ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ಪಿ ಕಾಲಂ : ಮಹಾತ್ಮ ಮತ್ತು ಗುರುದೇವ..

ಮಹಾತ್ಮ ಮತ್ತು ಗುರುದೇವ : ವಿಭಿನ್ನ ವೈಚಾರಿಕ ನೆಲೆಗಳು

ದಕ್ಷಿಣ ಆಫ್ರಿಕಾದಿಂದ ಗಾಂಧೀಜಿ ಭಾರತಕ್ಕೆ ಮರಳಿದ್ದು 1915ರಲ್ಲಿ. 23 ವರ್ಷಗಳ ಕಾಲ ಅವರು ದಕ್ಷಿಣ ಆಫ್ರಿಕಾದಲ್ಲಿ ನಡೆಸಿದ ಹೋರಾಟ, ಸತ್ಯ ಮತ್ತು ಅಹಿಂಸೆಗಳೊಂದಿಗೆ ಅವರು ಕಂಡುಕೊಂಡ ಸತ್ಯಾಗ್ರಹವೆಂಬ ಹೊಸ ಪ್ರಯೋಗ, ಗಾಂಧೀಜಿಯವರ ವ್ಯಕ್ತಿತ್ವಕ್ಕೊಂದು ಮಹತ್ವದ ಪ್ರಭೆಯನ್ನು ತಂದುಕೊಟ್ಟಿದ್ದವು. ಅಂತರ ರಾಷ್ಟ್ರೀಯ ಮಟ್ಟದಲ್ಲಿಯೂ ಅವರ ಹೆಸರು ಪ್ರಸಿದ್ಧಿಗೆ ಬಂದಿತ್ತು. ಇಷ್ಟಿದ್ದರೂ ಗಾಂಧೀ ಭಾರತಕ್ಕೆ ಮರಳಿ ಬಂದಾಗ ಅವರು ಹೊಸದಾಗಿಯೇ ಎಲ್ಲವನ್ನೂ ರೂಪಿಸಿಕೊಳ್ಳಬೇಕಾಗಿತ್ತು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಪಾತ್ರವೇನು ಎಂಬುದನ್ನು ಕಂಡುಕೊಳ್ಳಬೇಕಾಗಿತ್ತು. ಗ್ರಾಮ ಭಾರತದ ನಾಡಿ ಮಿಡಿತ ಇನ್ನೂ ಗಾಂಧಿಯವರಿಗೆ ತಿಳಿದಿರಲಿಲ್ಲ. ಗಾಂಧಿಯವರ ರಾಜಕೀಯ ಗುರು ಗೋಪಾಲಕೃಷ್ಣ ಗೋಖಲೆಯವರು ‘ಭಾರತ ಯಾತ್ರೆಯನ್ನು ಕೈಗೊಂಡು ‘ನಿಜಭಾರತ’ವನ್ನು ಅರಿಯಲು ಸೂಚಿಸಿದ್ದು, ಗಾಂಧೀ ಅದನ್ನು ಮಾಡಬೇಕಾಗಿತ್ತು.

ಬಂಗಾಳದ ರವೀಂದ್ರನಾಥ ಠಾಕೂರರ ಬದುಕಿನಲ್ಲಿ ಈ ಹೊತ್ತಿಗೆ ಅನೇಕ ಮಹತ್ವದ ಘಟನೆಗಳು ನಡೆದು ಹೋಗಿದ್ದವು. ಕವಿಯಾಗಿ, ನಾಟಕಕಾರರಾಗಿ, ಕಥೆಗಾರರಾಗಿ, ಕಾದಂಬರಿಕಾರರಾಗಿ, ತತ್ವಜ್ಞಾನಿಯಾಗಿ, ಚಿಂತಕರಾಗಿ, ದಾರ್ಶನಿಕರಾಗಿ, ಗ್ರಾಮೀಣ ಬದುಕಿನೊಂದಿಗೆ ಹಲವು ಪ್ರಯೋಗಗಳನ್ನು ನಡೆಸಿದ ಅನುಭವಿಯಾಗಿ ಅವರು ಬಹು ದೊಡ್ಡ ಹೆಸರಾಗಿದ್ದರು. ಅವರ ‘ಗೀತಾಂಜಲಿ’ (ಕವಿತಾ ಸಂಕಲನ) ಇಂಗ್ಲಿಷ್ನಲ್ಲಿ ಪ್ರಕಟವಾಗಿ (1912) ಅಂತರರಾಷ್ಟ್ರೀಯ ಗಮನವನ್ನು ಸೆಳೆದುಕೊಂಡಿತ್ತು. ಅದರ ಮುಂದಿನ ವರ್ಷವೇ(1913) ನೊಬೆಲ್ ಬಹುಮಾನವನ್ನೂ ಈ ಕೃತಿ ಪಡೆದು ಇಡೀ ಜಗತ್ತಿಗೇ ಕವಿ ರವೀಂದ್ರರನ್ನು ತೋರಿಸಿಕೊಟ್ಟಿತ್ತು. ಏಷ್ಯಾದಲ್ಲಿಯೇ ಮೊದಲ ಬಾರಿಗೆ ಸಾಹಿತ್ಯಕ್ಕಾಗಿ ನೊಬೆಲ್ ಪಡೆದ ಹೆಮ್ಮೆಯನ್ನೂ ರವೀಂದ್ರರು ಭಾರತಕ್ಕೆ ತಂದುಕೊಟ್ಟಿದ್ದರು. ಬ್ರಿಟಿಷ್ ಸಾಮ್ರಾಜ್ಯದ ಪ್ರತಿಷ್ಠಿತ ‘ನೈಟ್ಹುಡ್’ ಗೌರವವೂ ರವೀಂದ್ರರಿಗೆ ದೊರಕಿತ್ತು (1915). ಈ ಹೊತ್ತಿಗೆ ರವೀಂದ್ರರು ತಮ್ಮ ‘ಜಮೀನ್ದಾರೀ ಬಾಬು’ ವೇಷವನ್ನು ಕಳಚಿದ್ದರು. ತಮ್ಮ ಕುಟುಂಬದ ಆಸ್ತಿಯಾಗಿ ಬಂದಿದ್ದ ಬಹು ದೊಡ್ಡ ಎಸ್ಟೇಟ್ಗಳನ್ನು, ಅಪಾರ ಶ್ರೀಮಂತಿಕೆಯನ್ನು ತೊರೆದು ಅವರು, ಜಗತ್ಪ್ರಸಿದ್ಧ ‘ಶಾಂತಿನಿಕೇತನ’ (1901)ಆಶ್ರಮವನ್ನು ಕಟ್ಟಿದ್ದರು. ಶಾಂತಿನಿಕೇತನ ರವೀಂದ್ರರ ಹೊಸ ಪ್ರಯೋಗ ಭೂಮಿಯಾಗಿ ಅವರನ್ನು ಹೊಸ ಹೊಸ ಅನುಭವಗಳಿಗೆ, ಹೊಸ ಹೊಸ ಎತ್ತರಗಳಿಗೆ ತೆರೆದುಕೊಳ್ಳುವಂತೆ ಮಾಡಿತ್ತು. ‘ವಿಶ್ವಭಾರತಿ’ ವಿಶ್ವವಿದ್ಯಾನಿಲಯವನ್ನೂ ಆರಂಭಿಸಿ ರವೀಂದ್ರರು ವಿಶ್ವವನ್ನು ಮತ್ತು ಭಾರತವನ್ನು ಬೆಸೆಯುವ ಚಿಂತನೆಗೆ, ಕ್ರಿಯಾಶೀಲತೆಗೆ ದಾರಿಮಾಡಿಕೊಟ್ಟಿದ್ದರು. ಆಧುನಿಕ ವಿದ್ಯಾಭ್ಯಾಸ, ಜೀವನಶೈಲಿ, ಜಾಗತಿಕ ವಿದ್ಯಮಾನಗಳು, ಹೊಸ ಹೊಸ ಚಿಂತನೆಗಳು ಎಲ್ಲವನ್ನೂ ತಿಳಿದಿದ್ದ ರವೀಂದ್ರರು, ಬಂಗಾಳದ ಬೇರುಗಳನ್ನು ಬಲ್ಲವರಾಗಿದ್ದರು. ಸ್ಥಳೀಯ ಸತ್ವ, ಮಣ್ಣಿನ ಗುಣ, ಕಲೆ, ಸಂಗೀತ, ಜಾನಪದ ಇತ್ಯಾದಿಗಳನ್ನು ಸೂಕ್ಷ್ಮವಾಗಿ ಬಲ್ಲವರಾಗಿದ್ದರು. ರವೀಂದ್ರರ ವಿಶ್ಲೇಷಕರು ಗುರುತಿಸುವ ರವೀಂದ್ರರ ಸಾಧನೆಯ ಅವಧಿ (1891-1895) ಗಾಂಧೀಜಿ ಭಾರತಕ್ಕೆ ಬರುವ ವೇಳೆಗೆ ಮುಗಿದು ಬಹಳ ಕಾಲವಾಗಿತ್ತು.

ಗಾಂಧಿ ಮತ್ತು ರವೀಂದ್ರರಿಬ್ಬರೂ ಆಧುನಿಕ ಜಗತ್ತಿಗೆ, ಪಶ್ಚಿಮಕ್ಕೆ ತಮ್ಮ ಮನಸ್ಸುಗಳನ್ನು ತೆರೆದುಕೊಂಡವರಾಗಿದ್ದರು. ಗಾಂಧೀ ಇಂಗ್ಲೆಂಡಿಗೆ ಹೋಗಿ ಕಾನೂನು ಶಾಸ್ತ್ರವನ್ನು ಓದಿ ಬ್ಯಾರಿಸ್ಟರ್ ಆಗಿ ಭಾರತಕ್ಕೆ ಮರಳಿದ್ದರೆ, ರವೀಂದ್ರರೂ ಕಾನೂನನ್ನು ಕಲಿಯಲು ಲಂಡನ್ ವಿಶ್ವವಿದ್ಯಾಲಯ ಸೇರಿದ್ದರು. ಆದರೆ ಷೇಕ್ಸ್ಪಿಯರ್ ಸೆಳೆತಕ್ಕೆ ಸಿಕ್ಕಿ ಕಾನೂನು ಪದವಿಯಿಲ್ಲದೆ ಬಂಗಾಳಕ್ಕೆ ವಾಪಸಾಗಿದ್ದರು. ಬ್ಯಾರಿಸ್ಟರ್ ಆಗಿದ್ದ ಗಾಂಧಿ ಅದೇ ಕಾರಣಕ್ಕೆ ದಕ್ಷಿಣ ಆಫ್ರಿಕಾಕ್ಕೆ ಹೋಗಿ ಅಲ್ಲಿ ತಮ್ಮ ಬದುಕು ಬೇರೊಂದು ದಿಕ್ಕನ್ನೇ ಹಿಡಿಯಲು ಅವಕಾಶ ಪಡೆದುಕೊಂಡಿದ್ದರು.

ಗಾಂಧಿ ಮತ್ತು ರವೀಂದ್ರರಿಬ್ಬರ ಪ್ರಯೊಗಗಳಿಗೂ ಗ್ರಾಮೀಣ ಭಾರತವೇ ಕೇಂದ್ರವಾಗಿತ್ತು. ಇಬ್ಬರ ಚಿಂತನೆಯ ಕೇಂದ್ರವೂ ಅದೇ ಆಗಿತ್ತು. ಇಬ್ಬರ ನಿಷ್ಠೆಯೂ ಸತ್ಯದ ಹುಡುಕಾಟಕ್ಕೇ ಮೀಸಲಾಗಿತ್ತು. ಇಬ್ಬರ ಕಾಳಜಿಯ ಕೇಂದ್ರವೂ ಮನುಷ್ಯನೇ ಆಗಿದ್ದ. ಪರಸ್ಪರ ಗೌರವ, ಮೆಚ್ಚುಗೆ. ಗಾಂಧೀಜಿಗೆ ರವೀಂದ್ರರು ಕೇವಲ ಕವಿಯಾಗಿರಲಿಲ್ಲ; ‘ಗುರುದೇವ’ ಆಗಿದ್ದರು. ರವೀಂದ್ರರಿಗೆ ಗಾಂಧೀಜಿ ‘ಮಹಾತ್ಮ’ ಆಗಿದ್ದರು. ಇಬ್ಬರ ನಡುವೆ ಇದ್ದ ಪ್ರೀತಿ ಹೃದಯದಾಳದ ಪ್ರೀತಿಯಾಗಿತ್ತು.

ಗಾಂಧೀಜಿ ಫೀನಿಕ್ಸ್ ಫಾರಮ್ಮನ್ನು ಬಿಟ್ಟು ಗುಜರಾತ್ನಲ್ಲಿ ಸಾಬರಮತಿ ಆಶ್ರಮವನ್ನು ಆರಂಭಿಸುವುದಕ್ಕೆಂದು ಹೊರಟಾಗ ಅವರು ಮೊದಲು ಹೋದದ್ದು ಶಾಂತಿನಿಕೇತನಕ್ಕೆ. ತಮ್ಮ ಆಶ್ರಮವಾಸಿಗಳ ಜೊತೆಯಲ್ಲಿ ಬಂದ ಅವರು ಶಾಂತಿನಿಕೇತನವನ್ನು ತಮ್ಮ ಆಶ್ರಮವೆಂದೇ ಭಾವಿಸುವಂಥ ಆತಿಥ್ಯ ರವೀಂದ್ರರಿಂದ ದೊರಕಿತ್ತು. ರವೀಂದ್ರರು ಮತ್ತು ಗಾಂಧೀಜಿಯವರ ನಡುವಣ ಪ್ರೀತಿ ಅಷ್ಟು ಗಾಢವಾಗಿತ್ತು.

19ನೇ ಶತಮಾನದ ಬಹುದೊಡ್ಡ ವ್ಯಕ್ತಿತ್ವಗಳಾಗಿ ಈ ಇಬ್ಬರೂ ರೂಪಗೊಂಡದ್ದು ಚರಿತ್ರೆಯ ಬಹುಮುಖ್ಯ ಘಟ್ಟವಾಯಿತು. 19ನೇ ಶತಮಾನದ ಅತ್ಯುತ್ತಮ ಮೌಲ್ಯಗಳ ಬೆಳಕಿನಲ್ಲಿ ಈ ಇಬ್ಬರೂ ಭಾರತವನ್ನು ನೋಡಿದರು. ಬ್ರಿಟಿಷರ ಹೊಸಾಹತುವಾಗಿದ್ದ ಭಾರತದ ಗುಲಾಮಗಿರಿಯನ್ನು, ತಳಮಳವನ್ನು, ಅದರ ಅಂತಸ್ಸತ್ವವನ್ನು, ಭಾರತಕ್ಕಿದ್ದ ಉಜ್ವಲ ಪರಂಪರೆಯನ್ನು, ಅದರ ಪ್ರತಿಷ್ಠಿತ ಮೌಲ್ಯಗಳನ್ನು ಇಬ್ಬರೂ ಸೂಕ್ಷ್ಮವಾಗಿ ಗ್ರಹಿಸಿದ್ದರು. ಭಾರತವನ್ನು ಮಾತ್ರವಲ್ಲ, ಇಡೀ ಮನುಕುಲವನ್ನು ಶೋಷಣೆ ಮುಕ್ತವಾಗಿ ಮಾಡುವ ಕನಸನ್ನು ಇಬ್ಬರೂ ಬೇರೆ ಬೇರೆಯ ರೀತಿಯಲ್ಲಿ ಕಾಣುತ್ತಿದ್ದರು. ರಾಷ್ಟ್ರ, ಗಡಿಗಳು, ಭಾಷೆ, ಸಂಸ್ಕೃತಿಗಳು ಸೀಮಿತ ಚೌಕಟ್ಟನ್ನು ಮೀರಿ ಇಬ್ಬರ ಚಿಂತನೆಗಳೂ ಜಗತ್ತಿಗೆ ಚಾಚಿಕೊಂಡಿದ್ದವು.

ಗಾಂಧೀಜಿಯವರ ಹುಟ್ಟಿದ ದಿನ ಅಕ್ಟೋಬರ್ ಎರಡನ್ನು ವಿಶ್ವಸಂಸ್ಥೆ ‘ಅಂತರ ರಾಷ್ಟ್ರೀಯ ಅಹಿಂಸಾ ದಿನ’ವಾಗಿ ಘೋಷಿಸಿದ್ದರ ಹಿಂದಿರುವ ಕಾರಣವೂ ಇದೇ. ಹಾಗೆಯೇ ರವೀಂದ್ರರ ವ್ಯಕ್ತಿತ್ವ, ಚಿಂತನೆ ಮತ್ತು ಕೃತಿಗಳು ವಿಶ್ವಮಾನ್ಯವಾಗಲು ಇಂಥ ಕಾರಣವೇ ಹಿನ್ನೆಲೆಯನ್ನು ಒದಗಿಸಿವೆೆ.

19ನೇ ಶತಮಾನ ಅತ್ಯಂತ ನಾಟಕೀಯ ತಿರುವುಗಳಿಂದ ಕೂಡಿದ್ದ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗಳನ್ನು ಕಂಡ ಶತಮಾನ; ಭಾರತದ ಮಟ್ಟಿಗಂತೂ ಈ ಶತಮಾನ ಅತ್ಯಂತ ರಭಸವಾದ, ತೀವ್ರವಾದ ಚಿಂತನೆಗಳಿಗೆ, ಕ್ರಿಯಾಶೀಲ ಚಟುವಟಿಕೆಗಳಿಗೆ ಕಾರಣವಾಗಿದ್ದ ಶತಮಾನ. ಬ್ರಿಟಿಷ್ ಸಾಮ್ರಾಜ್ಯಶಾಹಿಯ ಹಿಡಿತದಲ್ಲಿದ್ದ ಭಾರತ ಸ್ವಾತಂತ್ರ್ಯಕ್ಕಾಗಿ ತುಡಿಯುತ್ತಿತ್ತು. ತನ್ನ ನೈತಿಕ ಹಕ್ಕನ್ನು ಸ್ಥಾಪಿಸುವ ಮೂಲಕ ಸ್ವಾತಂತ್ರ್ಯವನ್ನು ಪಡೆಯುವ ಹೊಸ ಹಾದಿಯನ್ನು ಗಾಂಧೀಜಿ ಹುಡುಕುತ್ತಿದ್ದರು. ರವೀಂದ್ರರ ಹುಡುಕಾಟವೂ ಇದಕ್ಕೆ ಭಿನ್ನವಾಗಿರಲಿಲ್ಲ.

ಇಬ್ಬರ ಗುರಿ ಒಂದೇ ಆಗಿದ್ದರೂ, ದಾರಿಗಳಲ್ಲಿ, ಚಿಂತನ ಕ್ರಮಗಳಲ್ಲಿ ಸ್ವಲ್ಪ ಭಿನ್ನತೆಯಿತ್ತು. ತಮ್ಮ ಅಭಿಪ್ರಾಯಗಳನ್ನು, ಚಿಂತನೆಗಳನ್ನು ಸ್ಪಷ್ಟವಾಗಿ, ನೇರವಾಗಿ ಹೇಳುವ ಧೈರ್ಯ ಮತ್ತು ಪ್ರಾಮಾಣಿಕತೆ ಇಬ್ಬರಲ್ಲೂ ಇತ್ತು. ಹೀಗಾಗಿಯೇ ಅವರ ನಡುವೆ ಈ ಸಂಬಂಧ ನಡೆದ ಚಚರ್ೆಗಳು, ಸಂವಾದಗಳು ಸಾರ್ವಜನಿಕ ಚಿಂತನೆಗೆ, ಚಚರ್ೆಗೆ ಎಡೆಮಾಡಿಕೊಟ್ಟಿದ್ದವು. ಇವರಿಬ್ಬರ ನಡುವೆ ನಡೆದ ಸಂವಾದಗಳನ್ನೇ ಆಧರಿಸಿದ ಬೌದ್ಧಿಕ ವಲಯದ ವಾಗ್ವಾದಗಳು ಇಷ್ಟು ವರ್ಷಗಳ ನಂತರವೂ ಇನ್ನೂ ಮುಂದುವರಿದಿವೆ; ಹೊಸ ಹೊಸ ಅರ್ಥವನ್ನು ಹೊಮ್ಮಿಸುತ್ತಿವೆ; ಹಾಗೆಯೇ ಚಿಂತನೆಯ ಸ್ಫೂತರ್ಿ ತಾಣಗಳೂ ಆಗಿವೆ.

ಗಾಂಧೀಜಿ ತಮ್ಮ ಅಭಿಪ್ರಾಯಗಳನ್ನು ‘ಹರಿಜನ’ದಲ್ಲಿ ಅಥವಾ ‘ಯಂಗ್ ಇಂಡಿಯಾ’ದಲ್ಲಿ ಪ್ರಕಟಿಸಿದರೆ, ರವೀಂದ್ರರು ‘ದಿ ಮಾಡನರ್್ ರಿವ್ಯೂ’ ಅಥವಾ ವಿಶ್ವಭಾರತಿಯ ತ್ರೈಮಾಸಿಕದಲ್ಲಿ ಪ್ರಕಟಿಸುತ್ತಿದ್ದರು. ಪರಸ್ಪರರಲ್ಲಿ ಪತ್ರವ್ಯವಹಾರವೂ ಇತ್ತು. ಹೀಗಾಗಿ ಇಬ್ಬರ ನಡುವಣ ಸಂವಾದ ನಿರಂತರ ಚಿಂತನೆಯನ್ನು ಹರಿತಗೊಳಿಸುವಲ್ಲಿ ಮತ್ತು ಸ್ಪಷ್ಟ ದಿಕ್ಕನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿತ್ತು. 1915ರಿಂದ ಆರಂಭವಾದ ಇಬ್ಬರ ನಡುವಣ ಪತ್ರವ್ಯವಹಾರ ರವೀಂದ್ರರ ನಿಧನದವರೆಗೂ, ಅಂದರೆ 1941ರ ವರೆಗೂ ಮುಂದುವರಿದಿತ್ತು. 1919 ಮತ್ತು 1925ರ ನಡುವಣ ಅವಧಿಯಲ್ಲಿ ಈ ಸಂವಾದ ಮಾತ್ರ ಸಾಕಷ್ಟು ರಭಸವಾಗಿ, ತೀವ್ರವಾಗಿತ್ತು.

ಗಾಂಧೀಜಿಯವರ ಉಡುಗೆ ಬಹಳ ಸರಳವಾದದ್ದು ಮತ್ತು ದೇಸೀಯವಾದದ್ದು. ಒಂದು ಪಂಚೆ, ಒಂದು ಹೊದಿಕೆ; ಎರಡೂ ಖಾದಿಯವು. ತಾವೇ ನೂತ ನೂಲಿನಿಂದ ತಯಾರಿಸಿದ ಬಟ್ಟೆಗಳು. ರವೀಂದ್ರರ ಉಡುಗೆ ಪಶ್ಚಿಮದ ಮಾದರಿಯದಾಗಿತ್ತು. ಪೂರ್ವ-ಪಶ್ಚಿಮ ಎನ್ನುವ ಭೇದವನ್ನು ಅಳಿಸಿಹಾಕಿ, ಅತ್ಯುತ್ತಮವಾದುದನ್ನು ಎರಡೂ ಸಂಸ್ಕೃತಿಗಳಿಂದ ತೆಗೆದುಕೊಂಡು ಬದುಕನ್ನು ಸಮೃದ್ಧಮಾಡಿಕೊಳ್ಳಬೇಕೆಂಬ ಚಿಂತನೆ ರವೀಂದ್ರರದು. ಗಾಂಧೀಜಿಯವರ ಚಿಂತನೆಯೂ ಇದಕ್ಕೆ ವ್ಯತಿರಿಕ್ತವಾಗಿರಲಿಲ್ಲ. ಇಬ್ಬರ ಮನಸ್ಸುಗಳೂ ಭಾರತೀಯವಾಗಿದ್ದವು. ಚಿಂತನೆಗಳೂ ಈ ಮಣ್ಣಿನಿಂದಲೇ ಕುಡಿಯೊಡೆದಿದ್ದವು. ಇಬ್ಬರ ಕಾಳಜಿ, ನಿಷ್ಠೆ ಮತ್ತು ಕ್ರಿಯಾಶೀಲತೆಗಳ ಕೇಂದ್ರ ಒಂದೇ ಆಗಿತ್ತು.

ಬ್ರಿಟಿಷರ ಆಳ್ವಿಕೆಯಲ್ಲಿ ನಲುಗಿಹೋಗಿದ್ದ, ಗುಲಾಮಗಿರಿಯ ಸಂಕೋಲೆಯಲ್ಲಿ ಉಸಿರಾಡುತ್ತಿದ್ದ ಭಾರತವನ್ನು ಮುಕ್ತಗೊಳಿಸುವ ಹೊರಾಟದ ಮುಂಚೂಣಿಯಲ್ಲಿ ನಿಂತಿದ್ದ ಗಾಂಧೀಜಿ, ಈ ಹೋರಾಟಕ್ಕಾಗಿ ರೂಪಿಸಿದ್ದ ಮಾರ್ಗಗಳು ಹಲವು. ಅಸಹಕಾರ, ಸತ್ಯ ಮತ್ತು ಅಹಿಂಸೆಯನ್ನು ಆಧರಿಸಿದ ಸತ್ಯಾಗ್ರಹ, ಸ್ವಾವಲಂಬನೆಯತ್ತ ಮುನ್ನಡೆಸಬಲ್ಲ ಚರಕಾ, ವಿದೇಶೀ ಬಟ್ಟೆಗಳ ದಹನ, ಶಾಲಾ ಕಾಲೇಜುಗಳನ್ನು ಬಹಿಷ್ಕಾರಿಸುವಂತೆ ವಿದ್ಯಾಥರ್ಿಗಳಿಗೆ ಕರೆ, ನ್ಯಾಯಾಲಯಗಳಿಗೆ ಬಹಿಷ್ಕಾರ ಹಾಕುವಂತೆ ವಕೀಲರಿಗೆ ತಾಕೀತು ಇತ್ಯಾದಿ. ಭಾರತೀಯ ಬದುಕನ್ನು ಹೊಸ ನೆಲೆಯಲ್ಲಿ, ಹೊಸ ಅರ್ಥದಲ್ಲಿ ಭದ್ರವಾಗಿ ಕಟ್ಟುವ ಕನಸೇ ಗಾಂಧೀಜಿಯವರ ಚಿಂತನೆಯ ಹಿಂದೆ ಕ್ರಿಯಾಶೀಲವಾಗಿತ್ತು.

ಗಾಂಧೀಜಿಯವರ ಇಂಥ ಅನೇಕ ವಿಚಾರಗಳ ಬಗ್ಗೆ, ಚಿಂತನೆಗಳ ಬಗ್ಗೆ, ಅವರ ಸತ್ಯನಿಷ್ಠೆಯ ಬಗ್ಗೆ ರವೀಂದ್ರರಿಗೆ ಅಗಾಧ ಗೌರವವಿದ್ದರೂ, ಗಾಂಧೀಜಿಯವರ ಕೆಲವು ವಿಚಾರಗಳನ್ನು ಮತ್ತು ಕಾರ್ಯ ವಿಧಾನಗಳನ್ನು ಅವರು ವಿಶ್ಲೇಷಿಸಿ, ಟೀಕಿಸಿ, ಮರು ಚಿಂತನೆಗೆ ಒಳಪಡಿಸುವಂತೆ ಒತ್ತಾಯಿಸುತ್ತಿದ್ದರು. ಕೆಲವೊಮ್ಮೆ ಈ ಟೀಕೆಗಳು ಕಟುವಾಗಿರುತ್ತಿದ್ದವು; ಗಾಂಧಿ ಮತ್ತು ಅವರ ಅನುಯಾಯಿಗಳು ಅನುಸರಿಸುತ್ತಿರುವ ವಿಧಾನಗಳು ನಮ್ಮನ್ನು ಎಲ್ಲಗೆ ಕೊಂಡೊಯ್ಯಬಹುದೆಂಬ ಬಗ್ಗೆ ಗಾಢ ಅನುಮಾನಗಳನ್ನೂ ರವೀಂದ್ರರು ವ್ಯಕ್ತಪಡಿಸುತ್ತಿದ್ದರು.

ಸತ್ಯ ಮತ್ತು ಅಹಿಂಸೆಗಳ ನೆಲೆಯಲ್ಲಿ ಗಾಂಧೀಜಿ ರೂಪಿಸಿದ್ದ ಸತ್ಯಾಗ್ರಹ ದಕ್ಷಿಣ ಆಫ್ರಿಕಾದಲ್ಲಿ ಯಶಸ್ಸನ್ನು ಪಡೆದಿತ್ತು. ಭಾರತದಲ್ಲಿಯೂ ಅಂಥದೇ ಯಶಸ್ಸು ಸಿಕ್ಕುತ್ತದೆ ಎಂಬ ದೃಢವಾದ ನಂಬಿಕೆಯೂ ಗಾಂಧೀಜಿಯವರಲ್ಲಿತ್ತು. ಭಾರತದಲ್ಲಿ ಆವರು ಮೊದಲ ಬಾರಿಗೆ ಬಿಹಾರದ ಚಂಪಾರಣ್ ಜಿಲ್ಲೆಯಲ್ಲಿ (1917)ನಡೆಸಿದ ರೈತರ ಸತ್ಯಾಗ್ರಹ ಯಶಸ್ವಿಯಾದದ್ದು, ಗಾಂಧೀಜಿಯವರ ನಂಬಿಕೆಯನ್ನು ಇನ್ನಷ್ಟು ದೃಢಗೊಳಿಸಿತ್ತು. ಆದರೆ ರವೀಂದ್ರರ ಚಿಂತನೆ ಗಾಂಧೀಜಿಯವರ ಸತ್ಯಾಗ್ರಹ ಮಾರ್ಗದಲಿ ಅಪಾಯಗಳಿವೆ ಎಂದು ಶಂಕಿಸುತ್ತಿತ್ತು. ಸತ್ಯಾಗ್ರಹವನ್ನು ಒಂದು ಸಾಧನವಾಗಿ ಬಳಸುವ ಗಾಂಧೀಜಿಯವರ ವಿಧಾನದ ವಿರುದ್ಧ ಅವರು ಸ್ಪಷ್ಟವಾಗಿಯೇ ಎಚ್ಚರಿಕೆಯನ್ನೂ ನೀಡಿದ್ದರು:

ಎಲ್ಲವನ್ನೂ ಸುಮ್ಮನೇ ಸಹಿಸಿಕೊಂಡು ಹೋಗುವ ಸತ್ಯಾಗ್ರಹ ಎನ್ನುವುದೊಂದು ಶಕ್ತಿ. ಅದು ತನಗೆ ತಾನೇ ನೈತಿಕವಾಗಿ ಇರಬೇಕೆಂದೇನೂ ಇಲ್ಲ. ಸತ್ಯದ ಪರವಾಗಿಯೂ ಅದನ್ನು ಬಳಸಬಹುದು, ವಿರುದ್ಧವಾಗಿಯೂ ಬಳಸಬಹುದು. ಯಶಸ್ಸು ಕಂಡಂತೆಲ್ಲ ಸತ್ಯಾಗ್ರಹದ ಅಂತಶ್ಶಕ್ತಿ ಹೆಚ್ಚುತ್ತಾ ಹೋಗಿ ಅದೊಂದು ಕೆಟ್ಟ ಚಪಲವೂ ಆಗಿಬಿಡಬಹುದು.

ಗಾಂಧೀಜಿಯವರ ಹೋರಾಟದ ಇನ್ನೊಂದು ಬಹುಮುಖ್ಯ ಅಸ್ತ್ರವಾಗಿದ್ದ ಅಸಹಕಾರದ ಬಗೆಗೂ ರವೀಂದ್ರರ ಅಭಿಪ್ರಾಯ ಬೇರೆಯದೇ ಆಗಿತ್ತು. ಈ ಅಸಹಕಾರ ತತ್ವದಲ್ಲಿ ತೊಡಗಿದವರನ್ನು ಅದು ಎಲ್ಲಿಗೆ ಕೊಂಡೊಯ್ಯುತ್ತದೆ ಎಂಬುದನ್ನು ನಾನು ಬಲ್ಲೆ ಎಂದವರು ಹೇಳುತ್ತಿದ್ದರು. ಅಸಹಕಾರ ಎಂಬುದು ಅವರಿಗೆ ‘ಮರಳುಗಾಡಿನಂತೆ ಬರಡು, ಅದೊಂದು ರಾಜಕೀಯ ಸನ್ಯಾಸ; ಉಕ್ಕೇರುವ ಸಮುದ್ರದ ಕ್ರೌರ್ಯದಂತೆ ಅದು ಬದುಕಿಗೆ ತೀರ ವಿರೋಧಿಯಾದದ್ದು.’

‘ಜಗತ್ತಿನ ಎಲ್ಲ ಜನಗಳ ಸಹಕಾರಕ್ಕೆ ಭಾರತ ನಿಲ್ಲಬೇಕು. ಅದರ ನಕಾರಾತ್ಮಕ ಧೋರಣೆಯನ್ನು ಕೈಬಿಡಬೇಕು. ಪೂರ್ವ-ಪಶ್ಚಿಮಗಳ ನಡುವೆ ಸಾಮರಸ್ಯವೇ ಇಲ್ಲದ ಸ್ಥಿತಿಯಲ್ಲಿ ಪಶ್ಚಿಮ ಪೂರ್ವವನ್ನು ತಪ್ಪಾಗಿ ತಿಳಿದುಕೊಂಡಿದೆ. ಇದಕ್ಕೆ ಪ್ರತಿಯಾಗಿ ಪೂರ್ವವೂ ಪಶ್ಚಿಮವನ್ನು ಹೀಗೆಯೇ ತಪ್ಪಾಗಿ ಅಥರ್ೈಸಿಕೊಂಡರೆ, ಅದರಿಂದ ತಪ್ಪನ್ನು ಸರಿಪಡಿಸಲು ಸಾಧ್ಯವೇ? ಪ್ರಸ್ತುತ ಜಗತ್ತು ಪಶ್ಚಿಮದ ತೀವ್ರ ಹುಚ್ಚಿಗೆ ಒಳಗಾಗಿದೆ. ಪೂರ್ವವೂ ಕೆಲವು ಪಾಠಗಳನ್ನು ಪಶ್ಚಿಮಕ್ಕೆ ಕಲಿಸಬೇಕಾಗಿದೆ. ಪೂರ್ವದ ಬೆಳಕು ಆರದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ತನಗಿದೆ ಎಂಬುದನ್ನು ಪೂರ್ವ ಬಲ್ಲದು. ಇದನ್ನು ಮನಗಾಣುವುದಕ್ಕೆ ಅಗತ್ಯವಾದ ವಿರಾಮ ಸಿಕ್ಕುವಂಥ ಕಾಲ ಪಶ್ಚಿಮಕ್ಕೆ ಬರುತ್ತದೆ. ತನ್ನ ಮನೆ ಪೂರ್ವದಲ್ಲಿದೆ; ತನ್ನ ವಿಶ್ರಾಂತಿ ಆಹಾರಗಳೂ ಅಲ್ಲಿಯೇ ಎಂಬ ಅರಿವು ಪಶ್ಚಿಮಕ್ಕೆ ಬಂದೇ ಬರುತ್ತದೆ’ ಎಂದು ರವೀಂದ್ರರು ನಂಬಿದ್ದರು; ಈ ನಂಬಿಕೆಯನ್ನೇ ಮತ್ತೆ ಮತ್ತೆ ಸಮಥರ್ಿಸುತ್ತಿದ್ದರು. ಗಾಂಧೀಜಿಯವರ ಅಸಹಕಾರ ತತ್ವ ದೋಷಪೂರಿತವಾಗಿರುವುದಾಗಿ ಅವರಿಗೆ ತೋರುತ್ತಿತ್ತು. ಆಧುನಿಕ ಶಿಕ್ಷಣವನ್ನು ಹಳಿಯುವ ಭರದಲ್ಲಿ ಗಾಂಧೀ ಕುರುಡಾಗಿದ್ದಾರೆ; ಪಶ್ಚಿಮದ ಜೊತೆ ಅಸಹಕಾರ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಹೇಳುತ್ತಿದ್ದ ರವೀಂದ್ರರು ಈ ಅಸಹಕಾರವೇ ಹಿಂಸೆಯ ರೂಪವಾಗಿ ತಮಗೆ ಕಾಣಿಸುತ್ತದೆ ಎಂದು ಹೇಳುತ್ತಿದ್ದರು. ಅಸಹಕಾರದ ಹೆಸರಿನಲ್ಲಿ ಭಾರತ ಉಳಿದ ಜಗತ್ತಿನಿಂದ ಪ್ರತ್ಯೇಕವಾಗಬಾರದು; ತನ್ನ ನೋಟವನ್ನು ಪ್ರಾಂತೀಯ ನೋಟವಾಗಿ ಕುಬ್ಜಗೊಳಿಸಿಕೊಳ್ಳಬಾರದು; ಮನುಷ್ಯ ಚೇತನದ ಮೂಲಭೂತ ಏಕತೆಯನ್ನು ಪಶ್ಚಿಮಕ್ಕೆ ಅರ್ಥಮಾಡಿಸಬೇಕು ಎಂಬುದು ರವೀಂದ್ರರ ಆಶಯವಾಗಿತ್ತು. ಪ್ರತಿಯೊಂದು ವಿಚಾರದಲ್ಲಿಯೂ ತಾನು ಅನನ್ಯ ಎಂದು ಭಾರತ ಅತಿರೇಕಕ್ಕೆ ಹೋಗಿ ಜಂಬಕೊಚ್ಚಿಕೊಳ್ಳಬಾರದು, ಹಾಗೆಯೇ ತನ್ನನ್ನು ತಾನು ಹಳಿದುಕೊಳ್ಳುವ ಆತ್ಮಹತ್ಯಾ ಮಾರ್ಗವನ್ನೂ ತುಳಿಯಬಾರದು ಎಂಬ ಎಚ್ಚರಿಕೆಯನ್ನೂ ರವೀಂದ್ರರು ಕೊಡುತ್ತಿದ್ದರು. ಪಶ್ಚಿಮದ ಬದುಕು ಮತ್ತು ಸಂಸ್ಕೃತಿಗಳಿಂದ ನಾವು ಪ್ರತ್ಯೇಕವಾಗಬಾರದು, ಅದರ ಜೊತೆ ನಾವಿದ್ದರೆ, ಮನುಷ್ಯ ಪ್ರಪಂಚದ ನಿಜವಾದ ನೋಟವೊಂದನ್ನು ನಾವು ಪಡೆದುಕೊಳ್ಳಬಹುದು. ಈ ಮನುಷ್ಯ ಪ್ರಪಂಚದಲ್ಲಿ ನಮ್ಮ ಸ್ಥಾನವೇನು ಎಂಬುದನ್ನೂ ಸರಿಯಾಗಿ ಗುರುತಿಸಿಕೊಳ್ಳಬಹುದು. ಪಶ್ಚಿಮದ ಜೊತೆಗಿನ ನಮ್ಮ ಸಂಬಂಧವನ್ನು ಆಳ ಮತ್ತು ವಿಸ್ತಾರಗಳಿಗೆ ಹಿಗ್ಗಿಸಿಕೊಳ್ಳುವ ಸಾಧ್ಯತೆಯಲ್ಲಿ ನಮಗೆ ನಂಬಿಕೆ ಬರಬೇಕು ಎಂದು ರವೀಂದ್ರರು ಆಶಿಸುತ್ತಿದ್ದರು.

ಅಸಹಕಾರವನ್ನು ಒಂದು ಚಳವಳಿಯಾಗಿ ರೂಪಿಸಿದ್ದ ಗಾಂಧೀಜಿ ಈ ಬಗ್ಗೆ ಸಾಕಷ್ಟು ಚಿಂತಿಸಿದ್ದರು. ರವೀಂದ್ರರು ತಮ್ಮ ಲೇಖನಗಳ ಮೂಲಕ ಎತ್ತುತ್ತಿದ್ದ ಪ್ರಶ್ನೆಗಳಿಗೆ ಗಾಂಧೀಜಿ ಉತ್ತರವನ್ನು ಕೊಡುತ್ತ, ತಮ್ಮ ಅಸಹಕಾರ ಚಳವಳಿಯ ತಾತ್ವಿಕ ಸ್ವರೂಪವನ್ನು ಇನ್ನಷ್ಟು ಸ್ಪಷ್ಟಪಡಿಸುತ್ತಿದ್ದರು. ಗಾಂಧೀಜಿ ಬರೆದರು: ಅಸಹಕಾರದ ವಿಕಾರ ಬೇರೆ; ಅಸಹಕಾರ ಚಳವಳಿ ಬೇರೆ. ಕವಿವರ್ಯರು ವಿಕಾರವನ್ನೇ ಚಳವಳಿ ಎಂದು ತಪ್ಪಾಗಿ ತಿಳಿದುಕೊಂಡಿದ್ದಾರೆ.. ಲಂಡನ್ನಲ್ಲಿ ಅಥವಾ ಭಾರತದ ಮಾಲೆಗಾವ್ನಲ್ಲಿ ವಿದ್ಯಾಥರ್ಿಗಳ ದುರ್ನಡತೆಯನ್ನು ಅಸಹಕಾರ ಎಂದು ತೀಮರ್ಾನಿಸುವುದು ತಪ್ಪು. ಡಾಯರ್ ಮತ್ತು ಒಡಾಯರ್ಗಳನ್ನೇ ಇಂಗ್ಲಿಷರು ಎಂದು ತಪ್ಪು ತಿಳಿದ ಹಾಗೆ. ನನ್ನ ಮನೆಯ ಎಲ್ಲ ಕಡೆಗಳಲ್ಲೂ ಗೋಡೆಗಳಿರಬೇಕು, ಕಿಟಕಿಗಳನ್ನೆಲ್ಲ ಮುಚ್ಚಿರಬೇಕೆಂದು ನಾನು ಬಯಸುವುದಿಲ್ಲ. ಎಲ್ಲ ನಾಡುಗಳ ಸಂಸ್ಕೃತಿಯ ಗಾಳಿ ನನ್ನ ಮನೆಯೊಳಗೆ ಸಾಧ್ಯವಾದಷ್ಟು ಮುಕ್ತವಾಗಿ ಬೀಸಬೇಕು. ಆದರೆ ಯಾವ ಗಾಳಿಯೂ ನಮ್ಮನ್ನೇ ಹಾರಿಸಿಕೊಂಡು ಹೋಗುವಂತೆ ಬೀಸುವುದನ್ನು ನಾನು ಒಪ್ಪುವುದಿಲ್ಲ. ಇತರರ ಮನೆಗಳಲ್ಲಿ ಭಿಕ್ಷುಕನಂತೆ, ಗುಲಾಮನಂತೆ, ಹಕ್ಕಿಲ್ಲದವನಂತೆ ಬದುಕಲು ನಾನು ಬಯಸುವುದಿಲ್ಲ.

ಬ್ರಿಟಿಷ್ ವ್ಯವಸ್ಥೆಯಲ್ಲಿ ಈ ಅಸಹಕಾರ ಎನ್ನುವುದು ಭಾರತಕ್ಕೊಂದು ವೇದಿಕೆಯನ್ನು ರೂಪಿಸಿಕೊಟ್ಟಿದೆ; ಈ ವೇದಿಕೆಯಿಂದ ಶಾಂತಿ ಮತ್ತು ಸದಾಶಯದ ಸಂದೇಶವನ್ನು ಭಾರತ ನರಳುತ್ತಿರುವ ಪ್ರಪಂಚಕ್ಕೆ ಬೋಧಿಸಬಹುದು ಎಂದು ಗಾಂಧೀಜಿ ಹೇಳುತ್ತಿದ್ದರು. ‘ಸತ್ಯವನ್ನು ಒಪ್ಪಿಕೊಳ್ಳುವುದು ಎಷ್ಟು ಅಗತ್ಯವೋ, ಅಸತ್ಯವನ್ನು ತಿರಸ್ಕರಿಸುವುದೂ ಅಗತ್ಯ’ ಎಂದವರು ವಾದಿಸುತ್ತಿದ್ದರು.

ಅಸಹಕಾರವನ್ನು ಗಾಂಧೀಜಿ ಅಥರ್ೈಸುವ ರೀತಿ ಹೀಗಿದೆ: ‘ಪರಸ್ಪರ ಗೌರವ-ನಂಬಿಕೆಗಳನ್ನು ಆಧರಿಸಿದ ನಿಜವಾದ, ಗೌರವಯುತ ಮತ್ತು ಸ್ವಯಂಪ್ರೇರಿತ ಸಹಕಾರಕ್ಕೆ ದಾರಿಮಾಡಿಕೊಡುವುದೇ ಅಸಹಕಾರದ ಉದ್ದೇಶ. ಪ್ರಸಕ್ತ ಹೋರಾಟ ಆರಂಭವಾಗಿರುವುದು ಕಡ್ಡಾಯದ ಸಹಕಾರವನ್ನು ವಿರೋಧಿಸುವುದಕ್ಕೆ; ಏಕಪಕ್ಷೀಯವಾದ, ನಾಗರಿಕತೆಯ ಹೆಸರಿನಲ್ಲಿ ಶೋಷಣೆಯ ಆಧುನಿಕ ವಿಧಾನಗಳನ್ನು ಶಸ್ತ್ರಾಸ್ರ್ರಗಳ ಮೂಲಕ ಹೇರುವುದರ ವಿರುದ್ಧ. ಬಿತ್ತುವುದರಂತೆಯೇ ಕಳೆಕೀಳುವುದೂ ಕೃಷಿಕನಿಗೆ ಅಗತ್ಯ. ಸಹಕರಿಸುವುದನ್ನು ಉದ್ದೇಶಪೂರಕವಾಗಿ ನಿರಾಕರಿಸುವುದು ಕಳೆಕೀಳುವುದು ಇದ್ದಂತೆ. ಎಲ್ಲ ಧರ್ಮಗಳೂ ನಮಗೆ ಬೋಧಿಸಿರುವುದೇನು?-ಪರಸ್ಪರ ವಿರುದ್ಧ ದಿಕ್ಕಿನ ಶಕ್ತಿಗಳು ನಮ್ಮ ಮೇಲೆ ಕಾರ್ಯಪ್ರವೃತ್ತವಾಗಿರುತ್ತವೆ. ಮಾನವ ಪ್ರಯತ್ನದಲ್ಲಿ ಸ್ವೀಕಾರ ಮತ್ತು ನಿರಾಕರಣೆಗಳು ನಿರಂತರವಾಗಿ ಇರುತ್ತವೆ.. .. ಒಳಿತಿನ ಸಹಕಾರ ನಮ್ಮ ಕರ್ತವ್ಯ ಎನ್ನುವುದಾದರೆ ಕೆಡುಕಿನ ಅಸಹಕಾರವೂ ನಮ್ಮ ಕರ್ತವ್ಯವೇ.. ದೇಶಪ್ರೇಮವನ್ನು ಅರ್ಥಮಾಡಿಸುವುದೇ ಈ ಅಸಹಕಾರ ಚಳವಳಿಯ ಗುರಿ.’

ಬ್ರಿಟಿಷ್ ಸಕರ್ಾರ ನಡೆಸುವ ಶಾಲೆ ಕಾಲೇಜುಗಳನ್ನು ವಿದ್ಯಾಥರ್ಿಗಳು ಬಹಿಷ್ಕರಿಸಬೇಕೆಂದು ಗಾಂಧೀಜಿ ನೀಡಿದ ಕರೆಯ ಬಗ್ಗೆ ರವೀಂದ್ರರು ಬಹಳ ವ್ಯಗ್ರವಾಗಿದ್ದರು. ವಿದ್ಯಾಥರ್ಿಗಳಿಗೊಂದು ಪಯರ್ಾಯ ವ್ಯವಸ್ಥೆಯನ್ನು ತೋರಿಸದೆ ಶಾಲೆ ಕಾಲೇಜುಗಳನ್ನು ಬಹಿಷ್ಕರಿಸುವಂತೆ ಹೇಳುವುದು ತಪ್ಪು ಎಂದು ಅವರು ಹೇಳುತ್ತಿದ್ದರು. ಆಗಿನ ಒಂದು ಘಟನೆಯನ್ನೇ ರವೀಂದ್ರರು ಹೀಗೆ ವಿವರಿಸುತ್ತಾರೆ: ಸ್ವದೇಶೀ ಚಳವಳಿಯ ಸಂದರ್ಭದಲ್ಲಿ ಬಂಗಾಳದಲ್ಲಿ ಯುವ ವಿದ್ಯಾಥರ್ಿಗಳ ಗುಂಪೊಂದು ನನ್ನನ್ನು ಭೇಟಿಯಾಯಿತು. ‘ನೀವು ಹೇಳಿದರೆ ನಾವು ಶಾಲೆ ಕಾಲೇಜುಗಳನ್ನು ತೊರೆಯಲು ಸಿದ್ಧ’ ಎಂದು ಗುಂಪು ಹೇಳಿತು. ನಾನು ತೊರೆಯಲು ಹೇಳಲಿಲ್ಲ. ಗುಂಪು ಕೋಪದಿಂದ ಹೊರಟು ಹೋಯಿತು. ತಾಯ್ನಾಡಿನ ನನ್ನ ಪ್ರೀತಿ ನಿಷ್ಠೆಗಳನ್ನೇ ಆ ಗುಂಪು ಶಂಕಿಸಿತು. ಈ ಜನಪ್ರಿಯ ಉದ್ರೇಕಕ್ಕಿಂತ ಬಹಳ ಹಿಂದೆ, ನನ್ನದು ಎಂದು ಹೇಳಲಾಗದ ಐದು ರೂಪಾಯಿಯೂ ನನ್ನ ಬಳಿ ಇಲ್ಲದ ಸಂದರ್ಭದಲ್ಲಿ, ಸ್ವದೇಶೀ ಭಂಡಾರವೊಂದನ್ನು ತೆರೆಯುವುದಕ್ಕೆಂದು ನಾನು ಒಂದು ಸಾವಿರ ರೂಪಾಯಿಯನ್ನು ಕೊಟ್ಟು ದಿವಾಳಿ ಎದ್ದು ಲೇವಡಿಗೆ ಒಳಗಾಗಿದ್ದೆ.. .. ವಿದ್ಯಾಥರ್ಿಗಳಿಗೆ ನಾನು ಶಾಲೆ ಕಾಲೇಜುಗಳನ್ನು ತೊರೆಯಲು ಹೇಳದಿರಲು ಕಾರಣ, ತಾತ್ಕಾಲಿಕ ಕ್ರಮವಾಗಿಯಾದರೂ, ಕೇವಲ ಖಾಲಿತನದ ಅರಾಜಕತೆ ಯಾರನ್ನೂ ಸೆಳೆಯುವುದಿಲ್ಲ ಎಂಬುದಾಗಿತ್ತು. ಜ್ವಲಂತ ವಾಸ್ತವವನ್ನು ಕಡೆಗಣಿಸಲು ಸಿದ್ಧವಾಗಿರುವ ಅಮೂರ್ತತೆಯ ಬಗ್ಗೆ ನನಗೆ ದಿಗಿಲಾಗುತ್ತದೆ.. .. ನಮ್ಮ ವಿದ್ಯಾಥರ್ಿಗಳ ತ್ಯಾಗ ಮಾಡಲು ಮುಂದಾಗಿದ್ದಾರೆ. ಆದರೆ ಈ ತ್ಯಾಗ ಯಾವುದಕ್ಕಾಗಿ? ಸಂಪೂರ್ಣ ಶಿಕ್ಷಣಕ್ಕಾಗಿ ಅಲ್ಲ, ಅಶಿಕ್ಷಣಕ್ಕೆ. ಅದರ ಬೆನ್ನಹಿಂದೆ ಸರ್ವನಾಶದ ತೀವ್ರ ಸಂತೋಷವಿರುತ್ತದೆ.

ಸಕರ್ಾರಿ ಶಾಲೆಗಳಿಗೆ ನಮ್ಮ ಮಕ್ಕಳನ್ನು ಕಳುಹಿಸುವುದು ಪಾಪಕಾರ್ಯ ಎಂದು ಗಾಂಧೀಜಿ ವಿವರಿಸಿದರು: ಬ್ರಿಟಿಷ್ ಸಕರ್ಾರ ನಡೆಸುವ ಶಾಲೆಗಳು ನಮ್ಮನ್ನು ಎದೆಗುಂದಿಸಿವೆ ಎಂಬುದು ನನ್ನ ದೃಢವಾದ ಅಭಿಪ್ರಾಯ. ಈ ಶಾಲೆಗಳು ನಮ್ಮನ್ನು ಅಸಹಾಯಕರನ್ನಾಗಿ ಮಾಡಿವೆ, ನಿರೀಶ್ವರವಾದಿಗಳಾಗಿ ಮಾಡಿವೆ, ನಮ್ಮಲ್ಲಿ ಹತಾಶೆಯನ್ನು ತುಂಬಿವೆ. ನಾವು ಬಯಸಿದಂತೆಯೇ ಅವು ನಮ್ಮನ್ನು ಗುಮಾಸ್ತರನ್ನಾಗಿ, ದುಭಾಷಿಗಳನ್ನಾಗಿ ಮಾಡಿವೆ. ನಮ್ಮನ್ನು ಗುಲಾಮಗಿರಿಗೆ ತಳ್ಳುವ ಸಕರ್ಾರದ ಜೊತೆ ಸಹಕರಿಸುವುದು ತಪ್ಪು ಎನ್ನುವುದಾದರೆ, ಮೊದಲು ನಾವು ಮಾಡಬೇಕಾದ ಕೆಲಸ ಸಕರ್ಾರಿ ಶಾಲೆಗಳಿಂದ ನಮ್ಮ ಮಕ್ಕಳನ್ನು ದೂರ ಇರಿಸುವುದು. ರಾಷ್ಟ್ರದ ಯುವಜನರೇ ಅದರ ಭರವಸೆ. ಸಕರ್ಾರದ ವ್ಯವಸ್ಥೆ ಪೂರ್ಣವಾಗಿ ಅಥವಾ ಪ್ರಮುಖವಾಗಿ ಕೆಡುಕಿನದು ಎಂಬ ಅರಿವು ನಮ್ಮಲ್ಲಿ ಮೂಡಿದ ನಂತರವೂ ನಮ್ಮ ಮಕ್ಕಳನ್ನು ಸಕರ್ಾರದ ಜೊತೆ ಭಾಗಿಯಾಗುವಂತೆ ಮಾಡುವುದು ಪಾಪಕೃತ್ಯ ಎಂದು ಗಾಂಧೀಜಿ ಬಲವಾಗಿ ನಂಬಿದ್ದರು.

(ಮುಂದುವರೆಯುವುದು…..)

‍ಲೇಖಕರು G

23 October, 2012

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. malli

    it is an intresting story sir
    but one thing sir
    how gandhiji is chang to mahathma sir?who putt the name ?
    sir
    plz ans me sir

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading