(ಇಲ್ಲಿಯವರೆಗೆ…)
ಇಂಗ್ಲಿಷ್ ಭಾಷೆ ಆಧುನಿಕ ಜ್ಞಾನದ ಬಾಗಿಲನ್ನು ತೆರೆಯುತ್ತದೆ ಎಂಬ ನಂಬಿಕೆ ರವೀಂದ್ರರದು. ಹಾಗೆಯೇ ಸ್ಥಳೀಯ ಸಂಸ್ಕೃತಿ, ಭಾಷೆಗಳ ಬಗೆಗೂ ಅವರಿಗೆ ಅಪಾರ ಪ್ರೀತಿ ಇತ್ತು. ಭಾರತೀಯ ಸಂಸ್ಕೃತಿ, ನಾಗರಿಕತೆ, ಪರಂಪರೆಗಳ ಬಗೆಗೆ ರವೀಂದ್ರಗಿದ್ದ ವಿಶ್ವಾಸ ಪ್ರಶ್ನಾತೀತವಾಗಿತ್ತು. ಇದನ್ನು ಗಾಂಧೀಜಿ ಬಲ್ಲವರಾಗಿದ್ದರು. ಆದರೆ ಭಾರತದಲ್ಲಿನ ವಸ್ತುಸ್ಥಿತಿಯನ್ನು ಗಾಂಧೀಜಿ ಸೂಕ್ಷ್ಮವಾಗಿ ಮತ್ತು ನಿಖರವಾಗಿ ಗ್ರಹಿಸಿದ್ದರು. ಇಂಗ್ಲಿಷ್ ಭಾಷೆಯನ್ನು ಭಾರತದಲ್ಲಿ ಯಾಕಾಗಿ ಕಲಿಯಲಾಗುತ್ತಿದೆ ಎಂಬುದನ್ನು ಗಾಂಧೀಜಿ ವಿವರಿಸುತ್ತಾರೆ: ‘ಇಂಗ್ಲಿಷ್ ಭಾಷೆಯನ್ನು ನಮ್ಮ ಹುಡುಗರು ಮುಖ್ಯವಾಗಿ ಕಲಿಯುವುದು ವಾಣಿಜ್ಯ ಕಾರಣಗಳಿಗಾಗಿ. ನಮ್ಮ ಹುಡುಗಿಯರಿಗೆ ಇಂಗ್ಲಿಷ್ ಕಲಿಸುವುದು ಅದು ಮದುವೆಗೆ ಪಾಸ್ಪೋಟರ್್ ಎಂಬ ಕಾರಣಕ್ಕೆ. ಇಂಗ್ಲಿಷ್ ಕಲಿಯದೆ ನಮಗೆ ಸಕರ್ಾರಿ ಉದ್ಯೋಗ ಸಿಕ್ಕುವುದಿಲ್ಲ ಎಂದು ನಮ್ಮ ಹುಡುಗರು, ಸದ್ಯದ ಪರಿಸ್ಥಿತಿಯಲ್ಲಿ, ಸರಿಯಾಗಿಯೇ ಯೋಚಿಸುತ್ತಾರೆ. ಸ್ವಾತಂತ್ರ್ಯದ ವಿಚಾರಗಳನ್ನು ತುಂಬಿಕೊಳ್ಳಲು ಮತ್ತು ಚಿಂತನೆಯ ನಿಖರತೆಯನ್ನು ಹೆಚ್ಚಿಸಿಕೊಳ್ಳಲು ಇಂಗ್ಲಿಷ್ ಭಾಷೆ ಅತ್ಯಗತ್ಯ ಎನ್ನುವುದೊಂದು ಮೂಢ ನಂಬಿಕೆ. ಭಾರತದ ಮೇಲೆ ದುಷ್ಪರಿಣಾಮವನ್ನು ಬೀರುತ್ತಿರುವ ಮೂಢನಂಬಿಕೆಗಳಲ್ಲೆಲ್ಲ ಇದು ದೊಡ್ಡದು. ಭಾರತೀಯ ವಿದ್ಯಾಥರ್ಿಗಳ ನರಶಕ್ತಿಯ ಮೇಲೆ ಇಂಗ್ಲಿಷ್ ಪ್ರಚಂಡ ಒತ್ತಡವನ್ನು ಹೇರುತ್ತದೆ; ಅವರನ್ನು ಈ ಭಾಷೆ ಅನುಕರಣಶೀಲರನ್ನಾಗಿ ಮಾಡುತ್ತ್ತದೆ. ತಮ್ಮ ಮತ್ತು ತಮ್ಮ ಮಿತ್ರರ ಜೊತೆ ತಮ್ಮ ಪತ್ನಿಯರು ಇಂಗ್ಲಿಷ್ ಮಾತನಾಡಲಾರರು ಎಂಬ ಕಾರಣಕ್ಕೆ ಖಿನ್ನರಾಗಿರುವ ಗಂಡಂದಿರನ್ನು ನಾನು ನೋಡಿದ್ದೇನೆ.. . ಇಂಗ್ಲಿಷ್ ಜ್ಞಾನವಿಲ್ಲದಿದ್ದರೆ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕುವುದು ಅಸಾಧ್ಯವೆಂದು ನೂರಾರು ಯುವಕರು ನಂಬಿದ್ದಾರೆ. ಈ ಕ್ಯಾನ್ಸರ್ ನಮ್ಮ ಸಮಾಜವನ್ನು ಎಷ್ಟು ತಿಂದಿದೆ ಎಂದರೆ, ಅನೇಕರ ವಿಚಾರದಲ್ಲಿ ಶಿಕ್ಷಣದ ಅರ್ಥವೇ ಇಂಗ್ಲಿಷ್ ಜ್ಞಾನವಾಗಿದೆ. ಇವೆಲ್ಲ ನಮ್ಮ ಗುಲಾಮಗಿರಿಯ ಮತ್ತು ಅವಮಾನಕರ ಪರಿಸ್ಥಿತಿಯ ಕುರುಹುಗಳಾಗಿಯೇ ನನಗೆ ಕಾಣಿಸುತ್ತಿವೆ. ದೇಶೀಯ ಭಾಷಿಗರನ್ನು ತುಳಿಯುವ ಮತ್ತು ಅವರು ಹಸಿವಿನಿಂದ ನರಳುವುದನ್ನು ನೋಡುವುದು, ಸಹಿಸುವುದು ನನ್ನಿಂದ ಸಾಧ್ಯವೇ ಇಲ್ಲ. ತನ್ನ ಮಾತೃಭಾಷೆಯನ್ನು ಮರೆಯುವ, ಕಡೆಗಣಿಸುವ ಅಥವಾ ಅದಕ್ಕೆ ಅಪಮಾನವೆಸಗುವ ಕಾರ್ಯವನ್ನು ಯಾವ ಭಾರತೀಯನೂ ಮಾಡಬಾರದು. ತನ್ನ ದೇಶ ಭಾಷೆಯಲ್ಲಿ ಅತ್ಯುತ್ತಮ ಚಿಂತನೆಗಳನ್ನು ಅಭಿವ್ಯಕ್ತಿಸಲು ಸಾಧ್ಯವಿಲ್ಲ, ಯೋಚಿಸಲೂ ಸಾಧ್ಯವಿಲ್ಲ ಎಂಬ ಭಾವನೆ ಯಾರಲ್ಲಿಯೂ ಬರಬಾರದು… ಭಾರತೀಯರ ಮೇಲೆ ಬ್ರಿಟಿಷ್ ಸಕರ್ಾರ ಹೇರಿದ ಶಿಕ್ಷಣ ಪದ್ಧತಿ ಅತ್ಯಂತ ದೋಷಪೂರ್ಣವಾಗಿದೆ. ಅದು ಹುಟ್ಟಿರುವುದು ತಪ್ಪಿನಲ್ಲಿ. ದೇಶೀ ಭಾಷೆ ಅತ್ಯಂತ ನಿಷ್ಪ್ರಯೋಜಕವಾದದ್ದು ಎಂದು ಇಂಗ್ಲಿಷ್ ಆಡಳಿತಗಾರರು ಪ್ರಾಮಾಣಿಕವಾಗಿಯೇ ನಂಬಿದ್ದರು. ಭಾರತೀಯ ದೇಹ, ಮನಸ್ಸು ಮತ್ತು ಮನಸ್ಸುಗಳನ್ನು ಕುಬ್ಜಗೊಳಿಸುವುದಕ್ಕಾಗಿ ಬ್ರಿಟಿಷರು ಈ ಶಿಕ್ಷಣ ಪದ್ಧತಿಯನ್ನು ಪಾಪದಲ್ಲಿ ಪೋಷಿಸಿದರು. ಇಂಗ್ಲಿಷ್ನಲ್ಲಿ ಯೋಚಿಸುವ ಮತ್ತು ಅಭಿವ್ಯಕ್ತಿಸುವ ತೊಡಕಿಗೆ ಸಿಕ್ಕಿಬೀಳದಿದ್ದರೆ, ರಾಜಾರಾಮ್ ಮೋಹನ್ ರಾಯ್ ಇನ್ನೂ ಶ್ರೇಷ್ಠ ಸುಧಾರಕರಾಗುತ್ತಿದ್ದರು; ಲೋಕಮಾನ್ಯ ತಿಲಕರು ಇನ್ನೂ ಶ್ರೇಷ್ಠ ವಿದ್ವಾಂಸರಾಗುತ್ತಿದ್ದರು.’
ಚರಕಾದ ಬಗ್ಗೆಯೂ ಗಾಂಧಿ ಮತ್ತು ಠಾಕೂರರಲ್ಲಿ ಸಹಮತವಿರಲಿಲ್ಲ. ಇಬ್ಬರ ಗ್ರಹಿಕೆಗೂ ಬೇರೆ ಬೇರೆಯ ನೆಲೆಗಳಿದ್ದವು.
ಪ್ರತಿಯೊಬ್ಬ ಭಾರತೀಯನೂ ದಿನಕ್ಕೆ ಅರ್ಧಗಂಟೆ ಚರಕ ತಿರುಗಿಸಿದರೆ ಭಾರತ ಒಂದು ವರ್ಷದಲ್ಲಿ ಸ್ವರಾಜ್ಯವನ್ನು ಪಡೆಯಬಹುದು ಎಂದು ಗಾಂಧೀಜಿ ಪದೇ ಪದೇ ಹೇಳುತ್ತಿದ್ದರು. ಗಾಂಧೀಜಿಯವರ ಈ ಮಾತಿನಲ್ಲಿದ್ದ ‘ಚರಕ’ ಎನ್ನುವ ಪದಕ್ಕೂ, ‘ಸ್ವರಾಜ್ಯ’ ಎನ್ನುವ ಪದಕ್ಕೂ ವಿಶೇಷ ಅರ್ಥವಿತ್ತು. ಬೇರೆ ಬೇರೆಯ ಸಂದರ್ಭದಲ್ಲಿ ಅದನ್ನವರು ವಿವರಿಸಿಯೂ ಇದ್ದರು.
ಗಾಂಧೀಜಿಯವರಿಗೆ ಚರಕಾ ಕೇವಲ ನೂಲು ತೆಗೆಯುವ ಸಾಧನವಾಗಿರಲಿಲ್ಲ. ಅದು ಅನೇಕ ಅರ್ಥಗಳನ್ನು, ಅನೇಕ ಆಯಾಮಗಳನ್ನು ಹೊಮ್ಮಿಸುವ, ದಿಕ್ಕೆಟ್ಟ ಭಾರತೀಯರ ಬದುಕಿಗೆ ಬಹುದೊಡ್ಡ ಅವಲಂಬನೆಯನ್ನು ಒದಗಿಸಬಲ್ಲ, ಆ ಮೂಲಕ ಭಾರತೀಯ ಬದುಕಿಗೆ ಹೊಸ ಕಾಂತಿಯನ್ನು ತರಬಲ್ಲ ಸಾಧನವಾಗಿತ್ತು.
ರವೀಂದ್ರರು ಮಾತ್ರ ಚರಕಾವನ್ನು ಅನುಮಾನದಿಂದಲೇ ನೋಡಿದರು. ‘ಚರಕಾದ ಮೂಲಕ ದೇಶದಲ್ಲಿ ಬಹುದೊಡ್ಡ ಕುರುಡು ನಂಬಿಕೆ ಒಳದಾರಿಯ ಆಕರ್ಷಣೆಗೆ ಒಳಗಾಗುತ್ತದೆ; ನೈತಿಕ ನಿಷ್ಠೆ ಬಗ್ಗೆ ಅನುಮಾನವೇ ಇಲ್ಲದ ವ್ಯಕ್ತಿಯೊಬ್ಬರಿಂದ ಈ ದಾರಿಯನ್ನು ಹಿಡಿಯುವ ಸೂಚನೆ ಬಂದಾಗಲಂತೂ ಇದು ಸುಲಭ. ನನಗೆ ಇದೇ ಭಯಹುಟ್ಟಿಸುತ್ತದೆ’ ಎಂದವರು ಪ್ರಾಮಾಣಿಕವಾಗಿಯೇ ಹೇಳಿದ್ದರು.
ಈ ವಿಚಾರವನ್ನು ಚಚರ್ೆಗೆ ಒಳಪಡಿಸಲು ಮತ್ತು ಗಾಂಧೀಜಿಯರನ್ನು ಎಚ್ಚರಿಸಲು ಗುರುದೇವ ಎರಡು ಲೇಖನಗಳನ್ನು ಪ್ರಕಟಿಸಿದರು. ನೂಲುವುದನ್ನು ಒಂದು ಪವಿತ್ರ ಆಚರಣೆಯನ್ನು ಮಾಡುವುದರ ಬಗ್ಗೆ ಆಕ್ಷೇಪಣೆ ಎತ್ತಿದುದು ಮಾತ್ರವಲ್ಲ, ಇನ್ನೂ ಅನೇಕ ಅಂಶಗಳನ್ನು ಅವರು ಪ್ರಸ್ತಾಪಿಸಿ, ವಿಶ್ಲೇಷಿಸಿದರು: ‘ದೊಡ್ಡ ಯಂತ್ರಗಳು ಮನುಷ್ಯನ ಬೆಳವಣಿಗೆಯನ್ನು ಕುಂಠಿತಗೊಳಿಸುವುದಾದರೆ, ಸಣ್ಣ ಯಂತ್ರಗಳೂ ಈ ಕೆಲಸ ಮಾಡುವ ಅಪಾಯವನ್ನು ಮರೆಯಬಾರದು’ ಎಂದು ಎಚ್ಚರಿಸಿದರು.
‘ಪ್ರತಿದಿನವೂ ಒಂದೇ ರೀತಿಯ ಕೆಲಸ ಮಾಡುವುದರಿಂದ ಮಾಡುವಾತ ಯಂತ್ರದ ಕೌಶಲವನ್ನು ಪಡೆಯಬಹುದು; ಆದರೆ ಅವನ ಮನಸ್ಸು ಗಾಣಸುತ್ತುವ ಎತ್ತಿನಂತೆ, ಅಭ್ಯಾಸದ ಕಿರು ವ್ಯಾಪ್ತಿಯಲ್ಲಿಯೇ ಸುತ್ತುತ್ತಿರುತ್ತದೆ. ಅತ್ಯಂತ ಸಣ್ಣ ದೇವರುಗಳಿಗೆ ಅತಿ ಸುಲಭವಾಗಿ ಸಲ್ಲಿಸಬಹುದಾದ ಈ ಕಾಣಿಕೆಯನ್ನು ಸಲ್ಲಿಸಲು ಕರೆ ನೀಡುವುದು ಮನುಷ್ಯತ್ವಕ್ಕೆ ಮಾಡುವ ಬಹುದೊಡ್ಡ ಅಪಮಾನ. ಕೋಟ್ಯಂತರ ಸಂಖ್ಯೆಯಲ್ಲಿರುವ ನಮ್ಮ ಎಲ್ಲ ಜನರಿಗೂ ಚರಕ ನೂಲಲು ಹೇಳುವುದು (ಪುರಿಯ) ಜಗನ್ನಾಥನಿಗೆ ಎಲ್ಲರೂ ಟೊಮ್ಯಾಟೊ ಒಪ್ಪಿಸಿ ಎಂದು ಹೇಳುವಷ್ಟೇ ಕೆಟ್ಟದ್ದು. ಭಾರತದಲ್ಲಿ 33 ಕೋಟಿ ಗೋಪಿಕೆಯರು ಇಲ್ಲವೆಂದು ನಾನು ಆಶಿಸುತ್ತೇನೆ…ಚರಕಾಕ್ಕೆ ಅನಗತ್ಯವಾಗಿ ಮತ್ತು ಅನ್ಯಾಯವಾಗಿ ಪ್ರಾಮುಖ್ಯತೆಯನ್ನು ಕೊಡುವುದರಿಂದ ನಮಗೆ ತೊಂದರೆಯೇ ಆಗುತ್ತದೆ’ ಎಂದು ರವೀಂದ್ರರು ಭಾವಿಸಿದ್ದರು. ಚರಕಾದಂಥ ಸಣ್ಣಪುಟ್ಟ ಕೆಲಸಗಳು ಮನುಷ್ಯನ ಮನಸ್ಸನ್ನು ಮತ್ತು ಸೃಜನಶೀಲತೆಯನ್ನು ಮುರುಟಿಸಬಹುದು ಎಂಬ ಅನುಮಾನವೂ ಅವರಿಗಿತ್ತು. ಚರಕಾ ಚಳವಳಿ ತಮ್ಮ ಮನಸ್ಸಿನ ಆಳವನ್ನು ಕಲಕಲಿಲ್ಲ ಎಂದು ಹೇಳಿದ ಗುರುದೇವ, ತಮ್ಮಂತೆ ಮನ ಕಲಕದ ಇತರರೂ ಇದ್ದಾರೆಂಬುದನ್ನು ತಿಳಿಸಿದರು.
ಇದಕ್ಕೆ ಪ್ರತಿಯಾಗಿ ಗಾಂಧೀಜಿ, ‘ಚರಕಾ ತಿರುಗಿಸುವುದನ್ನು ಒಂದು ಪವಿತ್ರ ಕ್ರಿಯೆಯಂತೆ ಮಾಡಲು’ ಗುರುದೇವರಿಗೆ ಮನವಿ ಮಾಡಿಕೊಂಡರು. ಚರಕಾದ ಅನಿವಾರ್ಯತೆಯನ್ನು ಮತ್ತು ಅರ್ಥವಂತಿಕೆಯನ್ನು ಮನವರಿಕೆ ಮಾಡಿಕೊಡುವಂತೆ ಗಾಂಧೀಜಿ ಬರೆದರು: ‘ದೇವರು ಮನುಷ್ಯನನ್ನು ಸೃಷ್ಟಿಸಿರುವುದು ಮನುಷ್ಯ ತನ್ನ ಆಹಾರಕ್ಕಾಗಿ ಕೆಲಸ ಮಾಡಲೆಂದು. ಕೆಲಸ ಮಾಡದೆ ಅನ್ನ ತಿನ್ನುವವರು ಕಳ್ಳರು. ಭಾರತದ ಶೇ 80 ರಷ್ಟು ಜನ ವರ್ಷದಲ್ಲಿ ಆರು ತಿಂಗಳು ಕಡ್ಡಾಯವಾಗಿ ಕಳ್ಳರಾಗಿರಬೇಕಾಗುತ್ತದೆ. ಇದರಿಂದಾಗಿ ಭಾರತವೇ ಒಂದು ದೊಡ್ಡ ಜೈಲಾದರೆ ಅದರಲ್ಲಿ ಆಶ್ಚರ್ಯವೇನು? ಭಾರತವನ್ನು ಚರಕಾದತ್ತ ತಳ್ಳುತ್ತಿರುವ ಚಾಲಕ ಶಕ್ತಿಯೇ ಹಸಿವು. ಚರಕಾಕ್ಕಾಗಿ ನಾನು ವಾದಿಸುತ್ತಿದ್ದರೆ, ಅದು ಕಾಯಕದ ಘನತೆಯನ್ನು ಮಾನ್ಯಮಾಡುತ್ತಿರುವುದರ ಸಮರ್ಥನೆ. ಚರಕಾವನ್ನು ಅದರ ಘನತೆಯ ಸ್ಥಾನದಿಂದ ಕೆಳಗೆ ತಳ್ಳಿರುವುದು ನಮ್ಮ ವಿದೇಶೀ ಬಟ್ಟೆಗಳ ಮೇಲಿನ ಪ್ರೀತಿಯೇ. … ಈ ಬಟ್ಟೆಗಳನ್ನು ಸುಟ್ಟು ನಾನು ನನ್ನ ಪಾಪವನ್ನು ತೊಳೆದುಕೊಂಡು ಪರಿಶುದ್ಧನಾಗುತ್ತೇನೆ.’
‘ನರಳುತ್ತಿರುವ ರೋಗಿಗಳನ್ನು ಕಬೀರನ ಒಂದು ಹಾಡಿನಿಂದ ಸಮಾಧಾನಗೊಳಿಸುವುದು ಸಾಧ್ಯವಿಲ್ಲವೆಂಬುದನ್ನು ನಾನು ಕಂಡುಕೊಂಡಿದ್ದೇನೆ. ಮಿಲಿಯಾಂತರ ಹಸಿದವರು ಕೇಳುತ್ತಿರುವುದು ಒಂದೇ ಪದ್ಯ-ಅದು ಶಕ್ತಿಯನ್ನು ತಂದುಕೊಡುವ ಆಹಾರವನ್ನು. ಅವರಿಗೆ ಅದನ್ನು ಕೊಡಲಾಗುತ್ತಿಲ್ಲ. ತಮ್ಮ ಬೆವರಿನ ಮೂಲಕವೇ ಅದನ್ನವರು ಗಳಿಸಬೇಕು.’
‘ಇಡೀ ರಾಷ್ಟ್ರಕ್ಕೆ ಮಾಡುವ ತ್ಯಾಗದಂತೆ ಪ್ರತಿಯೊಬ್ಬನೂ ನೂಲವುದಕ್ಕೆ ದಿನದಲ್ಲಿ ಅರ್ಧಗಂಟೆ ಸಮಯವನ್ನು ಕೊಡಲಿ. ಯಾವುದೇ ಕೆಲಸವಿಲ್ಲದೆ, ಹೊಟ್ಟೆಗಿಲ್ಲದೆ ನರಳುತ್ತಿರುವ ಗಂಡು ಅಥವಾ ಹೆಣ್ಣು, ಜೀವನ ನಿರ್ವಹಣೆಗೆ ನೂಲಬೇಕೆಂದು ನಾನು ಹೇಳಿದ್ದೇನೆ. ಮತ್ತು ಅರೆ ಹೊಟ್ಟೆಯಲ್ಲಿರುವ ರೈತ ತನ್ನ ಬಿಡುವಿನ ವೇಳೆಯಲ್ಲಿ, ತನ್ನ ಕಡಿಮೆ ಆದಾಯದ ಸಂಪನ್ಮೂಲಗಳಿಗೆ ಪೂರಕವಾಗಿ, ಚರಕ ನೂಲುವುದನ್ನು ರೂಢಿಸಿಕೊಳ್ಳಬೇಕೆಂದು ಕೇಳಿಕೊಂಡಿದ್ದೇನೆ… ಕೆಲಸವಿಲ್ಲದೆ ಬಲವಂತದಿಂದ ಸುಮ್ಮನೆ ಕಳೆಯಬೇಕಾದ ಸಮಯವನ್ನು ಹೇಗೆ ಕೆಲಸಕ್ಕೆ ತೊಡಗಿಸಬೇಕೆಂಬುದು ತಿಳಿಯದಿದ್ದರೆ ಮಿಲಿಯಾಂತರ ಜನರಿಗೆ ‘ಸ್ವರಾಜ್ಯ’ ಎಂಬುದು ಅರ್ಥಹೀನ.’
ಗಾಂಧೀಜಿಯವರ ಚರಕ ಇನ್ನೊಂದು ಆಯಾಮದಲ್ಲಿಯೂ ಅವರಿಗೆ ಮುಖ್ಯವಾಗಿತ್ತು. ಜಾತಿಯನ್ನು ಆಧರಿಸಿದ ಕಾಯಕಗಳು, ಕಸುಬುಗಳು ಇರುವ ಸಮಾಜದಲ್ಲಿ, ತಾರತಮ್ಯ, ವಿಧಿನಿಷೇಧಗಳ ಸಂಕೀರ್ಣ ವ್ಯವಸ್ಥೆಯಲ್ಲಿ ಕಾಯಕದ ಘನತೆಯನ್ನು ಎತ್ತಿಹಿಡಿಯುವುದಕ್ಕೆ ಚರಕ ಗಾಂಧೀಜಿಯವರಿಗೆ ಮುಖ್ಯ ಅಸ್ತ್ರವಾಗಿತ್ತು.
ವಿದೇಶೀ ಬಟ್ಟೆಗಳನ್ನು ಸುಡುವ ಚಳವಳಿ ಕೂಡಾ ಕವಿವರ್ಯರನ್ನು ಸಿಟ್ಟಿಗೇಳಿಸಿತ್ತು. ಹೀಗೆ ಬಟ್ಟೆಗಳನ್ನು ಸುಡುವುದರಿಂದ ಯಾವ ಉದ್ದೇಶವೂ ಈಡೇರುವುದಿಲ್ಲ ಎಂದು ಅವರು ಹೇಳುತ್ತಿದ್ದರು. ಒಂದು ನಿದರ್ಿಷ್ಟ ಉತ್ಪಾದನೆಯ ಬಟ್ಟೆಯನ್ನು ಉಪಯೋಗಿಸುವುದು ಅಥವಾ ನಿರಾಕರಿಸುವುದು ಪ್ರಮುಖವಾಗಿ ಆಥರ್ಿಕ ವಿಚಾರ; ಇದನ್ನು ಅರ್ಥಶಾಸ್ತ್ರದ ಭಾಷೆಯಲ್ಲಿಯೇ ಚಚರ್ಿಸಬೇಕು. ವಿದೇಶೀ ಬಟ್ಟೆಯನ್ನು ಸುಡುವುದು ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರಗಳ ನಡುವಣ ಗೊಂದಲದಿಂದ ಹುಟ್ಟಿಕೊಂಡದ್ದು. ಒಂದು ನಿದರ್ಿಷ್ಟ ಮಾದರಿಯ ಬಟ್ಟೆಯನ್ನು ತೊಡುವುದರಲ್ಲಿ ಏನಾದರೂ ತಪ್ಪಿದ್ದರೆ ಅದು ಅರ್ಥಶಾಸ್ತ್ರದ ಇಲ್ಲವೇ ಆರೋಗ್ಯ ಅಥವಾ ಸೌಂದರ್ಯದ ವಿರುದ್ಧ ಮಾಡಿದ ಅಪರಾಧವಾಗುತ್ತದೆಯೇ ಹೊರತು ಖಂಡಿತಾ ಅದು ನೈತಿಕ ಅಪರಾಧವಾಗುವುದಿಲ್ಲ ಎಂದು ರವೀಂದ್ರರು ವಾದಿಸುತ್ತಿದ್ದರು.
ಕೇವಲ ವಿದೇಶದ್ದು ಎನ್ನುವ ಕಾರಣಕ್ಕೆ ಒಂದು ಬಟ್ಟೆಯನ್ನು ಮೈಲಿಗೆ ಎಂದು ಭಾವಿಸಿ ಸುಡುವುದು ಮತ್ತು ಆ ಮೂಲಕ ಭಾರತಕ್ಕೆ ಸ್ವರಾಜ್ಯ ಸಿಕ್ಕುವುದೆಂದು ಭಾವಿಸುವುದು ಮಾಂತ್ರಿಕ ಸೂತ್ರದಂತೆ ಕಾಣಿಸುತ್ತದೆ. ಯಾವುದೇ ಶ್ರೇಷ್ಠ ವಸ್ತು ಸುಲಭವಾಗಿ ಸಿಕ್ಕುವುದಿಲ್ಲ. ಅಮೂಲ್ಯವಾದ ವಸ್ತುಗಳನ್ನು ಅಗ್ಗದ ಬೆಲೆಗೆ ಕೊಳ್ಳಲು ಪ್ರಯತ್ನಿಸಿದರೆ ನಮಗೆ ನಾವೇ ಮೋಸ ಮಾಡಿಕೊಳ್ಳುತ್ತೇವೆ. ಸ್ವರಾಜ್ಯದ ತಳಹದಿ ಯಾವುದೇ ಹೊರಗಿನ ಸಮರ್ಥನೆಯ ಮೇಲಿರಬಾರದು; ಒಳಗಿನ ಹೃದಯಗಳ ಬೆಸುಗೆಯ ಮೇಲಿರಬೇಕು. ಗಾಂಧಿಯ ಅನುಯಾಯಿಗಳು ಕಣ್ಣುಮುಚ್ಚಿಕೊಂಡು ಗಾಂಧಿಯನ್ನು ಅನುಸರಿಸಬಾರದು. ಬಟ್ಟೆಗಳನ್ನು ಸುಡಲು ಅನುಮತಿ ಕೊಟ್ಟಿದ್ದರೂ, ಆ ಬಟ್ಟೆಗಳನ್ನು ಸುಡದೆ, ಅವು ಯಾರಿಗೆ ಸೇರಿವೆಯೋ ಆ ಬಡವರಿಗೆ ಅವನ್ನು ಹಿಂದಿರುಗಿಸಬೇಕು. ಹಾಗೆ ಮಾಡದೆ, ಅವನ್ನು ಗುಡ್ಡೆಹಾಕಿ ಸುಟ್ಟರೆ ಆ ಬಟ್ಟೆಗಳ ಬಡವರು ಬೆತ್ತಲಾಗಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಅವರು ಮನೆಯಿಂದ ಹೊರಬರಲಾಗದ ಸ್ಥಿತಿಯಲ್ಲಿ ಮನೆಯಲ್ಲಿಯೇ ಬಂಧಿಗಳಾಗಬೇಕಾಗುತ್ತದೆ. ಬಟ್ಟೆಗಳನ್ನು ಸುಟ್ಟ ಅಪರಾಧ ನಮ್ಮ ತಲೆಗೆ ಸುತ್ತಿಕೊಳ್ಳುವುದಿಲ್ಲ. ಆದರೆ ಸುತ್ತಿಕೊಳ್ಳುವ ಪಾಪವನ್ನು ನಾವು ಹೇಗೆ ತೊಳೆದುಕೊಳ್ಳಲು ಸಾಧ್ಯ? ಎಂದು ಗುರುದೇವ ಪ್ರಶ್ನಿಸುತ್ತಿದ್ದರು.
‘ದಿ ಕಾಲ್ ಆಫ್ ಟ್ರೂತ್’ ಮತ್ತು ‘ದಿ ಕಲ್ಟ್ ಆಫ್ ಚರಕಾ’ ಎನ್ನುವ ಎರಡು ಲೇಖನಗಳಲ್ಲಿ ರವೀಂದ್ರರು ತಮ್ಮ ಈ ಎಲ್ಲ ಭಾವಗಳನ್ನು, ಅಭಿಪ್ರಾಯಗಳನ್ನು, ವಿಶ್ಲೇಷಣೆಗಳು ವಿವರಿಸಿದ್ದರು. ವಿದೇಶೀ ಬಟ್ಟೆಗಳಾದರೂ ಅವನ್ನು ಸುಡುವುದು ಪಾಪ ಎಂದು ಅವರು ಗಾಢವಾಗಿ ನಂಬಿದ್ದರು.
ಗಾಂಧೀಜಿ ಈ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ‘ಯಂಗ್ ಇಂಡಿಯಾ’ದಲ್ಲಿ ನೀಡಿದರು: ‘ನಾನು ಸುಡಲೆಂದು ಕವಿವರ್ಯರನ್ನು ಕೇಳಿದ್ದು ಅವರ ಬಟ್ಟೆಗಳನ್ನೇ. ಆ ಬಟ್ಟೆಗಳು ಬಡವರು ಮತ್ತು ಬಟ್ಟೆ ಇಲ್ಲದವರಿಗೆ ಸೇರಿದವಾಗಿದ್ದರೆ ಬಹಳ ಹಿಂದೆಯೇ ಗುರುದೇವರು ಅವನ್ನು ಅವರಿಗೆ ಹಿಂದಿರುಗಿಸಬೇಕಾಗಿತ್ತು. ನನ್ನ ವಿದೇಶೀ ಬಟ್ಟೆಗಳನ್ನು ನಾನು ಸುಡುವುದರ ಮೂಲಕ ನಾನು ನನ್ನ ನಾಚಿಕೆಯನ್ನು ಸುಡುತ್ತೇನೆ. ಬಡವರಿಗೆ ಅಗತ್ಯವಾದ ಕೆಲಸವನ್ನು ಕೊಡಬೇಕು. ಬದಲಾಗಿ ಅಗತ್ಯವಿಲ್ಲದ ಬಟ್ಟೆಗಳನ್ನು ಕೊಟ್ಟು, ಅವರ ಬೆತ್ತಲೆ ಬದುಕನ್ನು ಅವಮಾನಿಸಬಾರದು. ಅವರ ಪೋಷಕನಾಗುವ ಪಾಪವನ್ನು ನಾನು ಮಾಡಲಾರೆ…ಅವರ ಕೆಲಸದಲ್ಲಿ ಭಾಗಿಯಾಗುತ್ತೇನೆ. .. ವಿದೇಶೀ ಬಟ್ಟೆಗಳನ್ನು ಸುಡುವುದರ ಮೂಲಕ ನಾನು ನನ್ನ ಪಾಪವನ್ನು ಕಳೆದುಕೊಂಡು ಪರಿಶುದ್ಧನಾಗುತ್ತೇನೆ.’
ಯಾವುದನ್ನೂ ಪ್ರೀತಿಯ ಕಾರಣದಿಂದಾಗಿ, ಕಣ್ಣುಮುಚ್ಚಿಕೊಂಡು, ಉನ್ಮಾದದಿಂದ ಅಥವಾ ಗುಲಾಮೀ ಮನೋಭವದಿಂದ ಒಪ್ಪಿಕೊಳ್ಳುವುದು ಅತ್ಯಂತ ವಿಷಾದಕರ ಸ್ಥಿತಿ. ನಾನು ಹೇಳಿದ್ದನ್ನು ಮತ್ತು ಮಾಡಿದ್ದನ್ನು ವಿಚಾರಮಾಡದೆ ಕುರುಡಾಗಿ ದೇಶ ಅನುಕರಿಸಿದ್ದರೆ ಅದಕ್ಕಾಗಿ ನಾನು ತೀವ್ರ ವಿಷಾದ ಪಡುತ್ತೇನೆ ಎಂದರು ಗಾಂಧೀಜಿ.
ಆಥರ್ಿಕತೆ ಮತ್ತು ನೈತಿಕತೆಯ ಮಧ್ಯೆ ಗೆರೆ ಎಳೆಯುವುದನ್ನು ಅವರು ನಿರಾಕರಿಸಿದರು. ಇವುಗಳ ನಡುವೆ ತಾವು ಭೇದವನ್ನು ಎಣಿಸುವುದಿಲ್ಲ ಎಂದರು.
ಬಿಹಾರದಲ್ಲಿ 1934ರಲ್ಲಿ ನಡೆದ ಭೂಕಂಪ ಈ ಇಬ್ಬರ ನಂಬಿಕೆಗಳನ್ನು, ಗ್ರಹಿಕೆ ಮತ್ತು ಅರ್ಥವಂತಿಕೆಗಳನ್ನು ಮತ್ತೊಮ್ಮೆ ಚಚರ್ೆಗೆ ಒಡ್ಡಿತು. ಭಾರತದಲ್ಲಿನ ಅಸ್ಪೃಶ್ಯತೆಯ ಆಚರಣೆ ದೇವರ ಕೋಪಕ್ಕೆ ಕಾರಣವಾಗಿ ಅದು ಭೂಕಂಪದ ರೂಪದಲ್ಲಿ ಬಿಹಾರದ ಕೆಲವು ಭಾಗಗಳಲ್ಲಿ ಪ್ರಕಟಗೊಂಡಿದೆ ಎಂದು ಗಾಂಧೀಜಿ ವ್ಯಾಖ್ಯಾನಿಸಿದ್ದರು. ‘ದೇಶದಲ್ಲಿ ಅನೇಕರು ಇದಕ್ಕೆ ತಕ್ಷಣದ ಸಮ್ಮತಿಯನ್ನೂ ಸೂಚಿಸಿದರು.’ ಇದು ಗುರುದೇರನ್ನು ದಿಗ್ಭ್ರಮೆಗೆ ತಳ್ಳಿತು. ಅವರು ಗಾಂಧೀಜಿಯವರ ವ್ಯಾಖ್ಯೆಯನ್ನು ‘ಅವೈಜ್ಞಾನಿಕ’, ‘ದುರದೃಷ್ಟಕರ’ ಎಂದರು. ‘ನೈತಿಕ ತತ್ವಗಳನ್ನು ನಾವು ವಿಶ್ವಾತ್ಮಕ ಸಂಗತಿಗಳ ಜೊತೆಗೆ ಜೋಡಿಸುವುದಾದರೆ ಮನುಷ್ಯ ಸ್ವಭಾವವು ದೈವಾನುಗ್ರಹಕ್ಕಿಂತ ಮೇಲ್ಮಟ್ಟದ್ದೆಂದು, ಈ ದೈವಾನುಗ್ರಹ ಸ್ವಚ್ಛಂದ ರೀತಿಯಲ್ಲಿ ಮನುಷ್ಯನಿಗೆ ಪಾಠಗಳನ್ನು ಕಲಿಸುತ್ತದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ತೀವ್ರ ಖಂಡನೆಗೆ ಒಳಗಾಗಬೇಕಾದವರ, ಸುರಕ್ಷಿತ ದೂರವನ್ನು ಕಾಯ್ದುಕೊಂಡಿರುವವರ ಮನಸ್ಸುಗಳನ್ನು ಪ್ರಭಾವಿಸಲು ಗಾಂಧೀಜಿ ಇಂಥ ವ್ಯಾಖ್ಯಾನಗಳನ್ನು ನೀಡುವುದು ಸರಿಯಲ್ಲ’ ಎಂದು ಅವರು ಪ್ರತಿರೋಧಿಸಿದರು.
ತಮ್ಮ ಇಂಥ ವಾದಗಳಿಂದ, ಅಭಿಪ್ರಾಯಗಳಿಂದ ಗಾಂಧೀಜಿ ಭಾರತೀಯರ ಮನಸ್ಸುಗಳಲ್ಲಿ ಅವೈಚಾರಿಕತೆಯನ್ನು ಬಿತ್ತುತ್ತಾರೆ. ಈ ಅವೈಚಾರಿಕತೆ ಸ್ವಾತಂತ್ರ್ಯದ ಕನಸನ್ನು ಕಮರಿಸುತ್ತದೆ; ಆತ್ಮಗೌರವವನ್ನು ಕೊಂದು ಹಾಕುತ್ತದೆ. ಅವೈಚಾರಿಕತೆಯನ್ನು ಬೆಂಬಲಿಸುವ ಒಂದೇ ಒಂದು ಮಾತು ಗಾಂಧೀಜಿಯವರ ಬಾಯಿಯಿಂದ ಬಂದರೂ ತಮಗೆ ತೀವ್ರ ನೋವಾಗುತ್ತದೆ ಎಂದು ರವೀಂದ್ರರು ಹೇಳುತ್ತಿದ್ದರು.
ಆದರೆ ಬಿಹಾರದ ಭೂಕಂಪವನ್ನು ಕುರಿತಂತೆ ಗಾಂಧೀಜಿ ಪ್ರಕಟಿಸಿದ ಅಭಿಪ್ರಾಯ, ವಾದಕ್ಕಾಗಿ ಅಥವಾ ಅವೈಚಾರಿಕತೆಯನ್ನು ಬಿತ್ತುವುದಕ್ಕಾಗಿ ಹೇಳಿದ ಅಭಿಪ್ರಾಯವಲ್ಲ; ಅವರ ಅಖಂಡ ನಂಬಿಕೆಯೇ ಹಾಗಿತ್ತು: ‘ದೇವರ ಎಲ್ಲಾ ನಿಯಮಗಳನ್ನು ನಾವು ಅರಿಯೆವು; ಅಥವಾ ಅವನ ನಿಯಮಗಳು ಕಾರ್ಯನಿರ್ವಹಿಸುವ ಬಗೆಯನ್ನೂ ನಾವು ತಿಳಿದಿಲ್ಲ. ಅವನ ಇಚ್ಛೆ ಇಲ್ಲದೆ ಒಂದು ಹುಲ್ಲುಕಡ್ಡಿಯೂ ಚಲಿಸುವುದಿಲ್ಲ ಎಂಬುದನ್ನು ನಾನು ಕ್ಷರಶಃ ನಂಬುತ್ತೇನೆ. ನಾನು ತೆಗೆದುಕೊಳ್ಳುವ ಪ್ರತಿಯೊಂದು ಉಸಿರೂ ಅವನ ಮೌನ ಸಮ್ಮತಿಯಿಂದಲೇ. ವಿಶ್ವನಿಯಮಗಳನ್ನು ನಾವು ಸಮರ್ಥವಾಗಿ ತಿಳಿಯದಿರುವುದರಿಂದ ನಮಗೆ ಆ ಮಹಾವಿಪ್ಲವಗಳು ಹಾಗೆ ಕಾಣಿಸುತ್ತವೆ… ಮಹಾದುರಂತಗಳು ಹೇಗೋ ಮನುಷ್ಯನ ನೈತಿಕತೆಯೊಂದಿಗೆ ಸಂಬಂಧ ಹೊಂದಿವೆ…ಬಿಹಾರದ ಭೂಕಂಪ ಮತ್ತು ಅಸ್ಪೃಶ್ಯತೆಯ ಪಾಪಕ್ಕೆ ಸಂಬಂಧವಿರುವುದನ್ನು ನಾನು ಬಲ್ಲೆ, ನನ್ನ ಅನುಭವವೂ ಅದನ್ನೇ ಹೇಳುತ್ತಿದೆ. ಆದರೆ ಅದನ್ನು ನಾನು ಸಾಧಿಸಿ ತೋರಿಸಲಾರೆ; ದೇವರ ಅಸ್ತಿತ್ವವನ್ನು ನಾನು ಸಾಧಿಸಿ ತೋರಿಸದಿದ್ದರೂ ದೇವರಲ್ಲಿ ನಂಬಿಕೆ ಇಡದೆ ಇರಲು ನನಗೆ ಸಾಧ್ಯವೇ ಇಲ್ಲ.’
ಗಾಂಧೀಜಿಯವರ ಬಗ್ಗೆ ಅಪಾರ ಗೌರವವನ್ನು ಕವಿ ರವೀಂದ್ರರು ಪ್ರಕಟಿಸುತ್ತಲೇ ಇದ್ದರು. ತಮ್ಮ ಪವಾಡ ಸದೃಶ ಕಾರ್ಯನಿರ್ವಹಣೆಯ ಮೂಲಕ ಗಾಂಧೀಜಿ ತನ್ನ ದೇಶಬಾಂಧವರಲ್ಲಿ ತುಂಬುತ್ತಿದ್ದ ಸ್ಫೂತರ್ಿ, ಅವರ ಮನದಲ್ಲಿದ್ದ ದುರ್ಬಲತೆ ಮತ್ತು ಭಯವನ್ನು ಕಳೆದು ಅಲ್ಲಿ ಸ್ವಾತಂತ್ರ್ಯದ ಕನಸನ್ನು ಬಿತ್ತುತ್ತಿದ್ದ ವಿಧಾನ ಇತ್ಯಾದಿ ಹಲವಾರು ಕಾರಣಗಳಿಗಾಗಿ ನಾವು ಮಹಾತ್ಮಾಜಿಯವರಿಗೆ ಕೃತಜ್ಞರಾಗಿರಬೇಕೆಂದು ಗುರುದೇವ ಹೇಳುತ್ತಿದ್ದರು. ಗಾಂಧೀಜಿಯವರ ನೈತಿಕ ನಿಷ್ಠೆ, ವ್ಯಕ್ತಿತ್ವಗಳ ಬಗೆಗಂತೂ ರವೀಂದ್ರನಾಥ ಠಾಕೂರರಿಗೆ ಅಪಾರ ಗೌರವ. ದಿವ್ಯ ದೈವಾನುಗ್ರಹದ ಶಕ್ತಿ ನಮಗೆ ಗಾಂಧೀಜಿಯವರ ಮೂಲಕ ದೊರೆತಿದ್ದು, ಇದು ಭಾರತಕ್ಕೆ ಚೈತನ್ಯವನ್ನು ಕೊಡಲಿ ಎಂದು ಅವರು ಪ್ರಾಥರ್ಿಸುವುದೂ ಇತ್ತು. ಇಷ್ಟಾದರೂ ಗಾಂಧೀಜಿಯವರ ಕೆಲವು ವಾದಗಳನ್ನು, ಅಭಿಪ್ರಾಯಗಳನ್ನು, ನಂಬಿಕೆಗಳನ್ನು ಒಪ್ಪಿಕೊಳ್ಳುವುದು ಗುರುದೇವರಿಗೆ ಕಷ್ಟವಾಗುತ್ತಿತ್ತು.
ಕೇಡು ಇರುವುದೇ ರಾಷ್ಟ್ರೀಯತೆಯಲ್ಲಿ, ಅದು ಮನುಷ್ಯ-ಮನುಷ್ಯರ ನಡುವೆ ಕಂದಕ ಹುಟ್ಟಿಸುತ್ತದೆ, ಅವರನ್ನು ಪ್ರತ್ಯೇಕಿಸಿ ಹಲವಾರು ಸಂಘರ್ಷಗಳಿಗೆ ಎಡೆಮಾಡಿಕೊಡುತ್ತದೆ. ಯೂರೋಪಿನ ಆಕ್ರಮಣಕಾರೀ ರಾಷ್ಟ್ರೀಯತೆಯೇ ಯೂರೋಪಿಯನ್ನರಲ್ಲಿ ದುರಾಸೆಯನ್ನು ಹುಟ್ಟಿಸಿದೆ. ಈ ದುರಾಸೆಯಿಂದಲೇ ಯೂರೋಪಿನ ರಾಷ್ಟ್ರಗಳು ತಮ್ಮ ಗಡಿಗಳನ್ನು ವಿಸ್ತರಿಸುತ್ತಿವೆ. ಈ ವಿಸ್ತರಣೆಯೂ ರಾಷ್ಟ್ರೀಯತೆಯ ಒಂದು ಕಾರ್ಯವಿಧಾನವೇ ಎಂದು ಗುರುದೇವ ಟೀಕಿಸುತ್ತಿದ್ದರು. ಗಾಂಧೀಜಿ ಭಾರತೀಯರನ್ನು ಒಂದು ಸೂತ್ರದಲ್ಲಿ ಬಿಗಿದು ಕಟ್ಟುವ ಅಂಶವೇ ಈ ರಾಷ್ಟ್ರೀಯತೆ ಎಂದು ಸ್ಪಷ್ಟವಾಗಿ ತಿಳಿದಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ಬಹಳ ಮುಖ್ಯಪಾತ್ರ ವಹಿಸಿದ್ದೂ ಈ ರಾಷ್ಟ್ರೀಯತೆಯೇ.
ಭಾರತದ ಹಳ್ಳಿಗಳನ್ನು ಅಸಹಾಯತೆಯಿಂದ, ಮೌಢ್ಯದಿಂದ, ಆಥರ್ಿಕ ತೊಳಲಾಟದಿಂದ ಮುಕ್ತಗೊಳಿಸುವುದು ಇಬ್ಬರ ಗುರಿಯಾಗಿದ್ದರೂ ಮಾರ್ಗಗಳು ಬೇರೆ ಬೇರೆಯಾಗಿದ್ದವು. ಜಗತ್ತಿನಾದ್ಯಂತ ಇರುವ ದಾನಿಗಳು, ಅಧಿಕಾರಿಗಳು ಮತ್ತು ವಿದ್ವಾಂಸರು ಉದಾರವಾಗಿ ದೇಣಿಗೆ ನೀಡಿ ಈ ಮಹಾಕಾರ್ಯಕ್ಕೆ ನೆರವಾಗಬೇಕೆಂದು ಗುರುದೇವ ಮನವಿ ಮಾಡಿಕೊಂಡಿದ್ದರು. ಆದರೆ ಗಾಂಧೀಜಿ ಚರಕವೂ ಸೇರಿದಂತೆ ಇತರ ಅನೇಕ ಮಾರ್ಗಗಳನ್ನು ಈ ಕಾರಣಕ್ಕಾಗಿ ಹುಡುಕುತ್ತಿದ್ದರು.
ಪಶ್ಚಿಮದ ಪ್ರಚಾರಕ್ಕೆ ಬಲಿಯಾಗಿ ಬ್ರಿಟಿಷರು ತಮ್ಮ ಅಧಿಕಾರವನ್ನು ಗಟ್ಟಿಗೊಳಿಸುವುದಕ್ಕಾಗಿ ಭಾರತೀಯರನ್ನು ಮತ್ತು ಭಾರತೀಯ ಸಂಸ್ಕೃತಿಯನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ಗಾಂಧೀಜಿ ವಿಶ್ಲೇಷಿಸುತ್ತಿದ್ದರೆ, ರವೀಂದ್ರರು, ಸಂಸ್ಕೃತಿಗಳನ್ನು ಮತ್ತು ಮನುಷ್ಯರನ್ನು ಪ್ರತ್ಯೇಕವಾಗಿಟ್ಟು ನೋಡಬಾರದು. ಪರಸ್ಪರ ಸಂಪರ್ಕ, ಸಂವಾದ ಮತ್ತು ಸಹಕಾರಗಳ ಮೂಲಕ ಅತ್ಯುತ್ತಮ ಮೌಲ್ಯಗಳನ್ನು ಗೌರವಿಸಿ ಹೊಸ ನಾಡನ್ನು, ಹೊಸ ಸಂಸ್ಕೃತಿಯನ್ನು ಕಟ್ಟಬಹುದೆಂದು ನಂಬಿದ್ದರು.
ಮಹಾತ್ಮಾ ಮತ್ತು ಗುರುದೇವರ ಮಧ್ಯೆ ಕೆಲವು ವಿಷಯಗಳಲ್ಲಿ ಸಾಮ್ಯವು ಇತ್ತು. ಬಹಳ ಮುಖ್ಯವಾಗಿ ಇಬ್ಬರೂ ಒಪ್ಪಿಕೊಂಡದ್ದು ರಾಜ್ಯಕ್ಕಿಂತ ಗ್ರಾಮ ಘಟಕಕ್ಕೆ ಒತ್ತು ಕೊಡಬೇಕೆಂಬ ವಿಚಾರ. ಕೇಂದ್ರೀಕೃತ ರಾಜ್ಯಾಧಿಕಾರ ವ್ಯವಸ್ಥೆಯಲ್ಲಿ ಇಬ್ಬರಿಗೂ ನಂಬಿಕೆ ಇರಲಿಲ್ಲ. ಗ್ರಾಮ ಘಟಕದ ಸುತ್ತ ಗಾಂಧೀಜಿಯವರು ಹೆಣೆದಿದ್ದ ಕನಸುಗಳು ಬಹಳ ಸೂಕ್ಷ್ಮವೂ ಪ್ರಬುದ್ಧವೂ, ವಾಸ್ತವದಿಂದ ಕೂಡಿದವೂ ಆಗಿದ್ದವು. ಗ್ರಾಮಗಳು ಸ್ವಯಂ ಪರಿಪೂರ್ಣವಾಗಿರಬೇಕು, ಸಾಮರಸ್ಯದಿಂದ ಕೂಡಿದ ಸಮುದಾಯಗಳನ್ನು ಹೊಂದಿರಬೇಕು, ಸ್ವಯಂ ಆಡಳಿತವನ್ನು ಹೊಂದಿರಬೇಕು ಇತ್ಯಾದಿ. ನ್ಯಾಯ ವ್ಯವಸ್ಥೆ ಸ್ಥಳೀಯವಾಗಿಯೇ ಇರಬೇಕೆಂದು ಗಾಂಧೀಜಿ ಬಯಸುತ್ತಿದ್ದರು. ಆಥರ್ಿಕ ಸಂಪನ್ಮೂಲಗಳನ್ನು ಗ್ರಾಮ ಘಟಕಗಳಲ್ಲಿಯೇ ರೂಪಿಸಬೇಕು ಮತ್ತು ಅವು ಬಲಿಷ್ಠವಾಗಿರುವಂತೆ ನೋಡಿಕೊಳ್ಳಬೇಕು ಎಂದೂ ಅವರು ಹೇಳುತ್ತಿದ್ದರು. ಗಾಂಧೀಜಿಯವರ ‘ಸ್ವರಾಜ್ಯ’ದ ಕಲ್ಪನೆಯೂ ಇದೇ ಆಗಿತ್ತು. ‘ಗ್ರಾಮ ಗುಣಕ್ಕೆ’ ಈ ಇಬ್ಬರೂ ಚಿಂತಕರು ಮಹತ್ವವನ್ನು ಕೊಟ್ಟಿದ್ದರು. ಈ ಗ್ರಾಮಗುಣದಲ್ಲಿಯೇ ಭಾರತೀಯ ಸಂಸ್ಕೃತಿ ಜೀವಂತವಾಗಿರುತ್ತದೆ, ಪರಂಪರೆಯ ಮೌಲ್ಯಗಳನ್ನೂ ಈ ಗುಣ ಪೋಷಿಸುತ್ತದೆ ಎಂದು ಇಬ್ಬರೂ ಅಖಂಡವಾಗಿ ನಂಬಿದ್ದರು. ತನ್ನ ರಾಷ್ಟ್ರ ಮತ್ತು ಜನರ ಬಗ್ಗೆ ಗಾಂಧೀಜಿಯವರಿಗೆ ಇದ್ದ ಗಾಢ ಪ್ರೀತಿ ಪ್ರಶ್ನಾತೀತ; ರವೀಂದ್ರರ ಪ್ರೀತಿಯೂ ಇಷ್ಟೇ ದೊಡ್ಡದಾಗಿತ್ತು ಮತ್ತು ಸಂಶಯಾತೀತವಾಗಿತ್ತು. ಈ ಪ್ರೀತಿಯ ಅಭಿವ್ಯಕ್ತಿಗೆ ಇಬ್ಬರೂ ಆಯ್ಕೆಮಾಡಿಕೊಂಡ ಮಾರ್ಗಗಳು ಬೇರೆಬೇರೆಯಾಗಿದ್ದವು, ಅಷ್ಟೆ.




0 Comments