ಜಯಲಕ್ಷ್ಮಿ ಪಾಟೀಲ್ ಅಂಕಣ- ಗೋಡೆಯ ಮೇಲೆ ಢಾಳಾಗಿ ಮೂರು ಹೆಸರುಗಳು..

‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯಲಿದ್ದಾರೆ.

17

ಯಾಕೆ ಹಾಗ್ಬರದ್ರು? ಯಾರದನ್ನ ಬರ್ದಿದ್ದು? ಅದರಿಂದ ಅವರಿಗೇನು ಲಾಭ? ಮತ್ತೆ ನನ್ನದೇ ಹೆಸರ್ಯಾಕೆ? ಆ ಹುಡುಗರದ್ದೇ ಹೆಸರ್ಯಾಕೆ? ಇದ್ಯಾವುದಕ್ಕೂ ಉತ್ತರವಿರಲಿಲ್ಲ, ಕೊನೆಗೂ ಉತ್ತರ ಸಿಗಲಿಲ್ಲವೂ ಸಹ. ಕಾರಣ ಹಾಗೆ ಬೇರೆಯದೇ ದೃಷ್ಟಿಯಲ್ಲಿ ನೋಡುವಂಥ ಪ್ರೀತಿ ಪ್ರೇಮ ಪ್ರಣಯದಂಥ ಯಾರೊಂದಿಗೂ ನನಗಿರಲಿಲ್ಲ. ಕ್ಲಾಸಿನ ಎಲ್ಲರ ಜೊತೆಗೆ ಯಾವುದೇ ಹಿಂಜರಿಕೆ ಇಲ್ಲದೇ ಎಲ್ಲರೂ ಮಾತಾಡುತ್ತಿದ್ದೆವು. ತುಂಬಾ ಸಹಜವಾಗಿದ್ದೆವು. ಆದರೂ ಹಾಗ್ಯಾಕೆ ಬರೆದರು ಅನ್ನುವುದು ಕೊನೆಗೂ ತಿಳಿಯಲೇ ಇಲ್ಲ…

ಅಂದು ಶಾಲೆಯ ಆವರಣದೊಳಗೆ ಕಾಲಿಡುತ್ತಿದ್ದಂತೆಯೇ ಎಂದಿನಂತೆ ವಾತಾವರಣ ಸಹಜವಾಗಿರದೇ ವಿಚಿತ್ರ ಮೌನದೊಂದಿಗೆ ಎಲ್ಲರೂ ನನ್ನನ್ನು ಕನಿಕರದಿಂದ, ಆತಂಕದಿಂದ ನೋಡುವುದನ್ನು ಕಂಡು, ಯಾಕ್ ಹೀಗೆ…? ಎಂದುಕೊಳ್ಳುತ್ತಲೇ ಶಾಲೆ ಸಮೀಪಿಸಿದ್ದೆ. ನನ್ನನ್ನು ಕಂಡೊಡನೇ ಕಾರಿಡಾರಲ್ಲಿದ್ದವರೆಲ್ಲ ಮಾತು ನಿಲ್ಲಿಸಿದರು. ಯಾರೋ ಒಂದಿಬ್ಬರು ಸಹಪಾಠಿಗಳು, ‘ನೀ ಸೀದಾ ಕ್ಲಾಸೊಳಗ ಹೋಗಬೇ, ಇಲ್ಲಿ ನಿಂದರಬ್ಯಾಡ’ ಎಂದರು. ‘ಯಾಕ?’ ಎನ್ನುತ್ತಿರುವಾಗಲೇ ನನ್ನ ಗಮನ ಗೋಡೆಯತ್ತ ಹರಿಯುವಂತೆ ಅಲ್ಲಿದ್ದ ಕೆಲವರು ನನ್ನನ್ನೂ ಗೋಡೆಯನ್ನೂ ದೃಷ್ಟಿ ಬದಲಿಸಿ ನೋಡುತ್ತಿದ್ದರು. ಗೋಡೆಯ ಮೇಲೆ ಢಾಳಾಗಿ ಮೂರು ಹೆಸರುಗಳು ರಾರಾಜಿಸುತ್ತಿದ್ದವು. ಅದನ್ನೋಡಿ ನನಗೆ ಹೆದರಿಕೆಯಾಗಬೇಕಿತ್ತಾ? ಆಗಲಿಲ್ಲ. ಸಿಟ್ಟು ಬಂದಿತ್ತು. 

‘ಯಾರಿದನ್ನ ಬರ್ದೋರು?’ ಹೀಗೆ ಕೇಳುವಾಗ ನನ್ನ ದನಿ ನನಗೇ ಅಪರಿಚಿತ ಅನಿಸುವಷ್ಟು ದೊರಗಾಗಿತ್ತು. 

‘ಯಾರಂತ ಗೊತ್ತಿಲ್ ಬೆ. ಗೇಟ್ ತಗದು ಒಳಗ ಬರೂದ್ರಾಗ ಇದನ್ನ್ಯಾರೋ ಬರ್ದು ಹೋಗಿದ್ದ್ರು. ನೀ ವಾಪಸ್ ಮನಿಗ್ ಹೋಗು, ಇಲ್ಲಿರಬ್ಯಾಡ’ ಸಹಪಾಠಿಯೊಬ್ಬ ಸಲಹೆಯನ್ನಿತ್ತ. 

‘ನಾ ಯಾಕ ಮನಿಗ್ ಹೋಗ್ಲಿ? ನಂದೇನ್ ತಪ್ಪೈತಿ?’ ಎಂದೆನಾದರೂ ಎಲ್ಲರೂ ನನ್ನನ್ನೇ ನೋಡುತ್ತಿರುವುದು ಕಂಡು ಮುಜುಗರವಾಗತೊಡಗಿತು. ಕ್ಲಾಸ್ ರೂಮಿನಲ್ಲಿ ಬಂದು ಕುಳಿತೆ. ವಿಚಿತ್ರ ತಳಮಳ. ಯಾಕೋ ಬೇಚೈನ್ ಅನಿಸತೊಡಗಿ ಎದ್ದು ಹೊರಬಂದೆ. ಕಾಲೆಳೆಯುತ್ತಾ ಮನೆಯತ್ತ ನಡೆದೆ. ಮತ್ತೊಮ್ಮೆ ದಾರಿಯಲ್ಲಿ ಹೋಗುತ್ತಿರುವವರೆಲ್ಲರೂ ನನ್ನನ್ನೇ ನೋಡುತ್ತಿದ್ದಾರೆನಿಸಿ ನಿಸ್ಸತ್ವಗೊಳ್ಳತೊಡಗಿದೆ. ನಿಜಕ್ಕೂ ಈ ಬಾರಿ ದಾರಿಯಲ್ಲಿ ಕೆಲವರು ನನ್ನನ್ನೇ ನೋಡುತ್ತಿದ್ದರು. ಯಾಕೆ ಯಾಕೆ ಯಾಕೆ ನನ್ನ ಜೊತೆಗೇ ಹೀಗೆ…? ಎಂದು ಮನಸು ರೋಧಿಸತೊಡಗಿತ್ತು.

ಮನೆಯಲ್ಲಿ ತಪ್ಪು ಮಾಡದಿದ್ದ್ರೂ ಅಪ್ಪನಿಂದ ಪೆಟ್ಟು ತಿನ್ನುತ್ತೇನೆ. ಆಗ ಅವ್ವ ನನ್ನ ಪರ ಮಾತಾಡದೇ ಮೌನವಾಗಿರ್ತಾಳೆ. ಕೆಲ ಬ್ರಾಹ್ಮಣ ಗೆಳತಿಯರ ಮನೆಗೆ ಹೋದಾಗ ಊಟಕ್ಕೆ ಕರೆದರು ಅಂತ ಸಂಕೋಚದಿಂದಲೇ ಅವರೊಟ್ಟಿಗೆ ಊಟಕ್ಕೆ ಕುಳಿತರೆ, ನಾನು ಉಂಡ ತಟ್ಟೆ ತೊಳೆದಿಡಲು, ತಟ್ಟೆ ಇಟ್ಟ ಜಾಗಕ್ಕೆ ಗ್ವಾಮಾ (ಗೋಮ) ಹಚ್ಚಲು ಹೇಳುತ್ತಾರೆ. ನಮ್ಮ ಮನೆಗೆ ಯಾರೇ ಬಂದರೂ ಅವರಿಂದ ತಟ್ಟೆ ಎತ್ತಿಡಿಸುವುದಾಗಲಿ, ಮುಸುರೆ ಬಳೆದು ಗೋಮ ಹಚ್ಚಿಸುವುದಾಗಲಿ ನಾವು ಮಾಡಿಸುವುದಿಲ್ಲ.

ಅಪ್ಪಾ ಅವ್ವ ಇಬ್ಬರೂ ಊಟಕ್ಕೆ ಕರೆದವರನ್ನು ತುಂಬಾ ಗೌರವದಿಂದ ನಡೆಸಿಕೊಳ್ಳುವುದನ್ನು ನೋಡಿ ಬೆಳೆದ ನನಗೆ ಮತ್ತೊಬ್ಬರ ಮನೆಯಲ್ಲಿ ನಾನುಂಡ ತಟ್ಟೆ ತೊಳೆದಿಟ್ಟು, ಗೋಮಾ ಹಚ್ಚುವುದು ಅವಮಾನವೆನಿಸುತ್ತಿತ್ತು. ನಿಂಬಾಳದಲ್ಲಿ ಹಾಗೆ ಹೊರಗಿನ ಕೆಲವರು ನಮ್ಮ ತೋಟಕ್ಕೆ ಬಂದಾಗ ಕುಡಿದ ಚಹಾದ ಕಪ್ಪನ್ನು ತೊಳೆದಿಡುವುದನ್ನು ನೋಡಿ ಕನಲಿದ್ದೆ. ಒಬ್ಬೊಬ್ಬರಿಗೊಂದೊಂದು ಥರ ಹಂಗ್ಯಾಕ ಮಾಡ್ತೀರಿ? ಎಂದು ಆಯಿ ಮುತ್ತ್ಯಾರ ಬಳಿ ಕೇಳಿ, ‘ಅವ್ರು ಇಂಥಿಂಥಾ ಜಾತಿಯೋರು. ಅದಕ್ಕ ಅವ್ರು ನಾವು ಹೇಳದಿದ್ದ್ರೂ ತಾವ ತೊಳದಿಟ್ಟು ಹೋಕ್ಕಾರ’ ಎನ್ನುವ ಉತ್ತರಕ್ಕೆ ‘ಹಂಗಿದ್ದ್ರ ನೀವು ಬ್ಯಾಡ ಅನಬೆಕು. ಆದ್ರ ಅನ್ನೂದಿಲ್ಲ ಸುಮ್ನಿರ್ತೀರಿ, ಚೊಲೊ ಅನ್ಸಲ್ಲ ಅದು’ ಎಂದು ಮಾರುತ್ತರ ಕೊಟ್ಟು, ‘ನೀ ಇನ್ನಾ ಸಣ್ನಾಕೆದೀದಿ, ನಿನಗಿವೆಲ್ಲಾ ತಿಳೆಂಗಿಲ್ಲ, ಒಳಗ ಹೋಗು’ ಎಂದು ನಯವಾಗೇ ಬೈಸಿಕೊಂಡಿದ್ದು ನೆನಪಾಗುತ್ತದೆ.

ಗೊಮಾ ಹಚ್ಚಲು ಹೇಳುವವರ ಮನೆಗಳಲ್ಲಿ. ಅವಮಾನದಿಂದ ಕುಗ್ಗಿ ಇನ್ನ್ಯಾವತ್ತೂ ಯಾರ ಮನೆಯಲ್ಲೂ ಊಟ ಮಾಡುವುದಿಲ್ಲ ಎಂದು ನಿರ್ಧರಿಸಿದಳನ್ನು, ಪರ ಊರಿನ ಯಾರದೋ ಮನೆಗೆ ಬಿನ್ನ (ಬಿನ್ನಹ) ಬಂದಿದ್ದರಿಂದ ತಾವು ಹೋಗದೇ ನನ್ನನ್ನು ಅಪ್ಪ ಕಳಿಸಿದ್ದಾಗ, ತುಂಬಾ ಸಂಭ್ರಮದಿಂದ ಆ ಮನೆಯವರು ನನ್ನನ್ನು ಬರ ಮಾಡಿಕೊಳ್ಳುತ್ತಾರೆ. ಕೈಕಾಲು ಮುಖ ತೊಳೆದುಕೊಳ್ಳಲು ನೀರು, ಮುಖ ಒರೆಸಿಕೊಳ್ಳಲು ಮಡಿ ಮಾಡಿದ ಟವಲ್ಲು ಕೊಟ್ಟು ಉಪಚರಿಸುತ್ತಾರೆ. ಅಲ್ಲೇ ಇದ್ದ ಕಟ್ಟಿಗೆಯ ಕುರ್ಚಿ ಮೇಲೆ ಕುಳಿತಾಗಲೇ, 

‘ಒಳಗ ನಡಿ ಅವ್ವಿ, ಅಗಲೇ ಹೊತ್ತಾಗೇತಿ, ಉಣ್ಣೂವಂತಿ’ ಎಂದು ನನ್ನನ್ನು ಕರೆದುಕೊಂಡ ಬಂದ ವ್ಯಕ್ತಿ ಹೇಳುತ್ತಿರುವಾಗಲೇ, ಅವರಿಗೆ ಅಡುಗೆ ಮನೆಯಿಂದ ‘ಒಂದೀಟ ಬರ್ರಿಲ್ಲೆ’ ಎನ್ನುವ ಬುಲಾವು ಬರುತ್ತದೆ. ನನ್ನನ್ನೂ ಜೊತೆಗೇ ಕರೆದುಕೊಂಡು ಹೊರಟ ಅವರಿಗಷ್ಟೇ ಒಳಗೆ ಬರಲು ಹೇಳಿಕೆ ಒಳಗಿನಿಂದ. 

‘ಅವ್ವಿ ನೀ ಕುಂತಿರು, ಇನ್ನಾ ಅಡಿಗಿ ಆಗಿಲ್ಲ ಕಾಣ್ತೈತಿ, ನೋಡ್ಕೊಂಡು ಬರ್ತೀನಿ’ ಎಂದು ಆತ ಒಳ ನಡೆಯುತ್ತಾರೆ. ಊಟಕ್ಕೆ ಆಹ್ವಾನಿಸಿದವರ ಪಡಸಾಲೆಯಲ್ಲಿದ್ದ ನನಗೆ ಅವರ ಅಡುಗೆ ಮನೆಯಲ್ಲಿನ ಮಾತುಕತೆ ಕೇಳುತ್ತದೆ. 

‘ಯಾ ಮಂದಿ ಇವ್ರು?’ ಹೆಣ್ಣು ದನಿ. ಮನೆಯ ಯಜಮಾನತಿ ಇರಬೇಕು.

‘ಯೇ ಏನ್ ಹಿಂಗ ಕೇಳ್ತಿ? ಡಾಕ್ಟರ್ ಸಾಯೇಬ್ರು ನಮ್ಮಂದೀನ. ಲಿಂಗಾಯ್ತ್ರು, ಅವ್ರ ಖಾಸಾ ಮಗಳು ಈ ಹುಡಗಿ.’

‘ಆ ಹುಡಗಿ ಕೊಳ್ಳಾಗ ಗುಂಡಗಡಿಗಿ ಕಾಣ್ಲಿಲ್ಲ ನನಗ. ಮಕಾ ತೊಕ್ಕೊಂಡ ಮ್ಯಾಲೆ ಅಲ್ಲೆ ಇದ್ದ ಇಬತ್ತಿ ಸೈತ ಹಚಗೋಲಿಲ್ಲ ಅಕಿ! ಬ್ಯಾಡ ಅಕಿನ್ನ ಪಡಸಾಲ್ಯಾಗ ಕುಂಡ್ರಸ್ರಿ. ಅಲ್ಲೇ ಊಟಕ್ಕ ನೀಡತೀನಿ’

ಅಷ್ಟು ಸಂಭ್ರಮದಿಂದ ಬರಮಾಡಿಕೊಂಡವರ ನಡುವಳಿಕೆ ಸಡನ್ನಾಗಿ ಬದಲಾಗಿದ್ದು ಕಂಡು ತುಂಬಾ ಅವಮಾನವೆನಿಸಿ, ಯಾಕಾದ್ರೂ ಅಪ್ಪಾ ಹೋಗು ಅಂದಕೂಡ್ಲೆ ಇವ್ರ ಜೊತಿಗೆ ಬಂದ್ನೋ ಎಂದು ಪೇಚಾಡುತ್ತಾ ಬಂದ ಸಿಟ್ಟು ಅಳು ಎರಡನ್ನೂ ಹಲ್ಲು ಕಚ್ಚಿ ನುಂಗುತ್ತೇನೆ.

ದಿನವೂ ಶಾಲೆಯಿಂದ ಬರುವಾಗ ಶುಕಮುನಿ ತಾತನ ಗುಡಿಯ ಹತ್ತಿರದ ಬಾವಿಯ ಬಳಿ ಒಂದಿಷ್ಟು ಅಶಿಕ್ಷಿತ, ಉಡಾಳ ಹುಡುಗರು ಜಮಾಯಿಸಿರುತ್ತಾರೆ. ತೆಳ್ಳಗಿರುವ ನನ್ನ ಮೇಲ್ದುಟಿಯ ಬಗ್ಗೆ ಕಮೆಂಟ್ ಪಾಸ್ ಮಾಡ್ತಾರೆ. ‘ಅಕಿಗೆ ಮ್ಯಾಲಿನ ತುಟಿನ ಇಲ್ಲೋ’ ಅಂತಲೋ, ‘ಜಯಲಕ್ಷ್ಮಿ ಬಾಯಾಗ ಹಲ್ಲಿಲ್ಲ ನೋಡಬೇಕಾದ್ರ. ಜಿದ್ದೆಷ್ಟು?” ಎಂದು ತಮ್ಮಲ್ಲೆ ಶರತ್ತು ಕಟ್ಟಿಕೊಂಡವರಂತೆ ಮಾತಾಡಿಕೊಂಡು ಆಡಿಕೊಳ್ಳುತ್ತಾರೆ. ನನ್ನ ಮೇಲ್ದುಟಿ ತೆಳುವಾಗಿರುವುದು, ನನಗೆ ಉಬ್ಬುಹಲ್ಲು ಇಲ್ಲದಿರುವುದು ನನ್ನ ತಪ್ಪೇ…? ಕೀಳರಿಮೆ ಹುಟ್ಟಿಕೊಳ್ಳುತ್ತದೆ. ಅದೇ ದಾರಿಯಲ್ಲಿ ನಿತ್ಯವೂ ಶಾಲೆಗೆ ಹೋಗಬೇಕು ಬರಬೇಕು. ಅವರ ಇಂಥ ಮಾತುಗಳಿಂದ ತಪ್ಪಿಸಿಕೊಳ್ಳಲು ಒಮ್ಮೆ ಅನಾವಶ್ಯಕವಾಗಿ ಪುಟ್ಟದಾಗಿ ತುಟಿ ಬಿಚ್ಚಿ ನಡೆಯುತ್ತೇನೆ. ಕೀಳರಿಮೆ! ಅದನ್ನೂ ಆಡಿಕೊಂಡು ಜೋರಾಗಿ ನಗುತ್ತಾರೆ ಅವರೆಲ್ಲ. 

ನನ್ನ ಮೂರನೇ ಮಾವನಿಗೆ ನನ್ನನ್ನ ಕೊಟ್ಟು ಮದುವೆ ಮಾಡೋದು ಎಂದು ದೊಡ್ಡವರು ಮಾತಾಡಿಕೊಂಡಿದ್ದರಂತೆ ನಾನು ಹುಟ್ಟಿದಾಗಲೇ. ಹಾಗಾಗಿ ಮನೆಯಲ್ಲಿ ಗಂಡ ಹೆಂಡತಿ ಎಂದು ನಮ್ಮನ್ನು ತಮಾಷೆ ಮಾಡುವಾಗಲೆಲ್ಲ ನನಗೆ ನಾಚಿಕೆಯಾಗುತ್ತದೆ. ಆದರೆ ಆ ಮಾವನಿಗೆ ಸಿಟ್ಟು ಬರುತ್ತದೆ. ಅವನು ಹಾಗೆ ಚಾಷ್ಟಿ ಮಾಡಿದವರ ಮೇಲೆ ರೇಗುತ್ತಾನೆ. ಅಷ್ಟೇ ಅಲ್ಲ, ಮನೆಯಲ್ಲಿ ಅಕಸ್ಮಾತ್ ನಾನು ಅವನ ಎದುರಿಗೆ ಬಂದರೂ ಸಾಕು ಉರಿದುಬೀಳುತ್ತಾನೆ. ಸಿಡಿಮಿಡಿಗೊಳ್ಳುತ್ತಾ ಅಲ್ಲಿಂದ ರಪ್ಪನೆ ಸರಿದುಹೋಗುತ್ತಾನೆ. ತುಂಬಾ ಅವಮಾನವಾಗುತ್ತದೆ. ನಾನೇನು ಮಾಡಿದ್ದೇನೆಂದು ನನ್ನನ್ನು ಅವನು ಹಾಗೆ ಪದೇ ಪದೇ ಅವಮಾನಿಸುತ್ತಾನೆ? ಇನ್ನೊಬ್ಬ ಮಾವ, ನೀನು ನೋಡಲು ಚೆನ್ನಾಗಿಲ್ಲ, ನಿನ್ನ ಕೂದಲು ಉದ್ದವಿಲ್ಲ, ನೀನು ಬೆಳ್ಳಗಿಲ್ಲ, ನೀನು ದಪ್ಪ ಎಂದೆಲ್ಲ ತಮಾಷೆ ಮಾಡುತ್ತಾನೆ. ನನಗದು ತಮಾಷೆ ಅನಿಸುವುದೇ ಇಲ್ಲ. ಹಂಗಿಸುತ್ತಿದ್ದಾನೆ ಅನಿಸುತ್ತದೆ. ಅವಮಾನದಿಂದ ಕುಗ್ಗಿ ಹೋಗುತ್ತೇನೆ. ಕೀಳರಿಮೆ ಕಾಡತೊಡಗುತ್ತದೆ. 

ಯಾವ ತಪ್ಪಿಗೆ ನನಗೆ ಈ ಎಲ್ಲ ಶಿಕ್ಷೆ!? ಹೈಸ್ಕೂಲಲ್ಲಿ ಅಷ್ಟು ಜನ ಹುಡುಗಿಯರಿದ್ದರೂ ಅವರೆಲ್ಲರನ್ನು ಬಿಟ್ಟು ಗೋಡೆ ಮೇಲೆ ನನ್ನ ಹೆಸರನ್ನೇ ಬರೆದಿದ್ದ್ಯಾಕೆ? ಮನೆಯಲ್ಲಿ ನನ್ನ ಜೊತೆಗೆ ಇನ್ನೂ ನಾಲ್ಕು ಜನ ಹೆಣ್ಣುಮಕ್ಕಳಿದ್ದರೂ ಅಪ್ಪಾ ಅವರ್ಯಾರಿಗೂ ಹೊಡೆಯದೇ ನನಗೇ ಹೊಡೆಯುವುದ್ಯಾಕೆ? ಅವ್ವ ಯಾಕೆ ಎಲ್ಲದಕ್ಕೂ ಸಿಟ್ಟು ಮಾಡಿಕೊಳ್ಳುತ್ತಾಳೆ? ಅವ್ವ ಯಾಕೆ ಅಪ್ಪಾ ನನಗೆ ಹೊಡೆಯುವಾಗ, ‘ಅಕಿದೇನೂ ತಪ್ಪಿಲ್ಲ, ಹೊಡೀಬ್ಯಾಡ್ರಿ ಬಿಡ್ರಿ’ ಎಂದು ಬಿಡಿಸುವುದಿಲ್ಲ…? ಯಾಕೆ ಯಾರಿಗೂ ನನ್ನನ್ನು ಕಂಡರೆ ಇಷ್ಟವಿಲ್ಲ…? ದೇವರು ನನ್ನನ್ಯಾಕೆ ಚಲುವೆಯಾಗಿ ಹುಟ್ಟಿಸಲಿಲ್ಲ? ಯಾಕೆ ನನ್ನ ಜೊತೆಗೇ ಹೀಗಾಗುತ್ತದೆ? ಮನಸು ರಾಡಿಯಾಗುತ್ತದೆ. ಆ ರಾಡಿಯಲ್ಲಿ ಉಂಡ ಪ್ರೀತಿ ಅದೆಲ್ಲೋ ಹೂತುಹೋಗಿ ಬರೀ ಅವಮಾನ, ಅನುಮಾನಗಳೇ ನಖಶಿಖಾಂತ ಅಲುಗಿನಂತೆ ಇರಿಯತೊಡಗುತ್ತವೆ. ಈ ಜಗತ್ತು ನನ್ನದಲ್ಲ. ನನಗೆ ಸಂಬಂಧಿಸಿದ ಜಗತ್ತಲ್ಲ ಇದು. ಇಲ್ಲಿ ನನ್ನವರ್ಯಾರೂ ಇಲ್ಲ. ಸತ್ತುಹೋಗಬೇಕು. ಸತ್ತುಬಿಟ್ಟರೆ ನಿಶ್ಚಿಂತೆ. ಆಗ ಯಾರಿಗೂ ನನ್ನಿಂದ ತೊಂದರೆಯಾಗದು. ನನಗೂ ಸಹ…

ಶಾಲೆಯಿಂದ ಬೇಗ ಬಂದವಳನ್ನು ಕಂಡು ಅವ್ವ, ‘ಯಾಕ್ ಸಾಲಿಬಿಟ್ಟ ವಾಪಸ್ ಬಂದಿ?’ ಎಂದು ಕೇಳಿದ್ದು ನೆನಪು. ಏನುತ್ತರಿಸಿದೆಂದು ನೆನಪಿಲ್ಲ. ಅಪ್ಪಾ ನಿದ್ದೆ ಮಾತ್ರೆ ಇಡುವ ಜಾಗ ಗೊತ್ತಿತ್ತು. ಹಿಡಿ ತುಂಬುವಷ್ಟು ಮಾತ್ರೆಗಳನ್ನು ತೆಗೆದುಕೊಂಡು ಅಡುಗೆಮನೆಗೆ ಹೋಗಿ ನೀರು ಕುಡಿಯುತ್ತಾ ಅಷ್ಟೂ ಮಾತ್ರೆಗಳನ್ನು ನುಂಗಿದೆ. ಅಲ್ಲಿಂದ ಹೊರಗೆ ಬಂದು, ಇನ್ನು ನನ್ನಿಂದ ಯಾರಿಗೂ ತೊಂದರೆಯಾಗದು ಎನ್ನುವರ್ಥದ ಪತ್ರವೊಂದನ್ನು ಬರೆದು, ಅದನ್ನು ಅಲ್ಲೆಲ್ಲೊ ದೊಡ್ಡವರಿಗೆ ಸಿಗಬಹುದಾದ ಜಾಗದಲ್ಲಿಟ್ಟು, ನಾನು ಸಾಯುವವರೆಗೆ ಅವರ್ಯಾರೂ ಆ ಪತ್ರವನ್ನು ನೋಡದಿರಲಿ ಎಂದುಕೊಳ್ಳುತ್ತಾ, ಇನ್ನು ನಿಶ್ಚಿಂತೆ ಎಂದುಕೊಂಡು ಸಮಾಧಾನದಿಂದ ಹಾಸಿಗೆಗಳನ್ನಿಡುವಲ್ಲಿ ಹೋಗಿ, ಅಲ್ಲೇ ನೆಲದ ಮೇಲೆ ಕಣ್ಣುಮುಚ್ಚಿ ಮಲಗಿದೆ.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

September 13, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: