ಜಿಕೆಜಿ ಖಡಕ್ ಮಾತು ನೆನಪಾಯಿತು…

ಹಿರಿಯ ಚಿಂತಕ ಜಿ ಕೆ ಗೋವಿಂದರಾವ್ ನಿಧನದ ಹಿನ್ನೆಲೆಯಲ್ಲಿ ನುಡಿನಮನ ಸಲ್ಲಿಸಿ ನೆನಪುಗಳನ್ನು ಸ್ಮರಿಸಿದ್ದಾರೆ.

ಆರ್ ಜಿ ಹಳ್ಳಿ ನಾಗರಾಜ

ದಸರಾ ಸಂಭ್ರಮದ ಕಳೆ ಬಾಡಿ ಹೋಯ್ತು. ಸೈದ್ಧಾಂತಿಕ ಹೋರಾಟ, ಜನಪರ ನಿಲುವು, ಜಾತ್ಯತೀತ ಮನೋಭಾವ, ವೈಚಾರಿಕ ನಿಲುವುಗಳಿಂದ ಸದಾ ಜನ ಜಾಗೃತಿ ಹೋರಾಟದಲ್ಲಿ‌ ಭಾಗಿ ಆಗುತ್ತಿದ್ದ ಗುರುಗಳು, ಮಾರ್ಗದರ್ಶಕರು ಆದ ಪ್ರೊ. ಜಿ.ಕೆ. ಗೋವಿಂದರಾವ್ (ಜಿಕೆಜಿ) ನಮ್ಮನ್ನಗಲಿದ್ದಾರೆ. ಅವರಿಗೆ ನನ್ನ ಭಾವಪೂರ್ಣ ಶ್ರದ್ಧಾಂಜಲಿ.

ಬದುಕಿನಲ್ಲಿ ಬದ್ಧತೆ, ಕರಾರುವಾಕ್ಕು ಮಾತು, ಗಟ್ಟಿ‌ ನಿರ್ಧಾರಗಳಿಂದ ವ್ಯವಸ್ಥೆಯನ್ನು ತೀಡುತ್ತ, ಎಚ್ಚರಿಕೆ ಕೊಡುತ್ತಿದ್ದ ಮೇಷ್ಡ್ರು ಅವರು. ಅಪಾರ ಓದಿನ ಜ್ಞಾನಿ. ಕೊನೆಯ ದಿನಗಳಲ್ಲು ಹೊಸ ಹೊಸ ಓದನ್ನು‌ ಅವರು ಬಯಸುತ್ತಿದ್ದರು. ಬೇಕಾದ ಪುಸ್ತಕಗಳನ್ನು ಕೊರಿಯರ್ ಮೂಲಕ ತರಿಸಿಕೊಂಡು ಇತರರಿಗೂ ಹೇಳುತ್ತಿದ್ದರು. ಅವರ‌ ಒಡನಾಟದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ. ಚರ್ಚೆ ಮಾಡಿದ್ದೇನೆ. ನೂರಾರು‌ ಕಿ.ಮೀ. ಜತೆಗೆ ಪಯಣ ಮಾಡಿದ್ದೇನೆ. ಅನೇಕ ಜನಪರ ಚಳವಳಿಗೆ ಕರೆದೊಯ್ದಿದ್ದೇನೆ. ಜಯನಗರದ ಮಹಡಿ ಮನೆಯಲ್ಲಿ ಕೂತು ಅವರ ಶ್ರೀಮತಿ ನಿಘಂಟು ತಜ್ಞೆ, ಕಲಾವಿದೆ ಮಂಜುಳಾರಾವ್ ಕೊಟ್ಟ ಕಾಫಿ ಹೀರಿದ್ದೇನೆ.

ಕಳೆದ ವರ್ಷ ಕರೋನಾ ಮಹಾಮಾರಿ ಅಲೆ ತಗ್ಗಿದ್ದ ಸಂದರ್ಭ ಮಹಡಿ ಏರಿ ಹೋಗಿದ್ದಾಗ, ಲವಲವಿಕೆಯಿಂದ ಮಾತಾಡಿದ್ದರು. ಅನೇಕ ಪುಸ್ತಕಗಳ ಓದಿನ ತಿರುಳನ್ನು ಉಣಬಡಿಸಿ ʻಸದಾ ಓದಬೇಕು ಕಣ್ರೆ. ಓದಿಲ್ಲದಿದ್ದರೆ ಏನು‌ ಚರ್ಚೆ ಮಾಡಲು ಸಾಧ್ಯ? ಏನು ನಿಮ್ಮ ಬೆಳವಣಿಗೆ?’ ಎಂದೇಳಿ, ಅಲ್ಲೇ ಹರಡಿಕೊಂಡಿದ್ದ ಪುಸ್ತಕಗಳ ಪುಟಗಳಲ್ಲಿನ ಮಾರ್ಕ್ ಮಾಡಿದ್ದ ತೋರಿಸಿ, ಆ ಪುಸ್ತಕಗಳ ಮಹತ್ವ ವಿವರಿಸಿದ್ದರು.

ಜಿ.ಕೆ.ಜಿ ಒಬ್ಬ ನಿಜ ಮನುಷ್ಯ, ನಿಜ ಸಾಹಿತ್ಯಾಸಕ್ತ, ವೈಚಾರಿಕ ಬರಹಗಾರ, ಇಂಥ ಮಾನವೀಯ ಹೋರಾಟಗಾರನನ್ನು‌ ಕಳೆದುಕೊಂಡು ದುಃಖಿತನಾಗಿರುವೆ.

ಹೋಗಿ ಬನ್ನಿ ಮೇಷ್ಟ್ರೆ. ನಿಮಗೆ ನನ್ನ ಅಶ್ರುದರ್ಪಣ.

* * *

ಅವರ ಮಹಡಿ ಮನೆ ಪ್ರವೇಶ ಮಾಡುತ್ತಿದ್ದಂತೆ ಕುರ್ಚಿಯಲ್ಲಿ ಆರಾಮವಾಗಿ ಕೂತಿದ್ದ ಅವರ ಮುಖದಲ್ಲಿ ಉಲ್ಲಾಸಿತ ಕಾಂತಿಯಿತ್ತು. ‘ಏನ್ಸಾರ್ ಇಷ್ಟು Smart Boy ಆಗಿದ್ದೀರಿ?’ ಎಂದು ರೇಗಿಸಿದೆವು.

ಅವರು ಇಂಗ್ಲಿಷ್ ಪ್ರೊಫೆಸರ್. ಅಪಾರ ಪುಸ್ತಕ ಪ್ರೇಮಿ. ವಯಸ್ಸು ಎಂಬತ್ತು ದಾಟಿದ್ದರೂ ಅವರ ಹೊಸಹೊಸ ಓದು, ಚರ್ಚೆ, ವಿಶ್ಲೇಷಣೆ ಮನತಟ್ಟುತ್ತೆ. ನಮಗೆ ಮತ್ತಷ್ಟು ಪುಸ್ತಕಗಳ ನೆಂಟಸ್ಥನ ಹೆಚ್ಚುವಂತೆ ಮಾಡುತ್ತೆ. ಎದುರಿದ್ದ ಪುಸ್ತಕ ತೋರಿಸಿ, ಇದನ್ನ ಓದಿದ್ದೀಯಾ? ಎಂದು ಪ್ರಶ್ನಿಸುತ್ತಾರೆ. ಅವರು ನಾನು ಕಂಡ ಅಪಾರ ಪುಸ್ತಕ ಪ್ರೇಮಿ. ಪುಸ್ತಕ ಹುಳು. ಪ್ರಖರ ವಿಚಾರವಾದಿ. ಸುಳ್ಳು, ಮೋಸ, ವಂಚನೆ, ಲಂಪಟತನ, ದ್ವೇಷ ರಾಜಕಾರಣ, ಕೋಮುಭಾವನೆಗಳ ವಿರೋಧಿ. ಖಂಡತುಂಡ ಮಾತು. ತಮ್ಮದೇ ಜಾತಿಯ ಪೇಜಾವರ ಸ್ವಾಮಿಗಳ ಹಿಂದುತ್ವದ ನಡೆ ಪ್ರಶ್ನಿಸಿ 40 ಪುಟದ ಪತ್ರ ಬರೆದು ಬೆಚ್ಚಿಬೀಳಿಸಿದವರು. ಶೂದ್ರ ಶ್ರೀನಿವಾಸ ತಪ್ಪು ಮಾಹಿತಿ ನೀಡಿ ಲೇಖನವೊಂದನ್ನು ಬರೆದಾಗ ಝಾಡಿಸಿ ಹತ್ತು ಪುಟ ಬರೆದವರು‌. ಪ್ರಗತಿಪರ, ದಲಿತಪರ ಎಂದು ಬೀಗಿದ ನಿಡುಮಾಮಿಡಿ ಸ್ವಾಮಿಯ ಬೆವರು ಇಳಿಸಿ, ಅವರ ಗೊಂದಲ ಪ್ರಶ್ನಿಸಿ ಧೀರ್ಘ ಬರಹ ಬರೆದವರು…

ಎಷ್ಟೋ ಸಿನಿಮಾಗಳಲ್ಲಿ ಗಮನಾರ್ಹ ಪಾತ್ರ ಮಾಡಿದವರು, ರಂಗಭೂಮಿಯಲ್ಲಿ ಕಾಣಿಸಿಕೊಂಡವರು… ಹಾದಿ ಬೀದಿ, ಊರುಗಳಲ್ಲಿ ಜನ ಸಾಮಾನ್ಯರಂತೆ ಅಡ್ಡಾಡುವ ತಿಂಡಿ, ಕಾಫಿ ಸೇವಿಸುವ ಇವರನ್ನು ನಟರೆಂದು ಗುರ್ತಿಸಿ ಜನ ಮಾತಾಡಿಸಿದರೆ ನಿರುತ್ಸಾಹ ತೋರುವ, ಕೆಲವೊಮ್ಮೆ ‘ಹೌದಾ?’ ಎಂದಷ್ಟೇ ಹೇಳಿ, ಅವರೆಡೆಗೆ ಕಣ್ಣುಬಿಟ್ಟು ನೋಡಿ ಮುಂದೆ ಸಾಗುವ, ತಾನೊಬ್ಬ ನಟ ಎಂದು ಎಂದೂ ಅಂದುಕೊಂಡಿಲ್ಲದ ಸಾಮಾನ್ಯರು ಇವರು, ಜಾತ್ಯತೀತ ನಿಲುವಿನ ಜನಪರ ಚಳವಳಿಯ ಮುಂಚೂಣಿಯ ಹಿರಿಯರಾದ ಇವರೇ ನಮ್ಮ ಪ್ರೊ. ಜಿ.ಕೆ. ಗೋವಿಂದರಾವ್.

ಆರು ತಿಂಗಳ ಹಿಂದೆ ಜಯನಗರದ ಮನೆಗೆ ಹೋದಾಗ ಅವರನ್ನು ಸಾರ್ವಜನಿಕ ಪ್ರತಿಭಟನೆಗೆ ಕರೆದೊಯ್ದಿದ್ದೆವು. ಒಬ್ಬ ಪತ್ರಕರ್ತೆಯ ಭಾರತ – ಪಾಕಿಸ್ತಾನದ ಸ್ವಾತಂತ್ರ್ಯ ಸಂಗ್ರಾಮ, ನರಮೇಧ, ಎರಡೂ ದೇಶಗಳ ದ್ವೇಷ ರಾಜಕಾರಣ ಹಾಗೂ ವಿವಾದಗಳ ಬಗೆಗಿನ ಇಂಗ್ಲಿಷ್ ಪುಸ್ತಕದ ಬಗ್ಗೆ ಹತ್ತು ನಿಮಿಷಕ್ಕೂ ಹೆಚ್ಚು ಮಾತಾಡಿದ್ದರು. ತಮಗೆ ಬೇಕಾದ ಹೊಸ ಪುಸ್ತಕವನ್ನು ಕೊರಿಯರ್ ಮೂಲಕ ತರಿಸಿಕೊಂಡು ಓದುವ ಪುಸ್ತಕ ಹುಳು ಅವರು. ಎದುರು ಟೇಬಲ್ ಮೇಲೆ ಅಂಥ ಹಲವು ಪುಸ್ತಕ ಅಲ್ಲಿದ್ದವು.

ಇವತ್ತು ಬೆಳಗ್ಗೆ ಕವಯಿತ್ರಿ ಸುಕನ್ಯಾ ಮಾರುತಿ ಫೋನಾಯಿಸಿ, ಜಿಕೆಜಿ ನೋಡಲು ಹೋಗೋಣವಾ? ಅಂದರು. ನನ್ನ ಸಣ್ಣ ಕೆಲಸ ಮುಂದೂಡಿ, ಆಗಲಿ ಬನ್ನಿ ಹೋಗೋಣ ಎಂದೆ. ಅವರ ಕಾರು ಬಂತು. ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆ, ಪತ್ರಿಕಾ ಬರಹಗಳ ಬಗ್ಗೆ ಹರಟುತ್ತ ಹೋಗಿ ತಲುಪಿದ್ದೆ ಪ್ರೊಫೆಸರ್ ಜಿ.ಕೆ.ಜಿ ಮನೆಗೆ.

ಜಿಕೆಜಿ ಅವರ ಶ್ರೀಮತಿ ಮಂಜುಳಾರಾವ್. ಅವರು ಮಹಾ ಪ್ರತಿಭಾನ್ವಿತೆ. ಪ್ರಚಾರ ಬಯಸದ ಗೃಹಿಣಿ, ಕಲಾವಿದೆ, ಕನ್ನಡ ನಿಘಂಟುತಜ್ಞೆ. ಬಹಳ ಜನಕ್ಕೆ ಅವರು ಕಸಾಪದಲ್ಲಿ ೨೫ ವರ್ಷಕ್ಕು ಹೆಚ್ಚು ದುಡಿದವರು ಎಂಬ ಮಾಹಿತಿ ಇಲ್ಲ. ನಿಘಂಟು ತಜ್ಞ ಎಂದು ಕರೆಯಿಸಿಕೊಳ್ಳುವ ಶತಾಯುಷಿ ಪ್ರೊ.ಜಿ.ವಿಯವರ ಅಸೂಯಪರತೆ ಹಾಗೂ ಕಠಿಣ ನಿಲುವಿನಿಂದ, ನಿವೃತ್ತಿ ವೇತನ ಇಲ್ಲದೆ ನೊಂದವರಲ್ಲಿ ಇವರೂ ಒಬ್ಬರು. ಎಪ್ಪತ್ತರ ದಶಕದ ಹಲವು ಹೊಸ ಬಗೆಯ ಸಿನಿಮಾಗಳಲ್ಲಿ ಇವರು ಪಾತ್ರ ವಹಿಸಿದ ಉತ್ತಮ ಕಲಾವಿದೆಯೂ ಹೌದು. ಇವರ ಕರಾರುವಾಕ್ಕು ಕನ್ನಡ ಬರವಣಿಗೆ, ಜಿಕೆಜಿಯಂತೆಯೇ ಖಡಕ್ ಮಾತು ಇಷ್ಟವಾಗುತ್ತೆ. ಇಷ್ಟಾಗ್ಯೂ ಅವರು ಮಾಡಿದ ಚಹಾದ ರುಚಿ , ನಾಲಗೆಯ ಒಗರು ಮರೆಯಲಾಗದು.

ಪ್ರೊ. ಜಿಕೆಜಿ ಉತ್ತಮ ವಿಮರ್ಶಕರು. ರಂಗಚಿಂತಕರು. ನಾನು ಪುಸ್ತಕ ಪ್ರಾಧಿಕಾರದ ಸದಸ್ಯನಾಗಿದ್ದಾಗ ‘ಷೇಕ್ಸ್‌ಪಿಯರ್ ನಾಟಕಗಳ ಪಾತ್ರಗಳು’ ಬಗ್ಗೆ ವಿಮರ್ಶಾತ್ಮಕ ಪುಸ್ತಕ ಬರೆದಿದ್ದರು. ಆ ಪುಸ್ತಕ ಬಿಡುಗಡೆಗೆ ಸಾಹಿತ್ಯ, ಸಂಗೀತ ದಿಗ್ಗಜ ಪಂಡಿತ ರಾಜೀವ್ ತಾರಾನಾಥ ಬಂದಿದ್ದರು. ಇವತ್ತೂ ತಮ್ಮ ಕೈಲಿದ್ದ ಎಚ್ ಎಸ್ ವೆಂಕಟೇಶಮೂರ್ತಿ ಅವರ ಕುಮಾರವ್ಯಾಸ ಕಥಾಂತರ (ಆದಿಪರ್ವ ಸಭಾಪರ್ವ) ಕೃತಿ ಓದಲೇಬೇಕು, ತುಂಬಾ ಒಳ್ಳೆಯ ವಿಚಾರಗಳನ್ನು ಎಚ್ಚೆಸ್ವಿ ಬರೆದಿದ್ದಾರೆ ಎಂದು ಶಿಫಾರಸ್ಸು ಮಾಡಿದರು.

ಜಿಕೆಜಿ ಅವರು ಕರೋನಾದ ಲಾಕ್ ಡೌನ್ ದಿನಗಳನ್ನು ಚೆನ್ನಾಗಿ ಬಳಸಿಕೊಂಡು ಹೊಸ ಪುಸ್ತಕ ಬರೆದಿದ್ದಾರೆ. ಅದರ ೮೦ ಪುಟಗಳ ಡಿಟಿಪಿ ಪ್ರತಿ ನನ್ನ ಹಾಗೂ ಸುಕನ್ಯಾರ ಕೈಗಿತ್ತು ಮಾತಾಡತೊಡಗಿದರು. ನಡುವೆ ಈ ದಲಿತ ಹುಡುಗರೇಕೆ ಗಾಂಧಿ ವಿರೋಧಿಗಳು? ಎಂದು ಪ್ರಶ್ನಿಸಿ, ತಾವೇ ದಲಿತ ಸಭೆಯಲ್ಲಿ ಈ ಬಗ್ಗೆ ಮಾತಾಡಿದ್ದನ್ನು ಹೇಳಿದರು. ಇದಕ್ಕೆ ಪೀಠಿಕೆಯಂತೆ ಅವರು ತರಲಿರುವ ಪುಸ್ತಕದ ಹೆಸರು : ‘ಗಾಂಧೀಜಿಯ ಉಪವಾಸಗಳು ಮತ್ತು….’

ಈ ಹೊಸ ಕೃತಿ ಬೇಗ ಹೊರ ಬರಲಿ. ಈ ಬಗ್ಗೆ ನನಗೂ ಕುತೂಹಲವಿದೆ. ಇದನ್ನು ಮೈಸೂರಿನ ಅಭಿರುಚಿ ಪ್ರಕಾಶನದ ಗೆಳೆಯ ಗಣೇಶ ಹೊರತರುತ್ತಿದ್ದಾರೆ. ನೀವೆಲ್ಲ ನನ್ನಂತೆ ಆ ಪುಸ್ತಕದ ನಿರೀಕ್ಷೆಯಲ್ಲಿರಿ.

‍ಲೇಖಕರು Admin

October 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: