ಜಯಲಕ್ಷ್ಮಿ ಪಾಟೀಲ್ ಅಂಕಣ – ನನ್ನವ್ವನಿಗೆ ಪತ್ರ ಬರೆದದ್ದು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯಲಿದ್ದಾರೆ.

7

ನೀಲವ್ವವ್ವ ಏಳನೇ ತರಗತಿಯವರೆಗೆ ಓದಿದ್ದರು. ಆದರೆ ನಮ್ಮ ಮುತ್ತ್ಯಾರು ಎಷ್ಟೇ ಪ್ರಯತ್ನಪಟ್ಟು ಓದಿಸಿದರೂ ಕಾಕಾರಿಗೆ ಅಕ್ಷರಗಳು ಒಲಿಯಲೇ ಇಲ್ಲವಾಗಿ ಅವರು ಅನಕ್ಷರಸ್ತ ರೈತರಾಗಿ, ಮನೆಯ ಹೊಲ ತೋಟಗಳಲ್ಲಿ ದುಡಿಯ ತೊಡಗಿದ್ದರು. ಭೋಳೆಶಂಕರ ನಮ್ಮ ಪಂಡಿತ ಕಾಕಾ. ಹತ್ತಿರ ಹತ್ತಿರ ಆರಡಿ ಎತ್ತರದ ಆಳು. 

ಬಾಲಿವುಡ್ ನ ಸನ್ನಿ ಡೊಯಲ್ ನ ಪ್ರಸಿದ್ಧ ಡೈಲಾಗ್ ಒಂದು, ‘ಢಾಯಿ ಕಿಲೊ ಕಾ ಹಾಥ್ ಏಕ್ ಬಾರ್…’ ಅಂತೇನೋ ಇದೆಯಲ್ಲ, ಅದನ್ನು ಪಠಿಸುವವರು ಒಮ್ಮೆ ನಮ್ಮ ಪಂಡಿತ ಕಾಕಾರ ಕೈ ನೋಡಿದ್ದಿದ್ದರೆ ಆ ಢಾಯಿ ಕಿಲೊ (ಅಢಾಯಿ = ಎರಡೂವರೆ) ಎಂಥಾ ಪೇಲವ ಅನ್ನೋದು ಗೊತ್ತಾಗ್ತಿತ್ತೇನೋ! ಅಂಥಾ ಗಟ್ಟಿ ದೇಹವಾಗಿತ್ತು ನಮ್ಮ ಕಾಕಾರದ್ದು.

ಮೆಟ್ಟು ಧರಿಸಿ ಕಚ್ಚಾ ರಸ್ತೆಯಲ್ಲಿ ಚರಕ್ ಚರಕ್ ಸದ್ದು ಮಾಡುತ್ತಾ ಕಾಕಾ ನಡೆಯತೊಡಗಿದರೆ, ನನ್ನಂಥ ಚಿಳ್ಳೆಗಳು ಓಡು ನಡಿಗೆಯಲ್ಲಿ ಅವರನ್ನು ಹಿಂಬಾಲಿಸಬೇಕಿತ್ತು. ಅವರ ಸಮಕ್ಕೆ ನಡೆಯುವುದು ಬಿಡಿ, ಮೆಟ್ಟು ಧರಿಸಿ ಎಂದೆನಲ್ಲವೆ? ಕೆಳಗೆ ಸೋಲ್ ತುಂಬಾ ದಪ್ಪ ಮೊಳೆಗಳನ್ನು ಜಡಿದ ಅವರ ಮೆಟ್ಟು ಧರಿಸಿ ನನಗೆ ಕಾಲೆತ್ತಿಡಲೂ ಆಗುತ್ತಿರಲಿಲ್ಲ ಅಂಥಾ ಭಾರದ ಮೆಟ್ಟುಗಳವು. 

ಇವತ್ತಿಗೂ ನನಗೆ ನಮ್ಮ ಕಡೆ ಹಳ್ಳಿಗಳಲ್ಲಿ ಧರಿಸುವ ಇಂಥ ಮೆಟ್ಟುಗಳ ಕುರಿತ ಬೆರಗು ಹಾಗೇ ಉಳಿದಿದೆ. ಮೈಮುರಿದು ದುಡಿಯುವುದು, ಹೊಟ್ಟೆ ತುಂಬಾ ಉಣ್ಣುವುದು, ಅಡಿಕೆ ಸುಣ್ಣ ತಂಬಾಕು ಜಗಿಯುತ್ತಾ, ತಮ್ಮ ಅಪ್ಪ ಅವ್ವ ಹೇಳಿದ ಕೆಲಸಗಳನ್ನು ಮಾಡುತ್ತಾ ಇದ್ದುಬಿಡುವುದು ಅವರ ನಿತ್ಯ ಕಾಯಕ. ಆಕಳಂಥಾ ಮನುಷ್ಯ. ಹೀಗಾಗಿ ಅವರನ್ನು ರೇಗಿಸುವುದು, ಅವರ ಕಾಲೆಳೆಯುವುದು ಓರಿಗೆಯವರಿಗೆ, ಬಂಧುಗಳಿಗೆ ಮೋಜಿನ ವಿಷಯ. 

ನೀಲವ್ವವ್ವ ಇದರಿಂದ ನೊಂದುಕೊಳ್ಳುತ್ತಿದ್ದಳಷ್ಟೇ ಅಲ್ಲ, ಕಾಕಾರಿಗೆ ಗುರಾಣಿಯಾಗಿ ನಿಂತು ಕಾಲೆಳೆಯುವ ಅಂಥವರ ಬಾಯಿ ಮುಚ್ಚಿಸುತ್ತಿದ್ದಳು. ಮುಂದೆಂದೂ ಅವರು ಉಸಿರೆತ್ತಬಾರದು ಹಾಗೆ ಅವರ ಜನ್ಮ ಜಾಲಾಡಿಬಿಡುತ್ತಿದ್ದಳು. ಹಾಗೆ ಅವ್ವನಿಂದ ಬೈಸಿಕೊಂಡವರಿಗೂ ಆಕೆಯನ್ನು ಕಂಡರೆ ಗೌರವ ಮೆಚ್ಚುಗೆ. ಕಾರಣ ಅವಳ ಸಿಟ್ಟು ಅಂಥ ಮಂಗಾಟಗಳಿಗೆ ಮಾತ್ರ ಸೀಮಿತವಾಗಿರುತ್ತಿತ್ತು. ಉಳಿದಂತೆ ಅವರೆಲ್ಲರನ್ನೂ ಆದರದಿಂದಲೇ ಕಾಣುತ್ತಿದ್ದಳಾದ್ದರಿಂದ ಆಕೆಯನ್ನು ದ್ವೇಷಿಸುವುದು ಬಹುಶಃ ಯಾರಿಗೂ ಸಾಧ್ಯವಿರುತ್ತಿರಲಿಲ್ಲವೇನೋ.

ಸದಿ ತೆಗೆಯಲು ಬರುವ ಆಳುಗಳಿಗೆ ಊಟದ ಸಮಯದಲ್ಲಿ (ಅವರು ತಮ್ಮ ಬುತ್ತಿ ತಂದಿರುತ್ತಿದ್ದರು) ಮಜ್ಜಿಗೆಯನ್ನೋ, ಉಪ್ಪಿನಕಾಯಿ, ಕಾಳುಪಲ್ಯ, ಕಾರಬ್ಯಾಳಿ(ಬೇಳೆಸಾರು)ಯನ್ನೋ, ಮಾವಿನ ಹಣ್ಣಿನ ಶೀಕರಣೆಯನ್ನೋ ನಮ್ಮನೆಯಿಂದ ಅವರಿಗೆಲ್ಲ ಕೊಡುವುದು ವಾಡಿಕೆಯಾಗಿತ್ತು. ಅದೇನು ಕಡ್ಡಾಯವಾಗಿರಲಿಲ್ಲವಾದರೂ ಎಲ್ಲರೊಡನೆ ಹಂಚಿ ತಿಂದರೇನೇ ಸಮಾಧಾನ. ಅವರಿಗೆಲ್ಲ ಅವುಗಳನ್ನು ಪ್ರೀತಿಯಿಂದ ಬಡಿಸುವುದಷ್ಟೇ ಅಲ್ಲ, ಆಗಾಗ ನನ್ನ ಆಯಿ ಮತ್ತು ತಾನು ಅವರ ಜೊತೆಗೇ ಕುಳಿತು ಉಣ್ಣುತ್ತಿದ್ದರು. ಮನೆಗೆಲಸಗಳು ಮುಗಿದ ಕೂಡಲೇ ಕುರ್ಪಿ ತೆಗೆದುಕೊಂಡು ಆಳುಗಳ ಜೊತೆಗೂಡಿ ತಾನೂ ಸದಿ ತೆಗೆಯುತ್ತಾ, ಅವರೊಡನೆ ಬೆರೆಯುತ್ತಿದ್ದಳು. 

ನೀಲವ್ವವ್ವನ ತವರಿನವರು ಪಾಪ ಅವರದೇ ಕಷ್ಟಗಳಲ್ಲಿ ಪರದಾಡುತ್ತಿದ್ದರಾದ್ದರಿಂದ, ಮದುವೆಯಾದ ಮೇಲೆ ನೀಲವ್ವವ್ವ ತಾಯಿ ಮಮತೆಯನ್ನು ಉಂಡಿದ್ದು ತನ್ನ ವಾರಗಿತ್ತಿಯ ತಾಯಿಯಿಂದ, ಅಂದರೆ  ನಮ್ಮಮ್ಮ ಗೌರಮ್ಮ ಬಾದರದಿನ್ನಿ ಅವರಿಂದ. ಗೌರವ್ವಮ್ಮ ತೀರಿದ ಎರಡೇ ತಿಂಗಳಿಗೆ ನೀಲವ್ವವ್ವನೂ ಆಕೆನ್ನು ಅನುಸರಿಸಿದ್ದಳು (18 feb 1980). ಈಗ ಆಗಾಗ ಅನಿಸುತ್ತಲೇ ಇರುತ್ತದೆ, ಅದೆಷ್ಟು ಚೆಂದವಿತ್ತು ಆ ಕಾಲ! ಅದೆಷ್ಟು ಆರೋಗ್ಯಪೂರ್ಣ ಸಂಬಂಧಗಳವು, ಅದೆಷ್ಟು ಆತ್ಮೀಯತೆ, ಅದೆಂಥಾ ಗೌರವೋಪಚಾರಗಳು. ಕಾಲದ ಹಕ್ಕಿಯೇ, ಅಂಥದ್ದೊಂದು ಸುಂದರ ಪ್ರಪಂಚವನ್ನು ರೆಕ್ಕೆಗಳಲ್ಲಿ ಬಚ್ಚಿಟ್ಟುಕೊಂಡು, ಅದ್ಯಾವ ಮರದ ಎಲೆಯ ಮರೆಯಲ್ಲಿ ಅಡಗಿ ಕುಳಿತಿರುವೆ…? 

*

ಶಾಲೆಯಲ್ಲಿ ಹೇಳಿಕೊಟ್ಟಿದ್ದನ್ನು ಬರೆಯುವುದರ ಹೊರತಾಗಿ ನಾನು ಮೊದಲ ಬಾರಿಗೆ ಬರೆದ ಬರಹ, ಒಂದು ಪತ್ರವಾಗಿತ್ತು. ಬಹುಶಃ ಆಗ ನಾನು ಮೂರು ಇಲ್ಲವೇ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಿರಬೇಕು. ಅದೊಮ್ಮೆ ಶಾಲೆಯಲ್ಲಿ ಪತ್ರ ಬರೆಯುವುದನ್ನು ಹೇಳಿಕೊಟ್ಟಿದ್ದರು ಅನಿಸುತ್ತದೆ. ನಾನು ನನ್ನ ರಫ್ ನೋಟ್ ಬುಕ್ಕಲ್ಲಿ ಕನ್ನಡದಲ್ಲಿ ನನ್ನವ್ವನಿಗೆ ಪತ್ರ ಬರೆದಿದ್ದನ್ನು ನಮ್ಮಮ್ಮನಿಗೆ ತೋರಿಸಿದೆ. ತುಂಬಾ ಖುಷಿ ಪಟ್ಟಳು ಅಮ್ಮ. ಹಾಗೆ ಖುಷಿ ಆದಾಗಲೆಲ್ಲ, ‘ನನ್ನ ಪಪ್ಪಣ್ಣಿ, ಬಂಗಾರಗಿಂಡಿ, ಕಟ್ಟಾಣಿ’ ಎನ್ನುತ್ತಾ ನನ್ನ ಮುದ್ದಿಸಿ ಮುಖ ಸವರಿ, ಎರಡೂ ಕೈಯ ಬೆರಳುಗಳನ್ನು ಮಡಿಚಿ ಮೆಲುಕಿಗೆ (ಹಣೆಯ ಎರಡೂ ಕೊನೆ) ಸೋಕಿಸಿ ನೆಟಿಗೆ ಮುರಿಯುತ್ತಿದ್ದಳು. 

ನಾನು ಬರೆದ ಪತ್ರ ಅಮ್ಮಂಗೆ ಇಷ್ಟವಾಗಿದ್ದು ಕಂಡು, ‘ಯಮ್ಮಾ, ನಾ ಕಾರ್ಡಿನ್ಯಾಗ ಅವ್ವಗ ಪತ್ರಾ ಬರೀಲಿ?’ ಎಂದೆ. 

‘ಆತು ಬರಿ. ಏ ಈರಣ್ಣ, ಪೋಸ್ಟ್ ಆಫೀಸೀಗೆ ಹೋಗಿ ಪಪ್ಪಿಗೊಂದು ಕಾರ್ಡ್ ತಂದ್ಕೊಡು’ ಎಂದು ತಮ್ಮ ಮೂರನೇ ಮಗನಿಗೆ ಆಜ್ಞಾಪಿಸಿ, ತರಿಸಿಕೊಟ್ಟರು. ಕಾರ್ಡಲ್ಲಿ ಮೊದಲ ಸಲ ಬರೆಯುವ ಸಂಭ್ರಮ ನನಗೆ. ಮನೆಯಲ್ಲಿ ಗದ್ದಲ ಎಂದುಕೊಂಡು ಔಟ್ ಹೌಸಿನ ಎದುರಿಗಿರುವ ಪೇರು ಗಿಡದ ಪಕ್ಕದಲ್ಲಿ ಮನೆಯ ಗೋಡೆಗಾತು ಕುಳಿತು ಪೋಸ್ಟ್ ಕಾರ್ಡಿನ ಬಲ ತುದಿಗೆ ಒಕೆ ಎಂದೂ, ನಡುವೆ ಓಂ ಎಂದೂ, ಎಡ ತುದಿಯಲ್ಲಿ ದಿನಾಂಕ, ಅದರ ಕೆಳಗೆ ಬಿಜಾಪುರ ಎಂದು ಚಿತ್ತುಕಾಟುಗಳಿಲ್ಲದೆ ಬರೆದು ಒಮ್ಮೆ ಕಾರ್ಡನ್ನು ನೋಡಿದೆ. ಅದು ಬಲು ಮುದ್ದಾಗಿ ಕಂಡು, ಆತ್ಮವಿಶ್ವಾಸ ಉದ್ದೀಪನಗೊಂಡಿತು. 

‘ಪೂಜ್ಯ ತಾಯಿಯವರಿಗೆ’, ಎಂದು ಶುರು ಮಾಡಿ ಒಂದೇ ಫ್ಲೋ ನಲ್ಲಿ ಪತ್ರ ಬರೆದು ಮುಗಿಸಿ, ಹೆಮ್ಮೆಯಿಂದ ಅದನ್ನೋಯ್ದು ಅಮ್ಮನ ಎದುರು ಹಿಡಿದೆ. ನನ್ನ ಬಂಗಾರಗಿಂಡಿ, ಕಟ್ಟಾಣಿ ಎಂದು ಅಮ್ಮ ಮುದ್ದಿಸುತ್ತಾಳೆಂದು ಗೊತ್ತಿತ್ತು ನನಗೆ. ಓದು ಎಂದಳು ಅಮ್ಮ. ಓದಿದೆ. ಓದಿ ಮುಗಿಸಿ ಮುದ್ದಿಗಾಗಿ ತಲೆ ಎತ್ತಿದೆ. ಫಟ್ ಅಂತ ಬಿತ್ತು ಕೆನ್ನೆಗೊಂದು ಏಟು!

‘ಕತ್ತಿ ಅಂಥಕಿನ, ಪತ್ರ ಬರೀತೀನಿ ಅಂತ ಕಾರ್ಡ್ ಇಸ್ಕೊಂಡು ಇದನ್ನೆಲ್ಲಾ ಬರ್ದೀಯಾ? ಭಾಳ ದೊಡ್ಡಾಕ್ಯಾಗಿ ಅಲ್ಲಾ? ಫಾಜಿಲ್ ತಂದು! ಮನಿ ಮರ್ಯಾದಿ ಕಳಿಬೇಕಂತ ಮಾಡಿ? ಕತ್ತಿ ಹಳೆ ಕತ್ತಿ!’ ಚೂರಾಯಿತು ಪತ್ರ. 

ಅಂದು ಆ ಪೆಟ್ಟಿಗೆ ನನ್ನ ಆತ್ಮವಿಶ್ವಾಸ ಚಿಗುರಿದಷ್ಟೇ ವೇಗವಾಗಿ ಮುರುಟಿಹೋಯಿತು. ಇಂದು ಆ ಪ್ರಸಂಗವನ್ನು ನೆನೆದಾಗೆಲ್ಲ ನಗುತ್ತೇನೆ. ಏನಂಥದ್ದನ್ನ ಬರ್ದಿದ್ದೆ ನಾನದರಲ್ಲಿ?

ನನ್ನ ಎರಡನೇ ಮಾಮಾ ಆನಂದ ಅಗ್ರಿಕಲ್ಚರ್ ಡಿಪ್ಲೋಮಾ ಮಾಡಲೆಂದು ರಾಯಚೂರು ಸೇರಿದ್ದ. ಅವನು ಅಲ್ಲಿ ಒಬ್ಬ ಹುಡುಗಿಯನ್ನು ಪ್ರೀತಿಸುತ್ತಿರುವುದಾಗಿಯೂ, ಅವಳನ್ನೇ ಮದುವೆಯಾಗುವುದಾಗಿಯೂ ಪತ್ರ ಬರೆದಿದ್ದ. ಅದನ್ನು ಕಂಡು ಮನೆಯ ವಾತಾವರಣ ಪ್ರಕ್ಷುಬ್ಧವಾಗಿತ್ತು. 

ಈಗಾಗಲೇ ತಮ್ಮ ಎರಡನೇ ನಾದಿನಿಯ ಮಗಳನ್ನು ಆನಂದ ಮಾಮಾಗೆ ತಂದುಕೊಳ್ಳುವ ಮಾತುಕತೆ ಆಗಿತ್ತಾದ್ದರಿಂದ ಅಮ್ಮ ಫುಲ್ ಟೆನ್ಶನ್ನಲ್ಲಿದ್ದಳು. ಅದೇ ಹೊತ್ತಲ್ಲಿ ನನ್ನ ಪತ್ರ ಬರೆಯುವ ಸಂಭ್ರಮ ನನಗೆ. ಅಂಥಾ ಸ್ಥಿತಿಯಲ್ಲೂ ನಮ್ಮಮ್ಮ ನನಗೆ ಪ್ರೋತ್ಸಾಹವಿತ್ತು ಕಾರ್ಡ್ ಕೊಡಿಸಿದ್ದಳು ಪತ್ರ ಬರೆಯಲು. ಮಗು ಏನೋ ನಾವು ಕ್ಷೇಮ ನೀವು ಕ್ಷೇಮ ಎಂದು ಬರೆಯುತ್ತದೆ ಬರೆಯಲಿ ಎಂದು ಅವರು ಅಂದುಕೊಂಡರೆ, ಈ ಮಗು ಹೀಗೆ ಬರೆದಿತ್ತು,

‘ಬಾಬು ಮಾಮಾ (ಆನಂದ್ ಮಾಮಾನನ್ನು ಮನೆಯಲ್ಲಿ ಬಾಬು ಎನ್ನುತ್ತಾರೆ) ಒಬ್ಬಾಕಿ ಹುಡಗಿಯನ್ನು ಲವ್ ಮಾಡಿದ್ದಾನೆ. ಅಕಿನ್ನೆ ಮದವಿ ಆಗುತ್ತೀನಿ ಎಂದು ಪತ್ರ ಬರೆದಿದ್ದಾನೆ. ಅಮ್ಮ ಸಿಟ್ಟಿಗೆದ್ದಿದ್ದಾಳೆ. ಅಳುತ್ತಿದ್ದಾಳೆ. ಬಾಕಿ ಎಲ್ಲಾ ಕ್ಷೇಮ. ಪತ್ರ ಮುಟ್ಟಿದ ಕೂಡಲೆ ಉತ್ತರ ಬರೆಯಿರಿ. ಇಂತೀ ನಿಮ್ಮ ಮಗಳು ಪಪ್ಪಿ.’

ಮನೆಯ ಗುಟ್ಟಿನ ಇಂಥ ವಾರ್ತೆಯನ್ನು ಅದೂ ಕೈಗೆ ಸಿಕ್ಕವರೆಲ್ಲ ಸುಲಭವಾಗಿ ಓದಬಹುದಾದ ಪೋಸ್ಟ್ ಕಾರ್ಡಲ್ಲಿ ಲವ್ ಎಂದರೇನು ಎಂದೂ ಗೊತ್ತಿರದ, ಆದರೆ ಆಗಿನ ಕಾಲದಲ್ಲಿ ಅದು ಅತ್ಯಂತ ಗಂಭೀರವಾದ, ಮನೆಯತನದ ಮಾನದ ಪ್ರಶ್ನೆಯಾಗಿದ್ದ ವಿಷಯವನ್ನು ಚೋಟುದ್ದ ಹುಡುಗಿ ಅದೂ ಪೋಸ್ಟ್ ಕಾರ್ಡಲ್ಲಿ ಬರೆದು ಢಾಣಾಢಂಗುರ ಮಾಡಳು ಹೊರಟರೆ ಒದೆ ಬೀಳದೆ ಇದ್ದೀತೆ?

*

ನಾನು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ ನನ್ನ ತಾಯಿಯ ತವರಿನಲ್ಲಿ ಓದಿದ್ದು. ಅಪ್ಪಾರಿಗೆ ಸತತವಾಗಿ ಹಳ್ಳಿಗಳಿಗೇ ವರ್ಗಾ ಆಗ್ತಿತ್ತಾದ್ದರಿಂದ ಅಲ್ಲೆಲ್ಲ ಕಾನ್ವೆಂಟ್ ಸ್ಕೂಲ್ ಇರದಿದ್ದ ಕಾರಣ, ಮಗಳು ಇಂಗ್ಲಿಷ್ ಮಿಡಿಯಂ ನಲ್ಲಿ ಓದಿ ಉದ್ಧಾರವಾಗಲಿ ಎಂದು ಬಿಜಾಪುರದಲ್ಲಿ ಮದ್ದಿನ ಕಣಿಯ ಪಕ್ಕದಲ್ಲಿದ್ದ ಆಗಿನ ಲಿಬರಲ್ (LES) ಸ್ಕೂಲಿಗೆ ನನ್ನನ್ನು ಸೇರಿಸಿದ್ದರು. 

ನಾನು ಓದಲೆಂದು ಬಿಜಾಪುರಕ್ಕೆ ಬಂದಾಗ ಅದಾಗಲೇ ನನ್ನ ಹೆಣ್ಮುತ್ತ್ಯಾ ರುದ್ರಗೌಡ. ವಿ ಬಾದರದಿನ್ನಿ ಅವರು ಬಿಜಾಪುರದಲ್ಲಿ ಎರಡು ಮನೆಗಳನ್ನು ಖರೀದಿಸಿ ಒಂದು ಮನೆಯನ್ನು ಬಾಡಿಗೆಗೆ ಕೊಟ್ಟು ಇನ್ನೊಂದು ಮನೆಯಲ್ಲಿ ವಾಸಿಸುತ್ತಿದ್ದಾಗಲೇ, ಕ್ಯಾನ್ಸರ್ ಅವರನ್ನು ಬಲಿ ತೆಗೆದುಕೊಂಡಾಗಿತ್ತು. 

ಪತಿಯನ್ನು ಕಳೆದುಕೊಂಡಿದ್ದ ನಮ್ಮಮ್ಮ ಗೌರಮ್ಮ ಸೋಲಾಪುರ ರೋಡಿನ  ಕೆ.ಎಚ್.ಬಿ ಕಾಲನಿಯ ೨೩ ನಂಬರಿನ ತಮ್ಮ ಮನೆಯಲ್ಲಿ ತಮ್ಮ ತಾಯಿ, ನಾಲ್ಕು ಜನ ಗಂಡುಮಕ್ಕಳು (ಅಶೋಕ, ಆನಂದ, ಈರಣ್ಣ ಹಾಗೂ ಉಮೇಶ) ದೊಡ್ಡ ಮಗ ಅಶೋಕನ ಹೆಂಡತಿ ಅನಸೂಯಾ, ಮೂರನೇ ಮಗಳು ಲತಾ ಮತ್ತವರ ಗಂಡ ಶಿವಪುತ್ರ, ನಾದಿನಿಯ ಮಗ ರಮೇಶ ಇವರೆಲ್ಲರೊಡನೆ ಆ ಮನೆಯಲ್ಲಿ ವಾಸವಾಗಿದ್ದರು. ಈಗ ನಾನೊಬ್ಬಳು ಅಲ್ಲಿ ಸೇರ್ಪಡೆಯಾದ್ದೆ. ಅವರ ಹಿರಿಮಗಳಾದ ನನ್ನ ತಾಯಿ ಮತ್ತು ಎರಡನೇ ಮಗಳು ಮಂಜುಳಾ (ಅಶೋಕ ಬಾದರದಿನ್ನಿ ಅವರ ನಂತರದವರು) ಅವರು ಮದುವೆಯಾಗಿ ತಮ್ಮ ತಮ್ಮ ಮನೆಯಲ್ಲಿದ್ದರು. 

ಬಿಜಾಪುರ(ಅವಿಭಾಜಿತ) ಜಿಲ್ಲಾ ಕೇಂದ್ರವಾದ್ದರಿಂದ ಸುತ್ತಲ ಊರುಗಳ ನೆಂಟರಿಷ್ಟರೆಲ್ಲ ದವಾಖಾನೆಗೆಂದು, ಮದುವೆ ಜವಳಿಗೆಂದು, ಪಾತ್ರೆ ಪಲ್ಲಂಗಗಳ ಸಂತೆಗೆಂದು, ಸಿದ್ಧೇಶ್ವರ ಜಾತ್ರೆಯಲ್ಲಿ ಎತ್ತು, ಆಕಳುಗಳನ್ನು ಮಾರಲೆಂದು, ಕೊಳ್ಳಲೆಂದು ಬಂದಾಗಲೆಲ್ಲ ಬಾದರದಿನ್ನಿಯವರ ಅಂದರೆ ನನ್ನ ತಾಯಿಯ ತವರುಮನೆಯಲ್ಲೇ ಉಳಿದುಕೊಳ್ಳುವುದು ಮಾಮೂಲಿಯಾಗಿದ್ದರಿಂದ ೨೩ ನಂಬರಿನ ಆ ಮನೆ ವರ್ಷವಿಡೀ ಜನರಿಂದ ಗಿಜಿಗುಡುತ್ತಿತ್ತು. 

ಮನೆಗೆ ಬರುವ ನೆಂಟರಿಷ್ಟರಿಗೆ ಯಾವತೂ ನನ್ನಮ್ಮ ಬರಬೇಡಿ ಎಂದು ಯಾವುದೇ ವಿಧದಲ್ಲೂ ಹೇಳಿದವರಲ್ಲ. ಯಾರಾದರೂ ಆ ಕುರಿತು ಆಕ್ಷೇಪ ಎತ್ತಿದರೆ, ‘ಅಯ್ಯಾ, ಪಾಪ ಏನೋ ಕೆಲಸ ಅಂತ ಬಂದಾರ. ಬಂದೋರಿಗೆ ಬರಬ್ಯಾಡ್ರಿ ಅನ್ನೂದೇನ್ ಚೆಂದ? ಬರ್ಲಿ ಬಿಡು’ ಎಂದು ಅವರನ್ನು ಸುಮ್ಮನಾಗಿಸುತ್ತಿದ್ದರು.

ವರ್ಷದ ಎಷ್ಟೋ ದಿನಗಳು ರಾತ್ರಿ ಮಲಗುವಾಗ ಎರಡು ಪಡಸಾಲಿಗಳು, ಎರಡು ಬೆಡ್ರೂಮುಗಳು, ಅಂಗಳದಲ್ಲಿರುವ ಎರಡೂ ಕಟ್ಟೆ, ಹೊರ ಬಾಗಿಲಿನ ಮೆಟ್ಟಿಲುಗಳೆದುರಿನಿಂದ ಗೇಟಿನವರೆಗಿರುವ ಪ್ಯಾಸೇಜ್ ಎಲ್ಲವೂ ಹಾಸಿಗೆಗಳಿಂದ ಭರ್ತಿ ಭರ್ತಿ! ತಲೆದಿಂಬುಗಳಿಗಾಗಿ ಹೊಂಚುಹಾಕುವುದು, ಮರುದಿನ, ಯಾರು ಯಾರ ತಲೆದಿಂಬನ್ನು ಹೇಗೆ ಅವರಿಗೆ ನಿದ್ದೆ ಬಂದ ಮೇಲೆ ಎಗರಿಸಿದ್ದು ಎಂದು ಮೋಜಿನಿಂದ ಹೇಳಿ ನಗುವುದು ಆ ಮನೆಯಲ್ಲಿ ಮಾಮೂಲಿಯಾಗಿತ್ತು. 

ನಾನು ನನ್ನಮ್ಮನ ಜೊತೆ ಪಲ್ಲಂಗದ ಮೇಲೆ ಅವರ ತೋಳಿನ ದಿಂಬಿನ ಮೇಲೆ ಮಲಗಲು ಉಮೇಶ್ ಮಾಮಾನೊಂದಿಗೆ ಕಿತ್ತಾಡಿ ಜಯಗಳಿಸುತ್ತಿದ್ದ ಪ್ರಸಂಗವನ್ನು ಈಗಾಗಲೇ ಹೇಳಿರುವೆ. ಆದರೆ ಆ ಸುಖ, ನನ್ನಮ್ಮನಿಗೂ ಕ್ಯಾನ್ಸರ್ ಆಗುವವರೆಗೆ ಅಂದರೆ ನಾನು ಮೂರನೇ ತರಗತಿ ಮುಗಿಸುವವರೆಗೆ ಮಾತ್ರ ಇದ್ದಿದ್ದು. ನಾನು ಮೂರನೇ ತರಗತಿಯ ಪರೀಕ್ಷೆ ಮುಗಿಸಿ ಅವ್ವ ಅಪ್ಪನ ಬಳಿ ರಜೆಗೆಂದು ಮೋರಟಿಗಿಗೆ ಹೋಗಿ ಬರುವಷ್ಟರಲ್ಲಿ ನನ್ನಮ್ಮನಿಗೂ ಕ್ಯಾನ್ಸರ್ ಎಂದಿದ್ದರು ವೈದ್ಯರು.

। ಇನ್ನೂ ಮುಂದಿನ ವಾರಕ್ಕೆ ।

‍ಲೇಖಕರು Admin

July 5, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ಚೆನ್ನಾಗಿ ಬರುತ್ತಿದೆ. ಆಹ್ಲಾದಕರ ಸಂಬಂಧಗಳ ನಡುವೆ ಸುಭದ್ರ ಭಾವದಲ್ಲಿ ಬೆಳೆಯುವ ಮಗು ಅದೃಷ್ಟದ್ದು. ಅದರ ಬುದ್ಧಿ ಭಾವಗಳೆರಡೂ ಪುಷ್ಟವಾಗಿ ಅರಳುತ್ತವೆ. ಸರಣಿ ಇಂತಹ ಪುಷ್ಟಿಕರ ಮನಸ್ಸಿನ ಹೊರಚಾಚುವಿಕೆಯಾಗಿದೆ. ನಮ್ಮನ್ನೂ ಆಹ್ಲಾದಕ್ಕೆಳೆಯುತ್ತದೆ.

    ಪ್ರತಿಕ್ರಿಯೆ
  2. Akshata Deshpande

    ನೀಲವ್ವವ್ವ ಅವರ ಬಗ್ಗೆ ಮತ್ತಷ್ಟು ಓದಿ ಅವರ ಬಗ್ಗೆ ಗೌರವ ಹೆಚ್ಚಾಯಿತು. ನಿಮ್ಮ ಪತ್ರದ ಒಕ್ಕಣೆ ಓದಿ ನಗು ಬಂತು. ಆದ್ರೆ ನಿಮ್ಮಮ್ಮ ಗೌರಮ್ಮ ಅವರಿಗೆ ಕ್ಯಾನ್ಸರ್ ಅಂತ ಓದಿ ಬಹಳ ಬೇಜಾರಾಯ್ತು
    ಬದುಕು ಹೀಗೆ ಅಲ್ಲ? ಸುಖ ದುಃಖಗಳ ಸಂಗಮ. ಎರಡನ್ನೂ ಸಮನಾಗಿ ಸ್ವೀಕರಿಸಿ ಬಾಳಬೇಕು ಅಷ್ಟೇ

    ಪ್ರತಿಕ್ರಿಯೆ
  3. Akshata Deshpande

    ನೀಲವ್ವವ್ವ ಅವರ ಬಗ್ಗೆ ಮತ್ತಷ್ಟು ಓದಿ ಅವರ ಬಗ್ಗೆ ಗೌರವ ಹೆಚ್ಚಾಯಿತು. ನಿಮ್ಮ ಪತ್ರದ ಒಕ್ಕಣೆ ಓದಿ ನಗು ಬಂತು. ಆದ್ರೆ ನಿಮ್ಮಮ್ಮ ಗೌರಮ್ಮ ಅವರಿಗೆ ಕ್ಯಾನ್ಸರ್ ಆಗಿತ್ತು ಅನ್ನೋದು ಓದಿ ಬಹಳ ಬೇಸರವಾಯ್ತು. ಬದುಕು ಹೀಗೇ, ಸುಖ ದುಃಖಗಳ ಸಂಗಮ. ಎರಡನ್ನೂ ಸಮನಾಗಿ ಸ್ವೀಕರಿಸಿ ಬಾಳಬೇಕು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: