ಜಯಲಕ್ಷ್ಮಿ ಪಾಟೀಲ್ ಅಂಕಣ – ನನ್ನನ್ನು ನೋಡಲು ಬಂದ ವರ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

35

ನನ್ನ ಮದುವೆಯಾಗಿ ಒಂದೆರೆಡು ವರ್ಷಗಳ ನಂತರ ಅವ್ವನ ಬಳಿ ಹೀಗೆಂದಿದ್ದರು ನನಗೆ ಎಂದು ನಿಂಬಾಳದ ಕೂಲಿಯವರು ಮಾತಾಡಿದ್ದನ್ನ ಹೇಳಿದ್ದಾಗ ಅವ್ವ ಕನಲಿದ್ದರು. ೧೭ ವರ್ಷದ ಹುಡುಗಿಗೆ ಹಾಗೆನ್ನಲು ಅವರಿಗೆ ಮನಸ್ಸಾದರೂ ಹೇಗೆ ಬಂತು ಎಂದು ನೊಂದು ಕಣ್ಣೀರು ಹಾಕಿದ್ದರು. ಈ ವಿಷಯವನ್ನಿಲ್ಲಿ ಪ್ರಸ್ತಾಪಿಸಲು ಕಾರಣ ಆಗಲೂ ನಮ್ಮ ಹಳ್ಳಿಗಳಲ್ಲಿ ಬಾಲ್ಯ ವಿವಾಹ ಜಾರಿಯಲ್ಲಿತ್ತು ಮತ್ತು ಅದರಲ್ಲೂ ಹೆಣ್ಣುಮಕ್ಕಳ ಬದುಕಿನಲ್ಲಿ ಶಿಕ್ಷಣ, ಕಚೇರಿಗಳಲ್ಲಿನ ಉದ್ಯೋಗ ಅಷ್ಟು ಮುಖ್ಯವಾಗಿರಲೇ ಇಲ್ಲ ಎನ್ನುವುದನ್ನು ತಿಳಿಸಲು. ಆದರೆ ಕೆಲವು ಅಪವಾದಗಳ ಹೊರತಾಗಿ ಹಳ್ಳಿಗಳ ಈಗಿನ ವಾತಾವರಣ ತುಂಬಾ ಭಿನ್ನವಾಗಿದೆ.

ಊರಲ್ಲಿ ಒಳ್ಳೆಯ ಶಾಲೆಗಳಿಲ್ಲ ಎಂದು ಹತ್ತಿರದ ಜವಹರ್ ನವೋದಯ ವಸತಿ ಶಾಲೆ, ಮುರಾರ್ಜಿ ದೇಸಾಯಿ ವಸತಿ ಶಾಲೆಯಂತಹ ಸರಕಾರಿ ವಸತಿ ಶಾಲೆಗಳನ್ನು ಹುಡುಕಿಕೊಂಡು ಹೋಗಿ ಹೆಣ್ಣುಮಕ್ಕಳನ್ನು ಓದಿಸುತ್ತಿದ್ದಾರೆ. ಹಣವಿದ್ದ ಜನ ಖಾಸಗಿ ಶಾಲೆಗಳಲ್ಲಿ ಹೆಣ್ಣುಮಕ್ಕಳನ್ನು ಓದಿಸುತ್ತಿದ್ದಾರೆ. ಅನಕ್ಷರಸ್ಥರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು, ಓದು ಮುಗಿದ ಮೇಲೆ ಮಾದುವೆ ಮಾಡುತ್ತಿರುವುದು ಸಮಾಧಾನದ ವಿಷಯ. 

ನಮ್ಮಲ್ಲಿ ಹೆಣ್ಣು ನೋಡಲು ವರನ ಕಡೆಯವರು ಹೆಣ್ಣಿನ ಮನೆಗೆ ಬರುವುದು ವಾಡಿಕೆ. ಬ್ರಾಹ್ಮಣರು ಮಾತ್ರ ಕನ್ಯೆಯನ್ನು ವರನ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಹಾಗೆ ಹೆಣ್ಣುಮಗುವನ್ನ ಅವರಿವರ ಮನೆಗೆ ಕರೆದುಕೊಂಡು ಹೋಗಿ ತೋರಿಸುವುದೇನು ಚೆಂದ ಅನ್ನುವುದು ಈ ಕಡೆಯವರ ಅಂಬೋಣ. ಅವರವರಿಗೆ ಅವರವರ ಸಂಪ್ರದಾಯ ಶ್ರೇಷ್ಠ, ಅದು ಅವರಿಷ್ಟ ಎಂದು ಎಲ್ಲೋ ಕೆಲವರು ಹಾಗೆ ಮಾತನಾಡುವವರ ಬಾಯಿ ಮುಚ್ಚಿಸುತ್ತಿದ್ದರು. ಆದರೆ ಬ್ರಾಹ್ಮಣರೋ ಬ್ರಾಹ್ಮಣೇತರರೋ ಯಾರೂ ಪ್ರಕಟವಾಗಿ ಎದುರಿನವರ ಮನಸ್ಸು ನೋಯುವಂತೆ ಕಟುಕಿ ಮಾತನಾಡುತ್ತಿರಲಿಲ್ಲ. ನಮ್ಮಲ್ಲಿ ಎರಡೂ ಕಡೆಯವರಿಗೆ ಒಪ್ಪಿತವಾದರೆ ಮನೆತನ ನೋಡಲೆಂದು ಆಗ ಗಂಡಿನ ಮನೆಗೆ ಹೋಗಿ, ಅವರ ಮನೆಯ ಸಂಸ್ಕಾರ, ಆಸ್ತಿಪಾಸ್ತಿಗಳನ್ನು ಗಮನಿಸಿ, ಸಮಾಧಾನವೆನಿಸಿದರೆ ಮುಂದುವರೆಯುತ್ತಾರೆ. ಇಲ್ಲದಿದ್ದಲ್ಲಿ ಇಲ್ಲ. ಈಗಲೂ ಈ ಪದ್ದತಿಗಳು ಊರ ಕಡೆಗೆ ಹಾಗೆಯೇ ಇವೆ. 

ನನ್ನ ಮದುವೆ ನನ್ನ ಓದು ಮುಗಿಯುವ ಮೊದಲೇ ಆಯಿತು. ಬಿಎಸ್ಸಿ ಎರಡನೇ ವರ್ಷದಲ್ಲಿ ಓದುತ್ತಿದ್ದಾಗ, ನನ್ನನ್ನು ನೋಡಲು ನಾಲ್ಕನೇ ವರಮಹಾಶಯನ ಆಗಮನವಾಯಿತು. ಬಂದವರು ಕೈಕಾಲು ಮುಖ ತೊಳೆದುಕೊಂಡು, ಗಂಡಸರು ಹೊರಗಿನ ಕೋಣೆಯಲ್ಲಿ, ಹೆಣ್ಣುಮಕ್ಕಳು ಒಳ ಕೊಣೆಯಲ್ಲಿ ಕುಳಿತುಕೊಂಡರು. ವರನ ತಂದೆ ಶ್ರೀ. ಬಿ ಎನ್ ಪಾಟೀಲ್, ಸಿಂದಗಿ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿನ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಹುಡುಗ ಗುಲ್ಬರ್ಗಾದಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿ. ಪುಣೆಯಲ್ಲಿ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ೨೮೦೦ ರೂಪಾಯಿ ಸಂಬಳ. ೨೬ರ ಹರೆಯದ ಹುಡುಗ ತಿಳಿ ಗುಲಾಬಿ ಬಣ್ಣದ ಶರ್ಟ್, ಜೀನ್ಸ್ ಪ್ಯಾಂಟ್ ತೊಟ್ಟಿದ್ದ. ಅಂಥಾ ಏನು ಎತ್ತರವಲ್ಲದ, ಗಿಡ್ಡೂ ಅಲ್ಲದ ಗುಂಗುರು ಕೂದಲಿನ ಹುಡುಗ. ನಿಂಗನಗೌಡ. ನಿಂಗನಗೌಡ ಭೀಮನಗೌಡ ಪಾಟೀಲ್ ಅನ್ನುವುದು ಪೂರ್ತಿ ಹೆಸರು. ವರನ ಜೊತೆ ತಂದೆ ತಾಯಿ, ತಂಗಿ, ಹಿರೇಮಠ ಅನ್ನುವ ವರನ ಸ್ನೇಹಿತ, ಇನ್ನಿಬ್ಬರು ವರನ ತಂದೆಯ ಸಹೋದ್ಯೋಗಿಗಳು ಕಡಕೋಳ ಸರ್ ಮತ್ತು ಪಿಂಜಾರ್ ಸರ್ ಬಂದಿದ್ದರು. ಎಲ್ಲರದ್ದೂ ತಿಂಡಿ ಚಹಾ ಮುಗಿದ ಮೇಲೆ ಹೆಣ್ಣು ನೋಡುವ ಶಾಸ್ತ್ರ.

ನನ್ನನ್ನು ಗಂಡು ಮಕ್ಕಳಿದ್ದ ಕೋಣೆಗೆ ಕರೆದು ಎಲ್ಲರಿಗೂ ಕಾಣುವಂತೆ ಕುರ್ಚಿಯೊಂದನ್ನು ಹಾಕಿ ಕುಳ್ಳರಿಸಿದರು. ಒಳಗಿದ್ದ ಗಂಡಿನ ಕಡೆಯ ಹೆಣ್ಣುಮಕ್ಕಳೂ ಆ ಕೋಣೆಗೆ ಬಂದು ಕುಳಿತುಕೊಂಡರು. ಬಂದವರಲ್ಲಿ ಹಿರಿಯರೊಬ್ಬರು ನನಗೆ, ನನ್ನ ತಂದೆ ತಾಯಿಯ ಹೆಸರೇನು? ನಾನು  ಏನು ಓದಿರುವೆ, ಅಣ್ಣ ತಮ್ಮಂದಿರೆಷ್ಟು, ಅಕ್ಕ ತಂಗಿಯರೆಷ್ಟು ಎಂದೆಲ್ಲಾ ಕೇಳಿದರು. ಹೇಳಿದೆ. ಪುಸ್ತಕ ಕೊಡ್ರಿ ನಾಕ್ ಸಾಲು ಓದ್ಲಿ ಎಂದರು ಬಂದವರಲ್ಲಿ ಇನ್ನೊಬ್ಬರು. ತಲೆ ಎತ್ತಿ ಹಾಗೆ ಹೇಳಿದವರತ್ತ ನೋಡಿದೆ. “ಹೇಯ್ ಅದೆಲ್ಲಾ ಏನೂ ಬ್ಯಾಡ್ರಿ. ಅದೇನದು ಚೆಂದಲ್ಲ. ಸಾಕು, ಕುಂಕುಮಾ ಹಚ್ಚಿ ಉಡಿ ತುಂಬ್ರಿ” ಎಂದರು ವರನ ತಂದೆ. ಈ ಮಾತಿನಿಂದ ಅವರ ಬಗ್ಗೆ ಗೌರವ ಮೂಡಿತು ನನಗೆ. ನನ್ನ ಹೆಸರು, ಅಪ್ಪ ಅವ್ವನ ಹೆಸರು, ಓದು ಇತ್ಯಾದಿಗಳೆಲ್ಲ ಹಿಂದಿನ ಮೂರು ಸಲದ ಅನುಭವವೇ. ಆಗೆಲ್ಲ ತುಂಬಾ ಸಿಟ್ಟು ಬರುತ್ತಿತ್ತು ನನಗೆ.  ‘ಇದೆಲ್ಲ ಗೊತ್ತಿಲ್ಲದೇ ನಮ್ಮನೆಗೆ ಕನ್ಯೆ ನೋಡಲು ಬಂದಿದ್ದಾರಾ ಇವರೆಲ್ಲ?!’ ಎಂದು ಅವರು ಹೋದ ಮೇಲೆ ಸಿಡಿಸಿಡಿಗೊಂಡಿದ್ದೆ ನಾನು. ಆಗ, ಅದು ಹುಡುಗಿಗೆ ಮಾತಾಡಲು ಬರುತ್ತದೆಯೋ ಎಂದು ಪರೀಕ್ಷಿಸಲು ಹಾಗೆ ಮಾಡುತ್ತಾರೆ ಎಂದು ಅವ್ವ ಸಮಜಾಯಿಷಿ ಕೊಟ್ಟು ಸಮಾಧಾನ ಮಾಡಲು ನೋಡಿದ್ದರು. ಹಂಗಾರ ಹುಡುಗುನ್ನೂ ನೀವೂ ಹಂಗೇ ಪರೀಕ್ಷೆ ಮಾಡಬೇಕು. ಯಾಕ್ ಮಾಡಲ್ಲ? ಎಂದು ಕೇಳಿ, “ಇಲ್ಲದ್ ಫಾಜಿಲ್ (ಫ಼ಿಜೂಲ್ ನ ಅಪಭ್ರಂಶ) ಮಾತಾಡಬ್ಯಾಡ, ಹೋಗ್ ಶ್ಯಾಣ್ಯಾಕೆದಿ” ಎಂದು ಬೈಸಿಕೊಂಡಿದ್ದೆ. ಈಗ ತಂದೆಯ ಮಾತಿನಂತೆ ಹುಡುಗನ ತಂಗಿ ಎದ್ದು ಬಂದು ನನ್ನ ಹಣೆಗೆ ಕುಂಕುಮವಿಟ್ಟು, ಉತ್ತತ್ತಿ, ಕಲ್ಲುಸಕ್ಕರೆ, ಒಂದು ಡಜನ್ ಬಾಳೆಹಣ್ಣುಗಳನ್ನು ನನ್ನ ಉಡಿ ತುಂಬಿ ತಲೆಗೆ ಹೂ ಮುಡಿಸಿದರು. ಆಕೆಗಾಗಲೇ ಮದುವೆಯಾಗಿ ನಾಲ್ಕು ಮಕ್ಕಳಿದ್ದರು. ಇಪ್ಪತ್ನಾಲ್ಕರ ಹುಡುಗಿ ನಾಲ್ಕು ಮಕ್ಕಳ ತಾಯಿ! ನನಗೆ ಉಡಿ ತುಂಬಿಯಾದ ಮೇಲೆ ಅಲ್ಲಿದ್ದ ಎಲ್ಲರ ಕಾಲಿಗೂ ನಮಸ್ಕರಿಸಿ ಒಳಗೆ ಹೋಗಲು ತಿಳಿಸಿದರು. ಹಾಗೇ ಮಾಡಿ ದೇವರ ಜಗುಲಿಯ ಮೇಲೆ ಉಡಿ ಸಲ್ಲಿಸಿ ನಮಸ್ಕರಿಸಿ ಆಚೆ ಬಂದೆ. ಸ್ವಲ್ಪ ಹೊತ್ತಿನಲ್ಲಿಯೇ ಅಪ್ಪಾರು ಒಳಗೆ ಬಂದು, “ಹುಡುಗ ಇನ್ನೊಮ್ಮೆ ಹುಡುಗಿನ್ನ ನೋಡಬೇಕಂತ, ಕರಕೊಂಡು ಬಾ ಪಪ್ಪಿನ್ನ” ಅವ್ವನೆದುರು ಪಿಸುಗುಟ್ಟಿ, ಮತ್ತೆ ಹೋಗಿ ಬಂದವರ ಜೊತೆ ಕುಳಿತುಕೊಂಡರು. “ಹೋಗಬೇ ಹೋಗ್ ನಾ ವಲ್ಲ್ಯಾ” ಎಂದ ನನ್ನನ್ನು ಅವ್ವ “ಶ್ಶ್, ಸುಮ್ನ ಹೋಗು. ಹೋಗ್ಲಿಲ್ಲಂದ್ರ ಬಂದೋರು ಏನನ್ಕೊಂಡಾರು!” ಎಂದು ಗದರಿಸಿ, ಕೋಣೆಯೊಳಗೆ ಹೋಗಲು ಸೂಚಿಸಿ ತಾವು ಪಡಸಾಲಿಯ ಬಾಗಿಲಿನ ತೋಳಿಗೊರಗಿಕೊಂಡು ನಿಂತರು.

ಅವ್ವ ನಮ್ಮಲ್ಲಿನ ಉಳಿದವರಂತೆ ತಲೆಯ ಮೇಲೆ ಸೆರಗು ಹೊದೆಯುತ್ತಿರಲಿಲ್ಲವಾದರೂ, ಮೈತುಂಬಾ ಸೆರಗು ಹೊದ್ದುಕೊಳ್ಳುತ್ತಿದ್ದರು ಆಗ. ಸಿಟಿಯಲ್ಲಿದ್ದವರೆಲ್ಲ ಹಾಗೇ ಅವನ್ನ ಹಾಗೆ ತಲೆಯ ಮೇಲೆ ಸೆರಗು ಹೊದೆಯುತ್ತಿರಲಿಲ್ಲ. ಹಿರಿಯರೆದುರು ಮತ್ತು ಪೂಜೆ ಪುನಸ್ಕಾರಗಳ ಹೊತ್ತಲ್ಲಿ ಮಾತ್ರ ತಲೆಯ ಮೇಲೆ ಸೆರಗು ಹೊದ್ದುಕೊಳ್ಳುತ್ತಿದ್ದರು. ಮುಜುಗರಪಡುತ್ತಲೇ ಹೋಗಿ ಕುಳಿತೆ. ನನ್ನನ್ನು ಮತ್ತೆ ನೋಡಲು ಕರೆಸಿದ್ದರ ಬಗ್ಗೆ ಅಲ್ಲಿದ್ದವರಲ್ಲಿ ಯಾರೋ ಅವರ ಕಡೆಯವರೇ ವರನಿಗೆ, “ಈಗರೇ ಚೊಲೋತ್ನಂಗ ನೋಡಿಬಿಡಪಾ, ನಮ್ಮ ಹುಡಿಗೀನ ಹಿಂಗ ಹಗ್ಲಾಮುಗ್ಲಾ ಕರ್ಸಿ ಹೈರಾಣ ಮಾಡಬ್ಯಾಡ” ತಮಾಷೆ ಮಾಡುತ್ತಿದ್ದರು. ವರ ನನ್ನನ್ನು ಏನು ಕೇಳಿದರೋ ನೆನಪಿಲ್ಲ, ಅವರ ಮಾತಿಗೆ ಅವ್ವ ಬಾಗಿಲ ಬಳಿಯೇ ನಿಂತು ನನ್ನ ಪರವಾಗಿ ಉತ್ತರಿಸುತ್ತಿದ್ದರು. ಒಳ ಹೋಗಬಹುದು ಎಂದು ನನಗೆ ಅಪ್ಪಣೆಯಾಯಿತು. ಎದ್ದು ಬಂದೆ.

ನನ್ನನ್ನು ನೋಡಲು ಬಂದ ವರನೇ ಅವರ ಮನೆಯ ಹಿರಿಯ ಮಗ. ಒಟ್ಟು ಇಬ್ಬರು ಗಂಡು ಮಕ್ಕಳು ನಾಲ್ಕು ಜನ ಹೆಣ್ಣುಮಕ್ಕಳು ಅವರು. ವರನ ಎರಡನೇ ತಂಗಿಗೆ ಚೊಚ್ಚಲ ಹೆರಿಗೆಯಾಗಿದ್ದರಿಂದ ಅವರು ಹೆಣ್ಣು ನೋಡಲು ಬಂದಿಲ್ಲವೆಂದೂ, ಮೂರನೇ ತಂಗಿ ಒಂಬತ್ತನೇಯ ತರಗತಿಯಲ್ಲಿ, ತಮ್ಮ ಎಂಟನೇ ತರಗತಿಯಲ್ಲಿ ಮತ್ತು ಕೊನೆಯ ತಂಗಿ ಐದನೇ ತರಗತಿಯಲ್ಲಿ ಓದುತ್ತಿರುವ ಕುರಿತು ಅಪ್ಪಾರ ಹತ್ತಿರ ಬಂದವರಲ್ಲಿ ಯಾರೋ ಒಬ್ಬರು ಮಾಹಿತಿ ನೀಡುತ್ತಿದ್ದರು. 

ಬಂದು ನೋಡಿಕೊಂಡು ಹೋದವರು ಹಿಂದಿಂದೇನೇ ವರನಿಗೆ ಕನ್ಯೆ ಒಪ್ಪಿಗೆಯಾಗಿದ್ದಾಳೆ ಎನ್ನುವ ಸಮಾಚಾರ ಕಳುಹಿಸಿದರು. ಅದನ್ನು ಕೇಳಿ ನಮ್ಮನೆಯಲ್ಲಿ ಎಲ್ಲರೂ ತುಂಬಾ ಖುಷಿಪಟ್ಟರು. ಯಾರೂ ನಿನಗೆ ಹುಡುಗ ಇಷ್ಟವಾದನಾ ಇಲ್ಲವಾ ಎಂದು ಕೇಳಲೇಯಿಲ್ಲ! ಹಾಗೆ ಕೇಳುವ ಪದ್ದತಿಯೇ ನಮ್ಮಲ್ಲಿ ಇರಲಿಲ್ಲ. ನಾನು ಪಿಯೂಸಿ ಮುಗಿಸಿದ್ದಾಗ ಒಮ್ಮೆ ಅವ್ವ ಅಡುಗೆಮನೆಯಲ್ಲಿ ಹತ್ತಿರ ಯಾರೂ ಇಲ್ಲದಿದ್ದಾಗ ನನ್ನಲ್ಲಿ, ನಿನಗೆ ಎಂಥಾ ಗಂಡು ನೋಡೋಣ ಎಂದು ಕೇಳಿದ್ದೇ ದೊಡ್ಡ ಮಾತಾಗಿತ್ತು. ಒಮ್ಮೆ ಕೇಳಿ ನಾನು ಹೇಳಿಯೂ ಆಗಿತ್ತಲ್ಲ ಮತ್ತೇನು ಕೇಳುವುದು ಎಂದು ಅವ್ವನ ವಿಚಾರವಾಗಿದ್ದಿರಬಹುದು. ಎರಡೂ ಕಡೆಯಲ್ಲಿ ಎಲ್ಲರಿಗೂ ಸಂಬಂಧ ಒಪ್ಪಿಗೆಯಾಗಿತ್ತಾದರೂ, ವರನ ತಾಯಿಗೆ ಹುಬ್ಬಳ್ಳಿಯಲ್ಲಿದ್ದ ಒಂದು ಕನ್ಯೆ ಮತ್ತು ಅವರ ಮನೆತನ ಇಷ್ಟವಾಗಿತ್ತು. 

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

July 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Akshata Deshpande

    Very interesting ಪ್ರಸಂಗ ಕಣ್ಣಿಗೆ ಕಟ್ಟಿದಂತಿದೆ ❤️

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: