ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ.ಪಿ.ಬಸವರಾಜು ಕವಿತೆಗಳು: ರಾಮು ಕಾಕಾ

ಜಿ.ಪಿ. ಬಸವರಾಜು

ಚಿತ್ರಗಳ ಕೃಪೆ: ಚಿಕ್ಕಮಗಳೂರು ಗಣೇಶ್, ಮಹೇಶ್ ಹರವೆ



ಆಷಾಢದ ಏಡಿ ಗಾಳಿ ಬೀಸುತ್ತಿದೆ
ಜೋರಾಗಿ, ಯಾವ ಕೇಡಿಗೋ,
ಎತ್ತರಕ್ಕೆ ಬೆಳದ ಪಪ್ಪಾಯ ಗಿಡ,
ಕಾಂಡ ಒಳಗೆಲ್ಲ ಲಡ್ಡು ಲಡ್ಡು
ನೇತಾಡುತ್ತಿವೆ ಮೇಲೆ ಕಾಯಿ
ಈ ಗಾಳಿಯಾಟಕ್ಕೆ ಯಾವಾಗ
ಸೊಂಟ ಮುರಿದು ಬೀಳುವುದೋ
ಬೀದಿಪಾಲು ಬೆಳೆಯುವ ಕಾಯಿ


ಒಳ-ಹೊರಗೆ ಆಡುತ್ತಿತ್ತು ಗಾಳಿ
ದೀಪ ಹೊಯ್ದಾಡಿದಂತೆಲ್ಲ
ಕತ್ತಲೆಯ ಭಯ ನಮಗೆ
ಥಂಡಿ ಗಾಳಿ ಎಳೆದುಕೋ
ಕದವ ಎಂದೆಚ್ಚರಿಸಿದಳು
ಅಮ್ಮ-ಹಳೆಯ ಕಾಲದ ಬಾಳ
ಕಂಡವಳು ಎಷ್ಟೊ ಆಷಾಢಗಳ


ಎಲ್ಲೆಲ್ಲು ನೀರವ, ಬೆಳೆಯುತ್ತ
ರಾತ್ರಿ ಮುಂಜಾನೆಗೆ ಮುಖ ಮಾಡಿ
ನಮಗೆಲ್ಲ ತೂಗಡಿಕೆ, ಭಾರ ರೆಪ್ಪೆ

ಕಾಕಾ ಹೇಳುತ್ತಲೇ ಇದ್ದ ಏನೇನೊ,
ಎಷ್ಟೆಷ್ಟೊ, ಮಾತುಗಳು ಗಿಜಿಗುಟ್ಟಿ
ಕತ್ತಲಲ್ಲಿ ಏನೋ ಹರಿದಾಡಿದಂತೆ
ಯಾರೋ ಬಂದು ಸಪ್ಪಳ
ಕರಢಗಿತ್ತು ನಿದ್ದೆ ಮಂಪರಲ್ಲಿ


ಎಚ್ಚರಾದಾಗ ಬೆಚ್ಚಿದೆವು, ಕಾಕನ
ಉಸಿರು ನಿಂತು, ಮಾತು ನಿಂತು
ಮನೆತುಂಬ ಹಾಹಾಕಾರ, ಎದೆ
ಎದೆ ಬಡಿದುಕೊಂಡಿತು ಬೀದಿ
ಕಾಕಾನ ಒಳಗೂ ಇಲ್ಲ ಹೊರಗೂ
ಇಲ್ಲಉಸಿರು, ಎಲ್ಲಿ ಹೋಯಿತು?-
ಕೊಚ್ಚಿ ಎಸೆಯುವ ಆಷಾಢ ಗಾಳಿ


ಏನೋ ಕೇಳುವುದಿತ್ತು, ಕಾಕಾನಿಗೂ
ಹೇಳುವುದಿತ್ತು, ಆಗಾಗ ಅವನು ಕರೆದ
ಕನಸಲ್ಲೂ ಕರೆದಿದ್ದ ಹತ್ತಾರು ಬಾರಿ
ಹಾಳು ನಿದ್ದೆ ಕೇಳಲಿಲ್ಲ ಏನೂ

ಒಂದೂ ಪಟವೂ ಇರಲಿಲ್ಲ ಕಾಕಾನ
ಜೊತೆ, ಆ ಕಾಲದಲ್ಲಿ ಕಂಡದ್ದು ನಮಗೆ
ಕೊಳದ ಬಿಂಬ, ದಂಡೆಯಲ್ಲಿದ್ದ ಎಲ್ಲವೂ
ಕೊಳದಲ್ಲಿ ಕಂಡು ಕುಣಿದಿದ್ದೆವು ಕೈ ಕೈ
ಹಿಡಿದು; ಕಾಲು ದಣಿದು ಕೂತು, ಮತ್ತೆ
ಎದ್ದು ನೋಡಿದಾಗ ಇರಲಿಲ್ಲ ಬಿಂಬ

‍ಲೇಖಕರು avadhi

14 June, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading