ಜಯಶ್ರೀ ಬಿ ಕದ್ರಿ ಓದಿದ ‘ರತಿಯ ಕಂಬನಿ’

ಸೃಜನಶೀಲ ಹೊಳಹುಗಳ ‘ರತಿಯ ಕಂಬನಿ’

ಜಯಶ್ರೀ ಬಿ ಕದ್ರಿ

ಸಮಕಾಲೀನ ಬರಹಗಾರರಲ್ಲಿ ನಂದಿನಿ ಹೆದ್ದುರ್ಗ ಒಂದು ವಿಶಿಷ್ಟ ಪ್ರತಿಭೆ. ‘ರತಿಯ ಕಂಬನಿ’ ಅವರ ಇತ್ತೀಚಿನ ಕವನ ಸಂಕಲನ. ಉತ್ಸಾಹ, ಲವಲವಿಕೆ, ಚುರುಕುತನ, ತುಂಟತನ ಎಲ್ಲವೂ ಮೇಳೈಸಿದ ನಂದಿನಿಯವರ ಕವಿತೆಗಳು ನಮಗೆ ಆಪ್ತವಾಗುವುದು ಅವುಗಳಲ್ಲಿನ ಅಪ್ಪಟ ಪ್ರಾಮಾಣಿಕತೆಯಿಂದ ಹಗೂ ಅನನ್ಯವಾದ ಅಭಿವ್ಯಕ್ತಿಯ ಶೈಲಿಯಿಂದ. ಸ್ತ್ರೀವಾದಿ ಎಂದು ಹೇಳಲಾಗದ, ಆದರೆ ಸ್ತ್ರೀ ಸ್ವಾತಂತ್ರ್ಯದ ಉತ್ಕಟ ಅಭೀಪ್ಸೆ ಹೊಂದಿರುವ ಕವಿತೆಗಳು ಇವು.

ಜೋಗಿಯವರು ಪುಸ್ತಕದ ಹಿನ್ನುಡಿಯಲ್ಲಿ ಹೇಳಿರ್ವಂತೆ ‘ಕಾವ್ಯದ ಮರುಳುತನ, ಉತ್ಕಟತನ, ಮುಕ್ತತೆ’ ಮೂರೂ ಬೆರೆತ ಕವಿತೆಗಳು ಇವು. ಹಸಿದ ಹೊಟ್ಟೆಯ ಯಾತನೆಯಂತೆಯೇ ಒಡೆದ ಹೃದಯದ ಯಾತನೆಯೂ. ಕಣ್ಣಿಗೆ ಕಾಣಿಸದ, ಆದರೆ ಅನುಭವಿಸುವ ಜೀವಕ್ಕೆ ಮಾತ್ರ ಅನುಭವವಾಗುವಂತಹುದು. ಪ್ರೀತಿಯ ಹಸಿವಂತೂ ಮುಗಿಯುವಂತದ್ದಲ್ಲ. ಪ್ರೇಮ, ಕಾಮ, ವಿರಹ, ಪ್ರೀತಿ, ಪ್ರೀತಿಯ ಗೊಂದಲಗಳು, ಉತ್ಕಟವಾದ ಭಾವಗಳು.. ಹೀಗೆ ಈ ಕವನಗಳಲ್ಲಿ ಬುದ್ಧಿ, ಭಾವ, ಪ್ರತಿಭೆ, ತುಂಟತನ, ಶೃಂಗಾರ, ನಿರ್ಭಿಡೆ, ಆತ್ಮವಿಶ್ವಾಸ, ತಲ್ಲಣಗಳು.. ಹೀಗೆ ಬಣ್ಣಗಳ ಮೇಳ.

ಹೆಣ್ಣನ್ನು ‘ಶೃಂಗಾರ’ದ ವಸ್ತುವನ್ನಾಗಿ ಸಾಹಿತ್ಯದಲ್ಲಿ ಅನೂಚಾನವಾಗಿ ನಡೆದು ಬಂದಿದ್ದರೂ ಹೆಣ್ಣಿನ ‘ಶೃಂಗಾರ’ದ ಅಭಿವ್ಯಕ್ತಿ ಕಡಿಮೆ. ಈ ದಿಸೆಯಲ್ಲಿ ನಂದಿನಿಯವರ ಕವಿತೆಗಳು ಗಮನಾರ್ಹ, ದಿಟ್ಟ ಪ್ರಯತ್ನ. ನಂದಿನಿಯವರ ಹೆಚ್ಚಿನ ಕವಿತೆಗಳಲ್ಲಿನ ಸ್ಠಾಯಿ ಭಾವವಾಗಿರುವ ‘ಪ್ರೇಮ’ವನ್ನು ಹೊರತುಪಡಿಸಿಯೂ ಅವುಗಳಲ್ಲಿನ ಸ್ತ್ರೀ ಚೈತನ್ಯದ ಬಗ್ಗೆ, ಸಾಂಗತ್ಯದ ಹಂಬಲ, ಸೃಜನಶೀಲತೆಯ ಅಭಿವ್ಯಕ್ತಿಯ ಉತ್ಕಟವಾದ ಇಚ್ಛೆಯ ಬಗ್ಗೆ ನನ್ನ ಬರಹ.

ನಮ್ಮ ಸಮಾಜ, ಹೆಚ್ಚೇಕೆ ಇಡೀ ಜಗತ್ತು ಪುರುಷ ಪ್ರಧಾನ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಕಾಸ, ಅಭಿವೃದ್ಧಿ, ಸಮಾನತೆ ಎಲ್ಲವು ಮೇಲ್ನೋಟಕ್ಕೆ ಇದ್ದರೂ ಮೌಲ್ಯಗಳ ಹೆಸರಿನಲ್ಲಿಯೋ, ಸಂಸಕೃತಿ, ಸಂಸ್ಕಾರಗಳ ಹೆಸರಿನಲ್ಲಿಯೋ, ಕೊನೆಗೆ ‘ನೈತಿಕತೆ’ ಎನ್ನುವ ಅಸ್ಪಷ್ಟ ಮೌಲ್ಯದ ಹೆಸರಿನಲ್ಲಿಯೋ, ಹೆಣ್ಣಿನ ಚಲನವಲನಗಳಿಗೆ, ಅವಳು ಹೇಗೆ ಹಲವಾರು ಸಾಮಾಜಿಕ ಪಾತ್ರಗಳನ್ನು ನಿಭಾಯಿಸಬೇಕೆನ್ನುವುದರ ಬಗ್ಗೆ ಹಲವಾರು ಚೌಕಟ್ಟುಗಳಿವೆ.

ಪ್ರತಿ ಮಹಿಳೆಯ ಅನುಭವವೂ ಭಿನ್ನವಾಗಿದ್ದು ಅವುಗಳ ಸ್ವರೂಪ ‘ದೇಹ’ಕ್ಕೆ ಒಂದಲ್ಲ ಒಂದು ವಿಧದಲ್ಲಿ ಜೋಡಣೆಯಾಗಿರುವುದೂ ಹೌದು. ಹೆಣ್ಣಿನ ಭಾವನೆಗಳು, ಅವಳಿಗೆ ಸಿಗಬಹುದಾದ ಆಗಸದ ವಿಸ್ತಾರ ಎಲ್ಲವೂ ಆಕೆಯ ‘ಜೆಂಡರ್’ನ ಪರಿಧಿಯ ನಿರ್ಧಾರಗಳಿಗೆ ಒಳಪಟ್ಟಿರುವುದೂ ಸತ್ಯವೇ. ಹೆಣ್ಣನ್ನು ‘ಶರೀರ’ವಾಗಿ ನೋಡುತ್ತಲೇ ಹೆಣ್ಣು ಮಾತ್ರ ಬಯಕೆಗಳೇ ಇಲ್ಲದ, ಇದ್ದರೂ ಗಂಡಿನ ನೋಟ, ನಿರ್ದೇಶನಗಳಂತೆ ಇರಬೇಕಾದ ಅಲಿಖಿತ ನಿಯಮಗಳು ಇರುವುದು ಸತ್ಯ. ಇದೇ ನಿರೀಕ್ಷೆಗಳು ಹೆಣ್ಣಿನ ಬರಹದ ಬಗ್ಗೆಯೂ ಇದೆ. ಈ ನಿಟ್ಟಿನಲ್ಲಿ ನಂದಿನಿ ಹೆದ್ದುರ್ಗ ಅವರ ಕವಿತೆಗಳು ಅವುಗಳ ಅನುಭವದ ಪ್ರಾಮಾಣಿಕತೆಯಿಂದ, ಸಾರ್ವತ್ರಿಕ ಗುಣದಿಂದ ಗಕ್ಕನೆ ಹಿಡಿದು ನಿಲ್ಲಿಸುತ್ತವೆ.

ನಂದಿನಿಯವರ ಕಾವ್ಯದ ಹೆಚ್ಚುಗಾರಿಕೆ ಇರುವುದು ತಮ್ಮ ಭಾವನೆಗಳಿಗೆ ಪ್ರಾಮಾಣಿಕವಾಗಿದ್ದುಕೊಂಡು ಅವರು ಎತ್ತುವ ಪ್ರಶ್ನೆಗಳಲ್ಲಿ.

‘ರತಿಯ ಕಂಬನಿ’ ಕವಿತೆಯ ಬಗ್ಗೆ ಲಲಿತಾ ಸಿದ್ದಬಸವಯ್ಯ ಅವರು ಮುನ್ನುಡಿಯಲ್ಲಿ ಬರೆದಂತೆ ‘ಈ ಕತೆಯಲ್ಲಿ ಕಾಮನ ಬದಲಾಗಿ ರತಿಯೇ ದಹನಗೊಂಡಿದ್ದರೆ ಮರು ಕ್ಷಣವೇ ಹೊಸ ರತಿಯ ವ್ಯವಸ್ಥೆ ಆಗುತ್ತಿತ್ತು. ಈಗ ಹುಡುಗಿಯನ್ನೇನು ಮಾಡುವುದು? ಕಾಲ್ಪನಿಕ ದೇಹ ಸುಖದ ಅಮಲಿಗೆ ತಳ್ಳಿ ಬಿಡುವುದು'(ಕಾಮನಿಗೆ ಅನಂಗನಾಗುವ ವರ) ನಂದಿನಿಯವರ ಕವಿತೆಗಳನ್ನು ಓದುವಾಗೆಲ್ಲ ಭಾರತೀಯ ಇಂಗ್ಲಿಷ್ ಕವಯಿತ್ರಿ ಕಮಲಾ ದಾಸ್ ನೆನಪಾಗುತ್ತಾರೆ. ಅಷ್ಟೇ, ದೃಢತೆಯಿಂದ, ಹಕ್ಕಿನಿಂದ, ತನ್ನ ಅನುಭವಗಳಿಗೆ ಬದ್ಧವಾಗಿರುವ ಕಾವ್ಯ ಪ್ರಾಮಾಣಿಕತೆ ನಂದಿನಿಯವರದು. ಗಂಡಿನ ಸಾಮೀಪ್ಯ, ಸ್ಪರ್ಶ, ಓಲೈಕೆ, ಅನುರಾಗದ ಅಪೇಕ್ಷೆ ಅಲ್ಲದೆ ನಂದಿನಿಯವರ ಕವಿತೆಗಳಲ್ಲಿ ಒಂದು ಕಾವ್ಯ ವಾಸ್ತವವೂ ಇದೆ.

‘ನಾಳಿನ ಸೂರ್ಯನೆದೆಯಲ್ಲಿ
ಬಾಳಿನ ಬಣ್ಣ
ತುಳುಕಾಡಬಹುದು’ ಹೀಗೆ.’

ಇನ್ನು ಕೆಲವು ಕವಿತೆಗಳು ವಿಷಾದದಲ್ಲಿ ಅದ್ದಿದಂತೆ.
‘ಬೀಳ್ಕೊಡುಗೆ’ ಕವಿತೆಯಲ್ಲಿ
‘ನನ್ನ ಎಲ್ಲಾ ಹಾದಿಗಳು
ನಿನ್ನ ತಲುಪಬಹುದೆನ್ನುವ
ನನ್ನ ಭ್ರಮೆ ಇನ್ನಾದರೂ ಇಲ್ಲವಾಗಿಸು’

ಎಂದು ಬರೆಯುವ ನಂದಿನಿ ‘ಅವನ ಆಸೆ’ಯಂತಹ ಕವಿತೆಗಳಲ್ಲಿ ತುಂಟತನ, ರಸಿಕತೆಯಿಂದ ಬರೆಯುತ್ತಾರೆ. ‘ಅಕಾರಣ, ಅಕಾಲದಲ್ಲಿ’ ಪ್ರೇಮದ ಸಂಭವಿಸುವಿಕೆಯ ಬಗ್ಗೆ ಬರೆಯುತ್ತ ಹಾಗೆಯೇ
‘ಇದು ಬೆಂಕಿ ಜಾಡು
ಎದೆಯೊಳಗೆ ಬೆಳಕ ಹಾಡು’
ಬಹುಶಃ ಪ್ರೇಮದ ಬಗ್ಗೆ ಇದೇ ಕವಯಿತ್ರಿಯ ಆಶಯ ಇರಬೇಕು.
ಪ್ರೇಮದ ಉನ್ಮಾದ, ಉತ್ಕಟತೆ, ಕಳೆದುಕೊಂಡಾಗಿನ ಅಳಲು, ದಿಗಿಲು ಎಲ್ಲವೂ ವ್ಯಕ್ತವಾಗುವ ಕವನ ‘ರತಿಯ ಕಂಬನಿ’.

‘ರತಿಯ ಕಂಬನಿಗೆ
ಹುಟ್ಟಿದವಳು ನಾನು’

‘ಮೊನ್ನೆ ತಡ ರಾತ್ರಿ ತುಟಿಯ ಸುಖಿಸುತ್ತಿದ್ದವನ
ತಬ್ಬ ಹೋಗಿ ಏನೂ ಸಿಕ್ಕದೆ ತಬ್ಬಿಬ್ಬು ನಾನು
ಹುಟ್ತುವ ಬಯಕೆ ಬೇಗೆಗೆ
ಬರಿಯ ಬಲಿ ಕಂಬದ ನೆರಳು’

ಈ ರೀತಿಯ ಪರಿಣಾಮಕಾರಿ ಸಾಲುಗಳಿರುವ ಕವಿತೆ ಇದು.

‘ಕೆಂಪು ಹಾಡು’. ‘ರಾಹುಲ ಮತ್ತು ರೈಲು’ ಈ ರೀತಿಯ ಸಶಕ್ತ ಹೆಣ್ಣು ದನಿಗಳ ಕವಿತೆಗಳಿವೆ. ‘ಬಾರೋ ಮಾರೀಚನೇ’ ಕವಿತೆಯ ತಣ್ಣಗಿನ ಕ್ರೋಧವನ್ನು ನೋಡಿ :

‘ಜಗವೆಲ್ಲ ಮಲಗಿರಲು ತಾವಷ್ಟೆ ಎದ್ದು
ಹೊಸಿಲ ತೊಳೆಯುತ ಕತ್ತೆತ್ತಿ
ನೋಡಿದರು ನೆಲದ ಸೀತೆಯರು
ತಣ್ಣಗೆ ಕುದ್ದು!’

‘ಕಾಲುಂಗುರ’ದಂತಹ ಕಟು ಮಧುರ ಭಾವ ಗೀತೆಗಳು, ‘ಕಾ(ವ್ಯ)ಮಸೂತ್ರದಂತಹ ಎರೋಟಿಕ್ ಕವಿತೆಗಳು, ‘ನಾವು ಹೆಂಗಸರೆ ಹೀಗೆ’ ಈ ರೀತಿಯ ವಿಷಾದದ ಕವಿತೆಗಳು. ಆಧ್ಯಾತ್ಮಿಕತೆಯ ಯಾವ ಸೋಗೂ ಇಲ್ಲದೆ ‘ಇಹ’ವನ್ನು, ‘ಸುಖದ ಸೋನೆಯಂತಹ ವಿರಹವನ್ನು’, ಮಿಲನವನ್ನು ಸಂಭ್ರಮಿಸುವ ನಂದಿನಿಯವರ ಕವಿತೆಗಳ ಓದು ಒಂದು ವಿಶಿಷ್ಟ ಅನುಭವವನ್ನು ಕಟ್ಟಿಕೊಡುತ್ತವೆ.
‘ಒಂದು ತೊಲ ಹೆಚ್ಚಾಗಿಯೇ
ಪ್ರೀತಿಸುವುದು ಇತ್ತೀಚಿನ ನನ್ನ ಚಾಳಿ
ಕೊಡುವುದರ
ಮಹತ್ವ ಕಳೆದುಕೊಂಡವರಿಗಲ್ಲದೆ
ಮತ್ತಾರಿಗೆ ಗೊತ್ತು? ‘

‘ಕತ್ತಲು ಕುಡಿದ ಬಣ್ಣಗಳು
ಲೆಕ್ಕವಿದೆಯೇ ಜಗಕೆ?’

‘ಹುಚ್ಚಲ್ಲವೆ
ಒಲವೆಂಬುದು ಹೆಣ ಭಾರ
ಎಂದು ತಿಳಿದ ಮೇಲೂ
ಅಹಮ್ಮು ನನಗೆ
ನಾನು…
ನಿನ್ನ ಪ್ರೇಯಸಿʼ

ಈ ರೀತಿ ಬರೆಯುವ ದಿಟ್ಟ ಕವಯಿತ್ರಿ.
‘ನನ್ನ ಅಗಣಿತ ಪ್ರೀತಿ ಪಡೆದ ಅಪರೂಪದವನೆ’, ‘ಹಾಡು ಬರೆಯುವವಳನ್ನು ಪ್ರೇಮಿಸುವುದೆಂದರೆ’, ‘ಮರಳಿ ಹೊಂದುತ್ತೇನೆ ನಿನ್ನನ್ನೇ’ ಈ ರೀತಿಯ ಒಲವಿನ ಹಾಡುಗಳು, ನಿಗಿ ನಿಗಿ ಕಾಮವನ್ನು ಅಶ್ಲೀಲವಾಗಿಸದೆ ಕಾವ್ಯವಾಗಿಸಿದ ಕೆಲವು ಕವಿತೆಗಳು ಹೀಗೆ ಈ ಕವಿತೆಗಳು ತುಂಬ ವಿಭಿನ್ನವಾಗಿವೆ. ಯಾಕೋ ಇವರ ಕವಿತೆಗಳನ್ನು ಓದುವಾಗೆಲ್ಲ ಕಮಲಾ ದಾಸ್ ಅವರ ನಿರ್ಭಿಡೆ, ಎಮಿಲಿ ಡಿಕಿನ್ ಸನ್ ಅವರ ವಿಷಾದ, ಶೆಲ್ಲಿಯ ಕ್ರಾಂತಿಕಾರಿ ಗುಣ, ಜಾನ್ ಡನ್ ನ ಚತುರೋಕ್ತಿಗಳು, ಮೀರಾ ಭಜನ್ ಗಳಲ್ಲು ಹೀಗೆಲ್ಲ ನೆನಪಾದವು. ಶುಭ ಹಾರೈಕೆಗಳು.

‍ಲೇಖಕರು Admin

November 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: