ಜಿ ಎನ್ ನಾಗರಾಜ್ ಅಂಕಣ- ಹೊಸ ಸಾರ್ವತ್ರಿಕ ದೇವರುಗಳ ಉದ್ಭವ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

28

ಬುಡಕಟ್ಟುಗಳ ಸಮಾಜವನ್ನು ಅಂಚಿಗೆ ಸರಿಸಿ ಪುರುಷಾಧಿಪತ್ಯದ  ರಾಜಾಳ್ವಿಕೆಯ ಸಮಾಜ ಸ್ಥಾಪನೆಗೊಂಡಿತು. ರಾಜಾಧಿಪತ್ಯದಲ್ಲಿ ಜೀತಗಾರರಾಗಲು ನಿರಾಕರಿಸಿದ ಕೆಲವು ಬುಡಕಟ್ಟುಗಳು ಅವರ ಕೈ ನಿಲುಕದ ಕಡೆಗೆ ಸರಿದು ತಮ್ಮದೇ ಸ್ವತಂತ್ರ ಬಾಳುವೆಯಲ್ಲಿ ಮುಂದುವರೆದರು. ರಾಜಾಧಿಪತ್ಯದ ಸಮಾಜಕ್ಕೆ ಬುಡಕಟ್ಟುಗಳಲ್ಲಿನ -ಗಂಡು,ಹೆಣ್ಣು ಎಲ್ಲರೂ ಒಟ್ಟಾಗಿ ದುಡಿಯುವ, ಯಾವುದೇ ಆಸ್ತಿ,ಸಂಪತ್ತು ಎಲ್ಲರಿಗೂ ಸೇರಿದ್ದೆನ್ನುವ, ಒಟ್ಟಿಗೆ ಕುಳಿತು ಚರ್ಚಿಸಿ ತೀರ್ಮಾನಿಸುವ ನಿಯಮಗಳು ಅಡ್ಡಿಯೆನಿಸಿದವು.

ಅಂತೆಯೇ ಬುಡಕಟ್ಟು ದೈವಗಳೂ ರಾಜಾಡಳಿತಕ್ಕೆ ಉಪಯುಕ್ತವೆನಿಸಲಿಲ್ಲ. ಪುರುಷಾಧಿಪತ್ಯದ ಕಡೆಗೆ ಬುಡಕಟ್ಟು ಸಮಾಜ ಚಲಿಸಿದಂತೆ ಅಮ್ಮ ಕೇಂದ್ರಿತ ಸಮಾಜದ ಅಮ್ಮ ದೈವಗಳು ಪಕ್ಕಕ್ಕೆ ಸರಿದು ಪುರುಷ ದೈವಗಳನ್ನು  ಜನ ಆರಿಸಿಕೊಂಡರು. ಆದರೆ ಈ ಪುರುಷ ದೈವಗಳು ಕೂಡಾ ಈಗಾಗಲೇ ವಿವರಿಸಿದಂತೆ ಜುಂಜಪ್ಪ, ಬೀರಪ್ಪ, ಮೈಲಾರ, ಜಟ್ಟಿಗರಂತಹ ಬುಡಕಟ್ಟು ವೀರರಾಗಿದ್ದವು. ಹೆಚ್ಚೆಂದರೆ ತಮ್ಮ ಕುಲದ ದೈವಗಳಾಗಿ ಪರಿಣಮಿಸಿದ್ದವು. ಬುಡಕಟ್ಟು, ಕುಲದ ಒಗ್ಗಟ್ಟನ್ನು ಕಾಪಾಡುವ ದೈವಗಳಾಗಿದ್ದವು. ಬುಡಕಟ್ಟು ಮತ್ತು ಕುಲದ ನಿಯಮಗಳನ್ನು ಎಲ್ಲರೂ ಪಾಲಿಸುವಂತೆ ಮಾಡುವ ದೈವಗಳಾಗಿದ್ದವು. ಬುಡಕಟ್ಟು ಹಾಗೂ ಕುಲದ ಒಗ್ಗಟ್ಟಿನ ನಿಯಮಗಳು ರಾಜಾಡಳಿತಕ್ಕೆ ಅಡ್ಡಿಯೆನಿಸಿದ ಮೇಲೆ ಅವುಗಳನ್ನು ಪಾಲಿಸುವಂತೆ ಒತ್ತಾಯಿಸುವ ದೈವಗಳೂ ಅಡ್ಡಿಯೆನಿಸಿದ್ದು ಸಹಜವಷ್ಟೇ.

ಈ ದೈವಗಳೂ ಬುಡಕಟ್ಟು, ಕುಲದ ನಿಯಮಗಳ ಜೊತೆಗೆ ಅಂಚಿಗೆ ಸರಿಸಲ್ಪಟ್ಟವು. ಈಗ ರಾಜಾಧಿಪತ್ಯದ ನಿಯಮಗಳು ರಾಜನಿಗೆ ಉಳಿದೆಲ್ಲರೂ ಅಧೀನ. ಎಲ್ಲರೂ ರಾಜನಿಗೆ ವಿಧೇಯರಾಗಿರಬೇಕು. ಅವನ ಆಜ್ಞೆಯನ್ನು ಮಾತೆತ್ತದೆ ಪಾಲಿಸಬೇಕು.ಅವನು ಸಾಕ್ಷಾತ್ ದೇವರ ಸ್ವರೂಪ.

ರಾಜಾಡಳಿತದ ಪ್ರಜೆಗಳು ಒಂದು ಬುಡಕಟ್ಟು, ಕುಲಕ್ಕೆ ಸೇರಿದವರಲ್ಲ. ಬುಡಕಟ್ಟು, ಕುಲಗಳ ಸಮಾಜದಲ್ಲಿ ಅದರ ಭಾಗವಾದ ಜನರಷ್ಟೇ ಮುಖ್ಯ ಅವರು ವಾಸಿಸುವ ಪ್ರದೇಶವಲ್ಲ.  ಪ್ರದೇಶ ಅವರ ಗುರುತಾಗಿರಲಿಲ್ಲ. ಆದರೆ ರಾಜಾಡಳಿತವೆಂದರೆ ಒಂದು ಪ್ರದೇಶ ಅದರ ಚೌಕಟ್ಟು. ಆ ಪ್ರದೇಶದಲ್ಲಿರುವವರೆಲ್ಲ ಅದರ ಪ್ರಜೆಗಳು. ಅವರು ವಿವಿಧ ಬುಡಕಟ್ಟು ಅಥವಾ ಕುಲ ಮೂಲದವರಾಗಿರಬಹುದು. ಕುಲಗಳು ಒಡೆದು ವಿವಿಧ ರಾಜಾಡಳಿತಗಳಲ್ಲಿ ಹರಿದು ಹಂಚಿ ಹೋಗಿರಬಹುದು. ಅದರ ಫಲವಾಗಿ ನಿರ್ದಿಷ್ಟ ಪ್ರದೇಶಕ್ಕೆ  ಜನಪದಗಳೆಂಬ ಹೊಸ ರಚನೆಯನ್ನು ಕಾಣುತ್ತೇವೆ. ಬೌದ್ಧ ಗ್ರಂಥಗಳಲ್ಲಿ 16 ಜನಪದಗಳ ಉಲ್ಲೇಖವನ್ನು ಕಾಣುತ್ತೇವೆ. ಜೈನ, ವೈದಿಕ ಮತ್ತಿತರ ಗ್ರಂಥಗಳಲ್ಲಿ ಇನ್ನೊಂದಿಷ್ಟು ಜನಪದಗಳ ಹೆಸರುಗಳು ಉಲ್ಲೇಖಗೊಂಡಿವೆ.

ಅಂಗ, ವಂಗ, ಕಳಿಂಗ, ಕಾಸಿ, ಕೋಸಲ, ವಜ್ಜಿ, ವಿದೇಹ, ಕೇಕಯ, ಮಲ್ಲ, ಚೇದಿ, ಕುರು, ಪಾಂಚಾಲ, ಸೂರಸೇನಾ, ಆವಂತಿ, ಗಾಂಧಾರ, ಕಾಂಭೋಜ, ಅಸ್ಸಾಕ, ವಚ್ಛ, ಮಚ್ಛ, ಲಾಢ ಇತ್ಯಾದಿ. ಇವುಗಳಲ್ಲಿ ಬಹಳಷ್ಟು ಜನಪದಗಳು ರಾಜಾಳಿತದಲ್ಲಿದ್ದವು. ಕೆಲವು ಮಾತ್ರ ಬುದ್ಧನ ಕುಲವಾದ ಶಾಖ್ಯರಂತೆ ಇನ್ನೂ ಕುಲಾಧಿಪತ್ಯವಾಗಿದ್ದವು.
ಈ ಪ್ರಕ್ರಿಯೆ ಮುಂದುವರೆದು ಕ್ರಿಸ್ತ ಪೂರ್ವ 325 ವೇಳೆಗೆ ಭಾರತದಲ್ಲಿ ನಂದರ ನಂತರ ಮೌರ್ಯರ ಆಡಳಿತದ ಮಗಧ ಸಾಮ್ರಾಜ್ಯ,ದಕ್ಷಿಣ ಭಾರತದ ದಕ್ಷಿಣದಲ್ಲಿ ಕ್ರಿಪೂ 250 ರ ವೇಳೆಗೆ ಪಾಂಡ್ಯ,ಚೋಳ ಸಾಮ್ರಾಜ್ಯಗಳು, ಕ್ರಿಪೂ 100 ರ ವೇಳೆಗೆ ಅದರ ಉತ್ತರ ಭಾಗದಲ್ಲಿ ಶಾತವಾಹನ ಸಾಮ್ರಾಜ್ಯವೂ ಸ್ಥಾಪನೆಯಾಗಿತ್ತು. ಅಂದರೆ ಕ್ರಿಪೂ ಅವಧಿಯ ಒಳಗೆ ದೊಡ್ಡ ಸಾಮ್ರಾಜ್ಯಗಳು ಹಲ ಹಲವು ಕುಲಗಳನ್ನು, ಬುಡಕಟ್ಟುಗಳ ಮೂಲದ ಹಲವು ಜನಪದಗಳ ಜನರನ್ನು ಒಳಗೊಂಡಿದ್ದವು. ಆದ್ದರಿಂದ ಅವರಿಗೆ ಬುಡಕಟ್ಟು, ಕುಲಗಳ ಪರಿಧಿಯನ್ನು ಮೀರಿದ , ಹಲವು ಕುಲಗಳ ಜನರ ಪೂಜೆಗೊಳಗಾಗುವ ದೇವರುಗಳ ಅಗತ್ಯವಾಯಿತು.

ವೇದಗಳ ಕಾಲದ ಯಜ್ಞ, ಯಾಗಾದಿಗಳು ಈ ಬುಡಕಟ್ಟು ದೈವಗಳ,ಕುಲ ದೇವತೆಗಳ ಆರಾಧಕರನ್ನು ಸೆಳೆಯುವಂತಿರಲಿಲ್ಲ. ಜೊತೆಗೆ ಬುದ್ಧನ ಯಜ್ಞ, ಯಾಗಾದಿಗಳ ವಿರುದ್ಧವಾದ  ವಿಚಾರಗಳು ಹರಡಿದ ಮೇಲೆ ಯಜ್ಞ ಯಾಗಾದಿಗಳ ಆಚರಣೆಯೂ ಕಷ್ಟವಾಗತೊಡಗಿತ್ತು. ಅದರಿಂದಾಗಿ ಬುಡಕಟ್ಟು ಜನರನ್ನು ಸೆಳೆಯಲು ಬುಡಕಟ್ಟು ದೈವಗಳನ್ನೇ ಉನ್ನತ ಸ್ಥಾನಕ್ಕೇರಿಸುವುದು ಅಗತ್ಯವಾಯಿತು. ರಾಜ,ಸಾಮ್ರಾಜರುಗಳ ಕಣ್ಣಿಗೆ ಬಿದ್ದವು ಎರಡು ಬುಡಕಟ್ಟು ಮೂಲದ ದೈವಗಳಾದ ಶಿವ ಮತ್ತು ವಿಷ್ಣು.

ಶಿವನ ಬಗೆಗಿನ ಎಲ್ಲ ವಿವರಣೆಯೂ ಅವನು ಪಕ್ಕಾ ಬುಡಕಟ್ಟು ಕಾಲದ ದೈವವೆಂಬುದನ್ನು ಸಾರಿ ಸಾರಿ ಹೇಳುತ್ತದೆ. ಕೇವಲ ಚರ್ಮವನ್ನು ಹೊದ್ದು ಬೂದಿ ಬಡಕನಾದ ವೇಷ, ಅವನ ಆಯುಧ ತ್ರಿಶೂಲ,ಕಟ್ಟಿದ ಜಡೆ ,ಶಿವಗಣಗಳ ಸ್ವರೂಪ,ಅವನ ವಾಸ ಸ್ಥಾನ ಇವೆಲ್ಲವೂ ಇಂದಿನ ಬುಡಕಟ್ಟುಗಳ ಉಡುಪು, ವೇಷವನ್ನೇ ನೆನಪಿಸುತ್ತದೆ. ಇಂದಿನ ಆಫ್ರಿಕಾದ ಬುಡಕಟ್ಟು ಜನರ ವೇಷ,ಉಡುಪುಗಳನ್ನು ನೋಡಿದರೂ ಈ ಮಾತು ಸ್ಪಷ್ಟವಾಗುತ್ತದೆ.

ಇನ್ನು ವಿಷ್ಣು ಎರಡನೇ ದೇವತೆ. ಅವನ ದಶಾವತಾರಗಳ ಪೋಣಿಸುವಿಕೆಯನ್ನು ನೋಡಿದರೇ ಸ್ಪಷ್ಟವಾಗುತ್ತದೆ ವಿಷ್ಣುವೂ ಬುಡಕಟ್ಟು ಮೂಲದ ದೇವತೆ ಎಂದು. ಈ ದಶಾವತಾರಗಳ ಮೊದಲ ನಾಲ್ಕು ಅವತಾರಗಳು ಮೀನು,ಆಮೆ,ಹಂದಿ,ಸಿಂಹಗಳಂತಹ  ಪ್ರಾಣಿ ರೂಪದವು. ಇವುಗಳು ಆದಿ ಮಾನವರ ಆಹಾರದ ಮೂಲಗಳಾಗಿ ಕುಲ ದೈವಗಳ ಸ್ಥಾನವನ್ನು ಪಡೆದಂತಹವು. ಇನ್ನುಳಿದ ಅವತಾರಗಳಲ್ಲಿ ಹಲವು ಬುಡಕಟ್ಟು ಮೂಲದವು. ವಿಷ್ಣುವಿನ ರೂಪಗಳಲ್ಲಿ ಬಹಳ ಜನಪ್ರಿಯನಾದವನು ಕೃಷ್ಣ. ಇವನೊಬ್ಬ ಗೋಪಾಲಕ ಬುಡಕಟ್ಟಿನಲ್ಲಿ ಅವನ ಬುಡಕಟ್ಟಿನ ಸಂರಕ್ಷಣೆಗಾಗಿ ಹಲವು ಸಾಹಸಗಳನ್ನು ಮೆರೆದ ವೀರ. ಈ ಸಾಹಸಗಳ ಉತ್ಪ್ರೇಕ್ಷಿತ ಕಥನಗಳೊಂದಿಗೆ ಅಂದು ವ್ಯಾಪಕವಾಗಿದ್ದ ಶಿಶು ಮರಣದ ಬಗೆಗಿನ ಬುಡಕಟ್ಟು ಪುರಾಣದ ಪೂತನಿ ಇತ್ಯಾದಿಗಳೂ ಸೇರಿಕೊಂಡಿವೆ.
ವಿಷ್ಣುವಿನ ಕೃಷ್ಣ ರೂಪ ಮತ್ತು ಶಿವ ರಾಜ, ಸಾಮ್ರಾಟರುಗಳಿಂದ ತಮ್ಮ ರಾಜಾಡಳಿತದ ಸಂಕೇತಗಳ ಮೂಲಕ ಉನ್ನತ ಸ್ಥಾನಕ್ಕೇರಿಸಲ್ಪಟ್ಟ ಬಗ್ಗೆ  ಕ್ರಿಪೂ ಎರಡನೇ ಶತಮಾನದಿಂದಲೇ ಪುರಾವೆಗಳು ಸಿಗುತ್ತವೆ. ಇದೇ ಶತಮಾನಗಳೇ ರಾಜ್ಯ,ಸಾಮ್ರಾಜ್ಯಗಳು ಸ್ಥಾಪನೆಯಾದ ಕಾಲ ಎಂಬುದು ಕಾಕತಾಳೀಯವಲ್ಲ.

ಇತಿಹಾಸದ ಆಕರಗಳಲ್ಲಿ ವಿಷ್ಣು, ಶಿವ.
ಮೌರ್ಯರ ಕಾಲದಲ್ಲಿ ವಿಷ್ಣು ಮತ್ತು ಶಿವನ ಪೂಜೆಯ ಮೊದಲ ಪುರಾವೆಗಳನ್ನು ಕಾಣಬಹುದು.‌ ಸಾಂಚಿ ಬಳಿಯ ವಿದಿಶಾ ನಗರದಲ್ಲಿ ಕ್ರಿಸ್ತ ಪೂರ್ವ 140 ವರ್ಷದಲ್ಲಿ ಭಾಗವತನೆಂದು ತನ್ನನ್ನು ಕರೆದುಕೊಂಡ ಒಬ್ಬ , ರೋಮಿನ ಚಕ್ರವರ್ತಿ ಅಲೆಕ್ಸಾಂಡರನ ಭಾರತ ಧಾಳಿಯ ನಂತರ ದೇಶದ ವಾಯುವ್ಯ ಭಾಗದಲ್ಲಿದ್ದ ಗ್ರೀಕ್ ಸಾಮಂತನೊಬ್ಬ  ಸ್ಥಾಪಿಸಿದ ಒಂದು ಸ್ಥಂಭದ ಮೇಲೆ  ದೇವ ಶ್ರೇಷ್ಟನಾದ ವಾಸುದೇವನಿಗೆ ಅರ್ಪಿಸಿದ ಗರುಡ ಗಂಭ ಎಂಬ ಕೆತ್ತನೆಯಿದೆ. ಅದಕ್ಕೂ ಮೊದಲಿನ ಪಾಣಿನಿಯ ಗ್ರಂಥದಲ್ಲಿ ವಾಸುದೇವ ಮತ್ತು ಅರ್ಜುನನ ಹೆಸರುಗಳು ನಮೂದಾಗಿವೆ. ಮೆಗಾಸ್ಥನೀಸ್ ಎಂಬ ಅಲೆಕ್ಸಾಂಡರನ ಸೇನಾ ಪಡೆಯ ಜೊತೆ ಬಂದಿದ್ದ ವಿದ್ವಾಂಸನೂ ಕೂಡಾ ಮಧುರೆಯಲ್ಲಿ ಸೂರಸೇನರಿಂದ ಪೂಜಿಸಲ್ಪಟ್ಟ ದೇವನ ಪ್ತಸ್ತಾಪ ಮತ್ತು ಆ ದೇವನಿಗೆ ಪಾಂಡಿಯ ( ಪಾಂಡವ ) ಎಂಬ ಮಗಳಿದ್ದಳೆಂಬ ಪ್ರಸ್ತಾಪ ಇದೆ.

ಅರ್ಥಶಾಸ್ತ್ರದಲ್ಲಿ ಅಷ್ಟೇನೂ ಪ್ರಮುಖವಾಗಿ ಅಲ್ಲದಿದ್ದರೂ ಕೃಷ್ಣ ಮತ್ತು ಸಂಕರ್ಷಣ ಎಂಬ ಹೆಸರುಗಳಿವೆ. ಹಾಗೆಯೇ ಒಂಬತ್ತು ದೇವರುಗಳಲ್ಲಿ ಒಬ್ಬನಾಗಿ ಶಿವನ ಹೆಸರು ಉಲ್ಲೇಖವಾಗಿದೆ. ಈ ಗ್ರಂಥದಲ್ಲಿ ದೇವಾಲಯಗಳು, ದೇವದಾಸಿಯರು,ದೇವ ಪಶುಗಳ ಉಲ್ಲೇಖವೂ ಇದೆ. ವಿಶೇಷವೆಂದರೆ ಒಬ್ಬರಾಜನಿಗೆ ಹಣದ ತೀವ್ರ ಅವಶ್ಯಕತೆ ಎದುರಾದರೆ ಬ್ರಾಹ್ಮಣರು ಪೂಜಿಸುವಂತಹವನ್ನು ಹೊರತುಪಡಿಸಿ ಇತರ  ದೇವ ಗೃಹಗಳಲ್ಲಿರುವ ಸಂಪತ್ತನ್ನು ಕಿತ್ತುಕೊಳ್ಳಬಹುದೆಂದು ಸಲಹೆ ನೀಡಲಾಗಿದೆ. ಮೇಲೆ ಉಲ್ಲೇಖಿಸಲಾದ ಗರುಡ ಗಂಭ ಸ್ಥಾಪನೆಯಾದ ಜಾಗದಲ್ಲಿ  ಅದರ ಸ್ಥಾಪನೆಯ ಮೊದಲೇ ಒಂದು ದೇವಾಲಯವಿತ್ತೆಂದು ಉತ್ಖನನಗಳಿಂದ ತಿಳಿದು ಬಂದಿದೆ.

ಆ ಕಾಲದ ಪ್ರತಿಮೆಗಳು ಸಿಕ್ಕಿಲ್ಲವಾದ್ದರಿಂದ ದೇವರ ಪ್ರತಿಮೆಗಳನ್ನು ಮರದಿಂದ ಮಾಡಲಾಗುತ್ತಿರಬಹುದು ಎಂದು ಊಹಿಸಲಾಗಿದೆ. ಅರ್ಥಶಾಸ್ತ್ರದಲ್ಲಿ ಮರದ ಪ್ರತಿಮೆಯ ಉಲ್ಲೇಖವೂ ಇದೆ. ಮೌರ್ಯರ ಕಾಲದಲ್ಲಿ ಅನೇಕ ಅಮ್ಮ ದೇವತೆಗಳ ಮಣ್ಣಿನ ಸಣ್ಣ ಮೂರ್ತಿಗಳು ಸಿಕ್ಕಿವೆ. ಇವು ಸಾಮಾನ್ಯ ಜನರ ಮನೆಗಳು, ಗುಡಿಸಿಲುಗಳ ಒಳಗಿಟ್ಟು ಪೂಜಿಸಲ್ಪಡುತ್ತಿದ್ದ ಮೂರ್ತಿಗಳಿರಬಹುದು ಎಂದು ಊಹಿಸಲಾಗಿದೆ.

ಕ್ರಿಸ್ತಪೂರ್ವ 150ರಲ್ಲಿ  ಗ್ರೀಕ್ ಆಡಳಿತಗಾರನಾದ ಅಗಾತೋಕ್ಲಿಸನು ಮುದ್ರಿಸಿದ ನಾಣ್ಯಗಳ ಒಂದು ಮುಖದಲ್ಲಿ  ಚಕ್ರಧಾರಿ ಕೃಷ್ಣ ಮತ್ತೊಂದು ಮುಖದಲ್ಲಿ  ನೇಗಿಲು ಹಿಡಿದ ಬಲರಾಮನ ಚಿತ್ರಗಳಿವೆ. ವಿಶೇಷವೆಂದರೆ ಬೌದ್ಧ ಜಾತಕಗಳಲ್ಲೊಂದಾದ ಘಾತ ಜಾತಕದಲ್ಲಿ ಕೃಷ್ಣನು ಗೋಪಾಲಕ ವೀರನಾಗಿ ಮಾಡಿದ ಸಾಹಸಗಳು, ಅವನ ದೈವಿಕ ರೂಪದ ಬಗೆಗೆ ಒಂದು ಕತೆ ಇದೆ. ದಕ್ಷಿಣ ಭಾರತದ ಮೊದಲ ರಾಜ ಪ್ರಭುತ್ವವಾದ ಶಾತವಾಹನರ ಶಾಸನಗಳಲ್ಲಿ ಸಂಕರ್ಷಣ- ವಾಸುದೇವರುಗಳ ( ಬಲರಾಮ ,ಕೃಷ್ಣ) ಉಲ್ಲೇಖವಿದೆ. ಗೋತಮಪುತ ಶಾತಕಣಿಯು ತಾನು ರಾಮ,ಕೇಶವ ಮತ್ತು ಅರ್ಜುನನ ಸಮನಾದ ಬಲಶಾಲಿಯೆಂದು ಸಾರಿಕೊಂಡಿದ್ದಾನೆ.

ಕಬ್ಬಿಣದ ಶೂಲ ಹಿಡಿದ ಶಿವನ ಪೂಜಕರು ಶಿವ ಭಾಗವತರೆಂದು ಕರೆದುಕೊಂಡಿರುವ ಬಗ್ಗೆ ವ್ಯಾಕರಣಕಾರ ಪತಂಜಲಿ ಉಲ್ಲೇಖಿಸಿದ್ದಾನೆ. ಕ್ರಿ.ಪೂ.ಒಂದನೆಯ ಶತಮಾನದ ಉಜ್ಜಯನಿಯ ನಾಣ್ಯಗಳ ಒಂದು ಮುಖದಲ್ಲಿ ಶಿವ ಮತ್ತು ನಂದಿ ಒಂದು ಕಡೆ, ಲಿಂಗ ಮತ್ತೊಂದು ಕಡೆ ಮುದ್ರಿತವಾಗಿದೆ.

ಕ್ರಿ.ಶ. 2 ನೇ ಶತಮಾನದಲ್ಲಿ ಕುಶಾನ ರಾಜನಾದ ವಿಮ ಕಡ್ಫಿಸೆಸ್‌‌ನ ನಾಣ್ಯಗಳಲ್ಲಿ ಒಂದು ಕಡೆ ಶಿವ ಮತ್ತು ನಂದಿ ಮುದ್ರಿತವಾಗಿದೆ. ಅದೇ ಸಮಯದಲ್ಲಿ ಆಫ್ಘಾನಿಸ್ತಾನದ ಉತ್ತರದಲ್ಲಿರುವ ಬ್ಯಾಕ್‌ಟ್ರೀಯಾದ ಬಳಿ ಇರುವ ಕುಶಾನರ ದೇವ ಗೃಹದಲ್ಲಿ ಶಿವ ಪಾರ್ವತಿಯರ ವರ್ಣ ಚಿತ್ರವಿದೆ.

ಸರಿಸುಮಾರು ಇದೇ ಸಮಯದಲ್ಲಿ- ಕ್ರಿ.ಪೂ. 2 ನೇ ಶತಮಾನದಿಂದ ಕ್ರಿ.ಪೂ. 2 ನೇ ಶತಮಾನದವರೆಗಿನ ಸಮಯದಲ್ಲಿ – ರಚಿತವಾದ ಮಹಾ ಕಾವ್ಯಗಳಾದ ರಾಮಾಯಣ, ಮಹಾಭಾರತಗಳು ರಾಮ, ಕೃಷ್ಣ ಹಾಗೂ ಶಿವನ ಬಗೆಗೆ ಹಲವು ಸಾಹಸ ಕಥಾನಕಗಳು ಜನ ಸಾಮಾನ್ಯರಲ್ಲಿ ಭಕ್ತಿಯನ್ನು ಉದ್ದೀಪಿಸುವಂತಹ ರೀತಿಯಲ್ಲಿ ಚಿತ್ರಿತವಾಗಿದೆ.

ಮಹಾ ಕಾವ್ಯಗಳ ಈ ಚಿತ್ರಣ ದೇಶಾದ್ಯಂತ ಈ ದೇವತೆಗಳನ್ನು ಜನಜನಿತವಾಗಿಸಲು ಕಾರಣವಾಗಿದೆ.
ಈ ಸಂಗತಿಗಳು ಕ್ರಿಸ್ತ ಪೂರ್ವ ಮತ್ತು ಕ್ರಿಸ್ತ ಶಕದ ನಡುವಣ ಸ್ಥಿತ್ಯಂತರದ ನಾಲ್ಕು ಶತಮಾನಗಳ ಕಾಲದಲ್ಲಿ
ವಿಷ್ಣು ಮತ್ತು ಶಿವ ಎಂಬ ಎರಡು ದೇವತೆಗಳ ಆರಾಧನೆ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಾ ನಡೆದಿದೆ. ಹೀಗೆ ಜನಪ್ರಿಯ‌ಗೊಳಿಸುವುದರಲ್ಲಿ ರಾಜರುಗಳ ಪಾತ್ರ ಗಮನಾರ್ಹ. ಗ್ರೀಕ್ ರಾಜರ ಸಾಮಂತರುಗಳು, ಕುಶಾನ ರಾಜರುಗಳು ಈ ದೇವತೆಗಳನ್ನು ಜನಪ್ರಿಯಗೊಳಿಸಿವುದರಲ್ಲಿ ಗಣನೀಯ ಪಾತ್ರ ವಹಿಸಿರುವುದು, ಅವರ ಕೆಲ ರಾಜರುಗಳು ಈ ದೇವರುಗಳ ಆರಾಧಕರು ಮತ್ತು ಭಕ್ತರೆಂದು ಬಿಂಬಿಸಿಕೊಂಡಿರುವುದು ಹಲವು ವಿಷಯಗಳನ್ನು ನಮಗೆ ಹೇಳುತ್ತದೆ.

ಗ್ರೀಕ್ ಸಾಮಂತರು,ಕುಶಾನ ರಾಜರುಗಳು ಬೇರೆ ಪ್ರದೇಶಗಳಿಂದ ಬಂದು ಭಾರತದ ವಿವಿಧ ಪ್ರದೇಶಗಳನ್ನು ಆಳುತ್ತಿರುವಾಗ ಇಲ್ಲಿಯ ಜನರ ಒಪ್ಪಿಗೆಯನ್ನು ಪಡೆಯುವ ಒಂದು ಮಾರ್ಗವಾಗಿ ಈ ದೇವರುಗಳಿಗೆ ತಮ್ಮ ಭಕ್ತಿಯನ್ನು ತೋರಿಸಿದ್ದಾರೆ. ಇದು ಈ ದೇವರುಗಳು ಮುಖ್ಯವಾಗಿ ಕೃಷ್ಣ ಮತ್ತು ಶಿವ ಜನರ ನಡುವೆ ಜನಪ್ರಿಯವಾಗಿದ್ದವು ಎಂಬುದನ್ನು ಎತ್ತಿ ತೋರಿಸುತ್ತವೆ. 

ಶಿವ, ವಿಷ್ಣುವಿನ ಪೂಜೆ ಮಾಡುವುದೇ ಅಲ್ಲದೆ ಈ ದೇವರುಗಳ ಸುತ್ತ ಎರಡು ದೇವತಾ ಪರಿವಾರಗಳನ್ನು ರಚಿಸಲಾಯಿತು.‌ ಕ್ರಿಪೂರ್ವ ಕಾಲದಿಂದ ಆರಂಭವಾಗಿ ಕ್ರಿಶಕದ ಎಂಟನೆಯ ಶತಮಾನಗಳವರೆಗೂ ಸಾಗಿದ ಪುರಾಣಗಳ ರಚನೆಯ ಮೂಲಕ ಈ ಸೃಷ್ಟಿ ಸಾಗಿತು.

ಆ ವೇಳೆಗೆ ರಾಜ್ಯ, ಸಾಮ್ರಾಜ್ಯಗಳ ಆಕ್ರಮಣಕ್ಕೆ ತುತ್ತಾದ ಜನಪದಗಳ ಭಾಗವಾದ ಬುಡಕಟ್ಟು, ಕುಲಗಳನ್ನು ರಾಜಾಡಳಿತಕ್ಕೆ ಅಧೀನರಾಗಿಸಲು ಅವರ ದೈವಗಳನ್ನು, ಅವುಗಳ ಬಗೆಗಿನ ಕಥನಗಳನ್ನು ಪೋಣಿಸಿ ಪುರಾಣಗಳನ್ನು ಹೊಸೆಯಲಾಯಿತು. ಹಾವು, ಎತ್ತು, ನೀರು, ಗಜ ಮುಖ ಗಣ ಮೊದಲಾದವನ್ನು ಸೇರಿಸಿ, ವೀರಭದ್ರ, ಭೃಂಗಿ,ಭೈರವ ಮೊದಲಾದವರು ಸೇರಿದಂತೆ ಶಿವಗಣಗಳನ್ನು ಒಳಗೊಂಡ ಶಿವನ ಪರಿವಾರ ಹಲವು ಬುಡಕಟ್ಟುಗಳನ್ನು ಜನಪದವಾಗಿ ಹೊಸೆಯಲು ಸೃಷ್ಟಿಯಾದ ಪರಿವಾರ.

ಹಾಗೆಯೇ ವಿಷ್ಣುವಿನ ದಶಾವತಾರ, ರಾಮ, ಕೃಷ್ಣರ ಪರಿವಾರ ದೇವತೆಗಳಾದ ಹನುಮಂತ, ಬಲರಾಮ-ಸಂಕರ್ಷಣ ರಾಧೆ, ಜಾಂಬವತಿ, ಬೃಂದೆ, ತುಳಸಿ ಮೊದಲಾದ ಹಲವು ಬುಡಕಟ್ಟು ದೈವಗಳು ವಿಷ್ಣುವಿನ ಪರಿವಾರ ದೇವತೆಗಳಾಗಿವೆ.

ಇನ್ನು ಈ ದೇವರುಗಳ ಪತ್ನಿ ರೂಪಗಳ ಮೂಲಕ ದೇಶದೆಲ್ಲ ಬುಡಕಟ್ಟುಗಳ ಅಮ್ಮ ದೇವತೆಗಳನ್ನು ಪಾರ್ವತಿಯ ರೂಪವಾಗಿ, ಕೆಲವರನ್ನು ಲಕ್ಷ್ಮಿಯ ರೂಪಾಗಿ ಪರಿಗಣಿಸಿದ್ದು ಮತ್ತೊಂದು ದೊಡ್ಡ ರಾಜತಂತ್ರ.
ಈ ದೇವರುಗಳು ರಾಜ ಸಂಕೇತಗಳಾದ ನಾಣ್ಯ,ರಾಜ ಮುದ್ರೆ , ದೇವಾಲಯಗಳು ಹಾಗೂ ಪುರಾಣಗಳ ಮೂಲಕ ಬುಡಕಟ್ಟು ದೈವಗಳಾದ ಶಿವ, ಕೃಷ್ಣರಂತಹ ದೇವರುಗಳು ಸಾರ್ವತ್ರಿಕ ದೇವರುಗಳಾಗಿ ಬಿಂಬಿಸಲ್ಪಟ್ಟವು.
ಈ ಸಾರ್ವತ್ರಿಕ ದೇವರುಗಳಿಗೆ ಅಂದೇ ದೇವಾಲಯಗಳ ನಿರ್ಮಾಣ ಆರಂಭವಾಗಿ ಮುಂದೆ ಎಲ್ಲ ರಾಜ,ಸಾಮ್ರಾಜರಗಳಿಗೆ ತಮ್ಮ ಸ್ಥಾನಮಾನ, ಸಾಮರ್ಥ್ಯವನ್ನು ಪ್ರದರ್ಶಿಸುವ ಸಾಧನಗಳಾದವು. ಹಾಗೆಯೇ ಜನರ ಭಕ್ತಿ ಭಯ ಪೂರ್ವಕ ಆರಾಧನೆಗೆ ಕಾರಣವಾದವು.

ಈ ದೇವಾಲಯಗಳು ಬುಡಕಟ್ಟುಗಳು ಪೂಜಿಸುತ್ತಿದ್ದ ಮರದಡಿಯ ಅಥವಾ ಬೆಟ್ಟದ ಮೇಲಿನ ಗವಿಯೊಂದರ ಕಲ್ಲಿನ ಸರಳ ಪೂಜೆಯ ನೆನಪನ್ನು ತರುತ್ತಾ ಈ ಬುಡಕಟ್ಟು ಮೂಲದ ಜನರ ಪೂಜೆಗೆ ಪಾತ್ರವಾದವು.  ಅದೇ ಸಮಯದಲ್ಲಿ ಅವುಗಳ ಈ  ವೈಭವೀಕೃತ ರೂಪ ಅವರನ್ನು ಭಯ ಚಕಿತರನ್ನಾಗಿಸಿ  ವಿಧೇಯತೆಯನ್ನು ಬಯಸಿದವು.

ಮುಂದೆ ಭಕ್ತಿ ಪಂಥದಲ್ಲಿ ದೇವರುಗಳನ್ನು ಆತ್ಮೀಯತೆಯಿಂದ ಪ್ರಾರ್ಥಿಸುವ ಕಾಲಕ್ಕೆ ಮೊದಲು ಈ ದೇವರುಗಳು ಬಯಸಿದ ವಿಧೇಯತೆ, ದೆರವಾಲಯಗಳಿಂದ ದೊಡ್ಡ ವಿಭಾಗದ ಜನರನ್ನು ದೂರ ಇಡಲು ಕಾರಣವಾದ ಅಸ್ಪೃಶ್ಯತೆ ಇವೆಲ್ಲವೂ ಸಾಮ್ರಾಟರು ಬಯಸಿದ ವಿಧೇಯತೆಗೆ ತಾಳೆಯಾಗುವಂತಿದ್ದವು.

ಹೀಗೆ ಹೊಸ ದೇವತೆಗಳ ಮತ್ತೊಂದು ಹೊಸ ಬೆಳೆಯನ್ನು ಸಮಾಜ ಕಂಡಿತು. ಇದೇ ಸಮಯದಲ್ಲಿಯೇ ಏಷ್ಯಾದ ಪಶ್ಚಿಮ ಭಾಗ ಮತ್ತು ಯುರೋಪಿನಲ್ಲಿ ಹರಡಿದ ಕ್ರಿಸ್ತನೆಂಬ ದೇವಪುರುಷನ ಆರಾಧನೆಯೂ ಇಂತಹುದೇ ಪ್ರಕ್ರಿಯೆಯ ಮತ್ತೊಂದು ರೂಪ. ಎಲ್ಲ ಬುಡಕಟ್ಟು, ಕುಲಗಳ ಸಮುದಾಯಗಳಿಂದ ಪೂಜೆಗೊಳ್ಳುವ ಸಾರ್ವತ್ರಿಕ ದೇವರ ರೂಪ ಎಂಬುದನ್ನು ಗಮನಿಸೋಣ.

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

October 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: