ಜಯಲಕ್ಷ್ಮಿ ಪಾಟೀಲ್ ಅಂಕಣ- ಹುಲಿ ಸರ್ ಆಡಿದ ಈ ಬೀಜದಂಥಾ ಮಾತು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯಲಿದ್ದಾರೆ.

19

ಅವಮಾನ, ಸೋಲು, ನಂಬದೆ ಇರುವುದು, ನಂಬಿಕೆಗೆ ಧಕ್ಕೆ ಬರುವುದು, ನಿರಾಕರಣೆ, ಮೋಸ, ಅಧಿಕಾರದ ದಬ್ಬಾಳಿಕೆ, ಎಮೋಶ್ನಲ್ ಬ್ಲಾಕ್ಮೇಲಿನಿಂದ ಉಂಟಾಗುವ ಮಾನಸಿಕ ಒತ್ತಡ, ದೌರ್ಜನ್ಯಕ್ಕೆ ಬೇಸತ್ತು, ಪಶ್ಚಾತಾಪದಿಂದ, ಪ್ರೀತಿಸಿದವರನ್ನು ಬಿಟ್ಟಿರಲಾರೆ ಎನ್ನುವ ಭ್ರಮೆ, ಪರೀಕ್ಷೆಯಲ್ಲಿ ಫೇಲಾದೆ ಎಂದು, ಹೀಗೆ ಹತ್ತು ಹಲವಾರು ಕಾರಣಗಳು ವ್ಯಕ್ತಿಗತ ಮನಸ್ಥಿತಿಯ ಅನುಗುಣವಾಗಿ ಆತ್ಮಹತ್ಯೆಗೆ ಕಾರಣವಾಗುತ್ತವೆ.

ನಾನು ಇಂಥ ಜಗತ್ತಿಗೆ ಲಾಯಕ್ಕಲ್ಲವೆಂದೋ, ನನ್ನಂಥವರಿಗೆ ಈ ಜಗತ್ತಿನ ವ್ಯವಹಾರಗಳು ಸರಿಹೋಗವು ಎಂದೋ, ಇಲ್ಲಿದ್ದು ಪ್ರಯೋಜನವಿಲ್ಲವೆಂದೋ ಅನಿಸತೊಡಗುತ್ತದೆ. ಇದರ ಹೊರತಾಗಿಯೂ ಇನ್ನೂ ಅನೇಕ ಕಾರಣಗಳಿರಬಹುದು. ಆತ್ಮಹತ್ಯೆಯಿಂದಾಗಿ ಸತ್ತೋರನ್ನು ಅನುಮಾನಿಸುತ್ತದೆಯೇ ವಿನಹ, ನೊಂದು ಸತ್ತ ನೋವಿಗೆ ಇಲ್ಲಿ ಕಿಂಚಿತ್ತೂ ಬೆಲೆ ಇರುವುದಿಲ್ಲ ಎನ್ನುವುದು ಆ ಕ್ಷಣಕ್ಕೆ ಅವರಿಗೆ ಹೊಳೆಯುವುದಿಲ್ಲ. ತನ್ನ ಸಾವಿನ ಸುತ್ತ ಹತ್ತಾರು ಊಹಾಪೋಹಗಳಿಂದ ಕೂಡಿದ ಕಥೆಗಳು ಹುಟ್ಟಿಕೊಳ್ಳುವುತ್ತವೆ, ಅದರಿಂದ ತನ್ನವರು ಘಾಸಿಗೊಳ್ಳಬಹುದು ಎನ್ನುವುದನ್ನು ಯೋಚಿಸುವುದಿಲ್ಲ.

ಹೆತ್ತವರು ಸಂಕಟ ಅನುಭವಿಸುವುದಲ್ಲದೇ, ಜನರಿಗೆ ಉತ್ತರಿಸಬೇಕಾದ ಉಸಿರುಗಟ್ಟಿಸುವಿಕೆ ಕಲ್ಪನೆಗೂ ಬರುವುದಿಲ್ಲ. ಕಟ್ಟಿಕೊಂಡವರು ಜನರ ಬಾಯಿಗೆ ಆಹಾರವಾಗಿ ಅಸಹಾಯಕತೆಯಿಂದ ತೊಳಲಾಡಬೇಕಾಗಿಬರಬಹುದು ಎನ್ನುವುದು ಆಗ ಮನಸಿಗೇ ಬರುವುದಿಲ್ಲ. ತಾನೇ ಕನಸಿ ಹುಟ್ಟಿಸಿದ ಮಕ್ಕಳ ಭವಿಷ್ಯವೇನು ಎನ್ನುವ ಜವಾಬ್ದಾರಿ ನೆನಪಾಗಲಿಕ್ಕೂ ಇಲ್ಲ. ಕೇವಲ ತನಗಾದ ನೋವಿನ ಕುರಿತೇ ಮನಸ್ಸು ಯೋಚಿಸುತ್ತಲಿರುತ್ತದೆ. ಇನ್ನು ಇಲ್ಲಿದ್ದು ಪ್ರಯೋಜನವಿಲ್ಲವೆಂದೇ ಅನಿಸುತ್ತಿರುತ್ತದೆ.

ಮನಸ್ಸು ಇಂಥದ್ದೊಂದು ಸ್ಥಿತಿಗೆ ಬರುವ ಮುಂಚೆ ಅನೇಕ ಬಾರಿ ಘಾಸಿಗೊಂಡಿರುತ್ತದೆ. ಆಗ ಅದನ್ನು  ತನ್ನವರ ಜೊತೆ ಹಂಚಿಕೊಳ್ಳಬೇಕು. ಹಾಗೆ ಹಂಚಿಕೊಂಡಾಗ ಸಿಗಬಹುದಾದ ಜೊತೆಯವರ ಪ್ರೀತಿ, ಸಾಂತ್ವನ, ಧೈರ್ಯ, ಭರವಸೆಗಳು ಈ ನಿಟ್ಟಿನಲ್ಲಿ ಮನಸ್ಸು ಜಾರುವುದನ್ನು ಬಹುಮಟ್ಟಿಗೆ ತಡೆಹಿಡಿಯಬಲ್ಲವು. ಆದರೆ ಹಾಗಾಗದೇ ಇರುವುದಷ್ಟೇ ಆತ್ಮಹತ್ಯೆಗೆ ಕಾರಣವಾಗದೆಯೂ ಇರಬಹುದೇನೋ. ಆ ಕುರಿತು ಹೆಚ್ಚಿನ ಮಾಹಿತಿಯನ್ನು ಯಾರಾದರೂ ನುರಿತ ಮನಶಾಸ್ತ್ರಜ್ಞರು ಆಗಾಗ ಜನರಿಗೆ ಗೊತ್ತಾಗುವಂತೆ ಮಾಡಿದಲ್ಲಿ ಅನೇಕ ಆತ್ಮಹತ್ಯೆಗಳು ತಪ್ಪಬಹುದು. ಅಂದು ಅಪ್ಪಾ ನನ್ನನ್ನು ಉಳಿಸಿಕೊಳ್ಳದೇ ಹೋಗಿದ್ದಲ್ಲಿ, ಹುಲಿ ಸರ್ ನನ್ನನ್ನು ಮಾತಾಡಿಸಿ ನನ್ನಲ್ಲೊಂದು ಭರವಸೆಯನ್ನು ಹುಟ್ಟಿಸಿರದಿದ್ದರೆ, ಇಂದು ಜಯಲಕ್ಷ್ಮಿ ಎನ್ನುವ ಹೆಸರಿನ ಹೆಣ್ಣುಮಗಳೊಬ್ಬಳು ಇದ್ದಳು ಎನ್ನುವುದು ಹೊರಗಿನ ಪ್ರಪಂಚಕ್ಕೆ ಬಿಡಿ, ನಮ್ಮ ಮನೆಯ ಇಂದಿಗೆ ಪೀಳಿಗೆಯವರಿಗೂ ಗೊತ್ತಾಗುತ್ತಿರಲಿಲ್ಲ.

ಶಾಲೆಯ ಗೋಡೆಯ ಮೇಲಿನ ನನ್ನ ಹೆಸರು ಕಂಡ ಮೇಲೆ ನಾನು ಆತ್ಮಹತ್ಯೆಗೆ ಯತ್ನಿಸಿದ್ದು ನನ್ನ ಹೆತ್ತವರ ಮನಸಲ್ಲಿ, ಕೇವಲ ೧೫ ವರ್ಷದ ತಮ್ಮ ಮಗಳು ಪ್ರೀತಿ ಪ್ರಣಯ ಬಸಿರು ಮುಂತಾದಕ್ಕೆ ಒಳಗಾಗಿ ಹೀಗೆ ಮಾಡಿಕೊಂಡಳೇನೋ ಎನ್ನುವ ಅನೇಕ ಸಂಶಯಗಳಿಗೆ ಎಡೆ ಮಾಡಿಕೊಟ್ಟಿರಲೂ ಸಾಕಲ್ಲವೇ? ಅದ್ಯಾವುದೂ ಅಲ್ಲ, ಮನಸ್ಸು ಪದೇ ಪದೇ ಘಾಸಿಗೊಂಡ ಪರಿಣಾಮವಾಗಿ ಅಂಥದ್ದೊಂದು ದುಃಸ್ಸಾಹಸಕ್ಕೆ ಕೈಹಾಕಿದ್ದೆ ಎನ್ನುವುದು ನಾನು ಸತ್ತೇ ಹೋಗಿದ್ದರೆ ಹೇಗೆ ಗೊತ್ತಗಲು ಸಾಧ್ಯವಿತ್ತು? ಬಹುಶಃ ಸತ್ತೇ ಹೋಗಿದ್ದರೆ ಹೊರಗಿನ ಜನ ಹಾಗೇ ಅಥವಾ ಇನ್ನೂ ಏನೇನೋ ಮಾತಾಡಿಕೊಳ್ಳುತ್ತಿದ್ದರೇನೋ…! 

ಅಂದು ಆತ್ಮಹತ್ಯೆಗೆ ಪ್ರಯತ್ನಿಸಿ ಸಾಯದೇ ಉಳಿದು ಇದ್ದೇನು ಮಹಾ ಸಾಧಿಸಿದೆ ಎಂದು ನನ್ನನ್ನ ನಾನೇ ಕೇಳಿಕೊಂಡರೆ, ಮಹಾ ಏನಲ್ಲದಿದ್ದರೂ ತಕ್ಕ ಮಟ್ಟಿಗೆ ಸಾರ್ಥಕತೆ ಹುಟ್ಟಿಸುತ್ತ ನಡೆದಿರುವ ನನ್ನ ಬದುಕು ನನ್ನ ಕಣ್ಣೆದುರಿಗಿದೆ ಇಂದು. ಮುಂದೆ ಕಾಲಾಂತರದಲ್ಲಿ ನಂಬಿಕೆಗೆ, ಒಳ್ಳೆಯತನಕ್ಕೆ ಬೀಳುತ್ತಿರುವ ಪೆಟ್ಟುಗಳಿಗೆ ನಲುಗಿದ್ದು ಸಾಕಾಗಿ, ಒಂದು ಹೊತ್ತಲ್ಲಿ ನನ್ನೊಳಗಿನ ಆ ಅನಗತ್ಯ ಸೂಕ್ಷ್ಮತೆಯಿಂದ ಆಚೆ ಬರಲು  ನಿರ್ಧರಿಸಿದೆ. ಇನ್ನು ಸಾವೇ ತಾನಾಗಿ ನನ್ನನ್ನು ಕರೆದೊಯ್ಯಬೇಕೇ ವಿನಹ ನಾನಾಗಿ ಅದನ್ನು ಆವಹಿಸಿಕೊಳ್ಳುವುದಿಲ್ಲವೆಂದು ನಿರ್ಧರಿಸಿದೆ. ಅಂದಿನಿಂದ ನನ್ನ ಪ್ರತಿ, ಸಂಬಂಧಗಳ ಪ್ರತಿ ಮತ್ತು ಬದುಕಿನ ಪ್ರತಿ ನನ್ನ ಧೋರಣೆ ಬದಲಾಯಿತು. ನೋಯಿಸಿದ ಸಮಾಜದ ವೃಣಗಳಿಗೆನೇ ಅಷ್ಟಿಷ್ಟು ಮುಲಾಮಾಗುತ್ತ, ಮಾಗುತ್ತ ಸಾಗಿರುವೆ. 

ಅಂದು ತಮ್ಮ ಮಾತುಗಳ ಮೂಲಕ ನನ್ನಲ್ಲೊಂದು ಆತ್ಮಸ್ಥೈರ್ಯವನ್ನು ತುಂಬಿದ ಶ್ರೀಯುತ. ಬಿ. ಜಿ. ಹುಲಿ ಸರ್ ಕುರಿತು, 11 September 2018ರಂದು ಉದಯವಾಣಿಯ ಜೋಷ್ ಪುರವಣಿಯಲ್ಲಿ ಪ್ರಕಟವಾಗಿದ್ದ ಬರಹವನ್ನು ಇಲ್ಲಿ ನಿಮ್ಮೊಂದಿಗೆ ಮತ್ತೊಮ್ಮೆ ಹಂಚಿಕೊಳ್ಳಲಿಚ್ಛಿಸುತ್ತೇನೆ.

ಹುಲಿ ಸರ್! 

ಹುಲಿ ಅಂದ್ರೆ ಹುಲೀನೇ ಅವರು. ಹೈಸ್ಕೂಲಿನಲ್ಲಿದ್ದಾಗ ಕನ್ನಡ ಪಾಠ ಮಾಡುತ್ತಿದ್ದ ಮೇಷ್ಟ್ರು.

ನಾನು ಅವರೆದುರು ಒಂದೇ ಒಂದು ಸಲ ಜೋರಾಗಿ ಜಲ್ಲು ಬಿಟ್ಟು ನಕ್ಕಿದ್ದು ಮತ್ತು ಅವರಿಂದ ಒಂದೇ ಒಂದು ಸಲ ಪೆಟ್ಟು ತಿಂದಿದ್ದು. 

ಹುಲಿ ಸರ್ ಅವರ ಪಿರಿಯಡ್ ಎಂದಾಕ್ಷಣ, ಅವರಿನ್ನೂ ಸ್ಟಾಫ್ ರೂಮಿಂದ ಹೊರಟ್ರೋ ಇಲ್ವೋ ಕ್ಲಾಸ್ರೂಮಲ್ಲಿ ಪಿನ್ಡ್ರಾಪ್ ಸೈಲನ್ಸ್! ಕ್ಲಾಸ್ ಮಾನಿಟರ್ ನಮ್ಮನ್ನು ಎಚ್ಚರಿಸಬೇಕಾದ ಅವಶ್ಯಕತೆಯೇ ಇರ್ಲಿಲ್ಲ. ಬಂದವರೇ ಕೈಯಲ್ಲಿರುವ ಪುಸ್ತಕ ಮತ್ತು ಡಸ್ಟರನ್ನು ಎದುರಿಗಿರುವ ಮೇಜಿನ ಮೇಲಿಟ್ಟು, ಒಂದ್ಸಲ ನಮ್ಮನ್ನೆಲ್ಲ ದೀರ್ಘವಾಗಿ ನೋಡಿ ಮುಗುಳ್ನಗುತ್ತಿದ್ದರು. ಆಗ್ಲೂ ನಾವೆಲ್ಲ ನಗೋದೋ ಬೇಡವೋ ಅನ್ನೊ ಗೊಂದಲದಲ್ಲೇ ಪಿಳಿಪಿಳಿ ಕಣ್ಣು ಬಿಡ್ತಾ ಅವರ ಕಣ್ಣು ತಪ್ಪಿಸಿ ಎದುರಿನ ಬ್ಲ್ಯಾಕ್ ಬೋರ್ಡನ್ನೋ ಇಲ್ಲಾ ತಲೆತಗ್ಗಿಸಿ, ಪುಸ್ತಕ ಪುಟ ತಿರುವುತ್ತಿರುವವರಂತೆಯೋ ನಟಿಸುತ್ತಾ ಕುಳಿತಿರುತ್ತಿದ್ದೆವು. ಈಗ ಅನಿಸುತ್ತೆ, ನಮ್ಮ ಆ ಅವಸ್ಥೆಯನ್ನು ಕಂಡು ಸರ್ ಮನಸ್ಸಲ್ಲಿ ಅದೆಷ್ಟು ಗಟ್ಟಿಯಾಗಿ ನಗುತ್ತಿದ್ದರೋ ಅಂತ.

ನಾವೆಲ್ಲ ಅವರೆದುರು ಅವರಿರುವಿನ ಅರಿವನ್ನೂ ಮೀರಿ ಗಟ್ಟಿಯಾಗಿ ನಕ್ಕಿದ್ದೆಂದರೆ ಒಂದೇ ಒಂದು ಬಾರಿ. ನಮ್ಮ ಕ್ಲಾಸಿನ ಶ್ರೀನಿವಾಸ ಕಂಠಿ (ಅವನನ್ನು ಎಲ್ಲರೂ ಕಂಠಿ ಸೀನ ಎಂದೇ ಕರೆಯುತ್ತಿದ್ದುದು. ಆ ಊರಲ್ಲಿಯೇ ಶ್ರೀಮಂತರು ಎಂದು ಕರೆಸಿಕೊಳ್ಳುವ ಮೂರ್ನಾಲ್ಕು ಮನೆಗಳಲ್ಲಿ ಇವರದೂ ಒಂದು. ಅವನ ತಂದೆ ರಾಜಕೀಯದಲ್ಲಿದ್ದರು. ಈಗ ಶ್ರೀನಿವಾಸ ಕೂಡ ರಾಜಕಾರಣಿ) ಎನ್ನುವ ಹುಡುಗನ ಹತ್ತಿರ ನಿಂತು, ಅವನು ಹೋಮ್ವರ್ಕ್ ಮಾಡಿಕೊಂಡು ಬರದಿರುವ ಬಗ್ಗೆ ವಿಚಾರಿಸುತ್ತಾ, ತೋಳ ತುದಿಯಲ್ಲಿ ಹರಿದ ಅವನ ಶರ್ಟನ್ನು ಗಮನಿಸುತ್ತಾ, ‘ಅಲ್ಲಲೇ ಸೀನ, ನಿಮ್ಮಪ್ಪ ನೋಡಿದ್ರ ಅಷ್ಟ್ ಶ್ರೀಮಂತ. ನೀ ನೋಡಿದ್ರ ಹರಕ್ ಅಂಗಿ ಹಾಕ್ಕೊಂಡು ಬಂದಿ. ಯಾಕಲೇ?’ ಅಂದ್ರು.

ಮೈಮುಟ್ಟಿ ಮಾತಾಡಿಸಿದ್ದಕ್ಕೇ ಅರ್ಧ ಬೆವೆತುಹೋಗಿದ್ದ ಸೀನ. ಜೊತೆಗೆ ಹೋಮ್ವರ್ಕ್ ಬೇರೆ ಮಾಡಿಕೊಂಡು ಬಂದಿರ್ಲಿಲ್ಲವಲ್ಲ, ನಡಗುತ್ತಾ, ‘ಹು ಹು ಹು ಹುಲಿ ಕಡದೈತ್ರಿ ಸರ’ ಎಂದುಬಿಟ್ಟ! ‘ನಾ ಯಾವಾಗ್ ಬಂದಿದ್ನೋಪಾ ನಿಮ್ಮನಿಗೆ?!’ ಎಂದು ಕುಲುಕುಲು ನಕ್ಕರು ಸರ್. ಇಡೀ ಕ್ಲಾಸ್ ಘೊಳ್ಳೆಂದಿತು.

‘ಅ ಅ ಅಲ್ರೀ ಸರ್, ಅಲ್ರೀ ಸರ, ಇ ಇ ಇಲಿರೀ ಸರ. ತಪ್ಪಾತ್ರೀ ಸರ ತಪ್ಪಾತ್ರೀ’ ನಾಚಿಕೆ ಮತ್ತು ಹೆದರಿಕೆಯಿಂದ ಸೀನ ತೊದಲತೊಡಗಿದ್ದ. ಅದೊಂದೇ ದಿನ ನಾವುಗಳು ಅವರೆದುರು ನಕ್ಕಿದ್ದು. ಹಾಗಂತ ಅವರೇನು ನಮ್ಮನ್ನು ಸಿಕ್ಕಾಪಟ್ಟೆ ಹೊಡೆದುಬಡಿದೇನು ಮಾಡ್ತಿರ್ಲಿಲ್ಲ. ಪಾಠದ ಕಡೆಗೆ ಗಮನ ಕೊಟ್ಟಿಲ್ಲವಾದರೆ, ಹೋಮ್ವರ್ಕ್ ಮಾಡಿಕೊಂಡು ಬಂದಿಲ್ಲವಾದರೆ ಗಂಭೀರ ದನಿಯಲ್ಲಿ, ‘ಯಾಕಬೇ? ಯಾಕಪಾ?’ ಎಂದೆನ್ನುತ್ತಿದ್ದರು ಅಷ್ಟೇ. ಅಷ್ಟೇ ಸಾಕಿತ್ತು ನಮ್ಮ ನಾಯಿ ಬಾಲದ ಬುದ್ದಿ ನೆಟ್ಟಗಾಗೋಕೆ. ವಿದ್ಯಾರ್ಥಿಗಳು ಬಿಡಿ, ಸಹಶಿಕ್ಷಕರಿಗೂ ಸಹ ಹುಲಿ ಸರ್ ಎಂದರೆ ಗೌರವ ಮಿಶ್ರಿತ ಭಯ.

ಆದರೆ ಅಂದೊಮ್ಮೆ ಎಡವಟ್ಟಾಗಿ ಹೋಯ್ತು. ಸಮಾಜ ಪಾಠ ಹೇಳುವ ಮೇಸ್ಟ್ರು ಅಂದು ರಜೆಯಲ್ಲಿದ್ದ್ರು. ಅವರು ಬರುವುದಿಲ್ಲ ಎಂದು ಗೊತ್ತಿದ್ದ ಕ್ಲಾಸ್ ಸಂತೆಯಾಗಿತ್ತು. ನನಗೋ ಅವ್ವನ ಕಣ್ಣು ತಪ್ಪಿಸಿ ತಂದಿದ್ದ ಕಾದಂಬರಿಯನ್ನೋದುವ ತವಕ. ಮಗ್ನಳಾಗಿ ಓದುತ್ತಿದ್ದೆ. ಇದ್ದಕ್ಕಿದ್ದಂತೆ ಹುಟ್ಟಿಕೊಂಡ ಕ್ಲಾಸಿನಲ್ಲಿಯ ಮೌನ ನನ್ನನ್ನು ಎಚ್ಚರಿಸಿತು. ತಲೆ ಎತ್ತಿ ನೋಡಿದರೆ ಸಾಕ್ಷಾತ್ ಹುಲಿ ಸರ್ ಎದುರು ನಿಂತಿದ್ದಾರೆ! ಮೊದಲೇ ಕೆಂಪು ಕೆಂಪಗೆ ಅವರು. ಸಿಟ್ಟಲ್ಲಂತೂ ಗುಲಾಲ್ ಮುಖಕ್ಕೆರಿಚಿಸಿಕೊಂಡವರಂತೆ ಕಾಣುತ್ತಿದ್ದರು. ಅಂದೇ ಅವರು ಅಷ್ಟು ಬೆಳ್ಳಗಿದ್ದಾರೆ ಅಲ್ಲಲ್ಲ ಕೆಂಪಗಿದ್ದಾರೆ ಅನ್ನುವುದು ನನ್ನ ಗಮನಕ್ಕೆ ಬಂದಿದ್ದು!

‘ಎದ್ದ್ ನಿಲ್ರಿ ಎಲ್ಲಾರು’ ಎಂದರು. ಆಗಲೂ ಜೋರು ದನಿಯಿಲ್ಲ. ಆದರೆ ಖಡಕ್ಕಾಗಿತ್ತು. ನಿಂತೆವು.

ಕೈಯಲ್ಲಿ ಡಸ್ಟರ್ ಹಿಡಿದು ಒಂದು ಡೆಸ್ಕಿನ ಹತ್ತಿರ ಹೋಗಿ ಸುಮ್ಮನೆ ಅಲ್ಲಿದ್ದ ಮೊದಲ ಹುಡುಗನ ಕೈ ನೋಡಿದ್ರು. ಡಿಫಾಲ್ಟ್ ಎಂಬಂತೆ ಅವನು ಅವರೆದುರು ಕೈ ಚಾಚಿದ. ಕೈಯಲ್ಲಿರೊ ಡಸ್ಟರಿನಿಂದ ಆ ಅಂಗೈ ಮೇಲೆ ಫಟ್! ಒಂದೇ ಒಂದೇಟು. ನಂತರ ಪಕ್ಕದ ಹುಡುಗನ ಸರದಿ! ಎಕ್ಕಿ ಬರ್ಲಿಂದ ಸರೀ ಬಾರಿಸಿಕೊಳ್ಳುವ ಹುಡುಗರಿಗೆ ಎಲ್ಲಿ ಹತ್ತಬೇಕದು?! ಆದರೂ ಇಷ್ಟೇ ಅಲ್ವಾ ಅಂದುಕೊಂಡು ಎಲ್ಲರೂ ಕೈ ಚಾಚುತ್ತಾ ಹೊಡೆತ ತಿಂದು, ಕೆಲವರು ಹೊಡೆತ ತಪ್ಪಿಸಿಕೊಳ್ಳಲು ಹೋಗಿ ಎರಡೆರಡು ತಿಂದು, ನನ್ನ ಸರದಿ ಬಂದಾಗ, ನಾನು ಗಲಾಟೆ ಮಾಡದೆ ಸೈಲೆಂಟಾಗಿದ್ದೆ ಆದ್ದರಿಂದ ನನಗೆ ಹುಲಿ ಸರ್ ಹೊಡೆಯುವುದಿಲ್ಲ ಎಂದೇ ನಂಬಿಕೊಂಡಿದ್ದವಳಿಗೆ, ‘ಕೈ ಚಾಚಬೇ’ ಎಂದರು. ಅವಮಾನವೆನಿಸಿತು. ‘ಕೈ ಚಾಚು’ ಈಗ ದನಿಯಲ್ಲಿ ಆಜ್ಞೆ ಇತ್ತು. ಠಪ್! ಕೈಗೆ ಬಿದ್ದ ಪೆಟ್ಟು ಜೋರಿರಲಿಲ್ಲ ನಿಜ. ಆದ್ರೆ ಮನಸಿಗೆ ಜೋರು ಪೆಟ್ಟಾಗಿತ್ತು.

ಕಣ್ಣೀರು ಧಾರಾಕಾರ. ಎಷ್ಟು ಕಂಟ್ರೋಲ್ ಮಾಡಿಕೊಂಡರೂ ನಿಲ್ಲುತ್ತಿಲ್ಲ. ಜೋರಾಗಿ ದನಿ ತೆಗೆದು ಅಳುವ ನನಗೆ ಪಕ್ಕದವರಿಗೂ ಗೊತ್ತಾಗದಂತೆ ಅಳುವುದು ಅಭ್ಯಾಸವಾಗಿದ್ದು ಅಂದೇ ಅನಿಸುತ್ತೆ. ಪಾಠ ಮಾಡುತ್ತಲೇ ಹುಲಿ ಸರ್ ನನ್ನನ್ನು ಗಮನಿಸುತ್ತಿದ್ದರು. ಮೊದ ಮೊದಲು ಏನೂ ಪ್ರತಿಕ್ರಿಯಿಸದೆ ಪಾಠ ಮಾಡುತ್ತಿದ್ದ ಅವರಿಗೆ ಸುಮ್ಮನಿರುವುದು ಕಷ್ಟವಾಯ್ತು ಅನಿಸುತ್ತೆ. ‘ಸುಮ್ನಾಗಬೇ’ ಎಂದು ಮೃದುವಾಗಿ ಹೇಳಿ ಮತ್ತೆ ಪಾಠ ಮುಂದುವರೆಸಿದರು. ನನ್ನ ಅಳು ಇನ್ನಷ್ಟು ಜೋರಾಯಿತು ಆ ಸಾಂತ್ವನದ ದನಿಗೆ. ಅಳು ನಿಲ್ಲುತ್ತಲೇಯಿಲ್ಲ! ಅಳುತ್ತಲೇ ಇದ್ದೆ ತಲೆ ಬಗ್ಗಿಸಿ. ಪಾಠದ ಕಡೆಗೆ ಗಮನವಿಲ್ಲ. ತಪ್ಪೇ ಮಾಡದೆ ಅನುಭವಿಸಿದ ಶಿಕ್ಷೆ ನನ್ನನ್ನು ವಿಚಲಿತಳನ್ನಾಗಿಸಿತ್ತು. ಮುಂದೆ ಬದುಕಲ್ಲಿ ಅನೇಕ ಸಲ ತಪ್ಪು ಮಾಡದೆ ಅವಮಾನಕ್ಕೊಳಗಾದ ನೋವನ್ನು ಅನುಭವಿಸಿದ್ದೇನೆ. ಇದಕ್ಕೂ ಮೊದಲೂ ಸಹ. ಆದ್ರೂ ಸರ್ ನನ್ನನ್ನು ಹೊಡೆಯಬಾರದಿತ್ತು. ನಾನು ತಪ್ಪು ಮಾಡಿಲ್ಲ ಅನ್ನುವ ನೋವು ಬಾಧಿಸುತ್ತಲೇಯಿತ್ತು.

‘ಜಯಲಕ್ಷ್ಮಿ, ಎದ್ದು ನಿಂದ್ರು’ ಗಂಭೀರವಾದ ದನಿ ನನ್ನನ್ನು ಎದ್ದು ನಿಲ್ಲಿಸಿತು.

‘ಎಲ್ಲಾರೂ ಹೊಡ್ತಾ ತಿಂದಾರ. ಸುಮ್ನ ಪಾಠ ಕೇಳ್ಕೊಂತ ಕುಂತಾರ. ನೋಡಲ್ಲಿ ನಿನ್ನ ಗೆಳತ್ಯಾರ ಎಷ್ಟು ನಕ್ಕೋತ ಪಾಠ ಕೇಳಾಕತ್ತಾರ. ನಿಂದೇನಿದು ಅತೀ?’

‘ಸರ್ರೀ, ನಾ ಧಾಂದ್ಲಿ ಮಾಡಿಲ್ಲ್ರೀ… ಅಂದ್ರೂ ನೀವು…’ ಬಿಕ್ಕುತ್ತಾ ಅರ್ಧಂಬರ್ಧ ನುಡಿದೆ.

ಸರ್ ಮುಖದಲ್ಲಿ ನಿಚ್ಚಳವಾಗಿ ಅಪರಾಧಿ ಭಾವ ಮೂಡಿದ್ದನ್ನ ನಾನ್ಯಾವತ್ತಿಗೂ ಮರೆಯಲಾರೆ. ಕ್ಷಣ ಹೊತ್ತು ಸುಮ್ಮನಿದ್ದವರು ಮತ್ತೆ ಎಂದಿನದೇ ತಮ್ಮ ಗಂಭೀರ ದನಿಯಲ್ಲಿ, ‘ಹೌದು ನಾನೂ ನೋಡೀನಿ. ಆದ್ರ ಇಡೀ ಕ್ಲಾಸು ಧಾಂದ್ಲಿ ಮಾಡೂಮುಂದ ಶಿಕ್ಷಾದಾಗ ನಿನಗಷ್ಟ ಕನ್ಸಿಶನ್ ಕೊಡಾಕ ಬರೂದಿಲ್ಲ. ಗುಂಪಿನ್ಯಾಗಿರ್ತೀರಿ ಅಂದ ಮ್ಯಾಲೆ ಅದರ ಚೊಲೋದ್ದು, ಕೆಟ್ಟದ್ದು ಎರಡ್ರಾಗೂ ನಿನಗೂ ಪಾಲಿರ್ತೈತಿ ಮರೀಬ್ಯಾಡ. ಹೋಗು ಮುಖ ತೊಳ್ಕೊಂಡು ಬಂದು ಕುಂಡ್ರು’

ಅವರು ಕ್ಲಾಸ್‍ರೂಮಲ್ಲಿ ಬಂದಾಗ ನಾನು ಗಲಾಟೆ ಮಾಡದಿದ್ದುದನ್ನ ಗಮನಿಸಿದ್ದರು ಅನ್ನುವುದು ಗೊತ್ತಾಗಿದ್ದೇ ಅವರೀ ಮಾತು ಆಡಿದಾಗ. ಏನೋ ಒಂಥರದ ಸಮಾಧಾನ ಅವರಿಗೆ ನಾನು ತಪ್ಪು ಮಾಡಿಲ್ಲ ಅನ್ನುವುದು ಗೊತ್ತಿದೆ ಅನ್ನುವುದು ತಿಳಿದು.

ಹೋಗಿ ಮುಖ ತೊಳೆದುಕೊಂಡು ಬಂದು ಕುಳಿತೆ. ಕಣ್ಣೀರು ಮಾತ್ರ…

‘ಗುಂಪಿನ್ಯಾಗಿರ್ತೀರಿ ಅಂದ ಮ್ಯಾಲೆ ಅದರ ಚೊಲೋದ್ದು, ಕೆಟ್ಟದ್ದು ಎರಡ್ರಾಗೂ ನಿನಗೂ ಪಾಲಿರ್ತೈತಿ ಮರೀಬ್ಯಾಡ.’

ಅಂದಿನಿಂದ ಇಂದಿನವರೆಗೆ ಹುಲಿ ಸರ್ ಆಡಿದ ಈ ಬೀಜದಂಥಾ ಮಾತು ಆಗಾಗ ನನ್ನ ಮನದಲ್ಲಿ ರಿಂಗಣಿಸುತ್ತಲೇ ಇರುತ್ತದೆ. 

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 27, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Amrutha md

    ಗುಂಪಲ್ಲಿ ಗೋವಿಂದ ಅಂದ್ಮೇಲೆ ಗುಂಪಲ್ಲಿ ಆಗೋ ಒಳಿತು ಕೆಡಕಿಗೂ ಜಾವೇ ಜವಾಬು ಅಲ್ವಾ ಮ್ಯಾಮ್ ಸೂಪರ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: