ಕೇರಳದ ಕರೆ
ಕರ್ನಾಟಕದ ಒಳಗೇ ಇರುವಷ್ಟು ಕಾಲ ನಮಗೆ ಕನ್ನಡ ಭಾಷೆಯ ಮಹತ್ವವೇ ತಿಳಿಯುವುದಿಲ್ಲ. ಒಂದು ಭಾಷೆಯ ಸೌಲಭ್ಯ, ಅದರ ಜೊತೆ ವ್ಯವಹರಿಸುವ ಸೊಗಸು-ಸುಖ, ದೈನಂದಿನ ವ್ಯವಹಾರದಲ್ಲಿ ಅದು ತಂದುಕೊಡುವ ಹಲ ಬಗೆಯ ಸೌಲತ್ತುಗಳು ಯಾವುವೂ ನಮ್ಮ ಗಮನಕ್ಕೆ ಬರುವುದೇ ಇಲ್ಲ. ಎಲ್ಲ ಸಹಜ ರೀತಿಯಲ್ಲಿ ನಡೆದುಹೋಗಿಬಿಡುತ್ತದೆ. ಭಾಷೆಯನ್ನು, ಸಂಸ್ಕೃತಿಯನ್ನು ಉಳಿಸಿಕೊಳ್ಳುವ, ಬೆಳೆಸುವ ಮಾತುಗಳು ಆಗಾಗ ಕೇಳಿಬಂದರೂ ನಿಜಕ್ಕೂ ಅದು ನಮ್ಮ ಅಸ್ತಿತ್ವದ ಪ್ರಶ್ನೆ ಎಂದು ಭಾವಿಸುವ ಹೋರಾಟಗಳೂ ತೀರ ಅಪರೂಪ. ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಅಂಥ ಒಂದು ತೀವ್ರತೆ, ಉತ್ಕಟ ಭಾವ ಕಾಣಿಸಿತು. ಜನ ತಮ್ಮ ಭಾಷೆಗಾಗಿ ಆಗ ಬೀದಿಗಿಳಿದಿದ್ದರು; ಜೈಲನ್ನೂ ಸೇರಿದ್ದರು. ಆನಂತರ ಅಂಥ ಉದಾಹರಣೆಗಳು ಕಾಣಸಿಗುವುದೇ ಇಲ್ಲ.
ಆದರೆ ಕರ್ನಾಟಕದ ಹೊರಗೆ ಅಥವಾ ಗಡಿಭಾಗದಲ್ಲಿರುವವರಿಗೆ ಭಾಷೆ ಮತ್ತು ಸಂಸ್ಕೃತಿಗಳ ಮಹತ್ವ ನಿರಂತರವಾಗಿ ಅನುಭವಕ್ಕೆ ಬರುತ್ತಲೇ ಇರುತ್ತದೆ. ಅದಕ್ಕೆ ಆಗಾಗ ತಲೆ ಎತ್ತುವ ಕಠೋರ ವಾಸ್ತವಗಳೂ ಕಾರಣವಾಗಿರುತ್ತವೆ. ಕಾಸರಗೋಡು ಅಂಥ ಪರಿಸ್ಥಿತಿಯೊಂದನ್ನು ಈಗ ಎದುರಿಸುತ್ತಿದೆ. ಕಾಸರಗೋಡು ಜಿಲ್ಲೆ ಕೇರಳ ರಾಜ್ಯಕ್ಕೆ ಸೇರಿರುವ ಜಿಲ್ಲೆಯಾದರೂ, ಈ ಜಿಲ್ಲೆಯಲ್ಲಿ ಕನ್ನಡಿಗರು ಅಧಿಕ ಸಂಖ್ಯೆಯಲ್ಲಿಯೇ ಇದ್ದಾರೆ. ವ್ಯಾವಹಾರಿಕ ಕಾರಣಕ್ಕಾಗಿ ಅವರು ಕೇರಳದಲ್ಲಿರುವುದು ನಿಜ. ಆದರೆ ಅವರ ಭಾಷೆ ಮತ್ತು ಸಂಸ್ಕೃತಿಯ ಬೇರುಗಳು ಇಂದಿಗೂ ಕರ್ನಾಟಕದಲ್ಲಿ, ಕನ್ನಡ ನೆಲದಲ್ಲಿ ಇವೆ ಎಂಬುದು ಅಷ್ಟೇ ನಿಜ.
ಹಾಗೆ ನೋಡಿದರೆ ಕಾಸರಗೋಡು ಜಿಲ್ಲೆಯಲ್ಲಿ ಅನೇಕ ಭಾಷೆಗಳಿವೆ. ಮಲಯಾಳ, ಕನ್ನಡ, ಕೊಂಕಣಿ, ತುಳು, ಮರಾಠಿ, ಉರ್ದು, ಬ್ಯಾರಿ ಇತ್ಯಾದಿ ಭಾಷೆಗಳ ಉದ್ದ ಪಟ್ಟಿಯೇ ಸಿಗುತ್ತದೆ. ಆದರೆ ಮಲಯಾಳ, ಕನ್ನಡ ಮತ್ತು ತುಳುಗಳು ಪ್ರಮುಖ ಭಾಷೆಗಳು ಎಂಬುದನ್ನು ಮರೆಯುವಂತಿಲ್ಲ. ಕನ್ನಡ ಮತ್ತು ತುಳು ಭಾಷೆಗಳ ನಡುವೆ ಹಿಂದಿನಿಂದಲೂ ಒಂದು ಅನ್ಯೋನ್ಯ ಸಂಬಂಧ ಉಳಿದುಬಂದಿದೆ. ಕಾಸರಗೋಡು ವಾಸ್ತವದಲ್ಲಿ ತುಳುನಾಡು ಎಂಬುದನ್ನು ಚರಿತ್ರೆ ಸಾರುತ್ತದೆ. ಜನ ಸಂಸ್ಕೃತಿಯೂ ಇದನ್ನು ಪ್ರತಿಪಾದಿಸುತ್ತದೆ. ಆದರೆ ಇಲ್ಲಿನ ತುಳವರು ತುಳು ಭಾಷೆಯನ್ನು ‘ಹೆತ್ತಬ್ಬೆ’ ಎಂದೂ, ಕನ್ನಡ ಭಾಷೆಯನ್ನು ‘ಪೊರೆದಬ್ಬೆ’ ಎಂದು (ಹೆತ್ತ ತಾಯಿ ಮತ್ತು ಸಾಕು ತಾಯಿ) ಮಾನ್ಯ ಮಾಡಿದ್ದಾರೆ. ಈ ಮಾತು ಈ ಎರಡು ಭಾಷೆಗಳ ನಡುವಣ ಗಾಢ ಸಂಬಂಧವನ್ನು ಪ್ರಕಟಿಸುತ್ತದೆ.
1956ಕ್ಕಿಂತ ಮೊದಲು ಕಾಸರಗೋಡಿನ ಈ ಭಾಗ ಆಗಿನ ಮದ್ರಾಸ್ ಪ್ರಾಂತ್ಯಕ್ಕೆ ಸೇರಿತ್ತು. ಆಗ ಕಾಸರಗೋಡು ಅವಿಭಜಿತ ಕನ್ನಡ ಜಿಲ್ಲ್ಲೆಯ (ಈಗಿನ ದಕ್ಷಿಣ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು)ಒಂದು ಭಾಗವಾಗಿತ್ತು. ಮುಂದೆ ಭಾಷಾವಾರು ಪ್ರಾಂತ್ಯಗಳಾದ ಮೇಲೆ ಕಾಸರಗೋಡು ಕನ್ನಡಿಗರ ತೀವ್ರ ವಿರೋಧದ ನಡುವೆಯೂ ಕೇರಳಕ್ಕೆ ಸೇರಿತು. ಸ್ಥಳೀಯವಾಗಿಯೂ ಇದಕ್ಕೆ ತೀವ್ರ ವಿರೋಧವಿತ್ತು. ಕಾಸರಗೋಡಿನ ಜನ ಬಹುದೊಡ್ಡ ವಿರೋಧವನ್ನು ವ್ಯಕ್ತಪಡಿಸಿದ್ದರು. ಆ ಚಳವಳಿಯಲ್ಲಿ ಇಬ್ಬರು ವಿದ್ಯಾರ್ಥಿಗಳ ಬಲಿದಾನವೂ ಆಯಿತು. ಮುಂದೆ 1967ರಲ್ಲಿ ಮಹಾಜನ ವರದಿಯೂ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ಹೇಳಿದರೂ ಕೇಂದ್ರ ಸರ್ಕಾರ ಇದನ್ನು ಮಾನ್ಯ ಮಾಡಲಿಲ್ಲ. ಕೇರಳ ಮತ್ತು ಮಹಾರಾಷ್ಟ್ರ ಸರ್ಕಾರಗಳು ಈ ವರದಿಯನ್ನು ತಿರಸ್ಕರಿಸಿದವು. ಹೀಗಾಗಿ ಕಾಸರಗೋಡು ಅನಿವಾರ್ಯವಾಗಿ ಕೇರಳ ರಾಜ್ಯದಲ್ಲಿಯೇ ಉಳಿಯಿತು. ಈ ತಪ್ಪಿನಿಂದಾಗಿ ಈಗಲೂ ಕಾಸರಗೋಡಿನ ಜನ ಒಂದಲ್ಲ ಒಂದು ಬಗೆಯ ಯಾತನೆಯನ್ನು ಅನುಭವಿಸುತ್ತಲೇ ಇದ್ದಾರೆ. ಕಯ್ಯಾರ ಕಿಞ್ಞಣ್ಣಯ್ಯ ರೈ ಅಂಥ ಹೋರಾಟಗಾರರು ಕಾಸರಗೋಡು ಕನರ್ಾಟಕಕ್ಕೆ ಸೇರಬೇಕೆಂದು ಹೇಳುತ್ತ ಹೇಳುತ್ತಲೇ ಮುದುಕರಾದರು. ಕನ್ನಡದ ಅವರ ಗಂಟಲ ಶಕ್ತಿ ಕುಗ್ಗಿಲ್ಲವಾದರೂ, ಅವರ ಬೇಡಿಕೆ ಮಾತ್ರ ಈಡೇರದಿರುವುದು ಕನ್ನಡಿಗರ ಇಚ್ಛಾಶಕ್ತಿಯ ಕೊರತೆಯನ್ನೇ ಹೇಳುತ್ತಿದೆ.
ಗಡಿಭಾಗದ ಈ ಕನ್ನಡಿಗರು ಭಾಷಾ ಅಲ್ಪಸಂಖ್ಯಾತರೆಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದರೂ, ಈ ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನದಲ್ಲಿ ದತ್ತವಾಗಿರುವ ಹಕ್ಕುಗಳಿಂದ ವಂಚಿತರಾಗಿಯೇ ಇದ್ದಾರೆ. ಈಗ ಇವರ ಮೇಲೆ ಬಂದೆರಗಿರುವ ವಿಪತ್ತು ಎಂದರೆ, ಕೇರಳ ಸಕರ್ಾರ ಆರ್.ವಿ.ಜಿ.ಮೆನನ್ ಆಯೋಗದ ವರದಿಯನ್ನು ಅಂಗೀಕರಿಸಿರುವುದು. ಈ ವರದಿಯ ಶಿಫಾರಸು ಹೇಳುವುದೆಂದರೆ: ಕೇರಳದ ಎಲ್ಲ ಶಾಲೆಗಳಲ್ಲೂ ಮಲಯಾಳ ಭಾಷೆಯನ್ನು ಪ್ರಥಮ ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕು. ಈಗಾಗಲೇ ಮಲಯಾಳವನ್ನು ಕನ್ನಡಿಗರ ಮೇಲೆ ಹೇರುವ ಪ್ರಯತ್ನ ಕಾಸರಗೋಡು ಜಿಲ್ಲೆಯಲ್ಲಿ ನಡೆದುಕೊಂಡು ಬಂದಿದೆ. ಪೂರ್ವ ಪ್ರಾಥಮಿಕ (ಅಂಗನವಾಡಿ) ಹಂತದಿಂದಲೇ ಮಲಯಾಳೀಕರಣ ನಡೆಯುತ್ತಲೇ ಇದೆ. ಪೂರ್ವ ಪ್ರಾಥಮಿಕದ ಮಕ್ಕಳಿಗಂತೂ ಅವರ ಮಾತೃಭಾಷೆಯಲ್ಲಿಯೇ ಶಿಕ್ಷಣ ದೊರಕಬೇಕು ಎಂಬುದು ಜಗತ್ತಿನ ಶ್ರೇಷ್ಠ ಶಿಕ್ಷಣ ಚಿಂತಕರ ಅಭಿಪ್ರಾಯ. ಜೊತೆಗೆ ಮಕ್ಕಳ ಶೈಕ್ಷಣಿಕ ಹಕ್ಕಿನ ನೀತಿಗೂ ವಿರುದ್ಧವಾದದ್ದು. ಆದರೆ ಇಲ್ಲಿನ ಕನ್ನಡದ ಮಕ್ಕಳಿಗೆ ಮಲಯಾಳಿ ಅಕ್ಷರ ಹಾಡುಗಳ ಮೂಲಕ ಶಿಕ್ಷಣವನ್ನು ನೀಡಿ ಮಲಯಾಳವನ್ನು ಹೇರಲಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ ಇನ್ನೊಂದು ಬಗೆಯಲ್ಲಿ ಕನ್ನಡವನ್ನು ತುಳಿಯಲಾಗುತ್ತಿದೆ. ಈ ಹಂತದ ಮಕ್ಕಳಿಗೆ ಪಠ್ಯಗಳು ಸಕಾಲದಲ್ಲಿ ಸಿಕ್ಕಿರುವ ಉದಾಹರಣೆಯೇ ಇಲ್ಲ. ಪಠ್ಯದಲ್ಲಿಯೂ ಕನ್ನಡ ಮತ್ತು ಕನರ್ಾಟಕ ಸಂಸ್ಕೃತಿಯನ್ನು ಅವಗಣನೆಗೆ ಗುರಿಪಡಿಸುವ ಪ್ರಯತ್ನಗಳು ನಡೆದಿವೆ.
ಇಷ್ಟಾದರೂ ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಸಂಖ್ಯೆಯೇ ಹೆಚ್ಚಾಗಿದೆ. ಮಲಯಾಳ ಆಡಳಿತ ಭಾಷೆ, ಸಂಪರ್ಕ ಭಾಷೆ, ಉದ್ಯೋಗಕ್ಕೆ ದಾರಿಮಾಡಿಕೊಡುವ ಭಾಷೆ. ಆದರೂ ಇಲ್ಲಿನ ಕನ್ನಡಿಗರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳುಹಿಸುವ ಮೂಲಕ ಈ ಶಾಲೆಗಳನ್ನು ಉಳಿಸಿಕೊಂಡಿದ್ದಾರೆ. ಆದರೆ ಮೆನನ್ ವರದಿ ಜಾರಿಗೆ ಬಂದರೆ ಈ ಶಾಲೆಗಳು ಮುಂದುವರಿಯುತ್ತವೆ ಎಂದು ಹೇಳಲಾಗದು. ಜನ ಎಲ್ಲಿಯವರೆಗೆ ಹಲ್ಲುಮುಡಿ ಕಚ್ಚಿ ಹೋರಾಡಲು ಸಾಧ್ಯ. ಒಮ್ಮೆ ಅವರು ಕೈ ಎತ್ತಿದರೆ ಕನ್ನಡ ಮಾಧ್ಯಮ ಶಾಲೆಗಳೆಲ್ಲ ಮುಚ್ಚಿದಂತೆಯೇ.
ಕನ್ನಡ ಕಲಿಕೆಗೆ ಇನ್ನೂ ಒಂದು ರೀತಿಯಲ್ಲಿ ಪೆಟ್ಟು ಬೀಳಲಿದೆ. ಈಗ ಕೇರಳದ ಈ ಭಾಗದಲ್ಲಿ ಪದವಿ ಹಂತದಲ್ಲಿ ಕನ್ನಡ ಭಾಷಾ ಅಧ್ಯಯನಕ್ಕೆ ಕಾಸರಗೋಡಿನಲ್ಲಿ ಎರಡು ಕಾಲೇಜುಗಳಿವೆ. ಒಂದು ಶಿಕ್ಷಕರ ತರಬೇತಿ ಕಾಲೇಜೂ (ಬಿ.ಇಡಿ.) ಇದೆ. ಇಲ್ಲಿ ತರಬೇತಿ ಪದವಿ ಪಡೆದುಕೊಂಡವರೆಲ್ಲ ಕನ್ನಡ ಶಿಕ್ಷಕರಾಗುವುದು ಸಹಜವಾಗಿತ್ತು. ಇಂಥವರಿಗೆ ಅವಕಾಶವೂ ಸರಾಗವಾಗಿತ್ತು. ಆದರೆ ಕೇರಳ ಸಕರ್ಾರದ ಈ ಹೊಸ ವ್ಯವಸ್ಥೆಯು ಜಾರಿಗೆ ಬಂದರೆ, ಇನ್ನು ಮುಂದೆ ಕನ್ನಡ ಶಿಕ್ಷಕ ಹುದ್ದೆಗಳು ಸಕರ್ಾರದಲ್ಲಿ ಸಿಕ್ಕುವ ಸಂಭವ ಕಡಿಮೆ. ಅಷ್ಟೇ ಅಲ್ಲ ಕನ್ನಡವನ್ನು ಕಲಿಯುವ ಅವಕಾಶವೂ ಇಲ್ಲವಾಗುತ್ತದೆ. ಸಕರ್ಾರಿ ಹುದ್ದೆಯನ್ನು ಪಡೆಯುವುದರಲ್ಲಿ ಆಸಕ್ತಿ ಇಟ್ಟುಕೊಂಡವರು ಇನ್ನುಮುಂದೆ ಇಂಥ ಕೋಸರ್್ಗಳಿಗೆ ಹೋಗುವುದು ನಿಂತು ಹೋಗುತ್ತದೆ. ಜೊತೆಗೆ ಶಾಲೆಗಳಲ್ಲಿ ಮಲಯಾಳಂ ಕಲಿಯುವುದು ಕಡ್ಡಾಯವಾದರೆ, ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸುವುದು ಹೇಗೆ ಸಾಧ್ಯ?
ಕೇರಳದಲ್ಲಿ ಕನ್ನಡ ಪದವಿಯನ್ನು ಮತ್ತು ಬಿ.ಇಡಿ.ಪದವಿಯನ್ನು ಪಡೆದವರು ಹುದ್ದೆಗಾಗಿ ಕನರ್ಾಟಕದ ಕಡೆಗೆ ವಲಸೆ ಹೋಗುವುದೂ ಸಾಧ್ಯವಿಲ್ಲ. ಕಾರಣ ಕನರ್ಾಟಕ ಸಕರ್ಾರ ಕೇರಳದ ಈ ಬಿ.ಇಡಿ.ಗೆ ಮಾನ್ಯತೆ ನೀಡಿಲ್ಲ. (ಕೇರಳದಲ್ಲಿ ಕನರ್ಾಟಕದ ಬಿ.ಇಡಿ. ಪದವಿಗೆ ಮಾನ್ಯತೆ ಇದೆ). ಹೀಗಾಗಿ ಇವರೆಲ್ಲ ತ್ರಿಶಂಕುಗಳಾಗುತ್ತಾರೆ. ಅಥವಾ ಕನ್ನಡದ ಕಡೆಗೆ ತಿರುಗಿಯೂ ನೋಡದ ಅನಿವಾರ್ಯ ಸ್ಥಿತಿಯತ್ತ ನಡೆದುಬಿಡುತ್ತಾರೆ.
ಇಂಥ ಪರಿಸ್ಥಿತಿಯ ವಿರುದ್ಧ ಕಾಸರಗೋಡಿನ ಕನ್ನಡಿಗರು ಧ್ವನಿ ಎತ್ತಿದ್ದಾರೆ. ಕೇರಳ ಸಕರ್ಾರದ ನಿಲುವನ್ನು ಪ್ರತಿಭಟಿಸಲು ಆಗಸ್ಟ್ 3 ರಂದು ಕನ್ನಡಪರ ಸಂಘಟನೆಗಳು ಕರೆ ಕೊಟ್ಟಿವೆ. ಕನ್ನಡ ಅಧ್ಯಾಪಕರು, ಕನ್ನಡ ಪ್ರೇಮಿಗಳು, ಪೋಷಕರು, ಕಾಸರಗೋಡು ಕನರ್ಾಟಕಕ್ಕೆ ಸೇರಬೇಕೆಂದು ಹೋರಾಟ ನಡೆಸಿಕೊಂಡು ಬಂದವರು ಹೀಗೆ ಅನೇಕರು ಈ ಹೋರಾಟಕ್ಕೆ ಶಕ್ತಿ ತುಂಬಲಿದ್ದಾರೆ.
ಈ ಹಂತದಲ್ಲಿ ಕನರ್ಾಟಕ ಗಡಿಭಾಗದ ನಮ್ಮ ಈ ಕನ್ನಡಿಗರ ಪರವಾಗಿ ನಿಲ್ಲಬೇಕಾಗಿದೆ. ಅವರ ಹೋರಾಟಕ್ಕೆ ಆತ್ಮಸ್ಥೈರ್ಯ ತುಂಬಬೇಕಾಗಿದೆ. ಕನ್ನಡಕ್ಕಾಗಿ ಇರುವ ನಮ್ಮ ಅನೇಕ ಸಂಘಟನೆಗಳು, ಪ್ರಾಧಿಕಾರಗಳು ಈಗ ಎಚ್ಚೆತ್ತುಕೊಳ್ಳಬೇಕಾಗಿದೆ.


0 Comments