ಜಿ ಎನ್ ನಾಗರಾಜ್ ಅಂಕಣ- ಮದುವೆ ಎಂಬ ಮಾಲೀಕತ್ವ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

24

“ಪ್ರಯುಜ್ಯತೇ ವಿವಾಹೇಷು ಪ್ರಧಾನ ಸ್ವಾಮ್ಯ ಕಾರಣಂ‌” 5-152 ವಿವಾಹದಲ್ಲಿ ಕನ್ಯಾದಾನ ಮಾಡುವ ಕಾರಣದಿಂದಾಗಿ ಪತಿಗೆ ಪತ್ನಿಯ ಮೇಲೆ ಒಡೆತನ.

ಮನುಸ್ಮೃತಿ ವಿಧಿಸಿದ ಕಟ್ಟಲೆ ಇದು. ಅದು ಮುಂದುವರೆದು ದಾಸ, ದಾಸಿಯರ ಜೊತೆ ಸಮೀಕರಿಸಿ ಹೆಂಡತಿ, ಮಗ,ದಾಸ ಈ ಮೂವರಿಗೂ ಧನಾಧಿಕಾರವಿಲ್ಲ. (ಹಣವನ್ನು ಇಟ್ಟುಕೊಳ್ಳವಂತಿಲ್ಲ, ಅದರ ಮೇಲೆ ಅಧಿಕಾರವಿಲ್ಲ) ಇವರ ಹಣವೆಲ್ಲ ಇವರ ಮೇಲೆ ಅಧಿಕಾರವುಳ್ಳ ಒಡೆಯನಿಗೆ ಸೇರತಕ್ಕದ್ದು ಎನ್ನುತ್ತದೆ.

ಭಾರ್ಯಾ, ಪುತ್ರಶ್ಚ, ದಾಸಶ್ಚ ತ್ರಯ ಏವಧನಾಃ ಸ್ಮೃತಾಃ/
ಯತ್ತೇ ಸಮಧಿಗಚ್ಚಂತಿ ಯಸ್ಯತೇ ತಸ್ಯ ತದ್ಧನಂ//  5

ಹಾಗೆಯೇ ಅವಳಿಗೆ ಯಾವ ಯಜ್ಞವೂ ಇಲ್ಲ,ವೃತವೂ ಇಲ್ಲ ಕೇವಲ ಪತಿ ಸೇವೆಯೊಂದೇ. ಅದೊಂದೇ ಅವಳಿಗೆ ಸ್ವರ್ಗಕ್ಕೆ ಹೋಗುವಂತೆ ಮಾಡುವಂತಹುದು ಎಂದು ವಿಧಿಸುವ ಮೂಲಕ ಆಕೆಗೆ ಸ್ವತಂತ್ರವಾಗಿ ಧರ್ಮದ ಅಧಿಕಾರವೂ ಇಲ್ಲ ಎನ್ನುತ್ತದೆ. ಹೀಗೆ ಹಲ ಹಲವು ಕಟ್ಟಲೆಗಳನ್ನು ಮನುಸ್ಮೃತಿ ವಿಧಿಸಿದೆ.

ಭಾರತೀಯ ಸ್ತ್ರೀಗೆ ಅತ್ಯುತ್ತಮ ಮಾದರಿ ಎಂದರೆ ಸೀತೆ ಎಂದು ಅಖಿಲ ಭಾರತವ್ಯಾಪಿಯಾಗಿ ಕಾವ್ಯ, ಪುರಾಣ, ಹರಿಕತೆಗಳು,ನಾಟಕ,ಜಾನಪದ ಹಾಡುಗಳಲ್ಲಿಯೂ ಆದರ್ಶೀಕರಿಸಲಾಗಿದೆ. ಇಪ್ಪತ್ತನೆಯ ಶತಮಾನದ ಹಲವು ಸುಧಾರಕರು ಮಹಿಳಾ ಸಮಾನತೆಯನ್ನು ಪ್ರತಿಪಾದಿಸುವುದರ ಜೊತೆ ಜೊತೆಗೇ ಸೀತೆಯೇ ಮಹಿಳೆಗೆ ಮಾದರಿಯ ಎಂದೂ ಹೇಳುತ್ತಾರೆ.

ವಾಲ್ಮೀಕಿಯವರ ರಾಮಾಯಣದಲ್ಲಿ ಮದುವೆಯ ಸಂದರ್ಭದಲ್ಲಿ ಶ್ರೀ ರಾಮನಿಗೆ ಸೀತೆಯನ್ನು ಒಪ್ಪಿಸುತ್ತಾ ದಶರಥ ಹೇಳುತ್ತಾನೆ: ಒಪ್ಪಿಸಿಕೋ ರಾಮ ನನ್ನ ಮಗಳು ಸೀತೆಯನ್ನು. ನಿನ್ನ ಗೃಹಿಣಿಯಾಗಿ,ಪತಿವ್ರತೆಯಾಗಿ ಛಾಯೇವ ಅನುಗತಾ ಸದಾ – ನೆರಳಿನಂತೆ ನಿನ್ನನ್ನು ಅನುಸರಿಸುತ್ತಾಳೆ ಎನ್ನುತ್ತಾನೆ. ಇಡೀ ಕಾವ್ಯದಲ್ಲಿ ಹಲವು ಸಂದರ್ಭದಲ್ಲಿ ಈ ಮಾತು ಸೀತೆಯಿಂದ,ಮತ್ತಿತರರಿಂದ ಓದುಗ, ಕೇಳುಗರ ಮನಸ್ಸಿನಲ್ಲಿ ಬೇರೂರುವಂತೆ ಅನುರಣನಗೊಳ್ಳುತ್ತದೆ.

ನಮ್ಮ ಜಾನಪದದಲ್ಲಿ ಕೂಡಾ ತಾಯಿ ಮಗಳನ್ನು ಗಂಡನ ಮನೆಗೆ ಕಳಿಸಿಕೊಡುವಾಗ ಮಾಡುವ ಉಪದೇಶ: ಅತ್ತೆಯ ಮನೆಯಲ್ಲಿ ತೊತ್ತಾಗಿ ಇರಬೇಕ,ಹೊತ್ತಾಗಿ ನೀಡಿದರೂ ಉಣಬೇಕ.

ಕರ್ನಾಟಕದ ಕರಾವಳಿ,ಮೈಸೂರು ಸಂಸ್ಥಾನ,ಉತ್ತರ ಕರ್ನಾಟಕ ಮೊದಲಾದ ಎಲ್ಲ ಭಾಗಗಳ ಜಾನಪದ ಲಾವಣಿ,ಹಾಡುಗಳೂ ಇದೇ ಮಾತುಗಳನ್ನು ಹಲವು ರೀತಿಯಲ್ಲಿ ಹೇಳಿವೆ. ಅವಳು ಮಾಡಲೇಬೇಕಾದ ಕೆಲಸಗಳ ಹೊರೆಯನ್ನು ಬಣ್ಣಿಸಿವೆ.

ವಿವಾಹ ಜೊತೆಗೆ ಹೇರಲ್ಪಡುವ ಮಾಲೀಕತ್ವ ಮತ್ತು ತೊತ್ತಿನ ಸ್ಥಿತಿ ಕೇವಲ ಭಾರತಕ್ಕೆ ಮಾತ್ರ ಸೀಮಿತವಲ್ಲ. ವಿವಾಹ ಎಂಬುದು ವಿಶ್ವವ್ಯಾಪಿ ಪದ್ಧತಿ. ಅದರ ಜೊತೆಗೇ ಮಹಿಳೆಯ ಸ್ಥಿತಿಯಲ್ಲಿ ಇಂತಹ ಬಹು ದೊಡ್ಡ ಅಧೋಮುಖ  ಬದಲಾವಣೆ ಸಂಭವಿಸಿದೆ.

ಯುರೋಪಿನ ಫಿನ್ಲಂಡಿನ ಆದಿ ಜಾನಪದ ಕಾವ್ಯವಾದ ಕಲೇವಾಲದಲ್ಲಿ ಕೂಡಾ ತಾಯಿ ಮಗಳಿಗೆ ,ಅವಳನ್ನು ಗಂಡನ ಮನೆಗೆ ಕಳಿಸಿಕೊಡುವಾಗ ಹೀಗೆ ಹೇಳುತ್ತಾಳೆ :
ಎಸೆದುಬಿಡು ನಿನ್ನ ಹಾಡುಗಳನೆಲ್ಲ
ಜಗಲಿಯಿಂದ,ಮನೆಯಿಂದ ದೂರ
…. ಎಲ್ಲರಿಗೂ ತಗ್ಗಿ ಬಗ್ಗಿ ನಡೆಯಬೇಕು
ಬಗ್ಗಬೇಕಿದೆ ಅಲ್ಲಿ ಇಲ್ಲಿಗಿಂತಲೂ ಹೆಚ್ಚು.
ಈಗ ಯುರೋಪು, ಅಮೇರಿಕಗಳಲ್ಲಿ ಸ್ವಲ್ಪ ಬದಲಾವಣೆಯಾಗಿದೆ ಎಂದರೂ ಪತಿಯ ಮಾಲೀಕತ್ವದ ಕಲ್ಪನೆ ಏನೂ ಹೋಗಿಲ್ಲ. ಈ ಮಾಲೀಕತ್ವದಿಂದ ತಪ್ಪಿಸಿಕೊಳ್ಳಲು ಕೆಲ ದಾರಿಗಳನ್ನು ಅಲ್ಲಿನ ಮಹಿಳೆ ಹುಡುಕಿಕೊಳ್ಳಲು ಅವಕಾಶ ಸಿಕ್ಕಿದೆ ಅಷ್ಟೇ.

ಮಹಿಳೆಗೆ ತೊತ್ತಿನ ಸ್ಥಿತಿ ಬಂದದ್ದೇಕೆ ?

ಜಗತ್ತಿನಾದ್ಯಂತ ಲಕ್ಷ ವರ್ಷಗಟ್ಟಲೆ  ಅಮ್ಮ ಕೇಂದ್ರಿತವಾದ ಸಮಾಜದಲ್ಲಿ ಮಹಿಳೆಯೇ ಮುಖ್ಯಸ್ಥಳಾಗಿದ್ದ, ಅವಳ ಅರಿವು, ಮಹಾನ್ ಶೋಧಗಳಿಂದ,ದುಡಿಮೆಯಿಂದ ಮಾನವರ ಸಮುದಾಯದ ಸ್ಥಿತಿಯನ್ನೇ ಎತ್ತರಕ್ಕೆ ಕೊಂಡೊಯ್ದ ಮಹಿಳೆಗೆ ಇಂತಹ ದುಸ್ಥಿತಿ ಒದಗಲು ಕಾರಣವೇನು ?

ಅದಕ್ಕೆ ಮೂಲ ಕಾರಣವೇ ತಾಯ ಮನೆಯಲ್ಲಿಯೇ ಇಡೀ ಜೀವನ ಕಳೆಯುವ ಪದ್ಧತಿಗೆ ಬದಲಾಗಿ ಗಂಡನ ಮನೆಗೆ ಹೋಗಿಯೇ ಬದುಕು ಸಾಗಿಸಬೇಕೆಂಬ ವ್ಯವಸ್ಥೆ.
ಕಲೇವಾಲದ ಹೆಣ್ಣು ಹೇಳುತ್ತಾಳೆ :
“ಎಷ್ಟು ಸುಖವಾಗಿದ್ದೆ ತಾಯಿಯ ಮನೆಯಲ್ಲಿ
ನಿದ್ದೆ ಬಿಟ್ಟೇಳುತಲೆ
ಕೆನೆ ತುಂಬಿದ ಹಾಲು ಹೊಸ ಬೆಣ್ಣೆ ರೊಟ್ಟಿ
ಕಷ್ಟವೇನೆಂದು ಅರಿಯದವಳು”
ಇಂತಹ ಹಾಲುಂಡ ತವರಿನ ಬಣ್ಣನೆ ಕನ್ನಡ ಸಾಹಿತ್ಯದಲ್ಲಿ ,ಜಾನಪದ ಸಾಹಿತ್ಯದಲ್ಲೂ, ಆಧುನಿಕ ಸಾಹಿತ್ಯದಲ್ಲೂ ಗಣನೀಯವಾಗಿದೆ.

ಹೆಣ್ಣಿನ ದುಸ್ಥಿತಿ ಆರಂಭವಾಗಿದ್ದೇ ಮದುವೆಯ ನಂತರ ಗಂಡನ ಮನೆಗೆ ಹೋಗಬೇಕಾದ್ದರಿಂದ ಎಂಬುದು ಸಾಮಾನ್ಯ ಕಲ್ಪನೆ.

ಹೀಗೆ ಗಂಡನ ಮನೆಗೆ ಹೋಗಲೇಬೇಕಾದ ಅನಿವಾರ್ಯತೆ ಮತ್ತು ವಿವಾಹ ಪದ್ಧತಿ ಎರಡೂ ಒಂದಕ್ಕೊಂದು ಹೆಣೆದುಕೊಂಡಿದೆ.

ವಿವಾಹವೆಂದರೆ ಗಂಡು ಹೆಣ್ಣಿನ ಲೈಂಗಿಕ ಸಂಬಂಧಕ್ಕೆ ಬೀಳುವ ಸಾಮಾಜಿಕ ಮುದ್ರೆ. ನಂತರದ ಸಮಾಜಗಳಲ್ಲಿ ಅದಕ್ಕೆ ಕಾನೂನಿನ ಮುದ್ರೆಯೂ ಸೇರಿತು. ಆದರೆ ಗಂಡು ಹೆಣ್ಣಿನ ಸಂಬಂಧಕ್ಕೆ ಈಗಿನ ವಿವಾಹದ ಪದ್ಧತಿ ಮಾತ್ರ ಸಾಮಾಜಿಕ ಮುದ್ರೆ ಪಡೆದಿದೆ ಎಂದೇನಲ್ಲ.

ಹಿಂದೆ ವಿವರಿಸಿದಂತೆ ಗಂಡು ಹೆಣ್ಣಿನ ಲೈಂಗಿಕ ಸಂಬಂಧಗಳು ಹಲವು ಹಂತಗಳನ್ನು ಹಾದು ಬಂದಿದೆ. ಆ ಎಲ್ಲ ಸಂಬಂಧಗಳೂ ಆಯಾ ಸಮಾಜದ ಒಪ್ಪಿಗೆಯನ್ನು ಪಡೆದಿದ್ದಂತಹವೇ . ವಿಶ್ವದಲ್ಲಿ ವಿವಾಹದ ಮೊಟ್ಟ ಮೊದಲ ದಾಖಲೆ ಸಿಗುವುದು ಐದು ಸಾವಿರ ವರ್ಷಗಳ ಹಿಂದೆ ಮೆಸಪೊಟೋಮಿಯಾ ಪ್ರದೇಶದಲ್ಲಿ. ಅಂದರೆ 10-12 ಸಾವಿರ ವರ್ಷಗಳ ಹಿಂದೆ ಕೃಷಿ,ಪಶು ಪಾಲನೆ ವ್ಯಾಪಕವಾದ ಐದು ಸಾವಿರ ವರ್ಷಗಳ ನಂತರ.    ಅಂದರೆ ಈಗಿನ ವಿವಾಹ ಪದ್ಧತಿ ಅಂದು‌ ಅಸ್ತಿತ್ವಕ್ಕೆ ಬಂದು ಈಗಲೂ ಮುಂದುವರೆಯುತ್ತಿರುವ ಸಾಮಾಜಿಕ ರಚನೆಯಲ್ಲಿ ಬದಲಾದ ಅಂಗೀಕಾರ ಮುದ್ರೆಯ ಕಟ್ಟಲೆಗಳು ಎಂದರ್ಥ.

ವಿವಾಹದ ಮೂಲಕ ಹೆಣ್ಣನ್ನು ಗಂಡಿನ ಮನೆಗೆ ಸಾಗು ಹಾಕುವ ಮತ್ತು ಅವಳನ್ನು ಅಧೀನ ಸ್ಥಿತಿಗೆ ತಳ್ಳುವಷ್ಟು ದೊಡ್ಡ ಬದಲಾವಣೆಗೆ ಕಾರಣವಾದ, ಹಿಂದಿನ ಸಾಮಾಜಿಕ ವ್ಯವಸ್ಥೆಗೂ, ಇಂದಿನ ಸಾಮಾಜಿಕ ವ್ಯವಸ್ಥೆಗೂ ಇರುವ ದೊಡ್ಡ ಕಂದರ ಏನು ? ಲೈಂಗಿಕ ಸಬಂಧಗಳ ವಿವಿಧ ಹಂತಗಳನ್ನು ಪರಿಶೀಲಿಸಿದರೆ ಈ ಕಾರಣ ತಿಳಿಯುತ್ತದೆ.

ಗಂಡು ಹೆಣ್ಣಿನ ಅನಿಯಂತ್ರಿತ ಲೈಂಗಿಕ ಸಂಬಂಧಗಳು ಬದಲಾಗಲು ಬಹು ದೊಡ್ಡ ಕೊಡುಗೆ ನೀಡಿದ್ದು ಮಕ್ಕಳು  ಮಹಿಳೆಯರು ಮಕ್ಕಳು ಹುಟ್ಟುವುದಕ್ಕೆ ಗಂಡೂ ಬೇಕು ಮತ್ತು  ಮಕ್ಕಳ ವಿಪರೀತ ಸಾವಿಗೆ ,ಅವರ ಅಂಗವೈಕಲ್ಯಕ್ಕೆ ರಕ್ತ ಸಂಬಂಧಿಗಳ ನಡುವೆಯೇ ಲೈಂಗಿಕ ಸಂಬಂಧವೇ ಕಾರಣ ಎಂದು ಶೋಧಿಸಿದ್ದರಿಂದ.

ಆಗ ಬೆಡಗು ಎಂಬ ಹೊಸ ಸಾಮಾಜಿಕ ರಚನೆ ಸ್ಥಾಪಿಸಲ್ಪಟ್ಟಿತಲ್ಲಾ. ಆಗ ಲೈಂಗಿಕ ಸಂಬಂಧಗಳ ಮೇಲೆ ಕಟ್ಟು ನಿಟ್ಟಾದ ನಿಯಂತ್ರಣ ರೂಪಿತವಾಯಿತು. ಒಂದು ಬೆಡಗಿನ ಎಲ್ಲ ಹೆಂಗಸರು ಮತ್ತು ಗಂಡಸರೂ ಮತ್ತೊಂದು ಬೆಡಗಿನ ಎಲ್ಲ ಗಂಡಸರು ಮತ್ತು ಹೆಂಗಸರ ಜೊತೆ ಸಂಬಂಧ ಹೊಂದಬಹುದು ಎಂಬ ಗುಂಪು ಮದುವೆಯ ಪದ್ಧತಿಯ  ಸ್ವಾತಂತ್ರ್ಯವಿದ್ದಾಗಲೂ ಒಂದೇ ಬೆಡಗಿನ ಒಳಗೆ ಇಂತಹ ಸಂಬಂಧ ಬೆಳೆದರೆ ಅವರಿಗೆ ಬಹಳ ಕಠಿಣ ಶಿಕ್ಷೆ ನೀಡಲಾಗುತ್ತಿತ್ತು. ಹಲವೊಮ್ಮೆ ಕೊಲ್ಲಲಾಗುತ್ತಿತ್ತು. ಈ ಸಂಬಂಧಗಳಲ್ಲಿಯೂ ಮಗುವಿನ ಅಪ್ಪ  ಯಾರು ಎಂಬುದು ತಿಳಿಯುತ್ತಿರಲಿಲ್ಲ. ಅಪ್ಪ ಮಕ್ಕಳ ಸಂಬಂಧ ಎಂಬುದು ಅಸ್ತಿತ್ವದಲ್ಲೇ ಇರಲಿಲ್ಲ.

ನಂತರ ನಿರ್ದಿಷ್ಟ  ಗಂಡು ಹೆಣ್ಣುಗಳ ನಡುವೆ ದೀರ್ಘ ಕಾಲದ ಜೋಡಿ ಸಂಬಂಧಗಳು ಬೆಳೆಯಲಾರಂಭಿಸಿತಲ್ಲ. ಆಗ ಮಾತ್ರ ಅಪ್ಪನಿಗೆ ತನ್ನ ಮಕ್ಕಳು ಯಾರೆಂಬ ಗುರುತು ಸಿಕ್ಕಿತು. ಅಪ್ಪ ಮಕ್ಕಳ ಸಂಬಂಧ ಆರಂಭವಾಯಿತು. ಆಗಲೂ ಹೆಣ್ಣು ತನ್ನ ತಾಯ ಮನೆಯಲ್ಲಿಯೇ ವಾಸಿಸುತ್ತಿದ್ದಳು. ಅವಳ ಬದುಕಿನ ಹೊಣೆ ಪೂರ್ತಿ ಅವಳ ತಾಯ ಬೆಡಗಿನದೇ ಅಥವಾ ಕುಲದ್ದೇ. ಈ ಕುಲದ ಭೂಮಿಯೇ, ಪಾಲಿಸಿದ ಪಶು ಮಂದೆಗಳೇ ಅವಳ ಮತ್ತು ಅವಳ ಬದುಕಿನ ಆಧಾರ. ಗಂಡು ಈ ಮನೆಗೆ ಬಂದು ರಾತ್ರಿ ಕಳೆದು ಬೆಳಗಾಗುವುದರೊಳಗೆ ತನ್ನ ಕುಲದ ವಸತಿಗೆ ತೆರಳುತ್ತಿದ್ದ. ಈ ಜೋಡಿಗಾಗಿ ಒಂದು ಗುಡಿಸಲು ಇರುತ್ತಿತ್ತು ಅಷ್ಟೇ. ತನ್ನ ಹೆಂಡತಿಗೆ,ಮಕ್ಕಳಿಗೆ ಅವನು ಏನಾದರೂ ಗಿಫ್ಟ್ ಕೊಡಬಹುದಿತ್ತು. ಅಷ್ಟೇ ತನ್ನ ಕುಲದ ಭೂಮಿ,ಪಶುಗಳನ್ನಲ್ಲ.

ಈಗಲೂ ಬುಡಕಟ್ಟುಗಳಾಗಿ ಜೀವಿಸುತ್ತಿರುವ ಕೆಲವು ಸಮುದಾಯಗಳ ಅಧ್ಯಯನದಲ್ಲಿ ಈ ಜೋಡಿ ಸಂಬಂಧಗಳ ಮತ್ತೊಂದು ರೂಪ ಕಂಡು  ಬಂದಿದೆ. ಈ ಜೋಡಿಗಳು ಗಂಡಿನ ಕುಲದಲ್ಲಿಯೇ ದೀರ್ಘ ಕಾಲ ವಾಸ ಮಾಡುವುದು. ಗಂಡಿನ ಕುಲದ ಭೂಮಿಯಲ್ಲಿ ದುಡಿಯುವುದು. ಆಗಲೂ ಹೆಣ್ಣಿನ ಬದುಕಿನ ಹೊಣೆ ಅವಳ ಕುಲದ್ದೇ. ಅವಳಿಗೆ, ಮಕ್ಕಳಿಗೆ ಹೆಣ್ಣಿನ ಕುಲದ ಆಸ್ತಿಯಲ್ಲಿಯೇ ವಾರಸುದಾರಿಕೆ.

ಈ ಜೋಡಿ ಸಂಬಂಧಗಳಲ್ಲಿ ಯಾವಾಗ ಬೇಕಾದರೂ ಹೆಣ್ಣಾಗಲಿ, ಗಂಡಾಗಲಿ ಬೇರ್ಪಡಬಹುದು. ಬೇರೆಯವರ ಜೊತೆ‌ ಸಂಬಂಧ ಆರಂಭಿಸಬಹುದು. ಗಂಡಿನ ಕುಲದ ಮನೆಗಳಲ್ಲಿಯೇ ದೀರ್ಘ ಕಾಲ ವಾಸ ಮಾಡಿ,ದುಡಿದರೂ ಬೇರ್ಪಡುವ ಸಂದರ್ಭ ಬಂದರೆ ಹೆಣ್ಣಿನ ಕುಲದ ವಸತಿಗೆ ಮರಳಬಹುದು.

ಇಲ್ಲಿಯವರೆಗೂ ಒಂದು ಕುಲದ ಆಸ್ತಿ, ಕುಲದ ಎಲ್ಲರಿಗೆ ಸೇರಿದ್ದು. ಯಾರದೇ ವೈಯುಕ್ತಿಕ ಆಸ್ತಿಯಾಗಿರಲಿಲ್ಲ. ಕುಲದ ಆಸ್ತಿ ಎಂಬುದು ಉಗಮವಾದದ್ದು ಕೂಡ ನೇಗಿಲನ್ನು ಕಂಡು ಹಿಡಿದ ನಂತರ. ವಲಸೆ ಕೃಷಿಗಿಂತ ನೆಲಸು ಕೃಷಿ ಹೆಚ್ಚು ಫಲದಾಯಕವಾದ ಮೇಲೆ. ಆಗ ಮಾತ್ರ ವಿವಿಧ ಕುಲಗಳು ತಮ್ಮದೇ ಆದ  ಫಲವತ್ತಾದ ,ನೀರಿನ ಸೌಲಭ್ಯ ಹೊಂದಿದ ಭೂಮಿಯನ್ನು ಹಿಡಿದುಕೊಂಡವು. ಕುಲದ ಆಸ್ತಿ ಎಂಬುದರ ಉದ್ಭವವಾಯಿತು. ಅಲ್ಲಿಯವರೆಗೆ ಆಸ್ತಿ ಎಂಬ ಪರಿಕಲ್ಪನೆ ಅವರುಗಳು ಬಳಸುತ್ತಿದ್ದ ಉಪಕರಣಗಳು, ಶಿಲಾಯುಧಗಳಿಗಷ್ಟೇ ಸೀಮಿತವಾಗಿತ್ತು.
ಆದರೆ ಹಿಂದೆ ವಿವರಿಸಿದಂತೆ ಕುಲದ ಆಸ್ತಿಗಾಗಿ ಯುದ್ಧ, ಆಕ್ರಮಣಗಳು ಆರಂಭವಾದವು. ಅದರಿಂದ ಉತ್ಪಾದನೆಯಾದ ವಸ್ತುಗಳಿಗಾಗಿ ಕುಲಗಳ ನಡುವೆ ವಾಣಿಜ್ಯ ಆರಂಭವಾಯಿತು.

ಈ ಆಕ್ರಮಣ,ಯುದ್ಧಗಳಿಂದ  ಎಲ್ಲವೂ ಬದಲಾಯಿತು. ಯುದ್ಧಗಳ ಲೂಟಿ , ವಶಪಡಿಸಿಕೊಂಡ ಭೂಮಿ, ಗುಲಾಮರನ್ನಾಗಿಸಿಕೊಂಡ ಗಂಡು,ಹೆಣ್ಣುಗಳು, ವಾಣಿಜ್ಯದಿಂದ ಪಡೆದ ವಸ್ತುಗಳು ಆರಂಭದಲ್ಲಿ ಕುಲದ ಆಸ್ತಿಗಳಾಗಿಯೇ ಇದ್ದವು. ಇಂತಹ ಲೂಟಿಗಳು ಹೆಚ್ಚಿದಂತೆಲ್ಲಾ  ಇಡೀ ಕುಲದ ಗಂಡಸರು ಅದರಲ್ಲಿ ಭಾಗವಹಿಸುವುದು ಅಥವಾ ಅದರಲ್ಲಿ ಯಾರು ಬೇಕಾದರೂ ಭಾಗವಹಿಸುವುದು ಎನ್ನುವ ಪರಿಸ್ಥಿತಿ ಉಳಿಯಲಿಲ್ಲ. ಅದಕ್ಕಾಗಿಯೇ ಮೀಸಲಾದ ಪಡೆ ಮತ್ತು ಯುದ್ಧದ ಪರಿಣತಿ ಹೊಂದಿದ ನಾಯಕರ ಅವಶ್ಯಕತೆ ಉಂಟಾಯಿತು‌. ಹಾಗೆಯೇ ವಾಣಿಜ್ಯ ವ್ಯವಹಾರಗಳಲ್ಲಿ ಕೂಡಾ ಪರಿಣತಿಯ ಅವಶ್ಯಕತೆ ಉಂಟಾಯಿತು. ಕೆಲವರೇ ವಾಣಿಜ್ಯ ವ್ಯವಹಾರ ನಡೆಸುವವರಾದರು. ಕೃಷಿ, ಪಶು ಪಾಲನೆಗಳೂ ಹೆಚ್ಚು ಹೆಚ್ಚು ಉತ್ತಮಗೊಳ್ಳುತ್ತಾ ಪರಿಣತಿ ಬೆಳೆಯಿತು. ನೇಗಿಲಿನ ಕೃಷಿ,  ಪಶುಗಳ ದೊಡ್ಡ ಮಂದೆಗಳ ಪಾಲನೆ ಕೃಷಿ ಮತ್ತು ಪಶುಪಾಲನೆಗಳೂ ಪುರುಷ ಪ್ರಧಾನವಾಗತೊಡಗಿದ್ದವು.

ಇದು ಮತ್ತೊಂದು ಹೊಸ ಪರಿಸ್ಥಿತಿ . ಈ ಪರಿಣತಿಗಳು ಕೆಲಸದ ವಿಭಜನೆಯನ್ನು ಉಂಟು ಮಾಡಿದವು.  ಯುದ್ಧ, ಲೂಟಿಗಳಲ್ಲಿ ಪದೇ ಪದೇ ಭಾಗವಹಿಸಿದವರು ಆ ಲೂಟಿಗಳನ್ನು ತಮ್ಮದೇ ಆಸ್ತಿ ಎಂದು ಪರಿಗಣಿಸಲಾರಂಭಿಸಿದರು. ಲೂಟಿ ಮಾಡಿದ ಸ್ಥಳದಲ್ಲಿಯೇ ತಮ್ಮ ತಮ್ಮಲ್ಲಿ ಹಂಚಿಕೊಂಡರು. ವಾಣಿಜ್ಯದಲ್ಲಿ ಕೂಡಾ ಅದರ ಲಾಭ ಅದರಲ್ಲಿ ತೊಡಗಿದವರ ಅವರ ಆಸ್ತಿಯಾಯಿತು. ಹೀಗೆ ವೈಯುಕ್ತಿಕ ಆಸ್ತಿ ಎಂಬುದು ಮಾನವ ಸಮಾಜದಲ್ಲಿ ಮೊತ್ತ ಮೊದಲ ಬಾರಿಗೆ  ಉದ್ಭವವಾಯಿತು. ಈ ವೈಯುಕ್ತಿಕ ಆಸ್ತಿ ಪುರುಷರ ವೈಯುಕ್ತಿಕ ಆಸ್ತಿಯಾಗಿಯೇ ಉದ್ಭವಿಸಿತು.
ಆಸ್ತಿಯೆಲ್ಲ ಸಾಮಾಜಿಕ, ಕುಲದ ಆಸ್ತಿ ಎನ್ನುವ ಪರಿಸ್ಥಿತಿಯವರೆಗೆ ಆಸ್ತಿ ಹೆಣ್ಣಿನ ಪ್ರಧಾನತೆಯ ಬುಡಕಟ್ಟಿನ ಆಸ್ತಿಯಾಗಿತ್ತು ಎಲ್ಲರಂತೆ ಹೆಂಗಸರಿಗೂ  ಸಮಪಾಲು ಮತ್ತು ಅದರ ಫಲವಾಗಿ ಸಮಬಾಳು ಖಾತರಿಯಾಗಿತ್ತು. ಈಗ ವೈಯುಕ್ತಿಕ ಆಸ್ತಿ ಎಂದರೆ ಗಂಡಸರದೇ ಎನ್ನುವ ಪರಿಸ್ಥಿತಿ ಸೃಷ್ಟಿಯಾಯಿತು.

ಬುಡಕಟ್ಟಿನ / ಕುಲದ ಆಸ್ತಿಯಾಗಿರುವವರಿಗೆ ಆಸ್ತಿಯೆಲ್ಲಾ ಬುಡಕಟ್ಟಿನ/ ಕುಲದ ಎಲ್ಲ ಮಕ್ಕಳಿಗೆ ಸಲ್ಲುತ್ತಿತ್ತು. ಮಹಿಳೆ ಪ್ರಾಧಾನ್ಯದ ಕುಲದಲ್ಲಿ ಮಹಿಳೆಯರ ಮಕ್ಕಳು ಅದರ ವಾರಸುದಾರರಾಗಿದ್ದರು.
ಈಗ ಪುರುಷರ ವೈಯುಕ್ತಿಕ ಆಸ್ತಿ ಹೆಚ್ಚುತ್ತಾ ಹೋದಂತೆ ಈ ಆಸ್ತಿ ಯಾರಿಗೆ ಸೇರಬೇಕು ಎಂಬ ಪ್ರಶ್ನೆ ಮೊದಲ ಬಾರಿಗೆ ಮೂಡಿತು. ವೈಯುಕ್ತಿಕ ಆಸ್ತಿ ಅವರ ಮಕ್ಕಳಿಗೆ ಮಾತ್ರ ಎನ್ನುವ ಉತ್ತರವನ್ನು ಈ ಆಸ್ತಿವಂತ ಪುರುಷರು ಕಂಡುಕೊಂಡರು.

ಇವರು ತಮ್ಮ ಮಕ್ಕಳೇ ಎಂದು ಗುರುತು ಹಿಡಿಯುವುದು ಹೇಗೆ ? ಜೋಡಿ ಲೈಂಗಿಕ ಸಂಬಂಧಗಳ ಪದ್ಧತಿಯಲ್ಲಿ ಹೀಗೆ ಅಪ್ಪನ ಗುರುತು ಸಿಕ್ಕಿದ್ದರೂ ಕೂಡಾ ಅದು ಖಾತರಿಯದಾಗಿರಲಿಲ್ಲ. ಇವರು ತನ್ನ ಮಕ್ಕಳೇ ಎಂದು ಖಾತರಿಯಾಗಿ ಗುರುತು ಹಿಡಿಯುವ ಸಲುವಾಗಿ ಆಸ್ತಿವಂತ ಪುರುಷರು ಒಬ್ಬನ ಜೊತೆ ಮಾತ್ರ ಲೈಂಗಿಕ ಸಂಬಂಧ, ಬೇರಾವ ಪುರುಷರ ಜೊತೆಗೂ ಸಂಬಂಧ ಇಟ್ಟುಕೊಳ್ಳುವಂತಿಲ್ಲ ಎಂಬ ಕಟ್ಟಲೆಯ ವಿವಾಹ ಪದ್ಧತಿ ರೂಪಿಸಿ ಅದನ್ನು ಇಡೀ ಸಮಾಜದ ಮೇಲೆ ಹೇರಿದರು.

ತನ್ನ ಹೆಂಡತಿ ತನ್ನೊಂದಿಗೆ ಮಾತ್ರ ಸಂಬಂಧ ಇಟ್ಟುಕೊಳ್ಳುವುದನ್ನು ಖಾತರಿಗೊಳಸಿಕೊಳ್ಳಬೇಕೆಂದರೆ ಆಕೆ ತಾಯಿಯ ಕುಲದಿಂದ ತನ್ನ ಕುಲಕ್ಕೆ ಸೇರಬೇಕು. ಜೊತೆಗೆ ಆಕೆಯ ಮಕ್ಕಳಿಗೆ ತನ್ನ ವೈಯುಕ್ತಿಕ ಆಸ್ತಿ ಸೇರಬೇಕೆಂದರೆ ಆಕೆಯ ದುಡಿಮೆ ತನ್ನ ಆಸ್ತಿಯ ವೃದ್ಧಿಗಾಗಿ,ತನಗಾಗಿ ಎಂಬ ಭಾವನೆ ಬೆಳೆಯಿತು.

ಇದೇ ಮದುವೆ ಪದ್ಧತಿಯ ಮೂಲ. ತಾಯ ಮನೆ ತೊರೆದು ಗಂಡನ ಕುಲವನ್ನು,ಅವನ ಮನೆಯನ್ನು ಸೇರುವುದೂ ಈ ವಿವಾಹ ಪದ್ಧತಿಯ ಅನಿವಾರ್ಯ ಭಾಗವಾಗಿದ್ದರ ಅನಿವಾರ್ಯ ಭಾಗವಾಯಿತು. ತನ್ನ ಮಕ್ಕಳಿಗೆ ತನ್ನ ಕುಲದ‌ ಆಸ್ತಿಗಿಂತ ವೇಗವಾಗಿ ಹೆಚ್ಚುತ್ತಿದ್ದ ಗಂಡಸರ  ಆಸ್ತಿಯಲ್ಲಿ ಪಾಲು ದೊರೆಯಲಿ,ತನ್ನ ಮಕ್ಕಳಿಗೆ ಉತ್ತಮ ಜೀವನ ಖಾತರಿಯಾಗಲಿ ಎಂಬ ಕಾರಣಕ್ಕೆ ಮಹಿಳೆ ವಿವಾಹ ಪದ್ಧತಿಯ ಮತ್ತು ಗಂಡನ ಮನೆ ವಾಸದ ಅಧೀನತೆಯನ್ನು ಒಪ್ಪಿಕೊಂಡಳು.

ಅಂದಿನಿಂದ ಇಂದಿನವರೆಗೂ ತನ್ನ ಮಕ್ಕಳ ಯೋಗಕ್ಷೇಮ, ಉತ್ತಮ ಜೀವನಕ್ಕಾಗಿ ಎಲ್ಲ ಕಷ್ಟ, ಸಂಕಟಗಳನ್ನೂ, ದೌರ್ಜನ್ಯ, ಕ್ರೌರ್ಯಗಳನ್ನೂ ಮಹಿಳೆ ಸಹಿಸಿಕೊಳ್ಳುತ್ತಾ ಬಂದಿದ್ದಾಳೆ.

‍ಲೇಖಕರು Admin

September 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: