ಜಿ ಎನ್ ನಾಗರಾಜ್ ಅಂಕಣ- ಆದಿಮ ಮಹಿಳಾ ಕಾಲೇಜು ಎಂಬ ವಿಶೇಷ !

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

14

ಒಬ್ಬ ಹುಡುಗಿ ಮೊದಲ ಬಾರಿಗೆ ಋತುಮತಿಯಾಗಿದ್ದಾಳೆ. ಏನಿದು ಎಂದು ಅವಳಿಗೆ ಗಾಬರಿಯೇನಿಲ್ಲ. ಏಕೆಂದರೆ ನನಗೆ ಹೀಗೇನೋ ಅಗುತ್ತದೆ ಎಂಬುದು ಆ ವಯಸ್ಸಿಗೆ ಬರುತ್ತಿದ್ದಾಗಲೇ ಅವಳಿಗೆ ತಮಾಷೆಗಳನ್ನು ಮಾಡುತ್ತಲೇ ತಿಳಿಸಲಾಗಿದೆ.  ಅವಳು ಕೂಡಲೇ ತನ್ನ ಅಜ್ಜಿಯ ಬಳಿಗೆ ಓಡಿ ಬರುತ್ತಾಳೆ. ಏಕೆಂದರೆ ಅವಳು ಮತ್ತು ಇತರ ಬಾಲಕಿಯರು ವಾಸ ಮಾಡುತ್ತಿದ್ದುದೇ ಅವರ ಅಜ್ಜಿಯ ಜೊತೆ ಒಂದು ಗುಡಿಸಿಲಿನಲ್ಲಿ. ಅವಳ ತಾಯಿ ತನ್ನ ಗಂಡನೊಂದಿಗೆ ಮತ್ತೊಂದು ಗುಡಿಸಿಲಿನಲ್ಲಿ. ಇತರ ಬಾಲಕರು,ಇನ್ನೂ ಮದುವೆಯಾಗದ ತರುಣರು ಇನ್ನೊಂದು ಗುಡಿಸಿಲಿನಲ್ಲಿ. ಆದ್ದರಿಂದ ಅಜ್ಜಿಯೇ ಅವಳಿಗೆ ಈ ಪ್ರಪಂಚದ ಬಗ್ಗೆ, ಮುಂದಿನ ಜೀವನದ ಬಗ್ಗೆ ಕತೆಗಳನ್ನು ಹೇಳುತ್ತಾ ತಿಳಿಸಿದ್ದವಳು.

ಅಜ್ಜಿ ಅವಳಿಂದ ವಿವರಗಳನ್ನು ತಿಳಿದು ಖಾತರಿಪಡಿಸಿಕೊಂಡು ಆ ಹುಡುಗಿಯ ತಾಯಿಯಾದ ತನ್ನ ಮಗಳಿಗೆ ತಿಳಿಸುತ್ತಾಳೆ. ನಂತರ ಅವಳ ಇರುವ ಊರಿಗೆಲ್ಲ ಡಂಗುರ ಹಾಕಿ ಸಾರಲಾಗುತ್ತದೆ. ಇಡೀ ಊರಿನ ಹೆಣ್ಣುಗಳೆಲ್ಲ ಹಾಡುತ್ತಾ,ಕುಣಿಯುತ್ತಾ ಇವರ ಗುಡಿಸಲುಗಳ ಮುಂದೆ ನೆರೆಯುತ್ತಾರೆ. ಅವಳಿಗೆಂದೇ ಒಂದು ಗುಡಿಸಲನ್ನು ಹಾಕಲಾಗುತ್ತದೆ. ಅದರೊಳಗೆ ಅವಳು ಒಬ್ಬಳೇ ಮೂರು ವರ್ಷದವರೆಗೆ ಇರಬೇಕು. ಹಿಂದೆ ಇನ್ನೂ ಹೆಚ್ಚು ಕಾಲ,ಕೆಲವೊಮ್ಮೆ ಆರು ವರ್ಷದವರೆಗೂ ಅಲ್ಲಿಯೇ ಇರುವ ಪದ್ಧತಿ ಇತ್ತಂತೆ.

ಇದು ತಾನ್ಜಾನಿಯಾ ಎಂಬ ಆಫ್ರಿಕದ ಪೂರ್ವ ಭಾಗದ ದೇಶದ ಉಗುರು ಅಥವಾ ವಾಲುಗುರು ಎಂಬ ಬುಡಕಟ್ಟಿನ ಪದ್ಧತಿ. ಈ ಬುಡಕಟ್ಟು ತಾನ್ಜಾನಿಯಾದ ಬೆಟ್ಟ ಸಾಲಿನ ಒಂದು ಬೆಟ್ಟದಲ್ಲಿ ಸುಮಾರು ಎಂಟು ಸಾವಿರ ಅಡಿಯ ಮೇಲಿನ‌ ಮಟ್ಟಸ ಪ್ರಸ್ಥಭೂಮಿಯ ಮೇಲೆ ವಾಸಿಸುತ್ತದೆ.  ಈ ಬುಡಕಟ್ಟು ಅಮ್ಮ ಮೂಲದ,ಅಮ್ಮ ಕೇಂದ್ರಿತ ಪದ್ಧತಿ. ಇದರಲ್ಲಿ ಭೂಮಿಯ ಒಡೆತನ ಇಡೀ ಗುಂಪಿನ ಹೆಣ್ಣುಗಳದ್ದು. ಅವರ ಮಕ್ಕಳೇ ಭೂಮಿಯ ವಾರಸುದಾರರು. ಈ ಹೆಣ್ಣುಗಳ ಗಂಡಂದಿರಿಗೂ, ಅವರ ಸೋದರರ ಮಕ್ಕಳಿಗೂ ವಾರಸುದಾರಿಕೆಯ ಹಕ್ಕಿಲ್ಲ.  ದಕ್ಷಿಣ ಕನ್ನಡದ ಅಳಿಯ ಸಂತಾನ ಪದ್ಧತಿಯಂತೆ ಇವರ ಆಸ್ತಿ ಹಂಚಿಕೆ. ಆದರೆ ತುಳುವ ಮಹಿಳೆಯರಿಗಿಂತ ಹೆಚ್ಚು ಸ್ವಾತಂತ್ರ್ಯ ಮತ್ತು ಅಧಿಕಾರ ಈ ಬುಡಕಟ್ಟಿನ ಮಹಿಳೆಯರಿಗೆ ಇನ್ನೂ ಉಳಿದಿದೆ.

ಆದಿಮ ಕಾಲೇಜು ಶಿಕ್ಷಣ ಹೀಗಿದೆ :

ಮೈನೆರೆದ ಹೆಣ್ಣುಗಳನ್ನು ವರ್ಷಗಟ್ಟಲೆ ಗುಡಿಸಲುಗಳಿಗೆ ಸೀಮಿತರಾಗಿಸಿದ ಈ ಕಾಲ , ಅವಳ ಜೀವನದ ಅಮೂಲ್ಯ ಕಾಲ. ಅವಳಿಗೆ ಹೆಚ್ಚು ಶ್ರಮದ ಹೊಲ,ತೋಟಗಳ ಕೆಲಸದಿಂದ ಪೂರ್ತಿ ವಿನಾಯತಿ.ಕೇವಲ ಮನೆಯೊಳಗಿನ ಸಣ್ಣ ಪುಟ್ಟ ಕೆಲಸ ಮಾಡಿಕೊಳ್ಳುವುದಷ್ಟೇ. ಜೊತೆಗೆ ಇಡೀ ಅವಧಿಯಲ್ಲಿ ಅವರಿಗೆ ಸಾಧ್ಯವಿರುವ ಅತ್ಯುತ್ತಮ ಆಹಾರ ನೀಡಲಾಗುತ್ತದೆ. ಜೊತೆಗೆ ಒಬ್ಬ ಹುಡುಗಿಯನ್ನು ಆಕೆಯ ಸಹಾಯಕ್ಕೆಂದು, ಮತ್ತೊಬ್ಬ ತಾಯಿ ಕಡೆಯ ಹಿರಿಯ ಹೆಂಗಸನ್ನು ಮಾರ್ಗ ದರ್ಶನಕ್ಕೆಂದು ನೇಮಿಸಲಾಗುತ್ತದೆ.

ಮಾರ್ಗ ದರ್ಶನಕ್ಕಾಗಿ ನೇಮಿಸಿದ ಹಿರಿಯ ಹೆಂಗಸು ಈ ಕಾಲೇಜಿನ ಪ್ರಿನ್ಸಿಪಾಲ್ ಇದ್ದಂತೆ. ಅಕೆಯ ಸಹಾಯಕ ಉಪನ್ಯಾಸಕರು, ಪ್ರಾಯೋಗಿಕ ತರಬೇತುದಾರರು ಮೈನೆರೆದ ಹೆಣ್ಣಿನ ತಾಯಿ, ಚಿಕ್ಕಮ್ಮ. ಮತ್ತಿತರರು. ಇವರೆಲ್ಲರೂ ಲುಗುರು ಎಂಬ ಬುಡಕಟ್ಟು ತಲೆ ತಲಾಂತರದಿಂದ‌ ಕೂಡಿಟ್ಟ ಅರಿವನ್ನು ಹೊಸ ಹೆಣ್ಣಿಗೆ ವರ್ಗಾಯಿಸುವುದು ಮತ್ತು ಅನುಭವದ ಬುತ್ತಿಯನ್ನು ಉಣಬಡಿಸುವುದೇ ಈ ಕಾಲೇಜಿನ ಗುರಿ. ಒಬ್ಬ ವಿದ್ಯಾರ್ಥಿಗೆ ಎಷ್ಟೊಂದು ಉಪನ್ಯಾಸಕರು !

ಈ ಶಿಕ್ಷಣದ ವಿಷಯ ವೈವಿಧ್ಯತೆ ಅಚ್ಚರಿ ಮೂಡಿಸುವಂತಹದು. ಅರಣ್ಯದ ಮರ ಗಿಡಗಳು,ಪ್ರಾಣಿ ಪಕ್ಷಿಗಳ ತಿಳಿವಳಿಕೆ, ಹಲವು ಕೌಶಲ್ಯಗಳಿಂದ ಹಿಡಿದು ಲೈಂಗಿಕ ಶಿಕ್ಷಣದವರೆಗೆ ಈ ಕಾಲೇಜಿನ ಪಠ್ಯ ಕ್ರಮ. ಅವರು ವಾಸಿಸುವ ಬೆಟ್ಟ ಸಾಲಿನ ಮೇಲೆ ಬೆಳೆಯುವ ಮರ ಗಿಡಗಳಲ್ಲಿ ಆಹಾರಕ್ಕೆ ಉಪಯುಕ್ತವಾಗುವಂತಹವು ಯಾವು, ಯಾವ ಕಾಯಿಲೆಗಳ ಚಿಕಿತ್ಸೆಗೆ ಯಾವ ಗಿಡ ಮೂಲಿಕೆ ಎಂಬೆಲ್ಲ ತಿಳುವಳಿಕೆಯನ್ನು ಕೊಡಲಾಗುತ್ತದೆ. ಅಲ್ಲಿರುವ ಪಕ್ಷಿ ಪ್ರಾಣಿಗಳ ಬಗ್ಗೆ ಅವುಗಳ ಉಪಯೋಗ, ಅಪಾಯಗಳ ಬಗ್ಗೆ ಕೂಡಾ.

ಅರಣ್ಯದ ಉತ್ಪನ್ನಗಳನ್ನು ಸಂಗ್ರಹಿಸುವುದು, ಕಾಪಿಡುವುದು, ಬುಟ್ಟಿ,ಹಗ್ಗ, ಮಲಗುವ ಚಾಪೆಗಳನ್ನು ಹೆಣೆಯುವುದು, ಟೋಪಿಗಳನ್ನು ತಯಾರಿಸುವುದು, ಮರದ ತೊಗಟೆಯಿಂದ ನಾರು ಪಡೆದು ಬಟ್ಟೆ ತಯಾರಿಸುವುದು, ಕುಂಬಾರಿಕೆ ಹೀಗೆ ಅವರಿಗೆ ಗೊತ್ತಿರುವ ಕೌಶಲ್ಯಗಳನ್ನು ಪ್ರಾಯೋಗಿಕವಾಗಿ ಕಲಿಸುವುದು ಒಂದು ವಿಧ.  ಇವುಗಳ ಜೊತೆಗೆ ವಿವಿಧ ರೀತಿಯ ಅಡಿಗೆ ತಯಾರಿಕೆ, ಹಿಟ್ಟು ಬೀಸುವುದು, ಕುಟ್ಟುವುದು ಇತ್ಯಾದಿಗಳನ್ನು ಈಗಾಗಲೇ ಕಲಿತಿರದಿದ್ದರೆ ಅವುಗಳನ್ನೂ ಕಲಿಸಲಾಗುವುದು ಅಥವಾ ಉತ್ತಮಪಡಿಸಲಾಗುವುದು. ಇವುಗಳನ್ನು ತಾಯಿ, ಚಿಕ್ಕಮ್ಮಂದಿರು ಕಲಿಸಿದರೆ ಪ್ರಿನ್ಸಿಪಾಲ್ ಆದ ಮಾರ್ಗದರ್ಶಕಿ ಬುಡಕಟ್ಟಿನ ಹಿರಿಯರ ಕತೆಗಳು, ಅವರ ಸಾಹಸಗಳು, ದೇವರು, ದೈವಗಳು, ಹಿರಿಯರ ಪೂಜೆ, ಈ ಬುಡಕಟ್ಟಿಗೂ ಬೇರೆ ಬುಡಕಟ್ಟುಗಳಿಗೂ ಇರುವ ಸಂಬಂಧ, ವ್ಯತ್ಯಾಸಗಳು, ಹೆಣ್ಣಿನ ಆಸ್ತಿಯ ಹಕ್ಕುಗಳು, ವಾರಸುದಾರಿಕೆಯ ಕಟ್ಟಲೆಗಳು, ಗಂಡನ ಪಾತ್ರ ಇತ್ಯಾದಿಗಳನ್ನು ಕಲಿಸುವರು.

ಇಷ್ಟೇ ಅಲ್ಲದೆ ಲೈಂಗಿಕತೆ ಎಂಬುದು ಸುಖಪಡುವುದಕ್ಕಾಗಿಯೇ ಇರುವುದು. ಸಂಕೋಚಗಳಿಲ್ಲದೆ ಸುಖಪಡಬೇಕು ಎಂಬುದನ್ನು ಹಲವು ಕತೆ, ಸಾಮತಿಗಳ ಮೂಲಕ ಕಲಿಸುತ್ತಾರೆ. ಉದಾಹರಣೆಗೆ ಅಡಿಗೆ ಮಾಡುವ ಮಡಿಕೆ ಮತ್ತು ಸೌಟು ಮಡಿಕೆ ಹೆಣ್ಣಿನ ಯೋನಿ ಮತ್ತು ಗರ್ಭಕೋಶವಾಗಿ ಸೌಟು ಗಂಡಿನ ಅವಯವವಾಗಿ ಸರಿಯಾದ ರೀತಿ ಅಡಿಗೆ ಮಾಡುವುದನ್ನು ಕಲಿಯಬೇಕು. ಅಡಿಗೆ ಮಾಡುವ ಮೊದಲು ಮತ್ತು ನಂತರ ಪಾತ್ರೆಗಳನ್ನು ಸ್ವಚ್ಛಗೊಳಿಸಬೇಕು ಎಂದು ಕಲಿಸುವರು. ಮಕ್ಕಳನ್ನು ಪಡೆಯಲು ಎರಡು ಮುಟ್ಟಿನ ನಡುವೆ ಮೊದಲ ವಾರದ ನಂತರ ಮಧ್ಯ ಭಾಗದವರೆಗೆ ಗಂಡನ ಜೊತೆ ಸೇರಬೇಕು ಎಂಬುದನ್ನೂ ತಿಳಿಸುವರು. ಮಕ್ಕಳ ಬಗೆಗಿನ ಬಯಕೆಯನ್ನು ಉದ್ದೀಪಿಸಲು ಮತ್ತು ಅವರ ಪಾಲನೆಯನ್ನು ಕಲಿಸಲು ಅವಳ ಕೈಯಿಂದಲೇ ಮಗುವಿನ ಮಣ್ಣಿನ ಗೊಂಬೆ ಮಾಡಿಸುವರು, ಅದನ್ನು ಲಾಲಿಸಲು , ಪ್ರೀತಿಯಿಂದ ನೋಡಿಕೊಳ್ಳಲು ಕಲಿಸುವರು. ಒಂದು ಮಗುವಾದ ನಂತರ ಮತ್ತೊಂದು ಮಗುವನ್ನು ಪಡೆಯುವುದಕ್ಕೆ ಕನಿಷ್ಟ ಎರಡು ವರ್ಷ ಅಂತರ ಇರಬೇಕು. ಅದಕ್ಕಾಗಿ ಹುಟ್ಟಿರುವ ಮಗುವಿಗೆ ಎರಡು ವರ್ಷದವರೆವಿಗೂ ತಾಯಿ ಹಾಲು ಕುಡಿಸುವುದು ಒಳ್ಳೆಯದು ಎಂದು ಕೂಡಾ ತಿಳಿಸಲಾಗುತ್ತದೆ. ಎಷ್ಟು  ಜನ ಆಧುನಿಕ ಯುವತಿಯರಿಗೆ ಈ ಪರಿಯ ಅಗತ್ಯ ಶಿಕ್ಷಣ ನೀಡಲಾಗುತ್ತದೆ ?
ಕೊನೆಯ ದಿನ ಹಿರಿಯ ಮಹಿಳೆಯರೆಲ್ಲ ಸೇರಿ ಬೆತ್ತಲೆಯಾಗಿ ಸಂಭೋಗದ ಅಣಕು ಪ್ರದರ್ಶನ ಮಾಡುವರಂತೆ. ಹೇಗಿದೆ ಮುಕ್ತ ಲೈಂಗಿಕ ಶಿಕ್ಷಣದ ಆದಿವಾಸಿ ರೀತಿ ! 

ಈ ರೀತಿಯ ಪ್ರತ್ಯೇಕ ವಾಸದ ಹಿಂದೆ ಒಂದು ಮುಖ್ಯ ಆದಿವಾಸಿ ನಂಬಿಕೆ ಅಡಗಿದೆ. ಮಾನವನ ಜೀವನದ ಯಾವುದೇ ಹೊಸ ಹಂತ ಅವನು/ ಅವಳು ಹೊಸದಾಗಿ ಮತ್ತೆ ಹುಟ್ಟಿದಂತೆ ಎಂಬ ಅವರ ಭಾವನೆ. ಹುಡುಗಿ ಹೆಣ್ಣಾಗುವುದು ಎಂದರೆ ಅದರಷ್ಟು ದೊಡ್ಡ ಬದಲಾವಣೆ ಜೀವನದಲ್ಲಿ ಯಾವುದಿದೆ ! ಆದ್ದರಿಂದ ಬಾಲಕಿ ಗರ್ಭಾಶಯದ ರೂಪವಾಗಿರುವ ಕತ್ತಲು ತುಂಬಿದ ಗುಡಿಸಲಲ್ಲಿ ಕಾಲ ಕಳೆಯಬೇಕು. ಆಕೆ ಅಲ್ಲಿ ಗರ್ಭಾಶಯದಲ್ಲಿರುವ ಭ್ರೂಣದಂತೆ ಕಾಲು ಮುದುಡಿ ಮಲಗಬೇಕು. ಆಕೆ ಈ ಅವಧಿಯಲ್ಲಿ ಸ್ನಾನ ಮಾಡುವಂತಿಲ್ಲ. ಹುಡುಗರು ವಯಸ್ಸಿಗೆ ಬಂದದ್ದರ ಬಗ್ಗೆಯೂ ಇದೇ ರೀತಿ ನಂಬಿಕೆಯಿದೆ.‌ಆದರೆ ಅವರ ಪ್ರತ್ಯೇಕ ವಾಸ ಹೆಣ್ಣಿನಂತೆ ಬಹಳ ದೀರ್ಘವಾಗಿರುವುದಿಲ್ಲ, ಕೆಲ ದಿನಗಳಿಗೆ  ಸೀಮಿತವಾಗಿರುತ್ತದೆ. ಅದೇ ರೀತಿ ಬೆಡಗಿನ ಹೊಸ ನಾಯಕನನ್ನು ಆರಿಸಿದಾಗ ಕೂಡಾ ಅವನಿಗೆ ಅದು ಹೊಸ ಹುಟ್ಟು ಎಂದು ಭಾವಿಸಿ ಕೆಲ ದಿನಗಳ ಕಾಲದ ಪ್ರತ್ಯೇಕ ವಾಸದ ನಂತರ ಹೊಸ ಹೆಣ್ಣನ್ನು ಹೊತ್ತು ತರುವಂತೆಯೇ ರೀತಿ ಹೆಗಲ ಮೇಲೆ ಹೊತ್ತು ತರುತ್ತಾರೆ. ಅವನ ಅಧಿಕಾರದ ಚಿಹ್ನೆಗಳನ್ನು ನೀಡುತ್ತಾರೆ.

ಈ ವಾಸದ ಅವಧಿಯಲ್ಲಿ ಅವಳಿಗೆ ಮದುವೆಯ ಪ್ರಸ್ತಾಪಗಳು ಬರಲಾರಂಭಿಸುತ್ತವೆ. ಅವಳ ಸೋದರ ಮಾವ ಮತ್ತು ತಂದೆ ಮದುವೆಯ ನಿರ್ಧಾರ ಮಾಡುತ್ತಾರೆ. ಆದರೆ ಹಿಂದಿನ ಕಾಲದಲ್ಲಿ ಗಂಡುಗಳು ಆಕೆ ಹೊರಬರುವ ಉತ್ಸವದ ಸಮಯದಲ್ಲಿ ತಮ್ಮ ಇಚ್ಛೆಯನ್ನು ಮಂಡಿಸುತ್ತಿದ್ದರು. ಹೊಸ ಹೆಣ್ಣು ಅವರ ನಡುವೆ ತನಗೆ ಬೇಕಾದವರನ್ನು ಆರಿಸಿಕೊಳ್ಳುತ್ತಿದ್ದಳು. ಅದರಲ್ಲಿ ಅವಳು  ಈ ಮೊದಲೇ ಪ್ರೀತಿಸಿದವರೂ ಇದ್ದಿರಬಹುದು.
  ಹೊಸ ಹೆಣ್ಣನ್ನು ಅವಳ ಕತ್ತಲವಾಸದಿಂದ ಬಿಡುಗಡೆಯಾಗಿ ಹೊರಬರುವ ದಿನವನ್ನು ದೊಡ್ಡ ಹಬ್ಬವಾಗಿ ಆಚರಿಸುತ್ತಾರೆ. ಅವಳ ಹಳ್ಳಿಯ ಎಲ್ಲರೂ, ನೆರೆಯ ಹಳ್ಳಿಗಳವರೂ ಬಂದು ಭಾಗವಹಿಸುತ್ತಾರೆ. ಹಾಡು, ವಾದ್ಯಗಳ ಭೋರ್ಗರೆತ, ಕುಣಿತಗಳ ನಡುವೆ ಅವಳನ್ನು ಗುಡಿಸಿಲಿನಿಂದ ಹೊರತರುವಾಗ ಅವಳ ಮದುವೆ ನಿಶ್ಚಯವಾಗಿದ್ದರೆ ಅವಳ ಗಂಡನ ಸೋದರ , ಇಲ್ಲದಿದ್ದರೆ ಹೆಣ್ಣಿನ ಬೆಡಗಿಗೆ ಗಂಡನಾಗನಹುದಾದ ಬೆಡಗಿನ ಒಬ್ಬ ಗಂಡಸಿನ ಹೆಗಲ ಮೇಲೆ ಹೊತ್ತು ತರಲಾಗುತ್ತದೆ. ಆಗಲೂ ಆಕೆ ಸರಿಸುಮಾರು ಬೆತ್ತಲೆಯಾಗಿಯೇ ಇರುತ್ತಾಳೆ ಜನನ ಕಾಲದ ಶಿಶುವಿನ ರೀತಿ.  ಒಂದು ದಾರವನ್ನು ಶಿಶುವಿನ ಹೊಕ್ಕಳು ಬಳ್ಳಿಯ ಸೂಚಕವಾಗಿ ಕೈಯಲ್ಲಿ ಹಿಡಿದಿರುತ್ತಾಳೆ. ಅವಳ ಹಿಂದೆ ಕೆಲವೊಮ್ಮೆ ಹೆಣ್ಣಾಗುವ ವಯಸ್ಸಿಗೆ ಬಂದಿರುವ ಹುಡುಗಿಯರನ್ನೂ  ಹೆಗಲ ಮೇಲೆ ಹೊತ್ತು ಅವರ ಗಂಡನಾಗುವ ಬೆಡಗಿಗೆ ಸೇರಿದ ಗಂಡಸರು ಅಣಕವಾಡುತ್ತಾ ಸಾಗುತ್ತಾರೆ. ಆಮೋದ ಪ್ರಮೋದಗಳು ಜರುಗುತ್ತವೆ.  ಲುಗುರು ಬುಡಕಟ್ಟಿನಲ್ಲಿ ಹುಡುಗಿ ಹೆಣ್ಣಾದ ಘಟನೆಯನ್ನು ವೈಭವದಿಂದ ಆಚರಿಸುವಷ್ಟು ಅವರ ಮದುವೆಯನ್ನು ಅಸಚರಿಸುವುದಿಲ್ಲ. ಮದುವೆ ಈ ಹಬ್ಬದ ಬಾಲಂಗೋಚಿಯಂತಿರುತ್ತದೆ. ಮದುವೆ ಪದ್ಧತಿ ಇನ್ನೂ ಆರಂಭವಾಗದ ಕಾಲದಲ್ಲಿ ಹೆಣ್ಣಾಗುವ ಘಟನೆಯೇ ಬಹು ಮುಖ್ಯ ಘಟನೆಯಲ್ಲವೇ.

ಈ ಪದ್ಧತಿಯಿಂದಾಗಿ ಮಹಿಳೆಯರು ತಮ್ಮ ಬದುಕಿನ , ದೇಹದ ಬದಲಾವಣೆಗಳನ್ನು ಅರಿತುಕೊಳ್ಳುವುದು, ಈ ಬದಲಾವಣೆಗಳ ಬಗ್ಗೆ ಆತಂಕ,ಭಯಗಳಿಲ್ಲದೇ ಸ್ಚ ವಿಶ್ವಾಸದಿಂದ ಎದುರಿಸುವುದು , ಹಲವು ವಿಷಯಗಳನ್ನು ಕಲಿತುಕೊಳ್ಳುವುದು ಬಹು ಮುಖ್ಯ ಪ್ರಯೋಜನ. ಆದರೆ ಅದರ ಜೊತೆಗೆ ಮತ್ತೊಂದು ಮುಖ್ಯ ಪ್ರಯೋಜನವೆಂದರೆ ಹಲವು ಮಾನವ ಸಮುದಾಯಗಳಂತೆ ಹುಡುಗಿಯರ ಬಾಲ್ಯ ವಿವಾಹ, ಮೈ ನೆರೆದ ಕೂಡಲೇ ಇನ್ನೂ ದೇಹ ತಯಾರಾಗದೆಯೇ ಗರ್ಭ ಧರಿಸಿ ದುರ್ಬಲ ಮಕ್ಕಳನ್ನು ಹೆರುವುದು ತಪ್ಪುತ್ತದೆ. 18-20 ವರ್ಷ ವಯಸ್ಸಿನವರೆಗೆ ಮದುವೆಯಾಗುವುದು ಮುಂದೆ ತಳ್ಳಲ್ಪಡುತ್ತದೆ.

ಮೂರು ವರ್ಷ ಕಾಲದ ಈ ಶಿಕ್ಷಣ ಒಂದು ರೀತಿ ಆಧುನಿಕ ಗೃಹ ವಿಜ್ಞಾನದ ಡಿಗ್ರಿಯ ಪಠ್ಯ ಕ್ರಮದಂತಿಲ್ಲವೇ ! ಈ “ಪದವಿ”ಶಿಕ್ಷಣಕ್ಕೆ ಇತ್ತೀಚೆಗೆ ಆಧುನಿಕ ಶಿಕ್ಷಣವೇ ಅಡ್ಡಿಯಾಗಿದೆ. ತಾನ್ಜಾನಿಯಾ ದೇಶದ ಕಡ್ಡಾಯ ಶಿಕ್ಷಣ ಕಾನೂನು ಪ್ರತಿ ಬಾಲಕ ಬಾಲಕಿಯರೂ ಕೂಡಾ ಎಂಟು ವರ್ಷಗಳ ನಂತರ ಏಳು ವರ್ಷಗಳ ಶಿಕ್ಷಣ ಪಡೆಯಬೇಕು. ಲುಗುರು ಬುಡಕಟ್ಟಿನ ಹುಡುಗಿಯರು ಮೈನೆರೆಯುವ ವಯಸ್ಸು ಸರಾಸರಿಯಾಗಿ 13-15 ವರ್ಷ. ಅಂದರೆ ಅವರು ಇನ್ನೂ ಶಾಲೆಗೆ ಹೋಗುತ್ತಿರುವ ಸಮಯದಲ್ಲಿಯೇ ಮೈ ನೆರೆಯುತ್ತಾರೆ. ಆದ್ದರಿಂದ ಮೂರು ವರ್ಷದ ಈ ಪ್ರತ್ಯೇಕ ವಾಸ ಈಗ ಹಲವು ರೀತಿಯ ಮಾರ್ಪಾಟುಗಳಿಗೆ ಒಳಗಾಗಿದೆ. ಶಾಲೆಗೆ ಹೋಗಿ ಬಂದ ನಂತರ ಪ್ರತ್ಯೇಕ ವಾಸದ ಗುಡಿಸಿಲಿಗೆ ಹೋಗುವುದು, ರಜೆ ಕಾಲದಲ್ಲಿ ಅವಳ ಜೀವನ ಶಿಕ್ಷಣ ಸಾಗುವುದು, ಅವಧಿ ಆರು ತಿಂಗಳಿಗೆ ಸೀಮಿತವಾಗಿರುವುದು ಇತ್ಯಾದಿ.

ಹೆರಿಗೆ ಬಗ್ಗೆ ಸರ್ಟಿಫಿಕೇಟ್ ಕೋರ್ಸ್ :

ಗರ್ಭಿಣಿಯಾದ ಮೇಲೆ ಒಂದು ಕುಟುಂಬ ಕಾರ್ಯಕ್ರಮ ನಡೆಸುವುದು ವಿಶ್ವಾದ್ಯಂತ ಹಲವು ಸಮುದಾಯಗಳಲ್ಲಿ ಇರುವ ಆಚರಣೆ.  ಭಾರತದಲ್ಲಿ 7 ತಿಂಗಳ ಸಮಯಕ್ಕೆ ಸೀಮಂತ ನಡೆಸುವುದು ಸಾಮಾನ್ಯ. ಲುಗುರು ಬುಡಕಟ್ಟಿನಲ್ಲಿಯೂ ಗರ್ಭಿಣಿಯ 7 ತಿಂಗಳಿಗೆ ಕಾರ್ಯಕ್ರಮ ಮಾಡುತ್ತಾರೆ. ಈ ಕಾರ್ಯಕ್ರಮ ಬೇರೆಲ್ಲ ಕಡೆ ವಿವಿಧ ರೀತಿಯಲ್ಲಿ ನಡೆಯಬಹುದು. ಆದರೆ ಲುಗುರು ಬುಡಕಟ್ಟಿನಲ್ಲಿ ಅದೂ ಒಂದು ತರಬೇತಿಯ ಅವಕಾಶವನ್ನಾಗಿ ರೂಪಿಸಿದ್ದಾರೆ. ಈ ಬುಡಕಟ್ಟಿನ ಹಿರಿಯ ಮಹಿಳೆಯರು, ಅನುಭವೀ ಸೂಲಗಿತ್ತಿಯರು ಗರ್ಭಿಣಿಗೆ ಹೆರಿಗೆಯ ಭಯ ಹೋಗಲಾಡಿಸಲು ವಿವರವಾದ ಶಿಕ್ಷಣ ನೀಡುತ್ತಾರೆ. ಮಗು ಎಲ್ಲಿಂದ ಹೊರಬರುತ್ತದೆ, ಹೇಗೆ ಹೊರಬರುತ್ತದೆ ಎಂದು ತೋರಿಸುವದಲ್ಲದೆ ಆಗ ಉಂಟಾಗಬಹುದಾದ ಸಮಸ್ಯೆಗಳೇನು, ತಮ್ಮ ಅನುಭವಗಳೇನು ? ತಮ್ಮ ಹೆರಿಗೆ ಸಮಯದಲ್ಲಿ ಯಾವ ಸಮಸ್ಯೆಗಳು ಉಂಟಾಯಿತು ? ಹೆರಿಗೆಯಾಗುವಾಗ ಹೇಗೆ ಕುಳಿತುಕೊಳ್ಳಬೇಕು ? (  ಈ ಬುಡಕಟ್ಟಿನ ಪರಿಣತ ಸೂಲಗಿತ್ತಿಯರು ಮಲಗಿ ಹೆರಿಗೆಯಾಗುವುದಕ್ಕಿಂತ ಕುಳಿತು ಹೆರಿಗೆಯಾಗುವುದು ಹೆಚ್ಚು ಅನುಕೂಲ ಎಂದು ಭಾವಿಸುತ್ತಾರೆ. ) ಸೂಲಗಿತ್ತಿಯರ ಸಲಹೆ, ನಿರ್ದೇಶಗಳಂತೆ ನಡೆದುಕೊಳ್ಳುವುದು ಹೆರಿಗೆ ಸುಸೂತ್ರವಾಗಿ ಆಗಲು ಅನುಕೂಲ. ಗರ್ಭಚೀಲ ಒಳಗೇ ಸಿಲುಕಿಕೊಳ್ಳುವ ಸಂಭವ ಅದನ್ನು ತಪ್ಪಿಸಲು ಯಾವಾಗ , ಹೇಗೆ ಒತ್ತಡ ಹಾಕಬೇಕು ? ಎಂಬ ಬಗ್ಗೆ ಯಾವ ಸಂಕೋಚವಿಲ್ಲದೆ ತರಬೇತಿ ನೀಡುತ್ತಾರೆ. ಹೆರಿಗೆ ಎಂದರೆ ಮಗುವಿಗೆ ಬಾಗಿಲು ತೆರೆದು ಆಹ್ವಾನಿಸುವುದು ಎಂದು ವಿವರಿಸಲಾಗುತ್ತದೆ.

ಸಾವಿರಾರು ವರ್ಷಗಳ ಹಿಂದೆಯೇ ಈ ರೀತಿಯ ತರಬೇತಿ ಮತ್ತು ತಿಳುವಳಿಕೆಯ ಮೂಲಕ ಮಹಿಳೆಯರ ಭಯಾತಂಕಗಳ ನಿವಾರಣೆ ಮಾಡುವ ಈ ಪದ್ಧತಿ ರೂಪಿಸಿಕೊಂಡಿರುವುದು ಅಚ್ಚರಿ ಉಂಟುಮಾಡುತ್ತದೆ. ಜೊತೆಗೆ 21 ಯ ಶತಮಾನದ ಆಧುನಿಕ ಮನಸ್ಸುಗಳಿಗೂ ಸಾಧ್ಯವಾಗದ ರೀತಿಯಲ್ಲಿ ಅಜ್ಜಿ, ತಾಯಿ, ಚಿಕ್ಕಮ್ಮಂದಿರು ಯಾವ ಮಡಿ, ಸಂಕೋಚಗಳನ್ನು ಇಟ್ಟುಕೊಳ್ಳದೆ ಅವರು ಪಡೆದಿರುವ ಅರಿವು ಅನುಭವದ ಆಧಾರದ ಮೇಲೆ ಲೈಂಗಿಕ ಶಿಕ್ಷಣವನ್ನು ನೀಡುವುದು ಕೂಡಾ ಗಮನ ಸೆಳೆಯುವ ಅಂಶ. ಇಂತಹ ಅವಶ್ಯಕ ಪದ್ಧತಿಗಳು ರೂಪುಗೊಂಡು ಉಳಿದುಬರಲು ಆ ಬುಡಕಟ್ಟುಗಳ ಅಮ್ಮ ಕೇಂದ್ರಿತ ಸಮುದಾಯ ಜೀವನವೇ ಕಾರಣ. ಹೆಣ್ಣಿನ ಜೀವನದ ಅಗತ್ಯಗಳಿಗನುಸಾರವಾಗಿ ಈ ಪದ್ಧತಿಗಳನ್ನು ರೂಢಿಸಿಕೊಂಡಿದ್ದಾರೆ ಅಲ್ಲಿಯ ಮಹಿಳೆಯರು. ಪರುಷಾಧಿಪತ್ಯ ಮಹಿಳೆಯರ ಮೇಲೆ ವಿಪರೀತವಾಗಿ ಹೇರುವ ಸಂಕೋಚ ಮಡಿಗಳು ಅವರನ್ನು ಬಾಧಿಸಿಲ್ಲ. ಏಕೆಂದರೆ ಈ ಬುಡಕಟ್ಟುಗಳ ಭೂಮಿ ಮಹಿಳೆಯರ ಹಕ್ಕು ಮತ್ತು ಈ ಬುಡಕಟ್ಟುಗಳಲ್ಲಿ ಕುಲಾಧಿಪತ್ಯ, ಪಾಳೆಯಗಾರಿ ಎಂಬ ಪುರುಷ ದಬ್ಬಾಳಿಕೆ ಅಸ್ತಿತ್ವಕ್ಕೆ ಬಂದಿಲ್ಲ.

ಭಾರತದಲ್ಲಿ :
ಭಾರತದ ಹಲವು‌ ಆದಿವಾಸಿ ಬುಡಕಟ್ಟುಗಳಲ್ಲಿ ವಿಭಿನ್ನವಾದ ರೀತಿಯಲ್ಲಿ ಇದೇ ಉದ್ದೇಶವನ್ನುಳ್ಳ ಪದ್ಧತಿಗಳು ರೂಢಿಯಲ್ಲಿದ್ದವು. ಅದರಲ್ಲಿ ಮಧ್ಯ ಪ್ರದೇಶ, ಛತ್ತೀಸಘಡ ರಾಜ್ಯಗಳಲ್ಲಿರುವ ಮುರಿಯಾ ಎಂಬ ಬುಡಕಟ್ಟಿನ ಘೋಟುಲ್ ಎಂಬ ಪದ್ಧತಿ ಸ್ವರೂಪದಲ್ಲಿ ಬೇರೆಯಾದರೂ ಲುಗುರು ಬುಡಕಟ್ಟಿನ ಮೇಲ್ಕಂಡ ಆಚರಣೆಗಳ ಉದ್ದೇಶವನ್ನು ಬಹುಮಟ್ಟಿಗೆ ಸಾಧಿಸುತ್ತದೆ. ಈ ಬುಡಕಟ್ಟಿನ ಆರು ವರ್ಷಕ್ಕಿಂತ ಮೇಲ್ಪಟ್ಟ, ಇನ್ನೂ ಮದುವೆಯಾಗದ ಬಾಲಕ, ಯುವಕ ಯುವತಿಯರು ಕಡ್ಡಾಯವಾಗಿ ಇದರ ಸದಸ್ಯರು.

ಆ ಪ್ರದೇಶದಲ್ಲಿ ಪ್ರವಾಸ ಮಾಡಿದವರು ಕಂಡಂತೆ :
ಘೋಟುಲ್‌ನ ಹೊರಗೆ ತೂಗು ಹಾಕಿದ್ದ ಕಟ್ಟಿಗೆಯ ಗಂಟೆ ಬಾರಿಸಿತು. ಘೋಟುಲದ ಇರುಳ ಕಾರ್ಯಕ್ರಮಗಳು ಪ್ರಾರಂಭವಾಯಿತು.  ಅಂದಿನ ವಿವಿಧ ಕೆಲಸಗಳ ಪರಾಮರ್ಶೆಯಾಯಿತು. ಕಾಡಿನಿಂದ ಉರವಲು ತಂದದ್ದು, ಕಾಯಿಪಲ್ಲೆ ಬೆಳೆದದ್ದು, ಕಸ ತೆಗೆದದ್ದು,ಸಾರಿಸಿದ್ದು,ದೊನ್ನೆಗಳನ್ನು ರಚಿಸಿದ್ದು ಎಲ್ಲ ಸರಿಯಾಗಿದೆಯೇ ಎಂದು ಪರಿಶೀಲಿಸಿದರು…. ಒಬ್ಬ ಕಿರಿಯ ತಂಬಾಕು ಹಂಚಿದ. ಆನಂತರ ಎಲ್ಲರೂ ಒಂದೆಡೆ ಸೇರಿ ಹಾಡು ಕತೆ ಒಗಟುಗಳನ್ನು ಹೇಳಲಾರಂಭಿಸಿದರು…. ಘೋಟುಲ್‌ಗಳಿಗೆ ಹೊಲವನ್ನು ಬಿಟ್ಟುಕೊಡುವ ಪದ್ಧತಿ ಇದೆ. ಅದರಲ್ಲಿ ಕಾಯಿಪಲ್ಲೆ ಮತ್ತು ಇತರ ಬೆಳೆಗಳನ್ನು ಬೆಳೆಯುತ್ತಾರೆ.

ಸರಳತೆ, ಸಮಾನತೆ ಸ್ವಾತಂತ್ರ್ಯಗಳು ಘೋಟುಲ ಜೀವನದ ಜೀವಾಳ. ಗಂಡು ಹೆಣ್ಣು ಅಂತರವಿಲ್ಲದೆ ಅವರೆಲ್ಲ ಉಣ್ಣುತ್ತಾರೆ,ಉಡುತ್ತಾರೆ ಓಡಾಡುತ್ತಾರೆ. ಯುವಕ ಯುವತಿಯರು ನಗ್ನರಾಗಿಯೇ ನದಿಯಲ್ಲಿ ಈಸಾಡುವಷ್ಡು ಸಮಾನತೆ. ಅಂತಯೇ ಮಲಗಲು ಒಂದು ಯುವ ಜೋಡಿಗೆ ಒಂದು ಚಾಪೆ ಒದಗಿಸಲಾಗುತ್ತದೆ. ಈ ಜೋಡಿಗಳು ಎಲ್ಲರೂ ಎಲ್ಲರ ಎದುರಿನಲ್ಲೇ ಲೈಂಗಿಕ ಸಂಬಂಧ ಹೊಂದುತ್ತಾರೆ. ಪ್ರತಿಯೊಬ್ಬ ಯುವಕನೂ ಪ್ರತಿಯೊಬ್ಬ ಯುವತಿಯೊಂದಿಗೆ ಕೂಡುವ ಅವಕಾಶ ನೀಡುವ ಪದ್ಧತಿ.

ಈ ಪದ್ಧತಿ ಹಿಂದೆ ಹಲವು ಆದಿವಾಸಿ ಬುಡಕಟ್ಟುಗಳಲ್ಲಿ ಬಳಕೆಯಲ್ಲಿದ್ದರೂ ಅಳಿದು ಹೋಗಿದೆ. ಮುರಿಯಾ ಬುಡಕಟ್ಟುಗಳಲ್ಲಿಯೂ ಕಣ್ಮರೆಯಾಗುತ್ತಾ ನಡೆದಿದೆ.

‍ಲೇಖಕರು Admin

July 2, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: