ಜಯಲಕ್ಷ್ಮಿ ಪಾಟೀಲ್ ಅಂಕಣ – ನನಗೆ ಹೀಗೆ ಅವಮಾನವಾಯಿತು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

34

ರಣ ಬೇಸಿಗೆಯ ಒಂದು ಮುಂಜಾನೆ ಸುಮಾರು ಹತ್ತರ ಸಮಯ. ಎಂಟ್ಹತ್ತು ಮಹಿಳೆಯರ ಗುಂಪೊಂದು ಬೆಳದಿಂಗಳಲ್ಲಿ ವಿಹರಿಸುತ್ತಿರುವವರಂತೆ ಹರಟುತ್ತಾ ನಿಂಬಾಳದ ನಮ್ಮ ಮನೆ ಎದುರಿನ ತೋಟದಲ್ಲಿ ಕಸ ತೆಗೆಯುತ್ತಿದ್ದರು. ಈ ಕಡೆಗೆಲ್ಲ ಎಸ್ಟೇಟ್ ಅಂತೆಲ್ಲ ಅಂತಾರಲ್ಲ ಅಂಥಾ ತೋಟದಮನೆ ನಮ್ಮದು. ಮೊದಲೆಲ್ಲ ಅಂದರೆ ಶಾಲಾ ದಿನಗಳಲ್ಲಿ ಕಾದಂಬರಿಗಳಲ್ಲಿ ಬರುವ ಎಸ್ಟೇಟುಗಳ ಬಗ್ಗೆ ಓದುವಾಗ ಅಲ್ಲಿನ ಮನೆ ಎದುರಿನ ಪೋರ್ಟಿಕೊ, ಹಂಸ ತೇಲಿದಂತೆ ತೇಲುತ್ತಾ ಬಂದು ಅಲ್ಲಿ ನಿಲ್ಲುವ ಮರ್ಸಡೀಸ್ ಕಾರು, ಅಲ್ಲಿನ ಜನ ತೊಡುವ ರೇಶಿಮೆ ಬಟ್ಟೆ, ಅಲಂಕಾರ ಇತ್ಯಾದಿ ವರ್ಣನೆಗೂ ನಮ್ಮ ತೋಟಕ್ಕೂ ಯಾವುದೇ ಹೋಲಿಕೆ ಕಂಡು ಬರದೇ ಎಸ್ಟೇಟ್ ಎಂದರೆ ಅದೇನೋ ತುಂಬಾ ಹೈಫೈ ಜನರಿರುವ ಇರುವ ತೋಟದ ಮನೆ ಎಂದುಕೊಂಡಿದ್ದೆ. ವಾವ್! ಅನಿಸೋದು.

ನಮ್ಮದೇನಿದ್ದರೂ ಸಾಧಾರಣ ಮೆಟಗಿ ಅಷ್ಟೇ ಎಂದು ಭಾವಿಸಿದ್ದೆ. ನಮ್ಮಲ್ಲಿ ಮನೆ ಎದುರು ಪೋರ್ಟಿಕೊ ಕಾರುಗಳಿರಲಿಲ್ಲ, ನಿತ್ಯದ ಉಡುಪು ರೇಶಿಮೆಯದ್ದಲ್ಲ, ಅಲಂಕಾರಕ್ಕೆ ಇಲ್ಲಿ ಜಾಗವಿಲ್ಲ ಅನ್ನುವುದಷ್ಟೇ ವ್ಯತ್ಯಾಸ. ನಾವು ಮೆಟಗಿ ಎಂದು ಕರೆಯುವುದನ್ನೇ ಇಂಗ್ಲಿಷಲ್ಲಿ ಎಸ್ಟೇಟ್ ಎನ್ನುತ್ತಾರೆ ಎನ್ನುವುದು ಅರಿವಾಗಿದ್ದು ನಿಧಾನವಾಗಿ. ಊರಿನಿಂದ ಒಂದು ಒಂದೂವರೆ ಕಿಲೊಮಿಟರಿನಷ್ಟು ದೂರವಿರುವ ನಮ್ಮ ತೋಟದ ಮನೆಯ ಎದುರಿನ ವಿಶಾಲ ಅಂಗಳವನ್ನ ಆಳುಮಕ್ಕಳು ಗುಡಿಸಲು ಅರ್ಧ ಗಂಟೆಯಾದರೂ ಬೇಕಾಗುತ್ತದೆ. ಅಂಥಾ ವಿಶಾಲವಾದ ಅಂಗಳ ನಮ್ಮ ತೋಟದಮನೆ ಎದುರಿನದು.

ನಮ್ಮಲ್ಲಿಯೇ ಜೀತಕ್ಕಿದ್ದ ಕುಟುಂಬಗಳಿಗಾಗಿ ತೋಟದಲ್ಲಿಯೇ ಗುಡಿಸಲುಗಳಿದ್ದವು. ಜೀತ ಎಂದಕೂಡಲೇ ಜೀತಪದ್ದತಿ ನೆನಪಾಗುವುದು ಸಹಜ. ಆದರಿಲ್ಲಿ ಜೀತ ಎಂದರೆ ಕೃಷಿ ಕೆಲಸಕ್ಕಾಗಿ ಮಾಡಿಕೊಳ್ಳುವ ವಾರ್ಷಿಕ ಕಾಂಟ್ರ್ಯಾಕ್ಟ್. ವರ್ಷಕ್ಕಿಷ್ಟು ನಗದು, ಇಂತಿಷ್ಟು ಕಾಳುಕಡಿ, ಜೋಡು ಬಟ್ಟೆ ಎಂದು ನಿಗದಿಯಾಗುತ್ತಿತ್ತು. ಹಾಗೊಂದು ಬಾಯಿಮಾತಿನ ಕರಾರದ ಮೇಲೆ ಜೀತಕ್ಕಿದ್ದ ವ್ಯಕ್ತಿಯ ಹೆಂಡತಿ ಮಕ್ಕಳು ಹೊಲದಲ್ಲಿ ಕೆಲಸ ಮಾಡಿದರೆ ಅದರ ಕೂಲಿ ಪ್ರತ್ಯೇಕ. ಅದು ಜೀತದ ಕರಾರಿನ ವ್ಯಾಪ್ತಿಯಲ್ಲಿ ಬರುತ್ತಿರಲಿಲ್ಲ. ಅಂಥಾ ಒಂದೆರೆಡು ಕುಟುಂಬಗಳು ಸದಾ ನಮ್ಮ ತೋಟದಲ್ಲಿರುತ್ತಿದ್ದವು.

ಎರಡು ಎತ್ತಿನ ಎರಡು ಬಂಡಿಗಳು (ಚಕ್ಕಡಿ), ಆರು ಎತ್ತು, ನಾಲ್ಕು ಎಮ್ಮೆ, ೧೫-೧೬ ಆಕಳು, ಒಂದಿಷ್ಟು ಆಡು ಹೋತಗಳು, ಹತ್ತು ಹನ್ನೆರೆಡು ಕೋಳಿಗಳಿದ್ದ ಸಮೃದ್ಧಿಯ ದಿನಗಳವು. ಎತ್ತುಗಳಿಗೆ ಪ್ರತ್ಯೇಕ ಕೊಟ್ಟಿಗೆ. ಎಮ್ಮೆಗಳನ್ನು ಅಲೆಮನೆಯ ಪಕ್ಕದಲ್ಲಿ ನೆಟ್ಟ ಗೂಟಕ್ಕೆ, ಮರಕ್ಕೆ ಕಟ್ಟುತ್ತಿದ್ದರೆ, ಆಕಳುಗಳನ್ನು ಮನೆಯ ಒಂದು ಬದಿಯ ಗೋಡೆಯ ಉದ್ದಕ್ಕೂ ಗ್ವಾದ್ಲಿ (ಮೇವು ಹಾಕಲೆಂದು ಕಲ್ಲಿನಿಂದ ಕಟ್ಟಿದ ಕಾಲುವೆಯಂಥ ಜಾಗ. ಒಂದೆರಡೇ ರಾಸುಗಳಿದ್ದರೆ ಗ್ವಾದ್ಲಿ ಚೌಕಾಕಾರದಲ್ಲಿರುತ್ತವೆ. ಅದರಲ್ಲಿ ನೀರು, ಮುಸುರೆಯನ್ನೂ ಹಾಕುತ್ತಾರೆ.) ಕೋಳಿಗಳಿಗೆ ಗೂಡು, ಆಡುಗಳಿಗೊಂದು ಕೊಟ್ಟಿಗೆ. ಊರಲ್ಲಿನ ಮನೆಯನ್ನು ಆಗ ಬೆಳೆದ ಕಾಳುಕಡಿ, ನಮ್ಮಲ್ಲಿಯೇ ಮಾಡಿದ ಬೆಲ್ಲದ ಪೆಂಟಿಗಳನ್ನಿಡಲು ಬಳಸುತ್ತಿದ್ದರು. ಊರಲ್ಲಿನ ಮನೆಯ ಪಡಸಾಲೆಯಲ್ಲೇ ಜೋಳ, ಸಜ್ಜೆಗಳನ್ನು ಸಂಗ್ರಹಿಸಿ ಇಡುವ ಹಗೆ (ಹಗೇವು)ಇದೆ. ವಾರಗಟ್ಟಲೇ ನಮ್ಮಲ್ಲೇ ಬೆಳೆದ ಕಬ್ಬಿನ ಗಾಣ ವಾರಪೂರ್ತಿ ನಡೆದಾಗ ಅಲ್ಲಿ ಪುಟ್ಟ ಜಾತ್ರೆಯ ವಾತಾವರಣವಿರುತ್ತಿತ್ತು.

ನಮ್ಮದಾದ ನಂತರ ಮುಂದೆ ತಿಂಗಳು ಪೂರ್ತಿ ಊರಲ್ಲಿನ ಕೆಲವರು ನಮ್ಮ ಅಲೆಮನೆಯಲ್ಲೆ ಬೆಲ್ಲ ತಯಾರಿಸಿಕೊಳ್ಳುತ್ತಿದ್ದರು. ಆಯಾ ಕಾಲಕ್ಕೆ ತಕ್ಕಂತೆ ಜೋಳ, ಸಜ್ಜಿ, ತೊಗರಿ, ಹೆಸರು, ಕಡಲೆ, ಶೇಂಗಾ ಇತ್ಯಾದಿ ಕಾಳುಕಡಿಗಳನ್ನು ಅವುಗಳ ಕಾಲಕ್ಕೆ ತಕ್ಕಂತೆ ಬೆಳೆಯುತ್ತಿದ್ದರೆ ಕಬ್ಬು, ಇನ್ನೂರು ಬಾಳೆ, ಮುನ್ನೂರು ನಾನ್ನೂರು ನಿಂಬೆ ಗಿಡಗಳು ತೋಟದ ಯಾವುದಾದರು ಒಂದು ಭಾಗದಲ್ಲಿ ಯಾವಾಗಲೂ ಇರುತ್ತಿದ್ದವು. ಇವುಗಳ ಹೊರತಾಗಿ ಐವತ್ತು ಮಾವಿನ ಮರಗಳು (ಈ ಮಾವಿನ ಮರಗಳ ಹಿಂದೊಂದು ಕಥೆಯಿದೆ ಮುಂದೆಂದಾದರೂ ಹೇಳುವೆ), ಐದಾರು ಹುಣಸೆಮರ, ಬೇವಿನ ಮರಗಳು, ಕಂಚಿಕಾಯಿ ಮರ ಹೀಗೆ, ಎಲ್ಲಿ ನೋಡಿದರಲ್ಲಿ ಹಸಿರುಹೊನ್ನು ಆಗ. ಈ ಹಸಿರಿನ ವ್ಯಾಮೋಹದಿಂದಾಗಿಯೇ, ಅಪ್ಪಾ ಅವ್ವಾ ಶಾಲಾ ರಜಾ ದಿನಗಳಲ್ಲಿ ನಿಂಬಾಳಕ್ಕೆ ನನ್ನನ್ನು ಕಳಿಸಿದರೆ ಹಠ ಮಾಡದೇ ಹೋಗುತ್ತಿದ್ದೆ.

ತೋಟದಲ್ಲಿ ಕೆಲಸ ಮಾಡುವ ಹೆಣ್ಣುಮಕ್ಕಳು ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಲು ಆಗೊಮ್ಮೆ ಈಗೊಮ್ಮೆ ನನ್ನನ್ನು ಆಯಿ ಕಳಿಸುವುದಿತ್ತು. ಇಂಥಾ ಯಜಮಾನಿಕೆ ನನಗೆ ಇಷ್ಟವಾಗುತ್ತಿತ್ತು. ಆದರೆ ಆ ಯಜಮಾನಿಕೆ ಕೇವಲ ಸೊಂಟದ ಮೇಲೆ ಕೈಯಿಟ್ಟು ನಿಂತು ನೋಡಿಕೊಳ್ಳುವ ಯಜಮಾನಿಕೆಯಲ್ಲ, ಅವರೊಂದಿಗೆ ಕಸ (ಕಳೆ) ತೆಗೆಯುವ ಕೆಲಸದಲ್ಲಿ ನಾವೂ ಭಾಗಿಯಾಗಬೇಕಿತ್ತು. ನನಗೋ ಮೊದ ಮೊದಲು ಕುರುಪಿ ಮತ್ತು ಕುಡುಗೋಲಿನಲ್ಲಿ ವ್ಯತ್ಯಾಸ ತಿಳಿಯುತ್ತಿರಲಿಲ್ಲ. ನೋಡಲು ಒಂದೇ ಆಕಾರ ಅವುಗಳದ್ದು. ಕುರುಪಿಯ ಹೊರಗಿನ ಅಂಚು ಹರಿತಾಗಿ ಇರುತ್ತಿತ್ತು, ಅದರಿಂದ ನೆಲವನ್ನು ಹಡ್ಡಿ ಕಸ ತೆಗೆಯಲು ಅನುವಾದರೆ, ಕುಡಗೋಲಿನ ಒಳ ಅಂಚು ಹರಿತ. ಅದರಿಂದ ಸಣ್ಣಪುಟ್ಟ ಪೊದೆಗಳನ್ನು ಗಿಡಗಳನ್ನು, ಕಬ್ಬನ್ನು ಕಡಿಯಲು ಅನುಕೂಲ. ಈ ನನಗೆ ವ್ಯತ್ಯಾಸ ತಿಳಿಯದರ ಬಗ್ಗೆ ಅವರೆಲ್ಲ ತಮಾಷೆ ಮಾಡಿ ನಗುತ್ತಿದ್ದರು, ನನಗದರಿಂದ ಬೇಸರವೇನೂ ಆಗುತ್ತಿರಲಿಲ್ಲ. ಕಾರಣ ಅವರುಗಳೇ ಹೇಳುವ ಹಾಗೆ ಸಾಲ್ಯಾಗ ಇವನ್ನೆಲ್ಲ ಹೇಳಿಕೊಡುವುದಿಲ್ಲ ಅನ್ನುವುದು.

ನಮ್ಮ ತೋಟಕ್ಕೆ ಕೆಲಸಕ್ಕೆ ಬರುವವರನ್ನೆಲ್ಲ ಹೆಸರು ಹಿಡಿದು ಕರೆದ ನೆನಪೇಯಿಲ್ಲ ನನಗೆ. ಅವರು ನಮ್ಮ ಸಂಬಂಧಿಕರಲ್ಲದೇ ಹೋದರೂ ಯಾರೋ ಅತ್ತೆ, ಇನ್ನ್ಯಾರೋ ಮಾಮಾ, ಸಣ್ಣವ್ವ, ಕಾಕಾ, ದೊಡ್ಡವ್ವ,ದೊಡ್ಡಪ್ಪ, ಆಯಿ, ಮುತ್ತ್ಯಾ, ಅಣ್ಣ, ಅಕ್ಕ ಹೀಗೆ ಆತ್ಮೀಯತೆಯ ಸಂಬೋಧನೆಯಿಂದಾಗಿ ಅವರೆಲ್ಲ ನಮ್ಮ ಮನೆಯವರಂತೆಯೇ ಅನಿಸುತ್ತಿತ್ತು. ಈಗಲೂ ನನಗೆ ಅದೇ ಆತ್ಮೀಯ ಬಾಂಧವ್ಯ ಅಲ್ಲಿನ ಕೆಲವರೊಂದಿಗಿದೆ. ಅವರೆಲ್ಲ ಹಾಡು ಕಟ್ಟುತ್ತಾ, ಹರಟುತ್ತಾ, ಒಬ್ಬರನ್ನೊಬ್ಬರು ಕಿಚಾಯಿಸುತ್ತಾ ಬದುಕಲ್ಲೆ ಕಷ್ಟಗಳೇ ಇಲ್ಲ ಎಂಬಂತೆ ಇರುತ್ತಿದ್ದುದು ಬದುಕಿನ ಕಷ್ಟಗಳ ಅರಿವಿಲ್ಲದ ನನಗೆ ಇಷ್ಟವಾಗುತ್ತಿತ್ತು. ಅದೂ ಒಂದು ಕಾರಣ ಆಗ ನಾನು ನಿಂಬಾಳಕ್ಕೆ ಹೋಗಲು ಹಾತೊರೆಯುವಂತೆ ಮಾಡುತ್ತಿದ್ದುದು. ಹಾಗಾಗಿಯೇ ಪಿಯೂಸಿ ಎರಡನೇ ವರ್ಷದ ಪರೀಕ್ಷೆ ಬರೆದಾಗಿದ್ದ ನಾನು ರಜೆಗೆ ನಿಂಬಾಳಕ್ಕೆ ಬಂದಿದ್ದೆ.

ಆಯಿ ಅಲ್ಲೇ ಹತ್ತಿರದಲ್ಲಿರುವ ಹುಣಸೆಮರದ ಕೆಳಗೆ ಒಂದು ಗೋಣಿಚೀಲ ಹಾಸಿಕೊಂಡು ಅವರೆಲ್ಲ ಬರೀ ಹರಟದೆ ಕೆಲಸ ಮಾಡುವಂತೆ ನೋಡಿಕೊಳ್ಳುತ್ತಿದ್ದರು. ನನಗೆ ಅವರೆಲ್ಲರ ಜೊತೆ ಕಸ (ಕಳೆ) ಕೀಳುವುದೆಂದರೆ ಇಷ್ಟವಾಗುತ್ತಿತ್ತು. ಅದೇ ಕಾರಣಕ್ಕೆ ಮನೆಯಿಂದ ಕುರುಪಿಯೊಂದು ಕೈಯಲ್ಲಿ ಹಿಡಿದೇ ಅವರೆಲ್ಲ ಇದ್ದಲ್ಲಿಗೆ ಬಂದೆ. ನಾನೂ ಕಸಾ ತಗೀತೀನಿ ಆಯಿ ಎಂದಾಗ ಅವರು ಬೇಡವೆನ್ನಲಿಲ್ಲ. ಆಯಿತು ಎಂದೂ ಅನ್ನಲಿಲ್ಲ. ಆದರೆ ನನಗೆ ಕಸ ತೆಗೆಯುವುದು ಗೊತ್ತಿಲ್ಲ ಮತ್ತು ಅರಿಯದೇ ಮಡಿಗಳ ಬದುವು ತುಳಿದು ಹಾಳು ಮಾಡಿಬಿಡುತ್ತೇನೆ ಎಂದುಕೊಂಡು ಅಲ್ಲಿದ್ದವರು, “ಅವ್ವೀ, ಅಲ್ಲೇ ಆಯಿ ಬಲ್ಲಿ ನೆಳ್ಳಾಗ ಕುಂಡ್ರು ಹೋಗು. ಸಾಲಿ ಕಲ್ತೋರು ನೀವೆಲ್ಲಾ. ನಿಮಗಿದೆಲ್ಲಾ ಬಗಿಹರಿಯೂ ಮಾತಲ್ಲ” ಎಂದು ನನ್ನನ್ನು ತಡೆದರೂ ಕೇಳದೆ ಅವರೊಂದಿಗೆ ಕಸ ತೆಗೆಯಲು, ಅಂದು ಮಡಿಯ ಸಾಲಿನೆದುರು ಕುಕ್ಕರಗಾಲಲ್ಲಿ ಕುಳಿತು ಕಸ ಯಾವುದು, ಸಸಿ ಯಾವುದು ಎಂದು ನೋಡುತ್ತಿರುವಾಗಲೇ ಒಬ್ಬಾಕೆ, “ಶೇಖರ್ ಅಣ್ಣಾನ ಮಗಳಲ್ಲಾ ನೀ? ಇನ್ನಾ ಮದಿವಿ ಆಗಿಲ್ಲಾ ನಿಂದು?”
ಸಡನ್ನಾಗಿ ಎದುರಾದ ಈ ಪ್ರಶ್ನೆಗೆ ಮತ್ತದರ ಧಾಟಿಗೆ ಕಕ್ಕಾವಿಕ್ಕಿಯಾದೆ ನಾನು.

“ಹೂಂ ಶೇಖ್ರೂನ ದೊಡ್ಡ ಮಗಳು” ಆಯಿ ಉತ್ತರಿಸಿದರು.
“ಯವ್ವಾ ಪೋರಿ ಮಾರಿ ನೋಡಲ್ಲಿ, ಬಿರಸ್ ಕೊಡ್ಡಾಗೇತಿ! ದೊಡ್ಡಾಕ್ಯಾಗಿ ಏಸ್ ವರ್ಸಾತೋ ಏನೋ.. ಇನ್ ಯಾರ ಮದವಿ ಆಕ್ಕಾರ? ದೌಡ ಲಗ್ನಾ ಮಾಡಿದ್ರ ಬೇಶಿ.” ಇನ್ನೊಬ್ಬಾಕೆಯ ಉವಾಚ.

ತುಂಬಾ ಅವಮಾನವಾದಂತೆನಿಸಿ ಆಯಿಯ ಕಡೆ ತಿರುಗಿ ನೋಡಿದರೆ ಅವರು ಕೂಲಿ ಕೆಲಸದ ಹೆಣ್ಣುಮಕ್ಕಳ ಮಾತಿಗೆ ತಮ್ಮದೂ ಸಮ್ಮತಿ ಇದೆ ಎಂಬಂತೆ ತಲೆಯಾಡಿಸುತ್ತಿದ್ದಾರೆ! ನನ್ನ ಮುಖ ಬಿರುಸಾಗಿ ಕೊರಡಿನಂತಾಗಿದೆ ಎಂದಿದ್ದು ತುಂಬಾ ನೋಯಿಸಿತ್ತು ನನ್ನನ್ನು. ಬಂದ ಅಳುವನ್ನು ಹಲ್ಲಿನಡಿ ಕಚ್ಚಿಹಿಡಿದು, ತುಟಿಬಿಗಿದು ಅಲ್ಲಿಂದ ಎದ್ದು ಮನೆ ಕಡೆ ಹೆಜ್ಜೆ ಹಾಕಿದೆ. ಮನೆಗೆ ಬಂದವಳೇ ಗೋಡೆಗೆ ನೇತು ಹಾಕಿದ್ದ ಪುಟ್ಟ ಕನ್ನಡಿಯಲ್ಲಿ ದಿಟ್ಟಿಸಿ ನೋಡಿಕೊಂಡರೆ ನೀರ ಪೊರೆಯಿಂದಾಗಿ ಎಲ್ಲಾ ಮಸುಕು ಮಸುಕು. ಕಣ್ಣೊರೆಸಿಕೊಂಡು ಕನ್ನಡಿಯನ್ನು ಕೈಗೆತ್ತಿಕೊಂಡು ಮುಖವನ್ನು ಮತ್ತೆ ಮತ್ತೆ ನೋಡಿಕೊಂಡೆ. ಅಷ್ಟು ಅಸಹ್ಯವಾಗಿ ಕಾಣುತ್ತಿದ್ದೆನೆಯೇ ನಾನು? ಇನ್ನೂ ಹದಿನೆಂಟೂ ಆಗಿರದ ನನ್ನ ಮುಖ ಬಿರುಸು ಕೊರಡಿನಂತಾಗಿದೆಯೇ..? ತುಂಬಾ ಅವಮಾನ, ಮುಜುಗರವಾಗತೊಡಗಿತು. ಅದಕ್ಕೂ ಮೊದಲು ಸಣ್ಣಮಾವ ಹಲವಾರು ಬಾರಿ, ಕಣ್ಣು ಮೂಗು, ಕೂದಲು ಒಂದೂ ಚೆಂದವಿಲ್ಲದ ಹುಡುಗಿ ನಾನು ಎಂದು ತಮಾಷೆ ಮಾಡುತ್ತಿದ್ದುದು, ಈಗ ಈ ಕೂಲಿ ಹೆಂಗಸರ ಮಾತು ಎಲ್ಲವೂ ಸೇರಿ, ನನ್ನಷ್ಟು ಕುರುಪಿ ಹೆಣ್ಣು ಜಗತ್ತಿನಲ್ಲಿ ಮತ್ತ್ಯಾರೂ ಇರಲಿಕ್ಕಿಲ್ಲೇನೋ ಅನಿಸತೊಡಗಿ ಕೀಳರಿಮೆ ಕಾಡತೊಡಗಿತು.
ಮುತ್ತ್ಯಾರ ಬಳಿ ನನ್ನನ್ನು ಅಂದೇ ಮರಳಿ ಬಿಜಾಪುರಕ್ಕೆ ಕಳಿಸಲು ಕೇಳಿದೆ. ಒಪ್ಪಲಿಲ್ಲ ಅವರು.

ಮದ್ಯಾಹ್ನ ಊಟದ ವೇಳೆಗೆ ಮನೆಗೆ ಬಂದ ಆಯಿಯ ಹತ್ತಿರ ನಾನು ಊರಿಗೆ ಹೋಗುತ್ತೇನೆ ಕಳಿಸಿಕೊಡಿ ಎಂದ ಬಗ್ಗೆ ಮುತ್ತ್ಯಾರು ಹೇಳಿದಾಗ, “ಅತ್ತಿಗೋಳಾಕ್ಕಾರ, ಹಂಗಾಗಿ ನಕರಿ ಮಾಡ್ತಾರ. ಅದನ್ನೆಲ್ಲ ಮನಸಿಗೆ ಹಚಗೋತಾರೇನು? ಹುಚಗೊಟ್ಟಿ” ಎಂದು ಆಯಿ ಸಮಾಧಾನಿಸುವ ಮಾತನ್ನಾಡಿದರು. ಅವರುಗಳು ಹಾಗೆಲ್ಲಾ ಅನ್ನುವಾಗ ನಗುತ್ತಾ ಸುಮ್ಮನೆ ಕುಳಿತಿದ್ದ ಆಯಿಯ ಸಮಾಧಾನದ ಮಾತುಗಳು ನನಗೆ ಕೃತಕ ಅನಿಸಿದವು. ನನಗಲ್ಲಿ ಒಂದು ಕ್ಷಣವೂ ಇರಲು ಮನಸ್ಸಿರಲಿಲ್ಲವಾದ್ದರಿಂದ ಹಠ ಹಿಡಿದೆ. ಮಾರನೇಯ ದಿನ ಅನಿವಾರ್ಯವಾಗಿ ನನ್ನನ್ನು ಹತ್ತರ ಲೋಕಲ್ (ಟ್ರೇನ್)ಗೆ ಬಿಜಾಪುರಕ್ಕೆ ಹೋಗುತ್ತಿದ್ದ ಊರಿನವರೊಬ್ಬರನ್ನು ಜೊತೆ ಮಾಡಿ ಕಳುಹಿಸಿಕೊಟ್ಟರು. ಮನೆಗೆ ತಲುಪಿದವಳು ಯಾರ ಬಳಿಯೂ ನನಗೆ ಹೀಗೆ ಅವಮಾನವಾಯಿತು ಎಂದು ಆಗ ಹೇಳಲಿಲ್ಲ. ನನ್ನ ಸೌಂದರ್ಯದ ಬಗ್ಗೆ ಆಡಿಕೊಂಡಿದ್ದನ್ನ ಹೇಳುವುದಾದರೂ ಹೇಗೆ?!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

June 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Akshata Deshpande

    ಅಯ್ಯೋ ನಿಮ್ಮಷ್ಟು ಚೆಂದಾಗಿ ಕಾಣೋರು ಯಾರರ ಅದಾರ ಜಯಾ? ಖರೇನ ರೀ ನಿಜವಾದ ಸುಂದರತೆ ಯಾವುದ್ರಲ್ಲಿದೆ ಅನ್ನೋದು ಆಮೇಲೆ ದೊಡ್ಡವರಾದ ಮೇಲೆ ಅರ್ಥ ಆಗತ್ತೆ ಆದ್ರೆ ಸಣ್ಣವರಿದ್ದಾಗ ಮುಖ ಚೆನ್ನಾಗಿದ್ರೆ ಮಾತ್ರ ಸೌಂದರ್ಯ ಅನ್ಸೋದು ಸಹಜ ತುಂಬ ಚೆನ್ನಾಗಿ ಬರ್ತಿದೆ ಅಂಕಣ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: