ಜಿ ಪಿ ಬಸವರಾಜು ಬರೆದ ಸಣ್ಣ ಕಥೆಗಳು

– ಜಿ ಪಿ ಬಸವರಾಜು


ಸಂಜೆಯ ಹೊಂಗಿರಣಗಳು ಮಸಿಗಟ್ಟುತ್ತಿದ್ದವು. ತಂಗಾಳಿ ಚಳಿಗಾಳಿಗೆ ತಿರುಗುತ್ತಿತ್ತು. ಜಗತ್ತು ಎಂದಿನಂತೆಯೇ ಚಲಿಸುತ್ತಿತ್ತು.
ಆತ ನಮ್ಮ ಮನೆಯ ಪಕ್ಕದವನೇ. ಎತ್ತರದ ಆಳು; ಗಟ್ಟಿಮುಟ್ಟು ಕಾಯ. ನಿತ್ಯ ವ್ಯಾಯಾಮ. ಹೊತ್ತುಹೊತ್ತಿಗೆ ಊಟ, ತಿಂಡಿ, ನಿದ್ರೆ. ವಜ್ರದಂಥ ದೇಹ; ಇದ್ದರೆ ಹೀಗಿರಬೇಕು. ನೋಡುತ್ತಿದ್ದರೆ ನೋಡುತ್ತಲೇ ಇರಬೇಕೆನಿಸುವ ಆಕೃತಿ.
ನಿತ್ಯದ ಕೆಲಸಗಳೆಲ್ಲ ಅಚ್ಚುಕಟ್ಟು. ಮನೆ, ಆಫೀಸು, ಮನೆ; ಗೆಳೆಯರು, ಬಂಧು ಬಾಂಧವರು. ಯಾವುದರಲ್ಲಿಯೂ ಆತ ಕ್ರಮತಪ್ಪಿದವನಲ್ಲ.
ಸಂಜೆ ವಾಕಿಂಗ್ ಹೊರಟವನು ದಾರಿ ಮಧ್ಯ ಕುಸಿದಿದ್ದ. ನಾವೂ ಸಂಜೆಯ ವಾಕಿಂಗ್ನಲ್ಲೇ ಇದ್ದೆವು. ಜನ ಗುಂಪು ಸೇರಿದ್ದು ಕಂಡು ಅತ್ತ ನಡೆದೆವು. ಹತ್ತಿರ ಹೋದರೆ ಆತ ನೆಲಕ್ಕೊರಗಿದ್ದ.ಯಾರೋ ಎದೆ ನೀವುತ್ತಿದ್ದರು. ಮತ್ತಾರೋ ನೀರು ಕುಡಿಸುತ್ತಿದ್ದರು. ಅಂಬುಲೆನ್ಸ್ಗೆ ಹೇಳಿ ಎಂದು ಇನ್ನಾರೋ ಚಡಪಡಿಸುತ್ತಿದ್ದರು. ಗುಂಪಿನಲ್ಲಿ ನುಸುಳಿ ಆತನನ್ನು ನೋಡಿದೆ.
ಮುಖ ನೋಡಿದೆ. ಅಲ್ಲಿ ಯಾತನೆಯ ನೆರಳಿತ್ತು. ಕಣ್ಣುಗಳನ್ನು ನೋಡಿದರೆ ಅವು ಮುಚ್ಚಿಕೊಂಡಿದ್ದವು.
ಮೈಕೈ ಮುಟ್ಟುವುದಕ್ಕೆ ಹೋಗಲಿಲ್ಲ.
ಭಯ ಆವರಿಸಿತು.
ಹಿಂದೆ ಸರಿದೆ. ಗುಂಪಿನಿಂದ ಹೊರಕ್ಕೆ ಬಂದೆ.
ನಾಡಿ ಸಿಗುತ್ತಿಲ್ಲ ಎಂದು ಯಾರೋ ಹೇಳಿದರು. ಮೈ ತಣ್ಣಗಾಗುತ್ತಿದೆ, ಬೇಗ ವೈದ್ಯರ ಬಳಿಗೆ ಹೋಗಿ ಎಂದಿತೊಂದು ಧ್ವನಿ.
ನಿಲ್ಲಲಾಗದೆ ಬಿರಬಿರ ನಡೆಯತೊಡಗಿದೆ. ಹೆಜ್ಜೆಗಳು ಅದುರುತ್ತಿರುವುದು ಗೊತ್ತಾಗುತ್ತಿತ್ತು. ಯಾರೋ ನನ್ನ ಬೆನ್ನಿಗೇ ಬರುತ್ತಿದ್ದಾರೆಂದು ಭಾಸವಾಯಿತು. ಜೋರಾಗಿ ಹೆಜ್ಜೆ ಹಾಕಿದೆ. ನಾನು ಎಷ್ಟೇ ವೇಗದಿಂದ ನಡೆದರೂ, ನನ್ನ ಬೆನ್ನಿಗೆ ಬರುತ್ತಿದ್ದವನು ನನ್ನ ಸಮೀಪವೇ ಇದ್ದಂತೆ ತೋರಿತು.
ಒಂದು ಹಸು, ಒಂದು ಹುಲಿ


ನಮ್ಮ ಹಿತ್ತಲಿನ ಆಚೆಗೆ ಹುಲಿಯೊಂದು ಹಸುವನ್ನು ಹಿಡಿದುಬಿಟ್ಟಿತ್ತು. ಆ ಚಿತ್ರ ಎಷ್ಟು ಸ್ಪಷ್ಟವಾಗಿತ್ತೆಂದರೆ, ಹಸುವಿನ ಕತ್ತನ್ನು ಮುರಿದಿದ್ದ ಹುಲಿ ಅದರ ರಕ್ತವನ್ನು ಕುಡಿದು ಮಾಂಸವನ್ನು ತಿನ್ನುತ್ತಿತ್ತು. ಹುಲಿಯ ಮೂತಿಯೆಲ್ಲ ರಕ್ತಮಯವಾಗಿತ್ತು. ಅದು ಅತ್ತ ಇತ್ತ ನೋಡುತ್ತ ತನ್ನ ಭೋಜನವನ್ನು ಸವಿಯುತ್ತಿತ್ತು. ಕಂಗಾಲಾದ ಇತರ ದನಗಳು ದಿಕ್ಕೆಟ್ಟು ಓಡಿದ್ದವು. ಒಂದೆರಡು ಹಸುಗಳು ನಮ್ಮ ಹಿತ್ತಲಿಗೆ ನುಗ್ಗಿಬಂದು ಭಯದಲ್ಲಿ ನಡುಗುತ್ತಿದ್ದವು. ಹಿತ್ತಲಿನ ಬಾಗಿಲನ್ನು ತೆರೆದು ಹುಲಿಯನ್ನೇ ನೋಡುತ್ತಿದ್ದ ನಮ್ಮೊಳಗೆ ಭೀತಿ ಕವಿದುಬಿಟ್ಟಿತ್ತು. ಆದರೂ ನಮ್ಮ ಕುತೂಹಲ ತಣಿದಿರಲಿಲ್ಲ. ಬಾಗಿಲನ್ನು ಅರೆತೆರೆದು ಒಬ್ಬರ ಮೇಲೊಬ್ಬರು ಬಿದ್ದು ಹುಲಿಯನ್ನು, ಅದು ತಿನ್ನುತ್ತಿರುವ ರೀತಿಯನ್ನು ನೋಡುತ್ತಿದ್ದೆವು. ಸತ್ತುಬಿದ್ದಿದ್ದ ದನ, ಅದರ ಸುತ್ತ ಸುರಿದಿದ್ದ ರಕ್ತ, ಮಾಂಸ ಎಲ್ಲ ನಮ್ಮನ್ನು ನಡುಗಿಸುತ್ತಿತ್ತು.
ಬಾಗಿಲು ಮುಚ್ಚಿರೋ ಎಂದು ಯಾರೋ ಕೂಗಿದರು. ಹುಲಿ ನಮ್ಮತ್ತ ಜಿಗಿದುಬರುವ ಸಾಧ್ಯತೆ ಇತ್ತು. ಹೀಗಾಗಿ ಥಟ್ಟನೆ ಬಾಗಿಲನ್ನು ಮುಚ್ಚಲು ನೋಡಿದೆವು. ಆದರೆ ಒಂದು ಹಸು ಬಾಗಿಲಿನ ಒಳಕ್ಕೆ ತನ್ನ ಕತ್ತನ್ನು ತೂರಿಸಿ ಒಳಬರಲು ಹವಣಿಸುತ್ತಿತ್ತು. ಅದು ಬಂದರೆ ನೇರವಾಗಿ ನಮ್ಮ ಅಡಿಗೆಯ ಮನೆಗೇ ನುಗ್ಗುವ ಸಂಭವ ಇತ್ತು. ಅದು ಯಾರೋ ಹಸುವಿನ ಕತ್ತನ್ನು ನಿಧಾನವಾಗಿ ತುರಿಸುತ್ತ, ‘ನಡಿಯವ್ವ ಆಕಡೆ ನಡಿ’ ಎಂದು ನಯವಾಗಿ ಹೊರಗೆ ತಳ್ಳುತ್ತಿದ್ದರು. ಅದನ್ನು ಒಳಗೆ ಕರೆದುಕೊಳ್ಳಬಹುದಾಗಿತ್ತು. ಆದರೆ ಯಾರೂ ಅದಕ್ಕೆ ಸಿದ್ಧವಿರುವಂತೆ ಕಾಣಲಿಲ್ಲ. ಬಲವಂತವಾಗಿ ಆ ಹಸುವನ್ನು ಹೊರಕ್ಕೆ ತಳ್ಳುತ್ತ ಬಾಗಿಲನ್ನು ಮುಚ್ಚಿಬಿಡಲು ಎಲ್ಲರೂ ಪ್ರಯತ್ನಿಸುತ್ತಿರುವಂತೆ ಕಾಣಿಸಿತು. ಯಾರದೋ ಕೈ ಹಸುವನ್ನು ಪ್ರೀತಿಯಿಂದ ನೇವರಿಸುತ್ತಿರುವಂತೆಯೂ ತೋರುತ್ತಿತ್ತು. ಬಾಗಿಲು ಇಷ್ಟಿಷ್ಟೆ ಮುಚ್ಚಿಕೊಳ್ಳುತ್ತಿತ್ತು. ಮಾಂಸ ತಿನ್ನುವ ಹುಲಿಯ ಚಿತ್ರ ಇಷ್ಟಿಷ್ಟೆ ಮರೆಯಾದಂತೆಯೂ ಕಾಣಿಸುತ್ತಿತ್ತು. ನಮ್ಮ ಕುತೂಹಲವಂತೂ ಹೆಚ್ಚುತ್ತಲೇ ಇತ್ತು. ಕೊನೆಯಬಾರಿ, ಕಂಡಷ್ಟನ್ನೇ ಕಣ್ಣಿಗೆ ತುಂಬಿಕೊಳ್ಳಲು ನಾವೆಲ್ಲ ಹೆಣಗುತ್ತಿದ್ದೆವು. ಒಳಗೆ ಬರಲು ಹವಣಿಸುತ್ತಿದ್ದ ಹಸು ತನ್ನ ಪ್ರಯತ್ನವನ್ನು ಬಿಟ್ಟಿರಲಿಲ್ಲ. ಅಂತೂ ಹೇಗೋ ಆ ಹಸುವನ್ನು ನೂಕಿ ಬಾಗಿಲನ್ನು ಭದ್ರವಾಗಿ ಹಾಕಿಬಿಟ್ಟರು.
ಬಾಗಿಲು ಮುಚ್ಚಿದ್ದರೂ ನಮ್ಮೆಲ್ಲರ ಕಣ್ಣೊಳಗೆ ಹುಲಿ ಇನ್ನೂ ಕುಣಿಯುತ್ತಲೇ ಇತ್ತು. ಅದು ಹಾರಿ ಬಂದು ಬಾಗಿಲಿಗೆ ಬಲವಾಗಿ ಅಪ್ಪಳಿಸಿ, ನುಚ್ಚುನೂರು ಮಾಡಿ ಮನೆಯಲ್ಲಿದ್ದ ನಮ್ಮೆಲ್ಲರನ್ನು ಕೊಂದು ರಕ್ತ ಹೀರಿಬಿಡಬಹುದೆಂಬ ಭಯ ನಮ್ಮನ್ನು ನಡುಗಿಸಿತ್ತು. ನಾವೆಲ್ಲ ಮಕ್ಕಳು ಎಷ್ಟು ಜನ ಇದ್ದೆವು ಎಂಬುದು ಸ್ಪಷ್ಟವಾಗುತ್ತಿಲ್ಲ. ಅಂತೂ ದೊಡ್ಡ ಗುಂಪಿತ್ತು ಎಂಬುದು ತಿಳಿಯುತ್ತಿತ್ತು. ಗುಂಪು ಎಷ್ಟೇ ದೊಡ್ಡದಿರಲಿ, ಅದು ವ್ಯಾಘ್ರನಿಗೆ ಯಾವ ಲೆಕ್ಕ.
ಈ ಭಯದಲ್ಲಿಯೇ ಯಾರಿಗೋ ಥಟ್ಟನೆ ಒಂದು ಉಪಾಯ ಹೊಳೆಯಿತು. ತಡಮಾಡದೆ 100ಕ್ಕೆ ಡಯಲ್ ಮಾಡಿದರು. ‘ನಮ್ಮ ಮನೆಯ ಹತ್ತಿರ ಹುಲಿ ಬಂದು ಹಸುವನ್ನು ತಿನ್ನುತ್ತಿದೆ, ಬೇಗ ಬನ್ನಿ’ ಎಂದು ಯಾರೋ ಹೇಳಿದರು. ಹಾಗೆ ಹೇಳಿದವರ ಧ್ವನಿ ನಡುಗುತ್ತಿತ್ತು. ಆ ಕಡೆಯಿಂದ ಪೊಲೀಸ ಹೇಳುತ್ತಿರುವುದು ಗಟ್ಟಿಯಾಗಿ ಕೇಳಿಸುತ್ತಿತ್ತು: ಕಳ್ಳರು ಬಂದರೆ ಹೇಳಿ, ದರೋಡೆಕೋರರು ಬಂದರೆ ಹೇಳಿ. ತಕ್ಷಣ ಬರುತ್ತೇವೆ. ಹುಲಿ ನಮ್ಮ ಜುರಿಸ್ಡಿಕ್ಷನ್ ಅಲ್ಲ.’
‘ಈ ಪೊಲೀಸರಿಗೆ ಬುದ್ಧಿಯಿಲ್ಲ’ ಎಂದು ಕೆಲವರು ಬೈದರು. ‘ಅದಕ್ಕೇ ಅದು ಪೊಲೀಸ್ ಡಿಪಾಟರ್್ಮೆಂಟು’ ಎಂದು ಮತ್ತಾರೋ ಸೇರಿಸಿದರು.
ತಕ್ಷಣವೇ ಫೋನ್ ಕಟ್ಟಾಯಿತು. ಇನ್ಯಾರೋ 101 ಡಯಲ್ ಮಾಡಿದರು. ಅದು ಅಗ್ನಿಶಾಮಕ ದಳಕ್ಕೆ ಹೋಯಿತು.
‘ಬೆಂಕಿ ಬಿದ್ದಿದೆಯಾ, ಎಲ್ಲಿ ಎಲ್ಲಿ?’ ಎಂಬ ಪ್ರಶ್ನೆ ತೂರಿಬಂತು.
ಭಯದಲ್ಲೂ ನಾವೆಲ್ಲ ನಕ್ಕೆವು.
‘ಹೌದು, ಹುಲಿಯ ಕಣ್ಣುಗಳು ಬೆಂಕಿಯ ಉಂಡೆಗಳಾಗಿವೆ’ ಎಂದ ಡಯಲ್ ಮಾಡಿದ ಹುಡುಗ.
‘ಅಂಕಲ್, ಬೇಗ ಬಂದು ಬಿಡಿ. ಹುಲಿ ನಮ್ಮ ಮನೆಯ ಮೇಲೆ ಎಗರಿಬಿಡಬಹುದು. ಮನೆಯಲ್ಲಿ ಬಹಳ ಜನರಿದ್ದೇವೆ.’
ಅವನು ನಕ್ಕ. ‘ಇಂಥ ತಮಾಷೆಯನ್ನೆಲ್ಲ ಮಾಡಬಾರದು ಮರಿ. ನೀವೆಲ್ಲ ಹೀಗೆ ಮಾಡುತ್ತ ಹೋದರೆ, ನಾವು ನಿಜವಾಗಲೂ ಬೆಂಕಿಬಿದ್ದಾಗ ಬರುವುದೇ ಇಲ್ಲ’ ಎಂದ.
ಮತ್ತೆ ಯಾರಿಗೆ ಫೋನ್ ಮಾಡುವುದು?
ಹಿತ್ತಲ ಬಾಗಿಲ ಬಳಿ ಸದ್ದಾಗುತ್ತಿತ್ತು. ಯಾರೋ ಆ ಬಾಗಿಲನ್ನು ದೂಡುತ್ತಿರುವಂತೆಯೂ ತೋರುತ್ತಿತ್ತು.
ಹಸುವೋ, ಹುಲಿಯೋ?
 

‍ಲೇಖಕರು G

April 6, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. bharathi b v

    ಕಥೆ ಮುಗಿದ ನಂತರ ನಮ್ಮೊಳಗೆ ‘ಕಥೆ’ ಶುರುವಾಗುತ್ತದೆ! ಹೇಳಿರುವುದಕ್ಕಿಂತ ಹೇಳದೇ ಬಿಟ್ಟಿರುವುದು ಎಷ್ಟೊಂದು …. ತುಂಬ ಇಷ್ಟವಾಯ್ತು ಸರ್ …..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: