ಅಮೇರಿಕಾದ ಜಾನ್ ಪರ್ಕಿನ್ಸ್ ಎಂಬವರು ‘Confessions of An Economic Hitman’ ಎಂಬ ಪುಸ್ತಕವನ್ನು ಬರೆದು, ಅದರಲ್ಲಿ ಜಾಗತಿಕ ಮಟ್ಟದ ಬಹುರಾಷ್ಟ್ರೀಯ ಕಂಪೆನಿಗಳು ವಿಶ್ವದ ಅರ್ಥವ್ಯವಸ್ಥೆಯನ್ನು ಹೇಗೆ ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ ಎಂಬುದನ್ನು ಬಹಳ ಮಾರ್ಮಿಕವಾಗಿ ವಿವರಿಸಿದ್ದಾರೆ.
ರಾಜಕೀಯ ಅಧಿಕಾರ ಯಾರ ಬಳಿಯೇ ಇರಲಿ, ಜನಸಾಮಾನ್ಯರ ಜುಟ್ಟು ಮಾತ್ರ ಈ ಕಂಪೆನಿಗಳ ಮುಷ್ಠಿಯಲ್ಲೇ ಇರುತ್ತದೆ. ಉದ್ದೇಶ ಬಹಳ ಸರಳ ಹಾಗೂ ಸ್ಪಷ್ಟ: ನಮ್ಮಲ್ಲಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಂಡವಾಳವಾಗಿ ಪರಿವರ್ತಿಸಿ ಅವುಗಳಿಂದ ಗರಿಷ್ಠ ಲಾಭ ಗಳಿಸುವುದು. ಎಷ್ಟೋ ಅರ್ಥಶಾಸ್ತ್ರ ಪಂಡಿತರು ‘ಲಾಭವನ್ನು ವೃದ್ಧಿಸುವುದೇ ವ್ಯಾಪಾರದ ಏಕೈಕ ಗುರಿ’ ಎಂಬ ಸಿದ್ಧಾಂತವನ್ನೂ ಮಂಡಿಸಿದ್ದಾರೆ. ಮುಂಬೈ ಮೂಲದ ಚಲನಚಿತ್ರ ನಿರ್ದೇಶಕ ರಾಮಚಂದ್ರ ಪಿ. ಎನ್. ಅವರಿಗೆ ಈ ಸಂಕೀರ್ಣ ವಿಷಯದ ಬಗ್ಗೆ ಒಂದು ಸಿನಿಮಾ ಮಾಡಬೇಕು ಎಂದು ತೋಚಿದ್ದು, ಅವರು ಜಾನ್ ಪರ್ಕಿನ್ಸ್ ಅವರ ಈ ಪುಸ್ತಕ ಓದಿದ ಮೇಲೆಯೇ.
ವಿಷಯದ ಪ್ರಮಾಣ ಎಷ್ಟೇ ದೊಡ್ಡದಾಗಿದ್ದರೂ, ತನ್ನ ಬಳಿ ಇರುವ ಸೀಮಿತ ಸಂಪನ್ಮೂಲಗಳನ್ನು ಬಹಳ ವಿವೇಚನೆಯಿಂದ ಸೃಜನಾತ್ಮಕವಾಗಿ ಬಳಸಿಕೊಳ್ಳುವುದೇ ಒಬ್ಬ ಸ್ವತಂತ್ರ ಸಿನಿಮಾಕರ್ತನ ಮುಖ್ಯ ಧರ್ಮವಷ್ಟೇ. ಅಂತೆಯೇ ರಾಮಚಂದ್ರ ಅವರು ಕನಿಷ್ಠ ಸಂಖ್ಯೆಯ ಪಾತ್ರಗಳನ್ನು ಹಾಕಿಕೊಂಡು ಕೆಲವೇ ಚಿತ್ರೀಕರಣ ತಾಣಗಳನ್ನು ಒಳಗೊಂಡಿರುವ ಒಂದು ಕಥೆಯನ್ನು ಹೆಣೆದರು. ಅವರಿಗೆ ನವೀ ಮುಂಬೈಯ ಖಾರ್ಗರ್ ಇಲಾಖೆಯಲ್ಲಿ ಒಂದು ಖಾಲಿ ಫ್ಯ್ಲಾಟು ದೊರಕಿದಾಗ, ಏಳು ಜನರ ತಂಡದೊಂದಿಗೆ ಹದಿನೈದು ದಿನಗಳವರೆಗೆ ಅಲ್ಲೇ ವಾಸ ಮಾಡಿ ಚಿತ್ರೀಕರಣ ಮಾಡುವ ಸದವಕಾಶ ಒದಗಿ ಬಂತು. ಈ ಚಿತ್ರದಲ್ಲಿ ನೀನಾಸಂ ಹಾಗೂ ಎನ್. ಎಸ್. ಡಿ. ಪದವೀಧರ, ಬೆಂಗಳೂರು ಮೂಲದ ಮುಂಬೈ ಕನ್ನಡಿಗ ವಿನಯ್ ವಿಶ್ವ ಹಾಗೂ ಅವರ ಪತ್ನಿ ರಾಜಸ್ಥಾನ ಮೂಲದ ಚಿತ್ರಾ ಜೇಟ್ಲಿ ಮುಖ್ಯ ಪಾತ್ರಗಳನ್ನು ವಹಿಸಿದ್ದಾರೆ. ಚಿತ್ರಾ ಕೂಡಾ ಎನ್. ಎಸ್. ಡಿ. ಯಲ್ಲಿ ಕಲಿತವರು. ಉಡುಪಿ-ಮಂಗಳೂರು ಕಡೆಯ ಕನ್ನಡ ಇವರಿಗೆ ಅಷ್ಟೇನೂ ಪರಿಚಿತವಲ್ಲ; ಆದರೂ ಅದನ್ನು ಕಲಿತು, ಅರಗಿಸಿಕೊಂಡು, ನಟಿಸಲು ಇವರು ಪಟ್ಟಿರುವ ಶ್ರಮ ನಿಜಕ್ಕೂ ಶ್ಲಾಘನೀಯ.

ತೊಂಬತ್ತೊಂಬತ್ತು ನಿಮಿಷಗಳ ಕಾಲ ಓಡುವ ‘ಬುನ್ನು ಕೆ. ಎಂಡೊ ಮಾಯೆ’ ಚಲನಚಿತ್ರದ ಕಥೆಗೆ ‘Allegory’ (ಅನ್ಯೋಕ್ತಿ)ಯ ಸ್ವರೂಪವಿದೆ. ವಿವಾಹೇತರ ಸಂಬಂಧ ಹೊಂದಿದ್ದ ಜೋಡಿ ಪ್ರೇಮಿಗಳು ತಮ್ಮ ಊರಿನಿಂದ ಓಡಿ ಹೋಗಿ ಹೆಸರಿಲ್ಲದ ಮಹಾನಗರಕ್ಕೆ ಬಂದು ಒಂದು ಖಾಲಿ ಫ್ಲ್ಯಾಟಿನೊಳಗೆ ಸೇರಿ ಬಾಗಿಲು ತೆಗೆಯಲಾಗದೆ ಚಿತ್ರದುದ್ದಕ್ಕೂ ಸಾಂಕೇತಿಕವಾಗಿ ಸಿಕ್ಕಿ ಹಾಕಿಕೊಂಡು ವಿಲಿವಿಲಿ ಒದ್ದಾಡುತ್ತಾರೆ. ಅವರಿಗೆ ಸಹಾಯ ಮಾಡುವ ಭರವಸೆಯನ್ನು ಕೊಟ್ಟ ನಿಗೂಢ ಗುಂಪೊಂದು ರಾತ್ರಿ ಹಗಲು ಎಂಬಂತೆ ಎಲ್ಲಾ ಕಾಲಕ್ಕೂ ಇವರ ಚಲನವಲನಗಳನ್ನು ನಿಗಾವಣೆಯಲ್ಲಿಟ್ಟು, ಅನಾಮಿಕ ಬಹುರಾಷ್ಟ್ರೀಯ ಕಂಪೆನಿಯೊಂದಕ್ಕೆ ವರದಿ ಸಲ್ಲಿಸುತ್ತಾ ಇರುತ್ತದೆ. ಈ ಎಲ್ಲದಕ್ಕೂ ನೈಸರ್ಗಿಕ ಸಂಪತ್ತಿರುವ ಗುಡ್ಡಗಾಡು ಪ್ರದೇಶವೊಂದರಲ್ಲಿ ಅಭಿವೃದ್ಧಿ ಹೊಂದಬೇಕಿದ್ದ ಒಂದು ಬೃಹತ್ ವಿದ್ಯುತ್ ಸ್ಥಾವರದ ಸ್ಥಿತಿಗತಿಗೂ ಸಂಬಂಧದ ಕೊಂಡಿಯಿರುತ್ತದೆ. ಈ ಪ್ರೇಮಿಗಳು ತಾವೆದುರಿಸುತ್ತಿರುವ ಪರಿಸ್ಥಿತಿಯಿಂದ ಪಾರಾಗಿ ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೊ ಇಲ್ಲವೊ ಎಂಬುವುದನ್ನು ಈ ಚಲನಚಿತ್ರ ಒಂದು ಕನಸಿನ ರೀತಿಯಲ್ಲಿ ಅನನ್ಯವಾಗಿ ಸೆರೆ ಹಿಡಿಯುತ್ತದೆ.
‘ಬುನ್ನು ಕೆ. ಎಂಡೊ ಮಾಯೆ’ ಚಲನಚಿತ್ರಕ್ಕೆ ಸೋಲಂಕಿ ಚಕ್ರಬರ್ತಿ ಎಂಬ ಸತ್ಯಜಿತ್ ರೇ ಫಿಲ್ಮ್ ಮತ್ತು ಟಿ.ವಿ. ಶಾಲೆಯ ಪದವೀಧರರ ಛಾಯಾಗ್ರಹಣವಿದೆ. ಇದು ಅವರ ಮೊದಲನೇಯ ದೀರ್ಘ ಕಥಾ ಚಲನಚಿತ್ರ. ಸುದಿಪ್ತೋ ಮುಖೋಪಾಧ್ಯಾಯ ಧ್ವನಿ ಗ್ರಹಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ‘ಸುದ್ಧ’ ಹಾಗೂ ‘ಪುಟಾಣಿ ಪಾರ್ಟಿ’ ಚಿತ್ರಗಳ ಧ್ವನಿ ಸಂಯೋಜಕ ಸಂತೋಷ್ ಕುಮಾರ್ ಅವರು ಈ ಚಿತ್ರಕ್ಕೂ ತಮ್ಮ ಕಾಣಿಕೆಯನ್ನು ಸಲ್ಲಿಸಿದ್ದಾರೆ. ಸ್ವತಃ ರಾಮಚಂದ್ರ ಪಿ. ಎನ್. ಅವರು ಈ ಚಿತ್ರದ ಕಥೆ ಹಾಗು ಚಿತ್ರಕಥೆಗಳನ್ನು ಬರೆದು, ಅದರ ಸಂಕಲನವನ್ನೂ ಮಾಡಿದ್ದಾರೆ. ಇದರೊಂದಿಗೆ ಧ್ವನಿ ಸಂಯೋಜನೆಯಲ್ಲಿಯೂ ಮುಖ್ಯ ಹೊಣೆಗಾರಿಕೆಯನ್ನು ನಿಭಾಯಿಸಿದ್ದಾರೆ.
ಇತ್ತೀಚೆಗೆ ಗೋವಾದಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಜೊತೆಗೆ, ಪಕ್ಕದಲ್ಲೇ ನಡೆದ ‘ಫಿಲ್ಮ್ ಬಾಜಾರ್’ ಕಾರ್ಯಕ್ರಮದ ‘ವ್ಯೂಯಿಂಗ್ ರೂಮ್’ ವಿಭಾಗದಲ್ಲಿ ಈ ಚಿತ್ರ ಪ್ರದರ್ಶನಗೊಂಡಿದೆ. ಚಲನಚಿತ್ರೋತ್ಸವಗಳ ಪರಿಕ್ರಮಣದ ಬಳಿಕ ‘ಬುನ್ನು ಕೆ. ಎಂಡೊ ಮಾಯೆ’ ಚಿತ್ರವನ್ನು ಕರ್ನಾಟಕದ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವ ಯೋಜನೆಯೊಂದನ್ನು ರಾಮಚಂದ್ರ ಮತ್ತವರ ತಂಡದವರು ಹಾಕಿಕೊಂಡಿದ್ದಾರೆ.


ಜಾಗತೀಕರಣದ ಕರಾಳತೆಯನ್ನು ಬಿಚ್ಚಿಡುವ 'ಬುನ್ನು ಕೆ.ಎಂಡೊ ಮಾಯೆ'
ನಿಮಗೆ ಇವೂ ಇಷ್ಟವಾಗಬಹುದು…





0 Comments