ಜಿ ಪಿ ಬಸವರಾಜು ಬರೀತಾರೆ : ಸರ್ಕಾರ ಮತ್ತು ನಿಗಮ – ಮಂಡಳಿಗಳು…

ಮೌಲ್ಯ ಮತ್ತು ಸಂಸ್ಕೃತಿ

ಜಿ.ಪಿ.ಬಸವರಾಜು

ಸಾರ್ವಜನಿಕ ಬದುಕಿನಲ್ಲಿ ಸಂಸ್ಕೃತಿಗೆ ಮಹತ್ವ ಇರುವಂತೆ ಕಾಣಿಸುತ್ತದೆ. ರಾಜಕಾರಣದಲ್ಲಿಯೂ ಸಂಸ್ಕೃತಿಯನ್ನು ಪ್ರತ್ಯೇಕವಾಗಿಯೇ ನೋಡಲಾಗುತ್ತಿದೆ. ಸಾಂಸ್ಕೃತಿಕ ಕ್ಷೇತ್ರವನ್ನು ಪ್ರತಿನಿಧಿಸುವ ಕಲಾವಿದರು ಮತ್ತು ಸಾಹಿತಿಗಳಿಗೆ ಈ ಕಾರಣಕ್ಕಾಗಿಯೇ ವಿಶೇಷ ಗೌರವವಿರುವಂತೆಯೂ ತೋರುತ್ತದೆ. ಈ ಹಿನ್ನೆಲೆಯಲ್ಲಿಯೇ ಸಾಂಸ್ಕೃತಿಕ ಕ್ಷೇತ್ರದ ಸ್ವಾಯತ್ತತೆಯ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದೆಂದು ನಿರೀಕ್ಷಿಸಲಾಗುತ್ತದೆ.

ಪ್ರತಿಯೊಂದು ಹೊಸ ಸರ್ಕಾರ ಬಂದಾಗಲೂ ತನ್ನ ಆಳ್ವಿಕೆಯನ್ನು ಸಮರ್ಥವಾಗಿ ಜಾರಿಗೆ ತರಲು ಅದು ಎಲ್ಲ ಕ್ಷೇತ್ರಗಳಲ್ಲಿಯೂ ತನ್ನ ಹಿಡಿತವನ್ನು, ನಿಯಂತ್ರಣವನ್ನು ಸ್ಥಾಪಿಸಲು ನೋಡುತ್ತದೆ. ಈ ಕಾರಣಕ್ಕಾಗಿಯೇ ಅದು ನಿಗಮ, ಮಂಡಳಿಗಳನ್ನು ಹೊಸದಾಗಿ ರೂಪಿಸಲು ಪ್ರಯತ್ನಿಸುತ್ತದೆ. ಪ್ರತಿಯೊಂದು ಪಕ್ಷವೂ ತನ್ನ ಸರ್ಕಾರದ ಆಳ್ವಿಕೆಯ ಕಾಲದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ, ಪ್ರಮುಖರಿಗೆ ಸ್ಥಾನ ಕಲ್ಪಿಸಲು ಈ ನಿಗಮ ಮಂಡಳಿಗಳನ್ನೇ ಬಳಸಿಕೊಳ್ಳುತ್ತದೆ. ಇದು ಸಹಜ ಎನ್ನುವಂತೆ ಜನ ಒಪ್ಪಿಕೊಂಡಿದ್ದಾರೆ. ಹೀಗಾಗಿ ಹೊಸ ಸರ್ಕಾರ ಬಂದಾಗ ನಿಗಮ ಮಂಡಳಿಗಳ ಅಧ್ಯಕ್ಷರು, ಸದಸ್ಯರು ರಾಜೀನಾಮೆ ಕೊಡುವುದು ವಾಡಿಕೆಯಾಗಿ ಬೆಳೆದುಬಂದಿದೆ. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕ್ಷೇತ್ರದ ಆಗುಹೋಗುಗಳನ್ನು ನಿಭಾಯಿಸುವ ಅಕಾಡೆಮಿಗಳು, ಪ್ರಾಧಿಕಾರಗಳು ಕೂಡಾ ಹೊಸದಾಗಿ ರೂಪಗೊಂಡರೆ ಆಯಾ ಸರ್ಕಾರ ತನ್ನ ನೀತಿ ನಿರೂಪಣೆಗೆ ಅನುಗುಣವಾದ ಕಾರ್ಯಕ್ರಮಗಳನ್ನು ರೂಪಿಸಲು ಸಹಾಯವಾಗುತ್ತದೆ ಎಂದು ಭಾವಿಸಲಾಗುತ್ತದೆ. ಹೀಗಾಗಿಯೇ ನಿಗಮ ಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರಂತೆ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರು ಮತ್ತು ಸದಸ್ಯರು ಹೊಸ ಸರ್ಕಾರ ಬಂದ ಹೊತ್ತಿನಲ್ಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕೆಂಬ ಅಘೋಷಿತ ನಿಯಮವೊಂದು ಜಾರಿಯಲ್ಲಿದೆ.
ಆದರೆ ಈ ರಾಜೀನಾಮೆಯ ಪ್ರಶ್ನೆ ಬಂದಾಗ ಪ್ರತಿಬಾರಿಯೂ ಸಾಂಸ್ಕೃತಿ ಸ್ವಾಯತ್ತೆಯ ಪ್ರಶ್ನೆ ಎದುರಾಗಿ ಹೊಸ ಹೊಸ ಚರ್ಚೆಯನ್ನು ಹುಟ್ಟುಹಾಕುತ್ತದೆ. ಅಕಾಡೆಮಿಗಳು ಮತ್ತು ಪ್ರಾಧಿಕಾರಗಳು ನಿಗಮ ಮಂಡಳಿಗಳಂತೆ ಸರ್ಕಾರದ ನೇರ ಅಧೀನಕ್ಕೆ ಒಳಪಟ್ಟ ಸಂಸ್ಥೆಗಳಲ್ಲ. ಈ ಸಂಸ್ಥೆಗಳಿಗೆ ಸರ್ಕಾರದ ಅನುದಾನ ದೊರೆಯುತ್ತಿರುವುದು ನಿಜವಾದರೂ, ಅವು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಅವಕಾಶವಿರುಬೇಕೆಂಬುದು ಸಾರ್ವಜನಿಕರ ಅಪೇಕ್ಷೆ. ತನ್ನ ಪಾಡಿಗೆ ತಾನಿದ್ದು ಸಾಂಸ್ಕೃತಿಕ ಲೋಕದ ಆರೋಗ್ಯವನ್ನು ಕಾಪಾಡಿಕೊಳ್ಳುವ ರೀತಿಯಲ್ಲಿ ಕ್ರಿಯಾಶೀಲವಾಗಿರುವ, ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಅಕಾಡೆಮಿ ಮತ್ತು ಪ್ರಾಧಿಕಾರಗಳನ್ನು ಹಾಗೆಯೇ ಬಿಡಬೇಕು, ಅವುಗಳ ಸ್ವಾತಂತ್ರ್ಯಕ್ಕೆ ಯಾವ ಪಕ್ಷದ ಸರ್ಕಾರವೂ ಧಕ್ಕೆ ತರಬಾರದು; ಇದು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಒಪ್ಪುವ ಕ್ರಮ ಎಂದು ಭಾವಿಸಲಾಗುತ್ತಿದೆ. ಈ ಅರ್ಥದಲ್ಲಿ ಪ್ರಜಾಪ್ರಭುತ್ವ ಮತ್ತು ಅದರ ಮೌಲ್ಯಗಳನ್ನು ಗೌರವಿಸಬೇಕಾದುದು ನಮ್ಮೆಲ್ಲರ ಮತ್ತು ಸರ್ಕಾರದ ಕರ್ತವ್ಯವೂ ಹೌದು.
ಆದರೆ ಆದರ್ಶವೇ ಬೇರೆ; ವಸ್ತುಸ್ಥಿತಿಯೇ ಬೇರೆ. ಈ ಹಿಂದಿದ್ದ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ಮೌಲ್ಯಗಳನ್ನು ಎಷ್ಟು ಮಾನ್ಯಮಾಡಿತು ಮತ್ತು ಆ ಬೆಳಕಿನಲ್ಲಿ ಸಾಂಸ್ಕೃತಿಕ ಲೋಕವನ್ನು ಹೇಗೆ ಪರಿಗಣಿಸಿತು ಎನ್ನುವ ಪ್ರಶ್ನೆಗಳನ್ನು ಕೇಳುವುದು ಅಪ್ರಸ್ತುತವಾಗಲಾರದು. ನಮ್ಮ ಸಂವಿಧಾನದ ಬಹುಮುಖ್ಯ ತತ್ವವಾದ ಬಹುತ್ವ ಮತ್ತು ಜಾತ್ಯತೀತ ಅಂಶಕ್ಕೆ ಭಾರತೀಯ ಜನತಾ ಪಕ್ಷದ ಸರ್ಕಾರ ಮಹತ್ವವನ್ನೇ ಕೊಡಲಿಲ್ಲ. ಅದು ಕೋಮುವಾದವನ್ನೇ ಆರಾಧಿಸಿತು. ನಮ್ಮಂಥ ರಾಷ್ಟ್ರದಲ್ಲಿ ಕೋಮುವಾದ ಒಡ್ಡುವ ಅಪಾಯ ಗಂಭೀರ ಸ್ವರೂಪದ್ದು. ಇದನ್ನು ಬಿಜೆಪಿ ಅರ್ಥಮಾಡಿಕೊಳ್ಳಲೇ ಇಲ್ಲ. ಎಲ್ಲೆಲ್ಲೂ ಕೋಮುವಾದ ವಿಜೃಂಭಿಸುವಂತೆ ಮಾಡಿತು. ಎಳೆಯ ಮನಸ್ಸುಗಳು ಓದುವ ಪಠ್ಯಪುಸ್ತಕಗಳನ್ನೂ ಅದು ಕೇಸರೀಕರಣಗೊಳಿಸುವುದರ ಮೂಲಕ ಕಲುಷಿತಗೊಳಿಸಿತು.
ಅಕಾಡೆಮಿಗಳು ಮತ್ತು ಪ್ರಾಧಿಕಾರಗಳಿಗೂ ತಮ್ಮ ಪಕ್ಷದ ಕಾರ್ಯಕರ್ತರೇ ನೇಮಕವಾಗಬೇಕೆಂದು ಬಯಸಿತು. ಸಾಂಸ್ಕೃತಿಕ ಸಂಸ್ಥೆಗಳು, ಅವುಗಳ ಹೊಣೆಗಾರಿಕೆ, ಅವುಗಳನ್ನು ಗೌರವಿಸಬೇಕಾದ ಕರ್ತವ್ಯ ಇವೆಲ್ಲವನ್ನು ಮರೆತು, ಬಿಜೆಪಿ ಸರ್ಕಾರ ತನ್ನ ಪಕ್ಷದ, ಅದರ ಅಂಗಸಂಸ್ಥೆಗಳ ಕ್ರಿಯಾಶೀಲರನ್ನೇ ಆಯ್ಕೆಮಾಡಿ ಪಟ್ಟಿಯನ್ನು ಸಿದ್ಧಪಡಿಸುವುದು, ಈ ಪಟ್ಟಿ ಆರ್ಎಸ್ಎಸ್ ಮುಖ್ಯಸ್ಥರ ಅಂಗೀಕಾರಕ್ಕಾಗಿ ರವಾನೆಯಾಗುವುದು, ಅಲ್ಲಿ ಅಂಗೀಕಾರ ದೊರೆತ ಮೇಲೆಯೇ ಇಲ್ಲಿ ನೇಮಕಗಳು ನಡೆಯುವುದು- ಇವೆಲ್ಲವನ್ನು ಕನ್ನಡದ ಜನ ಮೌನವಾಗಿ ನೋಡಿದರು. ಈ ನೇಮಕಾತಿ, ಅದರ ವಿಧಿ ವಿಧಾನಗಳಲ್ಲಿ ಯಾವ ಗುಟ್ಟುಗಳೂ ಇರಲಿಲ್ಲ. ಅದು ಬಿಜೆಪಿಯ, ಪರಿವಾರದ ಖುಲ್ಲಂಖುಲ್ಲ ವ್ಯವಹಾರವಾಗಿತ್ತು. ಹೀಗೆ ನೇಮಕಗೊಂಡವರೂ, ಈ ಕ್ರಮ ಸರಿಯಾದುದಲ್ಲ ಎಂದು ಹೇಳುವ ನೈತಿಕ ನಿಲುವನ್ನೂ ಪ್ರಕಟಿಸಲಿಲ್ಲ. ಸ್ಥಾನ, ಅಧಿಕಾರಗಳೇ ಮುಖ್ಯ ಎಂದು ಭಾವಿಸಿದಾಗ ಸಾಂಸ್ಕೃತಿಕ ಕ್ಷೇತ್ರವಿರಲಿ, ರಾಜಕೀಯ ಕ್ಷೇತ್ರವಿರಲಿ, ಅಲ್ಲಿ ನೀತಿ-ಅನೀತಿಗಳ ಪ್ರಶ್ನೆಗಳು ಎದುರಾಗುವುದಿಲ್ಲ. ಇನ್ನು ಸಾರ್ವಜನಿಕ ಪ್ರತಿಭಟನೆ ಎಲ್ಲಿ ಸಾಧ್ಯ? ಇದೂ ಕೂಡಾ ಒಂದು ಪಕ್ಷದ ಸಕರ್ಾರ ಅಧಿಕಾರವನ್ನು ಚಲಾಯಿಸುವ ರೀತಿ ಎಂದೇ ಭಾವಿಸಿದ ಸಾರ್ವಜನಿಕರು ಅದನ್ನು ಪ್ರಶ್ನಿಸುವ, ಅದರ ವಿರುದ್ಧ ಪ್ರತಿಭಟಿಸುವ ಗೊಡವೆಗೇ ಹೋಗಲಿಲ್ಲ.
ಈ ಹಿನ್ನೆಲೆಯಲ್ಲಿ ವಸ್ತುಸ್ಥಿತಿಯನ್ನು ನೋಡಬೇಕು. ಹೊಸ ಸರ್ಕಾರವೊಂದು ಚುನಾವಣೆಯಲ್ಲಿ ಗೆದ್ದುಬಂದಾಗ, ಹಿಂದಿನ ಸರ್ಕಾರ ಎಸಗಿದ ಪ್ರಜಾಪ್ರಭುತ್ವ ವಿರೋಧೀ ಕೃತ್ಯಗಳನ್ನು ಸರಿಪಡಿಸಬೇಕಾಗುತ್ತದೆ. ಎಲ್ಲೆಲ್ಲಿಯೂ ಕೋಮುವಾದಿಗಳೇ ತುಂಬಿ ತುಳುಕುವಾಗ, ಅಂಥ ವ್ಯವಸ್ಥೆಯನ್ನು ಒಪ್ಪಿಕೊಂಡೇ ಹೊಸ ಸರ್ಕಾರ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇರುವುದಿಲ್ಲ. ಹಳೆಯ ಕೊಳೆಯನ್ನು ತೊಳೆದು ಶುದ್ಧೀಕರಿಸುವ ಕೆಲಸವನ್ನು ಮೊದಲು ಮಾಡಬೇಕು. ಈ ಅರ್ಥದಲ್ಲಿಯೇ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಮತ್ತು ಸದಸ್ಯರ ರಾಜೀನಾಮೆಯನ್ನು ಕೇಳಿದರೆ ಅದು ತಪ್ಪಾಗಬೇಕಾಗಿಲ್ಲ. ಆದರೆ ಹೊಸ ಸರ್ಕಾರವೂ ಈ ಸ್ಥಾನಗಳಿಗೆ ವ್ಯಕ್ತಿಗಳನ್ನು ಆಯ್ಕೆಮಾಡುವಾಗ ಹಳೆಯ ಸರ್ಕಾರದ ಮಾದರಿಯನ್ನೇ ಅನುಸರಿಸಿದರೆ ಅದು ಹೊಸ ಬಾಟಲಿಯ ಹಳೆಯ ಮದ್ಯವಾಗುತ್ತದೆ. ಮೇಲು ನೋಟಕ್ಕೆ ಸರ್ಕಾರ ಹೊಸದಾದರೂ ರಾಜಕಾರಣದ ಶೈಲಿ ಹಳೆಯದೇ ಆಗಿರುತ್ತದೆ. ತಮಗೆ ಬೇಕಾದ ಜನರನ್ನು, ತಮ್ಮ ಬೆಂಬಲಿಗರನ್ನು, ತಮ್ಮ ಮೇಲೆ ಒತ್ತಡ ಹೇರುವವರನ್ನು ತುಂಬಲು ರಾಜಕಾರಣಿಗಳು ಸದಾ ತಯಾರಾಗಿರುತ್ತಾರೆ. ಇದು ರಾಜಕಾರಣದಲ್ಲಿರುವ ಸಹಜ ಗುಣ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು, ಅವುಗಳ ಪ್ರಣಾಳಿಕೆಗಳು, ಒಟ್ಟು ಧೋರಣೆಗಳಲ್ಲಿ ವ್ಯತ್ಯಾಸವಿದ್ದರೂ, ರಾಜಕಾರಣಿಗಳ ಒಟ್ಟು ಸ್ವರೂಪದಲ್ಲಿ, ಚಿಂತನೆಯಲ್ಲಿ ಅಂಥ ವ್ಯತ್ಯಾಸ ಇರುವುದಿಲ್ಲ ಎಂಬುದನ್ನು ನಾವೆಲ್ಲ ಅನುಭವದಿಂದ ಕಂಡುಕೊಂಡಿದ್ದೇವೆ. ಯಾವುದೇ ಪಕ್ಷವಾಗಿರಲಿ, ಯಾರೇ ರಾಜಕಾರಣಿಯಾಗಿರಲಿ, ಪಕ್ಷಭೇದವನ್ನು ಮರೆತು, ಮೌಲ್ಯಗಳನ್ನು ಗಾಳಿಗೆ ತೂರಿ, ಅವರನ್ನು ಮುತ್ತಿಕೊಳ್ಳುವ ಸಾಂಸ್ಕೃತಿಕ ಧುರಿಣರಿಗೆ ನಮ್ಮಲ್ಲೇನೂ ಕೊರತೆಯಿಲ್ಲ ಎಂಬುದೂ ಸತ್ಯ. ಆದರೂ ಹೊಸ ಸರ್ಕಾರವೊಂದು ಬಂದಾಗ, ಅದು ಜನರ ಆಶೋತ್ತರಗಳಿಗೆ ತುಡಿಯಬಹುದೇನೋ ಎಂಬ ಆಶಾಕಿರಣವಂತೂ ಇದ್ದೇ ಇರುತ್ತದೆ. ಇದನ್ನು ಕಡೆಗಣಿಸಲು ಬರುವುದಿಲ್ಲ. ಹೊಸ ಸರ್ಕಾರ ನಿಜಕ್ಕೂ ಈ ದಿಕ್ಕಿನಲ್ಲಿ ಹೆಜ್ಜೆ ಇರಿಸಲು ಬಯಸಿದರೆ, ಜನರ ನಿಜವಾದ ಆಶೋತ್ತರಗಳಿಗೆ ಸ್ಪಂದಿಸಲು ಇಷ್ಟಪಟ್ಟರೆ ಅದನ್ನು ಸಿನಿಕ ದೃಷ್ಟಿಯಿಂದ ನೋಡಬೇಕಾಗಿಲ್ಲ. ಅನಗತ್ಯ ಟೀಕೆಯನ್ನು ಮೊದಲೇ ಮಾಡಬೇಕಾಗಿಲ್ಲ.
ಇಂಥ ಹೊತ್ತಿನಲ್ಲಿ ಹೊಸ ಸರ್ಕಾರದ ನೇತೃತ್ವವಹಿಸಿರುವವರು ತಮ್ಮ ಪಕ್ಷ ರಾಜಕಾರಣದ ವರಸೆಗಳನ್ನು ಬದಿಗಿಡಬೇಕು. ಹಾಗೆಯೇ ಸಾಂಸ್ಕೃತಿಕ ದಲ್ಲಾಳಿಗಳನ್ನೂ ದೂರಿ ಇಡಬೇಕು. ನಿಜವಾದ ಅರ್ಹತೆ ಇರುವವರನ್ನು ಸಾಂಸ್ಕೃತಿಕ ಕ್ಷೇತ್ರದ ಈ ಸಂಸ್ಥೆಗಳಿಗೆ ಆಯ್ಕೆಮಾಡಬೇಕು. ಹೇಗೆ ಮಾಡುವುದು? ಈ ಕೆಲಸವನ್ನು ಯಾರಿಗೆ ಒಪ್ಪಿಸುವುದು? ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಂತೂ ಇಂಥ ಕೆಲಸಗಳಿಗೆ ತುದಿಗಾಲ ಮೇಲೆ ನಿಂತಿರುತ್ತಾರೆ. ಆದರೆ ಅಧಿಕಾರಿಗಳಿಗೂ ಅವರದೇ ಆದ ಲಾಬಿಗಳಿರುತ್ತವೆ; ಅವರ ಹಿಂಬಾಲಕರೂ ಇರುತ್ತಾರೆ; ಅವರ ಆಶೋತ್ತರಗಳೂ ಇರುತ್ತವೆ. ಹೀಗಾಗಿ ಈ ಕೆಲಸವನ್ನು ಪ್ರಮಾಣಿಕರಾದ ತಜ್ಞರಿಗೆ ವಹಿಸಬೇಕಾಗುತ್ತದೆ. ಆರು ಕೋಟಿ ಕನ್ನಡಿಗರಿರುವ ಈ ನಾಡನಲ್ಲಿ ಪ್ರಾಮಾಣಿಕರು ಮತ್ತು ತಜ್ಞರು ಸಿಕ್ಕುವುದಿಲ್ಲವೇ? ಸಕರ್ಾರ ಈ ಪ್ರಶ್ನೆಯನ್ನು ಕೇಳಿಕೊಳ್ಳಬೇಕು. ಆಗ ದಾರಿಗಳು ಕಾಣಿಸಬಹುದು. ಇಂಥ ತಜ್ಞರ ಸಮಿತಿ ನೀಡುವ ಪಟ್ಟಿಯನ್ನು ಇಟ್ಟುಕೊಂಡು ಸಕರ್ಾರ ಅಧಿಕಾರಿಗಳ ಜೊತೆ ಚಿಂತಿಸಿ ಅಂತಿಮ ಆಯ್ಕೆಯನ್ನು ಈ ಪಟ್ಟಿಯಿಂದಲೇ ಮಾಡಬೇಕು. ಇದು ಅಂಥ ಕಷ್ಟದ ಕೆಲಸವಲ್ಲ; ಒಂದಿಷ್ಟು ಹೆಚ್ಚು ಕಾಲವನ್ನು ತೆಗೆದುಕೊಳ್ಳಬಹುದು ಅಷ್ಟೆ.
ಸಂಸ್ಕೃತಿಯನ್ನು ಮತ್ತು ಸಾಂಸ್ಕೃತಿಕ ಲೋಕದ ವಿದ್ಯಮಾನಗಳನ್ನು ಸರ್ಕಾರ ನಿಜಕ್ಕೂ ಗೌರವಿಸುವುದಾದರೆ, ಸಾಂಸ್ಕೃತಿಕ ಲೋಕದ ಇಂಥ ನೇಮಕಾತಿಗಳನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಅರ್ಹರು ನೇಮಕಗೊಂಡರೆ ಅದು ಪರೋಕ್ಷವಾಗಿಯಾದರೂ ಒಂದು ಸಮಾಜದ ಮೇಲೆ ಪರಿಣಾಮವನ್ನು ಬೀರುತ್ತದೆ; ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂವರ್ಧಿಸುತ್ತದೆ; ಸರ್ಕಾರದ ಘನತೆಯನ್ನು ಎತ್ತಿಹಿಡಿಯುತ್ತದೆ. ನಿಜವಾದ ಪ್ರಜಾಪ್ರಭುತ್ವ ಉಳಿಯಬೇಕಾದರೆ, ಪ್ರಜಾಪ್ರಭುತ್ವದ ಮೌಲ್ಯಗಳೂ ಉಳಿಯಬೇಕು. ಆಗ ಮಾತ್ರ ಸಮಾಜದ ಮುನ್ನಡೆ ಸಾಧ್ಯ.
(ಸಂಯುಕ್ತ ಕರ್ನಾಟಕದಲ್ಲಿ ಪ್ರಕಟಿತ ಲೇಖನ)
 

‍ಲೇಖಕರು avadhi

June 28, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. ಅಶೋಕವರ್ಧನ

    ಅಕಾಡೆಮಿ, ಪ್ರಾಧಿಕಾರಗಳೆಲ್ಲಾ ‘ಬೀಜ-ದೋಷ’ದಿಂದ ನರಳುತ್ತಿವೆ. ಇಂದು ‘ಗಿಡ’ಕ್ಕೆ ಎಷ್ಟು ಪೋಷಣೆ, ಆರೈಕೆ ಕೊಟ್ಟರೂ ಅಷ್ಟೇ. ‘ಬೇರು ಕೊಳೆ’ ರೋಗ ಬಂದವನ್ನು ಕಿತ್ತು ಸುಡುವುದೊಂದೇ ದಾರಿ; ಅಕಾಡೆಮಿ, ಪ್ರಾಧಿಕಾರಗಳನ್ನು (ಆಡಳಿತ ಮಂಡಳಿಗಳನ್ನಲ್ಲ, ವ್ಯವಸ್ಥೆಯನ್ನೇ) ಬರ್ಖಾಸ್ತು ಮಾಡಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: