ಜಿ ಎನ್ ನಾಗರಾಜ್ ಅಂಕಣ- ಅರಿವ ಬೆಡಗು

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

5

ತೇಜಸ್ವಿಯವರ ಮಿಸ್ಸಿಂಗ್ ಲಿಂಕ್‌ಗಳಿಂದ ಹರಾರೆಯವರ ಸೇಪಿಯನ್ಸ್‌ನತ್ತ.

ಸೇಪಿಯನ್ಸ್ ಎಂದರೆ ಬುದ್ಧಿವಂತ ಎಂದು. ಹೋಮೋ ಸೆಪಿಯನ್ಸ್ ಎಂಬ ಬುದ್ಧಿವಂತ ಮಾನವನಿಗೂ ವಾನರನಿಗೂ ಮಧ್ಯೆ ಇರಬೇಕಾದ ಲಿಂಕ್‌ಗಳ ಕತೆಯನ್ನು ವಿಜ್ಞಾನ ಪತ್ತೆ ಹಚ್ಚಿದ ಪತ್ತೇದಾರಿಕೆಯ ಕತೆಯೇ ಮಿಸ್ಸಿಂಗ್ ಲಿಂಕ್. ಅವರು ನಿಲ್ಲಿಸಿದಲ್ಲಿಂದ ಆರಂಭವಾಗುತ್ತದೆ ಹರಾರೆಯವರ ಸೇಪಿಯನ್ಸ್. ಮಿಸ್ಸಿಂಗ್ ಲಿಂಕ್ ಹಲವು ಹತ್ತು ಸಾವಿರ ಕನ್ನಡಿಗರ ಅರಿವನ್ನು ಹೆಚ್ಚಿಸಿದೆ. ಈ ಓದುಗರಲ್ಲಿ ಇಂಗ್ಲಿಷ್ ಬಲ್ಲ ಸಾವಿರಾರು ಜನ ಹರಾರೆಯವರನ್ನೂ ಓದಿಕೊಂಡಿರಬಹುದು. ಹರಾರೆಯವರು ತಮ್ಮ ಕೃತಿಯ ತಿರುಳನ್ನು ಆರಂಭಿಸುವುದೇ ಈ ಮಾತುಗಳಿಂದ : appearance of new ways of thinking and communicating between 70,000 and 30,000 years ago constitutes the cognitive revolution. ಈ ಸಮಯದಲ್ಲಿ ಒಂದು ಅರಿವಿನ ಕ್ರಾಂತಿಯೇ ನಡೆದಿದೆ. ಅದರ ಸೂಚನೆಗಳು ಈ ಅವಧಿಯಲ್ಲಿ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ನಡೆದ ಉತ್ಖನನಗಳಲ್ಲಿ ಹಲವು ಬಗೆಯಲ್ಲಿ ಕಂಡು ಬಂದಿವೆ. ಇದು ಆಧುನಿಕ ಮಾನವನ ಹಾಗೂ ಅವನ ಸಂಸ್ಕೃತಿಯ ಬೆಳವಣಿಗೆಯ ಘಟ್ಟ.

ಎರೆಕ್ಟಸ್ ಮಾನವ ಜೀವಿಯ 20 ಲಕ್ಷ ವರ್ಷಗಳಷ್ಟು ದೀರ್ಘಕಾಲದ ವಿಕಾಸದಲ್ಲಿ ಹಲ ಹಲವು ಸಣ್ಣ ಬದಲಾವಣೆಗಳು ಸಂಭವಿಸುತ್ತಾ ಸಾಗಿವೆ. ಎರೆಕ್ಟಸ್ ಮಾನವ ಜೀವಿ ವಿಶ್ವದ ಹಲವು ಪ್ರದೇಶಗಳಿಗೆ ವಲಸೆ ಹೋದ ಮೊದಲ ಮಾನವ ಜೀವಿ. ಆ ಎಲ್ಲ ಪ್ರದೇಶಗಳಲ್ಲಿ ಅವನ ವಿಕಾಸ ಬೇರೆ ಬೇರೆ ರೂಪಗಳನ್ನು ಪಡೆದುಕೊಂಡಿದೆ. ಮಾನವರ ಅರಿವಿನ ಬೆಡಗು ಈ ಅಂಕಣದ ತಿರುಳಾದ್ದರಿಂದ ಆ ಎಲ್ಲ ವಿವರಗಳಿಗೆ ಹೋಗುವುದಿಲ್ಲ.‌
ಭಾರತ ಉಪಖಂಡದ , ಈಗ ಪಾಕಿಸ್ತಾನದ ಭಾಗವಾಗಿರುವ ಸೋನ್ ಕಣಿವೆ, ನರ್ಮದಾ ಕಣಿವೆ, ಭೀಮ್‌ಬೇಟ್ಕಾ ಎಂಬ ಮಧ್ಯಪ್ರದೇಶದ ಭಾಗಗಳು, ಕರ್ನಾಟಕದ ಹುಣಸಿಗಿ, ತಮಿಳುನಾಡಿನಲ್ಲಿ ನಂತರ ಶ್ರೀ ಲಂಕಾದಲ್ಲಿ ಕೂಡ ಎರೆಕ್ಟಸ್ ಮಾನವನ ಪಳೆಯುಳಿಕೆಗಳು ಅಥವಾ ಅವನು ತಯಾರಿಸುತ್ತಿದ್ದ ವಿಶಿಷ್ಟ ತಂತ್ರಜ್ಞಾನದ ಉಪಕರಣಗಳು ದೊರೆತಿವೆ.

ಕಠಿಣ ಬದುಕು :

ಎರೆಕ್ಟಸ್ ಮಾನವ ಜೀವಿ ಮುಂದುವರೆದ ಜೀವಿ, ಅವನ ಬದುಕು ಸುಗಮವಾಗಿತ್ತು ಎಂಬ ತಪ್ಪು ಕಲ್ಪನೆಗೆ ಬರಬಾರದು.
ಅವರ ಜೀವನ ಹೇಗಿದ್ದಿರಬಹುದೆಂದು ಒಂದು ಸಣ್ಣ ಊಹೆ ಮಾಡಿಕೊಳ್ಳೋಣ.

ಇನ್ನೂ ಕೈಯಲ್ಲಿ ಹಿಡಿದು ಮಾಂಸವನ್ನು ಕೆತ್ತಲು , ಪ್ರಾಣಿಗಳಿಗೆ ನೇರ ಎದುರಾಗಿ ಮಾತ್ರವೇ ಬೇಟೆಯಾಡಲು ಸಾಧ್ಯವಿರುವ ಆಯುಧಗಳು, ಕಾಡನ್ನು ಸವರಲು ಕೂಡಾ ಕಲ್ಲಿನ‌ ಕೊಡಲಿಗಳು, ಇನ್ನೂ ಅಡಿಗೆಗೆ ಬಳಸಲು ತಿಳಿಯದ ಬೆಂಕಿಯ ಉಪಯೋಗ, ಉಸಿರಿನ ಮೇಲೆ ನಿಯಂತ್ರಣ ಸಾಧಿಸದೆ ಭಾಷೆಯನ್ನಿನ್ನೂ ಉಚ್ಚರಿಸಲಾಗದ ಎದೆಗೂಡಿನ, ಶ್ವಾಸನಾಳದ, ಗಂಟಲಿನ ಮಾಂಸಖಂಡಗಳು, ಚಳಿ, ಮಳೆಯಿಂದ ಕಾಪಾಡಿಕೊಳ್ಳಲು ಇನ್ನೂ  ತಿಳಿಯದ ಈ ಜೀವಿಗಳು 20 ಲಕ್ಷ ವರ್ಷಗಳ ಅವಧಿಯಲ್ಲಿ ಹಲವು ಹಿಮಯುಗಗಳು, ವಾತಾವರಣದ ತೀವ್ರ ಬದಲಾವಣೆಗಳು ಈ ಮಿತಿಗಳು ಮತ್ತು ಸಂಕಷ್ಟಗಳ ನಡುವೆ ಈ ಜೀವಿಗಳು ಹೇಗೆ ಬೇಟೆಯಾಡಿರಬಹುದು ? ಹೇಗೆ ಜೀವಿಸಿರಬಹುದು ?
ಅವರನ್ನು ಮುಖ್ಯವಾಗಿ ಕಾಡುತ್ತಿದ್ದದ್ದು ಹಸಿವು, ವಾತಾವರಣದ ಬದಲಾವಣೆಯ ಸಮಯದಲ್ಲಿ ಬೇಟೆಯ ಪ್ರಾಣಿಗಳು, ಹಣ್ಣು ಹಂಪಲುಗಳು,ಗೆಡ್ಡೆ ಗೆಣಸುಗಳ ಕೊರತೆ ಜೊತೆಗೆ ಕಾಯಿಲೆಗಳಿಂದ, ಮಾಂಸಾಹಾರಿ ಪ್ರಾಣಿಗಳ ಬಲಿಯಾಗಿ ಸಾವುಗಳು. ಬೇಟೆಯಾಡುವಾಗ ಸಾವುಗಳು, ಕಾಡ್ಗಿಚ್ಚಿಗೆ ಬಲಿಯಾಗುವುದು.

ಈ ಎಲ್ಲ ಸಂದರ್ಭಗಳಲ್ಲಿ ಉಂಟಾಗುವ ಅಂಗವಿಕಲತೆಯಿಂದ ಉಂಟಾಗುವ ಸವಾಲುಗಳು. ಮತ್ತೆ ಗಾಯಗಳು, ಇವು ಸೋಂಕಾಗಿ ಸಾವುಗಳು. ಜೊತೆಗೆ ಹುಟ್ಟಿದ ಕೆಲವೇ ದಿನಗಳಲ್ಲಿ ಸಾಯುವ  ದೊಡ್ಡ ಸಂಖ್ಯೆಯ ಶಿಶು ಮರಣಗಳು. ಇತ್ತೀಚಿನ ಪ್ರಾಚೀನ ಮಾನವ ಶಾಸ್ತ್ರೀಯ ಸಂಶೋಧನೆಗಳು ದೊರಕಿರುವ ಅಸ್ಥಿಪಂಜರಗಳ ಪಳೆಯುಳಿಕೆಗಳ ಆಧಾರದ ಮೇಲೆ ಲೆಕ್ಕಿಸಿರುವಂತೆ  ಈ ಜೀವಿಗಳು ಹದಿನೈದು ವರ್ಷ ಮುಟ್ಟುವುದೇ ಒಂದು ದೊಡ್ಡ ಸಾಹಸ.‌ ಅದರಿಂದಾಗಿ ಶಿಶು ಮರಣದಿಂದ ಬಚಾವಾದ ಹಲವು ಮಕ್ಕಳು ತಾಯಿಯಿಲ್ಲದೆ ಅನಾಥರಾಗಿರುವ ಪರಿಸ್ಥಿತಿ. (ತಂದೆಯ ಬಗ್ಗೆ ಆಗಿನ್ನೂ ಮಾನವರಿಗೆ ಗೊತ್ತೇ ಇರಲಿಲ್ಲ ಬಿಡಿ. ಮಕ್ಕಳು ಹುಟ್ಟಲು ತಂದೆ ಬೇಕೆನ್ನುವುದೇ ಇನ್ನೂ ತಿಳಿದಿರಲಿಲ್ಲ. ಅದು ಮತ್ತೆ ಬೇರೆಯ ವಿಷಯ. ಆದರೆ ಈ ಸಂಗತಿಯೇ ಮಾತೃಮೂಲೀಯ ಗುಂಪುಗಳು ರೂಪುಗೊಳ್ಳಲು ಕಾರಣವಾಗಿದ್ದವು.)

ಇಂತಹ ಕಷ್ಟದಲ್ಲಿ 15 ವರ್ಷ ಮುಟ್ಟುವವರು ಕೇವಲ ಶೇ.40 ರಷ್ಟು ಜನರು. ಇವರನ್ನೂ ಕೂಡಾ ನಲವತ್ತು ವಯಸ್ಸಿನೊಳಗೇ ಸಾವು ಬೆನ್ನಟ್ಟುವ ಸ್ಥಿತಿ. ಇಂತಹ ಪರಿಸ್ಥಿತಿಯಲ್ಲಿ ಇಡೀ ಗುಂಪು ಶಿಶುಗಳನ್ನು, ಬಾಲಕರನ್ನು ಸಲಹಬೇಕು. ಬೇಟೆ, ಆಹಾರ ಸಂಗ್ರಹಣೆ, ಮಾಂಸಾಹಾರಿ ಪ್ರಾಣಿಗಳು,ಇತರ ವಿಪತ್ತುಗಳಿಂದ ಬಚಾವಾಗುವುದನ್ನು ಕಲಿಸಬೇಕು.

ಇಂತಹ ಪರಿಸ್ಥಿತಿಯನ್ನು   ಇಪ್ಪತ್ತು ಲಕ್ಷ ವರ್ಷಗಳ ದೀರ್ಘಕಾಲದಲ್ಲಿ ಸ್ವಲ್ಪ ಸ್ವಲ್ಪವೇ ಎದುರಿಸುವುದನ್ನು ಈ ಜೀವಿಗಳು ಕಲಿತರು. ಅದರ ಫಲವಾಗಿ ಎರೆಕ್ಟಸ್ ಮಾನವ ಜೀವಿಗಳ ಆಯುಧಗಳು ಉತ್ತಮಗೊಳ್ಳುತ್ತಾ ಹೊಸ ಹಂತ ತಲುಪಿತು. ಮೆದುಳು ಬೆಳೆದು ಆಧುನಿಕ ಮಾನವರ ಸಮೀಪಕ್ಕೆ ಬಂದಿತು.

ಬಿಲ್ಲಿನ, ಅಡಿಗೆಯ ಶೋಧ
ಈ ಹಂತದಲ್ಲಾದ ಮುಖ್ಯ ಬೆಳವಣಿಗೆಗಳು ಬೆಂಕಿ ಬಳಸಿ ಆಹಾರ ಬೇಯಿಸುವುದು ಮತ್ತು ಬಿಲ್ಲು ಬಾಣಗಳ ಶೋಧ,ಎಣ್ಣೆ ದೀಪಗಳು ಮತ್ತು ಸೂಜಿಗಳು ( ಬಟ್ಟೆ ಹೊಲೆಯುವುದಕ್ಕೆ ) ಎನ್ನುತ್ತಾರೆ ಹರಾರೆ ಸೇಪಿಯನ್ಸ್ ಕೃತಿಯಲ್ಲಿ.  ಶಿಲಾಯುಧಗಳ ಮತ್ತಷ್ಟು ಸೂಕ್ಷ್ಮತೆ ಮತ್ತು ಜಟಿಲತೆ ಮತ್ತಷ್ಟು ಬೆಳೆಯಿತು.‌ ಬ್ಲೇಡುಗಳಂತಹ ತೆಳುವಾದ ಆಯುಧಗಳ ತಯಾರಿಕೆಯ ವಿಧಾನವನ್ನು ಕಂಡುಹಿಡಿಯಲಾಯಿತು. ಕಿರು ಶಿಲಾಯುಧಗಳೆಂದೇ ಇವುಗಳನ್ನು ಗುರುತಿಸುತ್ತಾರೆ.  ಇವುಗಳ ಫಲವಾಗಿ ಕೈಗಳ, ಬೆರಳುಗಳ ಕಿರು ಮಾಂಸಖಂಡಗಳು ಮೆದುಳಿನ ನಿರ್ದೇಶನದಂತೆ ಕ್ರಿಯೆಗಳನ್ನು ಕೈಗೊಳ್ಳಲು ಅನುವಾಗುವಂತೆ ಮತ್ತಷ್ಟು ಉತ್ತಮಗೊಂಡದ್ದು.

ಬೆಂಕಿ ಮನುಷ್ಯರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತಂದಿತು. ಈ ಮೊದಲೇ ಬೆಂಕಿಯನ್ನು ರಕ್ಷಣೆಗೆ, ಕಾಡುಗಳನ್ನು ನಾಶ ಮಾಡಲು ಬಳಸುತ್ತಿದ್ದರೂ ಆಹಾರ ಬೇಯಿಸಿಕೊಳ್ಳವುದಕ್ಕೆ ಗೊತ್ತಿರಲಿಲ್ಲ. ಈಗ   ಬೇಯಿಸಿಕೊಳ್ಳಲಾರಂಭಿಸಿದ ನಂತರ ಮಾನವರ ಆಹಾರದ ವ್ಯಾಪ್ತಿ ಬಹುವಾಗಿ ವಿಸ್ತರಿಸಿತು. ಅನೇಕ ಬಗೆಯ ಕಾಳು, ಸೊಪ್ಪುಗಳು ಹಾಗೂ ಬೇರೆ ಬೇರೆ ಬಗೆಯ ಏಡಿ ಮೊದಲಾದ ಜಲಚರಗಳು,ಇತರ ಮಾಂಸಹಾರಗಳು ತಿನ್ನಲು ದೊರೆಯಿತು. ಆಹಾರ ಜೀರ್ಣೀಸಿಕೊಳ್ಳುವ ಕ್ರಿಯೆಗೆ ವಿನಿಯೋಗಿಸುತ್ತಿದ್ದ ದೇಹ ಶಕ್ತಿ ಮೆದುಳಿನ ಕ್ರಿಯೆಗಳಿಗೆ ದಕ್ಕಿತು.‌ ಬೇಯಿಸುವುದರ ಮತ್ತೊಂದು ಮುಖ್ಯ ಪ್ರಯೋಜನವೆಂದರೆ ರೋಗ ಕ್ರಿಮಿಗಳ ಹಾಗೂ ಜಂತು ಹುಳ ಮೊದಲಾದ ಪರೋಪಜೀವಿಗಳ ನಾಶ ಹಾಗೂ ಸಾವಿನಿಂದ ರಕ್ಷಣೆ.

ಬಿಲ್ಲಿನ ಶೋಧವಂತೂ ಮಾನವರ ಬುದ್ಧಿ ಶಕ್ತಿಯ ಬೆಳವಣಿಗೆಯನ್ನು ಮತ್ತೊಂದು ಎತ್ತರದ ಹಂತಕ್ಕೊಯ್ದಿತು. ಸೂಕ್ತ ಶಿಲೆಗಳನ್ನು ಹುಡುಕಿ ಕೆತ್ತಿ ಮಾಡುತ್ತಿದ್ದ ಕ್ರಿಯೆಗೆ ಹೋಲಿಸಿದರೆ ಬಿಲ್ಲು ವಿಜ್ಞಾನದ ಇತಿಹಾಸಕಾರ ಬರ್ನಾಲ್ ವಿವರಿಸುವಂತೆ ಒಂದು ಯಂತ್ರ. ಮಾನವರು ಕಂಡುಹಿಡಿದ ಮೊದಲ ಯಂತ್ರ.  ದೂರದಲ್ಲಿ ನಿಂತು ಬೇಟೆಯಾಡುವುದು ಅವನಿಗೆ ಆಹಾರದ ಕೊರತೆಯನ್ನು ಹೋಗಲಾಡಿಸುವುದಕ್ಕೆ ಸಹಾಯ ಮಾಡಿದ್ದು ಮಾತ್ರವಲ್ಲದೆ ಸಾವು,ಗಾಯಗಳನ್ನು ತಗ್ಗಿಸಿತು. ಅಷ್ಟೇ ‌ಅಲ್ಲದೆ ವಿವಿಧ ಮಾನವ ಬುಡಕಟ್ಟುಗಳ ನಡುವಣ ಕಾಳಗಗಳಲ್ಲಿ ಮುಖ್ಯ ಪಾತ್ರ ವಹಿಸಿತು.

ಈ ಹಂತದಲ್ಲಿ ಸಸ್ಯಾಹಾರಿಯಾಗಿದ್ದ ವಾನರರು ಹೆಚ್ಚಾಗಿ ಮಾಂಸಾಹಾರಿಗಳಾದರು. ಆಗಲೇ ಪ್ರಾಣಿಗಳು ಸಸ್ಯಾಹಾರವನ್ನು ಪಚನ‌ ಮಾಡಿಕೊಳ್ಳಲು ಬಳಸುತ್ತಿದ್ದ ಶಕ್ತಿಯನ್ನು ಬಹಳಷ್ಟು ಉಳಿಸಿತು. ಇದು ಜೀರ್ಣಾಂಗಗಳನ್ನೇ ಮಾರ್ಪಾಡು ಮಾಡುವ ಕ್ರಿಯೆ. ಬೇಯಿಸುವುದು ಮತ್ತು ಮಾಂಸಾಹಾರದ ಹೆಚ್ಚು ಲಭ್ಯತೆ ಒಟ್ಟಾರೆಯಾಗಿ ದೇಹದ ಶಕ್ತಿಯ ಸಂಚಯವನ್ನು ಹೆಚ್ಚು ಮೆದುಳಿನ ಬೆಳವಣಿಗೆಗೆ ಒದಗಿಸಿದವು. ಈ ಪ್ರಕ್ರಿಯೆಗಳನ್ನು 19 ನೆಯ ಶತಮಾನದ ಕೊನೆಯ ಭಾಗದಲ್ಲಿ ಮೂರ್ಗಾನ್‌ರವರು ಏನ್ಶಿಯಂಟ್ ಸೊಸೈಟಿ ಕೃತಿಯಲ್ಲಿ ಎಂಗೆಲ್ಸ್‌ರವರು ತಮ್ಮ ವಾನರನಿಂದ ಮಾನವರವರೆಗೆ ಪ್ರಬಂಧದಲ್ಲಿ ವಿವರಿಸಿದ್ದಾರೆ.

ಇತ್ತೀಚೆಗೆ ಹರಾರೆಯವರೂ ಪ್ರತಿಪಾದಿಸಿದ್ದಾರೆ. ಮೆದುಳಿನ ಅರ್ಧಕ್ಕಿಂತ ಹೆಚ್ಚು ಭಾಗ ಕೊಬ್ಬಿನಿಂದ ಕೂಡಿದ್ದು. ಅದರಲ್ಲೂ ಉದ್ದನೆಯ ಸರಪಳಿಯಿರುವ ಕೊಬ್ಬಿನ ಆಮ್ಲಗಳು. ಇವು ಸಸ್ಯಾಹಾರದಲ್ಲಿ ಲಭ್ಯವಿಲ್ಲ.‌  ಮಾಂಸಾಹಾರದ ಮತ್ತೊಂದು ಮುಖ್ಯ ಕೊಡುಗೆ ಎಂದರೆ ಈ ವಿಶೇಷ ಅಗತ್ಯವನ್ನು ಯಥೇಚ್ಛವಾಗಿ ಪೂರೈಸುವ ಮೂಲಕ ಮೆದುಳಿನ ಬೆಳವಣಿಗೆಯನ್ನು ವೇಗಗೊಳಿಸಿದ್ದು ಎಂದು ಇತ್ತೀಚಿನ ಮಾನವಶಾಸ್ತ್ರದ ಅಧ್ಯಯನಗಳು ವಿವರಿಸಿವೆ.

ಈ ಎಲ್ಲ ಬೆಳವಣಿಗೆಗಳು ಮಾನವರನ್ನು ಮತ್ತೊಂದು ಹಂತದ ನೆಗೆತಕ್ಕೆ ಅಣಿಮಾಡಿತು.

ಅಜ್ಜಿ, ಅಜ್ಜಂದಿರ ಉಗಮ, ಅರಿವಿನ ಸ್ಫೋಟ
ಮಾಂಸಾಹಾರದ ಲಭ್ಯತೆ, ಬೇಯಿಸಿದ ಆಹಾರದ ಮೂಲಕ ಆಹಾರದ ಕೊರತೆ ತಗ್ಗಿದ್ದು, ಸಾವುಗಳ ಪ್ರಮಾಣ,ರೋಗಗಳಿಗೆ ತುತ್ತಾಗುವುದು ಇವುಗಳು ಗಣನೀಯವಾಗಿ ಕಡಿಮೆಯಾಗಿದ್ದು ಮಾನವರ ಅರಿವಿನ ಬೆಳವಣಿಗೆಗೆ ಒಂದು ದೊಡ್ಡ ನೆಗೆತವನ್ನೇ ನೀಡಿತು. ಮಾನವರ ಸರಾಸರಿ  ಆಯಸ್ಸು 20-22 ವರ್ಷದಿಂದ  35-42 ವರ್ಷಕ್ಕೆ  ಏರಿ ಸರಿ ಸುಮಾರು ದುಪ್ಪಟ್ಟಾಯಿತು.   ಸರಾಸರಿ ವಯಸ್ಸು  ಇಪ್ಪತ್ತರ‌ ಆಸುಪಾಸು ಎಂದರೆ‌ ಎಲ್ಲೋ‌ ಕೆಲವರನ್ನು ಹೊರತುಪಡಿಸಿ  ಬಹಳ ಮಕ್ಕಳು ಅಜ್ಜಿಯರನ್ನು ನೋಡುವುದೇ ಅಸಾಧ್ಯವಾಗಿತ್ತು.  ತಾಯಂದಿರು ಕೂಡಾ ಮಕ್ಕಳನ್ನು ಎಳೆಯ ವಯಸ್ಸಿಗೆ ಅಗಲುವ ದುಸ್ಥಿತಿ. ಇದರಿಂದಾಗಿ ಮಕ್ಕಳನ್ನು ಮುಂದಿನ‌ ಬದುಕಿಗೆ ಸಿದ್ಧ ಮಾಡಲು ಹೆಚ್ಚು ಅವಕಾಶ ಸಿಗುತ್ತಿರಲಿಲ್ಲ. ಜೊತೆಗೆ ಸಿಕ್ಕಷ್ಟು ಸಮಯವೆಲ್ಲ ಆಹಾರವನ್ನು ದೊರಕಿಸಿಕೊಳ್ಳುವುದಕ್ಕೇ  ವ್ಯಯವಾಗುತ್ತಿತ್ತು.  ಸರಾಸರಿ ಆಯಸ್ಸು ದುಪ್ಪಟ್ಟಾದಾಗ ಮೊತ್ತ ಮೊದಲಿಗೆ ಮಕ್ಕಳು ಅಜ್ಜಿಯರನ್ನು, ಅಜ್ಜಿಯರ ತಮ್ಮಂದಿರಾದ ಅಜ್ಜಂದಿರನ್ನು ನೋಡಲು,ಅವರೊಂದಿಗೆ ಸಮಯ ಕಳೆಯಲು ಸಾಧ್ಯವಾಯಿತು. ಇದು ಹಿಂದಿನ‌ ತಲೆಮಾರುಗಳು ಪಡೆದುಕೊಂಡಿದ್ದ ಗಿಡ ಮರ,ಪ್ರಾಣಿ,ಭೂ ಪ್ರದೇಶಗಳು ಮೊದಲಾದ ತಿಳುವಳಿಕೆಯನ್ನು ಮುಂದಿನ‌ ತಲೆಮಾರುಗಳಿಗೆ ವರ್ಗಾಯಿಸುವ ಅವಕಾಶವನ್ನು ಒದಗಿಸಿತು.  ಈ ರೀತಿ ಹೆಚ್ಚಿದ ಆಯಸ್ಸು ಮಾನವರು ಋತುಮಾನಗಳ ಹತ್ತಾರು ವರ್ಷಗಳ ಬದಲಾವಣೆಯನ್ನು ಗುರುತಿಸಲು, ಅದರೊಂದಿಗೆ ತಳುಕಿ ಹಾಕಿಕೊಂಡ ಸಸ್ಯ,ಮರಗಳ ಬೆಳವಣಿಗೆ ,ಪ್ರಾಣಿಗಳ ಬೆಳವಣಿಗೆ ಇಂತಹವುಗಳನ್ನು ಸೂಕ್ಷ್ಮವಾಗಿ ಗಮನಿಸಲು ಸಾಧ್ಯವಾಯಿತು. ಈ ಎಲ್ಲದರ ಫಲವಾಗಿ ಆಹಾರ ದೊರಕೊಸಿಕೊಳ್ಳುವ  ಸಾಧ್ಯತೆಯನ್ನು ಹಲವು ಪಟ್ಟು ಹೆಚ್ಚಿಸಿತು.

ಆಹಾರದ ವೈವಿಧ್ಯತೆಯೂ ನೂರಾರು ಸಸ್ಯ, ಪ್ರಾಣಿಗಳಿಗೆ ವ್ಯಾಪಿಸಲು ಕಾರಣವಾಯಿತು.‌ ಇವೆಲ್ಲವುಗಳಿಂದ ಜನಸಂಖ್ಯೆಯೂ ಗಣನೀಯವಾಗಿ ಹೆಚ್ಚಿತು. ಆನೆ, ಕಾಡೆಮ್ಮೆ ಕಾಡು‌ ದನಗಳು ಮೊದಲಾದ‌ ದೊಡ್ಡ ಪ್ರಾಣಿಗಳನ್ನು ಬೇಟೆಯಾಡಲು ಹೆಚ್ಚು ಜನರುಳ್ಳ ಗುಂಪುಗಳು ಬೇಕಾಗಿದ್ದವು. ಆಗ ಸಣ್ಣ ಗುಂಪುಗಳು  ದೊಡ್ಡ ಗುಂಪುಗಳಾದವು.‌ ಈ ಗುಂಪುಗಳಲ್ಲಿ ಅಜ್ಜಿಯರು, ಅಜ್ಜಂದಿರು, ಇದ್ದಿರಬಹುದಾದ ಕೆಲವೇ ಮುತ್ತಜ್ಜಿಯರು ಮೊಮ್ಮಕ್ಕಳು, ಮರಿ‌ ಮಕ್ಕಳನ್ನು ಬೆಳೆಸುತ್ತಾ  ಅವರಿಗೆ ಹಿಂದಿನ‌‌ ತಲೆಮಾರುಗಳ ಜ್ಞಾನವನ್ನು ಧಾರೆಯೆರೆದರು. ಕೌಶಲ್ಯಗಳನ್ನು ಬೆಳೆಸಿದರು. ಕಾಯಿಲೆ,ಗಾಯಗಳಿಗೆ ಔಷಧಿಗಳನ್ನು ಶೋಧಿಸಿದರು. ಹೀಗೆ ಹೊಸ ತಂತ್ರಜ್ಞಾನ, ವಾಯುಗುಣ, ಭೂ ಮೇಲ್ಮೈ ವೈವಿಧ್ಯತೆ, ಸಸ್ಯ,ಪ್ರಾಣಿಗಳ ಜೀವನ ಮುಂತಾದ ಪ್ರಕೃತಿಯ ಬಗ್ಗೆ  ಮಾನವರ ಅರಿವಿನ ಸ್ಫೋಟವುಂಟಾಯಿತು. ಇವುಗಳು ಶಿಶುಗಳನ್ನು, ಇತರ ಮಾನವರನ್ನು  ಪ್ರಾಣಾಪಾಯದಿಂದ ಉಳಿಸಲು ನೆರವಾಯಿತು. ಹೀಗೆ ತಮ್ಮನ್ನು ಬೆಳೆಸುವ, ಕಾಪಾಡುವ ಅಜ್ಜಿಯರ ಮೇಲೆ ಆಯಾ ಗುಂಪಿನ ಮಾನವರಿಗೆ ಅಪಾರ ಗೌರವ ಬೆಳೆಯಿತು. ಅಮ್ಮಂದಿರನ್ನು (ಮಾತೃ ದೇವತೆಗಳು) ಪೂಜಿಸುವ ಪದ್ಧತಿಗೆ ಇದು ನಾಂದಿ ಹಾಡಿತು. ಹೆಚ್ಚಿದ ಜ್ಞಾನವನ್ನು ಮುಂದಿನ‌ ತಲೆಮಾರುಗಳಿಗೆ ವರ್ಗಾಯಿಸಲು ಹಾಗೂ ದೊಡ್ಡ ಗುಂಪುಗಳಾಗಿ ಬೇಟೆಯಾಡುವಾಗ ಪರಿಣಾಮಕಾರಿ ಸಹಕಾರಕ್ಕಾಗಿ ಸಂವಹನ ಸಾಧನವಾಗಿ ಭಾಷೆ ಬೆಳೆಯಿತು.  ಆದರೆ ಭಾಷೆ ಕೇವಲ ಸಂವಹನ ಮಾಧ್ಯಮ ಮಾತ್ರವಾಗದೆ ಜ್ಞಾನ ಸಂಗ್ರಹಣೆ, ಚಿಂತನೆ ,ವಿಶ್ಲೇಷಣೆಯ ಮಾಧ್ಯಮವೂ ಆಗಿ ಮನುಷ್ಯರ ಅರಿವಿನ ಬಹು ದೊಡ್ಡ ಸಾಧನವಾಯಿತು. ಈ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ ಪ್ರತ್ಯೇಕವಾಗಿ ವಿವರಿಸುತ್ತೇನೆ.

ಈ ಕಾಲಘಟ್ಟದಲ್ಲಿಯೇ ಮಾನವರು ತಮ್ಮ ಬದುಕನ್ನು ಬಂಡೆಗಳ ಮೇಲೆ ಚಿತ್ರಿಸುವುದು. ಬೇಟೆಯನ್ನು ಪಡೆಯುವ ಸಾಧನವಾಗಿ ವಿವಿಧ ಆಚರಣೆಗಳನ್ನು ಆಚರಿಸುವ ಕ್ರಿಯೆಯಲ್ಲಿ ಬಳಸಿಕೊಳ್ಳುವುದು ಮೊದಲಾದ ಪ್ರವೃತ್ತಿಗಳು ಕಾಣಲಾರಂಭಿಸಿದವು.  ಬಂಡೆಗಳ ಮೇಲಿನ ಚಿತ್ರಗಳು ಬಿಂಬಿಸುವಂತೆ ನೃತ್ಯ, ಹಾಡುಗಳ ಅಭ್ಯಾಸವೂ ಅವರಿಗಿತ್ತೆಂಬುದು ತಿಳಿಯಬರುತ್ತದೆ.  ಹೆಚ್ಚಿದ ಜನಸಂಖ್ಯೆ , ಹಿಂದಿಗಿಂತ ಸ್ವಲ್ಪ ದೊಡ್ಡ ಗುಂಪುಗಳ ರಚನೆಯ  ಹಾಗೂ ಹಲವು ಗುಂಪುಗಳ ರಚನೆಯ ಅನಿವಾರ್ಯತೆಯನ್ನು ಉಂಟುಮಾಡಿತು.  ಮನುಷ್ಯರ ಗುಂಪುಗಳ‌ ನಡುವರ ಸಂಪರ್ಕ, ಸಂವಹನಗಳನ್ನು ಹೆಚ್ಚಿಸಿತು. ಇದು ವಿವಿಧ  ಗುಂಪುಗಳನ್ನು ಗುರುತಿಸುವ ಅವಶ್ಯಕತೆಯನ್ನು ಉಂಟು‌ಮಾಡಿತು.     ಮನುಷ್ಯರ ಗುಂಪುಗಳನ್ನು ಅವರಿಗೆ ಜನ್ಮವಿತ್ತ ಮೂಲ ಅಮ್ಮಂದಿರ ಹೆಸರಿನಲ್ಲಿಯೇ ಗುರುತಿಸಲಾಯಿತು. ಇದಕ್ಕೆ ಆ ಕಾಲಘಟ್ಟದ ಸುಮೇರಿಯನ್, ಮೆಸಪಟೋಮಿಯನ್ ಮೊದಲಾದ ಸಂಸ್ಕೃತಿಗಳಲ್ಲಿನ‌ ಮಾತೃ ಪೂಜೆಯ  ಉದಾಹರಣೆಗಳೊಂದಿಗೆ ನಮ್ಮ ನಾಡಿನಲ್ಲಿ  ಗ್ರಾಮೀಣ ಜನತೆ ಇಂತಹ ಅಮ್ಮನ ಒಕ್ಕಲು  ಎಂದು ಹೇಳಿಕೊಳ್ಳುವುದನ್ನು  ಉದಾಹರಣೆಗಾಗಿ ನೋಡಬಹುದು.

ಇದೇ‌ ಸಮಯದಲ್ಲಿ ಮಾನವರು ವಿವಿಧ  ಕವಡೆ,‌ ಶಂಖು,‌ ಮಣಿಗಳು , ಹಕ್ಕಿಗಳ ಗರಿಗಳು ಮೊದಲಾದವನ್ನು ಅಲಂಕರಣಗಳಾಗಿ ಬಳಸಲಾರಂಭವಾಗಿರುವುದನ್ನು ಗುರುತಿಸಲಾಗಿದೆ. ಇವು ಕೇವಲ ಅಲಂಕರಣಗಳು ಮಾತ್ರ ಆಗದೆ , ಅವುಗಳಲ್ಲಿ ಕೆಲವು ನಿರ್ದಿಷ್ಯ ಮಣಿ ಯಾ ಕವಡೆ ಯಾ ಹಕ್ಕಿಯ ರೆಕ್ಕೆ ಮೊದಲಾದ ಅಲಂಕರಣಗಳು ಮಾನವರ ಗುಂಪುಗಳನ್ನು ಪರಸ್ಪರ ಗುರುತುಹಿಡಿಯಲು  ಉಪಯೋಗವಾಗುತ್ತಿರಬಹುದೆಂದು ಭಾವಿಸಲಾಗಿದೆ.

ಈ ಕಾಲಘಟ್ಟದಲ್ಲಿ ಮನುಷ್ಯರನ್ನು  ಸಮಾಧಿ ಮಾಡುವ, ಈ ಸಮಾಧಿಗಳಲ್ಲಿ ಸಂಬಂಧಪಟ್ಟ ಮನುಷ್ಯರು ಬಳಸುತ್ತಿದ್ದ ಉಪಕರಣಗಳು, ಅವರ ಆಹಾರ, ಅವರು ಉಪಯೋಗಿಸುತ್ತಿದ್ದ ಕುದುರೆಗಳ ಸಹಿತ ( ಕುದುರೆಗಳನ್ನು ಸಾಕು ಪ್ರಾಣಿಗಳನ್ನಾಗಿ ಪಳಗಿಸಿದ್ದ ಮೂಲ ಪ್ರದೇಶಗಳಲ್ಲಿ ) ಸಮಾಧಿ ಮಾಡುತ್ತಿದ್ದುದು ಕಂಡು ಬಂದಿದೆ. ಇದು ಆಗಿನ ಮನುಷ್ಯರಲ್ಲಿ ಸಾವಿನಾಚೆಯ ಬದುಕಿನ ಬಗ್ಗೆ ನಂಬಿಕೆಗಳು, ಅದಕ್ಕೆ ಸಂಬಂಧಿಸಿದ ಆಚರಣೆಗಳು ಆರಂಭವಾಗಿದ್ದುದರ ಕುರುಹಾಗಿದೆ. ಕರ್ನಾಟಕದಲ್ಲಿಯೂ ಬೃಹತ್ ಶಿಲಾಯುಗದ  ಸಮಾಧಿಗಳಲ್ಲಿ ಇಂತಹ ಉಪಕರಣಗಳು ಮತ್ತಿತರ ವಸ್ತುಗಳು ಉತ್ಖನನಗಳಲ್ಲಿ‌ ದೊರಕಿವೆ.

ಹೀಗೆ ಧಾರ್ಮಿಕ ಎನ್ನುವಂತಹ ನಂಬಿಕೆ, ಆಚರಣೆಗಳ ಮೊದಲ ಕುರುಹುಗಳ  ಜೊತೆಗೆ ಕಂಡುಬಂದಿರುವ ಮತ್ತೊಂದು ವಿಶೇಷವೆಂದರೆ ಹೆಣ್ಣಿನ  ಸಾವಿರಾರು ಕಿರು ಮೂರ್ತಿಗಳು. ಮಾನವರು ಅಂದು ಜೀವಿಸುತ್ತಿದ್ದ  ವಿಶ್ವದ ಹಲವು ಪ್ರದೇಶಗಳಲ್ಲಿ ಈ ಮೂರ್ತಿಗಳು ಕಂಡುಬಂದಿವೆ. ನಮ್ಮ ಸಿಂಧೂ ಬಯಲಿನ ನಾಗರೀಕತೆಯಲ್ಲಿಯೂ ಹೆಣ್ಣಿನ ಕಿರು ಮೂರ್ತಿಗಳು ಸಿಕ್ಕಿವೆ.

ಆಹಾರವನ್ನು ಒದಗಿಸಿಕೊಳ್ಳುವ ಅನಿವಾರ್ಯತೆಯಾದ ಮಾನವರ ಗುಂಪುಗಳನ್ನು ಬೆಳೆಸಲು, ಅವುಗಳನ್ನು ಒಗ್ಗಟ್ಟಾಗಿ ಉಳಿಸಲು ಆಯಾ ಗುಂಪಿಗೆ ನಿರ್ದಿಷ್ಟವಾದ ನಂಬಿಕೆ,ಆಚರಣೆಗಳನ್ನು ರೂಪಿಸಿಕೊಳ್ಳಲಾಗಿದೆ. ಹಾಗೆಯೇ ವಿವಿಧ ಗುಂಪುಗಳನ್ನು ಬೇರ್ಪಡಿಸಲು, ಗುರುತಿಸಲು ಕೂಡಾ ವಿವಿಧ ಗುಂಪುಗಳಿಗೆ ನಿರ್ದಿಷ್ಟವಾದ ನಂಬಿಕೆಗಳು, ಆಚರಣೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹರಾರೆ ಗುರುತಿಸುತ್ತಾರೆ.
ಹೀಗೆ ಪ್ರಕೃತಿಯ ಅರಿವಿನ ಸ್ಫೋಟದ ಜೊತೆಗೆ ಮಾನವರ ಸಾಮಾಜಿಕ ಬದುಕಿನ ಮೊದಲ ರಚನೆ ಮತ್ತದರ ಅರಿವಿನ ಸ್ಫೋಟವನ್ನೂ ಈ ಕಾಲಘಟ್ಟದಲ್ಲಿ ಕಾಣಬಹುದು.

‍ಲೇಖಕರು Admin

April 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: