ಜಯಲಕ್ಷ್ಮಿ ಪಾಟೀಲ್ ಅಂಕಣ – ಗಿಲ್ಟ್ ಮತ್ತು ಅನಾಥಪ್ರಜ್ಞೆ ಕಾಡತೊಡಗಿತು…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

40

ಹೊರಗೆ ಬಾಡಿಗೆ ಅಂಗಡಿಯಲ್ಲಿ ಬ್ಯೂಟಿ ಪಾರ್ಲರ್ ಆರಂಭಿಸುವುದು ಸಾಧ್ಯವೇ ಇರಲಿಲ್ಲ. ಸಾಲವೆಂದರೆ ನಮ್ಮಿಬ್ಬರಿಗೂ ತುಂಬಾ ಹೆದರಿಕೆ. ಹೀಗಾಗಿ ಮನೆಯಲ್ಲೇ ಪಾರ್ಲರ್ ಶುರು ಮಾಡಿದರಾಯಿತು ಎಂದುಕೊಂಡು, ನನಗೆ ಬ್ಯೂಟಿಷಿಯನ್ ವಿದ್ಯೆ ಕಲಿಸಿದ ನಿಲೀಮಾ ಅವರಲ್ಲಿ ಹೇಳಿದೆ. ಮನೆಯಲ್ಲಿ ಪಾರ್ಲರ್ ತೆರೆಯುವ ಹಾಗಿಲ್ಲ, ಹಾಗೆ ಮಾಡಿದಲ್ಲಿ ಯಾರಾದರೂ ಕಂಪ್ಲೆಂಟ್ ಕೊಟ್ಟರೆ ಕಷ್ಟ, ಆಗ ನಾನು ಮತ್ತೆಲ್ಲೂ ಪಾರ್ಲರ್ ತೆರೆಯದ ಹಾಗೆ ಅವರು ನಿರ್ಬಂಧಿಸಬಹುದು ಎಂದಾಗ ಹೆದರಿಕೆಯಾಯಿತು. ಅವರು ಹೇಳಿದ್ದರಲ್ಲಿ ಸುಳ್ಳೇನಿರಲಿಲ್ಲ. ನಾನು ಅವರಲ್ಲಿ ಕಲಿತು ಕೆಲಸ ಮಾಡುತ್ತಿದ್ದ ಆ ೮-೧೦ ತಿಂಗಳಲ್ಲಿ ನಿಲೀಮಾ ಮೇಡಂ ಅವರ ಪಾರ್ಲರಿಗೆ ಇನಸ್ಪೆಕ್ಷನ್ನಿಗೆ ಅಂತ ಎರಡು ಬಾರಿ ಬಂದು ಅಲ್ಲಿರುವ ವ್ಯವಸ್ಥೆಯನ್ನು ಚೆಕ್ ಮಾಡಿ ಹೋಗಿದ್ದನ್ನು ನಾನು ಗಮನಿಸಿದ್ದೆ. ಆದರೂ ಅಷ್ಟು ಚೆನ್ನಾಗಿ ಕಲಿತು ಖಾಲಿ ಕೂತರೇನು ಬಂತು ಲಾಭ ಎಂದನಿಸಿತು.

ದೊಡ್ಡ ಪ್ರಮಾಣದ್ದಾದರೆ ಸಹಜವಾಗಿಯೇ ಇನಸ್ಪೆಕ್ಷನ್, ಟ್ಯಾಕ್ಸ್ ಮತ್ತೊಂದು ಅಂತ ಬಂದಾರು. ಅಲ್ಲದೇ ನಮ್ಮನೆ ಇದ್ದಿದ್ದು ಆ ಅಪಾರ್ಟ್ಮೆಂಟಿನ ನಾಲ್ಕನೇ ಅಂತಸ್ತಿನಲ್ಲಿ! ನಾಲ್ಕು ಮಹಡಿ ಹತ್ತಿ ಜನ ಸಹ ಬರಬೇಕಲ್ಲವೇ? ನೋಡೋಣ ಎಂದು ಹುಂಬು ಧೈರ್ಯ ಮಾಡಿ, ಶುರು ಮಾಡೋಣ ಎಂದು ನಿರ್ಧರಿಸಿ ದಾರ, ಕತ್ತರಿ, ಕ್ರೀಮ್, ಪ್ಯಾಕ್, ಸ್ಟೀಮ್ ಪಾಟ್, ಮೇಕಪ್ ಸಾಮಗ್ರಿ ಇತ್ಯಾದಿಗಳಂಥಾ ಅತ್ಯಂತ ಅಗತ್ಯವಾದ ಸಾಮಾನುಗಳನ್ನು ಮಾತ್ರ ಕೊಂಡುಕೊಂಡೆ. ಮನೆಯಲ್ಲಿ ಎರಡು ಕುರ್ಚಿಗಳ ಹೊರತಾಗಿ ಬೇರೆ ಫ಼ರ್ನಿಚರ್ ಇರಲಿಲ್ಲ ಆಗ. ಅವುಗಳನ್ನೇ ಬಳಸುವುದು ಎಂದು ಅವುಗಳ ಮೇಲೆ ಮತ್ತು ಬೆನ್ನಿಗೆ ಅನುಕೂಲವಾಗುವ ಹಾಗೆ ದಿಂಬುಗಳನ್ನಿರಿಸಿದೆ. ಇವರಲ್ಲಿ ರಿಕ್ವೆಸ್ಟ್ ಮಾಡಿಕೊಂಡು ಪ್ಲೈವುಡ್ ನಿಂದ ಒಂದು ದುಂಡನೇ ಮೇಜು ಮಾಡಿಸಿಕೊಂಡೆ.

ಮೇಜಿಗೆ ಕಾಲಿರುವ ಜಾಗದಲ್ಲಿ ಎರಡು ಅಗಲವಾದ ಪ್ಲೈಗಳನ್ನು ಪ್ಲಸ್ ಆಕಾರದಲ್ಲಿ ಜೋಡಿಸಲು ಕೇಳಿಕೊಂಡೆ. ಅದರಿಂದ ನನಗೆ ಮೇಜಿನಲ್ಲಿಯೆ ನಾಲ್ಕು ಖಾನೆಗಳು ದೊರೆತು ಅಲ್ಲಿ ಪಾರ್ಲರಿನ ಸಾಮಾನುಗಳನ್ನು ಇಟ್ಟುಕೊಳ್ಳಲು ಅನುವಾಯಿತು. ಹಾಗೆ ಮಾಡದೇ ಹೋಗಿದ್ದಲ್ಲಿ ಆ ಎಲ್ಲ ಸಾಮಗ್ರಿಗಳನ್ನಿಡಲು ಪ್ರತ್ಯೇಕವಾದ ಶೆಲ್ಫ್ ಮಾಡಿಸಬೇಕಾಗುತ್ತಿತ್ತು, ಅದಕ್ಕೆ ಮತ್ತೆ ಪ್ರತ್ಯೇಕ ಖರ್ಚು! ಹೀಗಾಗಿ ಈ ಉಪಾಯ ಮಾಡಿದ್ದೆ. ‘ಪಾವನಿ ಬ್ಯೂಟಿ ಪಾರ್ಲರ್’ ಎಂದು ಬೋರ್ಡು ಬರೆಸಿ ನಮ್ಮ ಬಿಲ್ಡಿಂಗಿನ ಕೆಳಗೆ ಜನರಿಗೆ ಕಾಣುವಂತೆ ನೇತು ಹಾಕಿಸಿದೆ. ತುಂಬಾ ಮಿತಿಯಲ್ಲಿಯೇ ಪಾರ್ಲರ್ ಶುರು ಮಾಡಿದರೂ ನಮ್ಮಿಬ್ಬರ ಸಂಭ್ರಮಕ್ಕೇನು ಮಿತಿ ಇರಲಿಲ್ಲ. ಗಂಡ ಹೆಂಡತಿ ಇಬ್ಬರೂ ಯಾವುದೋ ಮದುವೆ ತಯಾರಿಯೇನೋ ಎಂಬಂತೆ ನಿತ್ಯ ಈ ಬಗ್ಗೆಯೇ ಮಾತಾಡುತ್ತಿದ್ದೆವು. ಮೊದಲ ದಿನ ಸಿಂಪಲ್ಲಾಗಿ ಪೂಜೆ ಮಾಡಿ ನಮ್ಮ ಮತ್ತು ಎದುದುರಿನ ಬಿಲ್ಡಿಂಗಿನ ಜನರನ್ನು ಆಹ್ವಾನಿಸಿದ್ದೆವು.

ಮೊದಲ ಸಲ ನನ್ನದೇ ಪಾರ್ಲರಿನಲ್ಲಿ ಐಬ್ರೊ ಥ್ರೆಡ್ಡಿಂಗ್ ಮಾಡುವಾಗ ನನ್ನ ಕೈ ಹಗೂರ ನಡುಗುತ್ತಿತ್ತು. ನಾನು ಹೇಗೆ ಮಾಡುತ್ತೇನೆ ಎಂದು ನೋಡಲು ಉಜ್ವಲಾ ಆಂಟಿ ಅಲ್ಲೇ ಎದುರು ನಿಂತಿದ್ದರು. ಅವರು ಅದನ್ನು ಗಮನಿಸಿ ನನ್ನ ಹೆಗಲು ತಟ್ಟಿ, ಕಣ್ಣಲ್ಲೇ ಧೈರ್ಯ ಹೇಳಿದರು. ಹಾಗೂ ಹೀಗೂ ನೀಟಾಗೇ ಮುಗಿಸಿದೆ. “ಸಿರ್ಫ಼್ ಐಬ್ರೋ ಕೇ ಲಿಯೆ ಇತನಾ ವಕ್ತ್ ಲಿಯಾ ತೊ ಕೈಸಾ ಹೋಗಾ!” ಎಂದು ಆ ಹುಡುಗಿ ಗೊಣಗಿದಳಾದರೂ ಕೆಲಸ ಕೆಟ್ಟಿಲ್ಲ ಅನ್ನುವ ಸಮಾಧಾನ ಅಂದು ನನ್ನದಾಗಿತ್ತು. ನಂತರ “ಚಲೊ ಮೇರೆ ಊಪರ್ ಪ್ರ್ಯಾಕ್ಟಿಸ್ ಕರೊ ತುಮ್” ಎಂದು ಉಜ್ವಲಾ ಆಂಟಿ ತಮ್ಮನ್ನು ನನ್ನ ಪ್ರಯೋಗಕ್ಕೆ ಒಡ್ಡಿಕೊಂಡು ನನ್ನಲ್ಲೊಂದು ಆತ್ಮವಿಶ್ವಾಸ ಮೂಡುವಂತೆ ಮಾಡಿದರು. ನಾಲ್ಕು ಮಹಡಿ ಹತ್ತಿ ಜನ ಮೇಲೆ ಬರುವುದು ಕಷ್ಟವೇ. ಹೀಗಾಗಿ ನಾನು ನನ್ನ ಪಾರ್ಲರಿಗೆ ಹಾಕಿದ್ದ ಬಂಡವಾಳ ಬರಲು ಎರಡು ವರ್ಷ ಬೇಕಾಯಿತು! ಇಷ್ಟಿದ್ದರೆ ಸಾಲದು ಅನಿಸಿ ಹೋಲ್ಸೆಲ್ ಅಂಗಡಿಯಿಂದ ಆರು ಮತ್ತು ಏಳು ಪೀಸಿನ ಸೀರೆಲಂಗಗಳನ್ನ ತಂದು ಮಾರಾಟಕ್ಕೆ ಇಟ್ಟೆನಾದರೂ ಮತ್ತೆ ಕೊಂಡು ತರುವ ಅಗತ್ಯವೇ ಬೀಳಲಿಲ್ಲ… ತಂದ ಎರಡು ಡಜನ್ ಪೆಟ್ಟಿಕೋಟ್ ಖರ್ಚಾಗಲು ಒಂದು ವರ್ಷ ಸಮಯ ತಗುಲಿತು. ನಂತರವೂ ಏನೆಲ್ಲಾ ಪದಾರ್ಥಗಳನ್ನು ತಂದು ಮಾರಲು ಪ್ರಯತ್ನಿಸಿದ್ದೆನಾದರೂ ವ್ಯಾಪಾರ ವ್ಯವಹಾರ ಯಾವತ್ತೂ ನನಗೆ ಒಲಿಯಲೇಯಿಲ್ಲ! ಹಾಗೂ ಹೀಗೂ ಕಷ್ಟಪಟ್ಟು ತಂದವುಗಳನ್ನು ಮಾರಿ ಇವರಿಂದ ಪಡೆದ ಹಣ ಮರಳಿ ತುಸು ಲಾಭವೂ ಆಗಿದ್ದು ನಿಜವಾದರೂ ಮುಂದುವರೆಸಿಕೊಂಡು ಹೋಗಬೇಕೆನ್ನುವ ಮಟ್ಟಿನಲ್ಲಿ ಯಾವುದೂ ಆಗಲಿಲ್ಲ.

ನಾನು ಪಾರ್ಲರ್ ಕೋರ್ಸ್ ಪಾಸಾದೆನಲ್ಲ, ಪಾಸಾಗಲು ಥಿಯರಿ ಮತ್ತು ಪ್ರ್ಯಾಕ್ಟಿಕಲ್ಸ್ ಎರಡೂ ಇತ್ತು. ಮತ್ತು ಪುಣೆಯಂಥಾ ಅಪ್ಪಟ ಮರಾಠಿಗರ ನಗರದಲ್ಲಿ ಥಿಯರಿಯನ್ನು ನಾನು ಕನ್ನಡದಲ್ಲಿ ಬರೆದು ಪಾಸಾಗಿದ್ದೆ! ನಿಲೀಮಾ ಮೇಡಂ ತಮ್ಮ ಕನ್ನಡತಿ ಗೆಳತೊಯೊಬ್ಬರಿಂದ ನಾ ಬರೆದ ಕನ್ನಡದ ಅಕ್ಷರ ಅಕ್ಷರವನ್ನೂ ಕೇಳಿ ತಿಳಿದುಕೊಂಡು ನನ್ನನ್ನು ಫಸ್ಟ್ ಕ್ಲಾಸಲ್ಲಿ ಪಾಸು ಮಾಡಿದ್ದರು. ಮತ್ತೆ ಈ ಪರೀಕ್ಷೆಗಳು ಸುಮ್ಮನೆ ಕಾಟಾಚಾರಕ್ಕಿರದೇ ಸಂಸ್ಥೆಯೊಂದರ ಭಾಗವಾಗಿದ್ದವು ಮತ್ತು ಪರೀಕ್ಷೆಯ ಸಮಯದಲ್ಲಿ ನನ್ನ ಬ್ಯಾಚಲ್ಲಿದ್ದ ನಾವು ಮೂವರಲ್ಲದೇ ಹಿಂದಿನ ಬ್ಯಾಚಲ್ಲಿ ನಪಾಸಾದ ನಾಲ್ಕು ಜನರಿದ್ದರು. ಪರೀಕ್ಷೆಯ ವೇಳೆಯಲ್ಲಿ ಆ ಕೋಣೆಯಲ್ಲಿ ನಿಲಿಮಾ ಮೇಡಂ ಇರದೇ ಇನ್ನ್ಯಾರೋ ಬೇರೆಯವರು ನಮ್ಮ ಸುಪರ್ವಿಜನ್ ಗೆ ಬಂದಿದ್ದರು. ಪಾರ್ಲರ್ ಎಂದರೆ ಯಾವುದೋ ಸಣ್ಣ ಕೆಲಸ ಎಂಬಂತಿದ್ದ ವಾತಾವರಣದಿಂದ ಬಂದಿದ್ದ ನಾನು ಪುಣೆಯಲ್ಲಿನ ಈ ವ್ಯವಸ್ಥೆ ಮತ್ತು ಬ್ಯೂಟಿಷಿಯನ್ ಕೋರ್ಸಿಗಿದ್ದ ಮಹತ್ವ ಕಂಡು ಬೆರಗಾಗಿದ್ದೆ.

ನಮ್ಮ ಮದುವೆಯಾಗಿ ಒಂದು ವರ್ಷದ ನಂತರ ನನ್ನ ಮೂರನೇ ಸೋದರಮಾವ ಈರಣ್ಣ ಮಾಮಾ ನಮ್ಮಲ್ಲಿಗೆ ಬರುತ್ತಿರುವುದಾಗಿ ಫೋನ್ ಮಾಡಿದ್ದ. ಅವನೆಂದರೆ ಬಲು ಶಿಸ್ತು! ಅವನ ಶಿಸ್ತಿನ ಸ್ವಭಾವಕ್ಕೆ ನಾವೆಲ್ಲ ತುಂಬಾ ಹೆದರುತ್ತಿದ್ದೆವು. ಕಣ ಧೂಳೂ ಇರಬಾರದು ಮನೆಯಲ್ಲಿ. ಸದಾ ಥಳ ಥಳ ಅಂತಿರಬೇಕು. ಮನೆಯ ಒಪ್ಪ ಓರಣವಾಗಿರದೆ ಸ್ವಲ್ಪ ಅಸ್ತವ್ಯಸ್ತ ಕಂಡರೂ ಕೂಗಾಡಿಬಿಡುತ್ತಿದ್ದ ಬಿಜಾಪುರದ ೨೩ ನಂಬರ್ ಮನೆಯಲ್ಲಿ. ಹಾಗಾಗಿ ಈಗ ನಮ್ಮ ಮನೆಯಲ್ಲಿ ಇದ್ದ ನಾಲ್ಕಾರು ಸಾಮಾನುಗಳನ್ನೇ ಮತ್ತೆ ತೊಳೆದು ಒರೆಸಿ, ಅತ್ತಿಂದಿತ್ತ ಎತ್ತಿಟ್ಟು ಮನೆಯನ್ನು ಸ್ವಚ್ಛಗೊಳಿಸತೊಡಗಿದ್ದೆ. ಹಾಗೆ ಅತ್ತಿಂದಿತ್ತ ಎತ್ತಿಟ್ಟ ಸಾಮಾನುಗಳಲ್ಲಿ ನಮ್ಮ ಗಾದೆಯೂ ಒಂದು. ಅದು ನಮ್ಮಪ್ಪಾ ನನಗೆ ಮದುವೆಯಲ್ಲಿ ಕೊಟ್ಟ ಗಾದೆ. ಬರೋಬ್ಬರಿ ೨೮ ಕೆಜಿ ತೂಕದ್ದು! ಅದನ್ನು ಸುತ್ತಿ ಒಂದು ಬದಿಯ ಗೋಡೆಯಿಂದ ಇನ್ನೊಂದು ಬದಿಗೆ ಎತ್ತಿದಂತೆ ಸರಿಸಿಟ್ಟಿದ್ದೇ ಪ್ರಮಾದವಾಗಿ ಹೋಯಿತು.

ಆ ತಿಂಗಳು ಮುಟ್ಟು ಮುಂದಕ್ಕೆ ಹೋಗಿ ೧೦-೧೨ ದಿನಗಳಾಗಿದ್ದವು. ವಾಂತಿ ತಲೆ ಸುತ್ತು ಮುಂತಾದವು ಕಾಣಿಸಿಕೊಂಡಿರಲಿಲ್ಲವಾಗಿ ನಾವಿಬ್ಬರೂ ಹೌದಾ ಅಲ್ಲವಾ ಅನ್ನುವ ಗೊಂದಲದಲ್ಲಿಯೇ ಇದ್ದೆವು ಇನ್ನೂ. ಈಗ ಈ ಗಾದೆ ಸರಿಸಿಟ್ಟಿದ್ದೇ ನೆಪವಾಗಿ ಕಣ್ಣೆ ಕಣ್ಣೆಯಾಗಿ ರಕ್ತಸ್ರಾವ ಶುರುವಾಗಿಬಿಟ್ಟಿತು. ಭಯಗೊಂಡು ಪತಿಗೆ ಫೋನ್ ಮಾಡಿದೆ. ತಕ್ಷಣ ನನ್ನನ್ನು ಕರೆದುಕೊಂಡು ಆಸ್ಪತ್ರೆಗೆ ಹೋದರು. ಅಲ್ಲಿನ ವೈದ್ಯೆ ನನ್ನ ಪರೀಕ್ಷಿಸಿ ಗರ್ಭಸ್ರಾವವಾಗಿದೆ, D&C ಮಾಡದೇ ಹೋದರೆ ರಕ್ತದ ಕಣ್ಣೆಗಳು ಸಂಪೂರ್ಣ ಹೊರಬರದೆ ತೊಂದರೆಯಾಗಬಹುದು ಎಂದಾಗ ಒಪ್ಪಿಕೊಂಡು D&C ಮಾಡಿಸಿಕೊಂಡೆ. ಹೀಗೆ ಬಸಿರು ಮೂಡುತ್ತಲೇ ಖಾಲಿಯಾಗಿದ್ದು ಮನಸ್ಸಿಗೆ ಘಾಸಿಯನ್ನುಂಟು ಮಾಡಿತ್ತು. D&C ಯಿಂದಾಗಿಯೋ ಏನೋ ತುಂಬಾ ಸುಸ್ತಾಗಿತ್ತು.

ನಮ್ಮವ್ವಾರು ನನ್ನ ಬಳಿ ಬೇಕೆಂದೆನಿಸಿ ಹಂಬಲಿಸತೊಡಗಿದೆ. ಆದರೆ ಇವರು ನಾನೇ ಬಿಜಾಪುರದಲ್ಲಿ ಅವ್ವನ ಜೊತೆಗಿದ್ದರೆ ಹೆಚ್ಚು ಸೌಕರ್ಯವಿರುತ್ತದೆ ಎಂದಾಗ ನನಗೂ ಅದು ಸರಿ ಅನಿಸಿ ಅಲ್ಲಿಗೆ ಹೋದೆವು. ಅಲ್ಲಿ ನೋಡಿದರೆ ಮನೆ ತುಂಬಾ ಜನ! ನಿಂಬಾಳದಿಂದ ಅಜ್ಜ ಬಂದಿದ್ದರು ತಮ್ಮ ಆರೋಗ್ಯ ಸರಿಯಿಲ್ಲವೆಂದು. ಅವರೊಂದಿಗೆ ಇನ್ನಿಬ್ಬರು. ಮತ್ತಿನ್ನ್ಯಾರು ಅಂತ ನೆನಪಿಲ್ಲವಾದರೂ ನನ್ನತ್ತ ನೋಡಲೂ ಆಗದಷ್ಟು ಅವ್ವ ಬ್ಯೂಸಿ ಕೆಲಸಗಳಲ್ಲಿ… ಮಾತಾಡಲೂ ಪುರುಸೊತ್ತಿಲ್ಲ! ಸಮಾಧಾನ ಪಡೆಯಲೆಂದು ಬಂದವಳು ಹೊರೆಯಾಗುವುದು ಬೇಡ ಅನಿಸಿ ಇವರೊಂದಿಗೆ ಹೊರಟುನಿಂತೆ ಕಲಕೇರಿಗೆ. ಅಲ್ಲಿ ಭಾರ ಎತ್ತಿಟ್ಟ ಕಾರಣಕ್ಕೆ ನನಗೆ ಅಬಾರ್ಶನ್ ಆಗಿದೆ ಎಂದರೆ ನಮ್ಮತ್ತೆಗೆ ನಂಬಿಕೆ ಬರುತ್ತಿಲ್ಲ! ಮನಸ್ಸು ಮತ್ತೂ ಘಾಸಿಗೊಂಡಿತು. ಆದರೆ ಬಂದಾಗಿದೆ ಅನಿವಾರ್ಯ ಎಂದು ಅಲ್ಲಿ ಮೂರು ದಿನ ಇದ್ದು ಬಿಜಾಪುರಕ್ಕೆ ಮರಳಿದರೆ (ಕಲಕೇರಿಯಿಂದ ಪುಣೆಗೆ ನೇರ ಬಸ್ಸಿರಲಿಲ್ಲ. ಬಿಜಾಪುರಕ್ಕೆ ಬಂದು ಪುಣೆಯ ಬಸ್ಸು ಹಿಡಿಯಬೇಕಿತ್ತು) ಅಲ್ಲಿ ಹಿಂದಿನ ದಿನ ಸಂಭ್ರಮದಿಂದ ಅಪ್ಪಾ ಅವ್ವನ ೨೫ನೇ ಮದುವೆ ವಾರ್ಷಿಕೋತ್ಸವದ ಆಚರಣೆ ಮುಗಿದಿದ್ದು ಗೊತ್ತಾಯಿತು. ಅಯ್ಯೋ ನನ್ನದೇ ನೋವನ್ನ ದೊಡ್ಡದು ಮಾಡಿಕೊಂಡು ತಂದೆ ತಾಯಿಯ ಮಹತ್ವದ ಆನಿವರ್ಸರಿಯನ್ನು ಮರೆತುಬಿಟ್ಟೆನಲ್ಲ ಎಂದು ಅದೆಂಥಾ ಗಿಲ್ಟ್ ಮತ್ತು ಅನಾಥಪ್ರಜ್ಞೆ ಕಾಡತೊಡಗಿತೆಂದರೆ…

ಆಸರೆಯ ಹಂಬಲದಿಂದ ಬಂದವಳು ಅಸಹಾಯಕ ಮನಸ್ಥಿತಿಯೊಂದಿಗೆ ಅಳುತ್ತಾ ಪುಣೆಗೆ ವಾಪಸ್ಸಾದೆ. ಪೂನಾ ತಲುಪಿದ ಮೇಲೆ ಎಂಟು ದಿನ ಸಂಪೂರ್ಣ ರೆಸ್ಟ್ ಮಾಡಿದೆ. ಆಗ ನನ್ನ ಊಟ ತಿಂಡಿ ನೋಡಿಕೊಂಡಿದ್ದು ಎದುರಿನ ಮನೆಗಳ ಉಜ್ವಲಾ ಆಂಟಿ ಮತ್ತು ಲೀಲಾ ಆಂಟಿ.

| ಇನ್ನು ಮುಂದಿನ ವಾರಕ್ಕೆ | 

‍ಲೇಖಕರು Admin

August 8, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: