”ಕತೆಗಳ ಕ್ಯಾರವಾನಿನಲ್ಲಿ ಪ್ರವಾಸ ಹೊರಟಾಗ..”

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’

ಓರ್ವ ಸರಾಸರಿ ಭಾರತೀಯನಿಗೂ, ಪ್ರವಾಸಕ್ಕೂ ಇರುವ ಸಂಬಂಧ ಅಷ್ಟಕ್ಕಷ್ಟೇ.

ದೇಶ ಯಾವುದೇ ಆಗಿರಲಿ. ಶ್ರೀಮಂತರು ನಡೆಸುವ ಪ್ರವಾಸಗಳ ಶೈಲಿಯೇ ಬೇರೆಯಿರುತ್ತದೆ. ಆದರೆ ಸಾಮಾನ್ಯರ ಪ್ರವಾಸದ ಬಗ್ಗೆ ನನಗಿರುವ ಕುತೂಹಲವೇ ಹೆಚ್ಚು. ದಿಲ್ಲಿಯ ಪಹಾಡ್ ಗಂಜಿನಲ್ಲಿ, ಗುರುಗ್ರಾಮ ಸಮೀಪದ ಮಹಿಪಾಲಪುರ ಪ್ರದೇಶಗಳಲ್ಲಿರುವ ಅಗ್ಗದ ಹೋಟೆಲ್ ಗಳಲ್ಲಿ ಬೀಡುಬಿಟ್ಟಿರುವ ವಿದೇಶಿ ಪ್ರವಾಸಿಗರನ್ನೊಮ್ಮೆ ಮಾತನಾಡಿಸಿ ನೋಡಬೇಕು.

ಪ್ರವಾಸವೊಂದಕ್ಕೆ ಬೇಕಿರುವ ಸಿದ್ಧತೆ, ಬಜೆಟ್ಟು, ದಾಖಲಾತಿಗಳು, ಎಚ್ಚರಿಕೆ.. ಹೀಗೆ ಬಹುತೇಕ ಎಲ್ಲವೂ ಅವರ ಬೆನ್ನುಗಳಲ್ಲಿರುವ ಭಾರದ ಬ್ಯಾಕ್-ಪ್ಯಾಕ್ ಗಳಲ್ಲಿರುವಂತೆ ಮಟ್ಟಸವಾಗಿರುತ್ತದೆ. ಈ ಮಂದಿಗೆ ಪ್ರವಾಸವೆಂದರೆ ದೊಡ್ಡದೊಂದು ಪ್ರಾಜೆಕ್ಟ್ ಇದ್ದಂತೆ. 

ಭಾರತದಂತಹ ಸಂಕೀರ್ಣ ದೇಶವೊಂದಕ್ಕೆ ಬರುವ ವಿದೇಶಿ ಮಹಿಳಾ ಪ್ರವಾಸಿಯೊಬ್ಬಳು ರಾಯಭಾರ ಕಚೇರಿಯ ವಿಳಾಸದಿಂದ ಹಿಡಿದು, ತಾನು ಹೋಗಲಿರುವ ಪ್ರದೇಶದ ಸ್ಥಳೀಯರ ಸಂಸ್ಕೃತಿಯ ಬಗ್ಗೆ ಒಂದಷ್ಟು ತಿಳಿದುಕೊಂಡೇ ಹೋಗಿರುತ್ತಾಳೆ. ಆಕೆ ಹಳೇದಿಲ್ಲಿಯಲ್ಲಿ ತಿರುಗುತ್ತಿದ್ದರೆ ತನ್ನನ್ನು ನೋಟದಲ್ಲೇ ಅಳೆಯುವ ಸ್ಥಳೀಯರ ಕಣ್ಣುಗಳ ಕನಿಷ್ಠ ಅರಿವು ಆಕೆಗಿರುತ್ತದೆ. ಹೀಗಾಗಿ ಇಂತಹ ಪ್ರದೇಶಗಳಲ್ಲಿ ಎಂತಹ ದಿರಿಸು ಧರಿಸಿದರೆ ಸೂಕ್ತ, ಇನ್ಯಾವ ಎಚ್ಚರಿಕೆಗಳು ಅಗತ್ಯ ಇತ್ಯಾದಿಗಳ ಬಗ್ಗೆ ತಿಳಿದುಕೊಂಡೇ ಆಕೆ ಹೊರಟಿರುತ್ತಾಳೆ.

‘ಗೋರಾ’ ‘ಫಿರಂಗೀ’ ಎಂಬಿತ್ಯಾದಿ ಅಡ್ಡ ಹೆಸರುಗಳಿಂದ ನಮ್ಮನ್ನು ನಿರಾತಂಕವಾಗಿ ಬೋಳಿಸುತ್ತಾರೆ ಎಂಬ ಅರಿವಿರುವ ಕಾರಣದಿಂದ, ಆಟೋದಲ್ಲಿ ಪ್ರಯಾಣಿಸುವುದಾದರೆ ಕಿಲೋಮೀಟರಿಗೆ ಸುಮಾರು ಎಷ್ಟಾಗಬಹುದು ಎಂಬ ಅಂದಾಜಿಟ್ಟುಕೊಂಡೇ ವಿದೇಶೀ ಯುವಕನೊಬ್ಬ ತಿರುಗಾಡಲು ಹೊರಟಿರುತ್ತಾನೆ. ಇವೆಲ್ಲಾ ಪ್ರವಾಸಗಳ ಅಗತ್ಯವೂ ಹೌದು.

ವಿದೇಶಿ ಪ್ರವಾಸಿಗರಿಗೆ ಹೋಲಿಸಿದರೆ ಭಾರತೀಯ ಪ್ರವಾಸಿಗರಲ್ಲಿ ಇಂತಹ ಸಿದ್ಧತೆಗಳು ಕಾಣಸಿಗುವುದು ಕಮ್ಮಿ. ನಮ್ಮ ಪ್ರೇಕ್ಷಣೀಯ ಸ್ಥಳಗಳಲ್ಲಿ ಸ್ಥಳ ಮಹಾತ್ಮೆಗಳನ್ನು ಕರಪತ್ರಗಳಲ್ಲಿ ಹಾಕಿ ಉಚಿತವಾಗಿ ಹಂಚಿದರೂ ಹೆಚ್ಚಿನವರು ಅದರತ್ತ ಕಣ್ಣೆತ್ತಿಯೂ ನೋಡುವುದಿಲ್ಲ. ಹೊಸ ಜಾಗಗಳಲ್ಲಿ ಆಯಾ ಸ್ಥಳದ ಆಹಾರ-ವಿಹಾರಗಳನ್ನು ಸವಿಯುವುದನ್ನು ಬಿಟ್ಟು ಇಟಲಿಗೆ ಹೋದರೂ ಇಡ್ಲಿ-ದೋಸೆ ಸಿಗುತ್ತದೋ ಎಂದು ಕಾಯುತ್ತಿರುತ್ತಾರೆ.

ಇನ್ನು ಬಹಳಷ್ಟು ಮಂದಿ ತಾವು ಪ್ರವಾಸಕ್ಕೆ ಬಂದಿದ್ದೇವೆಯೆಂಬುದನ್ನು ಮರೆತು, ತಮ್ಮ ಹೋಟೇಲು ರೂಮುಗಳಲ್ಲೇ ಟಿವಿಯೆದುರು ಕೂತು ಕಾಲಕಳೆಯುವುದೂ ಇದೆ. ಅಂತೂ ಬಳಸಿದ ಪ್ಲಾಸ್ಟಿಕ್ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು, ಆಯ್ದ ಜಾಗಗಳಲ್ಲಿ ನೂರಾರು ಫೋಟೋ ಹೊಡೆಸಿಕೊಂಡು, ಹಾಕಬೇಕಿರುವ ಕಡೆ ಅಪ್ಲೋಡ್ ಮಾಡಿಬಿಟ್ಟು, ಬರುವ ಪ್ರತಿಕ್ರಿಯೆಗಳಿಗೆ ಕಾದುಕೊಂಡು ಕುಳಿತುಬಿಟ್ಟರೆ ಬಹುತೇಕ ಭಾರತೀಯರ ಪ್ರವಾಸವು ಅಲ್ಲಿಗೆ ಸಾರ್ಥಕ.

ಇನ್ನು ವಿಘ್ನ ಸಂತೋಷಿಗಳ ಒಂದು ಅಗೋಚರ ಪಡೆಯೂ ಇದೆ. ಈ ಗುಂಪು ಚಿಕ್ಕದೊಂದು ಖಾಲಿ ಜಾಗ ಸಿಕ್ಕುಬಿಟ್ಟರೆ ಅಲ್ಲಿ ಏನಾದರೊಂದು ಗೀಚಿಯೇ ಹೊರಬರುತ್ತದೆ. ಈಗಾಗಲೇ ಇರುವ ಶಾಸನಗಳು ಕಮ್ಮಿಯೇನೋ ಎಂಬಂತೆ ಆಧುನಿಕ ಪ್ರೇಮಿಗಳು ಗೀಚಿ ಬರುವ ತಮ್ಮ ಹೆಸರುಗಳು, ಕೆಲಸಕ್ಕೆ ಬಾರದ ಅಪರಿಚಿತ ಫೋನ್ ನಂಬರ್ ಗಳು.. ಇತ್ಯಾದಿಗಳೆಲ್ಲಾ ಈ ಬಗೆಯ ಪ್ರವಾಸಿಗರು ವಿನಾಕಾರಣ ಕರುಣಿಸುವ ಸಂಗತಿಗಳು. ಇರಲಿ, ಲೋಕೋ ಭಿನ್ನರುಚಿಃ!

ಅಂದಹಾಗೆ ದಿಲ್ಲಿಯು ಸುಂದರ ಉದ್ಯಾನಗಳ ನಗರಿಯೂ ಹೌದು. ಕೊರೊನಾ ಮುಂಚಿತ ಕಾಲದಲ್ಲಿ ದಿಲ್ಲಿಯಲ್ಲಿರುವ ಬಹುತೇಕ ಉದ್ಯಾನಗಳು ಪ್ರೇಮಿಗಳ ಪಕ್ಕಾ ಅಡ್ಡಾಗಳಾಗಿ, ಪೊಲೀಸರನ್ನು ಸದಾಕಾಲ ವ್ಯಸ್ತರಾಗಿರಿಸಿದ್ದವು. ಅಲ್ಲಿಗೆ ದಿಲ್ಲಿಯ ಹತ್ತಾರು ಉದ್ಯಾನಗಳು ಕುಖ್ಯಾತಿಯನ್ನು ಪಡೆದಿದ್ದೂ ಆಯಿತು. ಇದು ಯಾವ ಮಟ್ಟಿಗೆ ಹೋಗಿದೆಯೆಂದರೆ ಮಟ್ಟಸವಾಗಿಯೂ, ವಿಶಾಲವಾಗಿಯೂ ಇರುವ ಕೆಂಪುಕೋಟೆಯಂತಹ ಪ್ರದೇಶಗಳು ಹೀಗಾಗದಿರಲಿ ಎಂಬ ಪ್ರಾಮಾಣಿಕ ಕಾಳಜಿಯನ್ನು ಅಲ್ಲಿಯ ವ್ಯವಸ್ಥಾಪಕ ಮಂಡಳಿಗಳು ಹಾಗಿರಲಿ; ಸ್ವತಃ ಅಲ್ಲಿ ನೇಮಿಸಲಾಗಿರುವ ಪೇದೆಗಳಲ್ಲೇ ನಾವಿಂದು ಕಾಣಬಹುದು. ಹೀಗಾಗಿ ಇಲ್ಲೆಲ್ಲಾ ಸೂರ್ಯಾಸ್ತವಾಗುವುದರೊಳಗೆ ಪ್ರವಾಸಿಗರ ಓಡಾಟಕ್ಕೆ ಮಂಗಳ ಹಾಡಿಯಾಗಿರುತ್ತದೆ.

ಇನ್ನು ಟೂರಿಸ್ಟ್ ಗೈಡ್ ಗಳಿಗೂ ಕೂಡ ವಿದೇಶಿ ಪ್ರವಾಸಿಗರೇ ಹೆಚ್ಚು ಲಾಭದಾಯಕ. ಸ್ಥಳಪುರಾಣಗಳ ಬಗ್ಗೆ ಭಾರತೀಯ ಪ್ರವಾಸಿಗರಿಗಿರುವ ಆಸಕ್ತಿಯು ಇವರಿಗಿರುವ ಆಸಕ್ತಿಗೆ ಹೋಲಿಸಿದರೆ ಏನೇನೂ ಅಲ್ಲ. ಇನ್ನು ಈ ದೇಶಕ್ಕೆ ಹೊಸಬನಾಗಿರುವ ಪ್ರವಾಸಿಗನೊಬ್ಬ ಕೊಂಚ ಮುಗ್ಧನಾಗಿದ್ದರಂತೂ ಮುಗಿದೇ ಹೋಯಿತು. ಇತ್ತ ಗೈಡ್ ಧೂರ್ತನಾಗಿದ್ದರೆ ಆತನಿಗೂ, ಆತನೊಂದಿಗೆ ತಳುಕು ಹಾಕಿಕೊಂಡಿರುವ ಇತರೆ ಚಿಕ್ಕಪುಟ್ಟ ಉದ್ಯಮಿಗಳಿಗೂ ಅದೊಂದು ಪುಟ್ಟ ಜಾಕ್-ಪಾಟ್.

ಖ್ಯಾತ ಯೂ-ಟ್ಯೂಬರ್ ಒಬ್ಬ ತನಗಾದ ಇಂಥದ್ದೊಂದು ಅನುಭವವನ್ನು ತನ್ನ ಚಾನೆಲ್ಲಿನಲ್ಲಿ ವ್ಯವಸ್ಥಿತವಾಗಿ ದಾಖಲಿಸಿದ್ದ. ಈ ಘಟನೆಯು ನಡೆಯುವುದು ಮುಂಬೈ ಮಹಾನಗರಿಯಲ್ಲಿ.

ಎಂದಿನಂತೆ ಭಾರತೀಯರ ಪಾಲಿಗೆ ಆತನೊಬ್ಬ ‘ಗೋರಾ’ (ಬಿಳಿಯ) ಅತಿಥಿ. ಇಲ್ಲಿ ಕಾರ್ಯಕ್ರಮದ ನಿರೂಪಕ ಸ್ವತಃ ರಹಸ್ಯ ಕ್ಯಾಮೆರಾವೊಂದನ್ನು ಇಟ್ಟುಕೊಂಡು ಇಡೀ ಪ್ರವಾಸವನ್ನು ದಾಖಲಿಸಿಕೊಳ್ಳುತ್ತಿರುತ್ತಾನೆ. ಈ ಬಗ್ಗೆ ತಿಳಿದಿರದ ಟೂರಿಸ್ಟ್ ಗೈಡ್ ಮಹಾಶಯನೊಬ್ಬ ನಿರೂಪಕನನ್ನು ಪುಸಲಾಯಿಸಿ ಟ್ಯಾಕ್ಸಿಯೊಂದರಲ್ಲಿ ಕರೆದುಕೊಂಡು ಹೋಗುತ್ತಾನೆ. ಮುಂದೆ ಟ್ಯಾಕ್ಸಿಯು ನೇರವಾದ ದಾರಿಯನ್ನು ಬಿಟ್ಟು ಅಚಾನಕ್ಕಾಗಿ ಅಂಕುಡೊಂಕಾದ ಓಣಿಗಳಲ್ಲಿ ಸಾಗತೊಡಗುತ್ತದೆ. ನಮ್ಮ ನಿರೂಪಕನಿಗೆ ಸವಾಲಿನ ಕ್ಷಣಗಳು ಆರಂಭವಾಗುವುದೇ ಆಗ.

ಹೀಗೆ ಇಕ್ಕಟ್ಟಾದ ಗಲ್ಲಿಯೊಳಗೆ ನುಗ್ಗುವ ಟ್ಯಾಕ್ಸಿಯು ಜನಜಂಗುಳಿಯೊಂದರ ಗಲಾಟೆಯಿಂದಾಗಿ ನಿಲ್ಲುವ ಪರಿಸ್ಥಿತಿಯು ಬಂದೊದಗುತ್ತದೆ. ಭೂತೋಚ್ಚಾಟನೆಯ ವಿಧಿಯಂತೆ ಕಾಣುವ ಆ ಗುಂಪನ್ನು ಕಂಡು ಕಂಗಾಲಾಗುವ ಗೈಡ್, ಇದೊಂದು ಸ್ಥಳೀಯ ಸಂಸ್ಕೃತಿಯೆಂದು ಹೇಳುತ್ತಲೇ, ಇಲ್ಲಿಂದ ಪಾರಾಗಬೇಕಾದರೆ ಇಂತಿಷ್ಟು ಹಣವನ್ನು ಮಂದಿಗೆ ಕೊಡಲೇಬೇಕೆಂದು ನಾಟಕವಾಡುತ್ತಾ ನಿರೂಪಕನ ಜೇಬು ಖಾಲಿಮಾಡುತ್ತಾನೆ. ಮುಂದೆ ಟ್ಯಾಕ್ಸಿಯು ಪೂರ್ವ ನಿಗದಿತ ಹೋಟೆಲಿನತ್ತ ಸಾಗದೆ ಗೈಡ್ ಶಿಫಾರಸ್ಸು ಮಾಡುತ್ತಿರುವ, ಹೋಟೆಲ್ ಒಂದರ ಬಳಿ ಬಂದು ನಿಲ್ಲುತ್ತದೆ. ಇವೆಲ್ಲಾ ಸಾಲದ್ದೆಂಬಂತೆ ಗೈಡ್ ಕೊನೆಯದಾಗಿ ಕೇಳುತ್ತಿರುವ ದುಬಾರಿ ಶುಲ್ಕ ಬೇರೆ.

ಇವೆಲ್ಲದರಿಂದ ಸಹಜವಾಗಿಯೇ ಕೋಪಗೊಳ್ಳುವ ನಮ್ಮ ಸಾಕ್ಷ್ಯಚಿತ್ರ ನಿರೂಪಕ ಈ ಹಂತದಲ್ಲಿ ಗೈಡ್ ಮಹಾಶಯನನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ನಿನ್ನ ಕರಾಮತ್ತುಗಳೆಲ್ಲವೂ ಈ ಕ್ಯಾಮೆರಾದಲ್ಲಿ ಸೆರೆಯಾಗಿವೆ ನೋಡು ಎಂದು ಅವನನ್ನು ಸಣ್ಣಗೆ ಬೆದರಿಸುತ್ತಾನೆ. ಮೊದಲ ಕೆಲ ನಿಮಿಷಗಳ ಕಾಲ ಈ ಅನಿರೀಕ್ಷಿತ ಆಘಾತದಿಂದಾಗಿ ಮಾತು ಸತ್ತವನಂತಾಗುವ ಗೈಡ್, ನಂತರ ಕೊಂಚ ಚೇತರಿಸಿಕೊಂಡು ತಾನು ಹೆಚ್ಚಿನ ಸಂಪಾದನೆಗಾಗಿ ವಿದೇಶಿ ಪ್ರವಾಸಿಗರನ್ನು ದೋಚುವುದು ಸತ್ಯವೆಂದು ಪೆಚ್ಚಾಗಿ ಹಲ್ಲುಗಿಂಜುತ್ತಾ ಒಪ್ಪಿಕೊಳ್ಳುತ್ತಾನೆ. ಇನ್ನು ಮುಂಬೈಯಲ್ಲಿ ಅಪರಾಧಿಗಳ ತಂಡವೊಂದು ಆಡಿಷನ್ ಹೆಸರು ಹೇಳಿ ನಮ್ಮ ಕಾರ್ಯಕ್ರಮ ನಿರೂಪಕನನ್ನು ವ್ಯವಸ್ಥಿತವಾಗಿ ದೋಚುವುದನ್ನೂ ಕೂಡ ಆತನ ರಹಸ್ಯ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಆ ಮಟ್ಟಿಗಂತೂ ಆತನದ್ದು ಸಾವಿನೊಂದಿಗೆ ಸರಸ.

ಒಮ್ಮೆ ರಾಜಸ್ಥಾನದ ಜೈಪುರದಲ್ಲಿ ವಿಚಿತ್ರ ಗೈಡ್ ಒಬ್ಬನನ್ನು ನಾನು ಭೇಟಿಯಾಗಿದ್ದೆ. ಅಲ್ಲಿಯ ದೈತ್ಯದೇಹಿ ರಾಜನೊಬ್ಬನ ಬಗ್ಗೆ ವರ್ಣಿಸುತ್ತಾ ಹೋಗುತ್ತಿದ್ದ ಆತನ ಕತೆಗಳು ಆ ರಾಜನ ಲೈಂಗಿಕ ಸಾಹಸಗಳ ಸುತ್ತಲೇ ಗಿರಕಿ ಹೊಡೆಯುತ್ತಿದ್ದವು. ಇದು ನೀರಸವೆನಿಸುವ ಇತಿಹಾಸಕ್ಕೆ ಮಸಾಲಾಭರಿತ ಅಂಶಗಳನ್ನು ಸೇರಿಸಿ, ಪ್ರವಾಸಿಗರನ್ನು ಸೆಳೆಯುವ ತಂತ್ರವೂ ಆಗಿರಬಹುದೇನೋ. ಇತಿಹಾಸದ ಬಗ್ಗೆ ಅಷ್ಟಾಗಿ ಮಾಹಿತಿ ಮತ್ತು ಜ್ಞಾನವಿಲ್ಲದ ಭಾರತೀಯ ಪ್ರವಾಸಿಗರನ್ನು ಇಂತಹ ಕತೆಗಳಿಂದ ದಾರಿತಪ್ಪಿಸುವುದು ಬಹಳ ಸುಲಭ. ಅಂದಹಾಗೆ ಇಂತಹ ಅನುಭವಗಳು ಜೈಪುರದಲ್ಲಿ ನನ್ನಂತೆ ಇತರ ಪ್ರವಾಸಿಗರಿಗೂ ಆಗಿದೆಯೆಂಬ ಮಾತುಗಳು ನಂತರ ನನ್ನನ್ನು ಅಚ್ಚರಿಗೆ ತಳ್ಳಿದ್ದವು.

ದಿಲ್ಲಿಯ ಖ್ಯಾತ ಚಿತ್ರಕಲಾವಿದ ಬಾದಲ್ ಚಿತ್ರಕಾರ್ ಟೂರಿಸ್ಟ್ ಗೈಡ್ ಒಬ್ಬ ಹೇಳಿದ್ದ ತನ್ನದೇ ಉತ್ಪ್ರೇಕ್ಷಿತ ಕತೆಯೊಂದನ್ನು ನನ್ನ ಬಳಿ ಹೇಳುತ್ತಾ ಮನಸಾರೆ ನಕ್ಕಿದ್ದರು. ಹಲವು ದಿನಗಳ ಉಪವಾಸವನ್ನು ಆಚರಿಸಿ ಗಾಂಧಿಯ ಚಿತ್ರವನ್ನು ಬಾದಲ್ ಬರೆದಿದ್ದು, ತನ್ನ ರಕ್ತದಲ್ಲೇ ಗಾಂಧಿಯ ಕಲಾಕೃತಿಯೊಂದನ್ನು ರಚಿಸಿ ಗಾಂಧೀವಾದಿ ಚಿತ್ರಕಲಾವಿದನೆಂಬ ಹೆಸರು ಪಡೆದಿದ್ದು.. ಇತ್ಯಾದಿಗಳ ಬಗ್ಗೆ ಬಾದಲ್ ಆಗಲೇ ವಿವರವಾಗಿ ಹೇಳಿದ್ದರು. ಆದರೆ ಈ ಕತೆಗಳು ಗೈಡ್ ಒಬ್ಬರಿಂದಾಗಿ ಎಂತೆಂಥಾ ಅವತಾರಗಳನ್ನು ಪಡೆಯುತ್ತಾ ಹೋಯಿತು ಎಂಬುದೇ ಇಲ್ಲಿ ಸ್ವಾರಸ್ಯಕರ ಅಂಶ.

ಬಾದಲ್ ರಚಿಸಿದ್ದ ಗಾಂಧಿ ಕಲಾಕೃತಿಯ ಬಗ್ಗೆ ಹೇಳುತ್ತಾ ”ಆ ಕಾಲದಲ್ಲಿ ಬಾದಲ್ ಚಿತ್ರಕಾರನಿಗೆ ಒಂದು ಹೊತ್ತಿನ ರೊಟ್ಟಿಗೂ ಗತಿಯಿರಲಿಲ್ಲ” ಎಂದು ಗೈಡ್ ಸಾಹೇಬರು ಬಂದವರಲ್ಲಿ ಹೇಳುತ್ತಿದ್ದನಂತೆ. ಇದು ಸಾಮಾನ್ಯ ಕತೆಯೊಂದರಲ್ಲಿ ಅನಗತ್ಯ ರೋಚಕತೆಯನ್ನು ತುರುಕುವ ಒಂದು ಪ್ರಯತ್ನವಾಗಿತ್ತು. ಚಿತ್ರಕಲಾವಿದ-ಬಡತನ-ಮಹಾತ್ಮಾ ಗಾಂಧಿ-ಖ್ಯಾತಿ… ಬಹುಶಃ ಇವುಗಳೆಲ್ಲಾ ಅತ್ಯುತ್ತಮವಾಗಿ ಮಾರಾಟವಾಗುವ ಕಾಂಬೋ ಎಂದು ಆತನಿಗೆ ಅನ್ನಿಸಿತ್ತೋ ಏನೋ. ಕಲಾಕೃತಿಯನ್ನು ನೋಡಲು ನೆರೆದಿದ್ದ ಆಸಕ್ತರೆಲ್ಲಾ ಈ ಅರೆಬೆಂದ ಸತ್ಯಕತೆಯನ್ನು ಅಚ್ಚರಿಯಿಂದ ಕೇಳುತ್ತಾ ರೋಮಾಂಚಿತರಾಗುತ್ತಿದ್ದರು.

ಬಾದಲ್ ರವರಿಗೆ ತಮ್ಮ ಬದುಕಿನ ಒಂದು ಹಂತದಲ್ಲಿ ಆರ್ಥಿಕ ಸಂಕಷ್ಟಗಳು ಎದುರಾಗಿದ್ದು ಸತ್ಯವಾದರೂ, ತೀರಾ ಅನ್ನಕ್ಕೂ ಪರದಾಡುವಂತಹ ಸ್ಥಿತಿಯೇನೂ ಅವರಿಗೆ ಬಂದಿರಲಿಲ್ಲ. ಮೇಲಾಗಿ ಗಾಂಧೀಜಿಯವರ ಕಲಾಕೃತಿಗಳನ್ನು ಸಿದ್ಧಪಡಿಸುವ ದಿನಗಳಲ್ಲಿ ಬಾದಲ್ ಕಟ್ಟುನಿಟ್ಟಿನ ಉಪವಾಸದಲ್ಲಿ ನಿರತರಾಗಿದ್ದರು. ಹೀಗಿದ್ದಾಗ ಸತ್ಯಕತೆಯೊಂದನ್ನು ಮತ್ತಷ್ಟು ರೋಚಕಗೊಳಿಸುವ ಒಂದೇ ಒಂದು ಕಾರಣಕ್ಕೆ, ಅವುಗಳಿಗೆ ಇಲ್ಲದ ಸಂಗತಿಗಳನ್ನು ತುರುಕುವ ಗೈಡ್ ಗಳೂ ಇರುತ್ತಾರೆ ಎಂಬುದು ತಮಾಷೆಯಾದರೂ ನಿಜ. ಇಂದು ಈ ಘಟನೆಯು ಬಾದಲ್ ರವರ ಬತ್ತಳಿಕೆಯಲ್ಲಿರುವ ಹಲವು ಜೋಕುಗಳಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದೆ.

ಅಕಾಡೆಮಿಕ್ ಆಗಿ ಅಷ್ಟೇನೂ ಓದದಿದ್ದರೂ ಫ್ರೆಂಚ್, ಜರ್ಮನ್, ಸ್ಪ್ಯಾನಿಷ್, ಪೋರ್ಚುಗೀಸ್ ನಂತಹ ಹಲವು ಐರೋಪ್ಯ ಭಾಷೆಗಳನ್ನು ಚೆನ್ನಾಗಿ ಮಾತಾಡಬಲ್ಲ ಹಲವು ಟೂರಿಸ್ಟ್ ಗೈಡ್ ಗಳನ್ನು ನಾನು ದಿಲ್ಲಿಯಲ್ಲಿ ಕಂಡಿದ್ದೇನೆ. ವರ್ಷಾನುಗಟ್ಟಲೆ ವಿದೇಶಿ ಪ್ರವಾಸಿಗರೊಂದಿಗೆ ನಿರಂತರವಾಗಿ ಬೆರೆತು ಇವರುಗಳು ಇಷ್ಟೆಲ್ಲಾ ಕಲಿತಿರುವುದನ್ನು ಕಂಡಾಗ ಅಚ್ಚರಿಯಾಗುವುದು ಸಹಜ. ಹಲವು ಭಾಷೆಗಳನ್ನು ತಿಳಿದಿರುವ ಗೈಡ್ ಗಳಿಗೆ ಸಹಜವಾಗಿ ಬೇಡಿಕೆಯೂ ಹೆಚ್ಚು. ಇನ್ನು ಗೈಡ್ ಒಬ್ಬನಿಗೆ ಪ್ರತಿಯೊಬ್ಬ ಪ್ರವಾಸಿಗನೊಂದಿಗೂ ನವನವೀನ ಅನುಭವಗಳು ಆಗುತ್ತಲೇ ಇರುತ್ತವೆ. ಹೀಗಾಗಿ ಆತ ನಡೆದಾಡುವ ಅನುಭವಗಳ ಮೂಟೆಯೂ ಹೌದು.

ಬಹುಷಃ ಟೂರಿಸ್ಟ್ ಗೈಡ್ ಗಳ ಬದುಕಿನ ಇಂತಹ ಅಪರೂಪದ ಅಂಶಗಳು ತೆರೆಯ ಲೋಕವನ್ನೂ ಆಕರ್ಷಿಸಿವೆ. ಸಿನಿಲೋಕದಲ್ಲಿ ಗೈಡ್ ಗಳನ್ನು ಪ್ರಧಾನಭೂಮಿಕೆಯಲ್ಲಿರಿಸಿ ತೆಗೆದಿರುವ ಕೆಲ ಚಿತ್ರಗಳು ಯಶಸ್ವಿಯಾಗಿ ಭಾರೀ ಜನಪ್ರಿಯತೆಗಳನ್ನು ಗಳಿಸಿವೆ. ‘ಫನಾ’ ಚಿತ್ರದಲ್ಲಿ ಸುಂದರಿಯರ ಬಳಗವೊಂದಕ್ಕೆ ದಿಲ್ಲಿ ತೋರಿಸುವ ಆಮೀರ್ ಖಾನ್ ಅಭಿನಯದ ರಿಹಾನ್ ಪಾತ್ರವು ನಿಜಕ್ಕೂ ‘ಚಾರ್ಮಿಂಗ್.’

ಪಿಂಕ್ ಸಿಟಿ ಜೈಪುರದಲ್ಲಿ ಶಾಮ್-ಎ-ಗುಲಾಬೀ ಎಂದು ಮೋಹಕವಾಗಿ ಹಾಡುವ ‘ಶುದ್ಧ್ ದೇಸಿ ರೊಮ್ಯಾನ್ಸ್’ ಚಿತ್ರದ ಸುಶಾಂತ್ ಸಿಂಗ್ ರಾಜಪೂತ್ ಟೂರಿಸ್ಟ್ ಗೈಡ್ ಆಗಿ ಮಿಂಚಿದ್ದು ಈಗ ಸಿಹಿಯಾದ ನೆನಪು. ಇನ್ನು ಇವೆಲ್ಲದಕ್ಕಿಂತಲೂ ಮಿಗಿಲಾಗಿ ಗೈಡ್ ಎಂದಾಕ್ಷಣ ಇಂದಿಗೂ ಥಟ್ಟನೆ ನೆನಪಾಗುವ ಏಕೈಕ ಹೆಸರೆಂದರೆ ಖ್ಯಾತ ಸ್ಫುರದ್ರೂಪಿ ಬಾಲಿವುಡ್ ನಟ ದೇವಾನಂದ್. ದೇವಾನಂದರ ಸಿನೆಮಾ ‘ಗೈಡ್’ ಎಂದಿಗೂ ಹಳತಾಗದ ಕ್ಲಾಸಿಕ್.

ಇಂದು ಎಲ್ಲಾ ಮಹಾನಗರಿಗಳಂತೆ ದಿಲ್ಲಿಯಲ್ಲೂ ಪ್ರವಾಸಗಳು ಹೊಸ ರೂಪಗಳನ್ನು ಪಡೆದುಕೊಂಡಿವೆ. ಇಂದು ದಿಲ್ಲಿಯಲ್ಲಿ ವಾಕಿಂಗ್ ಟೂರುಗಳಿಂದ ಹಿಡಿದು, ಸೈಕ್ಲಿಂಗ್ ಟೂರುಗಳೂ ಇವೆ. ಆದರೆ ಹಳೇದಿಲ್ಲಿಯ ಸುಂದರ ಹವೇಲಿಗಳ ಕತೆಗಳನ್ನು ಕೇಳಲು ಗೊತ್ತಿರುವವರೇ ಬೇಕು. ಕೊಳಗೇರಿಗಳ ಒಳಗಿನ ದನಿಯಾಗದ ಕತೆಗಳು ದಕ್ಕಲು ಅಲ್ಲಿಯ ಮಿಡಿತಗಳನ್ನು ಅರಿತವರೇ ಬೇಕು. ಶಹರದ ಬಗ್ಗೆ ಒಲವುಳ್ಳ ಗೈಡ್ ಒಬ್ಬ ಆಸಕ್ತನ ಅಭಿರುಚಿಗೆ ತಕ್ಕಂತೆ ಶಹರದ ಸೊಗಡನ್ನು ಸೊಗಸಾಗಿ ಕಟ್ಟಿಕೊಡಬಲ್ಲ.

ಟೂರಿಸ್ಟ್ ಗೈಡ್ ಗಳು ನಮಗೆ ಮುಖ್ಯವೆನಿಸುವುದೇ ಇಂತಹ ಸಂದರ್ಭಗಳಲ್ಲಿ. ಸಾಧ್ಯವಾದರೆ ಟೂರಿಸ್ಟ್ ಗೈಡ್ ಗಳ ಬದುಕಿನೊಳಗೊಂದು ಪ್ರವಾಸ ಮಾಡಿ ನೋಡಬೇಕು. ನಿಸ್ಸಂದೇಹವಾಗಿ ಅಸಂಖ್ಯಾತ ಸ್ವಾರಸ್ಯಕರ ಕತೆಗಳು ನಮಗೆ ದಕ್ಕಬಹುದು.

December 14, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: