ಜಿ ಎಚ್ ನಾಯಕ ನೆನಪು : ಜಿ ಪಿ ಬಸವರಾಜು ವಿಶೇಷ ಸಂದರ್ಶನ..

 

ಜಿ ಪಿ ಬಸವರಾಜು

ಪಂಪ ಪ್ರಶಸ್ತಿಯನ್ನು ಪಡೆದ ಪ್ರೊ. ಜಿ.ಎಚ್.ನಾಯಕ ಪ್ರಾಮಾಣಿಕತೆಗೆ, ದಿಟ್ಟ ನಿಲುವಿಗೆ, ಖಚಿತ ಅಭಿಪ್ರಾಯಕ್ಕೆ ಹೆಸರಾದವರು. ಅವರ ನಿಲುವನ್ನು ಒಪ್ಪದವರೂ ಅವರನ್ನು ಗೌರವಿಸುತ್ತಾರೆ. ಅಧ್ಯಾಪಕರಾಗಿ, ಸಂಸ್ಕೃತಿಯ ನಿಜವಾದ ಚಿಂತಕರಾಗಿ, ವಿಮರ್ಶಕರಾಗಿ, ಅನೇಕ ಸಾಮಾಜಿಕ ಹೋರಾಟಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಅರ್ಥಪೂರ್ಣವಾಗಿ ಬದುಕುತ್ತಿರುವವರು ಜಿ.ಎಚ್.ನಾಯಕ.  ಪಂಪ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ:

ವಿಮರ್ಶಕ ಪ್ರೊ.ಜಿ.ಎಚ್.ನಾಯಕ ವಿಶ್ಲೇಷಣೆ

ಪ್ರಾಚೀನ ಸಾಹಿತ್ಯದಲ್ಲಿ ಪಂಪನಂಥ ಸ್ವೋಪಜ್ಞ ಕವಿ ಇನ್ನೊಬ್ಬನಿಲ್ಲ

 

ಪ್ರಶ್ನೆ: ಕನ್ನಡದ ನವ್ಯ ವಿಮರ್ಶಕರನೇಕರಿಗೆ ಪಾಶ್ಚಾತ್ಯ ಸಾಹಿತ್ಯದ ವಿವಿಧ ಮಗ್ಗುಲುಗಳು ಗೊತ್ತು. ಅಲ್ಲಿನ ಬೆಳವಣಿಗೆಗಳು ಗೊತ್ತು. ಆದರೆ ಬಹುಪಾಲು ವಿಮರ್ಶಕರಿಗೆ ಕನ್ನಡ ಸಾಹಿತ್ಯ ಪರಂಪರೆಯ, ವಿಶೇಷವಾಗಿ ಪ್ರಾಚೀನ ಸಾಹಿತ್ಯ ಪರಂಪರೆಯ ಪರಿಚಯ ಅಷ್ಟಾಗಿ ಇಲ್ಲ. ನಿಮ್ಮನ್ನು ನವ್ಯ ವಿಮರ್ಶಕರ ಸಾಲಿನಲ್ಲಿ ಗುರುತಿಸಲಾಗುತ್ತಿದೆ. ಆದರೂ ನೀವು ಪಂಪ ಮತ್ತು ಪ್ರಾಚೀನ ಸಾಹಿತ್ಯದೊಂದಿಗೆ ಕಟ್ಟಿಕೊಂಡು ಬಂದಿರುವ ಸಂಬಂಧವೂ ಗಾಢವಾದದ್ದು. ಅದು ಹೇಗೆ ಸಾಧ್ಯವಾಯಿತು.

ನಾಯಕ: ಹೌದು, ನನ್ನನ್ನು ನವ್ಯ ವಿಮರ್ಶಕರ ಸಾಲಿನಲ್ಲಿ ಸಾಮಾನ್ಯವಾಗಿ ಗುರುತಿಸುತ್ತಾರೆ. ನೀವು ಹೇಳಿದಂತೆ ನವ್ಯ ವಿಮರ್ಶಕರು ಪ್ರಾಚೀನ ಕನ್ನಡ ಸಾಹಿತ್ಯದ ಅಧ್ಯಯನಕ್ಕೆ ಸಂಬಂಧಿಸಿದಂತೆ ಹೆಚ್ಚು ಕೆಲಸ ಮಾಡಿದಂತಿಲ್ಲ; ಆ ಓದಿನ ಬಲವೂ ಹೆಚ್ಚಾಗಿದ್ದಂತಿಲ್ಲ. ಇದೇನೂ ‘ನವ್ಯ’ ಎಂದು ಗುರುತಿಸಲ್ಪಡುವ ಅಥವಾ ಹಾಗೆ ಹೇಳಿಕೊಳ್ಳುವುದಕ್ಕೆ ಮುಜುಗರ ಪಟ್ಟುಕೊಳ್ಳದ ವಿಮರ್ಶಕರ ಬಗ್ಗೆ ಹೇಳುವ ಮಾತಾಯಿತೆನ್ನೋಣ. ಇಂಥ ಮಾತನ್ನು ಯು.ಆರ್. ಅನಂತಮೂರ್ತಿ, ಪಿ.ಲಂಕೇಶ್, ಎಂ.ಜಿ.ಕೆ., ಸಿ.ಎನ್.ರಾಮಚಂದ್ರನ್ ಅಂಥವರ ಬಗ್ಗೆ ಕೂಡಾ ಹೇಳಬಹುದೆನ್ನೋಣ. ಆದರೆ ‘ನವ್ಯ’ ವಿಮರ್ಶಕರೆಂದು ಹೇಳಿಕೊಳ್ಳುವುದಕ್ಕೊ, ಹೇಳಿಸಿಕೊಳ್ಳುವುದಕ್ಕೊ ಮುಜುಗರ ಪಡುವ ಅಥವಾ ನಾಚಿಕೊಳ್ಳುವ ಕೆ.ವಿ.ನಾರಾಯಣ, ಎಚ್.ಎಸ್.ರಾಘವೇಂದ್ರರಾವ್, ಬಸವರಾಜ ಕಲ್ಗುಡಿ, ನರಹಳ್ಳಿ ಬಾಲಸುಬ್ರಹ್ಮಣ್ಯ, ಡಿ.ಆರ್.ನಾಗರಾಜ ಇಂಥವರೆಲ್ಲ ಕನ್ನಡ ಸಾಹಿತ್ಯದ- ಪ್ರಾಚೀನ ಕನ್ನಡ ಸಾಹಿತ್ಯವೂ ಸೇರಿದಂತೆ-ವಿದ್ಯಾರ್ಥಿಗಳಾಗಿಯೆ ಓದಿಬಂದವರಾಗಿದ್ದಾರಲ್ಲ. ಅಂಥವರ ಬಗ್ಗೆ ನೀವಾಗಲಿ ನಾನಾಗಲಿ ಇಂಥ ಹೇಳಿಕೆ ಮಾಡಬಹುದೇ?

ನಾನು ವಿಮರ್ಶಕನಾಗಿ ಇಡೀ ಕನ್ನಡ ಸಾಹಿತ್ಯ ಪರಂಪರೆಯ ಜೊತೆಯಲ್ಲಿ ನನ್ನ ಸಂಬಂಧವನ್ನು ಇಟ್ಟುಕೊಂಡೇ ಬಂದವನು. ಇದಕ್ಕೆ ನಾನು ಕನ್ನಡ ಸಾಹಿತ್ಯದ ಗಂಭೀರ ವಿದ್ಯಾರ್ಥಿಯಾಗಿರುವುದು, ಕನ್ನಡ ಅಧ್ಯಾಪಕನಾಗಿ ಪಾಠ ಹೇಳಿರುವುದು ಕಾರಣವಿರಬಹುದು. ಪ್ರಾಚೀನ ಕನ್ನಡ ಸಾಹಿತ್ಯ ಪರಂಪರೆಯ ಶ್ರೇಷ್ಠಾತಿಶ್ರ್ರೇಷ್ಠ ವಿದ್ವಾಂಸ ಡಿ.ಎಲ್.ನರಸಿಂಹಾಚಾರ್ ಅಂಥವರು ದೀರ್ಘಕಾಲ-ನಾಲ್ಕುವರ್ಷಗಳ ಕಾಲ- ಕಾಲೇಜಿನಲ್ಲಿ ನನಗೆ ಪ್ರಾಚೀನ ಕನ್ನಡ ಸಾಹಿತ್ಯದ ಪಾಠಹೇಳಿದ ಗುರುಗಳಾಗಿದ್ದದ್ದೂ ಕಾರಣವಾಗಿರಬಹುದು. ನಾನು ಈಗ ಹೆಸರಿಸಿದ ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಿಂದ ಬಂದಿರುವ ವಿಮರ್ಶಕರಿಗೆ ಪ್ರಾಚೀನ ಕನ್ನಡ ಸಾಹಿತ್ಯದ ಪಾಠಹೇಳಿದ ಗುರುಗಳಾದ ಜಿ.ಎಸ್.ಶಿವರುದ್ರಪ್ಪ, ಚಿದಾನಂದಮೂರ್ತಿ ಅವರು, ಡಿಎಲ್ಎನ್ ಅಂಥವರ ಜೊತೆ ಹೋಲಿಸಬಹುದಾದವರೆಂದು ನಾನು ಹೇಳಲಾರೆ. ಅದು ಕಾರಣವಾಗಿರಬಹುದೇ? ಜೊತೆಗೆ ನನ್ನ ಆಸಕ್ತಿ ಅಭಿರುಚಿಗಳನ್ನು ಜೀವಂತವಾಗಿ ಉಳಿಸಿಕೊಂಡು ಬಂದದ್ದೂ ಕಾರಣವಾಗಿರಬಹುದು. ಹೀಗಾಗಿ ಪ್ರಾಚೀನ ಕನ್ನಡ ಸಾಹಿತ್ಯ ಪರಂಪರೆಯ ಜೊತೆ ನಿರಂತರವಾಗಿ ಸಂಬಂಧವನ್ನು ಏರ್ಪಡಿಸಿಕೊಂಡೇ ಬಂದಿದ್ದೇನೆ.
ಪ್ರಾಚೀನ ಸಾಹಿತ್ಯದಲ್ಲಿ ಪಂಪನ ಕಾವ್ಯಗಳ ಬಗ್ಗೆ ನನಗಿರುವ ಮೆಚ್ಚುಗೆ, ಪ್ರಶಂಸೆ ಬೇರೆ ಯಾರ ಕಾವ್ಯಗಳ ಬಗೆಗೂ ಇಲ್ಲ. ಕನ್ನಡದ ಶ್ರೇಷ್ಠ ಕವಿ ಪಂಪನೇ ಎಂಬುದು ನನ್ನ ದೃಢವಾದ ಅಭಿಪ್ರಾಯ. ನಾನು ಪಂಪನನ್ನು ಕುರಿತು ಈವರೆಗೆ ಮೂರು ಲೇಖನಗಳನ್ನು ಬರೆದಿದ್ದೇನೆ. ಕನ್ನಡ ಸಾಹಿತ್ಯ ವಿಮರ್ಶೆಯ ಚರಿತ್ರೆಯಲ್ಲಿ ಪಂಪನ ಕಾವ್ಯಗಳ ಬಗ್ಗೆ, ಪ್ರಾಚೀನ ಸಾಹಿತ್ಯ ಕೃತಿಗಳ ಬಗ್ಗೆ ನಮ್ಮ ವಿಮರ್ಶಕರು ತಳೆದ ಎಷ್ಟೋ ನಿಲುವುಗಳನ್ನು, ಆ ಪರಂಪರೆಯ ವಿಮರ್ಶೆಯ ಜೊತೆಗಿದ್ದೂ, ಪ್ರಶ್ನಿಸಿದ್ದೇನೆ. ನನ್ನ ಲೇಖನಗಳ ಮೂಲಕ ಈ ವಿಮರ್ಶಾ ಪರಂಪರೆಗೆ ಭಿನ್ನ ಆಯಾಮಗಳನ್ನು, ಅರ್ಥವಂತಿಕೆಯನ್ನು ಕೊಡಲು ಪ್ರಯತ್ನಿಸಿದ್ದೇನೆ ಎಂಬ ನಂಬಿಕೆ ನನಗಿದೆ. ಪಂಪನನ್ನು ಕುರಿತ ನನ್ನ ಲೇಖನಗಳೆಲ್ಲ ಒಟ್ಟಿಗೇ ಇರುವ ‘ಮತ್ತೆ ಮತ್ತೆ ಪಂಪ’ ಎಂಬ ಪುಸ್ತಕವೂ ಪ್ರಕಟವಾಗಿದೆ.
ಪ್ರಶ್ನೆ: ಅಂದರೆ ಕನ್ನಡ ವಿಮರ್ಶೆಯ ಪರಂಪರೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗಿದ್ದೀರಿ?
ನಾಯಕ: ಮುಂದೆ ಎಂದು ಹೇಳಿಕೊಳ್ಳುವುದು ಆತ್ಮಪ್ರತ್ಯಯದ ‘ಅಹಂ’ನ ಮಾತಾಗಿ ತೋರಬಹುದೇನೋ! ಆದರೆ ಎಷ್ಟೋ ನಿಲುವು, ತೀರ್ಮಾನಗಳನ್ನು ಮರುಚಿಂತನೆಗೆ ಒಡ್ಡುವಂತೆ ಮಾಡಿದ್ದೇನೆ ಎಂದು ಮಾತ್ರ ಯಾವ ಸಂಕೋಚವೂ ಇಲ್ಲದೆ ಹೇಳಬಲ್ಲೆ. ನನ್ನ ಹಿಂದಿನ, ನವೋದಯ ತಲೆಮಾರಿನ ಶ್ರೇಷ್ಠ ವಿಮರ್ಶಕರು, ವಿದ್ವಾಂಸರು ತಳೆದ ನಿಲುವನ್ನು ಹಾಗೇ ಒಪ್ಪಿಕೊಳ್ಳದೆ ಪ್ರಶ್ನಿಸಿದ್ದೇನೆ. ರನ್ನನ ‘ಗದಾಯುದ್ಧ’, ರಾಘವಾಂಕನ ‘ಹರಿಶ್ಚಂದ್ರ ಚಾರಿತ್ರ’ ಕುರಿತ ನನ್ನ ವಿಮರ್ಶೆಗಳಲ್ಲಿ ಕೂಡ ಅದನ್ನು ಕಾಣಬಹುದು. ನನಗೆ ಅಭಿಪ್ರಾಯ ಭೇದವಿದೆ ಎಂಬುದನ್ನು ನಾನು ಆಯ್ಕೆಮಾಡಿಕೊಂಡ ಕೃತಿಗಳ ಸಂದರ್ಭದಲ್ಲಿ ಹೇಳಿದ್ದೇನೆ. ಹಾಗೆ ಹೇಳಿಕೊಂಡು ಬರುವಾಗ ನನಗೆ ಒಂದು ರೀತಿಯ ಸಂತೋಷವೂ ಆಗಿದೆ. ತೀನಂಶ್ರೀ, ಡಿಎಲ್ಎನ್, ಶಿವರುದ್ರಪ್ಪ ಇವರೆಲ್ಲ ನನ್ನ ಗುರುಗಳು; ಪ್ರಾಚೀನ ಸಾಹಿತ್ಯ ಪರಂಪರೆಯಲ್ಲಿ ದೊಡ್ಡ ವಿದ್ವಾಂಸರು ಮತ್ತು ವಿಮರ್ಶಕರು.
ಅವರ ನಿಲುವಿನ ಜೊತೆ ನಾನು ಸೆಣಸುವ ಸಂದರ್ಭ ಬಂದಾಗ, ಒಂದು ರೀತಿಯ ವಿನಯ ಮತ್ತು ಮುಜುಗರ ಇದ್ದಾಗಲೂ, ವಿಮರ್ಶಕನಾಗಿ ನನ್ನ ತಿಳಿವನ್ನು, ಅಭಿಪ್ರಾಯವನ್ನು, ಅನುಭವವನ್ನು ನಿರ್ಧಾಕ್ಷಿಣ್ಯವಾಗಿ ದಾಖಲಿಸಿದ್ದೇನೆ. ಇವೆಲ್ಲ ನನ್ನ ಲೇಖನಗಳಲ್ಲಿವೆ. ನವೋದಯ ತಲೆಮಾರಿನ ನಂತರ ಬಂದ, ದೊಡ್ಡ ಸಂಶೋಧಕರೆಂದು ಖ್ಯಾತರಾದ ಟಿ.ವಿ. ವೆಂಕಟಾಚಲಶಾಸ್ತ್ರೀ, ಎಂ.ಚಿದಾನಂದಮೂರ್ತಿ, ಎಂ.ಎಂ.ಕಲ್ಬುರ್ಗಿ ವಿದ್ವಾಂಸರಾಗಿ, ಸಂಶೋಧಕರಾಗಿ ನಾನು ಬಹಳ ಗೌರವದಿಂದ ಕಾಣುವಂಥ ವಿದ್ವಾಂಸರು. ಪ್ರಾಚೀನ ಸಾಹಿತ್ಯ ಪರಂಪರೆಯ ವಿಮರ್ಶೆ, ವ್ಯಾಖ್ಯಾನಗಳನ್ನು ಕುರಿತಂತೆ ನಾನು ವ್ಯಕ್ತಪಡಿಸಿದ ಭಿನ್ನಮತದ ಬಗ್ಗೆ ಈ ವಿದ್ವಾಂಸರು ಯಾರೂ ಮಾತನಾಡದಿರುವುದು, ಪ್ರತಿಕ್ರಿಯೆ ತೋರಿಸದೇ ಇರುವುದು ಒಂದು ಕೊರತೆಯಾಗಿಯೇ ನನಗೆ ಕಾಣಿಸುತ್ತದೆ. ನನ್ನ ವಿಮರ್ಶೆಯ ಕೊರತೆಯೂ ಇರಬಹುದು. ಹಾಗೆಂದು ಅವರು ಹೇಳಬಹುದಾಗಿತ್ತು. ಆದರೆ ಯಾವುದೇ ಪ್ರತಿಕ್ರಿಯೆಯನ್ನೂ ತೋರಿಸದೇ ಇದ್ದದ್ದು ಸರಿಯಲ್ಲ.
ಪ್ರತಿಕ್ರಿಯೆ ತೋರಿಸಬೇಕಾದದ್ದು ಅವರ ಹೊಣೆಗಾರಿಕೆಯಾಗಿದೆ. ಮೇಲೆ ಸೂಚಿಸಿರುವ ಕವಿಗಳ ಬಗ್ಗೆ ಅಧ್ಯಯನ ಮಾಡುವವರು ನನ್ನ ನಿಲುವು, ವ್ಯಾಖ್ಯಾನಗಳನ್ನು ಒಪ್ಪುವುದು ಬಿಡುವುದು ಬೇರೆ. ಆದರೆ ಅವುಗಳನ್ನು ಎದುರಿಸದೇ ಹೋಗುವುದು ಸಾಧ್ಯವಿಲ್ಲ; ಸಾಧುವೂ ಅಲ್ಲ. ಎದುರಿಸದೆ ದಾಟಿ ಹೋಗುವುದು ತಲೆತಪ್ಪಿಸಿಕೊಳ್ಳುವ ಉಪಾಯ ಎಂದು ನನಗೆ ಅನಿಸಿದೆ. ಪ್ರಾಚೀನ ಕನ್ನಡ ಸಾಹಿತ್ಯದ ವಿಮಶರ್ೆಯ ಪರಂಪರೆ ಮುಂದುವರಿಯಬೇಕು; ಮುಂದುವರಿಯುವ ಅಗತ್ಯವಿದೆ ಎಂದು ತಿಳಿಯುವವರು ಹೀಗೆ ‘ವಿನೋಬ ಮೌನ’ ವಹಿಸುವುದು ತರವಲ್ಲ. ಬೆಂಗಳೂರು ವಿಶ್ವವಿದ್ಯಾನಿಲಯದ, ನಾನು ಮೇಲೆ ಪ್ರಸ್ತಾಪಿಸಿದ ವಿಮರ್ಶಕರ ಮೌನ ಕೂಡಾ ಇದೇ ಅಲ್ಲವೇ?
ಪ್ರಶ್ನೆ: ನವ್ಯೋತ್ತರ ಸಾಹಿತ್ಯ ಕೃತಿಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ, ನೀವು ಬರೆದಿರುವುದೂ ಹೆಚ್ಚಿಲ್ಲ, ಅಲ್ಲವೇ?
ನಾಯಕ: ಸಾಹಿತ್ಯ ಕೃತಿಗಳಿಗೆ ಸಂಬಂಧಿಸಿದಂತೆ ಅದು ನಿಜವಿರಬಹುದು. ಆದರೂ ನವ್ಯೋತ್ತರದಲ್ಲಿ ಪ್ರಕಟಗೊಂಡ ಮುಖ್ಯ ಕೃತಿಗಳನ್ನು ನಾನು ಕಡೆಗಣಿಸಿದಂತೆ ಕಾಣುವುದಿಲ್ಲ. ಆಗಾಗ, ಅಲ್ಲಲ್ಲಿ ಬರೆದಿರುವುದುಂಟು. ಜೊತೆಗೆ ಸಾಹಿತ್ಯಕ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಸ್ಥಿತ್ಯಂತರಗಳನ್ನು, ಬಿಕ್ಕಟ್ಟುಗಳನ್ನು ಕುರಿತು ನಾನು ನಡೆಸಿದ ಚಿಂತನೆಗಳು, ಬರೆದ ಬರಹಗಳು ಮುಖ್ಯವಾದ ಸಾಂಸ್ಕೃತಿಕ ಸಂವಾದಕ್ಕೆ ಎಡೆಮಾಡಿಕೊಟ್ಟಿವೆ ಎಂಬುದನ್ನು ಮರೆಯಬಾರದು. ಇವು ನವ್ಯೋತ್ತರ ಸಾಹಿತ್ಯ ಚಿಂತನೆಗೆ ಸಹ ಸ್ಪಂದನ ರೀತಿಯ ಬರಹಗಳು ಎಂಬುದು ನನ್ನ ನಂಬಿಕೆ.

ಪ್ರಶ್ನೆ: ಪಂಪನನ್ನು ನೀವು ಭಿನ್ನವಾಗಿ ಗ್ರಹಿಸಿದ ಕ್ರಮ ಪಠ್ಯಕ್ಕೆ ಸಂಬಂಧಿಸಿದ್ದೊ, ಅಥವಾ ಒಳನೋಟಗಳಿಗೆ ಸಂಬಂಧಿಸಿದ್ದೊ?
ನಾಯಕ: ಪಠ್ಯ ಒಳನೋಟಗಳನ್ನು ಬೇರ್ಪಡಿಸಿ ನೋಡುವುದು ಹೇಗೆ? ಅವುಗಳದು ಅವಿನಾ ಸಂಬಂಧ; ಇಡಿಯಲ್ಲಿ ಪಡೆಯಬೇಕಾದ ಸಂಪತ್ತು. ಮೊದಲು ಪ್ರಾಚೀನ ಸಾಹಿತ್ಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಗಟ್ಟಿಯಾದ ಸಿದ್ಧತೆ ಇರಬೇಕು. ನಂತರ ಬಂದ ವಿಮರ್ಶಾ ಪರಂಪರೆಯ ಪರಿಚಯವೂ ಇರಬೇಕಾಗುತ್ತದೆ. ಈ ವಿಮರ್ಶಾ ಪರಂಪರೆಗೇ ಎದುರುನಿಂತು ನಾನು ನನ್ನ ಅಭಿಪ್ರಾಯ ಹೇಳಬೇಕಾಗಿತ್ತು. ರನ್ನನ ಬಗೆಗೂ ಅದೇ. ರಾಘವಾಂಕನ ಹರಿಶ್ಚಂದ್ರ ಕಾವ್ಯದ ಬಗ್ಗೆಯೂ ಅಷ್ಟೇ. ವಿದ್ವತ್ ವಲಯದಲ್ಲಿ ಆಗಲೇ ಇದ್ದ ಸ್ಥಾಪಿತ ಅಭಿಪ್ರಾಯಗಳನ್ನು ನಾನು ಪ್ರಶ್ನೆ ಮಾಡಿದ್ದೇನೆ. ಇದನ್ನು ಗಂಭೀರ ಚರ್ಚೆಗೆ ಒಡ್ಡಬೇಕಾಗಿತ್ತು. ಒಡ್ಡದೇ ಇರುವುದು ದೊಡ್ಡ ಕೊರತೆಯಾಗಿಯೇ ನನಗೆ ಕಾಣಿಸುತ್ತಿದೆ. ಸ್ವಾರಸ್ಯವೆನ್ನೋಣವೋ ವಿಪರ್ಯಾಸವೆನ್ನೋಣವೊ ತೀನಂಶ್ರೀ ಮತ್ತು ಜಿ ಎಸ್ ಶಿವರುದ್ರಪ್ಪನವರ ನಂತರ ಕನ್ನಡ ಸಾಹಿತ್ಯ ವಿಮರ್ಶಕರು ಮತ್ತು ಸಂಶೋಧಕರು ಹೋಳು ವಿಮರ್ಶಕರು. ಪ್ರಾಚೀನ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಇದ್ದರೆ ಆಧುನಿಕ ಸಾಹಿತ್ಯದ ಬಗ್ಗೆ ಇಲ್ಲ. ಆಧುನಿಕ ಸಾಹಿತ್ಯದ ಬಗ್ಗೆ ಆಸಕ್ತಿ ಇದ್ದರೆ ಪ್ರಾಚೀನ ಸಾಹಿತ್ಯದ ಬಗ್ಗೆ ಇಲ್ಲ ಅಥವಾ ತೀರಾ ಕಡಿಮೆ.
ಕುವೆಂಪು, ಶಿವರುದ್ರಪ್ಪ, ಡಿಎಲ್ಎನ್, ತೀನಂಶ್ರೀ, ವಿ.ಸೀತಾರಾಮಯ್ಯ, ರಂ.ಶ್ರೀ. ಮುಗಳಿ, ಆರ್.ಸಿ.ಹಿರೇಮಠ, ಕಂಬಾರ ಅವರು ಯಾರು ಏನು ಎಂದು ನೋಡದೆ ಪ್ರಶ್ನಿಸುವುದು, ಭಿನ್ನ ಅಭಿಪ್ರಾಯ, ವ್ಯಾಖ್ಯಾನಗಳನ್ನು ಮುಂದಿಡುವ ಅಗತ್ಯವಿದೆ ಎಂದು ಕಂಡಲ್ಲೆಲ್ಲ ನಾನು ನನ್ನ ನಿಲುವನ್ನು ಪ್ರತಿಪಾದಿಸುತ್ತ ಬಂದಿದ್ದೇನೆ. ನನ್ನ ಪರಿಕಲ್ಪನೆಯ ‘ಸಾಹಿತ್ಯದಲ್ಲಿ ವಿನಯ’ ಎಂಬ ಪರಿಕಲ್ಪನೆಗೆ ಚ್ಯುತಿ ಉಂಟಾಗದಂತೆ ಅದನ್ನು ಮಾಡಿಕೊಂಡು ಬಂದಿದ್ದೇನೆ. ಅಂಥವರನ್ನು ಪ್ರಶ್ನಿಸುವುದೇ ‘ಅವಿನಯ’ ಎಂಬುವರಿದ್ದರೆ ಅದಕ್ಕೆ ನನ್ನ ಹತ್ತಿರ ಉತ್ತರವಿಲ್ಲ. ನಾನು ಮೇಲೆ ಹೇಳಿದ ವಿದ್ವಾಂಸರ ವಿದ್ವತ್ತಿನ ಬಗ್ಗೆ ನನಗೆ ಅನುಮಾನವಿಲ್ಲ. ಆದರೆ ಅವರ ಸಹೃದಯ ಸ್ಪಂದನ, ಕಾವ್ಯಾಧ್ಯಯನದ ವಿಧಾನ ಮತ್ತು ನನ್ನ ವಿಧಾನ ಹಾಗೂ ಸಹೃದಯ ಸ್ಪಂದನಗಳಿಗೆ ಸಂಬಂಧಿಸಿದಂತೆ ಇರುವ ವ್ಯತ್ಯಾಸವೇ ನನ್ನ ಅಭಿಪ್ರಾಯ ಭೇದಕ್ಕೆ ಕಾರಣವಿರಬಹುದು. ವ್ಯತ್ಯಾಸವಂತೂ ಇದೆ. ಅದು ಸ್ಪಷ್ಟವಾಗಿ ಕಾಣಿಸುತ್ತದೆ.

ಪ್ರಶ್ನೆ: ಪಂಪನಲ್ಲಿ ನೀವು ಕಾಣುವ ಮುಖ್ಯ ಗುಣ ಯಾವುದು?
ನಾಯಕ: ಕನ್ನಡ ಭಾಷೆಯನ್ನು, ಆಧುನಿಕ ಪೂರ್ವ ಕವಿಗಳಲ್ಲಿ ಪಂಪನಷ್ಟು ಸಮರ್ಥವಾಗಿ ಬಳಸಿದವರು ಇನ್ನೊಬ್ಬರಿಲ್ಲ ಎನ್ನುವುದು ನನ್ನ ದೃಢವಾದ ಅಭಿಪ್ರಾಯ. ಸಂಕ್ಷಿಪ್ತತೆ, ಧ್ವನಿಪೂರ್ಣತೆಯ ವಿಷಯದಲ್ಲಿಯೂ, ಪ್ರಾಚೀನ ಸಾಹಿತ್ಯದ ಯಾವ ಕವಿಯಲ್ಲಿಯೂ ನನಗೆ ಆ ಸೂಕ್ಷ್ಮ ಸಂವೇದನಾ ಶಕ್ತಿ ಕಂಡಿಲ್ಲ. ತನ್ನತನದ ಮುದ್ರೆಯನ್ನು ಒತ್ತುವುದು ಪಂಪನಲ್ಲಿ ಕಾಣುವಂತೆ ಇನ್ನು ಯಾರಲ್ಲಿಯೂ ಕಾಣಿಸುವುದಿಲ್ಲ. ‘ವಾಗ್ದೇವಿಯ ಭಂಡಾರದ ಮುದ್ರೆಯನ್ನು’ ತಾನು ಒಡೆದು, ಹಿಂದಿನ ಕವಿಶ್ರೇಷ್ಠರು ಯಾರೂ ಮಾಡದೇ ಇರುವುದನ್ನು ತಾನು ಮಾಡಿದುದಾಗಿ ರನ್ನ ಹೇಳಿಕೊಳ್ಳುತ್ತಾನೆ. ಅವನೂ ಸಮರ್ಥ ಕವಿಯೇ. ಅವನದು ಬಂಡವಾಳವಿಲ್ಲದ ಬಡಾಯಿಯಲ್ಲ. ಆದರೆ ಪಂಪನ ಜೊತೆ ಸಮ ಹೋಲಿಸುವ ಕವಿ ಇವನಲ್ಲ. ಪಂಪನಿಂದ ಸಾಕಷ್ಟು ಪ್ರಭಾವಕ್ಕೆ ಒಳಗಾಗಿರುವ ಕವಿ ರನ್ನ.
ಇನ್ನು ಕುಮಾರವ್ಯಾಸನೂ ಪಂಪನಂತೆ ಮಹಾಕವಿ, ನಿಜದ ಮಹಾಕವಿ.. ಈ ಬಗ್ಗೆ ನನಗೆ ಅನುಮಾನವಿಲ್ಲ. ಆದರೆ ಅವನ ಸಮಸ್ಯೆಗಳೇ ಬೇರೆ. ಅವನನ್ನು ನೋಡಬೇಕಾದ ರೀತಿಯೂ ಬಹುಶಃ ಬೇರೆ. ‘ಕಾವ್ಯಕೆ ಗುರು’ವೆನಲು ರಚಿಸಿದನು ಕುವರವ್ಯಾಸ ಭಾರತವ ಎಂದು ಆತ ಹೇಳಿಕೊಂಡಿರುವ ಮಾತಿನಲ್ಲಿ ಸತ್ಯ, ಸತ್ವ ಎರಡೂ ಇವೆ. ಕುಮಾರವ್ಯಾಸ ಭಾರತದಲ್ಲಿ ಕಥಾಶಿಲ್ಪದಲ್ಲಿ ಸಮಸ್ಯೆ ಇಲ್ಲ; ಇದ್ದಂತಿಲ್ಲ. ಆದರೆ ಕೃತಿಶಿಲ್ಪದ ವಿಷಯದಲ್ಲಿ ನನ್ನ ತಕರಾರಿದೆ. ಬಹಳ ಕಾಲದಿಂದ ಇದೆ. ನನ್ನ ಆ ತಕರಾರಿನ ಪ್ರಸ್ತಾಪವನ್ನು ನಾನು ಕುಮಾರವ್ಯಾಸನ ಗದುಗಿನಲ್ಲಿ ಮಾಡಿದ್ದೆ. ಗೋಪಾಲಕೃಷ್ಣ ಅಡಿಗ, ಕೀತರ್ಿನಾಥ ಕುರ್ತಕೋಟಿಯವರು ಉಪಸ್ಥಿತರಿದ್ದ ಸಭೆಯಲ್ಲಿ ಈ ತಕರಾರನ್ನು ಒಂದು ವಿಮಶರ್ೆಯ ಪ್ರಶ್ನೆಯಾಗಿ ಎತ್ತಿದ್ದೆ. ತಕ್ಕಮಟ್ಟಿಗೆ ವಿವರವಾಗಿಯೆ ಪ್ರಸ್ತಾಪಿಸಿದ್ದೆ. ಆಗಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಅಧ್ಯಕ್ಷತೆಯ ಸಮಾರೋಪ ಸಮಾರಂಭದಲ್ಲಿ ಕುರ್ತಕೋಟಿಯವರು ತಮ್ಮ ಭಾಷಣದಲ್ಲಿ ನನ್ನ ಆ ಅಭಿಪ್ರಾಯವನ್ನು ಪ್ರಸ್ತಾಪಿಸಿ ಅಲ್ಲಗಳೆದಿದ್ದರು.
ಕವಿಯ ಹೆಗಲಮೇಲೆ ‘ಭಕ್ತ’ ಸವಾರಿ ಮಾಡುತ್ತಿರುವಂತೆ ಕಾವ್ಯದ ರಚನಾಶಿಲ್ಪ ಇರುವುದರಿಂದ ವರ್ಡ್ಸ್ ವರ್ಥ್ ಹೇಳುವ willing suspension of disbelief -ಇಚ್ಛಾಪೂರ್ವಕವಾಗಿ ಅಪನಂಬಿಕೆಯನ್ನು ಅಮಾನತ್ತಿನಲ್ಲಿಡುತ್ತ ಸಾಗುವ ಭಾವಭಾರದಲ್ಲಿ ಸಹೃದಯ ಇರುವಂತಾಗುತ್ತದೆ.
ಕುಮಾರವ್ಯಾಸ ಭಾರತ ಹತ್ತು ಪರ್ವಗಳ ಕಾವ್ಯ. ಮೊದಲಿನ ಐದು ಪರ್ವಗಳಿಗೆ ‘ಪೂರ್ವಪಂಚಕ’, ನಂತರದ ಐದು ಪರ್ವಗಳಿಗೆ ‘ಯುದ್ಧಪಂಚಕ’ ಎಂದು ಹೇಳುವುದುಂಟು. ಪೂರ್ವಪಂಚಕವನ್ನು ಒಂದು ಪರಿಪ್ರೇಕ್ಷಕ್ಕೆ (perspective) ಒಳಪಡಿಸಿಕೊಂಡು ಪಾಂಡವರ ಹಾಗೂ ಕೌರವರ ಪರಾಕ್ರಮ, ಸಾಮಥ್ರ್ಯ ಕುರಿತು ಪರಿಭಾವಿಸಬೇಕು. ಪಾಂಡವರ ಪರಾಕ್ರಮ, ಕೌರವರ ಪೌರುಷ ಪರಾಕ್ರಮಗಳಿಗಿಂತ ಹೆಚ್ಚಿನ ತೂಕದ್ದು. ಅಷ್ಟೇ ಅಲ್ಲ, ಅದು ವೃದ್ಧಿಸುತ್ತಾ ಹೋಗುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಯಕ್ಷಪ್ರಶ್ನೆ, ಪಾಶುಪತಾಸ್ತ್ರ ಪ್ರಸಂಗಗಳನ್ನು ಗಮನಿಸಿದರೆ ಇದು ನಿಚ್ಚಳವಾಗುತ್ತದೆ. ಅದು ಯುದ್ಧಪಂಚಕಕ್ಕೆ ಬರುತ್ತಿದ್ದಂತೆ, ಉದ್ಯೋಗಪರ್ವ ದಾಟಿ ಭೀಷ್ಮಪರ್ವಕ್ಕೆ ಪದಾರ್ಪಣೆ ಮಾಡುತ್ತಿದ್ದಂತೆ ಅಥವಾ ದುರ್ಯೋಧನನ ಆಸ್ಥಾನದಲ್ಲಿ ಶ್ರೀಕೃಷ್ಣನ ವಿಶ್ವರೂಪ ದರ್ಶನದ ಭಗವನ್ನಾಟಕದ ಸಂದರ್ಭ. ‘ಎನ್ನ ಹೃದಯದೊಳಿರ್ದು ಮುರಿವನು/ ಗನ್ನದಲಿ ಸಂಧಿಯನು.. .. / ಮುರಹರನು ಹರಿಯೆಂದು ಮುನ್ನವೆ ಅರಿದಿಹೆನು.’
ಪೂರ್ವಪಂಚಕದಲ್ಲಿ ಕೌರವ-ಪಾಂಡವರ ನಡುವಿನ ವಿರಸ, ಯುದ್ಧ ಸಿದ್ಧತೆ, ಮನುಷ್ಯ ಮನುಷ್ಯರ ನಡುವಿನ ವಿರಸ, ಯುದ್ಧದ ಕಥೆಯಾದರೆ, ಯುದ್ಧಪಂಚಕದ ಪೂರ್ವ ಪೀಠಿಕೆಯಾಗಿ ವಿಶ್ವರೂಪ ದರ್ಶನ ದೃಶ್ಯ ಬರುತ್ತಿದ್ದಂತೆ, ಮನುಷ್ಯ ಮತ್ತು ದೈವದ ನಡುವಿನ ವಿರಸ ಯುದ್ಧವಾಗಿ ಪರಿವತರ್ಿತವಾಗಿಬಿಡುತ್ತದೆ. ಯುದ್ಧ ಪಂಚಕದುದ್ದಕ್ಕೂ ದೈವ ಮಹಿಮೋನ್ನತಿಯ ಕಥೆಯಾಗುತ್ತದೆ. ಪಾಂಡವರ ಮಾನವೀಯ ಸತ್ವ ಕೃಷ್ಣನ ದೈವೀ ಸತ್ವದೊಂದಿಗೆ ಒಡಬೆರೆಯುತ್ತದೆ. ಮೊದಲಿನಿಂದಲೂ ಪಾಂಡವರಲ್ಲಿದ್ದ ಮನುಷ್ಯ ಸಾಮಥ್ರ್ಯ, ಪೌರುಷ ಪರಾಕ್ರಮಗಳನ್ನು ಮೀರಿದ ಪೌರುಷ ಪರಾಕ್ರಮಗಳು ಕೌರವ ಪಕ್ಷದಲ್ಲಿ ಕಾಣಿಸಿಕೊಳ್ಳುತ್ತ ಹೋಗುತ್ತವೆ. ಪಾಂಡವರಲ್ಲಿ ಪೂರ್ವಪಂಚಕದಲ್ಲಿ ಕಾಣಿಸಿಕೊಂಡ ಸತ್ವಾತಿಶಯಗಳು ಪ್ರಕಾಶಗೊಳ್ಳದೆ ಕೃಷ್ಣನ ಮಹಿಮೆ, ಕರುಣೆಗಳು ಮಾತ್ರ ವಿಜೃಂಭಿಸುತ್ತ ಹೋಗುತ್ತವೆ. ನಡೆಯುವುದೆಲ್ಲ ಕೃಷ್ಣನ ಲೀಲೆಯಾಗುತ್ತದೆ; ಪಾಂಡವರ ಪೌರುಷವಾಗುವುದಿಲ್ಲ; ಕೃಷ್ಣಕಥೆಯಾಗುತ್ತದೆ. ಹೀಗಾಗಿ ಕಾವ್ಯ ಅನುಭವ ಕಟ್ಟುವ ಕಥೆಯಾಗದೆ, ದೈವಮಹಿಮೆಯ, ಧರ್ಮಮಹಿಮೆಯ ಕಥೆಯಾಗುತ್ತದೆ. ಕಥೆಯೇ ಒಂದು ಆಚರಣೆ (ritual)ಆಗುತ್ತದೆ. ಮನುಷ್ಯರು ಗೌಣವಾಗುತ್ತಾರೆ. ಗೆದ್ದ ಪಾಂಡವರು ಗೆದ್ದದ್ದು ಯಾರನ್ನು, ಕೊಂದದ್ದು ಯಾರನ್ನು?
‘ಕಾವನಾತನೆ, ಕೊಲುವನಾತನೆ, ಸಾವೆನಾತನ ಕೈಯಬಾಯಲಿ.. .. ಭೀತಿ ಬೇಡೆಂದ ಎಂದು ಧೃತರಾಷ್ಟ್ರನಿಗೆ ಧುಯರ್ೋಧನ ಹೇಳಿದ ಮೇಲೆ ಸೋಲು ಸಾವುಗಳು ಅರ್ಥಕಳೆದುಕೊಳ್ಳುತ್ತವೆ.
ಪ್ರಶ್ನೆ: ರಾಜಪ್ರಭುತ್ವವನ್ನು ಒಪ್ಪಿಕೊಂಡೂ ತನ್ನ ಸ್ವೋಪಜ್ಞತೆಯನ್ನು ಪಂಪ ಉಳಿಸಿಕೊಂಡದ್ದು ಹೇಗೆ?
ನಾಯಕ: ನನ್ನ ಇತ್ತೀಚಿನ ಲೇಖನ, ‘ಪಂಪಭಾರತವನ್ನು ಮತ್ತೆ ಓದಿದಾಗ’ ಎಂಬ ನನ್ನ ಲೇಖನದಲ್ಲಿ ಈ ಪ್ರಶ್ನೆಗೆ ಉತ್ತರವಿದೆ ಎಂದು ಭಾವಿಸಿದ್ದೇನೆ. ಅದು ಗಂಭೀರ ಚರ್ಚೆಯನ್ನು ಅಪೇಕ್ಷಿಸುತ್ತದೆ. ನನ್ನ ವ್ಯಾಖ್ಯಾನವನ್ನು ಒಪ್ಪುವುದು ಬಿಡುವುದು ಬೇರೆ.

‍ಲೇಖಕರು G

May 26, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: