ಜಿ ಎನ್ ನಾಗರಾಜ್ ಅಂಕಣ- ದೇವಲೋಕದಲ್ಲೊಂದು ವೈದ್ಯ ಮುಷ್ಕರ.. ಬುದ್ಧನಿಂದ ಪರಿಷ್ಕಾರ..

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

49

ಮತ್ತೆ ಮತ್ತೆ ಕತ್ತು ಹಿಚುಕಲ್ಪಟ್ಟ ವೈಜ್ಞಾನಿಕ ಚಿಂತನೆ.
‘ಓ ! ದೇವ ವೈದ್ಯರೇ, ಅಶ್ವಿನೀ ದೇವತೆಗಳೇ, ಓಡಿ ಬನ್ನಿ. ನಿಮ್ಮ ಚಿಕಿತ್ಸೆಯ ತುರ್ತು ಅಗತ್ಯ ಬಂದಿದೆ. ಅದಿಲ್ಲದೆ ಯಜ್ಞವೇ ಮುಂದುವರೆಯುವಂತಿಲ್ಲ’

‘ಓ ! ಹಾಗೋ ಬರುತ್ತೇವೆ, ಆದರೆ ಒಂದು ಶರತ್ತು. ಪೂರ್ವಕಾಲದಿಂದ ಬೇರೆಲ್ಲ ದೇವತೆಗಳ ಸಮಾನರಾಗಿದ್ದೆವು. ಯಜ್ಞದ ಭಾಗಕ್ಕೆ ( ಹವಿಸ್ಸಿಗೆ ) ನಾವೂ ಬೇರೆಲ್ಲ ದೇವತೆಗಳಂತೆ ಹಕ್ಕುದಾರರಾಗಿದ್ದೆವು. ಈಗ ನೀವುಗಳು ನಮ್ಮನ್ನು ಕೀಳು ಎಂದು ಭಾವಿಸಿ ಕೆಳಕ್ಕೆ ತಳ್ಳಿದ್ದೀರಿ. ನಮಗೆ  ಹವಿಸ್ಸಿನ ಭಾಗವನ್ನು ನಿರಾಕರಿಸಿದ್ದೀರಿ. ಮತ್ತೆ ನಮಗೆ ನಮ್ಮ ಹಕ್ಕಿನ ಹವಿಸ್ಸಿನ‌ ಬಾಗವನ್ನು ಕೊಡುವುದಾದರೆ ಮಾತ್ರ ಚಿಕಿತ್ಸೆ ಕೈಗೊಳ್ಳುತ್ತೇವೆ.’
ದೇವತೆಗಳಿಗೆ ದೇವ ವೈದ್ಯರ ಈ ಶರತ್ತು ನುಂಗಲಾರದ ತುತ್ತಾಯಿತು. ಈಗ ಏನು ಮಾಡುವುದು ? ಬಹಳ ಚರ್ಚೆ ನಡೆಸಿದರು.

‘ವೈದ್ಯರಾಗಿ ಸಾಮಾನ್ಯ ಮನುಷ್ಯರನ್ನೆಲ್ಲ ಮುಟ್ಟಿ ಚಿಕಿತ್ಸೆ ನೀಡುತ್ತಾರೆ. ಅವರ ನಡುವೆಯೇ ಓಡಾಡುತ್ತಿರುತ್ತಾರೆ. ಆದ್ದರಿಂದ ಬ್ರಾಹ್ಮಣರು ವೈದ್ಯಕೀಯವನ್ನು ಮಾಡಬಾರದು. ಏಕೆಂದರೆ ವೈದ್ಯರುಗಳು‌ ಮೈಲಿಗೆ, ಅಶುದ್ಧ. ಆದರೆ ಈಗ ಅವರ ಶರತ್ತನ್ನು ಪೂರೈಸದೇ ವಿಧಿಯಿಲ್ಲ. ಏನು ಮಾಡುವುದು’

ಕೈ ಕೈ ಹಿಸುಕಿಕೊಂಡರು. ಒಂದು ಮಾರ್ಗವನ್ನು ಹುಡುಕಿಯೇ ಬಿಟ್ಟರು.
‘ಹವಿರ್ಭಾಗವನ್ನು ಕೊಡುವ ಮೊದಲು ಅಶ್ವಿನಿ ದೇವತೆಗಳನ್ನು ಶುದ್ಧೀಕರಿಸಬೇಕು. ಅದಕ್ಕಾಗಿ ಒಂದು ಸ್ತೋತ್ರ ಹುಡುಕಬೇಕು ಅಥವಾ ಸೃಷ್ಟಿಸಬೇಕು.’
ಬಹಿಷ್‌ಪವಮಾನ ಸ್ತೋತ್ರದಿಂದ ಅವರನ್ನು ಶುದ್ಧೀಕರಿಸಿದರು. ನಂತರ ಹವಿಸ್ಸಿನಲ್ಲಿ ಅವರ ಭಾಗವನ್ನು ತೆಗೆದಿರಿಸಿದರು.
ಮುಂದೆ ಇದನ್ನೇ ಕಟ್ಟಲೆಯನ್ನಾಗಿ ಮಾಡಿದರು.

ದೇವ ವೈದ್ಯರು, ಅತ್ಯಂತ ನಿಪುಣರು, ಸಂಕಟದ ಪರಿಸ್ಥಿತಿಗಳಲ್ಲಿದ್ದ ಹಲವರನ್ನು ಪವಾಡ ಸದೃಶ ರೀತಿಯಲ್ಲಿ ಗುಣಪಡಿಸಿ  ಎಂದು ಹಲವು ಪ್ರಶಂಸೆಗಳಿಗೆ ಬಾಧ್ಯರಾಗಿದ್ದ ಅಶ್ವಿನಿ ದೇವತೆಗಳಿಗೆ ಒದಗಿದ ಗತಿ ಇದು.

ಮೇಲಿನ ಈ ಪ್ರಸಂಗ ಯಜುರ್ವೇದದ ತೈತ್ತಿರೀಯ ಸಂಹಿತೆಯದು. ಭಾರತದ ಮಹತ್ವದ ತತ್ವಶಾಸ್ತ್ರಜ್ಞರಾದ ದೇಬೀಪ್ರಸಾದ ಚಟ್ಟೋಪಾಧ್ಯಾಯರು ಈ ಬಗ್ಗೆ “ಪ್ರಾಚೀನ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನದ ಇತಿಹಾಸ ” ಎಂಬ ಮಹತ್ವದ ಸಂಶೋಧನಾ ಮಾಲೆಯ ಎರಡನೇ ಸಂಪುಟದಲ್ಲಿ  ವಿವರಿಸಿದ್ದಾರೆ. ( ಭಾರತದ ವಿಜ್ಞಾನ ಸಂಶೋಧನೆಗಳ ಬಗ್ಗೆ ಸುಳ್ಳುಗಳನ್ನು ಉದುರಿಸುತ್ತಾ, ವಿಜ್ಞಾನ ಸಮ್ಮೇಳನಗಳಲ್ಲಿ ಕೂಡಾ ಅವುಗಳನ್ನು ಮಂಡಿಸಿ ವಿಶ್ವದ ಮುಂದೆ ಅಪಹಾಸ್ಯಕ್ಕೀಡಾಗುವ ಬದಲಾಗಿ  ನಿಜ ಸಂಶೋಧನೆಗಳ ಬಗ್ಗೆ, ಆ ಬೆಳವಣಿಗೆ ಕಂದಿ ಹೋದ ಕಾರಣಗಳ ಬಗ್ಗೆ ತಿಳಿದುಕೊಳ್ಳಲು ಈ ಸಂಪುಟಗಳನ್ನು ಓದಬೇಕು.)

ಅಶ್ವಿನಿ ದೇವತೆಗಳು ದೈವ ಭೈಷಜರೆಂದು, ಆಶ್ಚರ್ಯ ಚಕಿತರಾಗುವಂತೆ ಚಿಕಿತ್ಸೆ ನೀಡುತ್ತಿದ್ದರೆಂದ ಋಗ್ವೇದ ವರ್ಣಿಸಿದೆ. ಅವರು  ಸುಸೂತ್ರ ಹೆರಿಗೆ ಮಾಡುವುದರಲ್ಲಿ,ಸುಟ್ಟ ಗಾಯಗಳನ್ನು, ಹಿಂಸ್ರಕ ಪ್ರಾಣಿಗಳಿಂದಾದ ಗಾಯಗಳನ್ನು ವಾಸಿ ಮಾಡುವುದರಲ್ಲಿ ಪರಿಣತರಾಗಿದ್ದರು. ವೃದ್ಧರಲ್ಲಿ ಚುರುಕುತನವನ್ನುಂಟು ಮಾಡುತ್ತಿದ್ದರು ಎಂದು ಹೇಳಿದೆ.

ಅವರು ದೇವತೆಗಳಿಗೆ ಮಾತ್ರವಲ್ಲ ಮನುಷ್ಯರ ರೋಗಗಳಿಗೂ ಚಿಕಿತ್ಸೆ ನೀಡುತ್ತಿದ್ದರು. ಇದರಿಂದಾಗಿ ಅವರು ಮನುಷ್ಯರಿಗೂ ಬಹಳ ಪ್ರಿಯವಾಗಿದ್ದರು. ಮುಂದೆ ಇದೇ ಅವರಿಗೆ ಮುಳುವಾಗಿದ್ದು. ಸಮಾಜದ ಮೇಲೆ ವರ್ಣ ವ್ಯವಸ್ಥೆಯನ್ನು ಹೇರುವುದರ ಜೊತೆ ಜೊತೆಗೆ ಅಶ್ವಿನಿ ದೇವತೆಗಳನ್ನು ಕೀಳ್ಗಳೆಯಲಾಯಿತು. ಮೇಲೆ ನೋಡಿದಂತೆ ಯಜುರ್ವೇದದಲ್ಲಿ, ಹಲವು ಬ್ರಾಹ್ಮಣಗಳಲ್ಲಿ ಈ ಕೀಳು ಮನೋಭಾವವನ್ನು ಕಾಣಬಹುದು.  ಕೊನೆಗೆ ಉಪನಿಷತ್ತುಗಳ ವೇಳೆಗೆ ಅವರನ್ನು ದೇವತೆಗಳ ಸಾಲಿನಿಂದಲೇ ಹೊರದೂಡಲಾಯ್ತು.

ಇದು ಕೇವಲ ಅಶ್ವಿನಿ ದೇವತೆಗಳಿಗೆ ಸಂಬಂಧಿಸಿದ ವಿಷಯವಾಗಿರಲಿಲ್ಲ. ಇಡೀ ವೈದ್ಯ ವೃತ್ತಿಯ ಮೇಲೆ ಹೇರಿದ ನಿಷೇಧವಾಗಿತ್ತು. ಮುಂದೆ ಧರ್ಮಶಾಸ್ತ್ರಗಳು ಮತ್ತು ಮನುಸ್ಮೃತಿಯೂ ಸೇರಿದಂತೆ ಸ್ಮೃತಿಗಳು‌ ಉಗಮಗೊಂಡ ಕಾಲದಲ್ಲಿ ವೈದ್ಯರು ಎಷ್ಟು ಕೀಳೆಂದರೆ ಅವರು ನಿಂತ ಸ್ಥಳವೇ ಮೈಲಿಗೆ, ಅವರಿಂದ ಪಡೆದ ಊಟ, ಅವರಿಗೆ ನೀಡಿದ ಊಟ ಎರಡೂ ಕೂಡಾ ರಕ್ತ, ಕೀವುಗಳಷ್ಟೇ ಅಸಹ್ಯ ಎಂದು ಪರಿಗಣಿಸಲಾಯಿತು. ಅವರನ್ನು ವೇಶ್ಯೆಯರು, ಬೇಡರು, ಕೀಳು ವೃತ್ತಿಯವರ ಜೊತೆಗೆ‌ ಸೇರಿಸಲಾಯಿತು. (ಅಪಸ್ಥಂಭ , ಗೌತಮ, ವಸಿಷ್ಠ ಧರ್ಮ ಸೂತ್ರಗಳು)
ಮಹಾಭಾರತದಲ್ಲಿ, ಪುರಾಣಗಳಲ್ಲಿ, ಮನುಸ್ಮೃತಿ ಮೊದಲಾದ ಗ್ರಂಥಗಳಲ್ಲಿಯೂ ಇದೇ ಕೀಳ್ಗಳೆಯುವಿಕೆ ,ಹೀಯಾಳಿಕೆಯನ್ನು ಕಾಣಬಹುದು.

ಇಲ್ಲಿಯವರೆಗಿನ ಶೋಧಗಳ ಪ್ರಕಾರ:
ಕೃಷ್ಣ ಯಜುರ್ವೇದದ ಕಾಲ- ಕ್ರಿಪೂ 900, ಬ್ರಾಹ್ಮಣಗಳ ಕಾಲ- ಕ್ರಿಪೂ 600
ಧರ್ಮಸೂತ್ರಗಳ ಕಾಲ- ಕ್ರಿ.ಪೂ. 400 ರಿಂದ 100
ಹಿಂದಿನ ಲೇಖನದಲ್ಲಿ ಹೇಳಿದಂತೆ ಈ ಗ್ರಂಥಗಳೆಲ್ಲವೂ ವೈಜ್ಞಾನಿಕ ಚಿಂತನೆ ಪಸರಿಸುವುದನ್ನು ಕುಗ್ಗಿಸಲು ಮಾಡುವ ಮೊದಲ ಕುತಂತ್ರವಾದ  ವೈದ್ಯಕೀಯದ ಮೇಲೆ ಮುಗಿಬಿದ್ದು ತೀವ್ರ ಖಂಡನೆ, ಹೀಯಾಳಿಕೆಗೆ ಗುರಿ‌ ಮಾಡಿವೆ. ಇದಕ್ಕೆ ಕಾರಣವೇನು ಎಂಬುದು ಕೃಷ್ಣ ಯಜುರ್ವೇದದಲ್ಲಿ ಬಹಳ ಸ್ಪಷ್ಟವಾಗಿಯೇ ನಿರೂಪಿತವಾಗಿದೆ. ವರ್ಣ ವ್ಯವಸ್ಥೆಗೆ ವೈದ್ಯಕೀಯದಿಂದ ಉಂಟಾಗುತ್ತಿದ್ದ ಆಘಾತ. ಈ ಎಲ್ಲ ಗ್ರಂಥಗಳೂ ರಚಿತವಾಗುವುದಕ್ಕೆ ಆರಂಭವಾದ ಕಾಲದಿಂದ ಸುಮಾರು ಸಾವಿರಾರು ವರ್ಷಗಳ ಕಾಲದಲ್ಲಿ ನಡೆದ ಈ ಹೀಯಾಳಿಕೆ ಈ ಇಡೀ ಕಾಲಘಟ್ಟದಲ್ಲಿ ವೈದ್ಯಕೀಯ ವರ್ಣ ವ್ಯವಸ್ಥೆಗೆ ಆ ಪ್ರಮಾಣದ ಅಪಾಯವನ್ನು ಒಡ್ಡುತ್ತಿತ್ತು ಎಂಬುದರ ಪುರಾವೆಯಾಗಿದೆ. 

ಇದರಿಂದಾಗಿ ಅಂದಿನ ಭಾರತದ ವಿದ್ಯಾವಂತ ಬ್ರಾಹ್ಮಣ ಸಮುದಾಯ ವೈದ್ಯಕೀಯದಿಂದ ವಿಮುಖವಾದದ್ದು ವೈದ್ಯಕೀಯ ವಿಜ್ಞಾನ ಮತ್ತಷ್ಟು ಎತ್ತರಕ್ಕೆ ಏರುವುದಕ್ಕೆ ತಡೆಯಾಯಿತು ಎಂಬುದರಲ್ಲಿ ಸಂಶಯವಿಲ್ಲ.

ಆದರೆ ಈ ಕಠಿಣ ನಿಷೇಧದ ನಡುವೆಯೂ,  ಅದೇ ಸಮಯದಲ್ಲಿಯೇ ಚರಕ, ಶುಶ್ರುತ ಸಂಹಿತೆಗಳ ಜ್ಞಾನ ಸಂಪತ್ತು ಹೆಚ್ಚು ಹೆಚ್ಚು ಸಂಗ್ರಹಗೊಂಡು ಬೆಳೆಯುತ್ತಿತ್ತು.‌

ಬುಡಕಟ್ಟುಗಳು ಸಾವಿರಾರು ವರ್ಷಗಳ ಕಾಲದ ತಮ್ಮ ಅನುಭವದಿಂದ ಹಲವಾರು ಗಿಡ ಮೂಲಿಕೆಗಳು, ಖನಿಜ ಮೊದಲಾದ ಇತರ ವಸ್ತುಗಳಿಂದ ಗಾಯಗಳು, ರೋಗಗಳನ್ನು ಗುಣಪಡಿಸುವ, ಮಕ್ಕಳ ಹೆರಿಗೆಯ ವಿಧಾನಗಳನ್ನು ಕಂಡುಕೊಂಡಿದ್ದವು. ಮೊದಲು ಬುಡಕಟ್ಟಿನ ಹಿರಿಯಜ್ಜಿ ನಂತರ ಬುಡಕಟ್ಟಿನ ವೈದ್ಯನೂ ಆದ ಬುದ್ವಂತ ಇತ್ಯಾದಿ ಮುಖ್ಯಸ್ಥರಲ್ಲಿ ಆಯಾ ಪ್ರದೇಶದ ಅನುಭವ ಶೇಖರವಾಗಿತ್ತು. ಆದರೆ ಮುಂದೆ ಹಲವು ಬುಡಕಟ್ಟುಗಳು ಒಂದೆಡೆ ನೆಲೆ ನಿಂತವು. ಒಂದು ಬುಡಕಟ್ಟು ಹಲವು ಪ್ರದೇಶಗಳಿಗೆ ಹರಡಿಕೊಂಡಿತು ಈ ಪ್ರಕ್ರಿಯೆಯಲ್ಲಿ ಬುಡಕಟ್ಟುಗಳ ಮೂಲ ಸ್ವರೂಪ ಮಾರ್ಪಾಟಾಗಿ ಬೌದ್ಧ, ಜೈನ ಸಾಹಿತ್ಯದಲ್ಲಿ ಕಂಡಂತೆ 16 ಜನಪದಗಳು ರೂಪುಗೊಂಡವು. ಈ ಪ್ರಕ್ರಿಯೆ ಹಲವು ಬುಡಕಟ್ಟುಗಳ ಅನುಭವ ಒಂದೆಡೆ ಸೇರಿ ವೈದ್ಯಕೀಯ ಜ್ಞಾನದ ಸಂಗ್ರಹಣೆ ಹಲವು ಪಟ್ಟು ಹೆಚ್ಚಾಯಿತು.

ವೈದ್ಯಕೀಯವನ್ನೇ ವೃತ್ತಿಯಾಗುಳ್ಳವರು ರೂಪುಗೊಂಡರು. ತಮ್ಮದೇ ಬುಡಕಟ್ಟುಗಳು ಬೇರೆ ಬೇರೆ ಪ್ರದೇಶಗಳಲ್ಲಿ ನೆಲೆ ನಿಂತ ಪರಿಸ್ಥಿತಿಯಲ್ಲಿ ಹೆಳವರು, ಕುರುಬರ ಒಡೆಯರುಗಳಂತೆ ಪ್ರದೇಶದಿಂದ ಪ್ರದೇಶಕ್ಕೆ‌ ಸಂಚರಿಸುತ್ತಾ ಚಾರಣ ವೈದ್ಯರಾದರು. ಈ ಸಮಯದಲ್ಲೇ ನಗರಗಳು ರೂಪುಗೊಳ್ಳುತ್ತಾ ವೈವಿಧ್ಯಮಯ ರೋಗಗಳ ಚಿಕಿತ್ಸೆಯಿಂದ ಇವರುಗಳ ಸ್ವಂತ ಅನುಭವ ಮತ್ತು ಹಿಂದಿನ ಅನುಭವ ಸಂಗ್ರಹ ಮತ್ತಷ್ಟು ಹೆಚ್ಚಾಯಿತು.

ಚರಕ, ಶುಶ್ರುತ ಸಂಹಿತೆಗಳಲ್ಲಿ ದಾಖಲು ಮಾಡಿ ವಿವರಿಸಿರುವ ಸಾವಿರಾರು ಗಿಡ ಮೂಲಿಕೆಗಳು, ಮರ, ಬಳ್ಳಿಗಳು, ಪ್ರಾಣಿಗಳೂ ಇದಕ್ಕೆ ಸ್ಪಷ್ಟ ಉದಾಹರಣೆ. ಅವುಗಳಲ್ಲಿ ಏಳು ನೂರಕ್ಕೂ ಹೆಚ್ಚು ಸಸ್ಯಗಳಿವೆ. 230 ಕ್ಕೂ ಹೆಚ್ಚು ಪ್ರಾಣಿಗಳ ಉತ್ಪನ್ನಗಳನ್ನು ವೈದ್ಯಕೀಯವಾಗಿ ಉಪಯೋಗಿಸಲಾಗಿದೆ. ಮಾನವ ದೇಹವನ್ನವಲಂಬಿಸಿ ಅಸ್ವಸ್ಥತೆ ತರುವ ಇಪ್ಪತ್ತಕ್ಕೂ ಹೆಚ್ಚು ಹೇನು,ಕೂರೆ ಮೊದಲಾದ ಪರೋಪಜೀವಿಗಳನ್ನು ಗುರುತಿಸಲಾಗಿದೆ.

ಇಷ್ಟೊಂದು ವ್ಯಾಪಕವಾದ ಗಿಡ ಮರ ಬಳ್ಳಿ ಪ್ರಾಣಿಗಳ ಬಳಕೆಯನ್ನು ಯಾರೋ ಒಬ್ಬಿಬ್ಬರು ಅಥವಾ ಕೆಲವರು ಮಾಡಲು ಸಾಧ್ಯವೇ ಇಲ್ಲ. ಇದು ಹಲ ಹಲವು ಬುಡಕಟ್ಟುಗಳ ಹಾಗೂ ನಂತರ ಕಾಲದ ವೈದ್ಯ ಪರಂಪರೆಯ ಶೋಧಗಳು. 

ಇದೇ ಬುಡಕಟ್ಟು ಮೂಲದಿಂದ ರೂಪುಗೊಂಡ ಲೋಕಾಯತ, ತಾಂತ್ರಿಕ ಪಂಥಗಳು ಆತ್ಮ,ಪೂರ್ವಾರ್ಜಿತ ಪಾಪ ಕರ್ಮ‌ಗಳೇ ರೋಗಗಳಿಗೆ ಕಾರಣವೆಂಬ ಮುಸುಕಿನಿಂದ ಹಾಗೂ ಜಾತಿ ಬೇಧಗಳ ಕಟ್ಟಳೆಗಳಿಂದ ಮುಕ್ತವಾದ ಕಾರಣ ಬುಡಕಟ್ಟು ಮೂಲದ ವೈದ್ಯರು ಅಡ್ಡಿ ಆತಂಕಗಳಿಲ್ಲದೆ ರೋಗಗಳಿಗೆ ಕಾರಣ ಮತ್ತು ಚಿಕಿತ್ಸೆಗಳನ್ನು ಕಂಡುಹಿಡಿಯಲು ಪೂರಕವಾದವು.

ಇದನ್ನು ತಿನ್ನಬಾರದು ಎಂಬ ಧಾರ್ಮಿಕ ಕಟ್ಟಲೆಗಳನ್ನು ಲೆಕ್ಕಿಸದೆ ಚರಕ ಸಂಹಿತೆ ಮೊಲ, ಜಿಂಕೆ, ದನ,ಎಮ್ಮೆ, ಹಂದಿ, ಒಂಟೆ, ಆನೆ, ಖಡ್ಗ ಮೃಗ, ಕುದುರೆ, ಕತ್ತೆ, ನರಿ, ಮುಂಗುಸಿ, ಬೆಕ್ಕು, ಹುಲಿ, ಸಿಂಹ, ಚಿರತೆ ಮೊದಲಾದ ಪ್ರಾಣಿಗಳ ಮಾಂಸ, ಅವುಗಳ ವಿವಿಧ ಭಾಗಗಳ ರಸಗಳನ್ನು  ಹಂಸ ಕಾಗೆ, ಗೂಬೆ, ರಣಹದ್ದು ಮೊದಲಾದ ಪಕ್ಷಿಗಳ, ಮಣ್ಣುಳ ಮೊದಲಾದ ಪ್ರಾಣಿಗಳನ್ನೂ ಹುರಿದು, ಬೇಯಿಸಿ ಅಥವಾ ರಸ ಬಸಿದು ಕೊಡಲು ಸೂಚಿಸುತ್ತದೆ. ಈ ರೀತಿಯ ವ್ಯಾಪಕ ಪ್ರಾಣಿ ಪಕ್ಷಿಗಳ ಬಳಕೆ ಬುಡಕಟ್ಟು ಮೂಲದ್ದೇ ಎಂಬುದನ್ನು ಮತ್ತಷ್ಟು ಸ್ಪಷ್ಟವಾಗಿ ಎತ್ತಿ ತೋರಿಸುತ್ತದೆ. ಈ ಪ್ರಾಣಿಗಳನ್ನು ತಿನ್ನಲು ನಿರಾಕರಿಸುವವರಿಗೆ ಅವರಿಗೆ ಪ್ರಿಯವಾದ ಪ್ರಾಣಿ ಪಕ್ಷಿಗಳ ಹೆಸರು ಹೇಳಿ ಮರೆಸಿ ಕೂಡಾ ಕೊಡಬೇಕೆಂದು ಅದು‌ ಸಲಹೆ ಮಾಡುತ್ತದೆ.

ಈ ವ್ಯಾಪಕ ಅನುಭವ ಸಂಗ್ರಹವೇ ಚಾರಣ ವೈದ್ಯರ ಚರಕ ಸಂಹಿತೆಯಾಗಿ ಬುದ್ಧ ಪೂರ್ವ ಕಾಲದಿಂದ ರೂಪುಗೊಳ್ಳುತ್ತಾ ಬೆಳೆಯಲಾರಂಭಿಸಿತು. ಇದರ ಕುರುಹುಗಳು ಮೊದ ಮೊದಲ ಬೌದ್ಧ ಸಾಹಿತ್ಯದಲ್ಲಿ, ಮುಖ್ಯವಾಗಿ ವಿನಯ ಪಿಟಕ ಗ್ರಂಥದಲ್ಲಿ ವೈದ್ಯಕೀಯಕ್ಕೇ ಮೀಸಲಾದ ಭೇಸಜ್ಜಕ ಅಧ್ಯಾಯದಲ್ಲಿ ಕಾಣುತ್ತದೆ.

ದೇವರ ಅಸ್ತಿತ್ವದ ಬಗ್ಗೆ ತಲೆ ಕೆಡಿಸಿಕೊಳ್ಳದಿರುವ , ಜಾತಿ ಬೇಧಗಳನ್ನು ನಿರಾಕರಿಸಿದ  ಬುದ್ಧನ ಚಿಂತನೆ ವೈದ್ಯಕೀಯದ ಬೆಳವಣಿಗೆಗೆ ಚಿಮ್ಮು ಹಲಗೆಯಾಗಿರಬೇಕು. ಬೇಸಜ್ಜಕ ಅಧ್ಯಾಯದಲ್ಲಿ ರೋಗ ನಿವಾರಣೆಗೆ ಯಾವ ಮಂತ್ರ, ಮಾಟಗಳು, ಹೋಮ ಹವನಗಳು, ಪೂರ್ವ ಜನ್ಮದ ಕರ್ಮಗಳ ಪ್ರಸ್ತಾಪವಿಲ್ಲ ಎಂಬುದು ಗಮನಾರ್ಹ.

ಹೀಗೆ ಬ್ರಾಹ್ಮಣ್ಯದ ಜಾತಿ ವ್ಯವಸ್ಥೆ ಕೆಟ್ಟು ಹೋಗುವ ಭಯದಿಂದ ಹೇರಿದ ಕಟ್ಟಳೆಗಳನ್ನು ಮೀರಿ ವೈದ್ಯಕೀಯ ವಿಜ್ಞಾನ ಬೆಳವಣಿಗೆ ಸಾಧಿಸಿತು.
ವೈದ್ಯಕೀಯ ವಿಜ್ಞಾನವೇ ಅಂದಿನ ವಿಜ್ಞಾನದ ಬೆಳವಣಿಗೆಯ ಮುಂಚೂಣಿ ಸ್ಥಾನವನ್ನು ಪಡೆಯಿತು. ಅದರಿಂದಾಗಿ ವೈಧ್ಯಕೀಯ ಕೇವಲ ಬುಡಕಟ್ಟು ಸ್ವರೂಪ, ಮಾಂತ್ರಿಕ ಸ್ಚರೂಪ, ನಿತ್ಯ ಉಪಯೋಗ ಮಟ್ಟವನ್ನು ಮೀರಿ ವೈಚಾರಿಕ ನೆಲಗಟ್ಟಿನ ಚಿಂತನೆಗಳತ್ತ ಸಾಗತೊಡಗಿತು. ವೈದ್ಯಕೀಯ ವಿಜ್ಞಾನದ ತಾತ್ವಿಕತೆ ಒಂದು ಕಡೆ ಒಟ್ಟಾರೆ ವಿಜ್ಞಾನದ ತಾತ್ವಿಕತೆಯೂ ಆಗಿ ಬೆಳೆಯಿತು. ಜೊತೆಗೆ ವೈಜ್ಞಾನಿಕ ತತ್ವಶಾಸ್ತ್ರದ ದರ್ಶನಗಳನ್ನು ರೂಪಿಸುವುದಕ್ಕೆ ತನ್ನ ಕಾಣಿಕೆಯನ್ನು ನೀಡಿತು.

ಚರಕ, ಶುಶ್ರುತ ಸಂಹಿತೆಗಳಲ್ಲಿ ವೈದ್ಯಕೀಯ ತನ್ನದೇ ಆದ ಈ ತಾತ್ವಿಕ ಚಿಂತನೆಗಳನ್ನು ಆಧರಿಸಿದ್ದನ್ನು ಕಾಣುತ್ತೇವೆ. ಈ ತಾತ್ವಿಕ ಚಿಂತನೆಗಳು ಹಿಂದೆ ಹೇಳಿದಂತೆ 24 ಅಂಗ ತತ್ವಗಳನ್ನು, ಗರ್ಭದೊಳಗಿಂದ ಶಿಶುವಿನ ವಿಕಾಸವನ್ನು ಆಧರಿಸಿದ ವಿಕಾಸವಾದವನ್ನು ಒಳಗೊಂಡ ಸಾಂಖ್ಯ ದರ್ಶನ ರೂಪುಗೊಂಡಿತು.

ಬುದ್ಧನ ಅಮೋಘ ಚಿಂತನೆಗಳಿಗೂ ಅಂದಿನ ವೈದ್ಯಕೀಯ ವಿಜ್ಞಾನದ ಬೆಳವಣಿಗೆ ಸಹಾಯಕವಾಗಿದೆ ಎಂದು ಕೆಲವು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ. ಬುದ್ಧ ಅರಮನೆಯೊಳಗಿನ‌ ಸುಖವಾದ ದಾಂಪತ್ಯ ಜೀವನವನ್ನು ತ್ಯಜಿಸಲು ಮುಖ್ಯ ಕಾರಣಗಳಲ್ಲಿ ವೃದ್ಧಾಪ್ಯವನ್ನು ಕಂಡದ್ದು, ರೋಗಿಯನ್ನು ಕಂಡದ್ದು, ಸಾವನ್ನು ಕಂಡದ್ದು ಎಂಬ ಕಥಾನಕಗಳು ಈ ಸಂದರ್ಭದಲ್ಲಿ ಅರ್ಥಪೂರ್ಣವಾಗುತ್ತವೆ.

ಬುದ್ಧನ ಬೋಧನೆಗಳು ಎರಡು ರೀತಿಯಲ್ಲಿ ವೈದ್ಯಕೀಯ ವಿಜ್ಞಾನದ ಬೆಳವಣಿಗೆಗೆ ಇಂಬಾಗಿವೆ.

ಒಂದನೆಯದು -ಅವನು ಸ್ವತಃ ರೋಗಿಗಳ ಶುಶ್ರೂಷೆ ಮಾಡಿ “ನನ್ನ ಬಗ್ಗೆ ಕಾಳಜಿ ತೋರುವವರು ರೋಗಗ್ರಸ್ತರ ಬಗ್ಗೆಯೂ ಕಾಳಜಿ ತೋರಬೇಕು” ಎಂಬ ಹೊಸ ನಿಯಮವನ್ನು ರೂಪಿಸುತ್ತಾನೆ. (ವಿನಯ ಪಿಟಕ)
ಭಿಕ್ಕುಗಳಿಗೆ ನೀಡಿದ ಈ ನಿರ್ದೇಶ ಅವನ ಪ್ರೀತಿ, ಕರುಣೆಯ ಬಗೆಗಿನ ಭೋಧನೆಗಳ ಮುಂದುವರಿಕೆಯಷ್ಟೇ ಅಲ್ಲವೇ !   ಬುದ್ಧನನ್ನು ಮಹಾ ಭಿಷಜ (ಮಹಾ ವೈದ್ಯ) ಎಂದು ಕರೆಯಲಾಗಿದೆ. ಇದು ವಿಷ್ಣುವನ್ನು ,ಅವನ ರೂಪಗಳನ್ನು ಭವ ರೋಗ ವೈದ್ಯ ಎಂದು ಕರೆಯುವಂತೆ ಎನಿಸಬಹುದು. ಆದರೆ ಬುದ್ಧನ ನಿರ್ದೇಶ ಪರಲೋಕದ ಬಗೆಗಲ್ಲ, ಈ ಲೋಕದ ದೈಹಿಕ ರೋಗಗಳ ಬಗೆಗೆ. ಬುದ್ಧನ ಉದಾಹರಣೆಯ ಮೇರೆಗೆ ಬೌದ್ಧ ಬಿಕ್ಕುಗಳು ವೈದ್ಯಕೀಯ ಸಂಗತಿಗಳನ್ನು ಅಧ್ಯಯನ ಮಾಡಿ ಜನ ಸಾಮಾನ್ಯರಿಗೂ, ತಮ್ಮ ಸಹ ಭಿಕ್ಕುಗಳಿಗೂ ಚಿಕಿತ್ಸೆ ನೀಡುವುದನ್ನು ತಮ್ಮ ಜೀವನದ ಭಾಗವನ್ನಾಗಿ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸಾಮ್ರಾಟ್ ಅಶೋಕ ಬುದ್ಧನ ಬೋಧನೆಯನ್ನು ಅನುಸರಿಸಿ ಸಾರ್ವಜನಿಕ ಆಸ್ಪತ್ರೆಗಳನ್ನು ಸ್ಥಾಪಿಸುತ್ತಾನೆ.

ಯಜುರ್ವೇದದ ಕಾಲದಿಂದ ಆರಂಭಿಸಿ ಧರ್ಮಶಾಸ್ತ್ರಗಳ ಕಾಲದವರೆಗೆ ವೈದ್ಯರನ್ನು ಅಸ್ಪೃಶ್ಯರಂತೆ ಪರಿಗಣಿಸಿದ ಪರಿಣಾಮವಾಗಿ ವೈದ್ಯರ ಬಗ್ಗೆ ಮೂಡಿದ್ದ ಪ್ರತಿಕೂಲ ಸಾಮಾಜಿಕ ಪರಿಸರಕ್ಕೂ, ಬುದ್ಧನೇ ಸ್ವತಃ ರೋಗಿಗಳ  ವಾಂತಿ ಬೇಧಿ ಬಳಿದ ಕ್ರಿಯೆಗೂ , ಬೌದ್ಧ ಧರ್ಮದ ಪ್ರಸಾರಕರಾದ ಭಿಕ್ಕುಗಳೇ ಚಿಕಿತ್ಸೆ ಕೈಗೊಂಡುದಕ್ಕೂ ಹೋಲಿಸಿದರೆ ಎಂತಹ ಅಜಗಜಾಂತರ ವ್ಯತ್ಯಾದ. ವೈದ್ಯರ ಅಸ್ಪೃಶ್ಯತೆಯ ಬಗೆಗಿನ ಭಾವನೆಯನ್ನು ತೊಡೆದುದಲ್ಲದೆ ವೈದ್ಯಕೀಯದ ಬೆಳವಣಿಗೆಗೂ  ಪ್ರೋತ್ಸಾಹ ನೀಡಿತು.

ಎರಡನೆಯದು  ಬುದ್ಧನು ರೂಪಿಸಿದ ತತ್ವಗಳಲ್ಲಿ ಅಡಗಿದ ವೈಜ್ಞಾನಿಕ ಅಂಶಗಳು.
ಬುದ್ಧನು ಬೋಧಿಸಿದ ನಾಲ್ಕು ಆರ್ಯ ಸತ್ಯಗಳು
1 . ಪ್ರತಿಯೊಂದೂ ದುಕ್ಖಮಯ
 2.ದುಕ್ಖಕ್ಕೆ ಕಾರಣವಿರುತ್ತದೆ
 3. ದುಕ್ಖವನ್ನು ನಿರ್ಮೂಲನ    ಮಾಡುವುದು ಸಾಧ್ಯವಿದೆ.
 4. ದುಕ್ಖ ನಿರ್ಮೂಲನಕ್ಕೆ ಒಂದು‌ಮಾರ್ಗವಿದೆ.
ಈ ಸತ್ಯಗಳ ಹಿಂದೆ ಪ್ರತೀತ್ಯ ಸಮುತ್ಪಾದ ಎಂಬ ತತ್ವದ ಮೂಲಕ ಕಾರ್ಯ ಕಾರಣ ಸಂಬಂಧವನ್ನು ಮುಂದಕ್ಕೆ ತಂದಿತು. ಪ್ರತಿಯೊಂದು ವಿದ್ಯಾಮಾನವೂ ಒಂದು ವಿಶಿಷ್ಟ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಆ ಪರಿಸ್ಥಿತಿ ಇಲ್ಲವಾದಾಗ ಆ ವಿದ್ಯಾಮಾನವೂ ಇಲ್ಲವಾಗುತ್ತದೆ ಎಂದು ಈ ತತ್ವ ಪ್ರತಿಪಾದಿಸುತ್ತದೆ.

ಈ ತತ್ವದ ಭಾಗವಾಗಿ ಬೌದ್ಧ ಧರ್ಮ ಬದಲಾಗುತ್ತಿರುವ ಇಂದ್ರಿಯಾನುಭವಗಳೂ , ಮನೋಸ್ಥಿತಿಗಳೂ ಅವುಗಳಿಗೆ ಕಾರಣವಾದ ಭೌತ ಸ್ಥಿತಿ ಗತಿಗಳೂ ಯಥಾರ್ಥವಾಗಿವೆ. ಈ ಯಥಾರ್ಥಕ್ಕಿಂತ ಮಿಗಿಲಾದ ಮತ್ತು ಹೊರಗಿನ ನಿತ್ಯ, ಅವಿನಾಶಿ ಆತ್ಮದ ಕಲ್ಪನೆಯನ್ನೇ ತಳ್ಳಿಹಾಕಿತು. ವ್ಯಕ್ತಿತ್ವ ಎಂದರೆ ಮಾನಸಿಕ ಸ್ಥಿತಿಗಳ ಹಾಗೂ ಶರೀರದ ಮೊತ್ತ ಎಂದು ಆರಂಭ ಕಾಲದ ಬೌದ್ಧ ಧರ್ಮ ಪ್ರತಿಪಾದಿಸಿತು.

ಪ್ರತಿಯೊಂದು ವಸ್ತು ಮತ್ತು ಪ್ರತಿಯೊಂದು ಘಟನೆಯೂ ನಿರಂತರವಾಗಿ ಪರಿವರ್ತನೆ ಹೊಂದುತ್ತಲೇ ಇರುತ್ತದೆ. ಈ ಪರಿವರ್ತನೆಯಲ್ಲಿಯೇ ಅವುಗಳು ಅಸ್ತಿತ್ವ ಪಡೆದಿರುತ್ತವೆ ಎಂಬ ತತ್ವವೂ ಪ್ರತೀತ್ಯ ಸಮುತ್ಪಾದ ತತ್ವದ ಒಂದು ಮುಖ್ಯ ಅಂಗ.

ಈ ತತ್ವ ಮತ್ತು ಮೇಲೆ ಉಲ್ಲೇಖಿಸಿದ ಅದರ ಅಂಶಗಳಿಗೆ ಧಾರ್ಮಿಕ , ಸಾಮಾಜಿಕ ಅನ್ವಯಗಳ ಬಗ್ಗೆ ಬೌದ್ಧ ಧರ್ಮ ಹಲ ವಿವರಗಳನ್ನು ನೀಡಿದೆ. ಆದರೆ ಇವು ವೈದ್ಯಕೀಯ ವಿಜ್ಞಾನದ ಶೋಧ ಕಾರ್ಯಕ್ಕೆ ಅಡಿಪಾಯವಾಗುವಂತಹ ತತ್ವಗಳು.

ಉದಾಹರಣೆಗೆ ಆತ್ಮ ಮಾತ್ರ ಪರಮ ಸತ್ಯ. ಇಂದ್ರಿಯಾನುಭವ ಮತ್ತು ಅದಕ್ಕೆ ಕಾರಣವಾದ ಭೌತ ಸ್ಥಿತಿಗಳು ಯಥಾರ್ಥ ಎನ್ನುವ ತತ್ವ ಜಗತ್ತು ಮಿಥ್ಯೆ. ಅದನ್ನು ಅರಿಯಲು ಪ್ರಯತ್ನಿಸುವುದು ನಿಷ್ಪ್ರಯೋಜಕ. ಅದು ಕೀಳು ಅಪರಾ ವಿದ್ಯೆ, ಬ್ರಹ್ಮವನ್ನು ಮಾತ್ರ ಮಾನವರು ತಮ್ಮ ಅರಿವಿನ ಗುರಿಯಾಗಿಸಿಕೊಳ್ಳಬೇಕು ಎಂಬುದು ವೈದ್ಯಕೀಯ ವಿಜ್ಞಾನವೂ ಸೇರಿದಂತೆ ಜಗತ್ತಿನ ಬಗೆಗೆ ಎಲ್ಲ ರೀತಿಯ ಅರಿವಿಗೂ ಕೊಡಲಿ ಪೆಟ್ಟು ಹಾಕಿತ್ತು. ಜೊತೆಗೆ ವಸ್ತುಗಳು ನಿರಂತರವಾಗಿ ಪರಿವರ್ತನೆ ಹೊಂದುತ್ತಿರುತ್ತದೆ. ಪರಿವರ್ತನೆಯಲ್ಲಿಯೇ ಅವುಗಳ ಅಸ್ತಿತ್ವ ಎಂಬ ತತ್ವ ಗಳಿಗೆ ಗಳಿಗೆಗೂ ಬದಲಾಗುವ ದೇಹದ ಪರಿಸ್ಥಿತಿಯನ್ನು ಪ್ರತಿ ದಿನವೂ ನೇರವಾಗಿ ಗಮನಿಸುವ ವೈದ್ಯರುಗಳಿಗಿಂತ ಬೇರಾರಿಗೆ ಈ ತತ್ವದ ಅರಿವಿರಲು ಸಾಧ್ಯ.! 
ಈ ಎರಡೂ ಕಾರಣಗಳಿಂದ ವೈದ್ಯರ ಬಗೆಗಿನ ದೃಷ್ಟಿಕೋನವೂ ಬದಲಾಯಿತು. ವೈದ್ಯಕೀಯ ಶೋಧ ಕ್ರಿಯೆಗೂ ಹೊಸ ಕಣ್ಣೋಟ ದೊರಕಿತು. ಬೌದ್ಧ ಧರ್ಮ ಪಸರಿಸುತ್ತಿದ್ದ ಶತಮಾನಗಳು ವೈಜ್ಞಾನಿಕ ಚಿಂತನೆಯ ಬೆಳವಣಿಗೆಗೂ ಮತ್ತು ವೈದ್ಯಕೀಯದ ಬೆಳವಣಿಗೆಗೂ ಬಹು ದೊಡ್ಡ ನೆರವಾಯಿತು. ಚರಕ ಸಂಹಿತೆಯ ವೈಜ್ಞಾನಿಕ ತಿರುಳು , ವೈಜ್ಞಾನಿಕ ತತ್ವಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಮಾತ್ರವೇ ಅಲ್ಲ ಬೆಳವಣಿಗೆ ಕಾಣಲೂ ಸಾಧ್ಯವಾಯಿತು.

ಅದೇ ಸಮಯದಲ್ಲಿ ಬೌದ್ಧ ಧರ್ಮದ ಕುಗ್ಗುವಿಕೆಯ ನಂತರ ವಾತಾವರಣವೇ ಬದಲಾಯಿತು. ಹಲವು ರೀತಿಯ ಒತ್ತಡಗಳು, ಖಂಡನೆಗಳು, ವಿರೂಪಗಳು ಹೇರಲ್ಪಟ್ಟವು. ವೈಜ್ಞಾನಿಕ ಚಿಂತನೆ, ತತ್ವ ನಿರೂಪಣೆ ಮತ್ತು ವೈದ್ಯಕೀಯದ ಬೆಳವಣಿಗೆಗೆ ದೊಡ್ಡ ಪೆಟ್ಟಾಯಿತು.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

March 25, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: