ಹಾಡು ನಮ್ಮ ಕಿವಿಯಲ್ಲಿ
ರಾಗ ದುಂಬಿಯ ಹಾಗೆ ಹಾರುತ್ತ
ಹಾರುತ್ತ ಹೊರಟಿತ್ತು ದಿಕ್ಕು ಹಿಡಿದು
ʼಎಲ್ಲರಿಗೂ ಒಂದೇ ನ್ಯಾಯ, ಒಂದೆ
ನಿಯಮ, ಅವನು ಯಮಧರ್ಮ –
ಕಾಲನೇಮಿ, ಒಂದು ಗಳಿಗೆಯೂ
ಆಗುವುದಿಲ್ಲ ಅತ್ತಿತ್ತ, ಹೊತ್ತೆಂದರೆ
ಹೊತ್ತು…ʼ ಎನ್ನುತ್ತಿದ್ದರು ಉಸ್ತಾದರು
ಎಲ್ಲಿರಬಹುದು ಅವನು, ಕಾಲ ಹಿಡಿದವನು
ರಾಗಕ್ಕೊ, ಅದರ ಗುಂಗಿಗೊ ತಡಕಾಡುತ್ತಿದ್ದರು
ಉಸ್ತಾದರು, ಕೈಕೊಟ್ಟ ಸ್ವರ, ಕೈಬಿಟ್ಟ ತಾಳ
ಎಷ್ಟು ತಾಳಿಯಾನು ಯಮಧರ್ಮರಾಯ!






0 Comments