ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಿನಕ್ಕೊಂದು ಜಿಪಿ ಕವಿತೆ- ಬೂದು ಬಣ್ಣದ ಹೂವು…

ಜಿ ಪಿ ಬಸವರಾಜು

ಬೂದು ಬಣ್ಣದ ಹೂವು
ಅರಳುವುದು ಮಧ್ಯಾಹ್ನ

ಜನ ಸುತ್ತಾಡುವ ಈ ದಾರಿ-
ಬದಿಯಲ್ಲಿ ಯಾರೂ ನೋ-
ಡುವುದಿಲ್ಲ ಇದರ ಕಡೆಗೆ

ಅವರಿಗೊ ಅವರವರ ಕೆಲಸ
ಧಾವಂತ, ಚಿಂತೆ, ಕಗ್ಗಂಟು
ಹೂವಿನ ಚಂದ ಯಾರಿಗೆ

ಅಪರೂಪದ ಈ ಹೂವಿನ
ಘಮ ಸುತ್ತ ಹತ್ತೂದಿಕ್ಕಿಗೆ

ಆಹಾ! ಸೌಗಂಧಿಕಾ; ಭೀಮನೊ
ಹನುಮನೊ ಸುಳಿದಾಡಿದರೆ
ಮನಸೋತು ತಳವೂರುತ್ತಾರೆ

ಸಾಹೇಬರು ಕುಳಿತ ಕಾರುಗಳು
ಓಡುತ್ತವೆ ಇಲ್ಲಿ ಅತಿ ವೇಗದಲ್ಲಿ

ಅಧಿಕಾರಿಗಳು ಸಹಾಯಕರು
ಫೈಲುಗಳ ಬೆನ್ನುಬಿದ್ದವರು
ಜನಜಾತ್ರೆ ಈ ದಾರಿಯಲ್ಲಿ

ಈ ಬಿಸಿಲ ಝಳದಲ್ಲಿ ಬಳಲಿ
ಬೆಂಡಾಗಿ ಬೆವರು ಸುರಿಸುತ್ತಾರೆ

ಹೂವು ನಗುತ್ತದೆ ನಳನಳಿಸುತ್ತದೆ
ಅದರ ಬೂದು ಬಣ್ಣ ಘಮಘಮ
ಪರಿಮಳ ಮೂರು ಲೋಕ ತುಂಬಿ

ನಿಧಾನಕ್ಕೆ ಕಾಲೆಳೆಯುತ್ತ ಬರುವ
ಮಾಲಿ, ಎಲ್ಲಿಂದ ಎಲ್ಲಿಗೋ ಹೊರ-
ಟವನು, ಕೊರೆ ಬೀಡಿ ಹಚ್ಚಿದವನು

ನಿಲ್ಲುತ್ತಾನೆ ನೋಡುತ್ತಾನೆ ಗೆಲ್ಲುತಾನೆ
ಹೂವಿಗೆ ಹೂವನೇ, ಮುಟ್ಟಿ ಮೂಸಿ
ಮೆಲ್ಲಗೆ ಮಾತಾಡಿಸುತ್ತಾನೆ ಶಿವನೆ ಇವನು

‍ಲೇಖಕರು avadhi

16 April, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading