ಜಾಲಾರ ಹೂ ಈಗ ಮಾಯಾಕಾರನಂತಾಗಿದೆ. ಜಾಲಾರ ಹೂ ಬಗೆಗಿನ ಪ್ರಬಂಧ ಓದಿದ ತುಮಕೂರಿನ ಸಾಹಿತಿಗಳು ಅದನ್ನು ನೋಡಲೇಬೇಕೆಂದು ಪಣ ತೊಟ್ಟರು. ದೇವರಾಯನದುರ್ಗದ ಕಾಡನ್ನೆಲ್ಲಾಅಲೆದು ಜಾಲಾರ ಹೂ ಘಮ ಹೊತ್ತುತಂದರು.
ಅದನ್ನು ಡಾ ಶ್ವೇತಾರಾಣಿ ಅವಧಿಗೆ ಬರೆದದ್ದೂ ಆಯ್ತು. ಅದು ಇಲ್ಲಿದೆ.
ಈಗ ಎಂ ಆರ್ ಕಮಲ ಅವರ ಸರದಿ. ಜಾಲಾರ ಹೂವಿನ ಬಗ್ಗೆ ತಮ್ಮ ಬಾಲ್ಯದ ನೆನಪಿನ ಎಳೆ ಹಿಡಿದು ಅವರೂ ದೇವರಾಯನದುರ್ಗ ಹೊಕ್ಕಿಯೇಬಿಟ್ಟರು. ಆ ಅನುಭವ. ಇಲ್ಲಿದೆ ಓದಿ-
ಇದನ್ನೆಲ್ಲಾ ಓದಿದ ಖ್ಯಾತ ಸಾಹಿತಿ ಲಲಿತಾ ಸಿದ್ಧಬಸವಯ್ಯ ಅವರು ಘಮದ ಬಿಂದಿಗೆ ಎನ್ನುವ ಕವಿತೆಯನ್ನೇ ಬರೆದುಬಿಟ್ಟರು. ಅದು ಇಲ್ಲಿದೆ
ಈಗ ಮತ್ತೆ ಡಾ ಶ್ವೇತಾರಾಣಿ ಅವರು ತಾವು ಜಾಲಾರದ ಬೆನ್ನುಹತ್ತಿ ಹೋಗಲು ಆ ಹರಿಹರನೇ ಕಾರಣ ಎಂದಿದ್ದಾರೆ. ಅವರ ಕಥನ ಇಲ್ಲಿದೆ-
ಡಾ ಶ್ವೇತಾರಾಣಿ ಹೆಚ್
ಹೂವು ಎಂದರೆ ನನಗೆ ಮೊದಲಿನಿಂದಲೂ ಒಂದು ಕೈ ಹೆಚ್ಚೇ ಪ್ರೀತಿ. ಹೂ ಎಂದರೆ ಪ್ರೀತಿ ಇಲ್ಲದ ಹೆಣ್ಣುಮಕ್ಕಳು ಇದ್ದಾರೆಯೇ ಹೇಳಿ ನೋಡೋಣ. ಅಂತಹ ನನ್ನ ಕೈಗೆ ಜಾಲಾರ ಹೂವಿನ ಹೆಸರು ಹೊತ್ತ ಪ್ರಬಂಧ ಸಂಕಲನ ಸಿಕ್ಕಿಬಿಡಬೇಕೆ?
ಈ ಜಾಲಾರದ ಹೂ ನೋಡುವ ಇಚ್ಚೆ ನನ್ನಲ್ಲಿ ಮೊಳೆಯಲು ಕಾರಣವಾದದ್ದು ಜಿ.ವಿ. ಆನಂದಮೂರ್ತಿ ಅವರ ‘ಜಾಲಾರ ಹೂ’ ಪ್ರಬಂಧ ಸಂಕಲನ. ಪುಸ್ತಕ ಮನೆ ಪ್ರವೇಶಿಸಿದಾಗ ನಾನು ಅದನ್ನು ಜಾಲಿ ಹೂ ಅಂದುಕೊಂಡಿದ್ದೆ. ಯಾಕೆಂದರೆ ನನಗೆ ಜಾಲಿ ಹೂ ಗೊತ್ತಿತ್ತೇ ವಿನಾ ಜಾಲಾರ ಗೊತ್ತಿರಲಿಲ್ಲ.
ಇದು ಯಾವುದು ಜಾಲಾರ ಹೂ ಎಂಬ ಕುತೂಹಲದಿಂದಲೇ ಪುಸ್ತಕವನ್ನು ಓದಲು ಕೈಗೆತ್ತಿಕೊಂಡೆ. ಜಾಲಾರ ಹೂವಿನ ವರ್ಣನೆ ಕಂಡು ಬೆರಗಾದೆ. ಲೇಖಕರು ಸೊಗಸಾಗಿ ಜಾಲಾರದ ಸೊಬಗನ್ನು ಕಟ್ಟಿಕೊಟ್ಟಿದ್ದಾರೆ.

ಈ ಹೂವಿಗೆ ಸ್ಥಳೀಯರು ಜಾಲಾರ, ಜಾಲಗಿರಿ, ಜಾಲಿ ಪುಷ್ಪ, ಎಂದು ಕರೆಯುತ್ತಾರೆ. ಬೆಟ್ಟ ಗುಡ್ಡಗಳಲ್ಲಿ ಬಿಡುವ ಆ ಹೂವನ್ನು ಕೊಯ್ದು, ಆಯ್ದು ಮಡಿಲಿನಲ್ಲಿ ತುಂಬಿ ತಂದು ಸಂತೆಗಳಲ್ಲಿ ಮಾರುತ್ತಾರೆ ಎಂಬುದು ಸೋಜಿಗವೆನಿಸಿತು. ಏಕೆಂದರೆ ಅದುವರೆಗೂ ಘಮಲು ಸೂಸುವ ಹೂಗಳೆಂದರೆ ಮೊಲ್ಲೆ, ಮಲ್ಲಿಗೆ, ಸಂಪಿಗೆ, ಮೈಸೂರು ಮಲ್ಲಿಗೆ ಎಂದಷ್ಟೇ ತಿಳಿದಿದ್ದೆ
ಇದರೊಟ್ಟಿಗೆ ಜ್ಞಾನಭಾರತಿ ಆವರಣದಲ್ಲಿರುವ ಆಕಾಶಮಲ್ಲಿಗೆ (ಅದರ ಹೆಸರು ಮಲ್ಲಿಕಾ ಬಸವರಾಜ್ ಪರಿಚಯಿಸಿದ್ದು) ನೋಡಿದ್ದೆ. ಜಾಲಾರ ಹೂವನ್ನು ಕಲ್ಪಿಸಿಕೊಂಡಷ್ಟು ಆಕಾಶ ಮಲ್ಲಿಗೆಯ ಚಿತ್ರ ಮಾತ್ರ ಮೂಡಿತು.
ಸರಿ ನನ್ನ ಜಾಲಾರ ಹೂವಿನ ಸಂಶೋಧನೆ ಶುರುವಾಗಿಯೇ ಬಿಟ್ಟಿತ್ತು. ಇಷ್ಟು ಮಾತ್ರ ನಿಜ, ನಾನು ಪಿ ಎಚ್‌ಡಿ ಸಂಶೋಧನೆಗೆ ಮುಂದಾದಾಗ ಎಷ್ಟು ತೀವ್ರತೆಯಿತ್ತೋ ಜಾಲಾರ ಹೂ ಹಿನ್ನೆಲೆ ಕೆದಕಲು ಹೊರಟಾಗಲೂ ಅದೇ ಉತ್ಸಾಹವಿತ್ತು.
ತುಮಕೂರಿನ ಭಾಗದ ಸಿದ್ದರಬೆಟ್ಟದಲ್ಲಿ ಈ ಹೂವಿನ ಮರಗಳು ಹೆಚ್ಚು ಬೆಳೆಯುತ್ತವೆ ಎಂದು ಗೊತ್ತಾಗಿದ್ದೇ ತಡ ಅಲ್ಲಿನವರೇ ಆದ ಸರೋಜಮ್ಮನನ್ನು ಕೇಳಿದೆ. ಅವರು ‘ಹೂಂ ಕಣ್ರೀ ಬೆಳಿತಾವೆ ಅವು ಹೂ ಬಿಟ್ಟಾಗ ಕೊಯ್ದು ತಂದು ಮಾರಾಟ ಮಾಡುತ್ತಾರೆ’ ಎಂದೆಲ್ಲ ಹೇಳಿದರು.
ಅವರು ಹೇಳಿದ್ದರಲ್ಲಿ ನನಗೆ ಅದರ ಚಿತ್ರಣವಂತೂ ಸಿಗಲಿಲ್ಲ. ಹಾಗಾಗಿ ಅವರ ಎದುರು ಆಕಾಶ ಮಲ್ಲಿಗೆಯ ಫೋಟೋ ಹಿಡಿದು ಇದೇನಾ ನೋಡಿ ಎಂದೇ. ಅವರು ಹೌದು ಇದೇ ಎಂದರು.
ಆದರೆ ನನ್ನೊಳಗಿದ್ದ ಸಂಶೋಧಕಿ ಒಂದೇ ಮಾಹಿತಿದಾರರ ಮೇಲೆ ಅವಲಂಬವಾಗಲು ಬಿಡಲಿಲ್ಲ. ಒಬ್ಬ ಮಾಹಿತಿದಾರರನ್ನು ಮಾತ್ರ ಅವಲಂಬಿಸಿದರೆ ಆಗುವ ಅನಾಹುತ ಗೊತ್ತಿತ್ತು. ನನಗೆ ಸರೋಜಮ್ಮನ ಕಾರಣದಿಂದ ಗೊಂದಲ ಜಾಸ್ತಿ ಆಯಿತೇ ಹೊರತು ಕಡಿಮೆಯಾಗಲಿಲ್ಲ.
ಸರಿ ಸಂಶೋಧಕಿಗೆ ಕ್ಷೇತ್ರ ಕಾರ್ಯ ಮಾಡಿ ಗೊತ್ತಿತ್ತು. ಅದು ಬೆಟರ್ ಕೂಡಾ. ಹಾಗಾಗಿ ಜಾಲಾರ ಇದ್ದಲ್ಲಿಗೆ ಹೆಜ್ಜೆ ಹಾಕಿಬಿಡೋಣ ಎಂದುಕೊಂಡೆ. ಆದರೆ ನನಗೆ ಅಂತಹ ಉತ್ಸಾಹದ ಬುಗ್ಗೆ ಉಕ್ಕುವ ವೇಳೆಗೆ ಜಾಲಾರ ಹೂ ಬಿಡುವ ಕಾಲ ಮುಗಿದಿತ್ತು . ಅಲ್ಲಿಗೆ ನನ್ನ ಉತ್ಸಾಹಕ್ಕೆ ತಣ್ಣೀರು ಬಿತ್ತು..
ನಾನು ಒಂದು ವಿಷಯ ಇಲ್ಲಿ ಹೇಳಲೇಬೇಕು. ದ್ವಿತೀಯ ಬಿ.ಕಾಂ ತರಗತಿಗೆ ಪಾಠ ಮಾಡಲು ಹೋದೆ. ಅವತ್ತು ನಾನು ಪಾಠ ಮಾಡಬೇಕಾಗಿದ್ದ ವಿಷಯ ‘ಪುಷ್ಪ ರಗಳೆ’
ಹರಿಹರನೋ ಹೂಗಳ ಪ್ರಿಯ. ಅದು ಯಾಕಾಗಿ ಅವನು ಹೂಗಳ ಹುಚ್ಚು ಹತ್ತಿಸಿಕೊಂಡಿದ್ದನೋ ಗೊತ್ತಿಲ್ಲ. ಆದರೆ ಅವನ ಕಾವ್ಯಗಳಲ್ಲಿ ಹೂವಿನ ಪ್ರಸ್ತಾಪ ಇಲ್ಲದೆ ಇಲ್ಲ. ಹೂವಿನ ವಿಷಯ ಬಂದರಂತೂ ಮೈ ಮರೆತುಬಿಡುತ್ತಾನೆ.
ಸುರಗಿ, ಸುರಹೊನ್ನೆ, ಪಡ್ಡಳಿ, ಬೂರಗ, ಅದಿರ್ಗಂದಿ.. ಹೀಗೆ ಅವನು ವರ್ಣಿಸುವ ಹೂವಿನ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ನಾನು ಪುಷ್ಪ ರಗಳೆ ಪಾಠ ಮಾಡಲು ಪುಸ್ತಕ ಕೈಗೆತ್ತಿಕೊಂಡೆ. ಪಾಠ ಮಾಡುತ್ತಾ ಹೂವಿನ ಸೊಬಗನ್ನು ವರ್ಣಿಸುವುದರಲ್ಲಿ ತಲ್ಲೀನಳಾಗಿದ್ದೆ.
ನಾನೂ ಹೂಗಳ ಪ್ರಿಯೆ ಹಾಗಾಗಿ ಹರಿಹರನ ವರ್ಣನೆಗೆ ನನ್ನದೂ ಒಂದಷ್ಟು ಬೆರಸಿ ಮೈದುಂಬಿ ಹೇಳುತ್ತಿದ್ದೆ ಎನಿಸುತ್ತದೆ. ಆ ಹೂವುಗಳ ವರ್ಣನೆ ಕೇಳಿ ವಿದ್ಯಾರ್ಥಿಗಳು ದಂಗಾಗಿ ಹೋಗಿದ್ದರು. ಆಗಲೇ ಆ ಪ್ರಶ್ನೆ ನನ್ನ ಮುಂದೆ ಬಂದದ್ದು- ಮೇಡಂ ನೀವು ಈಗ ವರ್ಣಿಸಿದಿರಲ್ಲಾ ಆ ಹೂಗಳನ್ನು ನೋಡಿದ್ದೀರಾ ?
ಹೂಗಳ ಲೋಕದಿಂದ ದಿಢೀರನೆ ನಾನು ವಾಸ್ತವದ ಲೋಕಕ್ಕೆ ಬರಬೇಕಾಯಿತು. ನನ್ನ ಉತ್ತರ ಇಲ್ಲ ಎನ್ನುವುದಷ್ಟೆ ಆಗಿತ್ತು. ಹರಿಹರ ಬಣ್ಣಿಸಿರುವುದರಲ್ಲಿ ಬಹುತೇಕವು ಕಾಡು ಹೂಗಳು. ಅವುಗಳ ಪರಿಚಯ ನನಗೆ ಇಲ್ಲ ಎಂದೆ.
ಅವರ ಉತ್ಸಾಹಕ್ಕೆ ನಾನು ತಣ್ಣೀರೆರೆಚಿಬಿಟ್ಟೆನೋ ಏನೋ. ಅವರು ಮರುಪ್ರಶ್ನೆಯನ್ನು ಮಾಡಲೇ ಇಲ್ಲ. ಅವರಲ್ಲಿ ಪ್ರಶ್ನೆಗಳೇನೋ ಸಾಕಷ್ಟಿತ್ತು. ಆದರೆ ನಾನು ನೋಡದೆ ಇರುವಾಗ ಪ್ರಶ್ನಿಸಿ ಏನು ಪ್ರಯೋಜನ ಎಂದು ಸುಮ್ಮನಾದರು.
ಆ ಕ್ಷಣವೇ ನನಗೆ ಅವರ ಪ್ರಶ್ನೆ ಕೇಳುವ ಹಕ್ಕು ಕಸಿದೆ.. ಎಂಬ ಭಾವನೆ ಕಾಡಲು ಪ್ರಾರಂಭಿಸಿತು.. ಹೂಗಳನ್ನು ನೋಡಲು ಸಾಧ್ಯವಾಗದ ಕೆಲಸವೇನಲ್ಲ ಒಮ್ಮೆ ನೋಡಬೇಕು. ಮತ್ತೊಮ್ಮೆ ಪಾಠಮಾಡುವಾಗ ಕನಿಷ್ಟ ಆ ಹೂಗಳ ಪೋಟೊ ಆದರೂ ಮಕ್ಕಳಿಗೆ ತೊರಿಸಬೇಕೆಂದುಕೊಂಡೆ..
ಅದು ಬಹು ದಿನ ಹಾಗೇ ಮನದಲ್ಲಿ ಉಳಿದಿತ್ತು. ಅದಕ್ಕೆ ಸಕಾಲವೆಂಬಂತೆ ತುಮಕೂರು ಲೇಖಕಿಯರ ಸಂಘದ ಕಾರ್ಯದರ್ಶಿ ಮಲ್ಲಿಕಾ ಬಸವರಾಜ್ ಜಾಲಾರ ನೋಡಲು ಹೋಗೋಣವೇ ಎಂದರು. ರೋಗಿ ಬಯಸಿದ್ದು, ವೈದ್ಯ ಹೇಳಿದ್ದು ಒಂದೇ ಆಗಿತ್ತು.
ಒಂದು ಶನಿವಾರ ಮಧ್ಯಾಹ್ನ ಹೊರಟುಬಿಡುವುದೇ ಎಂದು ನಿರ್ಧಾರವಾಯ್ತು. ನಾನೋ ಅವರು ಹೇಳಿದ್ದ ಸಮಯಕ್ಕಿಂತ ಅರ್ಧ ಗಂಟೆ ಮೊದಲೇ ಹೋಗಿ ಕಾಯುತ್ತಿದ್ದೆ. ಮಹಿಳಾಮಣಿಗಳ ದಂಡು ದೇವರಾಯನದುರ್ಗಕ್ಕೆ ಹೊರಟಿತು.
ವಿಶೇಷವೆಂದರೆ ಇಳಿವಯಸ್ಸಿನ ಅನ್ನಪೂರ್ಣ ವೆಂಕಟನಂಜಪ್ಪ ಸ್ವಲ್ಪ ಆರೋಗ್ಯ ವ್ಯತ್ಯಯವಿದ್ದರೂ ಹೂವಿನ ಬಗೆಗೆ ಅವರಿಗಿದ್ದ ಪ್ರೀತಿಯಿಂದ ನಮ್ಮೊಡನೆ ಬಂದದ್ದು. ಮಾರ್ಗ ಮಧ್ಯೆ ಲಂಬಾಣಿ ಮಹಿಳೆಯರ ಕಂಡು ಕುಣಿತಕ್ಕೆ ಶುರುವಿಟ್ಟುಕೊಂಡರು.. ತಡವಾಗುತ್ತದೆ ಹೂವು ಎಲ್ಲಿ ಉದುರಿರುತ್ತವೊ ಎಂಬ ಆತಂಕ ನನ್ನನ್ನು ಕಾಡುತ್ತಿತ್ತು.
ಅದುವರೆಗೂ ಅವರಿವರ ಬಾಯಿಯಿಂದ ಆ ಹೂವಿನ ವರ್ಣನೆ ಕೇಳಿ ಗೊತ್ತಿತ್ತಷ್ಟೇ. ಅಮಿತ ಉತ್ಸಾಹದಿಂದ ಹೊರಟ ನಮಗೆ ನಿರಾಸೆಯಾಯಿತು..ಏಕೆಂದರೆ ಮಲ್ಲಿಗೆಯಂತೆ ಬೆಳಿಗ್ಗೆ ನಳನಳಿಸುವ ಹೂವು ಸಂಜೆಗೆ ಬಾಡುತ್ತವೆ.
ಪುರಿಯಂತೆ ಕೆಳಗೆ ಉದುರಿದ್ದ ಹೂ ನೋಡಿ ಅಯ್ಯೋ ಹೂಬಿಡುವ ಕಾಲ ಮುಗಿದಿದೆ ಎಂದರು ಮಲ್ಲಿಕಾ ಮೇಡಂ. ಮನದಲ್ಲಿ ಬೇಸರ ಇಮ್ಮಡಿಸಿತು. ಅಲ್ಲಿ ಅಲ್ಲಿ ಆ ಗಿಡದಲ್ಲಿ ಇದೆ ಎಂದು ಕೂಗಿದರು. ಎಲ್ಲರೊಟ್ಟಿಗೆ ನಾನು ಅವರನ್ನು ಹಿಂಬಾಲಿಸಿದೆ.
ಸಣ್ಣ ಗೊಂಚಲು ಸಿಕ್ಕಿದ್ದೇ ತಡ ಪೋಟೋ ತೆಗೆಯಲು ಪ್ರಾರಂಭಿಸಿದೆವು. ಗಿಡಗಳನ್ನು ಕಿತ್ತು ಹಾಳು ಮಾಡಲಿಲ್ಲ.. ಬದಲಿಗೆ ಮಾರಾಟಕ್ಕೆಂದು ಹೂ ಕೊಯ್ಯುವವರ ಬಳಿ ಪಡೆದೆವು.. ಅಷ್ಟು ಗೊಂಚಲು ನೋಡಿ ಹಾಳಾಯ್ತು ಎಂದು ಮರುಗಿದ್ದು ಉಂಟು.
ಜಾತ್ರೆಯ ಸಂದರ್ಭದಲ್ಲಿ ಆ ಹೂವನ್ನು ದೇವರ ಪೂಜೆಗೆ, ಅಲಂಕಾರಕ್ಕೆ, ಸ್ತ್ರೀಯರು ಮುಡಿಯಲು ಕೂಡ ಬಳಸುತ್ತಾರೆ.. ಸ್ಥಳೀಯರು ಆ ಹೂವು ಕೊಯ್ಯುತ್ತಾರೆ.. ಈ ಸಂದರ್ಭ ಬಿಟ್ಟು ಉಳಿದಂತೆ ಜಾಲಾರ ಮರ ಅನಾಕರ್ಷಣೀಯ
ಜಾಲಾರದೊಂದಿಗೆ ಬೂರಗವು ಸೇರಿದಂತೆ ವಸಂತನ ಸಂಭ್ರಮದಲ್ಲಿ ವನಕುಸುಮಗಳಿಂದ ನಳನಳಿಸುತ್ತಿತ್ತು..ಬಿರು ಬಿಸಿಲಿನಲ್ಲೂ ನೋಡುವ ಕಣ್ಮನಗಳಿಗೆ ತಂಪನ್ನಿಯುತ್ತಾ..ಒಂದಷ್ಟು ಪೋಟೊ ನನ್ನ ವಿದ್ಯಾರ್ಥಿಗಳಿಗಾಗಿ ತೆಗೆಯುವುದ ಮರೆಯಲಿಲ್ಲ. ಅವರಲ್ಲವೇ ನನ್ನಲ್ಲಿ ಕುತೂಹಲ ಮೂಡಿಸಿದ್ದು..







Nice experience mam
ಶ್ವೇತಾ , ನಮ್ಮ ಜಾಲಾರ ದೇವಿಯನ್ನು ನೀವು ಮತ್ತು ಅವಧಿ world famous ಮಾಡ್ಬಿಟ್ರಿ,, thanku both .