ಜಿ ಎನ್ ನಾಗರಾಜ್ ಅಂಕಣ- ಸಾಕ್ರಟೀಸ್, ಯಾಜ್ಞವಲ್ಕ್ಯ, ಪ್ಲೇಟೋ, ಜನಕರಾಜರುಗಳ ಪುನರ್ಜನ್ಮ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

41

ಒಂದು ಕಡೆ ಭಾರತ ಮತ್ತೊಂದು ಕಡೆ ಗ್ರೀಸ್ ಎರಡೂ ದೇಶಗಳಲ್ಲಿ ದೇಹದಿಂದ ಪ್ರತ್ಯೇಕವಾದ ಅವಿನಾಶಿ ಆತ್ಮ ಮತ್ತು ಮತ್ತೆ ಮತ್ತೆ ಶರೀರ ತಳೆದು ಪುನರ್ಜನ್ಮ ಎಂಬ ಕಲ್ಪನೆಗಳನ್ನು ಸೃಷ್ಟಿಸಲಾಯಿತು.

ಉಪನಿಷತ್ತುಗಳಲ್ಲಿ ಹಾಗೂ ಸಾಕ್ರಟೀಸ್, ಪ್ಲೇಟೋರಲ್ಲಿ  ಬ್ರಹ್ಮನ ಕಲ್ಪನೆ :
ಬ್ರಹ್ಮ ಎಂಬ ಕಲ್ಪನೆ  ಭಾರತೀಯ ತತ್ತ್ವಶಾಸ್ತ್ರದ ಅತ್ಯುಚ್ಚ ಕಲ್ಪನೆ ಎಂದು ಸಾರುತ್ತಾ ಬರಲಾಗಿದೆ. ಪಾಶ್ಚಿಮಾತ್ಯ ದೇಶಗಳ ಆಧ್ಯಾತ್ಮವಾದಿಗಳು ಆತ್ಮ ಮತ್ತು ಬ್ರಹ್ಮ ಕಲ್ಪನೆಗಳಿಗೆ ಮಾರು ಹೋಗಿದ್ದಾರೆ. ಉಪನಿಷತ್ತುಗಳ ನಾಲ್ಕು ಮಹಾವಾಕ್ಯಗಳೆಂದು ಶಂಕರರು ಬಿಂಬಿಸಿದುರಲ್ಲಿ ಮೂರು ನೇರವಾಗಿ ಬ್ರಹ್ಮನ ಕಲ್ಪನೆಗೇ ಸಂಬಂಧಿಸಿದ್ದು.

ಅಹಂ  ಬ್ರಹ್ಮಾಸ್ಮಿ -ನಾನು ಬ್ರಹ್ಮನಾಗಿದ್ದೇನೆ (ಬೃಹದಾರಣ್ಯಕ 1-4-10),
ಪ್ರಜ್ಞಾನಂ ಬ್ರಹ್ಮ -ಬ್ರಹ್ಮವೇ ಪ್ರಜ್ಞಾನ (ಐತರೇಯ 3-3),
ಆಯಾಮ್ ಆತ್ಮಾ ಬ್ರಹ್ಮ – ಆತ್ಮವೇ ಬ್ರಹ್ಮ (ಮಾಂಡೂಕ್ಯ 1-2)
ಅವುಗಳಲ್ಲಿ ಅಹಂ ಬ್ರಹ್ಮಾಸ್ಮಿ ಎಂಬುದು ಬಹಳ ಪ್ರಚಲಿತವಾದ ಮಹಾವಾಕ್ಯ . ಇವುಗಳ ಜೊತೆಗೆ ಸರ್ವಂ ಖಲ್ವಿದ ಬ್ರಹ್ಮ ಮೊದಲಾದ ಹಲವಾರು ವಾಕ್ಯಗಳು ಉಪನಿಷತ್ತುಗಳ ತುಂಬೆಲ್ಲ ಹರಡಿವೆ.

ಆತ್ಮವು ಬ್ರಹ್ಮದ ಒಂದು ರೂಪ. ಆತ್ಮಗಳೆಲ್ಲ ಬ್ರಹ್ಮದಲ್ಲಿಯೇ ವಿಲೀನವಾಗುತ್ತವೆ ಎಂಬ ಈ ಭಾವನೆಗಳು ಪುನರ್ಜನ್ಮ, ಕರ್ಮ ಸಿದ್ಧಾಂತದ ಒಂದು ಮುಖ್ಯ ಭಾಗ. ಈ ಪುನರ್ಜನ್ಮಗಳ ಸರಪಳಿಯ ಬಂಧನದಿಂದ , ಅವುಗಳ ಸಂಕಟಗಳಿಂದ ಬಿಡುಗಡೆಯೇ ಇಲ್ಲವೇ ? ಇಲ್ಲವೆಂದಾದರೆ ಪಾಪಗಳ ಬಗ್ಗೆ ಭಯವೇಕೆ, ಪುಣ್ಯಗಳ ಬಗ್ಗೆ ಕಾಳಜಿಯೇಕೆ ಎಂಬ ನಿರ್ಲಕ್ಷ್ಯ ಭಾವನೆ ಮಾನವರಲ್ಲಿ ಹುಟ್ಟುವುದನ್ನು ತಪ್ಪಿಸಲು ಬ್ರಹ್ಮನ ಕಲ್ಪನೆ ಮಾಡಲಾಗಿದೆ. ಇದೆ, ವಿವಿಧ ಜನ್ಮಗಳ ಸಂಕಟಗಳ ಸರಮಾಲೆಯಿಂದ ಮುಕ್ತಿ ಇದೆ. ಅದುವೇ ಮೋಕ್ಷ. ಬ್ರಹ್ಮನೊಂದಿಗೆ ಒಂದಾಗುವಿಕೆ. ಸದ್ವರ್ತನೆಗಳಿಂದ, ಪುಣ್ಯದ ಗಳಿಕೆಯಿಂದ ಕರ್ಮ ಕಳೆದ ಮೇಲೆ ಮೋಕ್ಷ ದೊರಕುತ್ತದೆ ಎಂಬ ಕಲ್ಪನೆಯೇ ಮಾನವರನ್ನು‌ ನಿಯಂತ್ರಿಸುತ್ತದೆ ಎಂಬ ಭಾವನೆ ಬ್ರಹ್ಮ-  ಮೋಕ್ಷ ಕಲ್ಪನೆಯಲ್ಲಿ ಅಡಗಿದೆ.

ಸಾಕ್ರಟೀಸ್ ಮತ್ತು ಪ್ಲೇಟೋ ಕೂಡಾ ಆತ್ಮ ಅವಿನಾಶಿ ಎಂಬ ಕಲ್ಪನೆಯ ಉಪ ಉತ್ಪನ್ನಗಳಾಗಿ ಜೀವಿಗಳಲ್ಲಿ ಆತ್ಮ ಎಲ್ಲಿಂದ ಬಂತು ಮತ್ತು ಜನ್ಮಗಳ ಸಂಕಟಗಳೆಲ್ಲ ಮುಗಿದ ನಂತರ ಎಲ್ಲಿಗೆ ಹೋಗುತ್ತದೆ ಎಂಬುದನ್ನು ವಿವರಿಸಲು ಪ್ರಯತ್ನಿಸಿದ್ದಾರೆ. ಅದಕ್ಕೆ ಅವರು ಪ್ರತಿಯೊಂದು ಜೀವಿಯಲ್ಲಿರುವ ಸೋಲ್- ಆತ್ಮವೆಂಬ ಕಲ್ಪನೆಯ ಜೊತೆಗೆ ಯೂನಿವರ್ಸಲ್ ಸೋಲ್- ಸಾರ್ವತ್ರಿಕ ಆತ್ಮ ಎಂಬ ಕಲ್ಪನೆಯನ್ನು ಮಾಡಿಕೊಂಡಿದ್ದಾರೆ. ಇದನ್ನು ಅವರು ಇಡೀ ಬ್ರಹ್ಮಾಂಡದ ಆತ್ಮ ಎಂಬ ರೀತಿಯಲ್ಲಿ ಪರಿಭಾವಿಸಿಕೊಂಡಿದ್ದಾರೆ. ಇದಕ್ಕೆ ಬ್ರಹ್ಮನ ಬಗ್ಗೆ ಉಪನಿಷತ್ತುಗಳಲ್ಲಿ ಅಪರಿಮಿತವಾಗಿ ಮಾಡಿದ ವರ್ಣನೆಗಳನ್ನೇನೂ ಮಾಡಿಲ್ಲವಾದರೂ ಅದರ ಸಂವಾದಿಯಾಗಿ ನಿರ್ವಿಕಾರಿ, ಆನಂದದ ಸ್ವರೂಪ, ಇದರಿಂದಲೇ ಇಡೀ ಬ್ರಹ್ಮಾಂಡದ ಸೃಷ್ಟಿ,  ನಕ್ಷತ್ರಗಳು, ಗ್ರಹಗಳಿಗೂ ಆತ್ಮವಿರುತ್ತದೆ. ಅವೆಲ್ಲಕ್ಕಿಂತ ಹಿರಿದಾದುದು ಈ ಸಾರ್ವತ್ರಿಕ ಆತ್ಮ. ಎಲ್ಲ ವಸ್ತು, ಜೀವಿಗಳ ಚಾಲನಾ ಶಕ್ತಿ ಎಂದು ವಿವರಿಸಿಕೊಂಡಿದ್ದಾರೆ. ಸತ್ತು ದೇಹದಿಂದ ಬಿಡುಗಡೆಯಾದ ನಂತರ ಇಂತೆಲ್ಲ ಗುಣ ವಿಶೇಷಗಳ ಆತ್ಮದ ಪ್ರಯಾಣಕ್ಕೂ ಮೇಲು ಕೀಳುಗಳನ್ನು ಮೆತ್ತಲಾಗಿದೆ.

ಆತ್ಮನಿಗೆ ಅಂಟಿಸಿದ ಮೇಲು ಕೀಳು :
ಆತ್ಮಕ್ಕೆ ಸಾವಿಲ್ಲ, ಅದು ಸ್ವಯಂ ಪ್ರಕಾಶ, ಸ್ವಯಂ ಚಾಲಿತ, ಅದು ಬ್ರಹ್ಮನ / ಸಾರ್ವತ್ರಿಕ ಆತ್ಮದ ಭಾಗ ಎಂದೆಲ್ಲ ವರ್ಣಿಸಲಾದ ಆತ್ಮ ಸತ್ತ ಮೇಲೆ ಪರಲೋಕಕ್ಕೆ ಪಯಣಿಸುವ ಮಾರ್ಗ ಮಾತ್ರ ಬೇರೆ ಬೇರೆ.

ಉಪನಿಷತ್ತುಗಳಲ್ಲಿ ಈ ಎರಡು ಮಾರ್ಗಗಳನ್ನು ದೇವಯಾನ ಮತ್ತು ಪಿತೃಯಾನ ಎಂದು ಹೆಸರಿಸಲಾಗಿದೆ. ಉಪಾಸನಾ ನಿಷ್ಠರೂ, ತಂತಮ್ಮ ಕರ್ಮಗಳನ್ನು ಶ್ರದ್ಧೆಯಿಂದ ಮಾಡಿದವರು, ಕಟ್ಟಲೆಗಳಿಗನಿಗುಣವಾಗಿ ಪರಿಶುದ್ಧ ಜೀವನ ನಡೆಸಿದವರು ಮೊದಲನೆಯ ಮಾರ್ಗದಿಂದ ಆನಂದಮಯವಾದ ಬ್ರಹ್ಮ ಲೋಕವನ್ನು ಸೇರಿ ತಮ್ಮ ಉಪಾಸನೆಯನ್ನು ಮುಂದುವರೆಸುತ್ತಾರೆ. ಕಟ್ಟ ಕಡೆಯಲ್ಲಿ ನಿರ್ಗುಣ ಪರಬ್ರಹ್ಮದಲ್ಲಿ ಒಂದಾಗುತ್ತಾರೆ. ಇದಕ್ಕೆ ಕ್ರಮ ಮುಕ್ತಿ ಎಂದು ಹೆಸರು.

ಪಿತೃ ಯಾನವೆಂದರೆ ಯಾರು ಯಾಂತ್ರಿಕವಾಗಿ ತಂತಮ್ಮ ಪುಣ್ಯ,ಪಾಪ ಕರ್ಮಗಳನ್ನು ಮಾಡಿರುತ್ತಾರೋ ಅವರು ತಂತಮ್ಮ ಪುಣ್ಯ,ಪಾಪ ಕರ್ಮಗಳನ್ನು ಅನುಭವಿಸಿ ಮತ್ತೆ ಭೂಮಿಯ ಮೇಲೆ ವಿವಿಧ ಜೀವಿಗಳ ರೂಪದಲ್ಲಿ ಜನ್ಮ ತಳೆಯುತ್ತಾರೆ.

ಸಾಕ್ರಟೀಸ್, ಪ್ಲೇಟೋಗಳು ಕೂಡಾ ಆತ್ಮಗಳು ಎರಡು ಬೇರೆ ಬೇರೆ ಮಾರ್ಗಗಳ ಮೂಲಕ  ಬೇರೆ ಬೇರೆ ಲೋಕಗಳನ್ನು ಪ್ರವೇಶಿಸುವ ಬಗ್ಗೆ ವಿವರಿಸಿದ್ದಾರೆ.

ಈ ಎರಡೂ ದೇಶಗಳು ಹಲವು ಭಾಷೆ, ಸಂಸ್ಕೃತಿಗಳ ವಿವಿಧ ದೇಶಗಳನ್ನು ಪ್ರಭಾವಿಸಿರುವುದರಿಂದ ಈ‌ ಸೃಷ್ಟಿಗಳ ಹಿನ್ನೆಲೆಯನ್ನು ಅಧ್ಯಯನ ಮಾಡಬೇಕಾದ ಅಗತ್ಯ ಇದೆ.

ಭಾರತದಲ್ಲಿ ಈ ಕಲ್ಪನೆಗಳನ್ನು ಸೃಷ್ಟಿಸಿದವರು ಬ್ರಾಹ್ಮಣರು ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಸಾವಿರಾರು ವರ್ಷಗಳ ಕಾಲ ಬ್ರಾಹ್ಮಣರೇ ಈ ಕಲ್ಪನೆಗಳನ್ನು ತಮ್ಮ ಬರಹ ಮತ್ತು ಉಪದೇಶಗಳ ಮೂಲಕ ಪಸರಿಸುತ್ತಾ ಬಂದಿದ್ದಾರೆ. ಆದ್ದರಿಂದ ಅವರೇ ಈ ಕಲ್ಪನೆಯ ಮೂಲ ಎಂಬ ಅಭಿಪ್ರಾಯ ಸಹಜ. ಆದರೆ ಉಪನಿಷತ್ತುಗಳು ಬೇರೆಯೇ ಸಂಗತಿಯನ್ನು ಹೇಳುತ್ತವೆ. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಮಾತ್ರವಲ್ಲ ವೈದಿಕ ಧರ್ಮದಲ್ಲಿ ಹಿಂದೆ ಮತ್ತು ಮುಂದೆ ಕಾಣದ ವಿದ್ಯಮಾನವಾಗಿ ಬ್ರಾಹ್ಮಣರುಗಳ ಕ್ಷತ್ರಿಯ ರಾಜರುಗಳನ್ನು ಗುರುವಾಗಿ ಸ್ವೀಕರಿಸಿ ಉಪದೇಶ ಪಡೆದಿದ್ದಾರೆ.

ಬೃಹದಾರಣ್ಯಕ ಮತ್ತು ಕೌಶೀತಕಿ ಎಂಬ  ಮುಖ್ಯ ಉಪನಿಷತ್ತುಗಳಲ್ಲಿ ಉಲ್ಲೇಖವಾಗಿರುವಂತೆ ಗಾರ್ಗ್ಯ ಎಂಬ ಋಷಿ ಕಾಶಿಯ ರಾಜ ಅಜಾತಶತ್ರುವಿಗೆ ಬ್ರಹ್ಮನ್ ಕಲ್ಪನೆಯ ಬಗ್ಗೆ ಉಪದೇಶ ಮಾಡಿದಾಗ ರಾಜ ಇದೆಲ್ಲವೂ ಅತೃಪ್ತಿಕರ ಎಂದು ತಳ್ಳಿ ಹಾಕಿದನಂತೆ. ಆಗ ಋಷಿಯೇ’ ರಾಜನ್, ನಾನೇ ನಿನ್ನ ಶಿಷ್ಯತ್ವ ಸ್ವೀಕರಿಸುತ್ತೇನೆ ನನಗೆ ಉಪದೇಶ ಮಾಡು’ ಎಂದಾಗ ರಾಜನು ಬ್ರಾಹ್ಮಣನೊಬ್ಬ ಕ್ಷತ್ರಿಯನಿಂದ ಉಪದೇಶ ಬಯಸುವುದು ಸಾಧಾರಣ ರೀತಿಗೆ ವ್ಯತಿರಿಕ್ತವಾಗಿದೆ ಎಂದು ಹೇಳಿ ಆತ್ಮ ಮತ್ತು ಬ್ರಹ್ಮದ ಬಗ್ಗೆ ತಿಳಿಸಿಕೊಡುತ್ತಾನೆ. ಅದೇ ಉಪನಿಷತ್ತಿನ ಬೇರೆ ಭಾಗದಲ್ಲಿ ಯಾಜ್ಞವಲ್ಕ್ಯರು ಮಾಡಿದ ಉಪದೇಶದ ತಿರುಳಿಗೂ ರಾಜನ ವಿವರಣೆಗೂ ತಿರುಳಿನಲ್ಲಿ ವ್ಯತ್ಯಾಸವಿಲ್ಲದಿರುವುದನ್ನು ಕಾಣಬಹುದು. ಯಾಜ್ಞವಲ್ಕ್ಯರಿಂದ ಆತ್ಮ, ಬ್ರಹ್ಮಗಳ ಬಗ್ಗೆ ಉಪದೇಶ ಪಡೆದ ಜನಕ ರಾಜನೂ ಸ್ವತಃ ಮಹಾಜ್ಞಾನಿ ಎಂದು ಹೆಸರಾಗಿದ್ದನೆಂಬುದನ್ನೂ , ಅವನೇ ಈ ಬಗ್ಗೆ ಉಪದೇಶ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದರೂ ಹೆಚ್ಚು ಸ್ಪಷ್ಟತೆಗಾಗಿ ಯಾಜ್ಞವಲ್ಕ್ಯರ ಜೊತೆ ಸಂವಾದ ನಡೆಸಿದನೆಂದೂ ಹೇಳಲಾಗಿದೆ.

ಮತ್ತೊಂದು ಮುಖ್ಯ ಉಪನಿಷತ್ತಾದ  ಛಾಂದೋಗ್ಯದಲ್ಲಿ ಇದೇ ರೀತಿ ಪಾಂಚಾಲ ರಾಜ, ಅಶ್ವಪತಿ ಕೇಕಯ ರಾಜ,ಪ್ರಮಾಣ ಜವಲಿ ಎಂಬ ರಾಜರುಗಳು ಪ್ರಸಿದ್ಧ ಋಷಿಗಳಿಗೆ ಉಪದೇಶ ನೀಡಿದ್ದಾರೆ. ಮಾತ್ರವಲ್ಲ, ಈ ಜ್ಞಾನ ಕ್ಷತ್ರಿಯರಿಗೆ ಮಾತ್ರ ತಿಳಿದಿತ್ತು ಈಗ ಮೊದಲ ಬಾರಿಗೆ ಬ್ರಾಹ್ಮಣರಿಗೆ ನಮ್ಮಿಂದ ತಿಳಿಯುತ್ತಿದೆ ಎಂದು ಹೇಳಿರುವುದು ವಿಶೇಷ. ‌

ಬ್ರಾಹ್ಮಣರಿಗೆ ಮೀಸಲಾಗಿದ್ದ ಈ ಧಾರ್ಮಿಕ ಕಲ್ಪನೆಗಳ ವಿಚಾರದಲ್ಲಿ ರಾಜರುಗಳೇಕೆ ಕೈ ಹಾಕಿದರು ಮತ್ತು ರಾಜರುಗಳು ತಮಗೆ ಮಾತ್ರ ತಿಳಿದ ಜ್ಞಾನ ಇದು ಎಂದು ಘೋಷಿಸಿಕೊಂಡಿರುವದರ ಹೂರಣ ಏನು ಎಂಬುದು ವಿವೇಚನೆಗೆ ಒಳಪಡಿಸಬೇಕಾದ ವಿಷಯ.

ಅದೇ ರೀತಿ ಪ್ಲೇಟೋ ,ಸಾಕ್ರಟೀಸ್‌ಗಳೂ ಕೂಡ   ತಮ್ಮ ರಿಪಬ್ಲಿಕ್‌ನ ತುಂಬೆಲ್ಲ ಗಣರಾಜ್ಯವನ್ನು ರಕ್ಷಿಸುವ ವೀರರ ಬಗೆಗೇ ಒತ್ತು ನೀಡಿದ್ದಾರೆ. ಆಳುವವರು ಮತ್ತು ವೀರರು ಇವರ ಬಗ್ಗೆಯೇ ಇರುವ ಅವರ ಅಭಿಪ್ರಾಯ ಮತ್ತು ವಿವರಣೆಗಳು ಅವರು ಈ ವರ್ಗದ ಬುದ್ಧಿಜೀವಿಗಳಾಗಿ ಚಿಂತನ ನಡೆಸಿದ್ದಾರೆಂದು ವೇದ್ಯವಾಗುತ್ತದೆ.

ರಾಜರುಗಳು ಕೂಡಾ ತಮ್ಮ ಆಳ್ವಿಕೆಗೆ ಅತ್ಯಗತ್ಯವೆಂದು ಈ ಕಲ್ಪನೆಗಳನ್ನು ರೂಪಿಸಿದ್ದಾರೆ ಅಥವಾ ರೂಪಿಸುವುದರಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ ಎಂಬುದು ಇದರ ಮತಿತಾರ್ಥ.

ಪುನರ್ಜನ್ಮ ಮತ್ತು ಪಾಪ ಪುಣ್ಯಗಳ ಕಲ್ಪನೆ ಒಂದೆಡೆಗೆ ಆಳುವವರಿಗೆ ಅವರ ದೌರ್ಜನ್ಯ ಮತ್ತು ಜನರ ಮೇಲೆ ಹೇರುವ ಸಂಕಟಗಳ ಪರಿಣಾಮವಾಗಿ ಉಂಟಾಗುವ ಸಿಟ್ಟಿನಿಂದ ರಕ್ಷಣೆ  ಸಿಗುವಂತೆ ಮಾಡುತ್ತದೆ. ರಾಜನನ್ನು, ಅವನ ಸೈನ್ಯಾಧಿಕಾರಿಗಳು,ತೆರಿಗೆ ಅಧಿಕಾರಿಗಳ ದೌರ್ಜನ್ಯಗಳ ವಿರುದ್ಧ ಸಿಟ್ಟಿನಿಂದ ಕುದಿದು ಸಿಡಿದೇಳುವಂತೆ ಮಾಡುತ್ತದೆ. ಮತ್ತೊಂದೆಡೆಗೆ ವರ್ಣ-ಜಾತಿ ವ್ಯವಸ್ಥೆ ಮತ್ತು ಗುಲಾಮಗಿರಿ ವ್ಯವಸ್ಥೆಗಳನ್ನು ಅತ್ಯಂತ ಬಲವಾಗಿ ಸಮರ್ಥಿಸಿಕೊಳ್ಳುವ ವೈಚಾರಿಕ ಸಾಧನವನ್ನು ಒದಗಿಸುತ್ತದೆ. ಬೃಹದಾರಣ್ಯಕ ಉಪನಿಷತ್ತಿನಲ್ಲಿ ಯಾಜ್ಞವಲ್ಕ್ಯರು ಬ್ರಹ್ಮವೇ ವರ್ಣ ವ್ಯವಸ್ಥೆಯ ಸೃಷ್ಟಿಕರ್ತ ಎನ್ನುತ್ತಾರೆ. ಕ್ಷತ್ರಿಯರನ್ನು ಆಳುವುದಕ್ಕೂ, ವೈಶ್ಯರನ್ನು ಬ್ರಾಹ್ಮಣ, ಕ್ಷತ್ರಿಯರಿಗೆ ಅಗತ್ಯ ವಸ್ತುಗಳನ್ನು ಒದಗಿಸುವುದಕ್ಕಾಗಿ , ಶೂದ್ರರನ್ನು ಈ ಎಲ್ಲರ ಸೇವೆ ಮಾಡುವುದಕ್ಕಾಗಿ ಸೃಷ್ಟಿಸಿದ್ದು ಎಂದು ಅವರವರ ವರ್ಣಾಧಾರಿತ ಕರ್ಮಗಳನ್ನೂ ನಿರ್ದೇಶಿಸಿಯೇ ಅವರನ್ನು ಸೃಷ್ಟಿ ಮಾಡಲಾಗಿದೆ.

ಅತ್ಯಂತ ಉದಾತ್ತವಾದ, ಉನ್ನತವಾದ ತತ್ವಗಳಂತೆ ಕಾಣುವ ಆತ್ಮ, ಬ್ರಹ್ಮ, ಪುನರ್ಜನ್ಮ, ಮೋಕ್ಷಗಳ ತಾತ್ಪರ್ಯವೆಂದರೆ ವರ್ಣ-ಜಾತಿ ವ್ಯವಸ್ಥೆಯ ಸೃಷ್ಟಿ  ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಉಪನಿಷತ್ತುಗಳ ಪ್ರಕಾರ ಪುಣ್ಯ ಕರ್ಮವೆಂದರೆ ಸಾಮಾನ್ಯವಾಗಿ ಅದರ ಅರ್ಥವೆಂದು ಕಾಣುವ ಒಳ್ಳೆಯ ಕೆಲಸ, ಉಪಕಾರಿಯಾದ ಕೆಲಸ ಎಂದು ಭಾವಿಸುತ್ತೇವೆ. ಇನ್ನೂ ಹೆಚ್ಚೆಂದರೆ ವೈದಿಕ ಕರ್ಮಗಳಾದ ಯಾಗಾದಿಗಳು, ನಿತ್ಯ ಕರ್ಮ, ವಾರ್ಷಿಕ ಕರ್ಮ, ಜೀವಿತಾವಧಿಯ ಕರ್ಮ ಮೊದಲಾದ ಇತ್ಯಾದಿ ವಿವಿಧ ಆಚರಣಾ ಸಮೂಹ ಎಂದೂ ಹಲವು ಕಡೆ ಬಿಂಬಿಸಲಾಗಿದೆ. ಆದರೆ ಅದರ ಮುಖ್ಯ ತಿರುಳು ಆಯಾ ವರ್ಣಗಳಿಗೆ ಸೃಷ್ಟಿಕರ್ತನೇ  ವಿಧಿಸಿದ ವರ್ಣ ಕರ್ಮಗಳು ಎಂಬುದು ಹಲವು ಕಡೆಗಳಲ್ಲಿ ಉಲ್ಲೇಖವಾಗಿದೆ. ಸ್ವಧರ್ಮೇ ನಿಧನಂ ಶ್ರೇಯಂ ಎಂಬ ಕೃಷ್ಣ ಭಗವಾನನ ವಿವರಣೆ ಇದಕ್ಕೆ ಜನಜನಿತ ಉದಾಹರಣೆ.

ಹೀಗೆ ವರ್ಣ- ಜಾತಿ ವ್ಯವಸ್ಥೆಗೆ ಜನರು ತಲೆದೂಗಿ ಒಪ್ಪಿಕೊಳ್ಳವಂತಹ ಬೌದ್ಧಿಕ ಸಮರ್ಥನೆಗಳನ್ನು ನೀಡಿದ್ದಲ್ಲದೆ, ಅಷ್ಟು ಸಾಲದು ಎಂದು ದೇವರನ್ನೇ ಈ ಸೃಷ್ಟಿಗೆ ಹೊಣೆ ಮಾಡಲಾಗಿದೆ. ಆ ಮೂಲಕ ಜನರಲ್ಲಿ ಭಯವನ್ನಂಟು ಮಾಡಿ ಆಯಾ ವರ್ಣ ಆಯಾ ಕೆಲಸ ಮಾಡುವುದನ್ನು ಖಾತರಿಗೊಳಿಸಿಕೊಳ್ಳುವ ತಂತ್ರವಾಗಿ ಉಪನಿಷತ್ತುಗಳ ರಚನೆಯಾಗಿದೆ.

ಸಾಕ್ರಟೀಸ್‌ನಂತಹ ಮಹಾ ಬುದ್ಧಿಶಾಲಿ ತತ್ವಜ್ಞಾನಿ , ತನ್ನ ನಿಲುವುಗಳ ಸಲುವಾಗಿ ಮರಣದಂಡನೆಯನ್ನು ಕೂಡಾ ದಿಟ್ಟತನದಿಂದ ಎದುರಿಸಿದವನು ಕೂಡಾ ತನ್ನ ಸಮಾಜವ ಗುಲಾಮಗಿರಿಯ ಸಮಾಜವನ್ನಾಗಿ ಕಾಣುತ್ತಾನೆ. ಅವನ ಒಂದು ಸಂವಾದದಲ್ಲಿ 40,000 ಪ್ರಜೆಗಳೆಂಬ ಹಕ್ಕುಳ್ಳ ಸ್ವತಂತ್ರ ಜನರಿಗೆ 30,000 ದಷ್ಟು ಗುಲಾಮರಿರುವ ಸಮಾಜದ ಮಾದರಿಯನ್ನು ಮುಂದಿಡುತ್ತಾನೆ.  ಅವನ ಪ್ರಕಾರ ಸಮಾಜದಲ್ಲಿ ಮೂರು ವರ್ಗಗಳಿವೆ. ಆಳುವವರು, ರಕ್ಷಣೆ ಮಾಡುವ ವೀರರು, ದುಡಿಯುವ ವರ್ಗವಾದ ರೈತರು, ಕುಶಲ ಕರ್ಮಿಗಳು. ಮೂವರೂ ಅವರ ವರ್ಗದ ಕರ್ತವ್ಯಗಳನ್ನು ನಿರ್ವಹಿಸಬೇಕು . ಅದೇ ನ್ಯಾಯ.

ರಿಪಬ್ಲಿಕ್ ಗ್ರಂಥದಲ್ಲಿ ಹೀಗೆ ಹೇಳುತ್ತಾನೆ : ಮೂರು ಪ್ರತ್ಯೇಕ ವರ್ಗಗಳಿರುವುದರಿಂದ ಒಂದರ ಕೆಲಸವನ್ನು ಮತ್ತೊಂದು ಮಾಡ ಹೋಗುವುದು ಅಥವಾ ಬದಲಾವಣೆ ಮಾಡಿಕೊಳ್ಳುವುದು ಒಂದು ದೇಶಕ್ಕೆ ಪರಮ ಕೇಡುಮ ಇದು ನ್ಯಾಯವಾಗಿ ದುಷ್ಕಾರ್ಯವಲ್ಲವೇ ?… ಇದು ದೇಶದ ಅವನತಿಗೆ ಕಾರಣವಾಗುತ್ತದೆ…

ಮೂರು ವರ್ಗಗಳೂ ತಮ್ಮ ತಮ್ಮ ಕರ್ತವ್ಯವನ್ನು ಪ್ರತ್ಯೇಕವಾಗಿ ಮಾಡುವಾಗ ಅಂತಹ ದೇಶವು ನ್ಯಾಯದ ದೇಶವಾಗುತ್ತದೆ…
ಇದು ದೇಶದ ಅಸ್ತಿಭಾರವಾದ ಮೂಲ ತತ್ವ…

ಪ್ರತಿಯೊಬ್ಬರೂ ಅವರವರ ಪ್ರಕೃತಿಗನುಗುಣವಾಗಿ ಕೆಲಸವನ್ನು ನಿರ್ವಹಿಸಬೇಕು…

ಕೆಲವರು ಜನ್ಮತಃ ಅತ್ಯುತ್ತಮರು, ಅತ್ಯುತ್ತಮ ಶಿಕ್ಷಣ ಪಡೆದವರು ಪ್ರತಿಯೊಂದು ಆತ್ಮವೂ ತನ್ನ ಹಿಂದಿನ ಜನ್ಮದಿಂದ ಅದರ ಗುಣಗಳನ್ನು ಹೊತ್ತು ತಂದಿರುತ್ತದೆ. ಮೂರು ವರ್ಗಗಳಿಗೂ ಮೂರು ನಿರ್ದಿಷ್ಟ ಗುಣಗಳಿವೆ. ಆಳುವ ವರ್ಗಕ್ಕೆ ಬುದ್ಧಿಶಕ್ತಿ , ವೀರ ವರ್ಗಕ್ಕೆ ಧೈರ್ಯ, ದುಡಿಯುವವರಿಗೆ ತಾಳ್ಮೆ, ವಿಧೇಯತೆ.

ನೆನಪಿಡಿ ಈ ಮೂರು ವರ್ಗಗಳು ಸ್ವತಂತ್ರ ಪ್ರಜೆಗಳಾದ ಗ್ರೀಕರ ನಡುವಣ ವಿಭಜನೆ ಮಾತ್ರ. ಗುಲಾಮರು , ಬೇರೆ ಬೇರೆ ದೇಶಗಳಿಂದ ಹಿಡಿದು ತಂದು ಮಾರಲ್ಪಟ್ಟವರು ಈ ವರ್ಗ ವಿಭಜನೆಗಳ ಸಂದರ್ಭದಲ್ಲಿ ಪ್ರಸ್ತಾಪವಾಗುವುದಿಲ್ಲ. ಅವರು ನಮ್ಮ ಪಂಚಮ ವರ್ಣ ಅಥವಾ ಅಸ್ಪೃಶ್ಯರಂತೆ,ಸಮಾಜಕ್ಕೆ ಹೊರಗಿನವರು ಹೀಗೆ ಪ್ಲೇಟೋನ ಆದರ್ಶ ಗಣರಾಜ್ಯ ಜನ್ಮತಃ ಮತ್ತು ಗುಣ ಕರ್ಮಗಳಿಗಳನುಗುಣವಾಗಿ ಮೂರು ವರ್ಗಗಳಾಗಿ ವಿಭಜಿತವಾಗಿದೆ. ಇಂತಹ ಮೇಲು, ಕೀಳು ವಿಭಜನೆಯನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಗ್ರೀಕರಿಗೂ ಆತ್ಮ,ಪುನರ್ಜನ್ಮ, ಪಾಪ,ಪುಣ್ಯಗಳ ಕಲ್ಪನೆ ಅಗತ್ಯವಾಯಿತು.

ಭಾರತ ಮತ್ತು ಗ್ರೀಸಿನ ಆಧ್ಯಾತ್ಮ ತತ್ವಗಳು, ಅವುಗಳ ಆತ್ಮ,ಬ್ರಹ್ಮ,ಪುನರ್ಜನ್ಮ ಕಲ್ಪನೆಗಳು ಒಂದೇ ಎರಕದವು ಎಂದು ನನ್ನ ಅಭಿಪ್ರಾಯವಲ್ಲ. ಅಲ್ಲಲ್ಲಿಯ ಸಮಾಜದ ರಚನೆಯ ನಿರ್ದಿಷ್ಟ ಸ್ವರೂಪಕ್ಕನುಗುಣವಾಗಿ ಇವುಗಳ ನಡುವೆ ಭಿನ್ನತೆಗಳಿವೆ.

ಅದೇ ಸಮಯದಲ್ಲಿ ಇವೆರಡರ ನಡುವೆ ಇರುವ ಸಾಮ್ಯತೆ ಮತ್ತು‌ ಅದರ ಕಾರಣಗಳು ಗಮನಾರ್ಹವಾದದ್ದು.  ಇದನ್ನು ಡಿವಿಜಿಯವರು ಬಹಳ ಚೆನ್ನಾಗಿ ಗುರುತಿಸಿದ್ದಾರೆ. ಪುರುಷ ಸೂಕ್ತದ ವರ್ಣಗಳ ಉದ್ಭವ ಮತ್ತು ಭಗವದ್ಗೀತೆಯ ಕರ್ಮ ಸಿದ್ಧಾಂತವನ್ನು ಸಮರ್ಥಿಸಿಕೊಳ್ಳಲು ಅವರು ಪ್ಲೇಟೋನ ನೆರವು ಪಡೆಯುತ್ತಾರೆ.

ಭಾರತದ ಜಾತಿ ವ್ಯವಸ್ಥೆ ಗ್ರೀಕರ ಮೂರು ವರ್ಗಗಳ ಮತ್ತು ಗುಲಾಮರ ವ್ಯವಸ್ಥೆಗಿಂತ ಗಡುಚಾದದ್ದು, ಕ್ರೂರವಾದದ್ದು. ಅದಕ್ಕೆ ತಕ್ಕಂತೆ ಭಾರತದ ಆಧ್ಯಾತ್ಮವೂ ಅದರ ಆತ್ಮ,ಬ್ರಹ್ಮ ವಿವರಣೆಗಳೂ ಗ್ರೀಸಿನದಕ್ಕಿಂತ ಹೆಚ್ಚು “ಉತ್ಕೃಷ್ಟವಾದುದು” ಏಕೆಂದರೆ ಅತ್ಯಂತ ಕ್ರೂರವಾದುದನ್ನು ಸಮರ್ಥಿಸಿಕೊಳ್ಳಲು ಅತ್ಯಂತ ಸಮರ್ಥ ವಕೀಲಿ ಅಗತ್ಯವಲ್ಲವೇ ?

‍ಲೇಖಕರು Admin

January 21, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: