ಜಯಶ್ರೀ ಬಿ ಕದ್ರಿ
‘ಜ್ವರ ಒಳ್ಳೆಯದು’
ವೈದ್ಯರೆಂದಾಗೆಲ್ಲ
ಅರ್ಥವಾಗಿರಲಿಲ್ಲ
ಈಗ ಗೊತ್ತಿದೆ
ಜ್ವರ ಒಳ್ಳೆಯದು
ಜೀವಕೋಶಗಳಲ್ಲಿ
ಪ್ರತಿರೋಧ ಹೆಚ್ಚಾಗಿ
ಚೈತನ್ಯ ಇಷ್ಟಿಷ್ಟೆ
ಇಂಚಿಂಚು ಹೆಚ್ಚುತ್ತ
ಜ್ವರ ಒಳ್ಳೆಯದು

ಜ್ವರವೆಂದರೆ
ಒಳ ಕುಸಿತ
ನಿರೀಕ್ಷೆಗಳ ಭಾರ
ಸಾವ ನೆರಳಿನ ನಶೆ
ಇಳಿಯುವುದೇ ಆದಲ್ಲಿ
ಜ್ವರ ಒಳ್ಳೆಯದು
ಅವಮಾನ ನಿರ್ಲಕ್ಷ್ಯ
ನೋವಿಗದ್ದಿದ ಕುಂಚ
ಹಿಡಿ ಹೃದಯ
ಮಣ ಭಾರ
ಚುಚ್ಚು ಮದ್ದಿಗೆ ಹಗುರ
ಜ್ವರ ಒಳ್ಳೆಯದು

ಅಂತೆಯೇ
ಜ್ವರವೆಂದರೆ
ಉಕ್ಕುಕ್ಕು ಉನ್ಮಾದ
ಉನ್ಮತ್ತ ವ್ಯಾಮೋಹ
ಅರಿವ ಮರೆಸುವ ಅಮಲು
ಇಳಿಯುವುದೇ ಆದಲ್ಲಿ
ಜ್ವರ ಒಳ್ಳೆಯದು






0 Comments