ಕನ್ನಡದ ಸಾಹಿತ್ಯಪತ್ರಿಕೆಗಳು
‘ಕಿರುಪತ್ರಿಕೆ’ ಎಂದು ಯಾವುದನ್ನು ಕರೆಯಬೇಕು? ಈ ಪ್ರಶ್ನೆಯನ್ನು ನಾವು ಈಗ ಕೇಳುವುದಿಲ್ಲ. ಪುಟ್ಟಪತ್ರಿಕೆ, ಕಿರುಪತ್ರಿಕೆ, ಸಾಹಿತ್ಯಪತ್ರಿಕೆ ಹೀಗೆ ಅನೇಕ ಹೆಸರುಗಳಿಂದ ಕರೆಯುತ್ತಿರುವ ‘ಸಾಹಿತ್ಯಪತ್ರಿಕೆಗಳ’ ಬಗ್ಗೆ ನಮಗೆಲ್ಲ ಒಂದು ನಿರ್ದಿಷ್ಟ ಚಿತ್ರವಿದೆ. ಬಗೆಬಗೆಯ ಚರ್ಚೆಗೆ ತನ್ನನ್ನು ಒಡ್ಡಿಕೊಳ್ಳುತ್ತ, ಕಾಲಕ್ಕೆ ಮುಖಾಮುಖಿಯಾಗಿ ನಿಂತು ತನ್ನ ಪಾತ್ರವನ್ನು ಸ್ಪಷ್ಟಪಡಿಸಿಕೊಳ್ಳುತ್ತ, ಆಗಾಗ ತನ್ನನ್ನು ಬದಲಾಯಿಸಿಕೊಳ್ಳುತ್ತ ನಡೆದಿರುವ ಈ ‘ಸಾಹಿತ್ಯಪತ್ರಿಕೆ’ಗಳ ಇತಿಹಾಸ ಬಹಳ ದೀರ್ಘವಾದದ್ದೇನೂ ಅಲ್ಲ. ಜಗತ್ತಿನ ಸಾಹಿತ್ಯಪತ್ರಿಕೆಗಳ ಇತಿಹಾಸದ ಪುಟಗಳನ್ನು ತಿರುಗಿಸಿದರೂ, ಅದು 19ನೇ ಶತಮಾನದಿಂದ ಹಿಂದಕ್ಕೇನೂ ಹೋಗುವುದಿಲ್ಲ. ಎಡಿನ್ಬರೊ ರಿವ್ಯೂ (1802), ವೆಸ್ಟ್ ಮಿನಿಸ್ಟರ್ ರಿವ್ಯೂ (1824), ದಿ ಸ್ಪೆಕ್ಟೇಟರ್ (1928) (ಇವೆಲ್ಲ ಬ್ರಿಟನ್ನಿನ ಸಾಹಿತ್ಯಪತ್ರಿಕೆಗಳು), ಫಿಲಡಲ್ಫಿಯ ಲಿಟರರಿ ಮ್ಯಾಗಜಿನ್ (1803-8), ದಿ ಮಂತ್ಲೀ ಆಂಥಾಲಜಿ (1803-11), ದಿ ಏಲ್ ರಿವ್ಯೂ (1819), ಡಯಲ್(1840-44) (ಇವೆಲ್ಲ ಅಮೆರಿಕದ ಸಾಹಿತ್ಯಪತ್ರಿಕೆಗಳು) ಹೀಗೆ ಕೆಲವೇ ಕೆಲವು ಸಾಹಿತ್ಯಕ ಪತ್ರಿಕೆಗಳು 19ನೇ ಶತಮಾನದಲ್ಲಿ ಸಿಕ್ಕುತ್ತವೆ. 20ನೇ ಶತಮಾನದ ಮಧ್ಯಭಾಗದಲ್ಲಂತೂ ಈ ಸಾಹಿತ್ಯಪತ್ರಿಕೆಗಳ ಸುಗ್ಗಿಯೇ ಕಾಣಿಸುತ್ತದೆ. 1970ರ ದಶಕಲ್ಲಿ ಮತ್ತೆ ಈ ಪತ್ರಿಕೆಗಳ ಸಮೃದ್ಧಿಯನ್ನು ಜಗತ್ತಿನಾದ್ಯಂತ ಕಾಣಬಹುದು.
ಸಕಾಲಕ್ಕೆ ಪ್ರಕಟವಾಗದ (ಎಂದು ಹೇಳಿದರೂ ಅನೇಕ ಪತ್ರಿಕೆಗಳು ಕಾಲಬದ್ಧವಾಗಿರುವುದನ್ನೂ ನೋಡಬಹುದು), ಜಾಹಿರಾತುಗಳಿಲ್ಲದ, ಹೆಚ್ಚು ಪ್ರಸಾರ ಸಂಖ್ಯೆಯೂ ಇಲ್ಲದ, ವ್ಯಾಪಾರೋದ್ಯಮವನ್ನೇ ಮುಖ್ಯ ಗುರಿಯಾಗಿಸಿಕೊಳ್ಳದ, ‘ಅಬ್ಬೇಪಾರಿ’ಯಂತೆ ಕಾಣುವ ಪತ್ರಿಕೆಗಳನ್ನು ಕಿರುಪತ್ರಿಕೆಗಳು, ಸಾಹಿತ್ಯಪತ್ರಿಕೆಗಳು ಎಂದು ಗುರುತಿಸಲಾಗಿದೆ. ಹೊರನೋಟಕ್ಕೆ ಅಬ್ಬೇಪಾರಿಗಳಂತೆ ಕಾಣಿಸಿದರೂ, ಇವುಗಳ ಒಳಸತ್ವ ಮತ್ತು ಪ್ರಭಾವ ಭಿನ್ನವಾದದ್ದು. ಸಾಹಿತ್ಯ ಚರಿತ್ರೆಯಲ್ಲಿ ಈ ಪ್ರಭಾವಕ್ಕೆ ತೀರ ಮಹತ್ವವಿದೆ. ಕಲೆ, ಸಾಹಿತ್ಯ, ಚಿಂತನೆ, ಅಭಿರುಚಿ, ಸಂಸ್ಕೃತಿ, ರಾಜಕೀಯ, ಸಾಮಾಜಿಕ ಸ್ಥಿತಿಗತಿ ಇತ್ಯಾದಿ ಅನೇಕ ಮಹತ್ವದ ಸಂಗತಿಗಳನ್ನು ಬದಲಾಯಿಸುವಲ್ಲಿ ಈ ಪತ್ರಿಕೆಗಳು ವಹಿಸಿರುವ ಪಾತ್ರ ಅತ್ಯಂತ ಪರಿಣಾಮಕಾರಿಯಾದದ್ದು. ಜಗತ್ತಿನಲ್ಲಿ ಹೊಸ ಕಲೆ ರೂಪ ಪಡೆದದ್ದು, ಹೊಸ ಸಂಗೀತ ಜನಮನವನ್ನು ಪ್ರವೇಶಿಸಿದ್ದು, ಸಮಾಜಗಳಲ್ಲಿ ಅನೇಕ ‘ವಾದ’ಗಳು ಹುಟ್ಟಿಕೊಂಡದ್ದು, ಅನೇಕ ಚಿಂತನೆಗಳು ಸ್ಪಷ್ಟ ಚಹರೆಯನ್ನು ಕಂಡುಕೊಂಡದ್ದು, ಸಂಸ್ಕೃತಿಯ ಹೊಸ ಹೊಸ ರೂಪಗಳು ಕಾಣಿಸಿಕೊಂಡದ್ದು ಈ ‘ಕಿರುಪತ್ರಿಕೆ’ಗಳ ಪಾತ್ರಗಳ ಮೂಲಕವೇ ಎಂಬುದು ಕುತೂಹಲಕರ ಸಂಗತಿ. 20ನೇ ಶತಮಾನದ ಮಹತ್ವದ ಕವಿ ಟಿ.ಎಸ್.ಎಲಿಯಟ್ ಬರೆದ ಮೊದಲ ಪದ್ಯ, ‘ದಿ ಲವ್ ಸಾಂಗ್ ಆಫ್ ಜೆ.ಆಲ್ಫ್ರೆಡ್ ಪ್ರುಫ್ರಾಕ್’ ಪ್ರಕಟವಾದದ್ದು ‘ಪೊಯೆಟ್ರಿ ಮ್ಯಾಗಜಿನ್’ ಎಂಬ ಕಿರುಪತ್ರಿಕೆಯಲ್ಲಿ ಎಂಬುದನ್ನು ನೆನೆದರೆ ಈ ಪತ್ರಿಕೆಗಳ ಪಾತ್ರ ಸ್ವಲ್ಪಮಟ್ಟಿಗಾದರೂ ಅರ್ಥವಾಗಬಹುದು. ಈ ಪತ್ರಿಕೆಗಳಿಗೆ ಬರೆದ ಮತ್ತು ಬರೆಯುತ್ತಿರುವ ಲೇಖಕರ ಪಟ್ಟಿಯನ್ನೇ ನೋಡಿದರೂ ಈ ಅಂಶ ಇನ್ನಷ್ಟು ಸ್ಪಷ್ಟವಾಗುತ್ತದೆ. ಒಂದು ಕಾಲದಲ್ಲಿ ಹೊಸ ಧ್ವನಿಯಾಗಿ ಸಾಹಿತ್ಯ ಪತ್ರಿಕೆಗಳಲ್ಲಿ ಕಾಣಿಸಿಕೊಂಡ ಹೆಸರುಗಳು ಕಾಲಾಂತರದಲ್ಲಿ ಮಹತ್ವದ ಬರಹಗಾರರಾಗಿ ಮಾರ್ಪಡುವುದು ಮತ್ತು ಸಾಹಿತ್ಯ ಚರಿತ್ರೆಯ ದಿಕ್ಕನ್ನೇ ಈ ಬರಹಗಾರರು ಬದಲಾಯಿಸಿರುವುದು ಇತ್ಯಾದಿ ಅಂಶಗಳು ಈ ಸಾಹಿತ್ಯ ಪತ್ರಿಕೆಗಳ ಸ್ವರೂಪವನ್ನು ಇನ್ನಷ್ಟು ಸ್ಪಷ್ಟಪಡಿಸುತ್ತವೆ. ಕಿರುಪತ್ರಿಕೆಗಳಲ್ಲಿ ಪ್ರಕಟವಾಗುವ ಬರಹಗಳಿಗಾಗಿಯೇ ಮೀಸಲಿರುವ ಮಹತ್ವದ ಪ್ರಶಸ್ತಿಗಳೂ ಇವೆ. ಪುಷ್ಕಾಟರ್್ ಬಹುಮಾನ, ಓ.ಹೆನ್ರಿ ಪ್ರಶಸ್ತಿ ಇಂಥ ಪ್ರಶಸ್ತಿಗಳಲ್ಲಿ, ಬಹುಮಾನಗಳಲ್ಲಿ ಮುಖ್ಯವಾದವು.
ಕತೆ, ಕವಿತೆ, ಕಾದಂಬರಿ, ವಿಮರ್ಶೆ, ಲೇಖನ, ಚಿಂತನೆ, ಸಂವಾದಗಳಲ್ಲದೆ ಪೂರ್ಣ ಪ್ರಮಾಣದ ಕಾದಂಬರಿಗಳನ್ನು, ಚಿತ್ರಕತೆ, ನಾಟಕಗಳನ್ನು ಪ್ರಕಟಿಸುವ ಕಿರುಪತ್ರಿಕೆಗಳೂ ಇವೆ. ಕಾವ್ಯಕ್ಕೇ ಪ್ರತ್ಯೇಕವಾದ, ವಿಮರ್ಶೆಗೆಂದೇ ಹುಟ್ಟಿಕೊಂಡ, ಕಲೆಗೇ ಮೀಸಲಾದ, ನಾಟಕಕ್ಕೇ ತಮ್ಮನ್ನು ಅರ್ಪಿಸಿಕೊಂಡ ಕಿರುಪತ್ರಿಕೆಗಳೂ ಇವೆ. ಕಿರುಪತ್ರಿಕೆಗಳ ಸಂಗ್ರಹ ಮತ್ತು ಸಂಶೋಧನೆಗಾಗಿಯೇ ಬ್ರಿಟನ್ನಿನಲ್ಲಿ 1964ರಷ್ಟು ಹಿಂದೆಯೇ ಒಂದು ಕೇಂದ್ರವನ್ನು ತೆರೆಯಲಾಯಿತು. ಕೊಲ್ಕತ್ತದಲ್ಲಿಯೂ ಇಂಥದೊಂದು ಕೇಂದ್ರ ಕ್ರಿಯಾಶೀಲವಾಗಿ ತನ್ನ ಮಿತಿಯಲ್ಲಿಯೇ ಅರ್ಥಪೂರ್ಣವಾಗಿದೆ. ಇತ್ತೀಚಿನ ಆಧುನಿಕ ತಂತ್ರಜ್ಞಾನ ಜಾಲತಾಣಗಳಿಗೆ ಅವಕಾಶ ಕಲ್ಪಿಸಿದ ನಂತರ ಕಿರುಪತ್ರಿಕೆಗಳು ಮುದ್ರಣದ ಹಂಗನ್ನು ತೊರೆಯುವ ಸ್ಥಿತಿ ಉಂಟಾಗಿದೆ. ಆದರೂ ಇವತ್ತು ಮುದ್ರಣಗೊಳ್ಳುತ್ತಿರುವ ಸಾಹಿತ್ಯಕ ಪತ್ರಿಕೆಗಳ ಆಕರ್ಷಣೆಯಾಗಲಿ, ಮಹತ್ವವಾಗಲಿ ಕಡಿಮೆಯಾಗಿಲ್ಲ.
2
ಭಾರತೀಯ ಸಂದರ್ಭವನ್ನು ಗಮನಿಸಿದರೆ, ಸಾಹಿತ್ಯಪತ್ರಿಕೆಗಳ ಪ್ರವೇಶ ತುಂಬ ತಡವಾಗಿಯೇನೂ ಆಗಿಲ್ಲ. ಕನ್ನಡವೂ ಸೇರಿದಂತೆ ಬಂಗಾಳಿ (ಸಬುಜ್ ಪತ್ರ-1914, ಕಲ್ಲೋಳ್-1923), ಮರಾಠಿ, ಮಲೆಯಾಳಂ, ಗುಜರಾತಿ ಹೀಗೆ ವಿವಿಧ ಭಾರತೀಯ ಭಾಷೆಗಳಲ್ಲಿ ಸಾಹಿತ್ಯ ಪತ್ರಿಕೆಗಳು ಹುಟ್ಟಿಕೊಂಡಿರುವುದನ್ನು ಗಮನಿಸಬಹುದು. ಆದರೆ ಭಾರತಕ್ಕೆ ಪತ್ರಿಕೋದ್ಯಮವೇ ತುಂಬ ತಡವಾಗಿ ಕಾಲಿಟ್ಟ ಕಾರಣ, ಸಾಹಿತ್ಯ ಪತ್ರಿಕೆಗಳು ಮತ್ತು ಇತರ ಪತ್ರಿಕೆಗಳ ನಡುವಣ ವ್ಯತ್ಯಾಸ ಆರಂಭದ ಘಟ್ಟದಲ್ಲಿ ತೀರ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಪತ್ರಿಕೆಯ ಬೇರೆ ಬೇರೆಯ ಅಂಶಗಳಿಗೆ ಗಮನಕೊಡುತ್ತಲೇ, ಕತೆ, ಕವಿತೆ, ಪ್ರಬಂಧ, ಲೇಖನಗಳನ್ನು ಪ್ರಕಟಿಸುತ್ತಿದ್ದ ಪತ್ರಿಕೆಗಳು ಶುದ್ಧ ಸಾಹಿತ್ಯಪತ್ರಿಕೆಗಳಾಗಿ ಉಳಿಯುವುದೂ ಸಾಧ್ಯವಿರಲಿಲ್ಲ. ಬೆಳವಣಿಗೆಯ ಹಂತದಲ್ಲಿ ಇದೆಲ್ಲ ಅನಿವಾರ್ಯವೂ ಇರಬಹುದು. ಆದರೂ ಈ ಪತ್ರಿಕೆಗಳು ಸಾಹಿತ್ಯವನ್ನು, ಸಂಸ್ಕೃತಿಯ ಸಂಗತಿಗಳನ್ನು ಗಮನಿಸುತ್ತ, ಅವುಗಳಿಗೆ ಪ್ರತಿಕ್ರಿಯಿಸುತ್ತಿದ್ದವೆಂಬುದು ಮುಖ್ಯ. ಬಹುಬೇಗ ಈ ಘಟ್ಟ ಕಳೆದು ಹೊಸ ಘಟ್ಟವೊಂದು ಆರಂಭವಾದದ್ದನ್ನೂ ನಮ್ಮ ಪತ್ರಿಕೆಗಳ ಚರಿತ್ರೆ ತಿಳಿಸುತ್ತದೆ. ಸಾಹಿತ್ಯ, ಸಂಸ್ಕೃತಿಯೇ ಪ್ರಧಾನವಾದ ಆಶಯಕ್ಕೆ ತುಡಿಯುವ ಪತ್ರಿಕೆಗಳು ಈ ಘಟ್ಟದಲ್ಲಿ ಹುಟ್ಟಿಕೊಂಡವು.
ಕರ್ನಾಟಕ ಭಾಷಾ ಸೇವಕ (1891), ಕರ್ಣಾಟಕ ಕಾವ್ಯ ಮಂಜರಿ (1892), ಕರ್ಣಾಟಕ ಗ್ರಂಥಮಾಲ (1893), ಕಾವ್ಯಕಲ್ಪ ದ್ರುಮ (1897), ವಾಗ್ಭೂಷಣ (1896) ಸುವಾಸಿನಿ (1900), ಕನ್ನಡ ನುಡಿಗನ್ನಡಿ(1903), ಸದ್ಬೋಧ ಚಂದ್ರಿಕೆ((1904), ವಿಕಟ ಪ್ರತಾಪ(1905), ಶ್ರೀಕೃಷ್ಣ ಸೂಕ್ತಿ (1906), ಅವಕಾಶತೋಷಿಣಿ (1906), ವಿಕಟ ವಿನೋದಿನಿ(1911), ಸಚಿತ್ರ ಭಾರತ (1913), ಕಾದಂಬರೀ ಸಂಗ್ರಹ(1914), ಕನ್ನಡ ಕೋಗಿಲೆ(1916), ಪ್ರಭಾತ (1918), ಕವಿತಾ(1919), ಸುಧಾರಕ (1928-ಆರ್.ಕೆ.ನಾಯಕ) ಹೀಗೆ ಸಾಲುಗಟ್ಟಿ ಬಂದ ಪತ್ರಿಕೆಗಳು ಕನ್ನಡ ಸಾಹಿತ್ಯ, ಸಂಸ್ಕೃತಿ, ಸಮಾಜವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದವು. ಕನ್ನಡದ ಮುಖ್ಯ ಸಂವೇದನಾಶೀಲ ಮನಸ್ಸುಗಳು ಈ ಪತ್ರಿಕೆಗಳ ಹಿಂದೆ ಕ್ರಿಯಾಶೀಲವಾಗಿದ್ದವು. ನಮ್ಮ ಪ್ರಾಚೀನ ಕಾವ್ಯಗಳನ್ನು ಪುನರ್ರೂಪಿಸುತ್ತ, ಪುರಾಣಗಳನ್ನು ಹೊಸ ಬೆಳಕಿನಲ್ಲಿ ನೋಡುತ್ತ, ಹೊಸ ಹೊಸ ಸಂವೇದನೆಗಳನ್ನು ಅನ್ಯಭಾಷೆಗಳಿಂದ ಅನುವಾದಿಸಿಕೊಳ್ಳುತ್ತ, ಭಾಷೆ, ವ್ಯಾಕರಣ, ಛಂದಸ್ಸು, ಪ್ರಾಚೀನ ಕಾವ್ಯ, ಪುರಾಣ ಕತೆಗಳನ್ನು ಚರ್ಚಿಸುತ್ತ ಕನ್ನಡ ಸಾಹಿತ್ಯ ತನ್ನನ್ನು ವಿಸ್ತರಿಸಿಕೊಳ್ಳಲು ಅಗತ್ಯವಾದ ಬುನಾದಿಯನ್ನು ರೂಪಿಸುವಲ್ಲಿ ಈ ಹಂತದ ಪತ್ರಿಕೆಗಳು ಕೆಲಸ ಮಾಡಿದವು.
‘ಕರ್ನಾಟಕ ಗ್ರಂಥಮಾಲ’ ಇಂಗ್ಲಿಷ್, ಬಂಗಾಲಿ, ಸಂಸ್ಕೃತ ಗ್ರಂಥಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದರೆ, ‘ಕಾವ್ಯಕಲ್ಪದ್ರುಮ’ ಕನ್ನಡ ಮತ್ತು ಸಂಸ್ಕೃತಗಳಲ್ಲಿ ಕಾವ್ಯವನ್ನು ಪ್ರಕಟಿಸುತ್ತಿತ್ತು. ‘ವಾಗ್ಭೂಷಣ’ ಹಲವು ಭಾಷೆಗಳ ಸಾಹಿತ್ಯವನ್ನು ಪರಿಚಯಿಸುತ್ತಿತ್ತು. ಕನ್ನಡದಲ್ಲಿ ಸಣ್ಣಕತೆ ಮುಖ ಪಡೆದುಕೊಳ್ಳುವ ಹಂತದ ಬೆಳವಣಿಗೆಗೆ ಕಾರಣವಾದದ್ದು ‘ಸುವಾಸಿನಿ’ ಎಂಬ ಪತ್ರಿಕೆ. ಪಂಜೆ ಮಂಗೇಶರಾಯರ ಅನೇಕ ಕತೆಗಳು ಈ ಪತ್ರಿಕೆಯಲ್ಲಿ ಪ್ರಕಟವಾದವು. ಗಳಗನಾಥರ ಐತಿಹಾಸಿಕ ಕಾದಂಬರಿಗಳು ಪ್ರಕಟವಾದದ್ದು ‘ಸದ್ಬೋಧ ಚಂದ್ರಿಕೆ’ಯಲ್ಲಿ. ‘ಸಚಿತ್ರ ಭಾರತ’ದಲ್ಲಿ ಪೌರಾಣಿಕ ಕತೆಗಳು, ಧಾರಾವಾಹಿಗಳು ಪ್ರಕಟವಾಗುತ್ತಿದ್ದವು.
1905ರಷ್ಟು ಹಿಂದೆಯೇ ಆರಂಭಗೊಂಡ ‘ವಿಕಟ ಪ್ರತಾಪ’ ಕನ್ನಡದ ಮೊದಲ ಹಾಸ್ಯ ಪತ್ರಿಕೆಯೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಮುಂದೆ ಜಿ.ನಾರಾಯಣ ಅವರ ‘ವಿನೋದ’ ಮತ್ತು ‘ರಾಶಿ’ (ಡಾ.ಎಂ.ಶಿವರಾಂ) ಅವರ ‘ಕೊರವಂಜಿ’ಯಂಥ ಹಾಸ್ಯ ಪತ್ರಿಕೆಗಳ ಹುಟ್ಟಿಗೆ ಹಿನ್ನೆಲೆಯನ್ನು ಈ ಪತ್ರಿಕೆ ಒದಗಿಸಿತ್ತು. ಇಂಗ್ಲಿಷ್ನ ‘ಪಂಚ್’ ಮಾದರಿಯಲ್ಲಿ ಆರಂಭವಾದ ‘ಕೊರವಂಜಿ’ಯಂತೂ ಕನ್ನಡದಲ್ಲಿ ಹಾಸ್ಯ, ವಿಡಂಬನೆ, ಕಟಕಿ, ವ್ಯಂಗ್ಯ, ವಿನೋದ, ವ್ಯಂಗ್ಯಚಿತ್ರ ಇತ್ಯಾದಿ ಹಲವಾರು ಪ್ರಕಾರಗಳು ಸಮೃದ್ಧವಾಗಿ ಬೆಳೆಯಲು, ಅನೇಕ ಹಾಸ್ಯ ಬರಹಗಾರರು ಹುಟ್ಟಿಕೊಳ್ಳಲು ಕಾರಣವಾಯಿತು. ಹಾಸ್ಯದ ಈ ವಿಭಿನ್ನ ಪ್ರಕಾರಗಳು ಸಾಹಿತ್ಯದ ಬಹುಮುಖ್ಯ ಭಾಗಗಳು ಎಂಬುದನ್ನು ಕೊರವಂಜಿಯ ಕಾಲ ತೋರಿಸಿಕೊಟ್ಟಿತು.
ಪಂಡಿತ ತಾರಾನಾಥ್ ಅವರ ‘ಪ್ರೇಮ’ ಮತ್ತು ಶಿವರಾಮ ಕಾರಂತರ ‘ವಸಂತ’ ಪತ್ರಿಕೆಗಳು ಕನ್ನಡ ಸಾಹಿತ್ಯದ ಆಸಕ್ತಿಯ ಕ್ಷೇತ್ರಗಳನ್ನು ವಿಸ್ತರಿಸಿದವು. ಈ ದಿಕ್ಕಿನ ಚಿಂತನೆಯನ್ನು ಗಟ್ಟಿಗೊಳಿಸಿದವು.
1918ರಲ್ಲಿ ಬೆಂಗಳೂರು ಸೆಂಟ್ರಲ್ ಕಾಲೇಜು ಕನ್ನಡ ಸಂಘ, ಎ.ಆರ್.ಕೃಷ್ಣಶಾಸ್ತ್ರಿಗಳ ನೇತೃತ್ವದಲ್ಲಿ ಆರಂಭಿಸಿದ ‘ಪ್ರಬುದ್ಧ ಕನರ್ಾಟಕ’ ಸಾಹಿತ್ಯಪತ್ರಿಕೆಗಳ ಇತಿಹಾಸದಲ್ಲಿ ಮಹತ್ವದ ಬೆಳವಣಿಗೆಯೊಂದನ್ನು ಘೋಷಿಸಿತು. ಈ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಕತೆ, ಕವಿತೆ, ವಿಮಶರ್ೆ, ವಿದ್ವತ್ಪೂರ್ಣ ಬರಹಗಳು ಪತ್ರಿಕೆಗೆ ಮಾತ್ರವಲ್ಲದೆ ಕನ್ನಡ ಸಾಹಿತ್ಯಕ್ಕೂ ಹೊಸ ಹೊಳಪನ್ನು ನೀಡದವು. ತಮ್ಮದೊಂದು ಬರಹ ಈ ಪತ್ರಿಕೆಯಲ್ಲಿ ಕಾಣಿಸಿದರೆ ಲೇಖಕ ಧನ್ಯತಾಭಾವ ಪಡೆಯುವಂಥ ಸನ್ನಿವೇಶವನ್ನೂ ‘ಪ್ರಬುದ್ಧ ಕಣರ್ಾಟಕ’ ಸೃಷ್ಟಿಸಿತು. ಮೈಸೂರು ವಿಶ್ವವಿದ್ಯಾಲಯದ ಈ ತ್ರೈಮಾಸಿಕ ಮುಂದೆ ಅನೇಕ ವರ್ಷಗಳ ಕಾಲ ತನ್ನ ಪ್ರಖರತೆಯನ್ನು ಕಾಯ್ದುಕೊಂಡಿತ್ತು. ಕನರ್ಾಟಕ ವಿಶ್ವವಿದ್ಯಾಲಯದ ‘ಕನರ್ಾಟಕ ಭಾರತಿ’, ಬೆಂಗಳೂರು ವಿಶ್ವವಿದ್ಯಾಲಯದ ‘ಸಾಧನೆ’ ಪತ್ರಿಕೆಗಳ ಹುಟ್ಟಿಗೂ ಇದು ಪ್ರೇರಕವಾಗಿತ್ತು. ಈಗಲೂ ‘ಪ್ರಬುದ್ಧ ಕನರ್ಾಟಕ’ ಪ್ರಕಟವಾಗುತ್ತಿದೆ. ಆದರೆ ಅದರ ಹೊಳಪು ಮಾಸಿ ಎಷ್ಟೋ ವರ್ಷಗಳು ಸಂದಿವೆ.
ಇಲ್ಲಿಯೇ ಹೆಸರಿಸಬಹುದಾದ ಇನ್ನೊಂದು ಪತ್ರಿಕೆ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ‘ಜೀವನ.’ 25 ವರ್ಷಗಳಷ್ಟು ಕಾಲ ಕ್ರಿಯಾಶಾಲಿಯಾಗಿದ್ದ ಈ ಸಾಹಿತ್ಯಕ ಪತ್ರಿಕೆಯ ಕೊಡುಗೆ ಅಪಾರ. ಮಾಸ್ತಿಯವರ ಆಯ್ಕೆ, ಅಭಿರುಚಿ, ವಿಭಿನ್ನ ಆಸಕ್ತಿಗಳು, ನೋಟಗಳು ಕನ್ನಡ ಸಾಹಿತ್ಯ ಸಮೃದ್ಧಿಗೊಳ್ಳಲು ಅರ್ಥಪೂರ್ಣ ಕೊಡುಗೆ ನೀಡಿದವು.
ಕೇವಲ ಕಥೆಗಳ ಪ್ರಕಟಣೆಗೆಂದೇ ಆರಂಭವಾದ ‘ಕಥಾಂಜಲಿ’ ಹೆಸರಾಂತ ಕಾದಂಬರಿಕಾರ ಅ.ನ.ಕೃಷ್ಣರಾಯರ ಕೊಡುಗೆ. ಅನೇಕ ಹೊಸ ಕತೆಗಾರರನ್ನು ಬೆಳಕಿಗೆ ತಂದ ಶ್ರೇಯಸ್ಸು ಈ ‘ಕಥಾಂಜಲಿ’ಗೆ ಸಲ್ಲುತ್ತದೆ. ಇದೇ ಮಾರ್ಗದಲ್ಲಿ ಮುಂದೆ ‘ಕಥಾಕುಂಜ’, ‘ಕಥಾ ಚಂದ್ರಿಕೆ’, ‘ಕಥಾವಳಿ’, ‘ಕಥಾ ಸಂಗ್ರಹ’, ‘ಕತೆಗಾರ’, ‘ಕಥಾ ಕುಸುಮಾವಳಿ’, ‘ಕಥಾಪ್ರೇಮಿ’ ಮೊದಲಾದ ಸಾಹಿತ್ಯಪತ್ರಿಕೆಗಳು ಕಥೆಗಳನ್ನೇ ಕೇಂದ್ರ ಮಾಡಿಕೊಂಡು ಪ್ರಕಟವಾದವು.
ಉತ್ತರ ಕನ್ನಡ ಜಿಲ್ಲೆಯ, ಅಮ್ಮೆಂಬಳ ಆನಂದ ಅವರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ವಾರಪತ್ರಿಕೆ ‘ಜನ ಸೇವಕ’ದ (1955-71) ಬರಹಗಳು (ವಿಶೇಷವಾಗಿ ದಿನಕರ ದೇಸಾಯಿ ಮತ್ತು ಗೌರೀಶ ಕಾಯ್ಕಿಣಿ) ಸಾಹಿತ್ಯದ ಚಿಂತನಾ ದ್ರವ್ಯವನ್ನು ಗಟ್ಟಿಗೊಳಿಸುವಂತಿದ್ದವು.
3
ಆಧುನಿಕ ಕನ್ನಡ ಸಾಹಿತ್ಯದಲ್ಲಿ ಈಗ ನಾವು ಪ್ರಧಾನವಾಗಿ ಗುರುತಿಸುತ್ತಿರುವ ಪ್ರಮುಖ ಸಾಹಿತ್ಯಕ ಚಳವಳಿಗಳ ಹುಟ್ಟಿಗೆ ಈ ಕಿರುಪತ್ರಿಕೆಗಳು ಪ್ರಮುಖ ಪ್ರೇರಣೆಯಾಗಿ ಕೆಲಸಮಾಡಿರುವುದನ್ನು ನೋಡಬಹುದಾಗಿದೆ. ನವೋದಯದ ಹುಟ್ಟಿಗೆ ಆಧುನಿಕ ಶಿಕ್ಷಣ ಪದ್ಧತಿ, ಇಂಗ್ಲಿಷ್ ಭಾಷೆಯ ಮೂಲಕ ಮೂಡಿದ ಎಚ್ಚರ ಕಾರಣವಾಗಿರುವಂತೆ, ಈ ಎಚ್ಚರ ಮೂಡಿಸಲು ಶ್ರಮಿಸಿದ ಸಾಹಿತ್ಯಪತ್ರಿಕೆಗಳು ಕೂಡಾ ಪ್ರಮುಖ ಕೊಡುಗೆಯನ್ನು ನೀಡಿವೆ. ಹೊಸ ಚಿಂತನೆಯ ಫಲವಾದ ನಮ್ಮ ಸಂಸ್ಕೃತಿಯ ಬೇರುಗಳನ್ನು ಹುಡುಕುವುದು, ನಮ್ಮ ಅಸ್ತಿತ್ವವನ್ನು ಹೊಸ ಬೆಳಕಿನಲ್ಲಿ ಕಟ್ಟಿಕೊಳ್ಳುವುದು, ಅನ್ಯ ಭಾಷೆಯಲ್ಲಿ ಆಗುತ್ತಿದ್ದ ಬೆಳವಣಿಗೆಗಳನ್ನು ಅರಿಯುವುದು, ಹೊಸ ಹೊಸ ಚಿಂತನೆಗಳನ್ನು ನಮ್ಮ ಭಾಷೆಗೆ ತಂದುಕೊಳ್ಳುವುದು ಇತ್ಯಾದಿ ಮಹತ್ವದ ಕಾರ್ಯಗಳಲ್ಲಿ ಸಾಹಿತ್ಯ ಪತ್ರಿಕೆಗಳು ಪ್ರಮುಖ ಪಾತ್ರವಹಿಸಿದವು. ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಮುಖ್ಯ ವಾಗ್ವಾದಗಳನ್ನು ಹುಟ್ಟುಹಾಕುವ ಮೂಲಕ ನಮ್ಮ ಚಿಂತನೆಯನ್ನು ನಿದರ್ೇಶಿಸುವ ಕಾರ್ಯವನ್ನೂ ಈ ಸಾಹಿತ್ಯಪತ್ರಿಕೆಗಳು ಸಮರ್ಥವಾಗಿಯೇ ಮಾಡಿವೆ. ನವೋದಯ ಸಂದರ್ಭದಲ್ಲಿ ‘ಜೀವನ’ ಪತ್ರಿಕೆಯಲ್ಲಿ ನಡೆದ ಒಂದು ಮುಖ್ಯ ಸಂವಾದವನ್ನೇ ಇದಕ್ಕೆ ಉದಾಹರಣೆಯಾಗಿ ನೋಡಬಹುದು. ಕುವೆಂಪು ಅವರ ಹೊಸ ನಾಟಕ ‘ಶೂದ್ರ ತಪಸ್ವಿ’ ಯನ್ನು ವಿಮರ್ಶಿಸುವ ಸಂದರ್ಭದಲ್ಲಿ ಹುಟ್ಟಿಕೊಂಡ ಈ ಸಂವಾದ ಹೊಸ ಸಾಂಸ್ಕೃತಿಕ ಚರ್ಚೆಗೆ, ಚಿಂತನೆಗೆ ದಾರಿಮಾಡಿಕೊಟ್ಟಿತು. ನಮ್ಮ ಪ್ರಾಚೀನ ಕತೆಗಳನ್ನು, ಪುರಾಣಗಳನ್ನು ಹೇಗೆ ಗ್ರಹಿಸಬೇಕು; ಅವುಗಳನ್ನು ಹೊಸ ಕಾಲಸಂದರ್ಭಕ್ಕೆ ಹೇಗೆ ಅಳವಡಿಸಿಕೊಳ್ಳಬೇಕು ಎನ್ನುವ ಮಹತ್ವದ ಪ್ರಶ್ನೆಗಳನ್ನು ಈ ಸಂವಾದ ಎತ್ತಿತು. ಹಾಗೆಯೇ ವರ್ಣವ್ಯವಸ್ಥೆಯನ್ನು ತೀಕ್ಷ್ಣವಾಗಿ ವಿಮರ್ಶೆಗೆ ಒಳಪಡಿಸುವ ವೈಚಾರಿಕ ನಿಲುವನ್ನೂ ಹುಟ್ಟುಹಾಕಿತು. ನಮ್ಮ ಸಂಸ್ಕೃತಿಯ, ಪರಂಪರೆಯ ದೃಷ್ಟಿಯಿಂದ ಈ ಪುರಾಣ ಕತೆಗಳಿಗೆ ಮಹತ್ವವಿದೆಯಾದರೂ, ಅವುಗಳನ್ನು ಹೊಳಪುಗೊಳಿಸಬೇಕಾದರೆ, ಈ ಪುರಾಣ ಕತೆಗಳ ಸುತ್ತ ಸೇರಿಕೊಂಡಿರುವ ಕಶ್ಮಲವನ್ನು ತೆಗೆದುಹಾಕಬೇಕು ಎಂಬ ನಿಲುವನ್ನು ಕುವೆಂಪು ಪ್ರಕಟಿಸಿದರು. ಅವರ ‘ಶೂದ್ರ ತಪಸ್ವಿ’ ನಾಟಕ ರಚನೆಯ ಪ್ರಯತ್ನವೇ ಈ ನಿಲುವಿನ ಫಲ. ಹೀಗೆ ಪುರಾಣ ಕತೆಯನ್ನು ಬದಲಿಸುವ ಕ್ರಮವನ್ನು ಮಾಸ್ತಿ ವಿರೋಧಿಸಿದರು. ಇದು ಬಹುದೊಡ್ಡ ವಾದ-ವಿವಾದಕ್ಕೆ ಎಡೆಮಾಡಿಕೊಟ್ಟಿತು. ಈ ವಿವಾದದ ಮುಖ್ಯ ಪ್ರಯೋಜನವೆಂದರೆ ಭಾರತೀಯ ವರ್ಣವ್ಯವಸ್ಥೆಯಲ್ಲಿನ ಪುರೋಹಿತಶಾಹಿಯನ್ನು ಗುರುತಿಸಿದ್ದು ಮತ್ತು ಕಟುವಾಗಿ ಟೀಕಿಸಿದ್ದು. ಮುಂದೆ ಹುಟ್ಟಿಕೊಂಡ ಶೂದ್ರ-ಬ್ರಾಹ್ಮಣದ ಚರ್ಚೆಯ ಬೀಜ ಇಲ್ಲಿಯೇ ಇರುವುದನ್ನು ಗಮನಿಸಬಹುದು.
1930ರ ದಶಕದ ಉತ್ತರಾರ್ಧದಲ್ಲಿ ಸಾಮಾಜಿಕ ಮತ್ತು ರಾಜಕೀಯ ಚಿಂತನೆಯ ಮೂಲಕ ಭಾರತವನ್ನು ಪ್ರವೇಶಿಸಿದ ಹೊಸ ಚಿಂತನೆಯೊಂದು ಪ್ರಗತಿಶೀಲ ಚಳವಳಿಗೆ ಕಾರಣವಾದದ್ದು ಕನ್ನಡ ಸಾಹಿತ್ಯ ಚರಿತ್ರೆಯ ಇನ್ನೊಂದು ಘಟ್ಟವನ್ನು ಸೂಚಿಸುತ್ತದೆ. ಇದು ನವೋದಯದ ಭ್ರಮಾತ್ಮಕತೆ, ಸೋಗಲಾಡಿತನ, ಹುಸಿ ಆದರ್ಶಗಳನ್ನು ತಿರಸ್ಕರಿಸಿ ಕಟು ವಾಸ್ತವಕ್ಕೆ ಮುಖಮಾಡಿ ತನ್ನನ್ನು ರೂಪಿಸಿಕೊಳ್ಳಲು ನೋಡಿತು. ಬೆಳಗಾವಿ ರಾಮಚಂದ್ರ ರಾಯರ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿದ್ದ ‘ಜಯಕನರ್ಾಟಕ’ದ ಒಂದು ಸಂಚಿಕೆಯಲ್ಲಿ (1938ರಲ್ಲಿ) ಪ್ರಕಟವಾದ ಸಂಪಾದಕೀಯ ಪ್ರಗತಿಶೀಲ ಚಿಂತನೆಯನ್ನು ದಿಕ್ಕನ್ನು ನಿರ್ದೇಶಿಸುವಂತಿದೆ. ‘ನಮ್ಮ ಸಾಹಿತ್ಯ, ಸಂಸ್ಕೃತಿ, ಕಲೆಗಳು ಕುಡಿಯೊಡೆಯಬೇಕಾಗಿರುವುದು ದುಡಿಯುವ ವರ್ಗದ ಮಧ್ಯದಿಂದಲೇ’ ಎನ್ನುವ ಈ ಸಂಪಾದಕೀಯ ನಮ್ಮ ಸಾಹಿತ್ಯದ ಕೇಂದ್ರವನ್ನು ಬದಲಾಯಿಸಲು ಪುಸಲಾಯಿಸುತ್ತದೆ. ಮುಂದೆ ಪ್ರಗತಿಶೀಲ ಚಳವಳಿ ಹುಟ್ಟಿಕೊಂಡದ್ದು, ದುಡಿಯುವ ವರ್ಗವನ್ನು ಕೇಂದ್ರ ಮಾಡಿಕೊಂಡು ಸಾಹಿತ್ಯ ಅರಳಿದ್ದು ಕೇವಲ ಆಕಸ್ಮಿಕವಲ್ಲ. ಪ್ರಗತಿಶೀಲ ಚಿಂತನೆಗೆ, ಸಾಹಿತ್ಯಕ್ಕೆ, ಬರಹಗಾರರಿಗೆ ಬೆಂಬಲವಾಗಿ ನಿಲ್ಲುವಂತೆ ಅನೇಕ ಪತ್ರಿಕೆಗಳು ಹುಟ್ಟಿಕೊಂಡವು. ಪ್ರಗತಿಶೀಲ ಚಳವಳಿ ಕನ್ನಡದಲ್ಲಿ ಓದುಗರ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿತು. ಮಾರ್ಕ್ಸ್ ವಾದ ‘ವರ್ಗಪ್ರಜ್ಞೆ’ಯನ್ನೇ ಕೇಂದ್ರ ಮಾಡಿಕೊಂಡ ಈ ಚಳವಳಿಯ ಬರಹಗಾರರು ಸಾಹಿತ್ಯದ ಸಂಕೀರ್ಣ ಸ್ವರೂಪವನ್ನು ಅನ್ವೇಷಿಸುವ ದಿಕ್ಕಿನಲ್ಲಿ ಕ್ರಿಯಾಶೀಲವಾಗದೆ, ಮಾರ್ಕ್ಸ್ವಾದವನ್ನು ಸರಳ ಸೂತ್ರಕ್ಕೆ, ವ್ಯಾಖ್ಯೆಗೆ ಒಗ್ಗಿಸುವಂತೆ ಸಾಹಿತ್ಯವನ್ನು ಸೃಷ್ಟಿಸಹೊರಟದ್ದು ಈ ಚಳವಳಿಯ ದೊಡ್ಡ ಮಿತಿಯಾಯಿತು; ಈ ಚಳವಳಿಯ ಅಂತ್ಯಕ್ಕೂ ಕಾರಣವಾಯಿತು.
4
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಬಹಳ ಮುಖ್ಯ ಘಟ್ಟವಾಗಿ, ಸುದೀರ್ಘ ಕಾಲ ತನ್ನ ಪ್ರಭಾವವನ್ನು ಉಳಿಸಿಕೊಂಡ ಚಳವಳಿಯಾಗಿ, ಅನೇಕ ಪಲ್ಲಟಗಳಿಗೆ ಕಾರಣವಾದದ್ದು ನವ್ಯ ಚಳವಳಿ. ಪಾಶ್ಚಾತ್ಯ ಚಿಂತನೆಯನ್ನೇ ಪ್ರಧಾನವಾಗಿ ಆಧರಿಸಿದ ಈ ಚಳವಳಿ ಪ್ರಗತಿಶೀಲ ಚಳವಳಿಯ ಅನೇಕ ಪೊಳ್ಳು ಬೆಲೂನುಗಳಿಗೆ ‘ನಿಜದ ಸೂಜಿಮೊನೆ’ಯನ್ನು ತಾಗಿಸಿ ವಾಸ್ತವವನ್ನು ನೋಡಲು ಹವಣಿಸಿತು. ಸಾಹಿತ್ಯ ಕೃತಿಗಳ ‘ಶಿಲ್ಪ ಸೌಂದರ್ಯ’, ವಿವಿಧ ಅಂಗಗಳ ಒಟ್ಟಂದದ ‘ಸಮಗ್ರೀಕರಣ ಬಲ’, ಸಂಕೇತ ರೂಪಕಗಳ ಬಳಕೆ, ಆಡುಮಾತಿನ ಲಯವಿನ್ಯಾಸ, ಭಾಷೆಯ ಸ್ಪಟಿಕ ಸ್ಪಷ್ಟತೆ ಇತ್ಯಾದಿ ಹಲವು ಅಂಶಗಳ ಮೇಲೆ ಕ್ರಿಯಾಶೀಲವಾಗಿ ‘ಅನುಭವದ ಪ್ರಾಮಾಣಿಕತೆ’ಯನ್ನು ಕಂಡುಕೊಳ್ಳಲು ಹವಣಿಸಿತು. ಪಾಶ್ಚಾತ್ಯ ಪ್ರಭಾವದಿಂದಾಗಿ ತಾನು ದಕ್ಕಿಸಿಕೊಂಡ ಹೊಸ ಸಂವೇದನೆಯೊಂದನ್ನು ಕನ್ನಡಕ್ಕೆ ಕಸಿ ಮಾಡುವ ಪ್ರಯತ್ನಕ್ಕೂ ನವ್ಯ ಚಳವಳಿ ಕೈಹಾಕಿತು. ನವ್ಯ ಚಳವಳಿಯ ನೇತಾರರಾದ ಪ್ರೊ.ಎಂ.ಗೋಪಾಲಕೃಷ್ಣ ಅಡಿಗರು ಈ ಸಂವೇದನೆಯನ್ನು, ಹೊಸ ಅಭಿರುಚಿಯನ್ನು ರೂಪಿಸುವುದಕ್ಕಾಗಿಯೇ ‘ಸಾಕ್ಷಿ’ ತ್ರೈಮಾಸಿಕವನ್ನು ಪ್ರಕಟಿಸಿದರು. ಆರಂಭದಲ್ಲಿ ಕಾಲಮಿತಿಗೆ ಬದ್ಧವಾಗದ ಈ ಸಾಹಿತ್ಯಪತ್ರಿಕೆ ಮೂರ್ನಾಲ್ಕು ಸಂಚಿಕೆಗಳ ನಂತರ ವ್ಯವಸ್ಥಿತವಾಗಿ, ಕಾಲಬದ್ಧವಾಗಿ ತನ್ನ ಪ್ರಕಟಣೆಯನ್ನು ಆರಂಭಿಸಿತು (1967). ಮಲೆನಾಡ ಪುಟ್ಟ ಹಳ್ಳಿಯಾದ ಹೆಗ್ಗೋಡಿನಿಂದಲೇ ಪ್ರಕಟವಾಗುತ್ತಿದ್ದ ಈ ಕಿರುಪತ್ರಿಕೆಯ ಪ್ರಕಾಶಕರಾಗಿ ಹೆಗ್ಗೋಡಿನ ಕೆ.ವಿ.ಸುಬ್ಬಣ್ಣನವರು ನಿಂತದ್ದು, ಈ ಪತ್ರಿಕೆಗೊಂದು ಗಟ್ಟಿ ನೆಲೆಯನ್ನು ಒದಗಿಸಿಕೊಟ್ಟಿತು; ಹಾಗೆಯೇ ಹೆಗ್ಗೋಡಿಗೆ ಹೊಸ ಆಯಾಮವನ್ನೂ ತಂದುಕೊಟ್ಟಿತು. (ಮುಂದೆ ಹೆಗ್ಗೋಡಿನ ‘ನೀನಾಸಂ’ ಕನರ್ಾಟಕದ ಮುಖ್ಯ ಸಾಂಸ್ಕೃತಿಕ ಕೇಂದ್ರವಾಗಿ ಅರಳಿದ್ದು ಮಹತ್ವದ ಬೆಳವಣಿಗೆ.)
‘ಸಾಕ್ಷಿ’ಯ ಹುರುಪು ಮತ್ತು ಅಡಿಗರ ತಂಡದ ಉತ್ಸಾಹ ಕನ್ನಡದ ಮಟ್ಟಿಗೆ ಬಹುದೊಡ್ಡ ಬೆಳವಣಿಗೆಯಾಗಿತ್ತು. ಇದು ಹೊಸ ಸಂವೇದನೆಯನ್ನು ಗಟ್ಟಿಗೊಳಿಸಲು ನೋಡಿತು. ಹೊಸ ಸಂವೇದನೆಯ ನಾಟಕಗಳು, ಕತೆ, ಕಾದಂಬರಿಗಳು, ವಿಮರ್ಶಾ ಲೇಖನಗಳು, ಅಸ್ವಿತ್ವವಾದದ ಚಿಂತನೆಗಳು, ಸಂವಾದಗಳು ಹುಟ್ಟಿಕೊಂಡದ್ದು ಈ ಅವಧಿಯಲ್ಲಿಯೇ. ಸರಿಸುಮಾರು ಇದೇ ಕಾಲಘಟ್ಟದಲಿ ಆರಂಭವಾದ ಸಂಕ್ರಮಣ (ಚಂದ್ರಶೇಖರ ಪಾಟೀಲ, ಸಿದ್ಧಲಿಂಗ ಪಟ್ಟಣಶೆಟ್ಟಿ ಮತ್ತು ಗಿರಡ್ಡಿ ಗೋವಿಂದರಾಜ-ಸಂಪಾದಕರು), ಲಹರಿ (ಬಿ.ಎನ್.ಶ್ರೀರಾಮ ಮತ್ತು ಕೆ.ಪಿ.ಪೂರ್ಣಚಂದ್ರ ತೇಜಸ್ವಿ), ಕವಿತಾ (ಬಾ.ಕಿ.ನಾ.-ಸಂ. ಬೆಂಗಳೂರು), ಮುಕ್ತ (ಟಿ.ಎನ್. ಸೀತಾರಾಂ ಮೊದಲಾದವರು) ಮನ್ವಂತರ (ಕೀರ್ತಿನಾಥ ಕುರ್ತಕೋಟಿ ಮತ್ತು ಜಿ.ಬಿ.ಜೋಶಿ,ಮನೋಹರ ಗ್ರಂಥಮಾಲಾ, ಧಾರವಾಡ), ಸಮೀಕ್ಷಕ (ಶ್ರೀಕೃಷ್ಣ ಆಲನಹಳ್ಳಿ-ಸಂ), ಸಂಕೀರ್ಣ (ಸೆಂಟ್ರಲ್ ಕಾಲೇಜು ಕನ್ನಡ ಸಂಘ, ಬೆಂಗಳೂರು), ಅಜಂತ (ಕಾಸರಗೋಡು, ಎಂ.ವ್ಯಾಸ-ಸಂ), ಪ್ರಜ್ಞೆ (ಮಾಧವ ಕುಲಕಣರ್ಿ, ಧಾರವಾಡ), ಸಾಧನೆ(ಬೆಂಗಳೂರು ವಿವಿ), ಅಕಾವ್ಯ( ಚಂದ್ರಶೇಖರ ಕಂಬಾರ), ಪ್ರತೀಕ (ರಾಯಚೂರು, ಶಾಂತರಸ-ಸಂ) ಮೊದಲಾದ ಸಾಹಿತ್ಯಪತ್ರಿಕೆಗಳು ಈ ಚಳವಳಿಯನ್ನು ಬೆಳೆಸಲು ಶ್ರಮಿಸಿದವು. ಇದೆಲ್ಲದರ ಫಲವಾಗಿ ಹೊಸ ಸಂವೇದನೆಯೊಂದನ್ನು ಕನ್ನಡಕ್ಕೆ ತರುವ ಪ್ರಯತ್ನ ಬಹಳ ಜೋರಾಗಿಯೇ ನಡೆಯಿತು.
ಹೊಸ ಸಂವೇದನೆಯ ಎಲ್ಲ ಚಿಂತನೆಗಳು, ಅಭಿವ್ಯಕ್ತಿಗಳು ಪ್ರಕಟವಾಗುತ್ತಿದ್ದ ಸಾಕ್ಷಿ ಮತ್ತು ಸಂಕ್ರಮಣ ಪತ್ರಿಕೆಗಳಲ್ಲಿ ಹೊಸ ಪದ್ಯಗಳನ್ನು, ಕತೆ, ಕಾದಂಬರಿಗಳನ್ನು ಅಥರ್ೈಸಿಕೊಳ್ಳಲು ಅಗತ್ಯವಾದ ವಿಮಶರ್ೆ ಕೂಡಾ ಪ್ರಕಟವಾಗುತ್ತಿತ್ತು. ಆ ಕಾಲದ ಸಂವಾದಗಳಂತೂ ಸಾಂಸ್ಕೃತಿಕವಾಗಿ ಮಹತ್ವದ ಪ್ರಶ್ನೆಗಳನ್ನೇ ಎತ್ತುತ್ತಿದ್ದವು. ಕೀತರ್ಿನಾಥ ಕುರ್ತಕೋಟಿಯವರ ಮಾರ್ಗದರ್ಶನದಲ್ಲಿ ಪ್ರಕಟವಾಗುತ್ತಿದ್ದ ಮನ್ವಂತರ ವರ್ಷದಲ್ಲಿ ಎರಡೇ ಸಂಚಿಕೆಗಳನ್ನು ಪ್ರಕಟಿಸುತ್ತಿದ್ದರೂ ಆ ಸಂಚಿಕೆಗಳಲ್ಲಿದ್ದ ಲೇಖನಗಳು ನವ್ಯ ಚಳವಳಿಯನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದವು.
ನವ್ಯ ಚಳವಳಿಗೆ, ಹೊಸ ಅಭಿವ್ಯಕ್ತಿ ವಿಧಾನಕ್ಕೆ ಪೂರಕವಾಗಿ ದುಡಿದ ಧಾರವಾಡದ ಮನೋಹರ ಗ್ರಂಥಮಾಲೆ ಮತ್ತು ಹೆಗ್ಗೋಡಿನ ಅಕ್ಷರ ಪ್ರಕಾಶನ ಹೊಸ ಸಂವೇದನೆಯ ಬಹುಮುಖ್ಯ ಕೃತಿಗಳನ್ನು ಪ್ರಕಟಿಸಿದವು. ಪಿ.ಲಂಕೇಶರು ಸಂಪಾದಿಸಿದ, ಅಕ್ಷರ ಪ್ರಕಾಶನ ಪ್ರಕಟಿಸಿದ ‘ಅಕ್ಷರ ಹೊಸಕಾವ್ಯ’ ಕೂಡಾ ಈ ಸಂವೇದನೆಯ ಸ್ಪಷ್ಟ ರೂಪರೇಷೆಗಳನ್ನು ತೋರಿಸಿಕೊಟ್ಟಿತು.
ಕಿರುಪತ್ರಿಕೆಗಳು, ಪ್ರಕಾಶನ, ನಾಟಕ, ಸಿನಿಮಾ, ಪೇಂಟಿಂಗ್ ಹೀಗೆ ವಿಭಿನ್ನ ಮಾಧ್ಯಮಗಳಲ್ಲಿ ತನ್ನ ಅಭಿವ್ಯಕ್ತಿಯನ್ನು ಕಂಡುಕೊಂಡ ನವ್ಯಚಳವಳಿ ಗಾಢ ಪರಿಣಾಮವನ್ನು ಬೀರುವಂಥ ಶಕ್ತಿಯನ್ನು ಪಡೆದುಕೊಂಡಿತು.
ಈ ಸಾಹಿತ್ಯ ಪತ್ರಿಕೆಗಳು ಎಷ್ಟು ಪ್ರಭಾವಶಾಲಿಯಾಗಿದ್ದವೆಂದರೆ, ಸಾಕ್ಷಿ, ಸಂಕ್ರಮಣಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹೊಸ ಮುಖಗಳಿಗೆ ಅತ್ಯಧಿಕ ಪ್ರಸಾರದ ಪತ್ರಿಕೆಗಳಲ್ಲೂ ಜಾಗ ಸಿಕ್ಕುತ್ತಿತ್ತು. ವಾಸ್ತವವಾಗಿ ದೊಡ್ಡ ಪತ್ರಿಕೆಗಳು ಈ ಸಾಹಿತ್ಯಪತ್ರಿಕೆಗಳನ್ನು ಒಂದು ಮಾನದಂಡವಾಗಿ ಬಳಸಿಕೊಂಡು ಕತೆ, ಕವಿತೆ, ವಿಮರ್ಶೆಗಳನ್ನು ಪ್ರಕಟಿಸುತ್ತ, ಹೊಸ ಹೊಸ ವಾಗ್ವಾದಗಳನ್ನು, ಅರ್ಥಪೂರ್ಣ ಸಂವಾದಗಳನ್ನು ಹುಟ್ಟುಹಾಕುತ್ತಿದ್ದವು. ಇದರ ಫಲವಾಗಿ ಹೊಸ ಅಭಿವ್ಯಕ್ತಿ ಕನ್ನಡ ನಾಡಿನ ವ್ಯಾಪ್ತಿಯನ್ನು ಪಡೆದುಕೊಳ್ಳುತ್ತಿತ್ತು. ಇದು ಈ ಚಳವಳಿಯ ಒಂದು ಮುಖವಾದರೆ, ನವ್ಯದಿಂದ ಭಿನ್ನವಾದ ಧ್ವನಿಗಳು ಉಳಿದುಕೊಳ್ಳುವುದೇ ಕಷ್ಟವಾದ ಪರಿಸ್ಥಿತಿ ನಿರ್ಮಾಣವಾದದ್ದು ಅದರ ಇನ್ನೊಂದು ಮುಖವನ್ನು ಕಾಣಿಸುತ್ತದೆ.
5
1970 ಮತ್ತು 80ರ ದಶಕಗಳ ಬೆಳವಣಿಗೆಗಳು ಕನರ್ಾಟಕದ ಚರಿತ್ರೆಯಲ್ಲಿ ಬಹಳ ಪ್ರಮುಖವಾದ ಸ್ಥಾನವನ್ನು ಪಡೆದುಕೊಂಡಿವೆ. ತೀರ ಮಹತ್ವದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಚಿಂತನೆಗಳು, ಚಳವಳಿಗಳು, ರಾಜಕೀಯ ಪಲ್ಲಟಗಳು ಈ ಕಾಲಾವಧಿಯಲ್ಲಿ ನಡೆದವು. ಗಾಂಧೀ ಮತ್ತು ಲೋಹಿಯಾ ಚಿಂತನೆಗಳು ಕರ್ನಾಟಕವನ್ನು ಅರ್ಥಪೂರ್ಣವಾಗಿ ಪ್ರಭಾವಿಸಿದ 70ರ ದಶಕವಂತೂ ಕರ್ನಾಟಕದ ಸಾಂಸ್ಕೃತಿಕ ಬದುಕಿನಲ್ಲಿ ಮರೆಯಲಾಗದ ಅಧ್ಯಾಯ. ಪ್ರೊ. ಎಂ.ಡಿ.ನಂಜುಂಡಸ್ವಾಮಿ, ಪೂರ್ಣಚಂದ್ರ ತೇಜಸ್ವಿ, ಲಂಕೇಶ್, ಅನಂತಮೂರ್ತಿ, ಚಂದ್ರಶೇಖರ ಪಾಟೀಲ, ದೇವನೂರ ಮಹಾದೇವ ಮೊದಲಾದವರು ಲೋಹಿಯಾರ ಚಿಂತನೆಗಳ ಆಳಕ್ಕೆ ಇಳಿಯಲು ನೋಡಿದ್ದು, ಅದರ ಫಲವಾಗಿ ಅನೇಕ ಮುಖ್ಯ ಸಂವಾದಗಳು ಹುಟ್ಟಿಕೊಂಡದ್ದು ಕನ್ನಡ ಸಾಹಿತ್ಯದ ಮೇಲೂ ಅಗಾಧ ಪರಿಣಾಮಕ್ಕೆ ಕಾರಣವಾಯಿತು. ಇದು ಸಾಹಿತ್ಯದ ದಿಗಂತಗಳನ್ನು ವಿಸ್ತರಿಸಿತು. ಶೂದ್ರ-ಬ್ರಾಹ್ಮಣ ಚರ್ಚೆ ಸೇರಿದಂತೆ ಹಲಬಗೆಯ ಸಂವಾದಗಳು, ಭಾಷೆಯನ್ನು ಕುರಿತಾದ ಚಿಂತನೆಗಳು, ಸಾಮಾಜಿಕ-ರಾಜಕೀಯ ಚಿಂತನೆಗಳನ್ನು ಪಲ್ಲಟಿಸುವ ವೈಚಾರಿಕ ವಾಗ್ವಾದಗಳು ಪ್ರಖರವಾದದ್ದು ಈ ದಶಕದಲ್ಲಿಯೇ. ನವ್ಯ ಸಾಹಿತ್ಯದ ಮಿತಿಗಳನ್ನು ಕಂಡುಕೊಂಡ ಅನೇಕ ಲೇಖಕರು ನವ್ಯದ ಮಿತಿಗಳನ್ನು ದಾಟಿ ತಮ್ಮ ಬಾಹುಗಳನ್ನು ವಿಸ್ತರಿಸಿಕೊಳ್ಳಲು ನೋಡಿದರು. ಜಾತಿ ವಿನಾಶ ಸಮ್ಮೇಳನ, ಮೈಸೂರಿನಲ್ಲಿ ನಡೆದ (1974) ಕನರ್ಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟದ ಸಮ್ಮೇಳನ, ಅದನ್ನು ಉದ್ಘಾಟಿಸಿ ಕುವೆಂಪು ಆಡಿದ ಹರಿತವಾದ ಮಾತುಗಳು, ‘ಬೂಸಾ ಸಾಹಿತ್ಯ’ವನ್ನು ಕುರಿತು ಸಚಿವರಾಗಿದ್ದ ಬಸವಲಿಂಗಪ್ಪ ಅವರು ಮಾಡಿದ ಟೀಕೆ ಮತ್ತು ಅದಕ್ಕೆ ಮೂಡಿಬಂದ ವಿರೋಧ ಇತ್ಯಾದಿ ಅನೇಕ ಬೆಳವಣಿಗೆಗಳು ಆ ದಶಕದ ಕೊನೆಯ ಹೊತ್ತಿಗೆ ಬಂಡಾಯ ದಲಿತ ಚಳವಳಿಯ ಹುಟ್ಟಿಗೂ ಕಾರಣವಾಯಿತು. ನವ್ಯರು ಪ್ರತಿಪಾದಿಸಿದ್ದ ಮೌಲ್ಯಗಳು ಮತ್ತು ಮಾನದಂಡಗಳು ಕಟು ಟೀಕೆಗೆ ಒಳಗಾದವು. ಸಾಹಿತ್ಯದ ಪರಿಕಲ್ಪನೆಗಳು, ಮಾನದಂಡಗಳು ಬದಲಾದವು. ಚಿಂತನೆಯ ಹರಹು ವಿಸ್ತಾರವಾಯಿತು. ಅಡಿಗರು ಶ್ರೇಷ್ಠವೆಂದು ಭಾವಿಸಿದ್ದ ಅನೇಕ ಮೌಲ್ಯಗಳು ಮರು ಚಿಂತನೆಗೆ ಒಳಗಾದವು. ನವ್ಯರು ನೆಚ್ಚಿಕೊಂಡಿದ್ದ ‘ಸಾವಯವ ಶಿಲ್ಪದ ಸಮಗ್ರೀಕರಣ ಬಲ’ವೇ ಶಿಥಿಲವಾಗತೊಡಗಿತು. ಹೊಸ ಹೊಸ ಅನುಭವ ಲೋಕಗಳು ತೆರೆದುಕೊಳ್ಳತೊಡಗಿದವು. ಅಕ್ಷರ ಲೋಕದ ಹೊರಗೇ ಶತಶತಮಾನಗಳನ್ನು ಕಳೆದ ಅನೇಕರು ಮೊದಲ ಬಾರಿಗೆ ಅಕ್ಷರ ಲೋಕವನ್ನು ಪ್ರವೇಶಿಸಿ, ಅಖಂಡ ಆತ್ಮವಿಶ್ವಾಸದಿಂದ ತಮ್ಮ ಅನುಭವಗಳನ್ನು ಮಂಡಿಸತೊಡಗಿದರು. ಭಾಷೆ, ಅಭಿವ್ಯಕ್ತಿಯ ವಿಧಾನಗಳು, ಚಿಂತನ ಕ್ರಮಗಳು ಬದಲಾದವು. ಸಾಹಿತ್ಯ ತನ್ನ ದಿಗಂತಗಳನ್ನು ವಿಸ್ತರಿಸಿಕೊಳ್ಳತೊಡಗಿತು.
ಈ ಹೊಸ ಬೆಳವಣಿಗೆಗೆ ಪೂರಕವಾಗಿ ಅನೇಕ ಸಾಹಿತ್ಯಕ ಪತ್ರಿಕೆಗಳು ಹುಟ್ಟಿಕೊಂಡವು. ಹಳೆಯ ನೆಲೆಯಲ್ಲಿಯೇ ನಿಲ್ಲಲು ನೋಡಿದ ಕೆಲವು ಕಿರು ಪತ್ರಿಕೆಗಳು ಕಣ್ಮುಚ್ಚಿದವು; ಮತ್ತೆ ಕೆಲವು ರೂಪಾಂತರಗೊಂಡು ಹೊಸ ಎಚ್ಚರದಲ್ಲಿ ತಮ್ಮನ್ನು ಕಟ್ಟಿಕೊಳ್ಳಲು ಶ್ರಮಿಸಿದವು. ಹೊಸ ಬೆಳವಣಿಗೆಗೆ ತನ್ನನ್ನು ಒಗ್ಗಿಸಿಕೊಂಡ ಮತ್ತು ಮಹತ್ವದ ಕಾರ್ಯವನ್ನು ಮಾಡಿದ ಪ್ರಮುಖ ಕಿರುಪತ್ರಿಕೆಗಳಲ್ಲಿ ‘ಸಂಕ್ರಮಣ’ ಮುಖ್ಯವಾದದ್ದು. ಹೊಸ ಚಿಂತನೆಯನ್ನು ಮತ್ತು ಅಭಿವ್ಯಕ್ತಿಯನ್ನು ಪ್ರಕಟಿಸಲು ‘ಸಂಕ್ರಮಣ’ ಮುಖ್ಯವೇದಿಕೆಯಾಯಿತು. ದಲಿತ(1974, ಬುದ್ದಣ್ಣ ಹಿಂಗಮಿರೆ-ಧಾರವಾಡ), ನರ ಬಂಡಾಯ (ದೇವನೂರ ಮಹಾದೇವ), ಪಂಚಮ (ಕೃಷ್ಣಪ್ಪ, ದೇಮ, ಗೋವಿಂದಯ್ಯ, ರಾಮದೇವ ರಾಕೆ, ಇಂದೂಧರ ಮೊದಲಾದವರು-ಮೈಸೂರು), ಮಾನವ (ರವಿವರ್ಮ ಕುಮಾರ್ ಮತ್ತು ಪ್ರೊ. ನಂಜುಂಡಸ್ವಾಮಿ, ಬೆಂಗಳೂರು), ಶೂದ್ರ (1975-ಶೂದ್ರ ಶ್ರೀನಿವಾಸ, ಬೆಂಗಳೂರು), ಒಡನಾಡಿ (1975-ಸಂ-ಬಿ.ದಾಮೋದರ ರಾವ್), ಬದುಕು (1977-ಮಂಗ್ಳೂರ ವಿಜಯ ಮತ್ತಿತರರು-ಚಿತ್ರದುರ್ಗ), ಬಂಡಾಯ ಸಾಹಿತ್ಯ(1983-ಬರಗೂರು ರಾಮಚಂದ್ರಪ್ಪ ಮೊದಲಾದವರು) ಮೊದಲಾದ ಪತ್ರಿಕೆಗಳು ಹುಟ್ಟಿಕೊಂಡದ್ದು ಈ ಅವಧಿಯಲ್ಲಿಯೇ. ಇವುಗಳ ಹೆಸರೇ ನಮ್ಮ ಸಾಹಿತ್ಯ-ಸಂಸ್ಕೃತಿಯ ಚಿಂತನೆಗಳ ವಿಸ್ತರಣೆಯಂತೆಯೂ ಕಾಣಿಸುವುದು ಕೇವಲ ಆಕಸ್ಮಿಕವಲ್ಲ.
‘ಸಾಕ್ಷಿ’ ತನ್ನ ಪ್ರಕಟಣೆಯನ್ನು ನಿಲ್ಲಿಸಿತು. ಅನಂತಮೂರ್ತಿ ಹೊಸ ತ್ರೈಮಾಸಿಕ ‘ರುಜುವಾತು’ವನ್ನು ಆರಂಭಿಸಿದರು. ನವ್ಯದ ನೆಲೆಯನ್ನು ಅನಂತಮೂರ್ತಿ ಅವರು ಬಿಟ್ಟುಕೊಡಲಿಲ್ಲ. ಆದರೆ ತಮ್ಮ ಚಿಂತನೆಯ ದಿಕ್ಕುಗಳನ್ನು ವಿಸ್ತರಿಸಿಕೊಂಡರು; ಗಟ್ಟಿಗೊಳಿಸಿಕೊಂಡರು. ‘ರುಜುವಾತಿ’ನ ಮೂಲಕ ಅನೇಕ ಮುಖ್ಯ ವಾಗ್ವಾದಗಳು ನಡೆದವು. ಮಹತ್ವದ ಚಿಂತನೆಗಳಿಗೆ, ಸೃಜನಶೀಲ ಬರಹಗಳಿಗೆ, ಅನುವಾದಗಳಿಗೆ ‘ರುಜುವಾತು’ ವೇದಿಕೆಯಾಯಿತು. ಸ್ವತಃ ಅನಂತಮೂತರ್ಿಯವರೇ ಮಹತ್ವದ ಲೇಖನಗಳನ್ನು ‘ರುಜುವಾತಿ’ನಲ್ಲಿ ಬರೆದರು.
1970ರ ದಶಕದಲ್ಲಿ ಲಂಕೇಶರು ಸಂಪಾದಿಸಿದ ‘ಪಾಂಚಾಲಿ’ ವಿಶೇಷ ಸಂಚಿಕೆ ಮತ್ತೆ ಪ್ರಕಟವಾಗಲಿಲ್ಲವಾದರೂ, ಅದರಲ್ಲಿನ ಬರಹಗಳು, ಚಿಂತನೆಗಳು, ಹೊಸ ಹಾದಿಯನ್ನು ತೋರತೊಡಗಿದವು.
ಆಲೋಕ/ಅಂಕಣ (1979-ಪಿಪಿ ಗೆಳೆಯರ ಬಳಗ-ಬೆಂಗಳೂರು), ಸೃಜನವೇದಿ (1984-ಅರವಿಂದ ನಾಡಕಣರ್ಿ ಮತ್ತು ಡಾ.ಹೇಮಂತ ಕುಲಕಣರ್ಿ-ಮುಂಬೈ), ಅನ್ವೇಷಣೆ(1984-ಆರ್.ಜಿ.ಹಳ್ಳಿ ನಾಗರಾಜ, ಬೆಂಗಳೂರು), ಸಂವಾದ (1986-ರಾಘವೇಂದ್ರ ಪಾಟೀಲ ಮತ್ತಿತರರು-ಮಲ್ಲಾಡಿಹಳ್ಳಿ, ಚಿತ್ರದುರ್ಗ), ಭಾಷಾಲೋಕ (1986-ಎ.ಮುರಿಗೆಪ್ಪ ಮತ್ತು ಎಚ್.ಎಂ.ಮಹೇಶ್ವರಯ್ಯ-ಧಾರವಾಡ), ಕವಿಮಾರ್ಗ (ವೀರಣ್ಣ ದಂಡೆ-ಗುಲ್ಬಗರ್ಾ-1987), ಸಂಚಯ(1987-ಡಿ.ವಿ.ಪ್ರಹ್ಲಾದ್-ಬೆಂಗಳೂರು), ಅಭಿನವ (1994-ರವಿಕುಮಾರ್, ಬೆಂಗಳೂರು), ಗಾಂಧಿ ಬಜಾರ್(1988-ಕೆ.ಎನ್.ಬಾಲಕೃಷ್ಣ-ಬೆಂಗಳೂರು), ಅರಿವು-ಬರಹ (ಅರಿವು-ಬರಹ ಟ್ರಸ್ಟ್-ಕೊಣಾಜೆ, ಮಂಗಳೂರು), ಶಬ್ದಗುಣ (ವಸಂತ ಬನ್ನಾಡಿ-ಕುಂದಾಪುರ), (ಕನ್ನಡ ಅಧ್ಯಯನ- ಹಂಪಿ ವಿಶ್ವವಿದ್ಯಾಲಯ), ಅರುಹು-ಕುರುಹು (2009-ಎಚ್.ಎಸ್.ಉಮೇಶ್-ಸಂ, ಮೈಸೂರು), ಮಾತು-ಕತೆ (ನೀನಾಸಂ, ಹೆಗ್ಗೋಡು, ಶಿವಮೊಗ್ಗ), ಸಂಕುಲ (ಡಾ.ವಿಜಯಾ, ಬಿ.ಸುರೇಶ್-ಬೆಂಗಳೂರು), ಸಂಕಲನ (ಸಿದ್ಧಲಿಂಗ ಪಟ್ಟಣಶೆಟ್ಟಿ ಮತ್ತು ಹೇಮಾ ಪಟ್ಟಣಶೆಟ್ಟಿ), ಪ್ರಜಾಸಾಹಿತ್ಯ /ಪುಸ್ತಕಮನೆ (ಸಂ-ಹರಿಹರಪ್ರಿಯ-ಬೆಂಗಳೂರು), ಅಭಿವ್ಯಕ್ತಿ (ಕನರ್ಾಟಕ ಸಂಘ, ಮಂಡ್ಯ) ಇತ್ಯಾದಿ ಅನೇಕ ಪತ್ರಿಕೆಗಳು ಹುಟ್ಟಿಕೊಂಡು ಗಮನಾರ್ಹ ಕೆಲಸವನ್ನು ಮಾಡಿದವು. ಇವಗಳಲ್ಲಿ ಕೆಲವು ಈಗ ಸ್ಥಗಿತಗೊಂಡಿವೆ; ಮತ್ತೆ ಕೆಲವು ಇನ್ನೂ ಕ್ರಿಯಾಶೀಲವಾಗಿವೆ.
ಕನ್ನಡ ರಂಗಭೂಮಿಗಾಗಿಯೇ ಮೀಸಲಾದ ಪತ್ರಿಕೆಗಳ ಸಂಖ್ಯೆಯೂ ಸಾಕಷ್ಟಿದೆ: ಸೂತ್ರಧಾರ (ರಾಮಯ್ಯ-ಬೆಂಗಳೂರು), ರಂಗಪ್ರಪಂಚ(ಸುಬ್ರಹ್ಮಣ್ಯ-ಬೆಂಗಳೂರು), ಸಂಸ (ಸುರೇಶ್, ಬೆಂಗಳೂರು), ರಂಗತೋರಣ (ವಿರೂಪಾಕ್ಷ ನಾಯಕ-ಧಾರವಾಡ), ರಂಗವಾಣಿ (ಮೈಸೂರು), ಈ ಮಾಸ ನಾಟಕ (ಎಲ್.ಕೃಷ್ಣಪ್ಪ, ಬೆಂಗಳೂರು), ಹಾಲ್ಕುರಿಕೆ ಪತ್ರಿಕೆ (ಹಾಲ್ಕುರಿಕೆ ಶಿವಶಂಕರ), ಪರಿಕರ (ರಂಗಾಯಣ-ಹಾಸಾಕೃ) ಇತ್ಯಾದಿ.
ಪುಸ್ತಕ ಮಾಹಿತಿ ಮತ್ತು ಸಾಹಿತ್ಯ ಕೃತಿಗಳ ವಿಮಶರ್ೆಗಾಗಿಯೇ ಹುಟ್ಟಿಕೊಂಡ ಪತ್ರಿಕೆಗಳೂ ಇವೆ. ಪುಸ್ತಕ ಪುರವಣಿ(1977-ಚೇತನ ಕನ್ನಡ ಸಂಘ, ಮೈಸೂರು), ಗ್ರಂಥಲೋಕ (1978-ಆರ್.ಎಲ್.ಅನಂತರಾಮಯ್ಯ-ಮೈಸೂರು), ಪುಸ್ತಕ ಮಾಹಿತಿ (1993-ಕನ್ನಡ ವಿಶ್ವವಿದ್ಯಾನಿಲಯ, ಹಂಪಿ) ಮೊದಲಾದ ಸಾಹಿತ್ಯಪತ್ರಿಕೆಗಳು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದವು.
ವಯಸ್ಕರ ಶಿಕ್ಷಣ ಸಮಿತಿ 1943ರಷ್ಟು ಹಿಂದೆಯೇ ಆರಂಭಿಸಿದ್ದ ‘ಪುಸ್ತಕ ಪ್ರಪಂಚ’ಕ್ಕೆ ಜೀವ ತುಂಬಿದವರು ಶ್ರೀಕೃಷ್ಣ ಆಲನಹಳ್ಳಿ. ಅವರು ಸಂಪಾದಿಸಿದ ಪ್ರತಿ ಸಂಚಿಕೆಯೂ ಸಂಗ್ರಹಯೋಗ್ಯ ಎನ್ನುವಂತಿತ್ತು.
ಅನೇಕ ಸಾಹಿತ್ಯ ಪತ್ರಿಕೆಗಳು ಹೆಚ್ಚಿನ ಶ್ರಮದಿಂದ ರೂಪಿಸುತ್ತಿದ್ದ ವಿಶೇಷ ಸಂಚಿಕೆಗಳ ಕೊಡುಗೆಯಂತೂ ಕನ್ನಡ ಸಾಹಿತ್ಯ-ಸಂಸ್ಕೃತಿಗಳ ಬೆಳವಣಿಗೆಯ ದೃಷ್ಟಿಯಿಂದ ಮಹತ್ವದ ಪಾತ್ರವನ್ನು ವಹಿಸಿವೆ. ಜಗತ್ತಿನ ಮಹತ್ವದ ಲೇಖಕರು, ಹೊಸ ಹೊಸ ಚಿಂತನ ಕ್ರಮಗಳು, ಪರ್ಯಾಯ ಮಾರ್ಗಗಳು, ಕನ್ನಡದ ಮಹತ್ವದ ಲೇಖಕರು, ಕನ್ನಡ ಸಂವೇದನೆಯನ್ನು ಹರಿತಗೊಳಿಸಿದ ಸಿನಿಮಾ, ರಂಗಭೂಮಿ, ಕಲೆ ಹೀಗೆ ವಿವಿಧ ವಿಶೇಷ ಸಂಚಿಕೆಗಳು ಕನ್ನಡದ ಮನಸ್ಸುಗಳನ್ನು ಸಮೃದ್ಧಗೊಳಿಸಿವೆ.
1980ರ ದಶಕದಲ್ಲಿ ಹೊಸ ತಲೆಮಾರನ್ನು ಗಾಢವಾಗಿ ಪ್ರಭಾವಿಸಿದ ವಾರ ಪತ್ರಿಕೆ ‘ಲಂಕೇಶ್ ಪತ್ರಿಕೆ’ಯನ್ನು ಸಾಹಿತ್ಯ ಪತ್ರಿಕೆಗಳ ಚೌಕಟ್ಟಿನೊಳಕ್ಕೆ ತರುವುದು ಸರಿಯಾಗುವುದಿಲ್ಲ ಎಂದು ವಾದಿಸುವವರೂ ಇರಬಹುದು. ಆದರೆ ಈ ಪತ್ರಿಕೆ ಸಾಹಿತ್ಯ ಸಂಸ್ಕೃತಿಯ ವಿಚಾರದಲ್ಲಿ ಎಬ್ಬಿಸಿದ ಅಲೆಗಳು, ಸೃಷ್ಟಿಸಿದ ಹೊಸ ಹೊಸ ಲೇಖಕರು, ಭಾಷೆ, ಸಾಹಿತ್ಯ, ಸಂಸ್ಕೃತಿಗಳ ವಿಚಾರದಲ್ಲಿ ಅದು ಪ್ರತಿಪಾದಿಸಿದ ಮೌಲ್ಯಗಳು, ಹುಟ್ಟುಹಾಕಿದ ವಿವಾದಗಳು ಅದಕ್ಕೊಂದು ಮಹತ್ವದ ಸ್ಥಾನವನ್ನೇ ಸೃಷ್ಟಿಸಿವೆ.
ಇತ್ತೀಚಿನ ವರ್ಷಗಳಲ್ಲಿ ತುಂಬ ಸುಂದರವಾಗಿ, ಸಾಹಿತ್ಯ ಪತ್ರಿಕೆಗಳಿಗೆ ಅಪವಾದ ಎನ್ನುವ ರೀತಿಯಲ್ಲಿ, ಶ್ರೀಮಂತವಾಗಿ, ವ್ಯವಸ್ಥಿತವಾಗಿ ಪ್ರಕಟವಾಗುತ್ತ, ಇದೀಗ ತಾತ್ಕಾಲಿಕವಾಗಿ ನಿಂತಿರುವ, ‘ದೇಶಕಾಲ’ (2005 -ಸಂಪಾದಕರು-ವಿವೇಕ ಶಾನಭಾಗ) ಹಿಂದಿನ ‘ಸಾಕ್ಷಿ’ ಮತ್ತು ‘ರುಜುವಾತು’ಗಳ ಹಾದಿಯಲ್ಲಿಯೇ ಹಜ್ಜೆಹಾಕಿದಂತೆ ಕಾಣಿಸಿದರೂ, ಅದು ಭಾರತೀಯ ಭಾಷೆಗಳ ಸಮಗ್ರ ಸಾಹಿತ್ಯವನ್ನು ಅನುವಾದಗಳ ಮೂಲಕ ಹಿಡಿದುಕೊಡುವ ಮಹತ್ವಾಕಾಂಕ್ಷೆಯನ್ನು ಪ್ರಕಟಿಸಿ ಅದಕ್ಕೆ ತಕ್ಕಂತೆ ಸಂಚಿಕೆಗಳನ್ನೂ ರೂಪಿಸಿತು. ಆದರೆ ಅದು ತಾನೇ ಸೃಷ್ಟಿಸಿಕೊಂಡ ಸೀಮಿತ ಚೌಕಟ್ಟು, ಮಿತಿ ಮೇರೆಗಳು ವಾಗ್ವಾದಕ್ಕೆ ಕಾರಣವಾದವು.
ಕನ್ನಡ ಎಂಟು ಜ್ಞಾನಪೀಠಗಳನ್ನು ಪಡೆದುಕೊಂಡು ಹೆಮ್ಮೆಯಿಂದ ಬೀಗುತ್ತಿದ್ದರೆ ಅದರ ಹಿಂದೆ ಈ ಕಿರುಪತ್ರಿಕೆಗಳ ಕೊಡುಗೆಯೂ ಇದೆ ಎಂಬುದನ್ನು ಮರೆಯಲಾಗದು.
ಇತ್ತೀಚಿನ ವರ್ಷಗಳಲ್ಲಿ ವಿದ್ಯುನ್ಮಾನ ಪತ್ರಿಕೆಗಳೂ ಆರಂಭವಾಗಿವೆ. ಸಾಹಿತ್ಯ ಪತ್ರಿಕೆಗಳು ಮಾಡುವ ಕೆಲಸವನ್ನು ಕೆಲವು ವಿದ್ಯುನ್ಮಾನ ಪತ್ರಿಕೆಗಳು ಸಮರ್ಥವಾಗಿಯೇ ಮಾಡುತ್ತಿವೆ. ವಿದೇಶದಿಂದ ಪ್ರಕಟವಾಗುತ್ತಿರುವ ಕೆಲವು ಇ-ಪತ್ರಿಕೆಗಳು ಕನ್ನಡ ಅಭಿಮಾನವನ್ನು ತೋರುವಂತಿವೆ. ಆದರೆ ಈ ಪತ್ರಿಕೆಗಳು ಇನ್ನೂ ಕನ್ನಡ ಓದುಗರನ್ನು ಸಂಪೂರ್ಣವಾಗಿ ಮುಟ್ಟುತ್ತಿಲ್ಲವಾದ ಕಾರಣ, ಇವುಗಳ ಪ್ರಭಾವವನ್ನು ಗುರುತಿಸುವುದು ಕಷ್ಟ. ಅವಧಿ, ವಿಶ್ವಕನ್ನಡ, ಕಾಮನಬಿಲ್ಲು, ಸೃಜನ, ಸಂಗಮ, ಪಂಡಿತ ಪುಟ, ಕೆಂಡಸಂಪಿಗೆ ಮೊದಲಾದ ಇ-ಪತ್ರಿಕೆಗಳನ್ನು ಗಮನಿಸಬಹುದು.





ಒಳ್ಳೇ ಸಂಶೋಧನಾತ್ಮಕ ಲೇಖನ. ಕನ್ನಡದ ಕಿರುಪತ್ರಿಕೆಗಳ ಕುರಿತು ಒಂದು ಇತಿಹಾಸ ಗ್ರಂಥವನ್ನೇ ಬರೆಯಬಹುದೇನೋ. ಈ ಪತ್ರಿಕೆಗಳು ಅಲ್ಪಾಯುಷಿಗಳಾಗಿರಬಹುದು, ಆದರೆ ಅವು ನೀಡುವ ಸ್ಫೂರ್ತಿ, ಹರಡುವ ಸಂದೇಶ ದೀರ್ಘಕಾಲಿಕವಾದುವು. ಜಿ.ಪಿ. ಬಸವರಾಜು ಶ್ರಮವಹಿಸಿ ಈ ಲೇಖನ ಬರೆದಿದ್ದಾರೆ. ಅವರಿಗೆ ಅಭಿನಂದನೆಗಳು! ಇಂಥ ಮೌಲಿಕ ಲೇಖನಗಳು ಇನ್ನಷ್ಟು ಬರಲಿ.
ಕೆ.ವಿ.ತಿರುಮಲೇಶ್
uttama lekhana basavaraju avarige abhinandanegalu haagu dhanyavadagalu
thank you tirumalesh, for reading my lengthy article. my sincere thanks to ananthshandreya also.