ಜಾಲ

ತೆಲುಗು ಮೂಲ: ಪೆದ್ದಿಂಟಿ ಅಶೋಕ್‌ಕುಮಾರ್
ಕನ್ನಡಕ್ಕೆ: ಎಂ ಜಿ ಶುಭಮಂಗಳ

ಇದು ಇಂದಿನ ಮಾತಲ್ಲ. ಐಎಂಎಲ್ ನಿಗದಿತ ಹಣ ತುಂಬಿಸಲಿಲ್ಲವೆಂದು ಅಬಕಾರಿ ಸಿಐ ರಾಜುವನ್ನು ಟ್ರಾನ್ಸ್ಫರ್ ಮಾಡಿದಾಗಿನ ಮಾತು. ಜನ್ನಾರಂ ತಾಂಡಾದಲ್ಲಿ ಸಾರಾಯಿ ವಾಸನೆಯಿಲ್ಲದಂತೆ ಮಾಡಿ, ಅಡ್ಡಿಪಡಿಸಿದ ಎಂಎಲ್‌ಎಯನ್ನೂ ಸಹ ಬಿಡದೆ ಕೋರ್ಟಿಗೆ ಎಳೆದ ನವೀನ್ ಆದರೇನೇ ಈ ಸ್ಟೇಷನ್ನಿಗೆ ಸರಿ ಎಂದುಕೊಂಡ ಅಬಕಾರಿ ಸೂಪರಿಂಟೆಂಡೆಂಟ್ ನವೀನ್ ಕೈಗೆ ಆರ್ಡರ್ ಕಾಪಿ ಕೈಗಿಟ್ಟನು. ಅದನ್ನು ತೆಗೆದುಕೊಂಡಾಗಲೇ ‘ತಿಂಗಳಿನಲ್ಲಿ ಟಾರ್ಗೆಟ್ ಮುಗಿಸುತ್ತೇನೆ’ ಎಂದು ಮಾತು ಕೊಟ್ಟ ನವೀನ್.

ಸ್ಟೇಷನ್ನಿಗೆ ಬಂದು ಫೈಲ್ ತಿರುಗಿಸುತ್ತಿದ್ದರೆ ಕೇಸುಗಳ ಟಾರ್ಗೆಟ್ ಕೂಡ ಇಲ್ಲ. ಕೈಕೆಳಗೆ ಇಬ್ಬರು ಎಸ್ಸೈಗಳು, ಸಿಬ್ಬಂದಿ ಹತ್ತು ಮಂದಿ. ಕರೆದು ಕೇಳಿದರೆ ‘ಕೇಸುಗಳು ಇಲ್ಲ ಸಾರ್’ ಎಂದರು. ಇರಾಕಿನಲ್ಲಿ ಬಾವಿ ತೋಡಿದರೆ ಕುಡಿಯುವ ನೀರು ಸಿಕ್ಕಿದೆ ಎಂದರೆ ನಂಬುತ್ತಾನಾಗಲಿ ತಾಂಡಾದಲ್ಲಿ ಸಾರಾಯಿ ಇಲ್ಲವೆಂದರೆ ನಂಬಲಿಲ್ಲ ನವೀನ್. ವೈನ್‌ಶಾಪ್ ಓನರ್‌ಗಳ ಮೀಟಿಂಗ್ ಕರೆದ. ‘ಸಾರ್.. ಹತ್ತು ರೂಪಾಯಿಗೆ ಸೇರು ಇಪ್ಪೆ ಸಾರಾಯಿ ಸಿಗುತ್ತಿದ್ದರೆ ನಮಗೆ ಗಿರಾಕಿ ಹೇಗೆ ಸಿಗುತ್ತದೆ.. ನಾವು ಮಾಲು ತಂದರೆ ಅಲ್ಲವಾ ಚಲನ್ ಕಟ್ಟುವುದು. ಮೊದಲು ಸಾರಾಯಿ ನಿಷೇಧಿಸಿ ಸಾರ್..’ ಎಂದರು.

ನವೀನ್‌ಗೆ ಅನುಮಾನ ಬಂದಿತು. ‘ಅನುಮತಿ ಇಲ್ಲದ ಮದ್ಯ ಮಾರಾಟ ಮಾಡುತ್ತಿಲ್ಲ ತಾನೇ’ ಎಂದುಕೊಂಡ. ಅನುಮಾನ ಮೂಡಿದ ಕೂಡಲೇ ಷಾಪ್‌ಗಳನ್ನು ಚೆಕ್ ಮಾಡಿದ. ಎಲ್ಲ ಸರ್ಕಾರಿ ಸರಕೇ! ತಾಂಡಾಗಳ ಮೇಲೆ ದಾಳಿ ಮಾಡಿ ನಾಲ್ಕೈದು ಮಂದಿಯನ್ನು ಹಿಡಿದು ಉಳಿದವರಲ್ಲಿ ನಡುಕ ಉಂಟುಮಾಡದ ಹೊರತು ಪರಿಸ್ಥಿತಿ ಹತೋಟಿಗೆ ಬರುವುದಿಲ್ಲ ಎಂದುಕೊಂಡ ನವೀನ್, ಸಿಬ್ಬಂದಿಯನ್ನು ಕೂಡ ನಂಬದೆ ಒಂಟಿಯಾಗಿ ತಾನೇ ದಾಳಿ ಮಾಡಲು ಪ್ಲ್ಯಾನ್ ಮಾಡಿಕೊಂಡ.

ಇಪ್ಪಲ ಪೆಳ್ಳಿಯಲ್ಲಿ ಸಂಜೆಯಾಗುತ್ತಿದೆ. ಅಲ್ಲಿನ ತಾಂಡಾದ ಸೋಮ್ಲಾ ನಾಯಕ್ ಹಣೆಯ ಮೇಲೆ ಕೈ ಅಡ್ಡವಿಟ್ಟು ಸುತ್ತಲೂ ನೋಡಿದ. ಎಲೆ ಉದುರಿದ ಮರಗಳಂತೆ ಸುತ್ತಲೂ ಗುಡ್ಡಗಳೆಲ್ಲ ಬೋಳು ಬೋಳಾಗಿವೆ. ಎಲ್ಲಿಯೂ ಹಸಿರು ಮರದ ಜಾಡಿಲ್ಲ. ಜೇಬಿನಲ್ಲಿದ್ದ ಮೊಬೈಲ್ ರಿಂಗಾಗಿ ರಿಸೀವ್ ಮಾಡಿದ.

“ಏನೋ.. ಮೊಬೈಲ್ ತೆಕ್ಕೊಟ್ಟಿದ್ದು ಮನೆಯಲ್ಲಿ ಗೂಟಕ್ಕೆ ನೇತುಹಾಕುವುದಕ್ಕಾ..? ಯಾಕೋ ತೆಗೀತಾನೇ ಇಲ್ಲ..” ಆಕಡೆಯಿಂದ ಗದರಿಕೆ.

‘ಕಾಲುವೆಗೆ ಹೋಗಿದ್ದೆ ಬಾಪೂ.. ಆಗ ರಿಂಗಾಯಿತೇನೋ.. ಗೊತ್ತಾಗಲಿಲ್ಲ’ ಎಂದ ಭಯದಿಂದ.

‘ನಮ್ಮ ಐ.ಹೆಚ್.ಎಸ್. ಏನಾಯಿತೋ’ ಇಪ್ಪೆಹೂವಿನ ಸಾರಾಯಿಗೆ ಇಟ್ಟುಕೊಂಡಿದ್ದ ಹೆಸರದು.

“ನೆನೆಸಿಟ್ಟಿದ್ದೇನೆ ಬಾಪೂ…. ಇವತ್ತು ರಾತ್ರಿ ಇಳಿಸುತ್ತೇನೆ. ಎಸರಿಗೆ ತಯಾರುಮಾಡುತ್ತಿದ್ದೇನೆ” ಎಂದ.

“ನಾಳೆ ಬೆಳಗಾಗುವವೇಳೆಗೆ ಸರಕು ನನ್ನ ಬಳಿಯಿರಬೇಕು… ಎಲ್ಲರಿಗೂ ಹೇಳು” ಎಂದ.

‘ಊಂ.. ಎಲ್ಲರೂ ತಯಾರಿಯಲ್ಲಿ ಇದ್ದಾರೆ ಬಾಪೂ… ಇವತ್ತು ರಾತ್ರಿಗೇ ಎಲ್ಲರ ಭಟ್ಟಿಗಳು ಇಳಿಯುತ್ತವೆ. ಬೆಳಗಾಗುವ ಮುಂಚೆಯೇ ಸರಕು ಮನೆಯಲ್ಲಿರುತ್ತದೆ” ಸೋಮ್ಲಾ ಭಯದಿಂದ ಒಪ್ಪಿಸಿದ.

ಆ ಕಡೆಯಿಂದ ಎಚ್ಚರಿಕೆಯ ಮಾತುಗಳು ಕೇಳಿಬರುತ್ತಿವೆ, ‘ಏಯ್.. ಹೊಸ ಪೊಲೀಸ್ ಬಂದಿದ್ದಾನೆ. ಹುಷಾರು. ಸಿಕ್ಕಿಹಾಕಿಕೊಂಡರೂ ನನ್ನ ಹೆಸರು ಹೇಳಬೇಡ. ನೀವು ಒಳಗೆ ಹೋದರೆ ನಾನು ಬಿಡಿಸುತ್ತೇನೆ. ನಾನೇ ಒಳಗೆ ಹೋದರೆ ಯಾರೂ ನಿಮಗೆ ದಿಕ್ಕಿರುವುದಿಲ್ಲ.”

“ಊಂ.. ಅದೇನು ಬಾಪೂ, ನೀವು ಹೇಳಿಕೊಡಬೇಕಾ.. ಯಾವತ್ತಾದರೂ ಬಾಯಿ ಬಿಚ್ಚಿದ್ದೀವಾ ಹೇಳಿ..?” ಎಂದ ಸೋಮ್ಲಾ. ಫೋನ್ ಕಟ್ ಆಯಿತು.

ತಾಂಡಾದಲ್ಲಿ ಇಪ್ಪತ್ತು ಮನೆಗಳಿವೆ. ಈ ವಿಚಾರವನ್ನು ಎಲ್ಲರ ಕಿವಿಗೆ ಹಾಕಿದ ಸೋಮ್ಲಾ. ಎಲ್ಲರೂ ಕಟ್ಟಿಗೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಕೆಲವರು ಮಡಿಕೆಗಳಲ್ಲಿ ನೀರು ತರುತ್ತಿದ್ದಾರೆ. ಹೆಂಗಸರು ಎಸರಿಗೆ ತಯಾರಿ ಮಾಡುತ್ತಿದ್ದಾರೆ. ಯಾವಾಗ ಮಸುಕಾತ್ತದೆಯೋ ಎಂದು ಕಾಯುತ್ತಿದ್ದಾರೆ. ಕತ್ತಲಿನಲ್ಲಿ ಸಾರಾಯಿ ಬೇಗ ಇಳಿಯುತ್ತದೆ.

ಗುಡ್ಡದ ಕಾಲುವೆಯಿಂದ ಮಡಿಕೆಯಲ್ಲಿ ನೀರು ತರುತ್ತಿದ್ದ ಸೋಮ್ಲಾ ಕಾಲುನಡಿಗೆ ದಾರಿಯಲ್ಲಿ ಬರುತ್ತಿದ್ದ ಹೊಸ ವ್ಯಕ್ತಿಯನ್ನು ನೋಡಿ ಭಯದಿಂದ ಹಾಗೇ ನಿಂತು ಹತ್ತಿರ ಬರುವವರೆಗೂ ನೋಡಿದನು. ಅವನ ಮೈತುಂಬಾ ಧೂಳು, ವ್ಯಕ್ತಿ ಗಾಡಿ ತಳ್ಳಿಕೊಂಡು ಬರುತ್ತಿದ್ದಾನೆ. ಹಳೆಯ ಲೂನಾ ಗಾಡಿ ಕೈಕೊಟ್ಟಂತಿದೆ. ಏದುಸಿರು ಬಿಡುತ್ತಿದ್ದಾನೆ. ಸೋಮ್ಲಾನನ್ನು ನೋಡಿ ನಿಂತನು.

‘ರಾಂರಾಂ ಬಿಯಾ.. ಮಾನಾಲ ತಂಡಾ ಗಾಂ ಕಿತ್ಲಾ ಸುಪೂರ್’ ಕೇಳಿದನು.

ಸೋಮ್ಲಾ ವಿಚಿತ್ರವಾಗಿ ನೋಡುತ್ತ “ಬೋಗುತ್ ಸುಪೂರ್.. ಉದರ್ ಕ್ಯೂಂ..” ಕೇಳಿದ.

“ಮೇರೆ ಬಯಿ ಉದರೀಚ್.. ಈ ಗಾಡಿ ಕೆಟ್ಟಿದೆ. ತಳ್ಳಿಕೊಂಡು ಬರುತ್ತಿದ್ದೇನೆ.” ಎಂದ.

ಸೋಮ್ಲಾ ಎರಡು ಹೆಜ್ಜೆ ಮುಂದೆಹೋಗಿ “ಈ ಕತ್ತಲ ಹೊತ್ತಿನಲ್ಲಿ ಹೋಗಲಾರೆ. ನೀನು ನಡೆದುಕೊಂಡು ಹೋಗೋಷ್ಟರಲ್ಲಿ ಬೆಳಗಾಗುತ್ತದೆ” ಎಂದ.

ಆ ವ್ಯಕ್ತಿ ಸ್ವಲ್ಪ ಗಾಬರಿಯಿಂದ ನೋಡಿ “ಏನು ಮಾಡೋದು.. ನನ್ನ ಕರ್ಮ ಹೀಗಿದೆ. ನಿಧಾನವಾಗಿ ನಡೆಯುತ್ತೇನೆ. ದಾರಿಯಲ್ಲಿ ಕುಡಿಯಲು ನೀರು ಸಿಗುತ್ತದೆಯಾ…” ಕೇಳಿದ.

ಸೋಮ್ಲಾನ ಮುಖದಲ್ಲಿ ಭಯವನ್ನು ಗಮನಿಸಿ “ನಾಯಕ್.. ನಮ್ಮದು ಪೇಟೆ. ಅಲ್ಲಿ ಅಂಗಡಿಯಿದೆ. ಮಾನಾಲ ತಾಂಡಾದಲ್ಲಿ ರಂಗಯ್ಯ ಸೇಟ್ ಇದ್ದಾನಲ್ಲವಾ.. ಅವನು ನಮ್ಮ ಭಾವ. ಮೊನ್ನೆ ಮದುವೆಯಾಯಿತು ನೋಡು..” ಎಂದ.

ಸೋಮ್ಲಾಗೆ ಸ್ವಲ್ಪ ಭಯ ಕಡಿಮೆಯಾಯಿತು. ಆದರೂ ಏನೋ ಅನುಮಾನ ಮೂಡಿ ‘ಸೇಟೂ.. ಇಷ್ಟು ಕತ್ತಲಾಗಿದೆ ಮತ್ತೆ..?’ ಕೇಳಿದ.

“ನಾಯಕ್.. ನನಗೆ ನಾಲ್ಕು ಅಕ್ಕಂದಿರು. ನಾವು ಇಬ್ಬರು ಅಣ್ಣತಮ್ಮಂದಿರು. ಪ್ರತಿ ಹಬ್ಬಕ್ಕೂ ಅವರಿಗೆ ಉಡುಗೊರೆ ಕೊಡಬೇಕಲ್ಲವಾ..?’ ಅದಕ್ಕೆ ನಾವು ಅಣ್ಣತಮ್ಮಿಂದಿರಿಬ್ಬರೂ ಇಬ್ಬಿಬ್ಬರಿಗೆ ಕೊಡುವುದೆಂದು ತೀರ್ಮಾನಿಸಿದ್ದೇವೆ. ಬತುಕಮ್ಮ ಹಬ್ಬ ಅಲ್ಲವಾ! ಉಡುಗೊರೆ ತೆಗೆದುಕೊಂಡು ಹೋಗುತ್ತಿದ್ದೇನೆ. ಗಾಡಿಯಿದೆಯಲ್ಲವಾ ಎಂದು ಲೇಟಾಗಿ ಹೊರಟೆ” ಎಂದ.

ಸೋಮ್ಲಾ ಸಣ್ಣಗೆ ನಕ್ಕು, “ಹೆಣ್ಣು ಮಕ್ಕಳಿಗೆ ಉಡುಗೊರೆ ಅಪಚಾರವಾಗದಂತೆ ಕೊಡಬೇಕು ಸೇಟು.. ಅಮಾವಾಸ್ಯೆ ಕತ್ತಲು. ಎಲ್ಲಿ ಹೋಗುತ್ತೀಯ. ದಾರಿಯಲ್ಲಿ ಇಪ್ಪೆಮರಗಳು ಸೊಂಪಾಗಿ ಬೆಳೆದಿವೆ. ಆನೆಗಳು ಹೂವು ತಿನ್ನಲು ಓಡಾಡುತ್ತಿರುತ್ತವೆ” ಎಂದ. ಆತ ಭಯದಿಂದ ನಡುಗುತ್ತಿರುವುದನ್ನು ಕತ್ತಲಿನಲ್ಲಿಯೂ ಗಮನಿಸಿದ ಸೋಮ್ಲಾ.

“ನಾಯಕ್.. ದೊಡ್ಡಗುಟ್ಟ ಹತ್ತುವಾಗ ಗಾಡಿ ಕೆಟ್ಟುಹೋಯಿತು. ಯಾರನ್ನೋ ಕೇಳಿದರೆ ಗುಟ್ಟದ ಕೆಳಗೇ ಊರು ಎಂದರು. ಅದಕ್ಕೇ ಧೈರ್ಯವಾಗಿ ಬಂದುಬಿಟ್ಟೆ. ಮತ್ತೆ ಈಗ ಹೇಗೆ..?” ಭಯದಿಂದ ಕೇಳಿದ. ಭುಜದ ಮೇಲಿದ್ದ ಮಡಿಕೆಯನ್ನು ಬದಲಿಸಿಕೊಂಡು “ಹೇಗೆ ಅಂದರೆ.. ಹಿಂದಕ್ಕಾದರೂ ಹೋಗು.. ಮುಂದಕ್ಕಾದರೂ ಹೋಗು. ಮುಖ ನೋಡಿರದ ನಿನ್ನನ್ನು ಯಾರೂ ಇರಗೊಡುವುದಿಲ್ಲ. ಮೊದಲೇ ಇದು ಭಟ್ಟಿಗಳ ಕಾಲ” ಎಂದ ಸೋಮ್ಲಾ.

ಅರೇ ಇದೇನು ಹೀಗಾಯಿತು ಎಂದುಕೊಂಡು, “ಏನು ಮಾಡೋದು.. ಹಿಂದಕ್ಕೆ ಹೇಗೆ ಹೋಗ್ತೀನಿ. ನಾಳೆಯೇ ಉಡುಗೊರೆ ಕೊಡಬೇಕು. ಏನಾದರೂ ಆಗಲಿ.. ಸತ್ತು ಹೋಗುತ್ತೀನಾ..” ಎಂದು ಮುಂದಕ್ಕೆ ನಡೆದ. ಆಗಲೇ ಭೂಲಿ ತಂದೆಯನ್ನು ಜೋರಾಗಿ ಕರೆದಳು.

ಕೇಳಿಸಿಕೊಂಡ ಸೋಮ್ಲಾ ಅತ್ತ ಹೋದ. ಸೇಟು ಲೂನಾ ಗಾಡಿ ಕಿರ್ರ್ ನೇ ಸದ್ದು ಮಾಡುತ್ತಿದೆ, ನಿಲ್ಲಿಸಿ ಜೋರಾಗಿ ಎರಡು ಕಿಕ್ ಹೊಡೆದ. ಗುರ್ರ್..ಎಂದು ಜರ್ಕ್ ಹೊಡೆಯುತ್ತಿದೆ. ಕೆಟ್ಟದಾಗಿ ಬೈದುಕೊಂಡು ತಳ್ಳಲಾರಂಭಿಸಿದ. ಆಗಲೇ ಕಗ್ಗತ್ತಲೆ, ಕಾಡಿನಲ್ಲಿ ಪ್ರಾಣಿಗಳು ಸಂಚರಿಸಲಾರಂಭಿಸುತ್ತಿವೆ.

ಸೋಮ್ಲಾನಿಗೆ ಕನಿಕರ ಮೂಡಿ ಹಿಂತಿರುಗಿ “ಓ ಸೇಟು.. ಏನು ಹಾಗೆ ಓಡುತ್ತಿದ್ದೀಯ.. ನಿಂತುಕೋ. ರಾತ್ರಿಗೆ ನನ್ನ ಜೊತೆಯಲ್ಲೇ ಇರು. ಬೆಳಗ್ಗೆ ಹೋಗುವಿಯಂತೆ” ಎಂದ. ಸೇಟು ಸರಿ ಎಂದ. ನೀರ ಮಡಿಕೆ ಹೊತ್ತು ಸೋಮ್ಲಾ, ಲೂನಾದಲ್ಲಿ ಸೇಟು ಇಬ್ಬರೂ ತಾಂಡಾದ ದಾರಿ ಹಿಡಿದರು. ಹೊಸ ವ್ಯಕ್ತಿಯನ್ನು ಕಂಡು ಬೊಗಳಲಿದ್ದ ನಾಯಿಗಳು ಪಕ್ಕದಲ್ಲಿದ್ದ ಸೋಮ್ಲಾನನ್ನು ನೋಡಿ ಸುಮ್ಮನಾದವು.

ಒಂದಿಬ್ಬರು ಸೇಟ್‌ನನ್ನು ಸೂಕ್ಷ್ಮವಾಗಿ ಪರಿಶೀಲಿಸಿದರು, ಉಳಿದವರು ತಮ್ಮ ಪಾಡಿಗಿದ್ದರು. ಯುದ್ಧಕ್ಕೆ ಸಿದ್ಧರಾಗುತ್ತಿರುವಂತೆ ಯಾರ ಕೆಲಸದಲ್ಲಿ ಅವರು ಮುಳುಗಿದ್ದಾರೆ. ಮನೆಗಳಲ್ಲಿ ಎಲೆಕ್ಟ್ರಿಕ್ ದೀಪಗಳು ಉರಿಯುತ್ತಿವೆ. ಸೋಮ್ಲಾ ಗುಡಿಸಲ ಬಳಿ ಬಂದು ನಿಂತ. ಸೇಟು ಗಾಡಿ ಸ್ಟ್ಯಾಂಡ್ ಹಾಕಿ ಒಮ್ಮೆ ಬಟ್ಟೆ ಕೊಡವಿಕೊಂಡ. ನೆನೆದಿರುವ ಬೆಲ್ಲ ಮತ್ತು ಇಪ್ಪೆಹೂವಿನ ಗಬ್ಬುವಾಸನೆ ಹೊಡೆಯುತ್ತಿದೆ. ದೂರದ ಗುಟ್ಟದ ಬಳಿ ಎರಡು ಮೂರು ಒಲೆಗಳು ಉರಿಯುತ್ತಿವೆ. ಹೆಂಗಸರು ಮನೆಯೊಳಗೆ, ಹೊರಗೆ ಅವಸರವಸರವಾಗಿ ಓಡಾಡುತ್ತಿದ್ದಾರೆ. “ಅಲ್ಲೇನು ಬೆಂಕಿ ನಾಯಕ್..” ತಿಳಿದಿದ್ದರೂ ಕೇಳಿದ ಸೇಟು. ನೀರ ಮಡಿಕೆ ಕೆಳಗಿಳಿಸುತ್ತ, “ಸಾರಾಯಿ ಭಟ್ಟಿ ಸೇಟು.. ನಮ್ಮ ಸಾವು,  ಬದುಕೂ ಅದೇ ಅಲ್ಲವಾ!” ಎಂದ.

ಸೇಟಿಗೆ ಅವನ ಮಾತು ಕೇಳಿ ಉರಿಯುತ್ತಿದೆ. ‘ಏಯ್ ನವೀನ್.. ನಿನ್ನ ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಕಣೋ’ ಎಂದುಕೊಂಡ. ಮೊಬೈಲ್ ತೆಗೆದು ನೋಡಿದ, ಸಿಗ್ನಲ್ ಇದೆ. ಇಬ್ಬರು ಎಸ್ಸೈ ಗಳನ್ನು ಸಿವಿಲ್ ಸಿಬ್ಬಂದಿಯನ್ನು ಕರೆಯೋಣ ಅನಿಸಿತು. ‘ಊರ ತುಂಬಾ ನಾಯಿಗಳಿವೆ. ಅವರು ಗುಟ್ಟ ಹತ್ತುವ ಮೊದಲೇ ಅವು ಬೊಗಳಲಾರಂಭಿಸುತ್ತವೆ. ಇಲ್ಲಿಗೆ ಬರುವವೇಳೆಗೆ ಇವರು ಮಡಿಕೆ, ಒಲೆ ಎರಡೂ ಮಾಯ ಮಾಡುತ್ತಾರೆ. ಬೆಳಗ್ಗೆಯೇ ಸಾರಾಯಿ ಇಳಿದ ಮೇಲೆ ಕರೆದರೆ ರೆಡ್ ಹ್ಯಾಂಡಾಗಿ ಹಿಡಿಯಬಹುದು’ ಎಂದುಕೊಂಡು ಸುಮ್ಮನಾದ.

“ಸೇಟೂ.. ಒಳಗೆ ಬಾ.. ಗರಬಡಿದವನಂತೆ ಅಲ್ಲೇ ನಿಂತುಬಿಟ್ಟೆ..” ಸೋಮ್ಲಾ ಮಾತಿಗೆ ಬೆಚ್ಚಿಬಿದ್ದ ಸೇಟು. ಒಳಗಿದ್ದ ಭೂಲಿ ಸೇಟುವನ್ನು ವಿಚಿತ್ರವಾಗಿ ನೋಡಿದಳು. ಸೇಟು ಚಪ್ಪಲಿ ಬಿಟ್ಟು ಒಳಗೆ ಬಂದ. “ನಿಮಗೆ ಸಾರಾಯಿ ಸರಿಹೋಗುವುದಿಲ್ಲ ಅಲ್ಲವಾ! ಈ ವಾಸನೆ ಇನ್ನೂ ಸಹಿಸಲಾಗುವುದಿಲ್ಲ. ಒಂದೆರಡು ಗಂಟೆಗಳಾದರೆ ಅಭ್ಯಾಸವಾಗಿ ಬಿಡುತ್ತದೆ” ನಕ್ಕು ಹೇಳಿದ ಸೋಮ್ಲಾ. “ಸೋಮ್ಲಾ ಬಿಯಾ.. ಕೌನೋರೇ..” ಪಕ್ಕದ ಗುಡಿಸಲಿನಿಂದ ಕೇಕೆ. “ಮೇರಾ.. ದೋಸ್ತ್..” ಕೂಗಿ ಹೇಳುತ್ತ ಚಾಪೆ ಹಾಸಿದ ಸೋಮ್ಲಾ.

ಭೂಲಿ ಏನೋ ಗೊಣಗಿಕೊಳ್ಳುತ್ತಿದ್ದಾಳೆ. ಸೋಮ್ಲಾ ನಗುತ್ತ ಅವರ ಭಾಷೆಯಲ್ಲಿ ಏನೋ ಹೇಳಿದ. ಅವಳೂ ನಕ್ಕಳು. ಹಗ್ಗದ ಮಂಚದಲ್ಲಿ ಹೆಂಗಸಿನ ಮುಲುಕು ಕೇಳಿಸುತ್ತಿದೆ. ಸೇಟು ಚಾಪೆಯ ಮೇಲೆ ಕುಳಿತ. ಸೋಮ್ಲಾ ಹೊರಗೆ ಬಂದು ಎಲ್ಲರಿಗೂ ಏನೋ ಹೇಳಿದ.

ಸೇಟುಗೆ ಅನುಮಾನ ಬಂದಿತು. ತನ್ನನ್ನೇನಾದರೂ ಗುರುತು ಹಿಡಿದು ಅವರಿಗೆ ಹೇಳುತ್ತಿಲ್ಲ ತಾನೇ ಎಂದುಕೊಂಡ. ಅದೇ ನಿಜವಾದರೆ ತನ್ನ ಶ್ರಮವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತೆಯೇ ಎಂದುಕೊಂಡು ಹೊರಗೆ ಬಂದು ಮಾತು ಕೇಳಿಸಿಕೊಂಡ. ಭಾಷೆ ಅಲ್ಪ ಸ್ವಲ್ಪ ಅರ್ಥವಾಗುತ್ತಿದೆ. ತನ್ನ ಅನುಮಾನಕ್ಕೆ ಕಾರಣವಾದ ವಿಚಾರವಲ್ಲವೆಂಬುದು ತಿಳಿದು ಮನಸ್ಸು ಹಗುರವಾಗಿ, ಒಳಗೆ ಬಂದು ಕುಳಿತ.

ಸೋಮ್ಲಾ ಒಳಗೆ ಬರುತ್ತ, “ಕಾಲು ತೊಳೆದುಕೊಳ್ಳಿ ಸೇಟು. ರೊಟ್ಟಿ ತಿನ್ನೋಣ.. ನಮ್ಮ ಮನೆಯಲ್ಲಿ ಇವತ್ತು ನಿಮ್ಮ ಊಟವೇ” ಎಂದ. ಸೇಟುವಿಗೆ ತಿನ್ನುವ ಮನಸ್ಸಿಲ್ಲ, ಯಾವಾಗ ಬೆಳಗಾಗುತ್ತದೋ ಎನಿಸುತ್ತಿದೆ, “ಬೇಡ” ಎಂದ.

ಸೋಮ್ಲಾ “ನಿಮ್ಮಂತೆಯೇ ನಮಗೂ ಕೆಲವು ಪದ್ಧತಿಗಳಿರುತ್ತವೆ ಸೇಟೂ.. ಶತೃವಾದರೂ ಸರಿ! ನಮ್ಮ ಮನೆಗೆ ಬಂದರೆ ಆದರಿಸುತ್ತೇವೆ. ಬಂದವರನ್ನು ಉಪವಾಸಗೆಡವುದಿಲ್ಲ. ಅವರು ತಿನ್ನುವವರೆಗೂ ತೊಟ್ಟು ನೀರು ಕೂಡ ಕುಡಿಯುವುದಿಲ್ಲ” ಎಂದ. ಇನ್ನು ಬಿಡುವುದಿಲ್ಲವೆಂದು ತಿಳಿದು ಕಾಲು ತೊಳೆದುಕೊಂಡು ಬಂದು ಕುಳಿತ ಸೇಟು. ಪಕ್ಕದಲ್ಲಿಯೇ ಸೋಮ್ಲಾ ಕುಳಿತ. ಸಾರಾಯಿಗೆ ಎಸರು ಕುದಿಯುತ್ತಿರುವ ವಾಸನೆ ಮೂಗಿಗೆ ಬಡಿಯುತ್ತಿದೆ.

“ಎಲ್ಲರ ಎಸರೂ ಕುದಿಯುತ್ತಿದೆ, ನೀನು ಇನ್ಯಾವಾಗ ಇಡುತ್ತೀಯ” ಮಂಚದಲ್ಲಿ ಮಲಗಿದ್ದ ಹೆಂಡತಿ ಕೀರಲು ಧ್ವನಿಯಲ್ಲಿ ಕೇಳಿದಳು. ಸೋಮ್ಲಾ ಸುಮ್ಮನಿದ್ದ. ರೊಟ್ಟಿ ತಂದ ಭೂಲಿಯನ್ನು ತೋರಿಸಿ “ನನ್ನ ಮಗಳು ಸೇಟು” ಎಂದ.

ರೊಟ್ಟಿ ತೆಗೆದುಕೊಳ್ಳುತ್ತ ನೋಡಿದ ಸೇಟು. ಹಾಲು ಅರಿಶಿನ ಕಲಸಿದ ಬಣ್ಣದಲ್ಲಿ ತುಂಬಿದ ಮೈಕಟ್ಟಿನ ಭೂಲಿ ಅಮಾಯಕಳಂತಿದ್ದಾಳೆ. ಹಣೆ ಮತ್ತು ಗಲ್ಲದ ಮೇಲಿನ ಹಚ್ಚೆ ಲೈಟ್ ಬೆಳಕಿನಲ್ಲಿ ಮಿನುಗುತ್ತಿದೆ. ರೊಟ್ಟಿ ಜೊತೆಗೆ ತೊವ್ವೆ, ಹಸಿಮೆಣಸಿನಕಾಯಿ ಖಾರದ ಹೊಸ ರುಚಿ ಸೇಟಿಗೆ. ಹಸಿವು ಬೇರೆ, ಬೇಡಬೇಡವೆನ್ನುತ್ತಲೇ ಮೂರು ರೊಟ್ಟಿ ಮುಗಿಸಿದ. ತಿನ್ನುತ್ತಿದ್ದರೂ ತಲೆತುಂಬ ಯೋಚನೆ. ಅವರ ಭಟ್ಟಿಗಳನ್ನು, ಸಾರಾಯಿ ಬಚ್ಚಿಡುವ ಜಾಗವನ್ನು, ಇಪ್ಪೆಹೂವು, ಬೆಲ್ಲದ  ಸಂಗ್ರಹವನ್ನು ನೋಡಬೇಕೆಂದುಕೊಂಡು, “ನಾಯಕ್, ನೀನು ಏನೂ ಅಂದುಕೊಳ್ಳುವುದಿಲ್ಲವೆಂದರೆ ಸಾರಾಯಿ ಹೇಗೆ ಮಾಡುತ್ತೀರೋ ನಾನೂ ನೋಡುತ್ತೇನೆ” ಎಂದ ಏಳುತ್ತ ಸೇಟು.

“ಅದರಲ್ಲೇನಿದೆ ಸೇಟು.. ಹೋಗೋಣ ನಡಿ. ಯಾರಾದರೂ ಅಬಕಾರಿಯವರು ಬಂದರೆ ನಾವು ಓಡುತ್ತೇವೆ. ನೀನು ಕೂಡ  ಎಚ್ಚರಿಕೆಯಿಂದ ತಪ್ಪಿಸಿಕೊಳ್ಳಬೇಕು. ಓಡುತ್ತೀಯಾ” ಕೈ ತೊಳೆಯುತ್ತ ಕೇಳಿದ ಸೋಮ್ಲಾ. ಸೇಟಿಗೆ ನಗು ಬಂತು. ‘ನನ್ನ ಸಂಗತಿ ನಾಳೆ ಹೇಳುತ್ತೇನೆ. ಯಾರು ಓಡುತ್ತಾರೋ ನೋಡುತ್ತೀನಿ’ ಎಂದುಕೊಂಡ. ಅದನ್ನು ತೋರಗೊಡದೆ ‘ಸರಿ.. ಅದರಲ್ಲೇನಿದೆ. ನಿಮ್ಮೊಂದಿಗೇ ನಾನು. ಆದರೂ ಈ ಕಾಡಿನಲ್ಲಿ ಇಷ್ಟು ರಾತ್ರಿಹೊತ್ತು ಯಾರು ಬರುತ್ತಾರೆ..” ಎಂದ.

ಸೋಮ್ಲಾ ಸಣ್ಣಗೆ ನಕ್ಕ. ಆ ನಗುವಿನಲ್ಲಿರುವ ನಿಗೂಢ ನೋವಿನ ಕಂಠದಲ್ಲಿಯೇ “ಯಾಕೆ ಬರುವುದಿಲ್ಲ ಬಾಬೂ.. ಯಾವ ಪೊಲೀಸ್ ಅಮ್ಮನಿಗೋ ಬೆಳಗಿನ ಜಾವ ಎಂದಾದರೂ ನಿದ್ದೆಯಲ್ಲಿ ಯಾವುದಾದರೂ ಒಡವೆಯೋ, ವಸ್ತುವೋ ಕನಸಿನಲ್ಲಿ ಬಂದರೆ.. ಅರ್ಧಗಂಟೆಯಲ್ಲಿ ಆ ಪೊಲೀಸಿನವರು ಇಲ್ಲಿರುತ್ತಾರೆ. ಬೆಳಗಾಗುವ ವೇಳೆಗೆ ಆ ಕನಸನ್ನು ನಿಜ ಮಾಡಬೇಕಲ್ಲವಾ!” ಎಂದ.

‘ಓಹೋಹೊ.. ತಪ್ಪೆಲ್ಲ ಪೊಲೀಸರದೇ.. ನೀನು ಮಾತ್ರ ಧರ್ಮರಾಜ..’ ಮನಸಿನಲ್ಲಿಯೇ ನಕ್ಕ ಸೇಟು. ಇಬ್ಬರೂ ಭಟ್ಟಿಯತ್ತ ನಡೆದರು. ಹಿಂದೆ ಮಡಿಕೆಯೆತ್ತಿಕೊಂಡು ಭೂಲಿಯೂ ಅವರೊಂದಿಗೆ ಹೊರಟಳು. ಸೇಟು ಭೂಲಿಯನ್ನು ನೋಡಿದ. ಮೊಣಕಾಲ ಮೇಲಕ್ಕೆ ಲಂಗ, ಮೇಲುಹೊದಿಕೆಯಿಲ್ಲದ ಕನ್ನಡಿಗಳುಳ್ಳ ರವಿಕೆ, ಕತ್ತಲಿನಲ್ಲಿಯೂ ಮೈಯ ಉಬ್ಬು ತಗ್ಗುಗಳು ಎದ್ದು ಕಾಣುತ್ತಿವೆ. ಅರ್ಧಗಂಟೆ ನಡೆದ ಹೊರತು ಭಟ್ಟಿ ದಾರಿ ಸವೆಯಲಿಲ್ಲ.

ಗುಡ್ಡದ ಹಿಂದೆ ಆ ಜಾಗ. ಒಲೆಯ ಬೆಂಕಿ ಕೂಡ ಕಾಣಿಸುವುದಿಲ್ಲ. ಅಲ್ಲಿ ದೊಡ್ಡ ಮಡಿಕೆಗಳಲ್ಲಿ ನೀರಿದೆ. ಏನೋ ನೆನೆಸಿದ ಗಬ್ಬು ವಾಸನೆ. ಭೂಲಿ ಚಕಚಕನೆ ಮೂರು ಒಲೆ ಹಚ್ಚಿದಳು. ಮೂರು ದೊಡ್ಡ ದೊಡ್ಡ ಮಡಿಕೆಗಳನ್ನು ಒಲೆಯ ಮೇಲಿಟ್ಟು ಉರಿ ಜಾಸ್ತಿ ಮಾಡಿ ಎಸರು ಹಾಕಿದಳು. ಆ ಮಡಿಕೆಗಳನ್ನು ನೋಡಿ ಸೇಟಿಗೆ ಕಣ್ಣು ತಿರುಗುತ್ತಿವೆ. ಅವುಗಳ ಗಾತ್ರ ನೋಡಿ ಅಲ್ಲಿ ಎಷ್ಟು ಸಾರಾಯಿ ಇಳಿಯುತ್ತದೋ ಅಂದಾಜು ಮಾಡಿಕೊಳ್ಳುತ್ತಿದ್ದರೆ ಭಯವಾಯಿತು. ಉರಿಯುತ್ತಿದ್ದ ಬೆಂಕಿಯ ಬೆಳಕಿನಲ್ಲಿ ಸುಂದರವಾಗಿದ್ದ ಭೂಲಿ ಭೂತದಂತೆ ಕಂಡಳು.

ಇಷ್ಟು ಹೆಚ್ಚು ಪ್ರಮಾಣದಲ್ಲಿ ಸಾರಾಯಿ ತಯಾರಿ ನಡೆಯುತ್ತಿದೆಯೆಂದರೆ ಇದರ ಹಿಂದೆ ಯಾವುದೋ ದೊಡ್ಡ ಜಾಲವೇ ಇದೆಯೆಂದುಕೊಂಡ. ಸೋಮ್ಲಾ ನರಿಬುದ್ಧಿಯವನಂತೆ ಕಂಡ. ಆ ಇಡೀ ಗ್ಯಾಂಗ್‌ನ್ನು ಹಿಡಿಯಬೇಕೆಂಬ ಹಠ ಬಂತು. ಒಳ್ಳೆಯ ಮಾತುಗಳಿಂದ ಸೋಮ್ಲಾ ಬಳಿ ಎಲ್ಲ ವಿಚಾರ ಹೊರಗೆಳೆಯಬೇಕೆಂದುಕೊಂಡು ಅವನೊಂದಿಗೆ ಮಾತಿಗಿಳಿದನು. ‘ಇದು ಚಿಕ್ಕ ಭಟ್ಟಿ.. ದೊಡ್ಡ ಭಟ್ಟಿ ಇನ್ನೊಂದಿದೆ.

ವಾರಕ್ಕೊಮ್ಮೆ ಭಟ್ಟಿ ಇಳಿಸುತ್ತೇನೆ. ಆ ಮಡಿಕೆಗಳನ್ನು ನೋಡಿದರೆ ನೀನು ಇನ್ನೂ ಆಶ್ಚರ್ಯ ಪಡುತ್ತೀಯ. ಭಟ್ಟಿಗಳನ್ನು ಒಂದು ಜಾಗದಲ್ಲಿ ಇಡುವುದಿಲ್ಲ, ಅಲ್ಲೊಂದು ಇಲ್ಲೊಂದು ಇಡುತ್ತೇವೆ. ಅದನ್ನು ತಾಂಡಾಗಳಿಂದ ದೂರ ಇಡುತ್ತೇವೆ. ಯಾರಾದರೂ ದಾಳಿ ಮಾಡಿದರೆ, ಮನೆಗೆ ಓಡುತ್ತೇವೆ. ಸಾಕ್ಷಿಯಿರುವುದಿಲ್ಲ..” ಸೋಮ್ಲಾ ಹೇಳಿದ. ಸೇಟು ಒಳಗೊಳಗೇ ನಕ್ಕು ‘ಈ ಕಥೆಯೆಲ್ಲಾ ಗೊತ್ತೋ.. ಸಾಕ್ಷಿಯಿಲ್ಲದೆ ಯು.ಡಿ. ಕೇಸ್ ಆಗುತ್ತದೆ ಅಂತಲೇ ಅಲ್ಲವೇನೋ.. ನಾನು ತಡೆಯುತ್ತಿರುವುದು. ಇಲ್ಲದಿದ್ದರೆ ಈಗಿಂದೀಗಲೇ ಒಳಗೆ ಹಾಕಿ ಒದೀದೇ ಹೋಗ್ತಿದ್ನಾ?’ ಎಂದುಕೊಂಡ.

ಭೂಲಿ ತನ್ನ ಕೆಲಸದಲ್ಲಿ ಮುಳುಗಿದ್ದಾಳೆ. ಮಡಿಕೆಯಲ್ಲಿ ಎಸರು ಕುದಿಯುವಾಗ ಅದರ ಮೇಲೆ ಇನ್ನೊಂದು ರಂಧ್ರವಿರುವ ಮಡಿಕೆಯಿಟ್ಟು, ಆ ಮಡಿಕೆಯ ಮೇಲೆ ಮತ್ತೊಂದು ಸ್ಟೀಲ್ ಬಟ್ಟಲು ಇಟ್ಟು ನೀರು ತುಂಬಿದರು. ರಂಧ್ರವುಳ್ಳ ಮಡಿಕೆಗೆ ಪೈಪ್ ಜೋಡಿಸಿ  ಪೈಪ್ ಸುತ್ತಲೂ ಜೇಡಿ ಮಣ್ಣು ಮೆತ್ತಿದರು. ನಂತರ ಆವಿ ಹೊರಗೆ ಬರದಂತೆ ಒಲೆಯ ಮೇಲಿನ ಮಡಿಕೆಯ ಕಂಠದ ಸುತ್ತಲೂ ಬಟ್ಟೆ ಸುತ್ತಿ, ಆ ಬಟ್ಟೆಯ ಸುತ್ತ ಬಂಕೆ ಮಣ್ಣು ಮೆತ್ತಿದರು. ಈಗ ಸೋಮ್ಲಾಗೆ ಸ್ವಲ್ಪ ಬಿಡುವು ಸಿಕ್ಕಂತಾಯಿತು. 

‘ನಾಯಕ್.. ಇಷ್ಟು ಸಾರಾಯಿ ಎಲ್ಲಿ ಮಾರುತ್ತೀಯ. ವಾರಕ್ಕೊಮ್ಮೆ ಅಂದರೆ ಎಷ್ಟು ಸಂಪಾದಿಸುತ್ತೀಯ..’ ಕೇಳಿದ ಸೇಟು. ಪೊದೆಗಳಿಂದ ಒಂದು ಮೊಲ ಓಡಿ ಬಂದು ನಿಂತಿತು. ಏನೋ ಹೇಳಹೋಗಿ ಮಾತು ನಿಲ್ಲಿಸಿದ ಸೋಮ್ಲಾ ‘ಅಯ್ಯಾ.. ನಮ್ಮ ಕೆಲಸ ಆದಂತೆಯೇ’ ಎಂದ. ಭೂಲಿ ಕಟ್ಟಿಗೆ ತೆಗೆದುಕೊಂಡು ಮೊಲವನ್ನು ಹೊಡೆಯಲು ಹೋದಳು. ಸೋಮ್ಲಾ ಮಗಳನ್ನು ತಡೆದು ಮೊಲವನ್ನು ಕದಲಿಸುತ್ತ “ಏನೋ ಅಪಶಕುನವಾಗಿದೆ.. ಮೊಲ ಕಾಣಿಸಿದರೆ ಒಳ್ಳೆಯದಲ್ಲ’ ಎಂದ.

ಸೇಟುಗೆ ನಗು ಬಂದು ‘ನಿನಗೆ ಗ್ರಹಚಾರ ಕಾದಿದೆ. ನಾನೇ ನಿನ್ನ ಅಪಶಕುನ. ಕನಿಷ್ಠ ಪಕ್ಷ ಒಂದು ವರ್ಷವಾದರೂ ಒಳಗೆ ಹಾಕುತ್ತೇನೆ.’ ಎಂದುಕೊಂಡು ಮತ್ತೆ ತನ್ನ ಪ್ರಶ್ನೆ ಕೇಳಿದ. ಮೊಲ ಕಾಣಿಸಿದ್ದಕ್ಕೋ ಏನೋ ಭೂಲಿ ಗೊಣಗಿಕೊಳ್ಳುತ್ತಿದ್ದಾಳೆ.

ಉರಿಯನ್ನು ಜಾಸ್ತಿ ಮಾಡುತ್ತಾ “ಸಂಪಾದನೆ ಎಲ್ಲಿಯದು ಸೇಟು.. ಸಂಸಾರ ನಡೆದರೆ ಸಾಕೆಂದುಕೊಳ್ಳುತ್ತೇವೆ. ಮನೆಯಲ್ಲಿ ಹೆಂಗಸಿದ್ದಾಳಲ್ಲವಾ.. ಸಾರಾಯಿ ಕುದಿಸಿ ಕುದಿಸಿ ಈ ವಾಸನೆಗೇ ಕಾಯಿಲೆ ಬಂದಿತು. ಇವತ್ತೋ, ನಾಳೆಯೋ ಎನ್ನುವಂತಿದೆ ಅವಳ ಪರಿಸ್ಥಿತಿ. ಇನ್ನು ನನ್ನ ವಿಚಾರ. ಹಸಿವೆಯಾದರೂ, ದಾಹವಾದರೂ ಸಾರಾಯಿಯೇ ಅಲ್ಲವಾ.. ಲಿವರ್ ಪೆಯಿಲ್ ಆಗಿದೆ. ಸೇಟೂ.. ನಮಗೆ ಏನಾದರೂ ಆಗಲಿ.. ಅಲ್ಲಿದ್ದಾಳಲ್ಲವಾ ಅವಳನ್ನು ಯಾರಾದರೂ ನೋಡಿಕೊಳ್ಳುವ ಒಬ್ಬರ ಕೈಯಲ್ಲಿ ಇಡಬೇಕೆಂದು ನೋಡುತ್ತಿದ್ದೇವೆ” ಎಂದ.

ಸೇಟಿಗೆ ಆ ಮಾತುಗಳಿಂದ ಅಸಹ್ಯವಾಗುತ್ತಿದೆ. ಕೋಪ ತಡೆದುಕೊಂಡು “ಸರಿ.. ಇಷ್ಟು ಕಷ್ಟ ಪಟ್ಟು ಇದನ್ನೇಕೆ ತಯಾರಿ ಮಾಡುವುದು. ಇದು ಎಷ್ಟು ಕೊಂಪೆಗಳನ್ನು ನಾಶಮಾಡುತ್ತದೆಯೋ ಗೊತ್ತಲ್ಲವಾ! ಏನಾದರೂ ಬೇರೆ ಕೆಲಸ ಮಾಡಿ ಜೀವನ ಸಾಗಿಸಬಹುದಲ್ಲವಾ!” ಎಂದ ಮಾತಿನ ವರಸೆಗೆ.

ಸೋಮ್ಲಾ ನೋವಿನಿಂದ ಸೇಟುವನ್ನು ನೋಡುತ್ತ, “ಅದೊಂದು  ಕಥೆ ಸೇಟೂ.. ಹೇಳಿದರೂ ನಿನಗೆ ಬೇಗ ತಲೆಗೆ ಹತ್ತುವುದಿಲ್ಲ. ಹತ್ತಿದರೂ ಜೀರ್ಣವಾಗುವುದಿಲ್ಲ. ಯಾರಿಗೆ ತಾನೆ ಚೆನ್ನಾಗಿ ಬದುಕಬೇಕೆನಿಸುವುದಿಲ್ಲ ಹೇಳು. ನಮ್ಮ ತಾತ ಕಾಡನ್ನು ನಂಬಿ  ಬದುಕಿದ. ನಮ್ಮ ಅಪ್ಪ ಇಲ್ಲಿನ ನದಿಯನ್ನು ನಂಬಿ ಬದುಕಿದ. ನನಗೆ ಅವರೆಡೂ ಇಲ್ಲ..” ಎಂದ.

‘ಅದಕ್ಕೆ ಸಾರಾಯಿ ತಯಾರಿಸಬೇಕಾ’ ಕೇಳಿದ ಸೇಟು. ಸೋಮ್ಲಾ ಮಾತನಾಡಲಿಲ್ಲ. ಎಸರು ಕಳಪಳನೆ ಕುದಿಯುತ್ತಿದೆ. ಸೋಮ್ಲಾ ಬೆಂಕಿ ಹಾಕಿದ. ಭೂಲಿ ಉರಿಯನ್ನು ಸರಿಪಡಿಸುತ್ತಿದ್ದಾಳೆ. ನಿಮಿಷ ನಿಮಿಷಕ್ಕೂ ಮೇಲಿನ ಪಾತ್ರೆಗಳಲ್ಲಿ ನೀರು ಬದಲಾಯಿಸುತ್ತಿದ್ದಾಳೆ. ಸೈಗೆ ಗುಸುಗುಸು ಬಿಟ್ಟರೆ ಬಾಯಿ ಬಿಡುತ್ತಿಲ್ಲ. ‘ಎಷ್ಟು ರಹಸ್ಯವಾಗಿ ಮಾಡುತ್ತಾಳೆ. ಕಳ್ಳ ಭಟ್ಟಿಯಲ್ಲಿ ಚೆನ್ನಾಗಿ ಪಳಗಿದ್ದಾಳೆ’ ಎಂದುಕೊಂಡ. ಮತ್ತೆ ಸೋಮ್ಲಾನನ್ನು ಮಾತಿಗೆಳೆದು ಭಟ್ಟಿಗಳತ್ತ ವಿಷಯ ತೆಗೆದ.

“ಇತ್ತೀಚೆಗೆ ಭಟ್ಟಿ ಇತ್ತಲ್ಲವಾ.. ಅದು ಹಣ್ಣಿನ ಸಾರಾಯಿ. ನಿಮ್ಮಂತಹ ಒಬ್ಬ ಆಸಾಮಿ ದ್ರಾಕ್ಷಿ ಸಾರಾಯಿ ಮನೆಗೆ ಬೇಕೆಂದ. ಅದಕ್ಕೆ ಸ್ಫಟಿಕ ಹಾಕುವುದಿಲ್ಲ. ಸಕ್ಕರೆ ನೀರೇ. ಸಿಹಿಯಾಗಿರುತ್ತದೆ. ಈ ಕೊನೆಗಿದೆ ನೋಡು.. ಇಪ್ಪೆ ಹೂವಿನದು. ಇನ್ನೊಂದು ಬೆಲ್ಲದ ಸಾರಾಯಿ. ವಾರ ನೆನೆಸಿ ಸ್ಫಟಿಕ ಹಾಕಿದ್ದೇನೆ. ತೊಟ್ಟು ಗಂಟಲಲ್ಲಿ ಇಳಿದರೆ.. ನಕ್ಷತ್ರ ಕಾಣುತ್ತೆ..” ಹೇಳಿದ ಸೋಮ್ಲಾ.

“ಅದು ಸರೀ.. ಎಷ್ಟು ಸಂಪಾದಿಸುತ್ತೀಯ ಹೇಳಲೇ ಇಲ್ಲ..” ಸೇಟು ಕೇಳಿದ. “ಎಷ್ಟೇನು ಸೇಟು.. ಬರೀ ದುಡಿಯೋದಷ್ಟೇ! ಈ ದ್ರಾಕ್ಷಿಸಾರಾಯಿ ಇದೆಯಲ್ಲವಾ.. ಇದು ಕೇಸುಗಳು ಆಗದೆ ನೋಡಿಕೊಳ್ಳುವ ಪಟೇಲನಿಗೇ! ದುಡ್ಡು ಕೇಳಿದರೆ ಕೈಲಾಸ ಕಾಣಿಸ್ತಾನೆ. ಇಪ್ಪೆಹೂವಿನದು ಒಂದು ಕಾಸು ಬರುವುದಿಲ್ಲ. ಇಪ್ಪೆಹೂವಿನದು ಕಳ್ಳಭಟ್ಟೀನೇ. ಕೊಟ್ಟಷ್ಟು ತೆಗೆದುಕೊಳ್ಳಬೇಕು. ಬೆಲ್ಲದ್ದು ನನಗೆ.

ಸ್ವಲ್ಪ ಊರಿನಲ್ಲಿ ಮಾರುತ್ತೇನೆ. ಅದು ಕೂಡ ಕೊಟ್ಟ ದಿನ ಕೊಟ್ಟಷ್ಟು ತೆಗೆದುಕೊಳ್ಳಬೇಕು. ಯಾವಾಗಲಾದರೂ ಇಷ್ಟೇನಾ ಎಂದೆವೋ, ಬೆಳಗ್ಗೇನೋ, ಮಾರನೇ ದಿನವೋ ಪೊಲೀಸರು ಹಿಡಿದುಕೊಂಡು ಹೋಗುತ್ತಾರೆ. ಬಿಡಿಸಿಕೊಂಡು ಬರಲು ಮತ್ತೆ ಅವರ ಕಾಲೇ ಹಿಡಿಯಬೇಕು” ಸೋಮ್ಲಾ ಧ್ವನಿ ಗದ್ಗದಿತವಾಗಿ ಗಂಟಲು ತುಂಬಿ ಬಂತು.

ಆದರೂ ಮುಂದುವರಿಸಿ, “ಮೊದಲಿಗೆ ನಾನೂ ಅಂದುಕೊಂಡೆ.. ಹೊಟ್ಟೆಪಾಡಿಗೆ ಈ ಕೆಲಸ ಮಾಡುವುದಾ ಎಂದು. ಆದರೆ ವಿಧಿಯಿಲ್ಲದೆ ಬಲವಂತವಾಗಿ ಇಳಿಯಬೇಕಾಯಿತು. ನಾನು ಮಾಡಲಿಲ್ಲವೆಂದಿಟ್ಟುಕೋ, ನಾಳೆಯೇ ನನ್ನ ಮೇಲೆ ಕೇಸ್ ಬೀಳುತ್ತದೆ. ಮಾಡಿದರೆ ಮಾತ್ರ ಬಿಡಿಸುತ್ತೇವೆಂದು ಇವರು ಹೇಳುತ್ತಾರೆ..” ಅತಿಯಾದ ನೋವಿನಿಂದ ಮಾತು ಹೊರಳಲಿಲ್ಲ.

‘ಇವನು ಚಿಕ್ಕವನಂತೆ.. ಕೈ ಹಿಡಿದು ಮಾಡಿಸುತ್ತಾರಂತೆ’ ಸೇಟು ತನ್ನಲ್ಲೇ ನಕ್ಕ. ‘ನಮ್ಮ ಜೀವನ ನಮ್ಮದಲ್ಲ ಸೇಟು. ಯಾರೋ ಆಡಿಸಿದಂತೆ ನಾವು ಆಡಬೇಕು’ ಸೋಮ್ಲಾ ಹೇಳುತ್ತಿದ್ದ. ‘ಇವನು ಸಾಮಾನ್ಯನಲ್ಲ, ಅಸಾಧ್ಯ. ತಪ್ಪು ಮಾಡಿಯೂ ತನ್ನ ತಪ್ಪಲ್ಲ ಎಂದು ಹೇಗೆ ಹೇಳುತ್ತಿದ್ದಾನೋ.. ಕಲ್ಲನ್ನೂ ಕರಗಿಸುತ್ತಾರೆ ಕತ್ತೆ ನನ್ ಮಕ್ಕಳು’ ಎಂದುಕೊಂಡ. 

ಭಟ್ಟಿಯ ಪೈಪಿನಿಂದ ನೀರು ತೊಟ್ಟಿಕ್ಕಲಾರಂಭಿಸಿತು. ಒಲೆ ಉರಿಯ  ಬೆಳಕಿಗೆ ಆ ತೊಟ್ಟುಗಳು ಹೊಳೆಯುತ್ತಿವೆ. ಕೂಡಲೇ ಭೂಲಿ ಪಿಸುನುಡಿಯಲ್ಲಿ ಏನೋ ಹೇಳುತ್ತ ಪೈಪಿನ ಕೆಳಗೆ ಬಾಟಲಿಗಳನ್ನು ಇಟ್ಟಳು. ಎರಡು ಒಲೆಗಳನ್ನು ತಾನು ನೋಡಿಕೊಳ್ಳುತ್ತ ಒಂದು ತಂದೆಗೆ ಕೊಟ್ಟಳು. ಮೂರು ಒಲೆಗಳ ಉರಿಯನ್ನು ಕಡಿಮೆ ಮಾಡಿದಳು. ಬಟ್ಟಲುಗಳಲ್ಲಿದ್ದ ನೀರನ್ನು ಬದಲಾಯಿಸಿದಳು.

ಒಲೆಯ ಮುಂದೆ ಭಯದಿಂದ ಕುಳಿತ ಸೋಮ್ಲಾ. ಕೈಗಳು ಮಾತ್ರ ಯಂತ್ರಗಳಂತೆ ಚಲಿಸುತ್ತಿವೆ. ತೊಟ್ಟಿಕ್ಕಲಾರಂಭಿಸಿದ ಸಾರಾಯಿ  ವಾಸನೆ ಘಾಟು ಬಡಿಯುತ್ತಿದೆ. ತಯಾರು ಮಾಡುವ ಭಟ್ಟಿಗಳನ್ನು ಒಡೆದು ಹಾಕುವುದು ಬಿಟ್ಟರೆ ತಯಾರಿಸಲು ಇಷ್ಟು ಕಲೆಯಡಗಿದೆಯೆಂದು ಗೊತ್ತಿಲ್ಲ. ಸೋಮ್ಲಾನನ್ನು ಮಾತಿಗೆಳೆದು ಮೂಲವನ್ನು ಕೆದಕಬೇಕೆಂದುಕೊಂಡ.  ಸೋಮ್ಲಾ ಮಾತ್ರ ನಿಗೂಢವಾಗಿ ಮಾತನಾಡುತ್ತಿದ್ದಾನೆ.

ಯಾವುದೋ ಮಾತಿಗೆ ಸ್ವಲ್ಪ ಜೋರಾಗಿಯೇ “ಸಾರಾಯಿಯಿಂದಲೇ ಕೊಂಪೆಗಳು ಬಿದ್ದುಹೋಗುತ್ತಿಲ್ಲ ಸೇಟು. ದೊಡ್ಡವರು ಮಾಡುವ ಕೊಂಪೆ ಮುಳುಗುವ ಕೆಲಸಗಳು ಬೇಕಾದಷ್ಟಿವೆ. ಇದನ್ನು ತಯಾರು ಮಾಡಿದ ಮಾತ್ರಕ್ಕೆ ನಾವು ಕೊಂಪೆ ನಿಲ್ಲಿಸಿಕೊಳ್ಳುತ್ತಿದ್ದೀವಾ. ನಿಷೇಧ ಅಂದರೆ ಸಂಪೂರ್ಣವಾಗಿ ನಿಷೇಧಿಸಬೇಕು. ತೊಟ್ಟು ಕಾಣಿಸಿದರೆ ಕಂಬಿ ಹಿಂದೆ ತಳ್ಳಬೇಕು. ಆಗ ನನ್ ಮಕ್ಕಳು ನಮ್ಮೊಂದಿಗೆ ಆಡಿಕೊಳ್ಳುವುದಿಲ್ಲ. ತಯಾರು ಮಾಡುವಂತೆ ನಮ್ಮ ಹತ್ತಿರ ಬರುವುದಿಲ್ಲ. ಈ ಪೊಲೀಸಿನವರಿದ್ದಾರೆ ನೋಡು.. ಮೇಲೆ ಬೇಡವೆನ್ನುತ್ತಾರಾಗಲೀ ಇದೇ ಅವರಿಗೆ ಬದುಕಿನ ದಾರಿ” ಈ ಬಾರಿ ಗಂಟಲು ಆವೇಶದಲ್ಲಿ ನಿಂತಿತು.

ಭೂಲಿಗೆ ಇಷ್ಟವಿದ್ದಂತಿಲ್ಲ. ಏನೂ ಹೇಳಬೇಡವೆನ್ನುವಂತೆ ಕಣ್ಣಿನಲ್ಲಿಯೇ ಸನ್ನೆ ಮಾಡತ್ತಿದ್ದಾಳೆ. ಸೋಮ್ಲಾ ನೋಡಿದರೂ ಮಾತು ಮುಂದುವರಿಸಿದ. ಎದೆಭಾರ ಕಡಿಮೆಯಾಗುತ್ತಿದ್ದಂತಿದೆ. ನೋವು, ಆಕ್ರೋಶವನ್ನು ಹೊರಹಾಕುತ್ತಿದ್ದಾನೆ. ಭೂಲಿ ಕೋಪದಿಂದ ಒಲೆಯ ಕಟ್ಟಿಗೆಯ ಉರಿಯನ್ನು ಒಳಗೆ, ಹೊರಗೆ ಮಾಡುತ್ತಿದ್ದಾಳೆ.

ಮಾತಿನಲ್ಲಿ ಮುಳುಗಿದ್ದ ಸೋಮ್ಲಾ ಒಲೆ ಉರಿ ನೋಡಿಕೊಳ್ಳಲಿಲ್ಲ. ಸಾರಾಯಿ ತೊಟ್ಟು ಎಷ್ಟು ಜೋರಾದರೆ ಉರಿಯನ್ನು ಅಷ್ಟು ತಗ್ಗಿಸಬೇಕು. ಮೇಲೆ ನೀರನ್ನೂ ಬದಲಾಯಿಸಬೇಕು. ಉರಿ ಹೆಚ್ಚಾಯಿತು. ಎಸರ ಕುದಿಯೂ ಹೆಚ್ಚಾಯಿತು. ಆವಿಗೆ ಮೇಲಿನ ಬಟ್ಟಲಿನ ನೀರು ಕೂಡ ಬಿಸಿಯೇರಿತು. ಕೇವಲ ಸೆಕೆಂಡುಗಳಲ್ಲಿ, ಕಣ್ಣು ಮುಚ್ಚಿ ತೆಗೆಯುವುದರಲ್ಲೇ! ಎಸರು ಬುಸ್ಸನೆ ಉಕ್ಕಿತು. ಉಕ್ಕಿದ ಎಸರು ಪೈಪಿನ ಗೊಟ್ಟದಿಂದ ಬಾಟಲಿಗೆ ಸೇರಿ ಬಾಟಲಿನ ಬಣ್ಣ ಬದಲಾಯಿತು.

ಭೂಲಿ ಬಾಯಿ ಬಡಿದುಕೊಳ್ಳುತ್ತ ಓಡಿ ಬಂದಳು. ಸೋಮ್ಲಾನ ಎದೆ ಝಲ್ಲೆಂದಿತು. ಉರಿಯ ಮೇಲೆ ನೀರು ಚೆಲ್ಲಿದ. ಪೈಪನ್ನು ಎಳೆದ. ಲಾಭವಿಲ್ಲ ಬಾಟಲಿ ತುಂಬುವ ಮೊದಲು ಉಕ್ಕಿನ ನೊರೆ ಬೆರೆತು ಬಾಟಲಿ ಸಾರಾಯಿ ಕೆಲಸಕ್ಕೆ ಬಾರದೆಹೋಯಿತು. ಸೋಮ್ಲಾ ಸಣ್ಣಗೆ ಬೆವರತೊಡಗಿದ. ಭೂಲಿ ಅಯ್ಯೋ ಎಂದು ಅಳುತ್ತಲೇ ಎರಡು ಭಟ್ಟಿಗಳ ಪ್ರಮಾಣ ನೋಡುತ್ತಿದ್ದಾಳೆ. ನೀರು, ಉರಿ, ಸೀಸಗಳನ್ನು ಬದಲಾಯಿಸುತ್ತಿದ್ದಾಳೆ. ಸೇಟಿಗೆ ಯಾವುದೋ ನೋವಿನಿಂದ ಹೊಟ್ಟೆ ಕಲುಕಿದಂತಾಯಿತು. ಅರೇ ಎಂದುಕೊಂಡ.

ಸೋಮ್ಲಾ ನೋವಿನಿಂದ “ಸೇಟು ನೋಡಿದೆಯಾ.. ವಾರದ ನಮ್ಮ ಕಷ್ಟ ನೀರಿನಲ್ಲಿ ಹೋಮ ಮಾಡಿದಂತಾಯಿತು. ಇದು ಇನ್ನು ಕೆಲಸಕ್ಕೆ ಬರುವುದಿಲ್ಲ. ಹೇಳಿದೆನಲ್ಲವಾ.. ಇದು ಹಣ್ಣುಗಳ ಸಾರಾಯಿ. ಇದು ಇಳಿಯಲಿಲ್ಲವೆಂದರೂ ಆಸಾಮಿ ನಂಬುವುದಿಲ್ಲ. ನಮಗೇಕೆ ಕೊಡ್ತೀಯೋ ಅಂತ ಮೀಸೆ ತೀಡುತ್ತಾನೆ. ಪೊಲೀಸರನ್ನು ಛೂ ಬಿಡುತ್ತಾನೆ. ನಿನ್ನೊಂದಿಗೆ ಮಾತನಾಡುತ್ತ ಮೈಮರೆತೆ” ಎನ್ನುತ್ತ ಒಲೆಗೆ ನೀರು ಹಾಕಿ ಆರಿಸಿದ.

ಸೇಟಿಗೆ ಆ ಮಾತುಗಳು ತಲೆಗೆ ಹತ್ತುತ್ತಿಲ್ಲ. ಟೈಂ ನೋಡಿಕೊಂಡ. ಒಂದು ದಾಟಿದೆ. ನಾಳೆ ದಾಳಿ ಮಾಡಲು ಸುತ್ತಮುತ್ತಲ ಜಾಗ ನೋಡಿ ಲೆಕ್ಕಹಾಕಿಕೊಳ್ಳುತ್ತಿದ್ದಾನೆ. ಎಲ್ಲೆಲ್ಲಿ ಬೆಂಕಿಯಿದೆ ನೋಡುತ್ತಿದ್ದಾನೆ. ಭೂಲಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. ಸೋಮ್ಲಾ ಸಮಾಧಾನ ಮಾಡುತ್ತಿದ್ದಾನೆ. ಅವಳು ರಾಗ ಜೋರಾಗಿ ತೆಗೆಯುತ್ತಿದ್ದಾಳೆ, ಆದರೂ ಒಲೆಯನ್ನು ಮರೆಯುತ್ತಿಲ್ಲ. ಅಳುತ್ತಿರುವ ಅವಳನ್ನು ನೋಡಿ ಸೇಟಿಗೆ ಬೇಸರವಾಯಿತು.

‘ತಂದೆಯದು ತಪ್ಪು ಅವಳೇನು ತಪ್ಪು ಮಾಡಿದ್ದಾಳೆ. ಕತ್ತೆ ನನ್ ಮಗ ಹೆಣ್ಣು ಮಗಳ ಕೈಲೇ ಸಾರಾಯಿ ಮಾಡಿಸುತ್ತಾನೆ. ತಾಂಡಾಗಳಲ್ಲಿ ಎಲ್ಲಿಯೂ ತೊಟ್ಟು ಸಾರಾಯಿ ಕುದಿಯಬಾರದು.. ಬೆಳಗಾಗಲಿ’ ಎಂದುಕೊಂಡು “ಭೂಲಿ” ಕರೆದ.

ನೋಡಲಿಲ್ಲ. ಮತ್ತೊಮ್ಮೆ ಕರೆದ. ನೋಡಿದಳು ಆದರೆ ಮಾತನಾಡಲಿಲ್ಲ. ಇನ್ನೊಮ್ಮೆ ಕರೆದ. ಕಣ್ತುಂಬ ನೀರು, ಮೂತಿ ಮುಚ್ಚಿಕೊಂಡು ಮುಖ ತಿರುಗಿಸಿದಳು. ಸೋಮ್ಲಾನೇ ಭಯದಿಂದ ‘ಏನು ಸೇಟು.. ಏನು ಬೇಕು’ ಎಂದ. ‘ಇವಳಿಗಿಷ್ಟು ಕೊಬ್ಬಾ..?’ ಎಂದುಕೊಂಡ ಸೇಟು ಮಾತು ಬದಲಿಸಿ “ನೀರು” ಕೇಳಿದ.

ಸೋಮ್ಲಾ ತಂಬಿಗೆ ತುಂಬಾ ನೀರು ತಂದುಕೊಟ್ಟು ‘ಆ ಮನುಷ್ಯ ಒಳ್ಳೆಯವನಲ್ಲ ಸೇಟು. ಅವಳ ಭಯ ಅದೇ’ ಎಂದ. ನಂತರ ಇಬ್ಬರೂ ಕೆಲಸದಲ್ಲಿ ಮುಳುಗಿದರು. ಕರೆದರೂ ಮಾತನಾಡಲಿಲ್ಲ. ಸೇಟಿಗೆ ನಿದ್ದೆ ಬರುತ್ತಿದೆ. ಮಲಗಿದರೆ ಸಾರಾಯಿ ಎಲ್ಲಿ ಮಾಯ ಮಾಡುವರೋ, ಏನು ಮಾಡುತ್ತಾರೋ ಎಂದು ಭಯ. ದೂರ ಹೋಗಿ ಸುತ್ತಲೂ ನೋಡಿದ. ಕುದಿಯುತ್ತಿದ್ದ ಭಟ್ಟಿಗಳ ಉರಿ ಕಡಿಮೆಯಾಗಿ ಅಲ್ಲಲ್ಲಿ ಅಸ್ಪಷ್ಟವಾಗಿ ಕಾಣುತ್ತಿವೆ.

‘ನನ್ ಮಕ್ಳು ಸ್ವಲ್ಪವೂ ಭಯವಿಲ್ಲದೆ ಹೇಗೆ ಮಾಡುತ್ತಿದ್ದಾರೆ.. ಬೆಳಗಾಗಲಿ’ ಇನ್ನೊಮ್ಮೆ ಹಲ್ಲು ಕಚ್ಚಿ ಮೊಬೈಲ್ ತೆಗೆದ. ಎಸ್ಸೈಗಳಿಗೆ ಫೋನ್ ಮಾಡಿ ಅಲರ್ಟ್ ಮಾಡಿದ. ಎಲ್ಲೆಲ್ಲಿ ಕಾವಲು ಹಾಕಬೇಕೋ ಸೂಚಿಸಿದ. ತಾನು ಯಾವ ದಾರಿಯಲ್ಲಿ ಬರುವುದೆಂದು ತಿಳಿಸಿ ಮರದ ಕೆಳಗೆ ಬಂದು ಕುಳಿತ.

ಅರಿವಿಲ್ಲದೆ ತೂಕಡಿಕೆ ಬಂದಿತು. ಸೋಮ್ಲಾ ಕರೆಯುವವರೆಗೂ ಎಚ್ಚರವಾಗಲಿಲ್ಲ. ಅಷ್ಟುಹೊತ್ತಿಗೆ ಬೆಳಗಾಗಿದೆ. ಇಬ್ಬರ ಕೈಯಲ್ಲಿ ಗೋಣಿ ಚೀಲಗಳಿವೆ. ಕೇಳುವ ಮೊದಲೇ ‘ಇದು ಸಾರಾಯೇ ಸೇಟು. ಪಾಕೆಟ್‌ಗಳಲ್ಲಿ ಕಟ್ಟಿ ಗೋಣಿ ಚೀಲಗಳಲ್ಲಿ ತುಂಬಿದ್ದೇವೆ’ ಎಂದ.

ಸೋಮ್ಲಾ ಮನೆಗೆ ಬಂದು ಹಳೆಯ ಸ್ಕೂಟರ್ ಹೊರಗೆ ತೆಗೆಯುತ್ತ, “ಇದನ್ನು ಅಬಕಾರಿಯವರು ನಾಲ್ಕು ಬಾರಿ ಹಿಡಿದು ಹರಾಜಿಗಿಟ್ಟರು. ಬೆಲೆ ಏರಿಸಿ ನಾನೇ ಕೊಂಡುಕೊಂಡೆ. ಇದು ನನ್ನದೇ ಎಂದು ಪೊಲೀಸರಿಗೂ ಗೊತ್ತು. ಮಾರುತ್ತಾರೆಂದು ನನಗೂ ಗೊತ್ತು” ಎಂದ.

‘ಮತ್ತೆ ಉಳಿದವರು ನಿನ್ನ ಜೊತೆ ಬರುವುದಿಲ್ಲವಾ’ ಕೇಳಿದ ಸೇಟು. ಎಲ್ಲರೂ ಚೌಕಿ ರಸ್ತೆಯಲ್ಲಿ ಸೇರುತ್ತೇವೆ “ಹೇಗೂ ನಿಮ್ಮ ಗಾಡಿ ಓಡುವುದಿಲ್ಲ. ಅಷ್ಟುದೂರ ನಡೆಯಲಾರಿರಿ. ನನ್ನ ಜೊತೆ ಚೌಕಿ ರಸ್ತೆಗೆ ಬನ್ನಿ.. ಅಲ್ಲಿ ಮೆಕ್ಯಾನಿಕ್ ಇರುತ್ತಾನೆ. ರಿಪೇರಿ ಮಾಡುತ್ತಾನೆ” ಎಂದ ಸೋಮ್ಲಾ.

‘ಅಬ್ಬಾ.. ನನ್ನ ಕೆಲಸ ಮತ್ತಷ್ಟು ಸಲೀಸು ಮಾಡುತ್ತಿದ್ದೀಯ ಕಣೋ.. ಚೌಕಿ ರಸ್ತೆಯಲ್ಲೇ ಪೊಲೀಸರನ್ನು ಕಾವಲಿರುವಂತೆ ಹೇಳಿದ್ದೇನೆ..’ ಎಂದುಕೊಂಡು ನಗುತ್ತ ಗಾಡಿ ಹತ್ತಿದ ಸೇಟು.

ಭೂಲಿ ಎರಡು ಚೀಲಗಳನ್ನು ಕಾಲಿನ ಬಳಿ ಹಾಕಿದಳು. ಆಕೆಯ ಕಣ್ಣಂಚಿನಲ್ಲಿ ಇನ್ನೂ ತೇವ ಆರಿಲ್ಲ. ಮುಖದಲ್ಲಿ ಭಯ. ನಿದ್ದೆಯಿಲ್ಲದೆ ಕಣ್ಣು ಊದಿಕೊಂಡಿದೆ. ಸ್ಕೂಟರ್ ಹೊರಟಿತು. ಸ್ವಲ್ಪ ದೂರ ಹೋದಮೇಲೆ ‘ಬಾಪೂ’ ಎಂದು ಕರೆದ ಸೋಮ್ಲಾ. ಆ ಕೂಗು ಹೊಸದಾಗಿದೆ. “ಗಾಯಕ್ಕೇ ಔಷಧಿ ಹಚ್ಚಬೇಕು. ಒಡೆದ ಕಡೆಯೇ ಕಟ್ಟೆ ದುರಸ್ತಿ ಮಾಡಬೇಕು. ಈ ಕುಡಿತ ಸಂಪೂರ್ಣವಾಗಿ ನಿಷೇಧ ಮಾಡಿದರೆ ಮೊದಲು ಖುಷಿ ಪಡುವವರು ನಾವೇ ಅಯ್ಯಾ..” ಎಂದ.

ಆಗಲೇ ಸ್ಕೂಟರ್ ನಿಂತಿತು. ಸೋಮ್ಲಾ ಇಳಿದ. ಅನುಮಾನದಿಂದಲೇ ಸೇಟು ಇಳಿದ. ಸೋಮ್ಲಾ ಹೇಳುತ್ತಲೇ ಇದ್ದಾನೆ. “ಒಮ್ಮೆ ಸಾರಾಯಿ ಕೇಸಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಗ ನನ್ನನ್ನು ಬಿಡಿಸುತ್ತೇನೆಂದು ಒಬ್ಬ ನನ್ನ ಮಗಳನ್ನು ಬಲಾತ್ಕಾರ ಮಾಡಿದ ಅಯ್ಯಾ.. ಆಗಲೇ ಅವಳಿಗೆ ಮಾತು ಹೋಯಿತು. ಕೇಕೆ, ಸೈಗೆ ಬಿಟ್ಟರೆ ಮಾತು ಬರುವುದಿಲ್ಲ” ಸೋಮ್ಲಾ ಕಣ್ತುಂಬಿದೆ.

“ಅದೆಲ್ಲಾ ನನಗೇಕೆ ಹೇಳುತ್ತಿದ್ದೀಯ. ನನ್ನನ್ನು ಚೌಕಿ ರಸ್ತೆಯಲ್ಲಿ  ಇಳಿಸು ಹೋಗಬೇಕು” ಹೇಳಿದ ಸೇಟು. ಕಣ್ಣು ಒರೆಸಿಕೊಳ್ಳುತ್ತ “ಎಕ್ಸೈಂಜ್ ಸ್ಟೇಷನ್ ಈ ಕಡೆಯಿಂದ ಹೋದರೆ ಹತ್ತಿರವಾಗುತ್ತದೆ ಅಯ್ಯಾ” ಸೋಮ್ಲಾ ಪಕ್ಕದ ದಾರಿಯನ್ನು ತೋರಿಸುತ್ತ ಹೇಳಿದ.

ನವೀನ್ ತಲೆ ಗಿರ್ರ್.. ಎಂದಿತು. ಪಕ್ಕದಲ್ಲಿಯೇ ಗುಡುಗು, ಮಿಂಚು ಬಿದ್ದಂತೆೆ ಬೆಚ್ಚಿದನು. ‘ನಾನು ನಿನಗೆ ಗೊತ್ತಾ..?’ ಆಶ್ಚರ್ಯದಿಂದ ಕೇಳಿದ. “ಗೊತ್ತು ಅಯ್ಯಾ.. ನನ್ನ ಅನುಭವದಲ್ಲಿ ಎಷ್ಟು ಜನರನ್ನು ನೋಡಿಲ್ಲ”ಎಂದು ವೈರಾಗ್ಯದಿಂದ ಹೇಳಿದ ಸೋಮ್ಲಾ.

ನವೀನ್ ತಬ್ಬಿಬ್ಬಾಗಿ ಏನೋ ಕೇಳಹೊರಟಾಗ “ಗೊತ್ತು ಅಯ್ಯಾ. ಎಲ್ಲ ಗೊತ್ತಿದ್ದೇ ಹಿಂದೆ ಸುತ್ತಾಡಿಸಿಕೊಂಡಿದ್ದೇನೆ. ನಾನು ಇಲ್ಲವೆಂದಿದ್ದರೆ ನೀವು ಮಾತ್ರ ಸುಮ್ಮನೆ ಹೋಗುತ್ತಿದ್ದಿರಾ. ರಾತ್ರೋ ರಾತ್ರಿ ತಾಂಡಾಗಳಿಗೆ ಬರುತ್ತೀರ. ನಮ್ಮ ನಾಯಿಗಳು ನಿಮ್ಮನ್ನು ಹಿಡಿದುಕೊಡುತ್ತಿದ್ದವು. ನಮ್ಮ ಜನ ಬೆಳಗಾಗುವವೇಳೆಗೆ ಮೂಳೆ ಪುಡಿಗಟ್ಟಿ ಸುಳಿವು ಕೂಡ ಸಿಗದಂತೆ ನಿಮ್ಮಂತಹವರನ್ನು ಮಾಯ ಮಾಡುತ್ತಾರೆ. ಸತ್ತರೆ ಸಾಯಲಿ ಎಂದುಕೊಂಡೆ. ಆದರೆ ಮನಸೊಪ್ಪಲಿಲ್ಲ ಅಯ್ಯಾ..” ಮಾತನಾಡುವುದನ್ನು ನಿಲ್ಲಿಸಿ ನವೀನ್‌ನತ್ತ ನೋಡಿದ ಸೋಮ್ಲಾ. ನವೀನ್ ದಿಗ್ಭ್ರಾಂತನಾಗಿದ್ದಾನೆ.

“ನೀವು ಬಂದಿರುವ ಸಮಯ ಸರಿಯಿಲ್ಲ ಅಯ್ಯಾ. ನಿನ್ನೆ ಅಮಾವಾಸ್ಯೆ. ಸಾರಾಯಿ ಕಾಂಟ್ರಾಕ್ಟರುಗಳು ಜನರೊಂದಿಗೆ ತಾಂಡಾಗಳ ಸುತ್ತ ಕಾವಲಿದ್ದಾರೆ. ನಿಮಗೆ ಗೊತ್ತಿಲ್ಲ. ಹಿಂದಿನ ವರ್ಷ ಹೀಗೇ ಬಂದ ಇಬ್ಬರು ಎಸ್ಸೈಗಳನ್ನು ಮಾಯ ಮಾಡಿದರು. ಆಗಿನಿಂದ ರಾಜು ಸಾರ್ ಈ ಕಡೆ ತಲೆ ಹಾಕಿಲ್ಲ” ಎಂದ.

ನಿಂತಲ್ಲಿಯೇ ಭೂಮಿ ನಡುಗುತ್ತಿರುವಂತಿದೆ ನವೀನನಿಗೆ. ‘ಇಲ್ಲಿ ನೀನಾದರೂ ನಾನಾದರೂ.. ನಾವು ನಾವಲ್ಲ ಅಯ್ಯಾ. ನಮ್ಮ ಜೀವನ ನಮ್ಮ ಕೈಲಿಲ್ಲ. ಅಲ್ಲವೆಂದು ಎದುರು ಬಿದ್ದರೆ ಕಥೆ ಮುಗಿದಂತೆಯೇ” ನೋವಿನಿಂದ ಹೇಳಿದ ಸೋಮ್ಲಾ. ನವೀನ್ ಬಾಯಿ ಒಣಗುತ್ತಿದೆ. ‘ಅಷ್ಟೇಕೆ ಅಯ್ಯಾ.. ನಿನ್ನೆ ನೀವು ಪೊಲೀಸರನ್ನು ಚೌಕಿ ರಸ್ತೆಗೆ  ಬರಲು ಹೇಳಿರುವ ವಿಚಾರವೂ ನಮಗೆ ನಿನ್ನೆಯೇ ಗೊತ್ತಾಯಿತು. ಅದಕ್ಕೇ ಅಡ್ಡೆ ಬದಲಾಯಿಸಿದ್ದೇವೆ..’ ಗಾಡಿಗೆ ಸ್ಟ್ಯಾಂಡ್ ಹಾಕಿ ನಿಂತ ಸೋಮ್ಲಾ. ಕಣ್ತುಂಬಾ ನೀರು.

“ಈಗ ನಿಮ್ಮನ್ನು ಯಾರೂ ಏನೂ ಮಾಡಲಾಗುವುದಿಲ್ಲ ಅಯ್ಯಾ.. ನನ್ನನ್ನು ಹಿಡಿದುಕೊಳ್ಳಬಹುದು.. ಕೇಸು ಹಾಕಬಹುದು. ಆದರೆ ಒಂದು ಮಾತು. ಇನ್ನೆಂದೂ ಇಂತಹ ಸಾಹಸ ಮಾಡಬೇಡಿ ಅಯ್ಯಾ..” ಎಂದ ಸೋಮ್ಲಾ. ನವೀನ್ ನಿಂತಲ್ಲಿಯೇ ನಡುಗುತ್ತಿದ್ದ!

‍ಲೇಖಕರು Avadhi

December 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: