ಜಾಹ್ನವಿ ಹಳ್ಳೂರ ಕಥೆ- ಹುತಾತ್ಮ ನಂದಿ…

ಜಾಹ್ನವಿ ಹಳ್ಳೂರ

ನಂದಿನಿಗೆ ಎಚ್ಚರಾಗಿ ಅರ್ಧತಾಸಿನ ಮ್ಯಾಲೆ ಆಗಿತ್ತು. ಸಣ್ಣಕೂಸು “ದುದ್ದೂ..” ಅಂತ ಎದ್ದಾಗನ ಅಕಿ ಅದಕ್ಕ ಹಾಲು ಕುಡಿಸಿ ಮಲಗಿಸಿ ಎದ್ದಿದ್ದಳು. ಮನೀಕೆಲಸ ಸಾಲು ಸಾಲಾಗಿ ತಾ ಮುಂದ, ತಾ ಮುಂದ ಅಂತ ಕುಂಡಿ ತೊಳಿಸಿಕೊಳ್ಳಲಿಕ್ಕೆ ನಿಂತ ಹುಡಗೂರ ಹಾಂಗ ನಿಂತಿದ್ದವು. ಎಲ್ಲಾ ಕೆಲಸಗಳೂ ಮುಗಿದು ಮೈದುನಗ ಡಬ್ಬಿಯಾಗಿ ಇವರಿಗೆ ತಿಂಡಿಯಾಗಿ ದೊಡ್ಡಹುಡುಗನ ತಯಾರ ಮಾಡಿಸಿ ಸಾಲಿಗೆ ಬಿಟ್ಟಬಂದು ಸಣ್ಣದರ ದೇಖರೇಖಿ ಸುರು ಆಗಬೇಕಿತ್ತು. ಲಗೂ ಲಗೂನೆ ಕೆಲಸಾ ಮಾಡೋದು, ಟಾಯಿಮ್ ಪ್ರಕಾರ ಎಲ್ಲಾ ಬರೊಬ್ಬರಿಯಾಗಿ ಎಲ್ಲಾರಿಗೂ ಅವರವರ ತಯಾರಿಗಳನ್ನು ಮಾಡಿಕೊಡುವುದೇನು ನಂದಿನಿಗೆ ಕಷ್ಟವೂ ಆಗಿರಲಿಲ್ಲ. ಆದರ ಆಕೆಯ ಮೈದುನಮಣಿ ನಿಶ್ಯಬ್ದ ವಾಗಿ ಕೆಲಸ ಮಾಡುವಂತೆ ಕಾಡತಿದ್ದ. ಅಂದರ ಒಟ್ಟ ಭಾಂಡಿ ಸಪ್ಪಳಾಗಧಾಂಗ, ವಾಷಿಂಗ ಮಶೀನು ಕುಯ್ ಅನಲಾರಧಾಂಗ, ಕುಕ್ಕರ ಸೀಟಿ ಹೊಡೀಲಾರಧಾಂಗ…..ಮೂಕಿ ಪಿಕ್ಚರಿನೊಳಗಿನ ಹೀರೋಯಿನ್ನಿನ ಹಾಂಗ ಕೆಲಸಾ ಮಾಡೋದ ಮಹಾ ತಲಿಬ್ಯಾನಿ ಆಗತಿತ್ತು ಅಕೀಗೆ.

ಸಣ್ಣ ಕೂಸಿಂದ ಹಿಡದು ಎಲ್ಲಾರೂ ಎಂಟೂವರೀ ಮ್ಯಾಲೆ ಏಳೋವರೇ! ಲಗೂ ಲಗೂನೆ ಎದ್ದು ಸಹಾಯ ಮಾಡಲಿಕ್ಕೆ ನಂದಿನೀ ಏನು ನೌಕರೀಗೆ ಹೋಗುವಾಕಿನೇ? ಎಷ್ಟಂದರೂ ಜಸ್ಟ್ ಹೌಸ್ ವೈಫ್….ಆದ್ರ ಈಗೀಗ ಅಕೀ ಮೈಯ್ಯಾಗ ಅರಾಮಿರತಿರಲಿಲ್ಲ.ಎರಡನೇ ಕೂಸಿಗೆ ಮೂರು ತಿಂಗಳಾದಾಗ ಎರಡು ತಿಂಗಳ ಜ್ವರ ಕೆಮ್ಮು ಆಗಿ ಬೆನ್ನಾಗ ನೀರು ತುಂಬಿ ಈಗ ಔಷಧದ ಮ್ಯಾಲೆ ಇದ್ದಳು. ಬೆನ್ನಾಗ ನೀರಂದ ಕೂಡ್ಲೆ ಯಾರಿಗೂ ಹೇಳೋದs ಬ್ಯಾಡ ಅಂತ ಗಂಡ ಹೆಂಡತಿ ನಿಶ್ಚಯ ಮಾಡಿಕೊಂಡಿದ್ದರು. 

ಇವತ್ತಂತೂ ಮುಂಜಾನೆಯಿಂದ ನಂದಿನೀಗೆ ಭಯಂಕರ ತಲಿಸೂಲಿನೂ ಎದ್ದಿತ್ತು.ಹಿಂದಿನ ರಾತ್ರಿ ಗಂಡಾ ಹೆಂಡರಿಗೆ ಮೈದುನನ ಲಗ್ನದ ವಿಷಯದ ಮ್ಯಾಲೆ ವಾಟಾಘಾಟಿಯಾಗಿ ವಾಸು(ನಂದಿಯ ಗಂಡ) “ನೋಡ…ಇದು ನನ್ನ ಮನಿ….ಅವಾ ನನ್ನ ತಮ್ಮ…ಅವಂಗ ಇಲ್ಲೆ ಇರಲಿಕ್ಕೆ ಅಧಿಕಾರ ಇಲ್ಲೇನು?..ಅಂವಾ ಬೇಖಾದ್ದಾಗ ಲಗ್ನಾ ಮಾಡಿಕೋಳ್ಳಿ..ಬೇಕಾದಷ್ಟ್ ಕನ್ಯಾ ನೋಡ್ಲೀ, ನಿನಗೇನ್ ತ್ರಾಸದ…ಈ ಹೆಂಗಸರ ಬುದ್ಧಿನ ಇಷ್ಟು..ನಿನಗ ಮಾಡ್ಲಿಕ್ಕಾಗಲಿಲ್ಲಂದ್ರ ಹೇಳು..ಹೋಟೇಲಿಂದ ತರಸಿ ಸಾಕತೇನಿ” ಅಂತ ವದರಾಡಿ ಸೆಟಗೊಂಡು ಮಲಗಿದ್ದ. ಅವನ್ನ ಸಮಾಧಾನ ಮಾಡಲಿಕ್ಕೆ  ಸ್ವಲ್ಪೂ ಮನಸ್ಸಿಲ್ಲದವಳಾಗಿ,ಇಡೀ ರಾತ್ರಿ ನಿದ್ದಿಲ್ಲದ ಕಳೆದು…ಕಣ್ಣು ಕೆಂಪು(ಅತ್ತದ್ದಲ್ಲ..! ಅಕಿ ಅಳೋ ಅಂಥಾಕಿ ಅಲ್ಲ..ಕಣ್ಣೀರ್ ಕುಮಾರಿ ಅಲ್ಲ..) ಮಾಡಿಕೊಂಡು ಎದ್ದಿದ್ದಳು.

ಈ ವೀಕೆಂಡ್ ಏನ್ ಆದ್ರೂ ಈ ಮನ್ಯಾಗಿರಬಾರದು..ಮಕ್ಕಳನ್ನ ಕರಕೊಂಡು ಅಮ್ಮಾನ ಮನೀಗಾದರೂ, ಅಲ್ಲೆ ಬ್ಯಾಡ…. ಎಲ್ಲ್ಯರ ಹೋಗಿಬಿಡಬೇಕು! ಈ ಅಣ್ಣಾ ತಮ್ಮ ತೆಕ್ಕಿ ಹಾಕಿಕೊಂಡು ಬಿದ್ದುಕೊಳ್ಳಲಿ ನನಗೇನು? ಅಂತ ಯೋಚನೀ ಮಾಡುತ್ತಲೇ ಕುಕ್ಕರಿಗಿಟ್ಟು ತರಕಾರಿ ಹೊಂದಿಸತೊಡಗಿದಳು. ಎರಡ ಮಹಡಿ ಇಳದು ಕೆಳಗ ಹೋಗಿ ಪಂಪ ಹಚ್ಚಿ ಬಂದು ವಾಷಿಂಗ ಮಷೀನಿನಲ್ಲಿ ಅರಿಬೀ ಸುರುವೋದ ತಡ…ಕೆಳಗ ಕಸ ಒಯ್ಯೋಕಿ ಘಂಟೀ ಬಾರಿಸಿದಳು. ಕಸ ಕೊಡಲಿಕ್ಕೆ ಓಡಿಕೋತ ಹೊಂಟಾಕೀ ಹಿಂದ ದೊಡ್ಡ ಮರಿ “ನಾನೂ ಬತ್ತೀನಿ..!” ಅಂತ ಗಂಟ ಬಿತ್ತು. ಕೆಳಗ ಇಳಿಯೋದs ಅದಲ್ಲಾ, ಹಂಗ ಹಾಲೂ ತಂದ ಬಿಡೂಣು ಅಂತ ರೊಕ್ಕ, ಚೀಲ, ಕಸದ ಬುಟ್ಟಿ ಮತ್ತ ಬಗಲಾಗ ದೊಡ್ಡ ಮರಿಯನ್ನು ಹೊತಗೊಂಡ ಕೆಳಗ ಹೊಂಟಳು.

ಓಡೋಡಿಕೋತ ತಿರಿಗಿ ಬಂದು, ಅಡಿಗಿ ಕೆಲಸ ಮುಗಿಶಿ ಸ್ನಾನಕ್ಕ ಹೊಂಟಾಗ ಅನಂತಶಯನಾವತಾರದಾಗ ಮೊಬೈಲ್ ನೋಡಿಕೋತ ಮಲಗಿದ್ದ ದೊಡ್ಡ ದೇವರು ದರುಶನ ಕೊಟ್ಟಿತು. ಇನ್ನ ಕೆಲವೇ ನಿಮಿಷದಾಗ ಆ ದೇವರು ನರಸಿಂಹಾವತಾರ (ಅಂದರ ಎದ್ದು ಕೂಡೋ…!)  ತಾಳುವಷ್ಟರೊಳಗ ಓಡಿ ಬಚ್ಚಲಮನ್ಯಾಗ ತನ್ನ ಹಕ್ಕು ಸ್ಥಾಪಿಸಲಿಕ್ಕೆ ಓಡಿದಳು.

“ಏ ನಂದಿ …ಸ್ನಾನಕ್ಕ ಹೊಂಟ ಬಿಟ್ಟೀಯನೂ …ಛೇ..ನನಗ ತಡ ಆಗತದಲ್ಲಾ..”

ಎಂದ ವದರಿದ ದೊಡ್ಡದೇವರಿಗೆ ನಂದಿನಿಯ ಹುಬ್ಬಿನ ಗಂಟು ಮತ್ತ ಮೌನನ ಉತ್ತರಾತು. ”ಗುಸ್ಸಾ ಇತನಾ ಹಸೀನ ಹೋಗಾ …ತೊ ಪ್ಯಾರ ಕೈಸಾ ಹೋಗಾ…”ಅಂತ ದೊಡ್ಡದೇವರು ಗೊಣಗಲಿಕ್ಕೆ (ಅದಕ್ಕ ಹಾಡು ಗುಣಗಲಿಕ್ಕೆ ಬೇಕಾದಷ್ಟೂ ಸಂಗೀತ ಜ್ಞಾನ ಇಲ್ಲದ್ದಕ್ಕೂ ನಂದಿನೀಗೆ ಶಿಟ್ಟು ಬಂತು) ಸುರು ಮಾಡಿತು .ನಂದಿನಿ ಮೌನ…!

ಈಗ ದೇವರು ತನ್ನ ತೂಕ ತೋರಿಸಲಿಕ್ಕೆ ಮತ್ತೊಂದು ಬಾಣ ,ಈ ಸರತೇ ಅಫೀಷಿಯಲ್ ಬಾಣ ಬಿಟ್ಟಿತು.” ನನಗ ಒಂಭತ್ತಕ್ಕ ಆಫೀಸಿನ್ಯಾಗಿರಬೇಕು. ಟೆಲಿ ಕಾನ್ಫರೆನ್ಸ್ ಅದ..ಸೊ ನಾನ ಮೊದಲ ಸ್ನಾನ ಮಾಡಂವಾ..ಓ ಕೇ” ಎಂದು ಗುಡುಗಿತು. ಇಷ್ಟೊತ್ತಿಗೆ ಆಗಳೇ ನಂದೀ ಸ್ನಾನ ಸುರೂ ಆಗಿ ತಿರಿಗಿ ಮುಗೀಲಿಕ್ಕೇ ಬಂದಿತ್ತು….ಮುಗದ ಬಿಟ್ಟಿತು. ಶ್ಲೋಕ ಹೇಳಿಕೋತ ಬಂದಾಕಿಗೆ ಚಿಕ್ಕದೇವರು ದಿವಾನಾದ ಮ್ಯಾಲೆ ಹಾಯಾಗಿ ಕಾಲು ಚಾಚಿ ಪೇಪರೋದುತ್ತಿದ್ದದನ್ನು ನೋಡಿ  ಬಿಪಿ ಯದ್ವಾ ತದ್ವಾ ಏರಿತು. ಆ ಸಣ್ಣ ದೇವರು ವರ ಕೊಡೋ ಸ್ಟೈಲಿನ್ಯಾಗ ಬಾಜೀರಾವನ ಗತ್ತಲ್ಲಿ, “ ಹಾಲ ಗೀಲು ಅದನೋ …ಏನು ತರಬೇಕೋ ನಂದಿನಿ?” ಅಂತ ಕೇಳಿದ್ದು ನೋಡಿ , ಆಗಳೆ ತಂದು ಕಾಸಿದ್ದ ಎರಡೂ ಲೀಟರ್ ಹಾಲನ್ನು ತಂದು ಅವನ ತಲೀ ಮ್ಯಾಲೆ ಸುರುವ ಬೇಕನಿಸಿತು. ”ತಂದೀನಿ..” ಅಂತ ಹೇಳಿ ಅವನ ಉತ್ತರಕ್ಕೂ ಕಾಯದ ಧಡ ಧಡ ಬಾಲ್ಕನಿಗೆ ಹೋಗಿ ಅರಿಬಿ ಒಣಾ ಹಾಕಹತ್ತಿದ ಅಕೀಗೆ ಬೇಡವೆಂದರೂ ಅಣ್ಣ ತಮ್ಮನ ಸಲ್ಲಾಪ ಕಿವಿಯ ಮ್ಯಾಲೆ ಬೀಳಹತ್ತಿತು.” ಯಾಕಲೇ ತಮ್ಯಾ..ಈ ಸರತೇ ನೋಡಿದ ಯಾವಕೀನೂ ಪಸಂದ ಬೀಳಲಿಲ್ಲೇನು?”

“ಇಲ್ಲಲೇ ವಾಸ್ಯಾ..ಯಾಕೋ ಯಾರೂ ಹೆಲ್ದೀನ ಅನ್ನಿಸಲಿಲ್ಲಲೇಪಾ..”

ಅಣ್ಣ: ”ಮತ್ತ ಬಾಬಾಗ (ಅವರಪ್ಪ..ಅರ್ಥಾತ್ ನಂದಿನಿಯ ಮಾವ) ಒಂದು ಕನ್ಯಾ ಅಗದೀ ಮನಸು ಬಂದದಂತಲಾ?”

ತಮ್ಮ: ” ಇಲ್ಲ ಬಿಡಲೇ ಆ ಕಟಿಗೀ ಅಂಥಾಕಿನ್ನ ಮಾಡಿಕೊಳ್ಳೋ ಪರಿಸ್ಥಿತಿ ಏನದಲೇ..?”

ಅಣ್ಣ: ” ಹೌದು ಬಿಡು..ಆದರೂ ವಿಚಾರ ಮಾಡತೀಯನು ನೋಡು”

ನಂದಿನಿ(ಸ್ವಗತ): ”ಏನು ವಿಚಾರಾ ಮಾಡತಾನ ತಲಿ! ಇದು ನಲವತ್ತನೇ ಕನ್ಯಾ..ಈ ವರ ಮಹಾಶಯಗ ಮೂವತ್ತಾರು ವರುಷ.ಇವಾ ಏನ್ ತಾ ದೇವಲೋಕದಿಂದ ಇಳಿದಾನೇನು?!…ಆನಿ ಆನಿ ಇದ್ ಹಾಂಗ ಇದ್ದಾನ ತಾನರೆ ಗಿಡ್ಡ!!…ಕನ್ಯಾ ಕಟಿಗ್ಯಾ?? ಮಗನ…”.ಈಗೀಗ ನಂದಿನಿಯ ತಾಳ್ಮೆ ಲಗೂ ಕಡಿಮಿಯಾಗತಿತ್ತು….ಪಾಪ ಅರಾಮಿರಲಿಲ್ಲ ಅಕಿ ಮಯ್ಯಾಗ!

ತಮ್ಮ: ”ನೋಡೋಣು ತೊಗೊ. ಆದರೂ ಎಕದಂ ಕನ್ಯಾದೋರಿಗೆ ಉತ್ತರಾ ಹೇಳೋದು ಬ್ಯಾಡ..ಎರಡು ಮೂರು ವಾರ ಹೋಲ್ಡ್‌ನ್ಯಾಗ ಇಡರಿ ಅಂತ ಬಾಬಾಗ ಹೇಳಿ ಬಂದೆ”

ನಂದಿನಿ(ಸ್ವಗತ): ”… ಹೋಲ್ಡ್‌ನ್ಯಾಗ ಇಡಲಿಕ್ಕೆ ಅದೇನು ಫೋನ್ ಅಂತ ಮಾಡ್ಯಾನನು ಈ ಭಾಡ್ಕೊ…ಅಕ್ಕ, ತಂಗಿಲ್ಲ..!..ಹೆಣ್ಣ್ ಹೆತ್ತೋರ ಸಂಕಟ ಗೊತ್ತಿಲ್ಲ…ಪ್ರತೀ ಸರೆ ಕನ್ಯಾ ನೋಡೋದು,ಅದೂ ಒಂದು ಸಲ ಅಲ್ಲ..ಎರಡು ಮೂರು ಸಲ ನೋಡೋದು..ಹೋಲ್ಡ್ನ್ಯಾಗ ಇಡರೀ ಅಂತ ಹೇಳಿ ಅವರ ಆಶಾ ಹೆಚ್ಚ ಮಾಡಿ ಆಮೇಲೇ ಒಲ್ಲೇ ಅನ್ನೋದು…ಅಬ್ಬಬ್ಬಾ..ಇವರೆಂಥಾ ಮಂದಿ!!…ಈಗ ಇದು ಎಂಟನೇ ವರ್ಷ ಹೀಂಗ ಹೇಳಿಕೋತ ಕೂತಾನ. ಒಟ್ಟಿನ್ಯಾಗ ಬೆ- ಹ- ಬೇ ಆಗ್ಯಾನ..ತಾ ಏನ್ ಮಿಸ್ ವರ್ಲ್ಡ್ ಅಂತ ಮಾಡ್ಯಾನ..ಈ ಗಿಡ್ಡಾನಿ”

(ಓದುಗರಿಗಾಗಿ-”ಬೆ ಹ ಬೇ: ಬೆನ್ನು ಹತ್ತಿದ ಬೇತಾಳ”.)

ನಂದಿನಿ (ಮುಂದುವರೆದ ಸ್ವಗತ) “ಗಿಡ್ಡ ಕನ್ಯಾ ಹುಡುಕಿ ಹುಡುಕಿ ಸ್ವತಃ ತಾವ ಗಿಡ್ಡ ಆಗಲೀಖತ್ತಾರ ತಂದೀ ತಾಯಿ…ತಾ ಒಂದು ಸೊಟ್ಟ ಡಿಗ್ರೀ ಮಾಡಲಿಕ್ಕೆ ಹತ್ತ್ ವರ್ಷ ತೊಗೊಂಡದ್ದು ಮರತಾನ ಮೂಳ! ನೌಕರೀ ಮಾಡೋ ಅಲ್ಲೆ ಗರ್ಲ್ ಫ್ರೆಂಡ್ ಇದ್ದಿದ್ದಾಳು…ತಪ್ಪೇನು? ಅದನ್ನ ತಂದಿ ತಾಯಿ ಮುಂದ ಹೇಳಲಿಕ್ಕೆ ದಮ್ಮಿರಲಿಕ್ಕಿಲ್ಲ…”

ಅಣ್ಯಾ: ” ನೋಡು, ವಿಚಾರ ಮಾಡು. ಎನೇನೂ ಅವಸರಿಲ್ಲ..”

ತಮ್ಯಾ: ”ಹೌದ್ಲೇಪಾ.. ಹಂಗs ಮಾಡತೇನಿ..”

ಮೈದುನ ಕನ್ಯಾ ನೋಡಲಿಕ್ಕೆಂದು ಊರಿಗೆ ಹೋದಾಗೊಮ್ಮೆ ಇನ್ನೇನು ಕನ್ಯಾ ಪಾಸು ಮಾಡಿ ಲಗ್ನಾ ಮಾಡಿಕೊಂಡು ನಮ್ಮನ್ನ ಬಿಡುಗಡೆ ಮಾಡ್ತಾನಂತ ಸಂತಸದಿಂದ ಹೂವಾಗತಿದ್ದ  ನಂದಿನಿ… ಇದು ಮುಗಿಯೋ ಕಥಿಯಲ್ಲವೆಂದು ಈಗೀಗ ತಿಳಿದಿದ್ದಳು. ಅತ್ತಿಯ ಕುಸು ಕುಸು ಸ್ವಭಾವ ಮೈದುನಗ ಲಾಭಕಾರಿಯಾಗಿತ್ತು. ಮಾವನವರು ಸ್ಪಷ್ಟ ಮಾತಡ್ತಾರಂತ ಅವರಿಗೆ ತಿರಸಷ್ಟ ಇದ್ದಾರನ್ನುವ ಪಟ್ಟ ಕೊಟ್ಟು ಕೂಡಿಸಿದ್ದರು. ಅವ ಲಗ್ನಾ ಮಾಡಿಕೋ ಬೇಕೆನ್ನುವ ಒತ್ತಾಯಕ್ಕಿಂತ, ಆತ ಲೆಕ್ಕ ಇಲ್ಲಧಾಂಗ ಕನ್ಯಾ ನೋಡೋದು ನಂದಿನಿಗೆ ವಾಕರಿಕಿ ಬರತಿತ್ತು. ಅದಕ್ಕ ಅತ್ತಿಯ ಕುಮ್ಮಕ್ಕು ಬ್ಯಾರೆ. ವಾಸ್ಯಾ ಕನ್ಯಾ ನೋಡೇ ಇಲ್ಲ..ಈಗರs ಆ ಆಶಾ ತೀರಿಶಿಗೊತೀನಿ ಅನ್ನುವ ಅತ್ತಿಯ ಪರಿಗೆ, ಹೆಣ್ಣಾಗಿ ನಂದಿನಿಯ ಮನಸ್ಸು ನೋಯುತ್ತಿತ್ತು. ಇಂಥಾ  ವಿಚಾರದ ಮಂದಿ ನಡುವ ಇರಬೇಕಾತಂತ ಅಕೀ ಮನಸ್ಸು ಸದಾ ಬೂದಿ ಮುಚ್ಚಿದ ಕೆಂಡದ್ಹಾಂಗ ಚಿಟಿ ಚಿಟಿ ಅನ್ನತಿರತಿತ್ತು. ತನ್ನ ಹದಗೆಟ್ಟ ಆರೋಗ್ಯ,  ತನ್ನದs ಎರಡು ಮಕ್ಕಳು, ಅವುಗಳ ಸಂಬಂಧ ಒಂದsಸಮನ ಕೆಲಸ, ಸೊಸಿ ಮೊಮ್ಮಕ್ಕಳ ಕಡೆಗೆ ತಿರುಗಿಯೂ ನೋಡದ ಅತ್ತೀಮಾವ, ತವರುಮನಿಗೆ ಹೋದೇನೆಂದರ ಒಂದs ಸಮನ ಜಗಳಾಡುವ ಅಕಿಯ ಅತ್ತಿಗಿ ಮತ್ತ ಅವ್ವ, ಸದಾ ಆಫೀಸು ಆಫೀಸೆಂದು ಓಡುವ ಗಂಡ….ಶಿವನೇ…ಅದೊರೊಳಗೀ ಮೂರ್ಖ ಗಿಡ್ಡನದೊಂದು ಜವಾಬುದಾರಿ ಅಂತ ಅನಿಸಿ ಮನಸ್ಸಿನಲ್ಲಿಯೇ ಚಿಂತಿ ಮಾಡುತ್ತಾ ರಾಡಿಯಾಗಿದ್ದಳು ನಂದಿ.  ಛಟ್ಟಂತ ಮನಿ ಬಿಟ್ಟು ಎಲ್ಲೂ ಹೊರ ಹೋಗಲಾಗುತ್ತಿರ್ಲಿಲ್ಲ ನಂದಿ , ವಾಸೂರಿಗೆ. ವಾಸೂನ ಕೆಲಸ ,ಮಕ್ಕಳ ಸ್ಕೂಲು , ತನ್ನ ಆರೋಗ್ಯ…ಏನೂ ಇಲ್ಲಂದ್ರ ಈ ಗಿಡ್ಡನ ಕನ್ಯಾ ಪರೀಕ್ಷಾ …!

ಈ ಸರ್ತೇ ಅತ್ತೀ ಮಾವನವರಿಗೆ ಹೇಳೇ ಬಿಡಬೇಕು. ನಿಮ್ಮ ಗಿಡ್ಡನ್ನ ನೀವs ನೋಡಿ ಕೋರಿ… ಇಲ್ಲೆs ಬಂದಿರ್ರಿ ಅಥವ ಅವಂಗ ಲಗ್ನಾ ಮಾಡರಿ…ಸಾಕಾಗೇದ ನನಗ.

“ಏ ನಂದೀ..ಎಲ್ಲಿದ್ದೀ? ಸಣ್ಣ ಮರಿ ಅಳಲೀಖತ್ತದ ಸ್ವಲ್ಪ ನೋಡಲಾ..”

ದೇವರು ಕೂಗಿತು. ಒಳಗ ಓಡಿದಳು….ಈ ಗಂಡಸರಿಗೇನು ಧಾಡಿ..ಸ್ವಲ್ಪ ಕೂಸಿನ್ನ ಸಮಾಧಾನ ಮಾಡಬಾರದ ?

ದಿನಗಳು ಕಳೆದವು….ಮತ್ತ ಎರಡು ಮೂರು ತಿಂಗಳು ಹೋದವು…ಇನ್ನೊಂದು ಮೂರು ಕನ್ಯಾ ಬಂದವು, ನಪಾಸ ಆದವು. ಇಲ್ಲಾ ಸ್ಟೇಟಸ್ ಕೋ ಮೆಂಟೇನ್ ಆದವು. ಅತ್ತಿ,ಮಾವ ಮನ್ಯಾಗ ನಂದಿನಿ ಬರೊಬ್ಬರಿ ಅಡಿಗಿ ಮಾಡಿ ಹಾಕ್ತಾಳೋ ಇಲ್ಲೋ …ಇಲ್ಲಾಂದ್ರ ಹೊರಗs ಉಂಡು ಬಿಡು …ಹಸಿದಿರಬ್ಯಾಡ ಅಂತ ತಮ್ಮ ಪ್ರೀತಿಯ ಗಿಡ್ಡಣ್ಣಗ ಹೇಳ್ತಿದ್ದರು. ಕೈಯಿಲೆ ಆದರ ಸ್ವಲ್ಪು  ವಾಸುಗ ಏನರೆ ಕೆಲಸ ಮಾಡಿಕೊಡು ಅಂತ ಹೇಳ್ತಿದ್ದರು….ನಂದಿನಿಯ ಕಡೆ ಲಕ್ಷ್ಯನ ಇರಲಿಲ್ಲ. ಅಕಿಯ ಹುಬ್ಬಿನ ಗಂಟು ಕಾಣತಿತ್ತ ಹೊರತು ಗಂಟಿನ ಕಾರಣ ಬೇಕೇ ಆಗಿರಲಿಲ್ಲ ಯಾರಿಗೂ. ಅಕಿ ನಕ್ಕೋತ ಇಲ್ಲ ಅಷ್ಟೇ…! ಯಾಕ ನಕ್ಕೋತ ಇಲ್ಲ, ಅನ್ನುವುದರಾಗ ಯಾರಿಗೂ ಆಸಕ್ತಿ ಇಲ್ಲ. ಮತ್ತ ಅಜಾರಿ ಬಿದ್ದ ನಂದಿನಿ ಈ ಸರತೆ ತನ್ನ ಅವ್ವನ ಮನೀಗೂ ಹೋಗಲು ಮನಸ್ಸು ಮಾಡಿರಲಿಲ್ಲ.ಅಲ್ಲೆ ಯಾವ ಸಂಪತ್ತು ಸುರೆತಿರತದ ಅಂತ ಅಕೀಗೆ ಗೊತ್ತಿತ್ತು.ತನ್ನದ ಕಾರಣ ಮಾಡಿಕೊಂಡು ಅವ್ವ ಅತ್ತಿಗಿ ಝಗಳಾಡತಾರ ಅಂತ ಅಕೀಗೆ ಸ್ಪಷ್ಟ ತಿಳಿದಿತ್ತು. ಈ ಮನೀಗೆ ಬಂದೀನಲ್ಲಾ…ಇಲ್ಲೇ ಏನಿದ್ದರೂ ತನ್ನ ಸುಖ ದುಃಖ ಅಂತ ಘಟ್ಟಿ ಮನಸ್ಸು ಮಾಡಿ ಅತ್ತೀ ಮಾವನ್ನs ತಮ್ಮನೀಗೆ ಬರಲು ಒತ್ತಾಯ ಮಾಡಿದ್ದಳು. ತನ್ನ ಮಕ್ಕಳನ್ನೂ ನೋಡಲಿಕ್ಕೆ ಬರ್ರಿ…ಅಜ್ಜಿ ಅಜ್ಜಾ ಅಂತ ನೆನಸತಾವ ಅಂತ ಮೂರು ನಾಕು ಸರತೇ ಗೋಗರೆದು, ಕಡೀಕ್ಯೊಮ್ಮೆ ಖಾರವಾಗೇ ಕರದ ಮ್ಯಾಲೆ, ಒಟ್ಟs ಮನಸ್ಸಿಲ್ಲದ, ಜೊಯ್ಯsನಕೋತ ಆ ನೋವು ಈ ನೋವು, ಆ ಕನ್ಯಾ  ತಪ್ಪೀತು ಅನಕೋತ ನಂದಿಯ ಅತ್ತಿ ಮಾವ ಬರೊವವರಿದ್ದರು. ನಂದಿನಿ ಈ ಬಾರಿ ಅವರನ್ನ ಇಲ್ಲೇ ಇರಿಸಿಗೊಂಡು ಈ ಗಿಡ್ಡನ ಜವಾಬ್ದಾರಿ ಕೆಲ ದಿನಾ ಅವರಿಗೇ ವಹಿಸಿ ಕೊಟ್ಟು ಸ್ವಲ್ಪ ತನ್ನ ಆರೋಗ್ಯ ಸುಧಾರಿಸಿಕೊಳ್ಳಬೇಕೆಂದು ವಿಚಾರ ಮಾಡಿದ್ದಳು.

ವಾಸುನ ಮ್ಯಾಲೆ ಅಕೀಗೆ ಏನೂ ಭರೊಸಾ ಇರಲಿಲ್ಲ.. ಆ ಪ್ರಾಣಿಗೆ ತನ್ನ ಆಫೀಸು ಬಿಟ್ಟರ ಏನೇನೂ ಲಕ್ಷ್ಯ ಇರಲಿಲ್ಲ. ಗಿಡ್ಡಣ್ಣಗಂತೂ ತನ್ನ ನೌಕರಿ, ಕನ್ಯಾಪರೀಕ್ಷಾದಿಂದ ಪುರುಸೊತ್ತು ಇರಲಿಲ್ಲ. ತನ್ನ ವಕಾಲತ್ತು ತಾನೇ ವಹಿಸಲಿಕ್ಕೆ ತಯಾರಾಗಬೇಕಿತ್ತು ಅಕಿ. ತನಗ ಸಹಾಯ ಬೇಕೆಂದು ತಾನೇ ಬಾಯಿಬಿಟ್ಟು ಕೇಳಿಬಿಡಲು ಅಕಿಯ ಅನಾರೋಗ್ಯ ಜಬರ್ದಸ್ತಿ ಮಾಡುತ್ತಿತ್ತು.

ಆ ಭಾನುವಾರ ಬಂದೇ ಬಂತು. ಅತ್ತೀ ಮಾವ ಬಂದs ಬಿಟ್ಟರು. ಅತ್ತಿ ಬಂದವರೇ ದೊಡ್ಡ ಚೀಲದ ತುಂಬ ತಾವು ತಂದಿದ್ದ ವಿಧ ವಿಧ ಪುಡಿಗಳನ್ನೂ, ಚಕ್ಕುಲಿ, ಅನಾರಸ, ಮೆಂತೇಹಿಟ್ಟುಗಳನ್ನೂ, ಉಂಡಿಗಳನ್ನೂ, ಊರಿನ ಸಂತ್ಯಾಗಿಂದ ತಂದ ಬದನೀ ಕಾಯಿ ಸೌತೀ ಕಾಯಿಗಳನ್ನೂ ಜಾದೂಗಾರನ ಹಾಂಗ ತೆಗಿಲಿಕ್ಕೆ ಸುರು ಮಾಡಿದರು. ಈ ಇಂದ್ರಜಾಲವನ್ನು ಬಿಟ್ಟ ಕಣ್ಣು ಗಳಿಂದ ನೋಡುತ್ತಿದ್ದ ನಂದಿನಿ ಕರಗಲಾರಂಭಿಸಿದಳು….ಕಷ್ಟಪಟ್ಟು ಮನಸ್ಸು ಗಟ್ಟಿಮಾಡಿಕೋತ ಈ ಸರತೇ ಅತ್ತೀಯವರ ಸಹಾಯ ಕೇಳೇ ಬಿಡಬೇಕೆಂಬ ನಿರ್ಧಾರವನ್ನು ಮನಸ್ಸಿನಲ್ಲೇ ಮತ್ತ ಮತ್ತ ತನಗs ಹೇಳಿಕೋತ ಉರುಹೊಡೀಲಿಖತ್ತಿದ್ದ ನಂದಿನಿಗೆ ಅತ್ತಿಯವರೇ  ಮಾತು ಸುರುಮಾಡಿದಾಗ ಅರಾಮೆನಿಸಿತು. ”ಏನವಾ ನಂದಿನಿ…ಎಲ್ಲಾ ಅರಾಮ ಅದ ಹೌದಲ್ಲೋ?ಎರಡೂ ಸಣ್ಣಹುಡಗೂರನೂ ಸಂಭಾಳಿಸಿಕೊಂಡು, ನಮ್ಮ ಗಿಡ್ಡನನ್ನೂ ಸಂಭಾಳಿಸೀವಾ..ಖರೇ ಗಟ್ಟಿಗಿತ್ತಿ ಇದ್ದೀ ನೀನು…ಖರೇವಂದ್ರೂ ನೀನೂ ವಾಸೂ ಇಲ್ಲಂದ್ರ ಈ ಗಿಡ್ಡ ಒಂದು ಹಾದೀಗೆ ಹತ್ತೋದು ತ್ರಾಸ ಇತ್ತವಾ…ಈಗ ನೋಡು ಇವನ ಲಗ್ನದ್ದೊಂದು ಘಟ್ಟಕ್ಕ ಹತ್ತಸ ಬೇಕಾಗೇದ. ನೀ ಛೊಲೋ ಇದ್ದೀ ಅಂತ ನಮ್ಮನ್ನ ಸಹಾಯಕ್ಕ ಕರದು ತ್ರಾಸ್ ಕೊಡೂದುಲ್ಲವಾ…ಆ ಶಕ್ಕೂನ ಸೊಸಿ ನೋಡು ಏನ್ ಉರಸತಾಳವಾ…ತನ್ನ ಮಕ್ಕಳನ್ನ ನೋಡಿಕೋಳ್ಳಿಕ್ಕೆ ಬರ್ರಿ ಅಂತ. ತಾನರೇ.. ನೌಕರಿ ಮಾಡೋವಾಕಿ..ಧೊಡ್ಡ ನೌಕರೀ ನೋಡು, ಎರಡು ಲಕ್ಷ ಸಂಬಳ ಅದಂತ ಅಕೀಗೆ! ಅದಕ್ಕ ಎಷ್ಟs ತ್ರಾಸಾದರೂ  ಶಕ್ಕೂ ಬರಬೇಕಾಗತದ. ನೀ ನೌಕರೀ ಮಾಡದ ಇದ್ದದ್ದು ಛೊಲೊನs ಆತವಾ ಮಹರಾಳ..ಈಗ ನೋಡು ಈ ಗಿಡ್ಯಾಗ ಇನ್ನೊಂದು ಕನ್ಯಾ ಬಂದಿತ್ತು. ಮೂರs ದಿನದಾಗ ಬರತೇವಿ ಅಂತ ಹೇಳಿ ಬಂದೇವಿ ಕನ್ಯಾದವರಿಗೆ, ತಿರುಗಿ ಹೋಗೋ ಟಿಕೀಟೂ ತೆಗೆಶಿಕೊಂಡs ಬಂದುಬಿಟ್ಟೇವಿ.ಮೊದಲ ನಾವು ನೋಡತೇವಿ ಆಮ್ಯಾಲೆ ಟಾಯಿಮ್ ಇದ್ದಾಗ ಗಿಡ್ಯಾ ಬಂದು ನೋಡ್ಲಿ…ಅಲ್ಲೀ ತನಕಾ ರಿಸಲ್ಟು ಹೋಲ್ಡಿನ್ಯಾಗ ಇಡತೇವಿ..ನಿನ್ನದು ನನಗ ಭಾಳ ಧೈರ್ಯಾ ಅದ ನೋಡು. ನಾನೂ ಕಲಿಬೇಕು ನೀ ಕೆಲಸಾ ಸಂಭಾಳಿಸುವ ರೀತಿ ನೋಡಿ…ಜಾಯಿಂಟ್ ಫ್ಯಾಮಿಲ್ಯಾಗ ಇದ್ದು ಇದ್ದು ನಾ ಏನೂ ಕೆಲಸಾನs ಕಲೀಲಿಲ್ಲ… ”ಎಂದು ಅತ್ತಿ ತನ್ನನ್ನು ಮೇಲೇರಿಸುವಾಗ…… ನಂದಿನಿಯ ಬೆನ್ನಾಗಿನ ನೀರು ಬಹುಶಃ ಕಣ್ಣಾಗ ಬಂದು ಅಕಿ ಕಣ್ಣು ತುಂಬಲಾರಂಭಿಸಿತು . ಇಲ್ಲಾಂದ್ರೇನು ಕಣ್ಣೀರ್ ಕುಮಾರಿ ಅಲ್ಲ ….ಜಸ್ಟ್ ಆ ಟಾಯಿಪ್ ಅಲ್ಲ , ಧೈರ್ಯಸ್ಥೆ ಅಕಿ. 

‍ಲೇಖಕರು Admin

September 21, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: