ಜಿ ಎನ್ ನಾಗರಾಜ್ ಅಂಕಣ- ಸಿದ್ಧಲಿಂಗಯ್ಯ ಫೆನಾಮೆನನ್

ಸಿದ್ದಲಿಂಗಯ್ಯನವರು ಹೇಗೆ ಸಮಾಜದ ಮನಸ್ಸನ್ನು ಪ್ರಭಾವಿಸುವ ಶಕ್ತಿಯಾದರು ಎನ್ನುವುದನ್ನು ಜಿ ಎನ್ ನಾಗರಾಜ್ ಅವರು ತಮ್ಮ ಅಂಕಣದಲ್ಲಿ ಪರಿಶೀಲಿಸಿದ್ದಾರೆ. ಎರಡು ಭಾಗಗಳಲ್ಲಿ ಪ್ರಕಟವಾಗುವ ಈ ವಿಶಿಷ್ಟ ನೋಟ ಚರ್ಚೆಗೆ ತೆರೆದಿದೆ. ನಿಮ್ಮಿಂದ ಪ್ರತಿಕ್ರಿಯೆಯನ್ನು ಆಹ್ವಾನಿಸುತ್ತಿದ್ದೇವೆ. ನಿಮ್ಮ ಅನಿಸಿಕೆಗಳನ್ನು [email protected] ಗೆ ಕಳಿಸಿಕೊಡಿ.

ಇದರ ಮುಂದುವರಿದ ಭಾಗ ನಾಳೆ ಪ್ರಕಟವಾಗಲಿದೆ.

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

ಸಿದ್ಧಲಿಂಗಯ್ಯ ಒಂದು ಫೆನಾಮೆನನ್ (phenomenon). ಹಲವು ಆಯಾಮಗಳ, ತಿರುವು ಮುರುವುಗಳ ಒಂದು ಕಾಂಪ್ಲೆಕ್ಸ್ ಫೆನಾಮೆನನ್. ಕನ್ನಡದ ಅತ್ಯಂತ ಹೆಚ್ಚು ಜನಪ್ರಿಯ ಆಧುನಿಕ ಕವಿಯಾಗಿ ಮತ್ತು ಕಾವ್ಯ, ಸಂಗೀತ, ರಂಗಭೂಮಿಗಳನ್ನು ಆವರಿಸಿದ ಒಂದು ಆಸ್ಫೋಟಕ್ಕೆ ಕಾರಣರಾದ ಸಾಹಿತ್ಯ ಲೋಕದ ಫೆನಾಮೆನನ್. ಸಾಹಿತ್ಯ ರಚನೆಯಲ್ಲಿ ಮಹತ್ವಾಕಾಂಕ್ಷೆಯಿಲ್ಲದೆ ಅಲ್ಪ ತೃಪ್ತರಾದುದು ಈ ಫೆನಾಮೆನನ್‌ನ ಒಂದು ಮುಖ್ಯ ಆಯಾಮ. 

ಬೂಸಾ ಚಳುವಳಿ ಎಂಬ ಕರ್ನಾಟಕದ ಒಂದು ಪ್ರಭಾವಶಾಲಿ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಚಳುವಳಿಯ ನಾಯಕನಾಗಿ, ಹಲವು ಚಳುವಳಿಗಳ ಭಾಗೀದಾರನಾಗಿ ಸಿದ್ಧಲಿಂಗಯ್ಯ ಚಳುವಳಿಗಳ ಒಂದು ಫೆನಾಮೆನನ್. ಸಾಹಿತ್ಯ, ಚಳುವಳಿಗಳ ಎರಡೂ ರಂಗದಲ್ಲಿನ ಕ್ರಿಯಾಶೀಲತೆಯಿಂದಾಗಿ  ಕರ್ನಾಟಕದ ಜನ ಸಂಖ್ಯೆಯ ಅತಿ ಹೆಚ್ಚು ವಿಭಾಗಗಳ ಎಚ್ಚರಗೊಳಿಸುವುದರಲ್ಲಿ ಮುಖ್ಯ ಪಾತ್ರ ವಹಿಸಿದ ಫೆನಾಮೆನನ್. ಈಗ ವ್ಯಾಪಕವಾಗುತ್ತಿರುವ ಲಾಲ್- ನೀಲ್ ಐಕ್ಯತೆಯನ್ನು ಅಂದೇ ಪ್ರತಿಪಾದಿಸಿದ, ಅದಕ್ಕಾಗಿ ಬಿಕ್ಕಟ್ಟುಗಳನ್ನು ಎದುರಿಸಿದ ಒಂದು ಅಪರೂಪದ ಸೈದ್ಧಾಂತಿಕ ಫೆನಾಮೆನನ್. ಊಹಿಸಲಾಗದಂತೆ ತಿರುವುಗಳಲ್ಲಿ ತನ್ನನ್ನು ತಾನೇ ಕಳೆದುಕೊಂಡ ರಾಜಕೀಯ ಫೆನಾಮೆನನ್. ಅದರಿಂದಾಗಿ ತನ್ನ ಗಾಢ ಪ್ರಭಾವಕ್ಕೊಳಗಾದ, ತನ್ನನ್ನು ಮೆಚ್ವುವ ವಿಭಾಗಗಳಿಂದಲೇ ಟೀಕೆ, ತೆಗಳಿಕೆಗೆ ತುತ್ತಾದ ವಿಷಾದಕರ ಫೆನಾಮೆನನ್.

ಹೀಗೆ ಸಾಹಿತ್ಯಿಕ, ಸಾಮಾಜಿಕ, ರಾಜಕೀಯ, ಸೈದ್ಧಾಂತಿಕ ಮನಶ್ಶಾಸ್ತ್ರೀಯ ಫೆನಾಮೆನನ್ ಎಂದರೆ ಸಮಾಜವನ್ನು ರೂಪಿಸುತ್ತಿರುವ, ಅದರ ಚಲನೆಯಲ್ಲಿ ಪಾತ್ರ ವಹಿಸುತ್ತಿರುವ ಹಲವು  ಪ್ರಕ್ರಿಯೆಗಳಲ್ಲಿ ಗುರುತಿಸಬಹುದಾದ ನಿರ್ದಿಷ್ಟ ರೂಪು ರೇಖೆ ಲಕ್ಷಣಗಳುಳ್ಳ ಒಂದು ಪ್ರಕ್ರಿಯೆ. ಇಂತಹ ಪ್ರಕ್ರಿಯೆಗಳಿಗೆ ಅದರ ಸ್ವರೂಪದ ಮೇಲೆ ಹೆಸರಿಸುತ್ತಾರೆ. ಕೆಲವೊಮ್ಮೆ ಅದರ ಮುಖ್ಯ ಲಕ್ಷಣಗಳ ಪ್ರತಿನಿಧಿಯಾದ ವ್ಯಕ್ತಿಗಳ ಹೆಸರಿನಿಂದ ಗುರುತಿಸುತ್ತಾರೆ.

ನಾನು ಹಲವು ರಂಗಗಳನ್ನು ವ್ಯಾಪಿಸಿದ ಈ ಪ್ರಕ್ರಿಯೆಯನ್ನು ಸಿದ್ಧಲಿಂಗಯ್ಯನವರ ಹೆಸರಿನಲ್ಲಿಯೇ ಗುರುತಿಸಬಯಸುತ್ತೇನೆ.‌ ಸಿದ್ಧಲಿಂಗಯ್ಯನವರ ಬದುಕಿನ ವಿವಿಧ ಮಜಲು, ತಿರುವುಗಳನ್ನು ಕೇವಲ ಒಬ್ನ ವ್ಯಕ್ತಿಯಲ್ಲಿನ ಪ್ರಕ್ರಿಯೆಯಾಗಿ, ವ್ಯಕ್ತಿ ನಿಷ್ಠ subjective ದೃಷ್ಟಿಯಿಂದ ವಿಶ್ಲೇಷಿಸುವ ಪ್ರಯತ್ನಗಳು ಹಿಂದೆಯೂ ನಡೆದಿವೆ. ಅವರು ನಿಧನರಾದ ನಂತರ ಮತ್ತೆ ಕೆಲವು. ಆದರೆ ಈ ವ್ಯಕ್ತಿ ನಿಷ್ಠ ದೃಷ್ಟಿಯಿಂದ ಅವರ ಬದುಕನ್ನು ತೆಕ್ಕೆಗೊಳಪಡಿಸಲಾಗುವುದಿಲ್ಲ. ಅದನ್ನೊಂದು ಸಾಮಾಜಿಕ ವಿಜ್ಞಾನಗಳ ಕಾಂಪ್ಲೆಕ್ಸ್ ಫೆನಾಮೆನನ್ ಆಗಿ ನೋಡಿದಾಗ ಮಾತ್ರ ಸರಿಯಾಗಿ ಅರ್ಥೈಸಲು ಸಾಧ್ಯ ಎಂದು ನಾನು ಕಂಡುಕೊಂಡಿದ್ದೇನೆ.

ಅವರು ಒಬ್ಬ ಅತ್ಯಂತ ಜನಪ್ರಿಯ ಆಧುನಿಕ ಕವಿ ಎಂದರೆ ಹಲವರು ಹುಬ್ಬೇರಿಸುವ ಸಾಧ್ಯತೆ ಇದೆ. ತಮ್ಮ ಕಾವ್ಯ ಹೆಚ್ಚು ಜನರನ್ನು ತಲುಪಿರುವುದು, ಹೆಚ್ಚು ಜನರಿಗೆ ಕೆಲವು ಕವನಗಳಾದರೂ ಹೃದ್ಗತವಾಗಿರುವುದು ಎಂಬುದನ್ನು ಜನಪ್ರಿಯತೆಯ ಗುರುತಾಗಿ ಪರಿಗಣಿಸಿದರೆ ಬೇಂದ್ರೆ, ಕೆಎಸ್‌ನರವರಿರಲಿ, ಕುವೆಂಪುರವರಿಗಿಂತ ಹೆಚ್ಚು ಜನರನ್ಮು ಸಿದ್ಧಲಿಂಗಯ್ಯ ತಲುಪಿದ್ದಾರೆ.

ನವೋದಯ ಕವಿಗಳು ಶಿಕ್ಷಣ ಪಡೆದವರು, ಸುಗಮ ಸಂಗೀತಕ್ಕೊಲಿದ ಮಧ್ಯಮ ವರ್ಗದ ಕೆಲ ವಿಭಾಗಗಳ ನಡುವೆ ಪ್ರಚಲಿತರಾದರೆ ಸಿದ್ಧಲಿಂಗಯ್ಯನವರು ಶಿಕ್ಷಣ ಪಡೆದವರಲ್ಲಿ ಗಣನೀಯ ಭಾಗವೂ ಸೇರಿದಂತೆ ನಿರಕ್ಷರ, ಅರೆ ಸಾಕ್ಷರರಾದ ಮಿಲಿಯಾಂತರ ಜನರನ್ನು ತಲುಪಿದ್ದಾರೆ. ಅವರ ಕವನ ಸಂಕಲನಗಳ ಪ್ರತಿಗಳ ಮಾರಾಟದಿಂದ ಮಾತ್ರ ಅದನ್ನು ಅಳೆಯಲಾಗುವುದಿಲ್ಲ. ಅವರ ಕವನಗಳು ಜಿಲ್ಲೆ, ತಾಲ್ಲೂಕುಗಳಲ್ಲಿ ಮುದ್ರಿಸಿದ ನೂರಾರು ಹೋರಾಟದ ಹಾಡುಗಳ/ಕ್ರಾಂತಿಗೀತೆಗಳ ಸಂಕಲನಗಳ ಪ್ರಧಾನ ಭಾಗವಾಗಿವೆ. ಅಷ್ಟೇ ಅಲ್ಲದೆ ಸಾವಿರಾರು ಅರೆ ಸಾಕ್ಷರ ಜನರ ನೋಟ್ ಬುಕ್ಗಳಲ್ಲಿ ಸೇರಿ ಹೋಗಿವೆ. ನಿರಕ್ಷರಿಗಳ ನೆನಪಿನ ಬುತ್ತಿಯ ಭಾಗವಾಗಿವೆ.

ಸಾಮಾನ್ಯವಾಗಿ ಬಣ್ಣಿಸಲಾಗುವಂತೆ ಕೇವಲ ದಲಿತ ಸಮುದಾಯಗಳ ಜನರಿಗೆ ಮಾತ್ರ ಸೀಮಿತವಾಗದೆ ಎಡಪಂಥೀಯ ಕಾರ್ಮಿಕ, ರೈತ, ಕೂಲಿಕಾರ, ಮಹಿಳಾ ಚಳುವಳಿಗಳ ಹಾಡುಗಳಾಗಿವೆ. ಇವು ನಂಜುಂಡಸ್ವಾಮಿಯವರ ನೇತೃತ್ವದ ರೈತ ಸಂಘದ ಹಾಡುಗಳಾಗಲಿಲ್ಲ ಎನ್ನುವುದು ಅವರ ಚಳುವಳಿಯ ಸ್ವರೂಪವನ್ನು ಎತ್ತಿ ತೋರುವ ಲಕ್ಷಣವೂ ಆಗಿದೆ.

ಸಿದ್ಧಲಿಂಗಯ್ಯನವರ ಕಾವ್ಯವೆಲ್ಲಾ ಹಾಡುಗಳೇ ಎನ್ನವಂತಿದೆ. ಇವು ಅಲ್ಲಿಯವರೆಗಿನ ಕರ್ನಾಟಕದ ಯಾವ ಸಂಗೀತ, ಹಾಡಿಕೆಯ ಪ್ರಕಾರಕ್ಕೂ ಒಳಪಡದೆ ಕ್ರಾಂತಿಗೀತೆಗಳು, ಹೋರಾಟದ ಹಾಡುಗಳು ಎಂಬ ಹೊಸ ಹಾಡಿಕೆಯ ಅಥವಾ ಸಂಗೀತ ಪದ್ಧತಿಯನ್ನೇ ಹುಟ್ಟು ಹಾಕಿದವು. ಇವು ತಳ ಸಮುದಾಯಗಳ ಸಾವಿರಾರು ವರ್ಷಗಳ ಬದುಕಿನ ಪಾಡನ್ನು ಹಾಡಾಗಿಸುವುದರ ಜೊತೆಗೆ ಈ ಸಮುದಾಯಗಳಿಂದಲೇ ಸಾವಿರಾರು ಹಾಡುಗಾರರನ್ನು ಹುಟ್ಟು ಹಾಕಿದವು. ಅವುಗಳಲ್ಲಿ ಕೆಲವರು ಪ್ರಸಿದ್ಧ ಹಾಡುಗಾರರಾದರು. ಸಂಗೀತ ಸಂಯೋಜಕರಾದರು.

ನಾಟಕ, ಸಿನೆಮಾಗಳಿಗೆ ಸಂಗೀತ ನಿರ್ದೇಶಕರಾದರು. ಇಂದಿಗೂ ಮೇಲ್ವರ್ಣಗಳ ಬಾಹುಳ್ಯವಿರುವ ಸಂಗೀತ ಕ್ಷೇತ್ರಕ್ಕೆ ಸಮಾನಾಂತರವಾಗಿ  ಈ ಹೊಳೆಯೂ ಉಕ್ಕಿ ಹರಿಯಿತು. ಸಿದ್ಧಲಿಂಗಯ್ಯನವರ ಹಾಡುಗಳ ಜೊತೆ ಜೊತೆಗೇ ಜನ್ನಿ, ಬಸವಲಿಂಗಯ್ಯನವರೂ ಹಾಡುಗಾರರಾಗಿ, ಸಂಯೋಜಕರಾಗಿ ಹುಟ್ಟು ಪಡೆದರು. ಪಿಚ್ಚಳ್ಳಿ ಶ್ರೀನಿವಾಸ್ ಮತ್ತೊಂದು ಹೆಸರು. ಮುಂದೆಯೂ ದಲಿತ ಕಾವ್ಯವೆಂದರೆ ಹಾಡುಗಳೇ ಎಂಬಂತಾಯಿತು. ಸಿದ್ಧಲಿಂಗಯ್ಯನವರ ಬಗೆಗಿನ ಚರ್ಚೆಗಳಲ್ಲಿ ಈ ಅಂಶಕ್ಕೆ ಹೆಚ್ಚು ಗಮನ ನೀಡಲಾಗಿಲ್ಲ. ಇವುಗಳ ಜೊತೆಗೆ ಬೀದಿ ನಾಟಕಗಳು, ಹೊಸ ತಿರುಳಿನ  ರಂಗದ ಮೇಲಿನ ನಾಟಕಗಳಿಗೂ ಸಿದ್ಧಲಿಂಗಯ್ಯ ಹಾಡುಗಳನ್ನು ಬರೆದರು. ಬೀದಿನಾಟಕಗಳಿಗೆ ಇವರ ಹಾಡುಗಳು ಪ್ರಯೋಗದ ಆಧಾರವಾದವು. ಸಿದ್ಧಲಿಂಗಯ್ಯನವರೂ ಎರಡು ಬೀದಿ ನಾಟಕ, ಒಂದು ರಂಗದ ಮೇಲಿನ ನಾಟಕವೂ ಸೇರಿದಂತೆ ಮೂರು ನಾಟಕಗಳನ್ನು ರಚಿಸಿದರು.

ಸಿದ್ಧಲಿಂಗಯ್ಯ ಸಾಹಿತ್ಯಿಕ ಫೆನಾಮೆನನ್ ಆಗಿ ಬೆಳೆದುದರ ಹಿಂದೆ ಮೊದಲ ಶೂದ್ರ ಕವಿ ಕುವೆಂಪುರವರು ಜನಮಾನಸವನ್ನು ಅದಕ್ಕೆ ಅಣಿಗೊಳಿಸಿದ್ದರು. ಅವರು ಬರೆಯುತ್ತಿದ್ದ ಸ್ವಾತಂತ್ರ್ಯಕ್ಕೆ 25 ವರ್ಷಗಳ ಮೊದಲಿನ ಓದುಗ ವಲಯಕ್ಕೂ ಸ್ವಾತಂತ್ರ್ಯಾನಂತರದ 25 ವರ್ಷಗಳ ಬೆಳವಣಿಗೆಯ ಕಾಲದ ಓದುಗ ವಲಯಕ್ಕೂ ಬಹಳ ಅಂತರವಿತ್ತು. ಐದು ಚುನಾವಣೆಗಳು ನಡೆದಿದ್ದವು. ಅಂದು ಆಳುತ್ತಿದ್ದ ಸರ್ಕಾರದ ವಿರುದ್ಧ ಅಸಮಾಧಾನ ಕುದಿವ ಬಿಂದುವನ್ನು ಸಮೀಪಿಸುತ್ತಿತ್ತು. 

ಒಟ್ಟಿನಲ್ಲಿ ಸಾಮಾಜಿಕ ಪರಿಸ್ಥಿತಿ ಪಕ್ವವಾಗಿತ್ತು. ಹೀಗೆ ಪಕ್ವಗೊಳ್ಳುತ್ತಿದ್ದ ಸಾಮಾಜಿಕ ಬೆಳವಣಿಗೆಗಳ ಭಾಗವಾಗಿ ಬೆಳೆದ ಸಿದ್ಧಲಿಂಗಯ್ಯ ಅದನ್ನು ಗ್ರಹಿಸಿ ತಮ್ಮ ವೈಯುಕ್ತಿಕ ಪ್ರತಿಭೆಯ ಮೂಸೆಯಲ್ಲಿ ಹದಗೊಳಿಸಿ ಅಭಿವ್ಯಕ್ತಿಸಿದರು. ಫೆನಾಮೆನನ್‌‌  ಮಾತ್ರವಲ್ಲ ಮತ್ಯಾವುದೇ ದಿಢೀರನೆ ಜನಪ್ರಿಯತೆ ಪಡೆಯುವ ರಾಜಕೀಯ, ಸಿನೆಮಾ, ನಾಟಕ, ಹಾಡು ಸಾಹಿತ್ಯ ಕೃತಿಗಳು ಮೊದಲಾದ ಸಂಗತಿಗಳ ಫೆನಾಮೆನಲ್ ಬೆಳವಣಿಗೆಗೂ  ಅನ್ವಯಿಸುತ್ತದೆ. ಸಾಮಾಜಿಕ ಬೆಳವಣಿಗೆಗಳ ಪಕ್ವತೆಯ ಜೊತೆಗೆ ವ್ಯಕ್ತಿಯ ಪ್ರತಿಭೆ ಎರಡೂ ಮೇಳವಿಸಿ ಇಂತಹುದೊಂದು ಫೆನಾಮೆನಲ್ ಪರಿಣಾಮದ ಫೆನಾಮೆನನ್‌ನ ಹುಟ್ಟಿಗೆ ಕಾರಣವಾಗುತ್ತದೆ.

ಅಲ್ಪ ತೃಪ್ತಿ

ಸಿದ್ಧಲಿಂಗಯ್ಯನವರ ಕಾವ್ಯದ ಈ ಆಸ್ಫೋಟ, ಸಾಹಿತ್ಯದ ಮೇಲೆ, ಸಾಮಾಜಿಕ ಚಳುವಳಿಗಳ ಮೇಲೆ ಬೀರಿದ ಪರಿಣಾಮಗಳ ಜೊತೆಗೆ ಗಮನಿಸಲೇಬೇಕಾದ ಅಂಶ ಅವರಲ್ಲಿ ಸಾಹಿತ್ಯದಲ್ಲಿ ಮಹತ್ತಾದುದನ್ನು ಸಾಧಿಸಬೇಕು ಎಂಬ ತುಡಿತ, ಬರೆಯಬೇಕು, ಬದುಕಿನ ಹಲವಾರು ವಿಷಯಗಳ ಬಗ್ಗೆ ಬರೆಯುತ್ತಲೇ ಇರಬೇಕು ಎಂಬ ಮಹತ್ವಾಕಾಂಕ್ಷೆಯ ಅಭಾವ. ಅವರು ತಮ್ಮ ಗುರುಗಳು ಎಂದು ಪದೇ ಪದೇ ಕರೆಯುವ ಡಾ. ಅಂಬೇಡ್ಕರ್‌ರವರು ಒಂದು ಕಡೆ, ಮಾರ್ಕ್ಸ್‌ರವರು ಮತ್ತೊಂದು ಕಡೆ ಎಂತಹ ಮಹತ್ತರ ಕೊಡುಗೆಗಳನ್ನು ಕೊಟ್ಟಿದ್ದಾರೆ. ಅವರುಗಳು ಜೀವನದ ಕೊನೆಯ ಗಳಿಗೆಯವರೆಗೂ ಎಷ್ಟು ಆಳವಾದ ಅಧ್ಯಯನ, ಶ್ರಮಪೂರಿತ ಬರಹಗಳಲ್ಲಿ ತೊಡಗಿದ್ದರು ಎಂಬುದನ್ನು ಗಮನಿಸಿದರೆ ಅಂತಹ  ತುಡಿತ, ಕಾತರಗಳ ತೀವ್ರ ಅಭಾವವನ್ನು ಕಾಣುತ್ತೇವೆ.

ಇನ್ನು ಸಾಹಿತ್ಯದ ವಿಷಯಕ್ಕೆ ಬಂದರೂ ಕುವೆಂಪುರವರ ಅಗಾಧ, ವೈವಿಧ್ಯಮಯ ಸಾಹಿತ್ಯ ರಚನೆ. ಪ್ರತಿ ಒಂದು ಸಾಹಿತ್ಯದ ಪ್ರಕಾರಗಳಲ್ಲಿಯೂ ಅವರ ಸಾಧನೆ, ಜೀವನದ ಕೊನೆಯವರೆಗೂ ಬರಹದಲ್ಲಿ ತೊಡಗಿದ್ದುದನ್ನು ಕಾಣಬಹುದು. ಹಾಗೆಯೇ ನವೋದಯದ ಮಾಸ್ತಿ, ಬೇಂದ್ರೆ, ಕಾರಂತ, ಜಿ ಎಸ್.ಶಿವರುದ್ರಪ್ಪ ಮೊದಲಾದವರು, ನವ್ಯದ ಅಡಿಗರು, ಅನಂತ ಮೂರ್ತಿ, ಕಂಬಾರರು, ನವ್ಯದಿಂದ ಹೊರಬಂದ ತೇಜಸ್ವಿ, ಲಂಕೇಶ್, ಚಂಪಾ ಮೊದಲಾದವರು, ಸಿದ್ಧಲಿಂಗಯ್ಯನವರ ಸಮಕಾಲೀನರಾದ ಎಚ್.ಎಸ್. ಶಿವಪ್ರಕಾಶ್, ಕುಂವೀ, ಸಿದ್ಧಲಿಂಗಯ್ಯನವರ ಜೊತೆಗಾರರೂ, ಆತ್ಮೀಯ ಮಾರ್ಗದರ್ಶಕರೂ ಆಗಿದ್ದ ಡಿ ಆರ್‌ ನಾಗರಾಜ್ ಎಷ್ಟೊಂದು ಮಹತ್ವಾಕಾಂಕ್ಷೆಯ ಕೃತಿಗಳನ್ನು ರಚಿಸಿದ್ದಾರೆ. ಆದರೆ ಸಿದ್ಧಲಿಂಗಯ್ಯನವರಲ್ಲಿ ಮಾತ್ರವಲ್ಲ ಇತರ ದಲಿತ ಸಾಹಿತಿಗಳಲ್ಲೂ ಇಂತಹ ಮಹತ್ವಾಕಾಂಕ್ಷೆಯ ಕೊರತೆಯನ್ನು ಕಾಣುತ್ತೇವೆ. 

ದೇವನೂರರ ಕತೆ, ಕಾದಂಬರಿಗಳು, ಸಿದ್ಧಲಿಂಗಯ್ಯನವರ ಕಾವ್ಯವೆಲ್ಲ ಕೇವಲ ಹಿಡಿಯಷ್ಟು ಗಾತ್ರದ್ದು. ಅದೇ ಕನ್ನಡ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ಎಂಬುದು ನಿಜ. ಆದರೆ ಕುವೆಂಪು ಮೊದಲಾದವರು ಅಂತಹ ಮಹತ್ವದ ಕೃತಿಗಳನ್ನು ರಚಿಸಿದ ಮೇಲೂ ಮತ್ತಷ್ಟು ಮಹತ್ವದ ಕೃತಿಗಳನ್ನು ರಚಿಸಲು ತಮ್ಮೆಲ್ಲಾ ಶ್ರಮವನ್ನು ಹಾಕಿದರು. ಸಿದ್ಧಲಿಂಗಯ್ಯನವರ ‘ಅಲ್ಲೇ ಕುಂತವರೇ’ ಅಂತಹ ಮಹತ್ವಾಕಾಂಕ್ಷೆಯ ಸೂಚನೆ ನೀಡಿತ್ತು. ಆದರೆ ಅದು ಸೂಚನೆಯಾಗಿ ಮಾತ್ರ ಉಳಿಯಿತು. 

ಮೊದಲ ಕೃತಿಗಳಿಗೇ ಸಿಕ್ಕ ಪ್ರಸಿದ್ಧಿ, ಪ್ರಸರಣಗಳಿಂದಲೇ ಸಂತೃಪ್ತರಾದರೇ? ಕುವೆಂಪುರವರ ಮೊದಲ ಕೃತಿಗಳಿಂದಲೂ ಗಣನೀಯ ಪ್ರಸಿದ್ಧಿ ದೊರಕಿತ್ತಲ್ಲವೇ? Psychology of the oppressed ಎಂಬ ವಿಶೇಷವೇ ಇದೆ. ಜೀವನದಲ್ಲಿ ಮೊದಲು ಅನುಭವಿಸಿದ ಅತೀವ ಸಂಕಟ, ಅವಮಾನಗಳು ನಿವಾರಣೆಯಾದ ಕೂಡಲೇ ಇಂತಹ ಅಲ್ಪ ತೃಪ್ತಿ ಮೊಳೆಯುತ್ತದಂತೆ. ಆದರೆ ಡಾ.ಅಂಬೇಡ್ಕರ್‌ರವರ ಚಿಂತನೆ ಪ್ರಭಾವಿಸಿದಂತೆ ಅವರ ಕಾರ್ಯ, ಶ್ರಮದ ಬಾಹುಳ್ಯದ ಮಾದರಿ ಸಿದ್ಧಲಿಂಗಯ್ಯನವರು, ಮಹಾದೇವರಿಗೇಕೆ ಪ್ರಭಾವಿಸಲಿಲ್ಲ ಎಂಬ ಪ್ರಶ್ನೆ ಏಳುತ್ತದೆ.

ಮಂತ್ರಿಯಾದ ಬಸವಲಿಂಗಪ್ಪನವರು, ಅವರ ವಿವಿಧ ಹೇಳಿಕೆಗಳು, ಬೂಸಾ ಹೇಳಿಕೆ, ಅದಕ್ಕೆ ಸಮಾಜದಲ್ಲಿ ಬಂದ ಪರ ವಿರೋಧ ಸಂಘರ್ಷ, ಅದರಲ್ಲಿ ಸಾಹಿತಿಗಳ ನಿಲುವುಗಳು ಸಮಾಜದ ಒಟ್ಟಾರೆ ಚಿಂತನೆಯನ್ನು ಪ್ರಭಾವಿಸಿತು ಹಾಗೂ ದಲಿತ ಸಮುದಾಯದಲ್ಲಿ ಎಚ್ಚರವನ್ನು ಮೂಡಿಸಿತು. ಬೂಸಾ ಚಳುವಳಿಯಲ್ಲಿ ಸಿದ್ಧಲಿಂಗಯ್ಯನವರ ನಾಯಕತ್ವ, ಅವರು ತಿಂದ ಪೆಟ್ಟು ಬಹುಚರ್ಚಿತ ವಿಷಯ.

ಸಿದ್ಧಲಿಂಗಯ್ಯನವರ ಮೊದಲ ಕವನಗಳಲ್ಲಿ ವ್ಯಕ್ತವಾಗಿರುವ ‘ಇಕ್ರಲಾ ವದೀರ್ಲಾ’, ದುಪ್ಟಿ ಎಸೆದು ಎಗರ್ಬೇಕು, ಸನಿಕೆ ಗುದ್ಲಿ ತಕ್ಕೊಂಡು ದೆವ್ಗೋಳು ಹೊಂಟಂಗೆ ಹೊರಡ್ಬೇಕು ಎಂಬ ಆಕ್ರೋಶಕ್ಕೆ ಅವರು ಈ ಚಳುವಳಿಯಲ್ಲಿ ವಿದ್ಯಾರ್ಥಿಗಳನ್ನು ಎಚ್ಚರಿಸುವ ಹಲವಾರು ಭಾಷಣಗಳನ್ನು ಮಾಡಿದ ಶೈಲಿ ಹಾಗೂ ಕೊನೆಗೆ ಬಸವಲಿಂಗಪ್ಪನವರು ರಾಜೀನಾಮೆ ಕೊಡಬೇಕಾಗಿ ಬಂದಾಗಿನ ಹತಾಶೆ ಹಿನ್ನೆಲೆಯಾಗಿರಬಹುದು. ಈ ಚಳುವಳಿ ಮತ್ತು ಸಿದ್ಧಲಿಂಗಯ್ಯನವರ ಪಾತ್ರ ಬಹಳ ಚರ್ಚೆಗೊಳಗಾಗಿರುವುದರಿಂದ ಅದನ್ನು ಸಿದ್ಧಲಿಂಗಯ್ಯ ಫೆನಾಮೆನನ್‌‌‌ನ ಸ್ಫೋಟಕ್ಕೆ ಸಮಾಜ ಮತ್ತು ಸಾಂಸ್ಕೃತಿಕ ವಾತಾವರಣವನ್ನು ಪಕ್ವಗೊಳಿಸಿದ ಒಂದು ಮುಖ್ಯ ಅಂಶವೆಂದು ನಮೂದು ಮಾಡಿ ಮುಂದುವರೆಯುತ್ತೇನೆ.

ನೀಲ್- ಲಾಲ್’ ಚಿಂತನೆಯ ಐಕ್ಯತೆ

ಬೇರೆಲ್ಲಾ ದಲಿತ ಸಾಹಿತಿಗಳು, ಬಂಡಾಯ ಸಾಹಿತಿಗಳಿಗೆ ಹೋಲಿಸಿದರೆ ಸಿದ್ಧಲಿಂಗಯ್ಯನವರ ವಿಶಿಷ್ಟತೆ ಅವರ ಮೇಲೆ ಡಾ.ಅಂಬೇಡ್ಕರ್ ಮತ್ತು ಮಾರ್ಕ್ಸ್ ವಾದದ ಎರಡೂ ಚಿಂತನೆಗಳ ಗಾಢ ಪ್ರಭಾವ. ಎರಡೂ ಚಿಂತನೆಗಳ ಪ್ರಭಾವಕ್ಕೊಳಗಾದ ಸಾಹಿತಿಗಳು ನಂತರ ಒಬ್ಬರಿಬ್ಬರಿದ್ದರೂ ‘ಹೊಲೆಮಾದಿಗರ ಹಾಡು’ ಸಂಕಲನ ಪ್ರಕಟವಾದ 1974ರ ಕಾಲಕ್ಕೇ ಈ ಜೋಡಿ ಚಿಂತನೆಗಳ ಮೋಡಿಗೊಳಗಾದವರು ಸಿದ್ಧಲಿಂಗಯ್ಯನವರು.

ಇದೊಂದು ಅಚ್ಚರಿಯ ವಿಷಯವೇ ಆಗಿದೆ. ಅವರ ಕಾವ್ಯದಲ್ಲಿ ಈ ಎರಡೂ ಪ್ರಭಾವಗಳು ವಿಶಿಷ್ಟ ಎರಕದಲ್ಲಿ ಬೆಸುಗೆಗೊಂಡಿರುವುದು ಬಹಳ ಸ್ಪಷ್ಟವಾಗಿದೆ. ಒಂದು ಕಡೆ ಅಸ್ಪೃಶ್ಯತೆಯ ಅವಮಾನ, ನೋವು, ಸಂಕಟಗಳ ತೀವ್ರತರ ಅನುಭವ, ಅದರಿಂದ ಮೂಡಿದ ಸಿಟ್ಟು. ಜಾತಿ ವ್ಯವಸ್ಥೆಯ ತರತಮಗಳ ಪರಿಕಲ್ಪನೆಯ ಬಗೆಗಿನ ತಿಳುವಳಿಕೆ, ಮೂಢ ನಂಬಿಕೆ, ಕಂದಾಚಾರಗಳ ವಿರುದ್ಧದ ಅರಿವು ಅವರಿಗೆ ಮೊದಲು ಮೂಡಿದ್ದು ಅಂದು ಇವರು ವಾಸವಾಗಿದ್ದ ಶ್ರೀರಾಮಪುರದಲ್ಲಿ ರಿಪಬ್ಲಿಕನ್ ಪಕ್ಷದ ಪ್ರಚಾರ ಸಭೆಗಳಿಂದ. ಆ ನಂತರ ಅಂಬೇಡ್ಕರ್‌ರವರ ಬರಹಗಳ ಅಧ್ಯಯನದಿಂದ.

ಸಮಾಜ ರಚನೆ, ಶೋಷಣೆಯ ಸ್ವರೂಪ, ಪ್ರಭುತ್ವದ ಮೇಲೆ ಹಿಡಿತ ಹೊಂದಿದ ಶಕ್ತಿಗಳು, ಜಾತಿ, ಅಸ್ಪೃಶ್ಯತೆಯ ನಿರ್ಧಾರಕ ಶಕ್ತಿಗಳಾಗಿ ಪಾಳೆಯಗಾರಿ ಭೂಮಾಲಕ ಅದನ್ನು, ಧರ್ಮ ಮತ್ತು ಶೋಷಣೆಯ ಅಂತರ್ ಸಂಬಂಧ ಇವುಗಳ ಅರಿವು ಮಾರ್ಕ್ಸ್‌ವಾದದ ಮೂಲದಿಂದ. ಈ ಎರಡೂ ಚಿಂತನೆಗಳ ಬೆಸುಗೆ ಅವರ ಹಲವು ಕವನಗಳಲ್ಲಿ ಬಹಳ ಸ್ಪಷ್ಟವಾಗಿ ಮೂಡಿದೆ. ಈ ಬೆಸುಗೆಯೇ ಅವರ ಕವನಗಳು ಕನ್ನಡ ಸಾಂಸ್ಕೃತಿಕ ಜಗತ್ತನ್ನು ಬೆರಗುಗೊಳಿಸಿದ ಪರಿಣಾಮ, ಪ್ರಭಾವಗಳಿಗೆ ಕಾರಣವಾಗಿದೆ. ಅಂಬೇಡ್ಕರ್‌ರವರ ಬಗೆಗಿನ ಕವನದಲ್ಲಿಯೂ ಮಾರ್ಕ್ಸ್‌ವಾದಿ ವಿಮರ್ಶೆಯ ಸ್ಪಷ್ಟತೆ, ದಿಟ್ಟತನ ಆಶ್ಚರ್ಯಕರವಾದ್ದು. 

ಈ ಬೆಸುಗೆ ಕೇವಲ ಕಾವ್ಯದಲ್ಲಿ ಮಾತ್ರವೇ ಅಲ್ಲದೆ ಶಿಕ್ಷಣ, ಸಾಮಾಜಿಕ ಚಳುವಳಿಗಳು, ಸಾಂಸ್ಕೃತಿಕ ರಂಗದ ಮೇಲೆ ಬಹು ದೊಡ್ಡ ಪರಿಣಾಮ ಬೀರಿತು. ಸಿದ್ಧಲಿಂಗಯ್ಯ‌ನವರು ಪ್ರಮುಖ ಪಾತ್ರ ವಹಿಸಿ ಶ್ರೀರಾಮಪುರ, ಮಾವಳ್ಳಿ ಮತ್ತಿತರ ಪ್ರದೇಶಗಳಲ್ಲಿ ಆರಂಭಿಸಿದ 22 ರಾತ್ರಿ‌ ಶಾಲೆಗಳಲ್ಲಿ ಅಂಬೇಡ್ಕರ್ ಚಿಂತನೆಯಿಂದ ಪ್ರಭಾವಿತರಾದವರು, ಕಮ್ಯುನಿಸ್ಟರು ಶಿಕ್ಷಕರಾಗಿ ಕೆಲಸ ಮಾಡಿದರು. ಇದು ಒಂದು ಕಡೆ ದಲಿತ ಸಮುದಾಯಗಳ ಶಿಕ್ಷಣ ಕಾಲೇಜು ಹಂತ ಮುಟ್ಟಲು ನೆರವಾಯಿತು. ಮತ್ತೊಂದು ಕಡೆ ಅನೇಕ ದಲಿತ, ಕಮ್ಯುನಿಸ್ಟ್ ಚಳುವಳಿಗಳ ಕಾರ್ಯಕರ್ತರು ಇಲ್ಲಿಂದ ಹೊರಬಂದರು.

ಬಹಳ ಮುಖ್ಯವಾದ ಮತ್ತೊಂದು ಸಂಗತಿ ಎಂದರೆ ಈ ಶಾಲೆಗಳ ಯುವಕರ ಸಂಗೀತ, ನಟನಾ ಪ್ರತಿಭೆ ಬೆಳಕಿಗೆ ಬರಲು ಸಹಾಯವಾಯಿತು. ಅವರಲ್ಲಿ ಕರ್ನಾಟಕದ ಸಾಂಸ್ಕೃತಿಕ ಲೋಕದ ಮೇಲೆ ಬಹುಕಾಲ ಉಳಿಯುವಂತೆ ತಮ್ಮ ಅಚ್ಚೊತ್ತಿದ ಜನ್ನಿ, ಬಸವಲಿಂಗಯ್ಯನಂತಹ ಉತ್ತಮ ಪ್ರತಿಭೆಗಳೂ ಇದ್ದಾರೆ. ಇದು ಕರ್ನಾಟಕದ ಸಾಂಸ್ಕೃತಿಕ ರಂಗ ಒಂದು ಎತ್ತರದ ಮಜಲಿಗೇರಲು ಬುನಾದಿಯಾಯಿತು.

ಸಮುದಾಯದ ವಿಶಿಷ್ಟ ರಂಗ ನಾಟಕಗಳು, ಹೊಸ ಅಧ್ಯಾಯ ತೆರೆದ ಬೀದಿ ನಾಟಕಗಳಲ್ಲಿ ಮಿಂಚಿದ ಈ ಪ್ರತಿಭೆಗಳು ರಂಗಭೂಮಿಯನ್ನು ಬೆರಗುಗೊಳಿಸಿದರು. ಇವರೆಲ್ಲ ಸಿದ್ಧಲಿಂಗಯ್ಯನವರ ನಿವಾಸದ ಆಸುಪಾಸಿನಲ್ಲಿ ಸಹವರ್ತಿಗಳಾಗಿ ಬೆಳೆದವರು. ಕರ್ನಾಟಕದ ಸಾಂಸ್ಕೃತಿಕ ಲೋಕದಲ್ಲಿ ಹೊಸ ಸಂಚಲನ‌ ಮೂಡಿಸಿದ ಮೊದಲ ಸಾಂಸ್ಕೃತಿಕ ಜಾಥಾ ಎರಡೂ ಚಿಂತನೆಗಳ ಬೆಸುಗೆಯ ಅತ್ಯುತ್ತಮ ಕೊಡುಗೆ. ಸಿದ್ಧಲಿಂಗಯ್ಯನರು ವಿದ್ಯಾರ್ಥಿಯಾಗಿ ಡಿ.ಆರ್. ನಾಗರಾಜ್, ಅಗ್ರಹಾರ ಕೃಷ್ಣಮೂರ್ತಿ, ಮೊದಲಾದ ತಮ್ಮ ಸಹಪಾಠಿಗಳನ್ನೂ ತಮ್ಮೆಲ್ಲ ಚಟುವಟಿಕೆಗಳಲ್ಲಿ ಜೊತೆಗೂಡಿಸಿಕೊಂಡದ್ದೂ ಸಾಂಸ್ಕೃತಿಕ ರಂಗದ ಬೆಳವಣಿಗೆಗೆ ಕೊಡುಗೆಯಾಯಿತು.

ಹೀಗೆ ಎರಡೂ ಚಿಂತನೆಗಳ ಬೆಸುಗೆ ಇತರನೇಕ ಪ್ರಜಾಪ್ರಭುತ್ವೀಯ ಮನಸ್ಸಿನ ನೂರಾರು ಸಾಹಿತಿ, ಕಲಾವಿದರು ಮತ್ತಿತರನ್ನು ಸೆಳೆದು ಒಂದು ಬಹುತ್ವದ ಒಗ್ಗೂಡುವಿಕೆಯ ಶಕ್ತಿಯನ್ನು ನಿರೂಪಿಸಿತು. ಹಾಗೆಯೇ ಬಂಡಾಯ ಸಾಹಿತ್ಯ ಸಂಘಟನೆಯೂ ಇಂತಹ ವಿವಿಧ ಪ್ರಗತಿಪರ, ಪ್ರಜಾಪ್ರಭುತ್ವೀಯ ಚಿಂತನೆಗಳ ಒಗ್ಗೂಡುವಿಕೆಯಲ್ಲಿ ಫಲಿಸಿದ್ದು. ಅದರ ಮುಖ್ಯ ಘೋಷಣೆ ‘ಖಡ್ಗವಾಗಲಿ ಕಾವ್ಯ ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ’ ಹಾಗೂ ಗುರಿ ಉದ್ದೇಶಗಳು ಉಂಟುಮಾಡಿದ ಸೆಳೆತ ಈ ಮೇಳವದ ಫಲ.

ಈ ಬೆಸುಗೆ ಸಾಮಾಜಿಕ ಚಳುವಳಿಗಳನ್ನೂ ಕ್ರಿಯಾಶೀಲತೆಯ ಹಾಗೂ ವಿಸ್ತಾರದ ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿತು. ಸಿದ್ಧಲಿಂಗಯ್ಯನವರ ಹಲವು ಪರಿಣಾಮಕಾರಿ ಹಾಡುಗಳಿಗೆ ಕಾರಣವಾದ ಬೆಲ್ಚಿ, ಕರಂಚೇಡು ದೌರ್ಜನ್ಯಗಳು, ಬಾಳ್ಳುಪೇಟೆ ಕಾಫಿ ತೋಟದ ಕಾರ್ಮಿಕರ ಮೇಲಿನ ದೌರ್ಜನ್ಯ, ದಾಸನಪುರದ ಚಿಕ್ಕ ತಿಮ್ಮಯ್ಯನ ಕೊಲೆ, ಶೇಷಗಿರಿಯಪ್ಪನ‌ ಕೊಲೆ, ಅನಸೂಮ್ಮನ ಮೇಲಿನ ಅತ್ಯಾಚಾರ, ದೇವಿಕಾರಾಣಿ ರೋರಿಚ್ ಎಸ್ಟೇಟ್ ಕಾರ್ಮಿಕರ ಮೇಲಿನ ದೌರ್ಜನ್ಯ ಹೀಗೆ ಹಲವು ಹೋರಾಟಗಳು, ಜಾಥಾಗಳಿಗೆ ಕಾರಣವಾದ ಜನ ಚಳುವಳಿಗಳು ಈ ಬೆಸುಗೆಯಿಂದ ಮೂಡಿದವು.

ಅಂದು ಕರ್ನಾಟಕದ ಎಲ್ಲೆಡೆ, ಯಾರ ಮೇಲೆ ದೌರ್ಜನ್ಯ ಎಸಗಲ್ಪಟ್ಟರೂ ಮೀನ‌ಮೇಷ ಎಣಿಸದೆ  ಎಲ್ಲರೂ ಧುಮುಕುತ್ತಿದ್ದುದು ಈ ಬೆಸುಗೆ ಮೂಡಿಸಿದ ವಾತಾವರಣದ ಫಲವಾಗಿತ್ತು. ತುರ್ತು ಪರಿಸ್ಥಿತಿಯ ನಂತರದ ಚಳುವಳಿಗಳು ಏರುಮುಖವಾಗಿ ಸಾಗಲು ಕಾರಣವಾಗಿತ್ತು. ದಲಿತ ಸಂಘರ್ಷ ಸಮಿತಿ ರೂಪುಗೊಳ್ಳುವ ಮತ್ತು ರೂಪುಗೊಂಡ ನಂತರದ ಮೊದಲ ಘಟ್ಟದಲ್ಲಿ ಕೂಡಾ ಈ ಬೆಸುಗೆಯ ಪಾತ್ರ ಗಣನೀಯವಾಗಿತ್ತು.

ಸಿದ್ಧಲಿಂಗಯ್ಯ ಫೆನಾಮೆನನ್‌ನ  ಸ್ಫೋಟ, ಉಚ್ಛ್ರಾಯದ ಹಂತದ ಬೆಳವಣಿಗೆಗಳನ್ನು ಈ ಲೇಖನದಲ್ಲಿ ಪರಿಶೀಲಿಸಲಾಗಿದೆ. ಇವುಗಳಿಂದ ಕರ್ನಾಟಕದ ಸಾಂಸ್ಕೃತಿಕ ರಂಗ, ಸಾಮಾಜಿಕ ಚಳುವಳಿಗಳು,ರಾಜಕೀಯ ಕಲಿಯಬೇಕಾದ ಪಾಠಗಳು ಹಲವಿವೆ.

ಅದೇ ಸಮಯದಲ್ಲಿ ಸಿದ್ಧಲಿಂಗಯ್ಯ ಫೆನಾಮೆನನ್‌ನ ಮತ್ತೊಂದು ಘಟ್ಟ, ಅದರ ಇಳಿಮುಖದ ಬೆಳವಣಿಗೆಗಳು, “ಯಾಕೋ ಬೆನ್ನಿಗೆ ಇರಿದ್ಬಿಟ್ರಿ ಅನ್ನಿಸ್ತಿದೆ ” ಎಂದ ಒಬ್ಬ ದಲಿತ ಯುವತಿ ತೋಡಿಕೊಂಡ ಅಳಲಿಗೆ, ಹಲವು  ಟೀಕೆ, ತೆಗಳಿಕೆ, ನಿಂದೆಗಳಿಗೆ ಕಾರಣವಾದ ಬೆಳವಣಿಗೆಗಳ ಕಾರಣಗಳು, ಅದರ ಸಾಮಾಜಿಕ ವಿಜ್ಞಾನದ  ಬಗ್ಗೆ ತಿಳಿದುಕೊಳ್ಳುವುದು ಮತ್ತಷ್ಟು ಹೆಚ್ಚಿನ  ಪ್ರಾಮುಖ್ಯತೆ ಉಳ್ಳದ್ದು.

। ನಾಳೆ ಈ ಅಂಕಣದ ಮುಂದಿನ ಭಾಗ ।

‍ಲೇಖಕರು Avadhi

June 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: