ಜಿ ಎನ್ ನಾಗರಾಜ್ ಅಂಕಣ: ಕೆರೆಗಳ ವೈದಿಕ ಅನ್ನ ಸಂಸ್ಕೃತಿ Vs ಮುದ್ದೆ, ರೊಟ್ಟಿ ಸಂಸ್ಕೃತಿ

.

“ಅವ್ರ ಮನೇಲಿ ದಿನಕ್ಕೊಂದ್ಸರತಿನಾದ್ರು ಅನ್ನ ಮಾಡ್ತಾರಂತೆ ಕಣೋ” ಇದು ನನ್ನ ಪ್ರಾಥಮಿಕ ಶಾಲೆಯ ದಿನಗಳಲ್ಲಿ ನಮ್ಮ ಗೆಳೆಯರ ನಡುವಣ ಮಾತು.‌ ಕೆಲ ವರ್ಷಗಳ ನಂತರ ನಮ್ಮ ಅಮ್ಮ ಊಟಕ್ಕೆ ಕುಳಿತಾಗೆಲ್ಲ ಹೇಳುತ್ತಿದ್ದ ಮಾತು “ಹೊಟ್ಟೆ ತುಂಬಾ ಹಿಟ್ಟು, ಬಾಯ್ತುಂಬಾ ಅನ್ನ”.

ಇವು ಇಪ್ಪತ್ತನೆಯ ಶತಮಾನದ ಮಧ್ಯ‌ಭಾಗದ ಮಾತುಗಳು. ಎರಡು ಸಾವಿರ ವರ್ಷಕ್ಕಿಂತ ಹೆಚ್ಚುಕಾಲ ಕರ್ನಾಟಕದ ಕರಾವಳಿ ಮತ್ತು ಘಟ್ಟಗಳಲ್ಲಿ ಕೆಲವೇ ಸಾವಿರ ಜನರನ್ನು ಹೊರತುಪಡಿಸಿದರೆ ‌ಉಳಿದ ಕೋಟ್ಯಾಂತರ ಜನರಿಗೆ ಅನ್ನ ಎಂಬುದು‌ ಬವಿಸಿ ಬವಿಸಿ ತಿನ್ನುವ ಅಪರೂಪದ ಸಂಗತಿ. ಉತ್ತರ ಕರ್ನಾಟಕದಲ್ಲಿ ಮೂರೊತ್ತೂ ಜೋಳದ ಸಜ್ಜೆಯ ರೊಟ್ಟಿ, ಕೆಲಸಮಯ ಚಪಾತಿ. ದಕ್ಷಿಣ ಕರ್ನಾಟಕದಲ್ಲಿ ರಾಗಿ ಮುದ್ದೆ, ಕೆಲವೊಮ್ಮೆ ‌ಹಾರಕದಕ್ಕಿ‌ ಅನ್ನ. ಆಗಾಗ ಅನ್ನ ತಿನ್ನುವ ಅವಕಾಶ ಪಡೆದಿದ್ದವರು ಮುದ್ದೆ ಅಥವ ರೊಟ್ಟಿ ತಿನ್ನುತ್ತಿದ್ದವರನ್ನು ಆಡಿಕೊಂಡು ನಗುತ್ತಿದ್ದುದು ಕಿವಿಯಲ್ಲಿ ಗುಂಗುಣಿಸುತ್ತಿತ್ತು. ʻಮುದ್ದೆ ತಿನ್ನೋರಿಗೆ ಇಷ್ಟು ಕೊಬ್ಬು ಇರಬೇಕಾದ್ರೆ, ತುಪ್ಪಾನ್ನ ತಿಂದೇ ಬೆಳೆದ ನಮಗೆ ಇನ್ನೆಷ್ಟು ಕೊಬ್ಬಿರಬ್ಯಾಡʼ, ʻಅವರ ಮನೆಗೆ ಕೊಟ್ಟಿದಾರಲ್ಲೆ ನಿನ್ಗೆ, ಅವರ ಮನೇಲಿ ರೊಟ್ಟಿ ಬಡಿಯೋಕೆ ಆಳು ಕಡಿಮೆ ಅಂತಾ, ಬೆಳಗ್ಗೆಯಿಂದ ರಾತ್ರಿವರೆಗೆ ರೊಟ್ಟಿ ಬಡಿಯೋದೆ ಕೆಲ್ಸ ನಿಂಗೆʼ ಇತ್ಯಾದಿ ಇತ್ಯಾದಿ.

ಇಂತಹುದೇ ಅಪಹಾಸ್ಯಗಳಿಗೆ ಉತ್ತರವಾಗಿ ಕನಕದಾಸರ “ರಾಮಧಾನ್ಯ ಚರಿತ್ರೆ” ಹುಟ್ಟಿದ್ದು. ಬೆಂಗಳೂರಿನಲ್ಲಿ ಈಗ ಫ್ಯಾಷನ್ ಆಗಿ ಗಲ್ಲಿಗೊಂದು ಕಾಣುವ ರಾಗಿಮುದ್ದೆ ಹೋಟ್ಲು, ರೊಟ್ಟಿ ಖಾನಾವಳಿ ಎಂಭತ್ತರ ದಶಕದವರೆಗೆ ಅಲ್ಲೊಂದು, ಇಲ್ಲೊಂದು ಅಷ್ಟೇ.

ಈಗಲೂ ಕೂಡ ಮುದ್ದೆ, ರೊಟ್ಟಿ ತಿನ್ನುವವರ ಮನೆಗಳಲ್ಲಿ ಅನ್ನ ಪರಕೀಯ ಎಂಬುದಕ್ಕೆ ಹಲವು ಸಾಕ್ಷಿಗಳಿವೆ. ಯಾರಾದರೂ ನಗರದವರು ಹಳ್ಳಿಗಳಲ್ಲಿರುವ ತಮ್ಮದೇ ಬಂಧುಗಳ ಮನೆಯಲ್ಲಿ ಊಟಕ್ಕೆ ಕುಳಿತಾಗ ʻನಿಮಗೆ ಮುದ್ದೆ ರೂಢಿ ಇದ್ಯೋ ಇಲ್ವೋ, ಬರಿ ಅನ್ನ ಬಡಿಸೋಣ್ವೇʼ ಅಂತಲೋ ಅಥವಾ ʻಇಷ್ಟೇ ಇಷ್ಟು ಮುರಿದಿಡ್ಲಾ, ಸುಮ್ನೆ ರುಚಿ ನೋಡಿʼ ಎಂದು ಕೇಳುವುದು ಸಾಮಾನ್ಯ. ‌ಮುದ್ದೆ, ರೊಟ್ಟಿ ತಿನ್ನುವವರ ಮನೆಗಳವರಿಗೆ ಮನೆಗಳಲ್ಲಿ ನಿತ್ಯ ಅನ್ನ ಮಾಡುವುದು ಸಾಮಾನ್ಯವಾಗಿ ಬಿಟ್ಟಿರುವ ಈ ಕಾಲದಲ್ಲೂ, ಅನ್ನವನ್ನು ರುಚಿಕರವಾಗಿಸುವ, ಕಲಸಿ ತಿನ್ನಲು ಅನುಕೂಲವಾಗುವ ಸಾಂಬಾರ್, ತಿಳಿಸಾರು, ರಸಂ ಇತ್ಯಾದಿ ಮಾಡಲು ಬರುವುದಿಲ್ಲ. ಏನಿದ್ದರೂ ಮುದ್ದೆ ತಿನ್ನಲು‌ ಅನುಕೂಲವಾಗುವ ಗಟ್ಟಿ ಸಾರು, ಬಸ್ಸಾರು, ಮೊಸ್ಸೊಪ್ಪು, ಉಪ್ಸಾರು. ರೊಟ್ಟಿ ತಿನ್ನಲು ಕಾಯಿಪಲ್ಲೆ, ಕಾಳುಪಲ್ಲೆಗಳು. ಸಾವಿರಾರು ವರ್ಷಗಳಿಂದ ಅಕ್ಕಿಯ ಉಪಯೋಗ ಯಥೇಚ್ಛವಾಗಿರುವ ಬ್ರಾಹ್ಮಣರ ಮನೆಗಳಲ್ಲಿ ಅಕ್ಕಿಯಿಂದ ಮಾಡುವ ವೈವಿಧ್ಯಮಯವಾದ ತಿಂಡಿ, ತಿನಿಸುಗಳನ್ನು ಮಾಡಲು ಮುದ್ದೆ, ರೊಟ್ಟಿ ಸಂಸ್ಕೃತಿಗಳವರಿಗೆ ಇನ್ನೂ ರೂಢಿಯಾಗಿಲ್ಲ.

ಈ ಎಲ್ಲ ಅಂಶಗಳು ಅನ್ನ, ಅದರ ಮೂಲವಾದ ಅಕ್ಕಿ ಎಂಬುದು ಕೇವಲ ಒಂದು‌ ಆಹಾರಧಾನ್ಯವಲ್ಲ. ಅದು ಒಂದು ಸಂಸ್ಕೃತಿ. ಕೇವಲ ಪಾಕಸಂಸ್ಕೃತಿ ಮಾತ್ರವಲ್ಲ. ಸಾಮಾಜಿಕ ಬೇಧವನ್ನು ಎತ್ತಿ ತೋರಿಸುವ, ಬೆಳೆಸುವ ಸಂಸ್ಕೃತಿಯಾಯಿತು ಎಂಬುದನ್ನು ಎತ್ತಿ ತೋರಿಸುತ್ತದೆ.
ರಾಮ, ಕೃಷ್ಣರಿಗೆ ಮುದ್ದೆ, ರೊಟ್ಟಿ ಅರ್ಪಿಸಲು ಸಾಧ್ಯವೇ? – ದೇವ ಬ್ರಾಹ್ಮಣರಿಗೆ ಗದ್ದೆ ತೋಟಗಳು.

ಗಂಗಾ ನದಿಯ ಬಯಲಿನಲ್ಲಿ ಭತ್ತದ ಬೆಳೆ ಯಥೇಚ್ಛವಾಗಿ ಬೆಳೆಯಲಾಗುತ್ತಿತ್ತು. ಅಲ್ಲಿ ನೆಲೆಸಿದ್ದ ಆರ್ಯ ಸಮುದಾಯ ಭಾರತವನ್ನು ಪ್ರವೇಶಿಸಿ ಗಂಗಾನದಿ ಬಯಲಿನಲ್ಲಿ ನೆಲೆಸಿದ ಮೇಲೆ ಗೋಧಿ, ಬಾರ್ಲಿಗೆ ಬದಲಾಗಿ ಅನ್ನ ಊಟದ ಪ್ರದಾನ ಅಂಶವಾಯಿತು. ಬದುಕಿನ ಅವಿಭಾಜ್ಯ ಅಂಗವಾಯಿತು. ಅವರ ಹಲವು ಧಾರ್ಮಿಕ ಆಚರಣೆಗಳಲ್ಲಿ ಸೇರಿಕೊಂಡಿತು. ಅಲ್ಲಿಂದ ಕರ್ನಾಟಕಕ್ಕೆ ಬ್ರಾಹ್ಮಣರು ವಲಸೆ ಬರಲಾರಂಭಿಸಿದಾಗ ಅವರು ತಮಗೆ ಪರಿಚಿತವಾಗಿದ್ದ ಪರಿಸರವನ್ನೇ ಬಯಸಿದರು ಮತ್ತು ಅನ್ನ ಪ್ರಧಾನವಾದ ಜೀವನ ಪದ್ಧತಿಯನ್ನೇ ಅಳವಡಿಸಿಕೊಂಡರು.‌ ಗಂಗ ಕದಂಬಾದಿಯಾದ ರಾಜಪ್ರಭುತ್ವಗಳ ಸ್ಥಾಪನೆಗೆ ಮೊದಲೇ ಕ್ರಿಸ್ತ ಪೂರ್ವದಲ್ಲಿಯೇ ಅವರು ಇಲ್ಲಿಗೆ ಬಂದಿದ್ದರು. ನದಿ ತೀರಗಳಲ್ಲಿ, ನೀರಿನ‌ ಮೂಲಗಳ ಹತ್ತಿರದಲ್ಲಿಯೇ ನೆಲೆಸಿದ್ದರು. ಅಲ್ಲಿ ತಮಗೆ ‌ಬೇಕಾದ ಅನ್ನ ಪಡೆಯಲು ಭತ್ತದ ಬೆಳೆಯನ್ನು ಪ್ರೋತ್ಸಾಹಿಸಿದರು.

ಇಲ್ಲಿಯ ಆರಂಭಿಕ ರಾಜಪ್ರಭುತ್ವಗಳ ಸ್ಥಾಪನೆಗೆ ಅನುಕೂಲವಾಗಿ ಒದಗಿದ ಅವರ ಸಹಾಯವನ್ನು ಹೆಚ್ಚು ಹೆಚ್ಚು ಬಯಸಿದ ರಾಜರುಗಳು ಇಲ್ಲಿದ್ದ ಬ್ರಾಹ್ಮಣರ ಜೊತೆಗೆ ಗಂಗಾ ನದಿ ಬಯಲಿನಿಂದ ಅವರನ್ನು ಆಹ್ವಾನಿಸಿದರು. ಅವರು ಇಲ್ಲಿ ವಾಸ ಮಾಡಲು ಬಯಸಿದ ಎಲ್ಲ ಅನುಕೂಲಗಳನ್ನು ಒದಗಿಸಿದರು.‌ ಅದರಲ್ಲಿ ಬಹಳ ಮುಖ್ಯವಾದುದು ಭೂದಾನ. ಅವರು ಇಲ್ಲಿ ಮಳೆ ಆಶ್ರಿತ ಭೂಮಿಯನ್ನು, ಜೋಳ, ರಾಗಿ ಬೆಳೆಯುವ ಭೂಮಿಯನ್ನು ಏಕೆ ಬಯಸುತ್ತಾರೆ. ‌ಅವರು ನೀರಾವರಿಯಾಗಿದ್ದ ಭೂಮಿಯನ್ನೇ ಬಯಸಿದರು. ಅದನ್ನು ಅವರಿಗೆ ಯಥೇಚ್ಛವಾಗಿ ನೀಡಲಾಯಿತು. ಆ ಭೂಮಿಯಲ್ಲಿ ಭತ್ತದ ಬೆಳೆಯನ್ನೇ ಬಯಸಿದರು. ವೈದಿಕ ದೇವರುಗಳುಗಳಿಗೆ ಮುದ್ದೆ, ರೊಟ್ಟಿ ಅರ್ಪಿಸಲು ಸಾಧ್ಯವೇ? ವೈದಿಕ ದೇವಾಲಯಗಳಲ್ಲಿ ಪ್ರಸಾದವಾಗಿ ಮುದ್ದೆ, ರೊಟ್ಟಿಗಳನ್ನು ಅಥವಾ ರಾಗಿ, ಜೋಳದ ತಯಾರಿಕೆಗಳನ್ನು ನೀಡಿದ್ದನ್ನು ಎಲ್ಲಾದರೂ ಕಂಡಿದ್ದೀರಾ!

ಇತಿಹಾಸಕಾರ ಷ. ಶೆಟ್ಟರ್‌ರವರು, ಕರ್ನಾಟಕದಲ್ಲಿ ಅಲ್ಲಿಯವರೆಗೆ ಯಾವುದೇ ಧಾರ್ಮಿಕ ಕೊಡುಗೆಗಳನ್ನು ವೈಯಕ್ತಿಕ ಆಸ್ತಿಯಾಗಿ ನೀಡಿರಲಿಲ್ಲ. ಬೌದ್ಧರು, ಜೈನರು ತಮ್ಮ ಧಾರ್ಮಿಕ ಆಚರಣೆಗಳಿಗಾಗಿ ಧಾರ್ಮಿಕ ಸಂಸ್ಥೆಗಳ ಹೆಸರಿನಲ್ಲಿ ಮಾತ್ರ ಭೂದಾನ ಮತ್ತಿತರ ದಾನಗಳನ್ನು ಪಡೆದರು. ಆದರೆ ಮೊತ್ತ ಮೊದಲ ಬಾರಿಗೆ ಬ್ರಾಹ್ಮಣರಿಗೆ ವೈಯುಕ್ತಿಕ ದಾನಗಳನ್ನು‌ ಬ್ರಹ್ಮಸ್ವಂ ಎಂಬ ಹೆಸರಿನಲ್ಲಿ ಅಸ್ತಿತ್ವಕ್ಕೆ ತರಲಾಯಿತು ಎಂದಿದ್ದಾರೆ. ಅವರು ಮುಂದುವರೆದು “ಸಮೃದ್ಧ ಪರಿಸರದಲ್ಲಿದ್ದ ಫಲವತ್ತಾದ ಭೂಮಿಯನ್ನು ತಮ್ಮ ಅನುವಂಶಿಕ ಭೋಗಕ್ಕೆ ಪಡೆದು ಭೂ ಒಡೆಯರಾದರು. ಕೃಷಿ ಉದ್ಯಮವನ್ನು ಅರಿಯದವರು ಶ್ರೀಮಂತ ಜಮೀನ್ದಾರರಾಗಲು ಸಾಧ್ಯವಾಯಿತು. ಗಂಗರು ನಿರ್ಮಿಸಿದ ಬ್ರಹ್ಮದೇಯಗಳಲ್ಲಿ ಬಹುತೇಕ – ಬಹುಶಃ ಎಲ್ಲವೂ – ಕೆರೆ, ಕಟ್ಟೆ, ನದಿ, ನಾಲೆಗಳ ನೀರುಣ್ಣವ ಫಲವತ್ತಾದ ಪ್ರದೇಶಗಳಲ್ಲಿದ್ದವು. ಕಬಿನಿ ನದಿ ದಡಗಳ ಮೇಲೆ ಸ್ಥಾಪಿಸಿದ ಬ್ರಹ್ಮದೇಯಗಳ ಸರಮಾಲೆಯ ಚಿತ್ರವಿದೆ. ಪಲ್ಲವ, ತಟಾಕ ಎಂಬ ಬ್ರಹ್ಮದೇಯಕ್ಕೆ ಎರಡು ನದಿಗಳ ನೀರಲ್ಲದೆ ಆರು ಕೆರೆಗಳ ನೀರೂ ದೊರೆಯುತ್ತಿತ್ತು. ಇಂತಹ ‌ನೀರ್ಮಣ್ಣಿನೊಡನೆ ಸುತ್ತಮುತ್ತಲ ಒಣ ಭೂಮಿ, ಕಾಡು, ಬೀಳು, ತೋಟಪಟ್ಟಿ, ಮುಂತಾದವನ್ನು ಸೇರಿಸಿ ವೈದಿಕರಿಗೆ ವಿತರಿಸಲಾಗುತ್ತಿತ್ತು” ಎಂದು ವಿವರಿಸಿದ್ದಾರೆ.

ನಂತರದ ರಾಜರುಗಳ ಕಾಲದಲ್ಲಿ ದೇವಸ್ವಂ, ಅಗ್ರಹಾರ ಎಂಬ ಹೆಸರಿನಲ್ಲಿ ಈ ಭೂದಾನಗಳನ್ನು ಮತ್ತಷ್ಟು ಹೆಚ್ಚಿಸಲಾಯಿತು.‌ ಕದಂಬರು, ಗಂಗರು ಮತ್ತು ಚಾಲುಕ್ಯರು ನೀಡಿದ ಒಟ್ಟು ಬ್ರಹ್ಮಸ್ವಗಳು 173, ದೇವಸ್ವ ಕೊಡುಗೆಗಳು 94. ಈ ರಾಜವಂಶಗಳು ದೇವಸ್ವಗಳಿಗಿಂತ ವೈಯುಕ್ತಿಕವಾದ ಬ್ರಹ್ಮಸ್ವಗಳನ್ನು ನೀಡುವುದರಲ್ಲಿ ಹೆಚ್ಚು ಆಸಕ್ತಿ ತೋರಿದ್ದಾರೆ ಎಂಬುದು ಕಾಣಬರುತ್ತದೆ. ನಂತರ ಆಳಿದ ರಾಷ್ಟ್ರಕೂಟರು 42 ಬ್ರಹ್ಮಸ್ವಗಳು, 200ಕ್ಕೂ ಹೆಚ್ಚು ದೇವಸ್ವಗಳ ಕೊಡುಗೆ ನೀಡಿದ್ದಾರೆ. ‌ಈ ರಾಜವಂಶಗಳ ಶಾಸನಗಳೆಂದರೆ ಭೂದಾನ ಮತ್ತಿತರ ಕೊಡುಗೆಗಳ ದಾನದ ದಾಖಲೆಗಾಗಿಯೇ ರಚಿಸಿದ್ದು ಎಂದು ಭಾವಿಸುವಂತಿದೆ. ಈ ಭೂದಾನ ಶಾಸನಗಳಲ್ಲಿ ಕೆರೆಗಳ ಪ್ರಸ್ತಾಪ ಬಂದಿದ್ದರೆ ಬಹುತೇಕ ಅದು ಈ ದಾನಗಳಿಗೆ ಅಂಟಿಕೊಂಡು ಬಂದಿರುವ ಅನುಷಂಗಿಕ ಪ್ರಸ್ತಾಪಗಳಷ್ಟೇ ಹೊರತು ಕೆರೆಗಳ ನಿರ್ಮಾಣದ ಬಗೆಗಿನವು ಅವುಗಳಲ್ಲಿ ಸಣ್ಣ ಸಂಖ್ಯೆಯಷ್ಟೇ.

ದೇವಸ್ವಗಳು ದೇವಾಲಯಗಳ ಪೂಜೆ, ಉತ್ಸವಗಳ ನಿರ್ವಹಣೆಗಾಗಿ ಕೊಡಲ್ಪಟ್ಟವು.‌ ಹೀಗಾಗಿ ಅವು ಬ್ರಹ್ಮಸ್ವಗಳಂತೆ ವೈಯುಕ್ತಿಕ ಅನುವಂಶಿಕ ಕೊಡುಗೆಗಳಲ್ಲ. ‌ಆದರೆ ಅವುಗಳಲ್ಲಿ ಬಹುಪಾಲು ದೇವಾಲಯದ ಪೂಜೆ, ಪುನಸ್ಕಾರ ನಿರ್ವಹಿಸುವವರಾದ ಬ್ರಾಹ್ಮಣರ ಉಪಯೋಗಕ್ಕಾಗಿಯೇ ವಿನಿಯೋಗವಾಗುತ್ತಿದ್ದವು.

ಮುಂದಿನ ರಾಜವಂಶಗಳು, ಕೆಂಪೇಗೌಡರಂತಹ ಪಾಳೆಯಗಾರರ ಕಾಲಗಳಲ್ಲಿ ದೇವಸ್ವ, ಭೂದಾನಗಳು ಹಲವು ಪಟ್ಟು ಹೆಚ್ಚಿದವು. ರಾಜವಂಶಗಳವರು ಮಾತ್ರವಲ್ಲದೆ ಊರ ಗಾವುಂಡರು, ನಾಡಗಾವುಂಡರು, ವ್ಯಾಪಾರಿ‌ಗಳ ಮತ್ತು ಕುಶಲಕರ್ಮಿಗಳ ಸಂಘಗಳು ಹಾಗೂ ವೈಯುಕ್ತಿಕವಾಗಿ ಹಲವರು ದೇವಾಲಯಗಳನ್ನು ಕಟ್ಟಿಸಿದರು.‌ ಕೊಡುಗೆಗಳನ್ನು ನೀಡಿದರು.

ದೇವಾಲಯಗಳಲ್ಲಿ ಅನ್ನ ಆಧಾರಿತ ಪ್ರಸಾದ ಹಂಚಿಕೆ, ತೆಂಗಿನಕಾಯಿ, ಬಾಳೆಹಣ್ಣು, ಎಲೆ, ಅಡಿಕೆ, ವಿವಿಧ ಹೂಗಳ ಅಲಂಕಾರ, ವಿವಿಧ ಹಣ್ಣುಗಳು ಇವುಗಳನ್ನು ಒದಗಿಸುವುದು ಈ ಭೂದಾನಗಳ ಉದ್ದೇಶವಾಗಿತ್ತು.

ಬ್ರಹ್ಮಸ್ವಗಳೆಂಬ ಹೆಸರಿನ ಭೂದಾನಗಳು ಕಡಿಮೆಯಾಗುತ್ತಾ ಹೋದವು ನಿಜ. ಆದರೆ ಅವು ಅಗ್ರಹಾರ ನಿರ್ಮಾಣ ಎಂಬ ಬೇರೆ ಹೆಸರನ್ನು ತಳೆದವು, ಮತ್ತಷ್ಟು ಹೆಚ್ಚಿದವು.‌ ಬೆಂಗಳೂರು ನಗರದ ಒಳಗೆ ಸೇರಿಕೊಂಡಿರುವ ಕುಪ್ರಸಿದ್ಧ ಜೈಲಿನ ನೆಲೆ ಪರಪ್ಪನ ಅಗ್ರಹಾರ, ಕೋನೇನ‌ ಅಗ್ರಹಾರ, ಕೆಂಪಾಪುರ ಅಗ್ರಹಾರ, ಅಗ್ರಹಾರ ದಾಸರಹಳ್ಳಿ ಎಂಬ ಅಗ್ರಹಾರಗಳ ಪಟ್ಟಿಯೇ ಗಣನೀಯವಾಗಿದೆ. ಒಂದು ಸೀಮಿತ ಪ್ರದೇಶದಲ್ಲಿ ಇಷ್ಟೊಂದು ಅಗ್ರಹಾರಗಳ ನಿರ್ಮಾಣ! ಅರಸೀಕೆರೆ ಎಂಬ ಒಂದು ತಾಲ್ಲೂಕಿನಲ್ಲಿಯೇ 22 ಅಗ್ರಹಾರಗಳು, ಶೃಂಗೇರಿಯಿಂದ ಶಿವಮೊಗ್ಗ ಜಿಲ್ಲೆಯ ಕೂಡಲಿಯವರೆಗೆ ತುಂಗಾ ನದಿಯ ಎರಡೂ ದಂಡೆಗಳ ಉದ್ದಕ್ಕೂ 64ಕ್ಕಿಂತ ಹೆಚ್ಚಿನ‌ ಅಗ್ರಹಾರಗಳ ದಾಖಲೆ ದೊರೆಯುತ್ತವೆ.

ಹೀಗೆ ಬ್ರಹ್ಮಸ್ವಗಳು, ದೇವಸ್ವಗಳು, ಅಗ್ರಹಾರಗಳಿಗೆ ಕೆರೆಗಳ ಕೆಳಗೆ ಫಲವತ್ತಾದ ಭೂಮಿಯನ್ನು ನೀಡುವುದು ಒಂದು ವಿಧಾನವಾದರೆ ಹಲವು ಪ್ರಸಂಗಗಳಲ್ಲಿ ಇಡೀ‌ ಹಳ್ಳಿ ಅಥವಾ ಹಲವು ಹಳ್ಳಿಗಳನ್ನೇ ಅವುಗಳ ಕೆರೆಗಳ ಜೊತೆಗೆ ದಾನವಾಗಿ ನೀಡಲಾಗುತ್ತಿತ್ತು. ಹೀಗೆ ದಾನವಾಗಿ ನೀಡಲ್ಪಟ್ಟ ಹಳ್ಳಿ, ಭೂಮಿಗಳನ್ನು ದಾನ ಮಾಡುವ ಮೊದಲು ಸಾಗುವಳಿ ಮಾಡುತ್ತಿದ್ದವರಾರು? ಅವರನ್ನು ಮತ್ತು‌ ಅವರ ಭೂಮಿಯನ್ನು ದಾನ ಪಡೆದವರ ಅಧೀನಕ್ಕೆ ನೀಡಲಾಯಿತೇ? ಅವರ ಗತಿ‌ ಏನಾಯ್ತು? ಎಂಬ ಬಗ್ಗೆ ಶಾಸನಗಳು ಯಾವ ವಿವರ ನೀಡುವುದಿಲ್ಲ. ಕೆರೆ ಕಟ್ಟಲು‌ ಶ್ರಮಿಸಿ, ಅದರ ಫಲ‌ ಪಡೆಯುತ್ತಿದ್ದವರು ಮುಂದೆ ದಾನ ಪಡೆದ ಬ್ರಾಹ್ಮಣರ ಅಥವಾ ದೇವಾಲಯಗಳ ಅಧೀನದ ಗೇಣೀದಾರರಾಗಿ‌ ತಮ್ಮ ದುಡಿಮೆಯ ಬಹುಭಾಗವನ್ನು ಅವರಿಗೆ ಒಪ್ಪಿಸುವಂತಾಗಿರಬೇಕು ಎಂದು ಊಹಿಸಬೇಕಷ್ಟೆ. ಹೀಗೆ ದಾನವಾಗಿ ನೀಡಲ್ಪಟ್ಟ ಭೂಮಿಗೆ ನೀರುಣಿಸುತ್ತಿದ್ದ ಕೆರೆಗಳನ್ನು ಕಟ್ಟಿಸಲು ಪ್ರಯತ್ನಿಸಿದವರು ಕಂಡ ಉತ್ತಮ ಬದುಕಿನ ಕನಸು ಹುಸಿಯಾಗಿ ಹೋಗಿದೆ. ಕೆರೆಗಳನ್ನು ಕಟ್ಟಿಸಿ ನೀರಾವರಿ ಮಾಡಿದ್ದರಿಂದಲೇ ಅವರ ಭೂಮಿ ಬೇರೆಯವರ ವಶವಾಗುವಂತಾಯಿತೇ!

ಈ ಅಗ್ರಹಾರಗಳಲ್ಲಿ ಇಪ್ಪತ್ತು ಮೂವತ್ತು ಬ್ರಾಹ್ಮಣ ಕುಟುಂಬಗಳಿಂದ ಸಾವಿರಾರು ಕುಟುಂಬಗಳವರೆಗೆ ವಾಸಿಸುತ್ತಿದ್ದರು. ಈ ಅಗ್ರಹಾರಗಳ ಒಳಗೆ ಹಲವು ದೇವಾಲಯಗಳು, ಅವರಿಗೆ ವಿದ್ಯಾಭ್ಯಾಸದ ಏರ್ಪಾಡುಗಳೂ ಇರುತ್ತಿದ್ದವು.

ವೈದಿಕ ಅನ್ನ ಸಂಸ್ಕೃತಿಯ ಭಾರವನ್ನು ಹೊತ್ತ ಕೆರೆಗಳು –

ಹೀಗೆ ಬ್ರಾಹ್ಮಣ ಕುಟುಂಬಗಳ ಬದುಕಿಗೆ, ದೇವಾಲಯಗಳಿಗೆ ಅವಶ್ಯವಾದದುನ್ನು ಬೆಳೆದು ಒಪ್ಪಿಸಬೇಕಾದ್ದು ಈ ಭೂಮಿ‌ ಸಾಗುವಳಿ ಮಾಡುತ್ತಿದ್ದವರ ಹೊಣೆಯಾಗಿತ್ತು. ಭತ್ತ, ಕಬ್ಬು, ಬಾಳೆ, ಎಲೆ, ತೆಂಗು, ಅಡಿಕೆ, ಹೂ ಹಾಗೂ ಹಣ್ಣುಗಳನ್ನು ಒದಗಿಸಬೇಕಾಗುತ್ತಿತ್ತು.

ಈ ಎಲ್ಲವೂ ಸೇರಿ ಬೆಳೆದ ವೈದಿಕ ಸಂಸ್ಕೃತಿಯ ಭಾರವನ್ನು ಕೆರೆಗಳು ಹೊರಬೇಕಾಯಿತು.‌ ಭತ್ತದ ಜೊತೆಗೆ ಈ ಹಲವು ಬೆಳೆಗಳನ್ನು ಬೆಳೆಯುವುದು, ಅಕ್ಕಿಯಿಂದ ಪಾಯಸ, ಇಡ್ಲಿ, ದೋಸೆ, ಸಂಡಿಗೆ, ಹಪ್ಪಳ ಮತ್ತು ಇತರನೇಕ ತಿನಿಸುಗಳ ತಯಾರಿ, ಅದಕ್ಕೆ ಪೂರಕವಾದ ಸಾಂಬಾರ್, ತೊವ್ವೆ, ರಸಂ ಇತ್ಯಾದಿಗಳು ಸೇರಿದ ಪಾಕಸಂಸ್ಕೃತಿ, ನಂತರ ಬಾಳೆಹಣ್ಣನ್ನು ಮೆಲ್ಲುವುದು, ತಾಂಬೂಲ ಜಗಿಯುವುದು ಇತ್ಯಾದಿ ಸೇರಿದ ಅನ್ನ ಸಂಸ್ಕೃತಿಯ ಒಂದು ಪ್ಯಾಕೇಜ್ ರೂಪುಗೊಂಡಿತು.

ರಾಜವಂಶದವರುಗಳು, ಅವರ ಸಾಮಂತ, ಮಾಂಡಲಿಕ, ಮಂತ್ರಿ ಮಾಗಧರು, ಹತ್ತು ಹಲವು ಉಪ ರಾಜವಂಶಗಳು, ಪಾಳೆಯಗಾರರು, ಊರುಗಳ ಪ್ರಭು ಗಾವುಂಡರು, ಅವರುಗಳೆಲ್ಲರ ಆಡಳಿತ ಸಿಬ್ಬಂದಿ‌ ಅಕ್ಕಿ ಪ್ರಧಾನವಾದ ಭೋಜನ, ಎಲೆ, ಅಡಿಕೆ, ತೆಂಗು, ಬೆಳೆದ ಹೂಹಣ್ಣುಗಳ ಸೇವನೆ ಮೊದಲಾದವುಗಳನ್ನು ಒಳಗೊಂಡ ವೈದಿಕ ಅನ್ನ ಸಂಸ್ಕೃತಿಯ ಪ್ಯಾಕೇಜನ್ನು ಅನುಕರಿಸಿದರು. ಕರ್ನಾಟಕದ ಪುರೋಹಿತಶಾಹಿ ಹಾಗೂ ಇತರ ಅಧಿಕಾರಸ್ಥ ಉಚ್ಛ ವರ್ಗದವರ ಅಗತ್ಯಗಳನ್ನು ಪೂರೈಸಲು ಕೆರೆಗಳ ಮತ್ತಿತರ ನೀರಿನ‌ ಸೆಲೆಗಳ ಬಳಕೆಯಾಯಿತು.

ಸಾಮಾನ್ಯವಾಗಿ ಕೆರೆ ಎಂದ ಕೂಡಲೇ ಅದು ಸಾರ್ವಜನಿಕ ಉಪಯೋಗಕ್ಕಾಗಿ, ಸಾರ್ವಜನಿಕ ಒಡೆತನಕ್ಕೆ ಸೇರಿದ್ದು ಎಂಬ ಭಾವನೆ ಮೂಡುತ್ತದೆ. ಆದರೆ ಹಲವು ಉಚ್ಛ ವರ್ಣ/ವರ್ಗದವರು ತಮ್ಮ ಭೂಮಿಯಲ್ಲಿ ತಮ್ಮದೇ ಖಾಸಗಿ ಕೆರೆಗಳನ್ನು ಹೊಂದಿದ್ದರು. ವಿಭಜನಪೂರ್ವ ಕೋಲಾರ ಜಿಲ್ಲೆಯ ಒಂದು ಉದಾಹರಣೆ ತೆಗೆದುಕೊಳ್ಳುವುದಾದರೆ, ಅದರಲ್ಲಿದ್ದ 3806 ಕೆರೆಗಳಲ್ಲಿ 686 ಖಾಸಗಿ ಕೆರೆಗಳು. ಖಾಸಗಿ ಕೆರೆಗಳಲ್ಲಿ ಹಲವು ದೊಡ್ಡ ಕೆರೆಗಳಾಗಿದ್ದವು. ಖಾಸಗಿ ಕೆರೆಗಳಿಂದ 27,000 ಎಕರೆಯಷ್ಟು ಭೂಮಿ ಸಾಗುವಳಿಯಾಗುತ್ತಿದ್ದರೆ, ಸಾರ್ವಜನಿಕ ಕೆರೆಗಳಿಂದ 72,000 ಎಕರೆಗಳಷ್ಟು ನೀರಾವರಿಯಾಗುತ್ತಿತ್ತು. ಅಂದರೆ ಸಾರ್ವಜನಿಕ ಕೆರೆಗಳ ನೀರಾವರಿ ಭೂಮಿಗೆ ಹೋಲಿಸಿದರೆ ಅದರ ಶೇ.40 ಭೂಮಿ ಖಾಸಗಿ ಕೆರೆ ನೀರಾವರಿಗೆ ಒಳಪಟ್ಟಿತ್ತು.

ಸಾರ್ವಜನಿಕ ಒಡೆತನದ ಕೆರೆಗಳಡಿಯ ನೀರಾವರಿ ಭೂಮಿಯಲ್ಲಿಯೂ ಕೂಡಾ ಈ ಉಚ್ಛ ವರ್ಣ/ವರ್ಗಗಳ ಒಡೆತನಕ್ಕೆ ಕೆರೆಕಟ್ಟೆಗಳು, ನಾಲೆಗಳ ಕೆಳಗಿನ ಬಹ್ವಂಶದ ಭೂಮಿ ಒಳಗಾಗಿದ್ದವು. ಕೇವಲ ಒಂದು ಸಣ್ಣ ಪ್ರಮಾಣದ ಗದ್ದೆ, ತೋಟಗಳು ಮಾತ್ರ ಬೇರೆ ರೈತರ ಉಪಯೋಗಕ್ಕೆ ದಕ್ಕಿದ್ದವು.

ಇಂತಹ ವ್ಯವಸ್ಥೆಯಲ್ಲಿ ಕೆರೆ ಕಟ್ಟಿದ ವಡ್ಡರು, ಆ ಮಹಾನ್ ಸಂಶೋಧಕರು, ಮದಗದ ಕೆರೆಯ ತೂಬುಗಳಿಗೆ ಬಳಸಿದ 20 ಟನ್ ತೂಕದ ಕಲ್ಲಿನ‌ ಕಂಬಗಳನ್ನು ತಯಾರಿಸಿ‌ ಸಾಗಿಸಿದ ಸಾಹಸಿ ಶ್ರಮಿಕರು, ಅವರಿಗೆ ಈ ಗದ್ದೆ, ತೋಟಗಳ ಒಂದು ತುಂಡಾದರೂ ಸಿಗುವ ಅವಕಾಶವಾಯಿತೆ? ದೊಡ್ಡ ಕೆರೆ ಕಟ್ಟಲು ಬಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಬಂದು ಊರ ಬಳಿ‌ ತಾತ್ಕಾಲಿಕ ಗುಡಿಸಲುಗಳಲ್ಲಿ‌ ನೆಲಸಿ ಸಿಕ್ಕ ಅರೆಹೊಟ್ಟೆ ಊಟ ಮಾಡಿ ಕೆರೆ ಕಟ್ಟಿದ ಮೇಲೆ ಊರಿಂದ ಹೊರ ಹಾಕಲ್ಪಡುವುದಷ್ಟೇ ಅವರ ಪಾಲಿಗೆ ಉಳಿದದ್ದು. ಅವರ ಪಯಣ ಮುಂದೆ ಎಲ್ಲಿ ಯಾವ ಕೆರೆ ಕಟ್ಟಲು ಅವರನ್ನು ಬಳಸಿಕೊಳ್ಳಲಾಗಬಹುದೋ ಆ ಊರಿಗೆ. ಅದೇ ಅರೆಹೊಟ್ಟೆಯ ಜೀವನಕ್ಕೆ.

ಜಾನಪದ ಗೀತೆಗಳು ಕೆರೆ ಕಟ್ಟಿದ ಊರಿನ ಮಹಿಳೆಯರ ರಚನೆಗಳಾದರೂ, ಅವುಗಳಲ್ಲಿ ಈ ವಡ್ಡರ ವೇದನೆ ಕೆಲವು ಸಾಲುಗಳಲ್ಲಿ ದಾಖಲಾಗಿದೆ. ಕೆರೆಯನ್ನು ಕಟ್ಟಲು ಅತ್ಯಂತ ಜಗ್ಗಾಡಿ ಕೊಸರಾಡಿ ಅತ್ಯಂತ ಕನಿಷ್ಠ ಕೂಲಿ ಕೊಡಲಾಗುತ್ತಿತ್ತು. ವಡ್ಡರದೇ ಆದ ಮೌಖಿಕ ಕತೆಗಳಲ್ಲಿ ಎಷ್ಟೋ ಕಡೆಗಳಲ್ಲಿ ದರ್ಪಿಷ್ಟ ಗೌಡ, ಪಾಳೆಯಗಾರರು ಒಪ್ಪಿದ ಕೂಲಿ ಕೊಡದೆ ಅವರನ್ನು ಓಡಿಸಿಬಿಟ್ಟ, ಅವರು ಅಂತಹ ಕೆರೆಗೆ ನೀರು ಬರದೇ ಹೋಗಲಿ ಎಂದು‌ ಶಪಿಸಿದ ಪ್ರಸಂಗಗಳು ದಾಖಲಾಗಿವೆ. ಈ ಕೆರೆಗಳನ್ನು ಕಟ್ಟಿದ ನಂತರ ನೀರು‌ ಶೇಖರವಾಗಿ ಬೆಳೆದ ಬೆಳೆಯನ್ನು ಕಣ್ತುಂಬಾ ತುಂಬಿಕೊಳ್ಳುವ ಭಾಗ್ಯವೂ ಅವರಿಗಿಲ್ಲದಾಗುತ್ತಿತ್ತು.‌

ಮುದ್ದೆ, ರೊಟ್ಟಿ ಸಂಸ್ಕೃತಿ –

ಕರ್ನಾಟಕದ ಬಯಲುನಾಡಿನ ಬಹುಸಂಖ್ಯಾತ ಗೇಣಿದಾರ ರೈತರು, ಸ್ವತಂತ್ರ ರೈತರು, ಜೀತಗಾರ ಕೃಷಿ ಕೂಲಿಕಾರರು, ಆಯಗಾರ ಕುಶಲಕರ್ಮಿಗಳು ಇವರುಗಳಿಗೆ ಉಳಿದುದು ಬೆದ್ದಲು ಎಂದು ಕರೆಯಲಾಗುತ್ತಿದ್ದ ಒಣಭೂಮಿ ಮತ್ತು ಅದರಲ್ಲಿ ಬೆಳೆಯುತ್ತಿದ್ದ ಜೋಳ, ರಾಗಿ, ಸಜ್ಜೆ, ನವಣೆ, ಸಾಮೆ, ಹಾರಕ, ಹುರುಳಿ, ಅವರೆ ಇತ್ಯಾದಿ ಬೆಳೆಗಳು. ಅದರಿಂದ ಮಾಡಿದ ತಿನಿಸುಗಳು ರೂಪುಗೊಂಡವು. ಅವುಗಳಿಗೆ ಪೂರಕವಾಗಿ ಹೊಲದಂಚಿನಲ್ಲಿ ಅಥವಾ ಹೊಲಗಳಲ್ಲಿ ಕಳೆಯಾಗಿ ಬೆಳೆಯುವ ಹುಚ್ಚೆಳ್ಳು, ಅಗಸೆ, ಪುಂಡಿ ಪಲ್ಲೆ, ಕಕ್ಕರಿಕಿ, ಅರಿವೆ, ಚಿಲಕರಿವೆ, ದಂಟು, ಹೊನಗೊನೆ ಮೊದಲಾದ ಹಲವೆಂಟು ಸೊಪ್ಪುಗಳನ್ನು ಬಳಸಿದ ಊಟದ ವೈವಿಧ್ಯ ಅರಳಿತು. ಇವುಗಳ ಜೊತೆಗೆ ವಿವಿಧ ಪ್ರಾಣಿ, ಪಕ್ಷಿಗಳ ಮಾಂಸ, ಮೊಟ್ಟೆಯಿಂದ ತಯಾರಿಸಿದ ತಿನಿಸುಗಳು ತಮ್ಮದೇ ಮೆರುಗನ್ನು ನೀಡಿದವು. ಇವುಗಳಿಂದ ಸಾಮಾನ್ಯ ಜನರದೇ ಆದ ಜನಪದ ಮುದ್ದೆ, ರೊಟ್ಟಿ ಸಂಸ್ಕೃತಿ ಅರಳಿತು. ಈ ಊಟದ ಸೊಬಗನ್ನು ಉತ್ತರ ಕರ್ನಾಟಕದ ಎಳ್ಳಮಾಸೆ ಮೊದಲಾದ ಅಮವಾಸ್ಯೆ, ಹುಣ್ಣಿಮೆಗಳಲ್ಲಿ, ದಕ್ಷಿಣ ಕರ್ನಾಟಕದ ಊರ ಹಬ್ಬ, ಜಾತ್ರೆಗಳಲ್ಲಿ ನೋಡಬೇಕು.
ಈ ಸಮುದಾಯಗಳಿಗೆ ಅನ್ನ ಮತ್ತದರ ಜೊತೆಗೂಡಿದ ಸಂಸ್ಕೃತಿ ಎಂಬುದು ಕನವರಿಕೆಯ ಭಾಗವಾಯಿತು. ಉಚ್ಛ ವರ್ಗಗಳು ತಿಂದು ಉಳಿದುದಕ್ಕಾಗಿ, ಬಿಸುಡಿದುದಕ್ಕಾಗಿ ಕಾಯುವ ಸ್ಥಿತಿಯಾಯಿತು.

ಕೆರೆ Vs ಕ್ಷಾಮ:

ಕರ್ನಾಟಕದ ನೆಲದ ಮೇಲೆ ಬಿದ್ದ ಮಳೆಯ ಬಹು ದೊಡ್ಡ ಭಾಗವನ್ನು ಕೆರೆಗಳಲ್ಲಿ ಸಂಗ್ರಹಿಸಿ ಉಚ್ಛ ವರ್ಗದ ಉಪಭೋಗಕ್ಕಾಗಿ ವಶಪಡಿಸಿಕೊಂಡ ಫಲವಾಗಿ ಕೇವಲ ಹೊಲದ ಮೇಲೆ ಬೀಳುವ ಅನಿರ್ದಿಷ್ಟ ಮಳೆಯ ನೀರಿನ‌ ಮೇಲೆ ಅವಲಂಬಿಸಬೇಕಾಯಿತು. ಒಣಭೂಮಿಯಲ್ಲಿ ಮಳೆಯ ನೀರನ್ನು ಇಂಗಿಸುವ ಮೂಲಕ, ಹೊಲಗಳ ಪಕ್ಕದಲ್ಲಿ ಸಣ್ಣ ಕಟ್ಟೆಗಳಲ್ಲಿ ನೀರನ್ನು ಸಂಗ್ರಹಿಸುವ ಮೂಲಕ ಹೊಲಗಳಲ್ಲಿ ಬೆಳೆಯುವ ರಾಗಿ, ಜೋಳಗಳ ಇಳುವರಿಯನ್ನು ಹೆಚ್ಚಿಸುವ ಸಾಧ್ಯತೆಗಳನ್ನು, ಅನ್ವೇಷಿಸಲಿಲ್ಲ. ಮಳೆ ಅನುಕೂಲವಾದಾಗ ಆಹಾರಧಾನ್ಯಗಳನ್ನು ಶೇಖರಿಸಿಡುವ ಅವಕಾಶವಾಗಲಿಲ್ಲ.‌ ಇದರಿಂದಾಗಿ ಮಳೆ ಬಾರದ ವರ್ಷಗಳಲ್ಲಿ ಕ್ಷಾಮ ಡಾಮರುಗಳು ಬಹಳ ಸಾಮಾನ್ಯವೆನ್ನುವಂತಾಯಿತು. ʻಯಾತಕ್ಕೆ ಮಳೆ ಹೋದವೋ ಶಿವ ಶಿವಾ ಲೋಕ ತಲ್ಲಣಿಸುತಾದೋʼ ಎಂಬ ದುಸ್ಥಿತಿಯನ್ನು, ಬಹಳ ತಡವಾಗಿ ಬಂದ ಮಳೆಯನ್ನು, ʻಯಾವಾಗ ಬಂದ್ಯಪ್ಪೋ ಮಳೆರಾಯʼ ಎಂದು ಹಂಗಿಸುವುದನ್ನು ಜಾನಪದಗೀತೆಗಳಲ್ಲಿ ನೋಡುತ್ತೇವೆ. ಇಂತಹ ಗೀತೆಗಳು, ಲಾವಣಿಗಳು, ಕತೆಗಳು, ಬರಗಾಲವನ್ನೆದುರಿಸಲು ರೂಪುಗೊಂಡ ಕೆಲ ಜೀವನಪದ್ಧತಿಗಳು, ಧಾರ್ಮಿಕ ಆಚರಣೆಗಳನ್ನು ಬರಗಾಲ ಜಾನಪದ ಎಂದು ವರ್ಗೀಕರಿಸಬಹುದಾದಷ್ಟು ಗಣನೀಯವಾಗಿವೆ.

ಅಗ್ರಹಾರಗಳ ಬ್ರಾಹ್ಮಣರು, ಇತರ ಉಚ್ಛ ವರ್ಗಗಳು ಕೆರೆಗಳ ನೀರನ್ನು ಉಪಯೋಗಿಸಿ ಬೆಳೆದ ಹಾಗೂ ತಮ್ಮ ಒಡೆತನದ ಫಲವತ್ತಾದ ಹೊಲಗಳಿಂದ ಪಡೆದ ಆಹಾರಧಾನ್ಯಗಳನ್ನು ಹಗೇವುಗಳಲ್ಲಿ ಸಂಗ್ರಹಿಸಿ ಬರಗಾಲವನ್ನು ನಿಭಾಯಿಸಿಕೊಳ್ಳುತ್ತಿದ್ದರು. ಒಂದು ಅಗ್ರಹಾರದಲ್ಲಿಯೇ ನಲವತ್ತಕ್ಕೂ ಹೆಚ್ಚು ಹಗೇವುಗಳಿದ್ದುದು ಕಂಡು ಬಂದಿದೆ.

ತಮ್ಮಲ್ಲಿದ್ದ ಈ ಆಹಾರದ ದಾಸ್ತಾನನ್ನೂ ಕೂಡಾ ತಮ್ಮ ಶ್ರೀಮಂತಿಕೆಯನ್ನು ಮತ್ತಷ್ಟು ವೃದ್ಧಿಸುವುದಕ್ಕಾಗಿ ಉಚ್ಚ ವರ್ಗಗಳು ಬಳಸಿಕೊಳ್ಳುತ್ತಿದ್ದವು.‌ ಸಾಮಾನ್ಯ ರೈತ, ಕೂಲಿಕಾರರ, ಕುಶಲಕರ್ಮಿಗಳ ದಯನೀಯ ಪರಿಸ್ಥಿತಿಯ ಸಮಯದಲ್ಲಿ ಕೇವಲ ಎರಡು ಹೊತ್ತು ಅರೆಹೊಟ್ಟೆಯನ್ನು ತುಂಬಿಸುವ ಗಂಜಿಯನ್ನು ಕೊಟ್ಟು ದುಡಿಸಿಕೊಳ್ಳುತ್ತಿದ್ದರು. ಕೆರೆಕಟ್ಟೆ ಕಟ್ಟಿಸಲು, ತಮ್ಮ ಅರಮನೆ, ಜಹಗೀರುದಾರರ ವಾಡೆಗಳನ್ನು, ಕೋಟೆ ಕೊತ್ತಲುಗಳು, ದೇವಾಲಯಗಳನ್ನು ಕಟ್ಟಿಸಲು ಇವರ ಶ್ರಮವನ್ನು ಬಳಸಿಕೊಳ್ಳುತ್ತಿದ್ದರು. ಆಹಾರಧಾನ್ಯಗಳನ್ನು ಸಾಲವಾಗಿ ನೀಡಿ ಅವರನ್ನು ಜೀತಗಾರರಾಗಿಸಿಕೊಳ್ಳುತ್ತಿದ್ದರು. ಬರಗಾಲದ ಬೇಗೆ ತಡೆಯಲಾರದೆ ವಲಸೆ ಹೊರಟ ಅವರ ಮನೆ ಮಾರುಗಳನ್ನು, ಎತ್ತು, ಗಾಡಿಗಳನ್ನು ಅತ್ಯಂತ ಅಗ್ಗವಾಗಿ ಕೊಳ್ಳುತ್ತಿದ್ದರು. ಇದ್ದ ಅಲ್ಪ‌ಸ್ವಲ್ಪ ಬಂಗಾರ, ಬೆಳ್ಳಿಯ ಒಡವೆಗಳು ಶ್ರೀಮಂತರ ಮನೆ ಸೇರುತ್ತಿದ್ದವು.

ಹೀಗೆ ಮಳೆಯ ನೀರನ್ನು ಸಂಗ್ರಹಿಸಿ ಆಹಾರ ಭದ್ರತೆಗಾಗಿ ಬಳಸಬಹುದಾದ ಅತ್ಯುಪಯುಕ್ತವಾದ ಕೆರೆಯ ತಂತ್ರಜ್ಞಾನ ಉಚ್ಛ ವರ್ಣ, ವರ್ಗದವರ ಸ್ವತ್ತಾಗಿ ಅವರ ಭೋಗ ಜೀವನಕ್ಕೆ ಹಾಗೂ ಶ್ರೀಮಂತಿಕೆಯನ್ನು ಮತ್ತಷ್ಟು ಬೆಳೆಸುವುದಕ್ಕೆ ದುರ್ಬಳಕೆಯಾಯಿತು.

ಅಂದೂ ಇಂದೂ ಯಾವುದೇ ವಿಜ್ಞಾನ, ತಂತ್ರಜ್ಞಾನ ಹೊಸದಾಗಿ ಆವಿಷ್ಕಾರವಾದರೂ ಕೂಡಾ ಅದರ ಫಲ ಮಾತ್ರ ಅಂದಂದಿನ ಆಳುವ ಉಚ್ಛ ವರ್ಣ, ವರ್ಗಗಳ ಕೈವಶವಾಗಿವೆ. ಜನಸಾಮಾನ್ಯರ ಸಂಕಟಗಳ ಪರಿಹಾರಕ್ಕೆ ಬದಲು ಅವುಗಳನ್ನು ಹಲವು ಪಟ್ಟು ಹೆಚ್ಚಿಸುವ ಸಾಧನಗಳಾಗಿ ಅವರ ವಿರುದ್ಧವೇ ತಿರುಗಿಸಲ್ಪಟ್ಟಿವೆ.

‍ಲೇಖಕರು avadhi

July 22, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: